ಪ್ರಧಾನ ಮಂತ್ರಿಯವರ ಕಛೇರಿ

ಜೈಸಲ್ಮೇರ್ ನ ಲೊಂಗೇವಾಲಾದಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಜೊತೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಅವರ ಭಾಷಣ

Posted On: 14 NOV 2020 4:14PM by PIB Bengaluru

ದೇಶದ 130 ಕೋಟಿ ಜನರ ಪರವಾಗಿ , ಭಾರತ ಮಾತೆಯ ಸುರಕ್ಷೆಗಾಗಿ ಮತ್ತು ಸೇವೆಗಾಗಿ ಹಗಲು ರಾತ್ರಿ ದುಡಿಯುತಿರುವ ಎಲ್ಲಾ ಧೈರ್ಯವಂತ ಹೃದಯಗಳಿಗೆ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.  ದೇಶದ ಗಡಿಯಲ್ಲಿರಲಿ, ಆಕಾಶದಲ್ಲಿರಲಿ, ಅಥವಾ ಸಾಗರದಲ್ಲಿರಲಿ , ಹಿಮಚ್ಛಾದಿತ ಶಿಖರ ಶೃಂಗಗಳಿರಲಿ, ಅಥವಾ ದಟ್ಟಾರಣ್ಯಗಳಿರಲಿ, ದೇಶದ ರಕ್ಷಣೆಯನ್ನು ಮಾಡುತ್ತಿರುವ ವೀರ ಪುತ್ರ ಮತ್ತು ಪುತ್ರಿಯರಿಗೆ ನಾನು ಗೌರವದಿಂದ ನಮಸ್ಕರಿಸುತ್ತೇನೆ. ನಮ್ಮ ಪಡೆಗಳು, ಬಿ.ಎಸ್.ಎಫ್., ಐ.ಟಿ.ಬಿ.ಪಿ. , ಸಿ.ಐ.ಎಸ್.ಎಫ್., ಭದ್ರತಾ ಪಡೆಗಳು ಮತ್ತು ಪೊಲೀಸು ಸಿಬ್ಬಂದಿಗಳಿಗೆ ಪವಿತ್ರ ಹಬ್ಬ ದೀಪಾವಳಿಯ ಈ ಸಂದರ್ಭದಲ್ಲಿ ನನ್ನ ವಂದನೆಗಳು. 

ದೇಶದ ಭದ್ರತೆ, ಜನತೆಯ ಸಂತೋಷ ಮತ್ತು ದೇಶದ ಈ ಹಬ್ಬಗಳು ನಿಮ್ಮಿಂದಾಗಿ ಇವೆ. ಇಂದು ನಾನು ಪ್ರತಿಯೊಬ್ಬ ಭಾರತೀಯನ ಶುಭಾಶಯಗಳನ್ನು ತಂದಿದ್ದೇನೆ. ನಾನು ಕೋಟ್ಯಾಂತರ ಭಾರತೀಯರ ಪ್ರೀತಿಯನ್ನು ತಂದಿದ್ದೇನೆ. ಪ್ರತಿಯೊಬ್ಬ ಹಿರಿಯ ನಾಗರಿಕರ ಆಶೀರ್ವಾದಗಳೊಂದಿಗೆ ನಾನು ಬಂದಿದ್ದೇನೆ. ಧೈರ್ಯಶಾಲಿ ತಾಯಂದಿರು ಮತ್ತು ಸಹೋದರಿಯರಿಗೆ ನಾನು ಹೃದಯ ತುಂಬಿದ ಶುಭಾಶಯಗಳನ್ನು ಹೇಳುತ್ತೇನೆ. ಮತ್ತು ಹಬ್ಬದ ಸಂದರ್ಭದಲ್ಲಿಯೂ ಗಡಿ ಭಾಗದಲ್ಲಿ ನಿಯೋಜಿಸಲ್ಪಟ್ಟಿರುವ ಅವರ ಪುತ್ರರು/ಪುತ್ರಿಯರು ಅಥವಾ ಸಹೋದರ/ ಸಹೋದರಿಯರ ತ್ಯಾಗಕ್ಕಾಗಿ ಅವರಿಗೆ ವಂದಿಸುತ್ತೇನೆ. ನಾನು ಎಲ್ಲಾ ಕುಟುಂಬದ ಸದಸ್ಯರಿಗೆ ವಂದಿಸುತ್ತೇನೆ. ಎರಡೂ ಮುಷ್ಟಿಗಳೊಂದಿಗೆ  ಗಟ್ಟಿ ಧ್ವನಿಯಲ್ಲಿ ನನ್ನೊಂದಿಗೆ ಹೇಳಿ : ಭಾರತ್ ಮಾತಾ ಕೀ ಜೈ!. ಭಾರತ್ ಮಾತಾ ಕೀ ಜೈ !. ಭಾರತ್ ಮಾತಾ ಕೀ ಜೈ !.

ಸ್ನೇಹಿತರೇ,

ನಾನು ಪ್ರಧಾನ ಮಂತ್ರಿಯಾದ ಬಳಿಕ 2014ರಲ್ಲಿ ಮೊದಲ ಬಾರಿಗೆ ದೀಪಾವಳಿ ಸಂದರ್ಭದಲ್ಲಿ ಸಿಯಾಚಿನ್ ಗೆ ಹೋಗಿ ಸೈನಿಕರೊಂದಿಗೆ  ದೀಪಾವಳಿ ಆಚರಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ. ಬಹಳ ಮಂದಿಗೆ ಇದು ಆಶ್ಚರ್ಯ ತಂದಿತ್ತು. ಹಬ್ಬದ ದಿನದಂದು ಪ್ರಧಾನ ಮಂತ್ರಿ ಏನು ಮಾಡುತ್ತಾರೆ ?.ಆದರೆ ಈಗ ನಿಮಗೆ ನನ್ನ ಭಾವನೆಗಳು ತಿಳಿದಿವೆ. ದೀಪಾವಳಿಯಂದು ನಾನು ನನ್ನದೇ ಜನರಿಂದ ಹೇಗೆ ದೂರವಿರಲಿ ?. ಮತ್ತು ಅದಕ್ಕಾಗಿ ಇಂದು ನಾನು ಈ ವರ್ಷದ ದೀಪಾವಳಿಯಂದು ನಿಮ್ಮೊಂದಿಗೆ ಇಲ್ಲಿ ಇದ್ದೇನೆ. ನನ್ನ ಪ್ರೀತಿಪಾತ್ರರಲ್ಲಿಗೆ ಬಂದಿದ್ದೇನೆ. ನೀವು ಹಿಮಚ್ಛಾದಿತ ಶಿಖರಶೃಂಗಗಳಲ್ಲಿರಿ, ಅಥವಾ ಮರುಭೂಮಿಯಲ್ಲಿರಿ, ನಾನು ನಿಮ್ಮೊಂದಿಗೆ ಇದ್ದಾಗ ಮಾತ್ರ ನನಗೆ ನನ್ನ ದೀಪಾವಳಿಯ ಭಾವನೆ ಪೂರ್ಣಗೊಳ್ಳುತ್ತದೆ !. ನಿಮ್ಮ ಮುಖದಲ್ಲಿ ಸಂತೋಷ ಮತ್ತು ಹೊಳಪು ಕಂಡಾಗ , ಅದು ನನ್ನ ಸಂತೋಷದ ಮಟ್ಟವನ್ನು  ಹಲವು ಪಟ್ಟು ಹೆಚ್ಚಿಸುತ್ತದೆ. ಈ ಸಂತೋಷಕ್ಕಾಗಿ ಮತ್ತು ನನ್ನ ದೇಶವಾಸಿಗಳ ಸಂತೋಷಕ್ಕಾಗಿ , ಇಂದು ನಾನು ಮತ್ತೊಮ್ಮೆ ಇಲ್ಲಿಗೆ , ಈ ಮರುಭೂಮಿಯಲ್ಲಿ ನಿಮ್ಮೊಂದಿಗೆ ಇರಲು  ಬಂದಿದ್ದೇನೆ. ಮತ್ತೊಂದು ಸಂಗತಿ ಎಂದರೆ ,  ಈ ಹಬ್ಬದ ಸಂದರ್ಭದಲ್ಲಿ , ನಾನು ನಿಮಗಾಗಿ ಸಿಹಿ ತಿಂಡಿಯನ್ನು ತಂದಿದ್ದೇನೆ. ಆದರೆ ಇದು ದೇಶದ ಪ್ರಧಾನ ಮಂತ್ರಿ ಸಿಹಿ ತಿಂಡಿಯೊಂದಿಗೆ ಬಂದಿರುವುದಷ್ಟೇ ಅಲ್ಲ, ನಾನು ಎಲ್ಲಾ ದೇಶವಾಸಿಗಳ ಪ್ರೀತಿಯನ್ನು ಈ ಸಿಹಿತಿಂಡಿಗಳ ಜೊತೆ ತಂದಿದ್ದೇನೆ. ನೀವು ದೇಶದ ಪ್ರತೀ ತಾಯಿಯ ಕೈಗಳ ಸಿಹಿತನವನ್ನು ಆಸ್ವಾದಿಸಬಹುದು. ಈ ಸಿಹಿ ತಿಂಡಿಗಳಲ್ಲಿ , ಪ್ರತಿಯೊಬ್ಬ ಸಹೋದರನ, ಸಹೋದರಿಯ ಮತ್ತು ತಂದೆಯ ಆಶೀರ್ವಾದ ನಿಮಗಿದೆ. ಮತ್ತು ಆದುದರಿಂದ , ನಾನು ಒಬ್ಬನೇ ಬಂದಿರುವುದಲ್ಲ. ನಾನು ನನ್ನೊಂದಿಗೆ ದೇಶವು ನಿಮ್ಮ ಬಗ್ಗೆ ಹೊಂದಿರುವ ಪ್ರೀತಿ, ವಾತ್ಸಲ್ಯ,  ಆಶೀರ್ವಾದಗಳನ್ನೂ ನಿಮಗಾಗಿ ತಂದಿದ್ದೇನೆ.

ಮತ್ತು ಸ್ನೇಹಿತರೇ, ಇಂದು ನಾನು ಈ ಲೊಂಗೇವಾಲಾದಲ್ಲಿದ್ದೇನೆ ಮತ್ತು ನನ್ನ ದೇಶಕ್ಕೆ ಕೀರ್ತಿ ಗೌರವಗಳನ್ನು ತರುವ , ಭಾರತ ಮಾತೆಯ ಪುತ್ರರು ಮತ್ತು ಪುತ್ರಿಯರಾದ ನಿಮ್ಮನ್ನು ದೇಶವು ಗಮನಿಸುತ್ತಿದೆ. ಮತ್ತು ಈ ಸ್ಥಳದ ಹೆಸರನ್ನು ದೇಶದ ಜನರು ಹೆಚ್ಚು ನೆನಪಿನಲ್ಲಿಡುತ್ತಾರೆ ಮತ್ತು ಬೇಸಿಗೆಯಲ್ಲಿ ಉಷ್ಣಾಂಶ 50 ಡಿಗ್ರಿ ತಲುಪುವ ಹಾಗು ಚಳಿಗಾಲದಲ್ಲಿ ಉಷ್ಣಾಂಶ ಶೂನ್ಯ ಡಿಗ್ರಿಗಿಂತಲೂ ಕೆಳಗಿಳಿಯುವ, ಮೇ ಮತ್ತು ಜೂನ್ ತಿಂಗಳಲ್ಲಿ ಉಸುಕಿನ ಗಾಳಿಯಿಂದಾಗಿ ಪರಸ್ಪರ ಮುಖವೇ ಕಾಣದಂತಾಗುವ  ಸ್ಥಳವೇ ಲೊಂಗೆವಾಲಾ ಪೋಸ್ಟ್ ಎಂದು  ತಲೆಮಾರುಗಳ ಕಾಲವೂ ಜನತೆ ಸ್ಮರಿಸಿಕೊಂಡಿರುತ್ತದೆ. ಈ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ಇಂದು ಕೂಡಾ ಪ್ರತಿಯೊಬ್ಬ ಭಾರತೀಯರ ಹೃದಯವನ್ನು ತುಂಬುವಂತಹ ಶೌರ್ಯದ ಗಾಥೆಯನ್ನು ಬರೆದಿದ್ದಾರೆ. ನಾವು ಲೊಂಗೇವಾಲಾದ ಬಗೆಗೆ ಮಾತನಾಡುವಾಗ 'जोबोलेसोनिहाल, सतश्रीअकाल' ಘೋಷಣೆ ಕಿವಿಯಲ್ಲಿ ಮೊಳಗುತ್ತಿರುತ್ತದೆ.

ಸ್ನೇಹಿತರೇ,

ಮಿಲಿಟರಿ ಕೌಶಲ್ಯದ ಚರಿತ್ರೆಯನ್ನು ಬರೆಯುವಾಗ ಮತ್ತು ಓದುವಾಗ , ಮತ್ತು ಮಿಲಿಟರಿ ಚರ್ಚಿಸುವಾಗ , ಲೊಂಗೇವಾಲಾ ಯುದ್ದವನ್ನು ನೆನಪಿಸಿಕೊಳ್ಳುವುದು ಖಚಿತ. ಅದು ಪಾಕಿಸ್ತಾನದ ಸೇನೆಯು ಬಾಂಗ್ಲಾದೇಶದ ಮುಗ್ಧ ನಾಗರಿಕರಿಗೆ ಕಿರುಕುಳ, ಹಿಂಸೆ ನೀಡಿ ಸಾಮೂಹಿಕ ಕಗ್ಗೊಲೆಗಳನ್ನು ನಡೆಸುತ್ತಿದ್ದ ಕಾಲ. ಅವರು ಸಹೋದರಿಯರು ಮತ್ತು ಪುತ್ರಿಯರ ಮೇಲೆ ಅಮಾನವೀಯ  ದೌರ್ಜನ್ಯಗಳನ್ನು  ನಡೆಸುತ್ತಿದ್ದರು. ಈ ದೌರ್ಜನ್ಯಗಳ ಮೂಲಕ ಪಾಕಿಸ್ತಾನದ ಅಸಹ್ಯಕರ ಮುಖ ಅನಾವರಣಗೊಳ್ಳುತ್ತಿತ್ತು. ಪಾಕಿಸ್ತಾನವು ಜಗತ್ತಿನ ಎದುರು ಭಯಾನಕ ಮಾದರಿಯಾಗಿ ರೂಪ ಪಡೆಯುತ್ತಿತ್ತು. ಇದೆಲ್ಲದರಿಂದ ಜಗತ್ತಿನ ಗಮನವನ್ನು ಬೇರೆಡೆ ಸೆಳೆಯಲು ಪಾಕಿಸ್ತಾನವು ನಮ್ಮ ಪಶ್ಚಿಮದ   ಗಡಿಯನ್ನು ತೆರೆದು,   ಮುಂದೊತ್ತಿ ಬಂದಿತು. ಹಾಗೆ ಮಾಡುವುದರ ಮೂಲಕ ಭಾರತವನ್ನು ದೂಷಿಸಬಹುದು ಮತ್ತು ಜಗತ್ತಿನೆದುರು ಭಾರತವನ್ನು ಕಳಂಕಿತ ರಾಷ್ಟ್ರವನ್ನಾಗಿ ತೋರಿಸಬಹುದು, ಬಾಂಗ್ಲಾದೇಶದ ಮೇಲೆ ಮಾಡಲಾದ ಎಲ್ಲಾ ಪಾಪಗಳನು ಮುಚ್ಚಿ ಹಾಕಬಹುದು ಎಂದು ಪಾಕಿಸ್ತಾನ ಭಾವಿಸಿತು. ಆದರೆ ನಮ್ಮ ಸೈನಿಕರು ಪಾಕಿಸ್ತಾನಕ್ಕೆ ಸೂಕ್ತ ಉತ್ತರ ಕೊಟ್ಟರು.

ಸ್ನೇಹಿತರೇ,

ಈ ಸ್ಥಳದ , ನೆಲೆಯ ಮೇಲೆ ಭಾರತ ಹೊಂದಿದ್ದ ಅಧಿಪತ್ಯದ ಪ್ರತಿಧ್ವನಿಯ ಪರಿಣಾಮವಾಗಿ ವೈರಿಗಳ ಸ್ಥೈರ್ಯ ಉಡುಗಿತು. ಭಾರತ ಮಾತೆಯ ವೀರ ಪುತ್ರರು ಮತ್ತು ಪುತ್ರಿಯರನ್ನು ಇಲ್ಲಿ ಭೀಕರವಾಗಿ ಎದುರಿಸಬೇಕಾದೀತು ಎಂಬ ಅರಿವು ಅವರಿಗಿದ್ದಿರಲಾರದು. ಮೇಜರ್ ಕುಲದೀಪ್ ಸಿಂಗ್ ಚಾಂದ್ ಪುರಿ ನೇತೃತ್ವದಲ್ಲಿ  ಭಾರತದ ಹೀರೋಗಳು ಟ್ಯಾಂಕ್ ಗಳೊಂದಿಗೆ ಶಸ್ತ್ರ ಸಜ್ಜಿತರಾಗಿ ಬಂದಿದ್ದ ಶತ್ರುಗಳನ್ನು ಹಿಮ್ಮೆಟ್ಟಿಸಿ ಅವರ ಯೋಜನೆಗಳನ್ನು ನಾಶ ಮಾಡಿದರು. ಕೆಲವೊಮ್ಮೆ ನಾನು ಯೋಚಿಸುತ್ತೇನೆ ಕುಲದೀಪ್ ಅವರ ಪೋಷಕರು ತಮ್ಮ ಕುಲದ ದೀಪವಾಗುತ್ತಾನೆ ಎಂದು ಭಾವಿಸಿ  ಕುಲದೀಪ ಎಂದು ನಾಮಕರಣ ಮಾಡಿರಬಹುದು ಎಂಬುದಾಗಿ. ಆದರೆ ಕುಲದೀಪ ಜೀ ಅವರು ಇಡೀ ದೇಶಕ್ಕೆ ದೀಪವಾಗುವ ಮೂಲಕ ಆ ಹೆಸರನ್ನು ಹೆಚ್ಚು ಅರ್ಥಪೂರ್ಣಗೊಳಿಸಿದರು. ಬರೇ ಕುಟುಂಬಕ್ಕೆ ದೀಪವಾಗುವುದಕ್ಕೆ ಬದಲು ರಾಷ್ಟ್ರ ದೀಪವಾದರು. 

ಸ್ನೇಹಿತರೇ,

ಲೊಂಗೇವಾಲಾದ ಚಾರಿತ್ರಿಕ ಯುದ್ದ ಭಾರತದ ಮಿಲಿಟರಿಯ ವೀರತ್ವದ ಸಂಕೇತ ಮಾತ್ರವಲ್ಲ, ಅದು ಸೇನೆ, ಬಿ.ಎಸ್.ಎಫ್., ಮತ್ತು ವಾಯು ಪಡೆಗಳ ಅದ್ಭುತ ಸಮನ್ವಯದ ಸಂಕೇತ ಕೂಡಾ. ಭಾರತದ ಸಂಘಟಿತ ಮಿಲಿಟರಿ ಶಕ್ತಿಯ ಎದುರು ಯಾವುದೇ ಪರಿಸ್ಥಿತಿಯಲ್ಲಿ ಅದನ್ನೆದುರಿಸಿ ವೈರಿ ಬದುಕುಳಿಯಲು ಸಮರ್ಥನಾಗಲಾರ ಎಂಬುದನ್ನು ತೋರಿಸಿತು. ಈಗ 1971 ರ ಆ ಯುದ್ದ ಮತ್ತು ಲೊಂಗೇವಾಲಾ ಯುದ್ದಗಳಿಗೆ ಇನ್ನು ಕೆಲವೇ ವಾರಗಳಲ್ಲಿ 50 ವರ್ಷಗಳು ಪೂರ್ಣಗೊಳ್ಳಲಿವೆ. ಚರಿತ್ರೆಯ ಈ ಹೊಳೆಯುವ ಮತ್ತು ಸುವರ್ಣ ಪುಟವನ್ನು ಆಚರಿಸಲು ನಾವು 50 ನೇ ವಾರ್ಷಿಕೋತ್ಸವವನ್ನು ಆಯೋಜಿಸಲಿದ್ದೇವೆ. ಆದುದರಿಂದ ಇಡೀ ರಾಷ್ಟ್ರ ವಿಜಯದ , ಕಲಿತನದ ಮತ್ತು ಆ ಹೀರೋಗಳ ಕಥನವನ್ನು ಹೆಮ್ಮೆಯಿಂದ ಕೇಳುವಂತಾಗಬೇಕು ಎಂದು  ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಮತ್ತು ರಾಷ್ಟ್ರವು ಬರಲಿರುವ ಹೊಸ ತಲೆಮಾರುಗಳ ಬದುಕಿನಲ್ಲಿ ಇದರ ಸ್ಪೂರ್ತಿಯನ್ನು ಸದಾ ಉದ್ದೀಪಿಸುತ್ತಿರುತ್ತದೆ ಎಂಬ ಬಗ್ಗೆ ವಿಶ್ವಾಸವಿದೆ. ಇಂತಹ ಹೀರೋ ಸದೃಶ ಪುತ್ರರಿಗಾಗಿ , ರಾಜಸ್ಥಾನದ ಕವಿ, ನಾರಾಯಣ ಸಿಂಗ್  ಭಾಟಿ ಅವರು ದೈನಂದಿನ ಆಡು ಭಾಷೆಯಲ್ಲಿ - इनजैसेघर, इनजैसेगगन, इनजैसेसह-इतिहास! इनजैसीसह-पीढ़ियाँ, प्राचीत्रणेप्रकाश !! ಬರೆದಿದ್ದಾರೆ. ಅಂದರೆ ಅದರ ವೀರ ಪುತ್ರರ ತ್ಯಾಗಕ್ಕೆ ಈ ಭೂಮಿ ಹೆಮ್ಮೆ ಪಡುತ್ತದೆ. ಆಕಾಶವು ತನ್ನ ವೀರ ಪುತ್ರರ ತ್ಯಾಗಕ್ಕಾಗಿ ಹೆಮ್ಮೆ ಪಡುತ್ತದೆ, ಮತ್ತು ಇಡೀ ಇತಿಹಾಸವು ತನ್ನ ವೀರ ಪುತ್ರರ ತ್ಯಾಗಕ್ಕಾಗಿ ಹೆಮ್ಮೆ ಪಡುತ್ತದೆ. ಈ ಭೂಮಿಯ ಮೇಲೆ ಸೂರ್ಯ ಕಿರಣಗಳು ಪಸರಿಸುತ್ತಿರುವಂತೆ ಕತ್ತಲೆ ದೂರವಾಗುತ್ತದೆ, ಭವಿಷ್ಯದ  ತಲೆಮಾರುಗಳು ಈ ತ್ಯಾಗದ ಬಗ್ಗೆ ನಿರಂತರ ಹೆಮ್ಮೆಯಿಂದಿರುತ್ತವೆ.

ಸ್ನೇಹಿತರೇ,

ಹಿಮಾಲಯದ ಉನ್ನತ ಶಿಖರಗಳಿರಲಿ, ಮರುಭೂಮಿಯ ಮರಳು ದಿಬ್ಬಗಳಿರಲಿ, ದಟ್ಟಾರಣ್ಯಗಳಿರಲಿ ಅಥವಾ ಸಾಗರದಾಳವಿರಲಿ, ಪ್ರತಿಯೊಂದು ಸವಾಲಿನಲ್ಲಿಯೂ  ನಿಮ್ಮ ಶೌರ್ಯ ಸದಾ ಪ್ರವಹಿಸುತ್ತಿರುತ್ತದೆ. ಇಂದು ನಿಮ್ಮಲ್ಲಿ ಬಹುಪಾಲು ಮಂದಿ  ಈ ಮರುಭೂಮಿಯಲ್ಲಿದ್ದರೂ, ನಿಮಗೆ ಹಿಮಾಲಯದ ಎತ್ತರಗಳ , ಪರ್ವತಾಗ್ರಗಳ ಅನುಭವವಿದೆ. ಯಾವುದೇ ಪರಿಸ್ಥಿತಿ ಇರಲಿ, ನಿಮ್ಮ ಧೈರ್ಯ ಮತ್ತು ಶೌರ್ಯ ಹೋಲಿಕೆಗೆ ಎಣೆ ಇಲ್ಲದ್ದು. ಇಂದು ವೈರಿಗೆ ಕೂಡಾ ಭಾರತದ ಧೈರ್ಯವಂತ ಗುಂಡಿಗೆಗಳಿಗೆ ಸರಿ ಸಮನಾದುದು ಯಾವುದೂ ಇಲ್ಲ ಎಂಬ ವಾಸ್ತವದ ಅರಿವಾಗಿದೆ. ನಿಮ್ಮ ವೀರತನಕ್ಕೆ  ವಂದಿಸುತ್ತಾ , ಇಂದು ದೇಶದ 130 ಕೋಟಿ ಜನರು ನಿಮ್ಮೊಂದಿಗೆ ದೃಢವಾಗಿ ನಿಂತಿದ್ದಾರೆ. ಇಂದು ಪ್ರತಿಯೊಬ್ಬ ಭಾರತೀಯರೂ ತನ್ನ ಸೈನಿಕರ ಕಲಿತನ ಮತ್ತು ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾರೆ. ಅವರು ನಿಮ್ಮ ಅಜೇಯತ್ವದ ಬಗ್ಗೆ ಹೆಮ್ಮೆ ಪಡುತ್ತಾರೆ. ದೇಶದ ಗಡಿಗಳನ್ನು ರಕ್ಷಿಸುವಲ್ಲಿ ನಮ್ಮ ವೀರ ಸೈನಿಕರನ್ನು ಜಗತ್ತಿನ ಯಾವ ಶಕ್ತಿಯೂ ತಡೆದು ನಿಲ್ಲಿಸಲಾರದು.

ಸ್ನೇಹಿತರೇ,

ಸುರಕ್ಷಿತವಾಗಿ ಉಳಿದಿರುವ ರಾಷ್ಟ್ರಗಳು ಮಾತ್ರವೇ ಮುಂದುವರೆದಿವೆ ಎಂಬುದಾಗಿ ಜಗತ್ತಿನ ಇತಿಹಾಸವು ನಮಗೆ ತಿಳಿಸುತ್ತದೆ. ಇವುಗಳು ಅತಿಕ್ರಮಣಕಾರರ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದವಾಗಿರುತ್ತವೆ. ನಾವು ಇಂದಿನ ಪರಿಸ್ಥಿತಿಯತ್ತ ಹಿಂತಿರುಗಿ ನೋಡಿದರೆ , ಅಂತಾರಾಷ್ಟ್ರೀಯ ಸಹಕಾರ ಎಷ್ಟೇ ಮುಂದುವರೆದಿದ್ದರೂ, ಎಷ್ಟೇ ಸಮೀಕರಣಗಳು ಬದಲಾಗಿದ್ದರೂ, ಜಾಗೃತಿಯೇ ಸುರಕ್ಷೆಗೆ ದಾರಿ ಎಂಬುದನ್ನು ನಾವೆಂದೂ ಮರೆಯಬಾರದು. ಜಾಗೃತಿ ಎಂಬುದು ಶಾಂತಿಯ ಶಕ್ತಿ. ಬಲ ಎಂಬುದು ಜಯದ ಮೂಲ ಮತ್ತು ಸಾಮರ್ಥ್ಯ ಎಂಬುದು ಶಾಂತಿಯ ಪ್ರಶಸ್ತಿ ಅಥವಾ ಅದರ ಪ್ರತಿಫಲ.  ಭಾರತವಿಂದು ಸುರಕ್ಷಿತವಾಗಿದೆ, ಯಾಕೆಂದರೆ ಭಾರತ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಭಾರತವು ನಿಮ್ಮಂತಹ ಧೈರ್ಯಶಾಲೀ ಪುತ್ರರು ಮತ್ತು ಪುತ್ರಿಯರನ್ನು ಹೊಂದಿದೆ.

ಸ್ನೇಹಿತರೇ,

ಆವಶ್ಯಕತೆಗಳು ಬಂದಾಗ , ಭಾರತವು ಸೂಕ್ತ ಉತ್ತರ ಕೊಡಲು ಶಕ್ತಿ ಮತ್ತು ರಾಜಕೀಯ ಇಚ್ಛಾಶಕ್ತಿಯನ್ನು ಹೊಂದಿರುವುದನ್ನು ಜಗತ್ತಿಗೇ ತೋರಿಸಿಕೊಟ್ಟಿದೆ. ನಮ್ಮ ಮಿಲಿಟರಿ ಶಕ್ತಿ ಹೆಚ್ಚಳವಾಗಿದೆ, ನಮ್ಮ ಒಪ್ಪಂದಗಳ , ಮಾತುಕತೆಯ ಶಕ್ತಿ ಹಲವು ಪಟ್ಟು  ಸುಧಾರಿಸಿದೆ ಮತ್ತು ಪರಿಹರಿಸಿಕೊಳ್ಳುವ ಶಕ್ತಿಯೂ ವೃದ್ಧಿಯಾಗಿದೆ. ಇಂದು ಭಾರತವು ಭಯೋತ್ಪಾದಕರನ್ನು ಮತ್ತು ಅವರ ಪೋಷಕರನ್ನು ಅವರ ಮನೆಗಳಲ್ಲಿಯೇ ಹೊಡೆದುರುಳಿಸಬಲ್ಲದು. ಈ ದೇಶವು ತನ್ನ ಹಿತಾಸಕ್ತಿಗಳ ವಿಷಯದಲ್ಲಿ ಯಾವ ಬೆಲೆ ತೆತ್ತಾದರೂ ಸರಿ ರಾಜಿ ಮಾಡಿಕೊಳ್ಳಲು ಸಿದ್ದವಿಲ್ಲ ಎಂಬುದನ್ನು ಜಗತ್ತು ತಿಳಿದುಕೊಂಡಿದೆ. ಭಾರತದ ಈ ಸ್ಥಾನ ಮಾನ , ಈ ಸ್ಥಿತಿ ನಿಮ್ಮ ಶಕ್ತಿ ಮತ್ತು ಇಚ್ಛೆಯಿಂದ ಲಭಿಸಿದುದಾಗಿದೆ. ನೀವು ದೇಶವನ್ನು ಕಾಪಾಡಿದ್ದೀರಿ, ಅದರಿಂದಾಗಿ ಭಾರತವು ಇಂದು ಭಾರೀ ಆತ್ಮವಿಶ್ವಾಸದಿಂದ ಜಾಗತಿಕ ವೇದಿಕೆಗಳಲ್ಲಿ ಮಾತನಾಡುತ್ತಿದೆ.

ಸ್ನೇಹಿತರೇ,

ಇಂದು ಇಡೀ ವಿಶ್ವ ವಿಸ್ತರಣಾವಾದಿ ಶಕ್ತಿಗಳಿಂದ ತೊಂದರೆಗೆ ಒಳಗಾಗಿದೆ. ವಿಸ್ತರಣಾವಾದಿತ್ವ ಇಂದು ವಿಕೃತ ರೀತಿಯಲ್ಲಿ ಮುಂದುವರಿದಿದೆ .ಮತ್ತು ಅದು ೧೮ ನೇ ಶತಮಾನದ ಮನೋಸ್ಥಿತಿಯ ಪ್ರತಿಬಿಂಬ. ಈ ಚಿಂತನೆಯ ವಿರುದ್ದ ಭಾರತವು ತನ್ನ ಬಲವಾದ  ಧ್ವನಿಯನ್ನು ಎತ್ತುತ್ತಿದೆ.

ಸ್ನೇಹಿತರೇ,

ಇಂದು, ಭಾರತವು ರಕ್ಷಣಾ ವಲಯವನ್ನು ಸ್ವಾವಲಂಬಿ ಮಾಡಲು ತ್ವರಿತಗತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಇತ್ತೀಚೆಗೆ , ನಮ್ಮ ಪಡೆಗಳು ಸುಮಾರು ನೂರರಷ್ಟು ವಿವಿಧ ರೀತಿಯ  ಶಸ್ತ್ರಾಸ್ತ್ರಗಳು ಮತ್ತು ರಕ್ಷಣಾ ಸಲಕರಣೆಗಳಿಗೆ ವಿದೇಶಗಳ ಅವಲಂಬನೆಯನ್ನು ನಿವಾರಿಸುವ ಬಗ್ಗೆ ನಿರ್ಧಾರ ಮಾಡಿದವು. ಅವುಗಳು ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರವೇ ಬಳಸಲಿವೆ. ಇದು ಸಣ್ಣ ನಿರ್ಧಾರವಲ್ಲ. ಇದಕ್ಕೆ ಬಹಳ ಧೈರ್ಯ ಬೇಕು. ನಿಮ್ಮ ಸೈನಿಕರಲ್ಲಿ ದೃಢವಾದ ನಂಬಿಕೆ ಇದಕ್ಕೆ ಅವಶ್ಯ. ಇಂದು,  ಈ ಸಂದರ್ಭದಲ್ಲಿ ಮತ್ತು ತ್ಯಾಗಭೂಮಿ ಹಾಗು ತಪೋಭೂಮಿಯಾದ ಈ ನೆಲದಿಂದ  ನಾನು ಈ ನಿರ್ಣಾಯಕ ನಿರ್ಧಾರಕ್ಕಾಗಿ ನನ್ನ ಪಡೆಗಳನ್ನು ಅಭಿನಂದಿಸುತ್ತೇನೆ. ನನಗೆ ಗೊತ್ತಿದೆ, ಇದು ಸಣ್ಣ ನಿರ್ಧಾರವಲ್ಲ. ಸೇನೆ ಕೈಗೊಂಡ ಈ ನಿರ್ಧಾರ ಆತ್ಮ ನಿರ್ಭರ ಭಾರತಕ್ಕೆ ಬಹಳ ಬೆಂಬಲ, ಪ್ರಚೋದನೆ ನೀಡುವ ನಿರ್ದಾರ. ಸೇನೆಯ ಈ ನಿರ್ಧಾರವು 130 ಕೋಟಿ ಭಾರತೀಯರಿಗೆ  “ಸ್ಥಳೀಯತೆಗಾಗಿ ಧ್ವನಿ ಎತ್ತುವ” ವೋಕಲ್ ಫಾರ್ ಲೋಕಲ್ ’ ಗೆ ಉತ್ತೇಜನ , ಪ್ರೇರಣೆಯನ್ನು ಒದಗಿಸಿದೆ. ಇಂದು ದೇಶದ ಯುವ ಜನತೆ ದೇಶದೊಳಗೆ ಒಂದರ ಹಿಂದೆ ಒಂದರಂತೆ ಇಂತಹ ಉತ್ಪನ್ನಗಳನ್ನು ತಯಾರಿಸಲಿದ್ದಾರೆ. ಇದರಿಂದ ಯುವ ಜನತೆಗೆ , ದೇಶದ ಸೇನೆಗೆ , ಭದ್ರತಾ ಪಡೆಗಳಿಗೆ, ಅರೆ ವೈದ್ಯಕೀಯ ಪಡೆಗಳಿಗೆ ಬಹಳ ಪ್ರಯೋಜನಗಳು  ಒದಗಲಿವೆ. ಇದು ನಮ್ಮ ಸೇನಾ ಸಿಬ್ಬಂದಿಗಳನ್ನು , ಸೈನಿಕರನ್ನು ಬಲಿಷ್ಟಗೊಳಿಸಲಿದೆ. ಇತ್ತೀಚಿನ ದಿನಗಳಲ್ಲಿ , ಪಡೆಗಳ ಆವಶ್ಯಕತೆಗಳನ್ನು ಪೂರೈಸಲು ಅನೇಕ ನವೋದ್ಯಮಗಳು ಮುಂದೆ ಬಂದಿವೆ. ರಕ್ಷಣಾ ವಲಯದಲ್ಲಿ ಯುವ ಜನತೆಯ ನವೋದ್ಯಮಗಳು ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಇನ್ನಷ್ಟು ಸಹಕಾರಿಯಾಗಲಿವೆ.

ಸ್ನೇಹಿತರೇ,

ರಕ್ಷಣಾ ವಲಯದಲ್ಲಿ ಸ್ವಾವಲಂಬಿ ಭಾರತ; ಈ ನಿಟ್ಟಿನಲ್ಲಿ  ವರ್ಧಿಸುತ್ತಿರುವ ದೇಶದ ಶಕ್ತಿ, ಗಡಿಯಲ್ಲಿ ಶಾಂತಿಯನ್ನು ನೆಲೆಗೊಳಿಸುವ ಗುರಿಯನ್ನು ಹೊಂದಿದೆ. ಇಂದು ಭಾರತದ ತಂತ್ರ ಬಹಳ ಸ್ಪಷ್ಟವಾಗಿದೆ. ಇಂದು ಭಾರತವು ತಿಳುವಳಿಕೆಯ ಮತ್ತು ಇತರರು ತಿಳಿದುಕೊಳ್ಳುವಂತೆ ಮಾಡುವ ನೀತಿಯನ್ನು ಅನುಸರಿಸುತ್ತಿದೆ, ಆದರೆ ಯಾರಾದರೊಬ್ಬರು ನಮ್ಮನ್ನು ಪರೀಕ್ಷೆ ಮಾಡಲು ಉಪಕ್ರಮಿಸಿದರೆ , ಆಗ ಪ್ರತ್ಯುತ್ತರವು ಅಷ್ಟೇ ಭಯಾನಕವಾಗಿರುತ್ತದೆ.

ಸ್ನೇಹಿತರೇ,

ದೇಶದ  ಸಮಗ್ರತೆಯು ದೇಶವಾಸಿಗಳ ಏಕತೆಯನ್ನು ಅವಲಂಬಿಸಿರುತ್ತದೆ.  ಶಾಂತಿ, ಏಕತೆ ಮತ್ತು ಉತ್ತಮಾಭಿಪ್ರಾಯಗಳು ದೇಶದ ಸಮಗ್ರತೆಯನ್ನು ಪೋಷಿಸುತ್ತವೆ. ಗಡಿಯ ಭದ್ರತೆಯು ಭದ್ರತಾ ಪಡೆಗಳ ಬಲವನ್ನು ಅವಲಂಬಿಸಿರುತ್ತದೆ. ಗಡಿಯಲ್ಲಿರುವ ನಮ್ಮ ಧೈರ್ಯವಂತರು ಬಹಳ ಶೌರ್ಯವಂತರು, ಅವರ ನೈತಿಕತೆ ಬಹಳ ಉನ್ನತ ಮಟ್ಟದಲ್ಲಿದೆ. ಮತ್ತು ಅದರಿಂದಾಗಿ ಅವರ ಪ್ರತೀ ಆವಶ್ಯಕತೆಗಳು, ಅಗತ್ಯಗಳು ದೇಶದ ಅತ್ಯಂತ ಆದ್ಯತೆಯ ಸಂಗತಿಗಳಲ್ಲಿ ಒಂದಾಗಿವೆ. ಅವರ ಕುಟುಂಬದ ಜವಾಬ್ದಾರಿ ದೇಶದ ಜವಾಬ್ದಾರಿಯಾಗಿದೆ. ಈ ಹಿಂದೆ ಸೈನಿಕರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗದ ಬಗ್ಗೆ ಹಲವಾರು ನಿರ್ಧಾರಗಳನು ಕೈಗೊಳ್ಳಲಾಗಿದೆ. ನಾನು ಕಳೆದ ವರ್ಷ ಎರಡನೇ ಬಾರಿಗೆ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಿದಾಗ , ಮೊದಲ ನಿರ್ಧಾರ ಹುತಾತ್ಮರ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದುದಾಗಿತ್ತು. ಇದರಡಿ ಲಭ್ಯ ಇರುವ ವಿದ್ಯಾರ್ಥಿ ವೇತನಕ್ಕಾಗಿ ರಾಷ್ಟ್ರೀಯ ರಕ್ಷಣಾ ನಿಧಿಯನ್ನು ಹೆಚ್ಚಿಸಲಾಯಿತು.

ಸ್ನೇಹಿತರೇ,

ಕಠಿಣ ಸವಾಲುಗಳ ನಡುವೆ ನಿಮ್ಮ ವರ್ತನೆ ಮತ್ತು ತಂಡ ರೂಪದ ಕೆಲಸ ಪ್ರತೀ ವಲಯದಲ್ಲಿಯೂ ಅದೇ ಸ್ಪೂರ್ತಿಯಿಂದ ಹೋರಾಟ ಮಾಡುವಂತಹ  ಪಾಠವನ್ನು ದೇಶಕ್ಕೆ ಕಲಿಸುತ್ತದೆ. ಇಂದು ದೇಶವು ಅದೇ ಸ್ಪೂರ್ತಿಯಲ್ಲಿ ಕೊರೊನಾ ಜಾಗತಿಕ ಸಾಂಕ್ರಾಮಿಕದ ವಿರುದ್ದ ಯುದ್ದ ಮಾಡುತ್ತಿದೆ. ಸಾವಿರಾರು ವೈದ್ಯರು, ದಾದಿಯರು, ಸಹಾಯಕರು ಮತ್ತು ಬೆಂಬಲ  ಸಿಬ್ಬಂದಿಗಳು ಅವಿಶ್ರಾಂತವಾಗಿ ರಾತ್ರಿ-ಹಗಲು ದುಡಿಯುತ್ತಿದ್ದಾರೆ. ದೇಶವಾಸಿಗಳು ಕೂಡಾ ಈ ಯುದ್ದದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದಾರೆ. ಹಲವಾರು ತಿಂಗಳುಗಳಿಂದ , ನಮ್ಮ ದೇಶವಾಸಿಗಳು ಸಂಪೂರ್ಣ ಶಿಸ್ತನ್ನು ಪಾಲಿಸುತ್ತಿದ್ದಾರೆ, ಮುಖಗವಸುಗಳನ್ನು ಧರಿಸಿ, ತಮ್ಮ ಪ್ರಾಣ ರಕ್ಷಣೆ ಮಾಡುತ್ತಿರುವುದಲ್ಲದೆ ತಮ್ಮ ಪ್ರೀತಿ ಪಾತ್ರರ ರಕ್ಷಣೆಯನ್ನು ಮಾಡುತ್ತಿದ್ದಾರೆ. ಆದರೆ ನಾವು ಮುಖಗವಸುಗಳನ್ನು ಧರಿಸುವಲ್ಲಿ ಬಹಳಷ್ಟು ಅನಾನುಕೂಲತೆಗಳನ್ನು , ಕಿರಿ ಕಿರಿಗಳನ್ನು ಅನುಭವಿಸಬೇಕಾಗಿರುವುದನ್ನು ಮನಗಂಡೆವು. ಹಾಗಿರುವಾಗ ನೀವು ಈ ಸುರಕ್ಷಾ ಜಾಕೆಟ್ ಗಳ ಭಾರವನ್ನು ಹೇಗೆ ಹೊತ್ತುಕೊಂಡು ಹೋಗುತ್ತೀರಿ . ನಿಮ್ಮ ದೇಹದ ಮೇಲೆ ಏನೇನೆಲ್ಲಾ ಇದೆ. ಇಷ್ಟೆಲ್ಲಾ ವಸ್ತುಗಳನ್ನು ಹೊತ್ತುಕೊಳ್ಳಲು ನಿಮಗೆ ಬಹಳ ಕಷ್ಟವಾಗುತ್ತಿರಬಹುದು. ಈ ತ್ಯಾಗದೊಂದಿಗೆ , ದೇಶವು ಶಿಸ್ತನ್ನು ಕಲಿಯುತ್ತಿದೆ ಮತ್ತು ಮತ್ತು ಸೇವೆಯ ಸ್ಪೂರ್ತಿಯನ್ನು ಬೆಳೆಸಿಕೊಳ್ಳುತ್ತಿದೆ. 

ಸ್ನೇಹಿತರೇ,

ಗಡಿಯಲ್ಲಿರುವಾಗ ನೀವು ಮಾಡುವ ತ್ಯಾಗ , ದೇಶದಲ್ಲಿ ನಂಬಿಕೆಯ ವಾತಾವರಣವನ್ನು ಉಂಟು ಮಾಡುತ್ತದೆ. ಅದು ಪ್ರತೀ ಭಾರತೀಯರಲ್ಲಿ ಹೊಸ ಭರವಸೆಯನ್ನು ತುಂಬುತ್ತದೆ. ನಾವು ಒಗ್ಗಟ್ಟಾಗಿ ಇದ್ದಾಗ ಬಹಳ ದೊಡ್ದ ಸವಾಲನ್ನು ಕೂಡಾ ಸುಲಭವಾಗಿ ಎದುರಿಸಿ ಗೆಲ್ಲಬಹುದು ಎಂಬುದು ಒಂದು ನಂಬಿಕೆ. ನಿಮ್ಮಿಂದ ಪ್ರೇರಣೆ ಪಡೆದುಕೊಂಡು , ಜಾಗತಿಕ ಸಾಂಕ್ರಾಮಿಕದ ಈ ಸಂಕಷ್ಟದ ಕಾಲದಲ್ಲಿ ದೇಶವು ಪ್ರತೀ ದೇಶವಾಸಿಯ ಜೀವವನ್ನು ರಕ್ಷಿಸುವ ಕಾರ್ಯದಲ್ಲಿ ನಿರತವಾಗಿದೆ. ಹಲವಾರು ತಿಂಗಳುಗಳಿಂದ , ದೇಶವು 80 ಕೋಟಿ ನಾಗರಿಕರಿಗೆ ಆಹಾರವನ್ನು ವ್ಯವಸ್ಥೆ ಮಾಡಿದೆ. ಆದರೆ ಇದೇ ಸಮಯದಲ್ಲಿ ದೇಶವು ಆರ್ಥಿಕತೆಗೆ ಉತ್ತೇಜನ ನೀಡಲು ತನ್ನಿಂದ ಸಾಧ್ಯವಿರುವ  ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಉದ್ದೇಶದಿಂದ ಮತ್ತು ದೇಶವಾಸಿಗಳು ತೋರಿದ ಧೈರ್ಯದ ಫಲವಾಗಿ ಇಂದು ಹಲವಾರು ವಲಯಗಳಲ್ಲಿ ದಾಖಲೆ ಪ್ರಮಾಣದ ಬೆಳವಣಿಗೆ ಮತ್ತು ಪುನಃಶ್ಚೇತನ ಕಂಡು ಬಂದಿದೆ. ವಿವಿಧ ರೀತಿಯ ಹೋರಾಟಗಳ ಕೀರ್ತಿ, ಮತ್ತು ಯಶಸ್ಸು ಗಡಿಯಲ್ಲಿರುವ ನಮ್ಮ ಸೈನಿಕರಿಗೆ ಸೇರುತ್ತದೆ, ಅದು ನಿಮ್ಮ ಕೀರ್ತಿ ಮತ್ತು ಯಶಸ್ಸು.  

ಸ್ನೇಹಿತರೇ,

ನಾನು ನಿಮ್ಮೊಂದಿಗೆ ಇದ್ದ ಪ್ರತೀ ಸಂದರ್ಭದಲ್ಲಿಯೂ ಅಥವಾ ನಿಮ್ಮೊಂದಿಗೆ ಹೆಚ್ಚು ಸಮಯವನ್ನು ಕಳೆದಷ್ಟೂ ನಿಮ್ಮ ಸಂತೋಷದಲ್ಲಿ ಮತ್ತು ನಿಮ್ಮ ದುಃಖದಲ್ಲಿ ನಾನು ಹೆಚ್ಚು ಹೆಚ್ಚು ಪಾಲ್ಗೊಳ್ಳುತ್ತೇನೆ, ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ಮತ್ತು ರಾಷ್ಟ್ರ ಸೇವೆಯ ನನ್ನ ನಿರ್ಧಾರಗಳು ಹೆಚ್ಚು ಬಲಯುತವಾಗುತ್ತವೆ. ನಾನು ನಿಮಗೆ ಭರವಸೆ ನೀಡಲು ಇಚ್ಛಿಸುತ್ತೇನೆ ಏನೆಂದರೆ, ನೀವು ಯಾವುದೇ ಚಿಂತೆ ಇಲ್ಲದೆ ನಿಮ್ಮ ಕರ್ತವ್ಯದ ಹಾದಿಯಲ್ಲಿ ಸಾಗಬಹುದು. ನಿಮ್ಮೊಂದಿಗೆ ಭಾರತದ ಪ್ರತಿಯೊಬ್ಬರೂ ಇದ್ದಾರೆ. ಹೌದು , ಈ ದಿನದಂದು ನಾನು ಓರ್ವ ಸ್ನೇಹಿತನಾಗಿ ಮತ್ತು ಸಹಚರನಾಗಿ ನಿಮ್ಮಲ್ಲಿ ಮೂರು ಕೋರಿಕೆಗಳನ್ನು ಮಂಡಿಸುತ್ತೇನೆ. ನನ್ನ ಕೋರಿಕೆ ನಿಮ್ಮ ನಿರ್ಧಾರವಾಗುತ್ತದೆ ಎಂಬ ಬಗೆಗೆ ನನಗೆ ಖಾತ್ರಿ ಇದೆ. ಮೊದಲನೆಯದಾಗಿ –ಏನಾದರೂ ಅನ್ವೇಷಿಸುವುದನ್ನು ಹವ್ಯಾಸ ಮಾಡಿಕೊಳ್ಳಿ ಹೊಸತಾಗಿ ಏನನ್ನಾದರೂ ಶೋಧಿಸುವುದನ್ನು ಮಾಡಿ.ಅದನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳಿ ಮತ್ತು ಸೈನಿಕರು ಈ ರೀತಿಯಲ್ಲಿ ರಚನಾತ್ಮಕವಾಗಿ ಬದುಕಿದರೆ ದೇಶವು ಹಲವಾರು ಹೊಸ ಸಂಗತಿಗಳನ್ನು ಪಡೆಯಲು ಸಹಾಯ ಮಾಡಿದಂತಾಗುತ್ತದೆ ಎಂಬುದನ್ನು ನಾನು ನೋಡಿದ್ದೇನೆ. ನಮ್ಮ ಭದ್ರತಾ ಪಡೆಗಳತ್ತ ನೋಡಿ, ಅವುಗಳು ತಮ್ಮ ಅನುಭವದ ಆಧಾರದಲ್ಲಿ ಹೊಸತನ್ನು ಅನ್ವೇಷಿಸುತ್ತಾ ಹೋಗುತ್ತವೆ. ನೀವು ದಿನ ನಿತ್ಯ ಹೋರಾಡಬೇಕಿರುವುದರಿಂದ ಅದರಲ್ಲಿಯೇ ಅನ್ವೇಷಣೆಗಳನ್ನು ನಡೆಸಿ. ನಿಮ್ಮಲ್ಲಿ ನನ್ನ ಎರಡನೆ ಕೋರಿಕೆ ಏನೆಂದರೆ ಯೋಗವನ್ನು ನಿಮ್ಮ ಬದುಕಿನ ಪ್ರತೀ ಪರಿಸ್ಥಿತಿಯಲ್ಲೂ ಬದುಕಿನ ಭಾಗವನ್ನಾಗಿಸಿ. ಮೂರನೆಯದಾಗಿ ನಮಗೆಲ್ಲರಿಗೂ ತಾಯ್ನುಡಿ ಅಥವಾ ಮಾತೃಭಾಷೆ ಇದೆ, ನಾವು ಕೆಲವರು ಹಿಂದಿ ಮಾತನಾಡಬಹುದು, ಕೆಲವರು ಇಂಗ್ಲೀಷ್ ಮಾತನಾಡಬಹುದು. ನಾನು ನನ್ನೆದುರು ಮಿನಿ ಭಾರತವನ್ನು ಕಾಣುತ್ತಿದ್ದೇನೆ. ದೇಶದ ಪ್ರತೀ ಭಾಗಗಳಿಂದ ಬಂದ ಯುವ ಜನತೆ ಇಲ್ಲಿ ಕುಳಿತಿದ್ದಾರೆ. ವಿವಿಧ ಮಾತೃಭಾಷೆಗಳನ್ನಾಡುವ ಯುವ ಜನತೆ ಇಲ್ಲಿ ಕುಳಿತಿರುವಾಗ ಅವರು ತಮ್ಮ ಮಾತೃ ಭಾಷೆ ಹಿಂದಿ ಅಥವಾ ಇಂಗ್ಲೀಷ್ ಎಂಬುದು ಅವರಿಗೆ ಗೊತ್ತಿರುತ್ತದೆ. ನಿಮ್ಮ ಸ್ನೇಹಿತರಿಂದ ನೀವು ಇನ್ನೊಂದು ಭಾಷೆಯನ್ನು ಕಲಿತುಕೊಳ್ಳಿ ಎಂದು ನಾನು ನಿಮ್ಮನ್ನು ಕೋರುತ್ತೇನೆ. ನಿಮಗೆ ಗೊತ್ತಿರಲಿ, ಅದು ನಿಮ್ಮ ಅತ್ಯಂತ ದೊಡ್ಡ ಶಕ್ತಿಯಾಗುವುದನ್ನು ನೀವು ಕಾಣುತ್ತೀರಿ. ಈ ಸಂಗತಿಗಳು ನಿಮ್ಮಲ್ಲಿ ಹೊಸ ಶಕ್ತಿಯನ್ನು, ಹುರುಪನ್ನು ತುಂಬುವುದನ್ನು ನೀವು ಖಚಿತವಾಗಿ ಅರಿತುಕೊಳ್ಳುವಿರಿ.

ಸ್ನೇಹಿತರೇ,

ನೀವು ಅಲ್ಲಿರುವಷ್ಟು ಕಾಲ, ನಿಮ್ಮಲ್ಲಿ ಧೈರ್ಯ ಮತ್ತು ಉತ್ಸಾಹಗಳಿರುವಷ್ಟು ಕಾಲ 130 ಕೋಟಿ ಭಾರತೀಯರ ವಿಶ್ವಾಸವನ್ನು , ಭರವಸೆಯನ್ನು ಅಲುಗಾಡಿಸುವುದು ಯಾರಿಗೂ ಸಾಧ್ಯವಿಲ್ಲ. . ನೀವು ಅಲ್ಲಿರುವಷ್ಟು ಕಾಲ, ದೇಶವು ಈ ದೀಪಾವಳಿಯಂತೆ ಬೆಳಗುತ್ತಿರುತ್ತದೆ. ಲೊಂಗೇವಾಲಾದ ಈ ಭೂಮಿಯಿಂದ , ಶೌರ್ಯ ಮತ್ತು ಧೈರ್ಯದ ಈ ಭೂಮಿಯಿಂದ, ತ್ಯಾಗದ ಈ ಭೂಮಿಯಿಂದ, ಮತ್ತೊಮ್ಮೆ ದೀಪಾವಳಿಯ ಈ ಸಂದರ್ಭದಲ್ಲಿ  ನಿಮ್ಮೆಲ್ಲರಿಗೆ ಮತ್ತು ದೇಶದ ಜನತೆಗೆ  ನನ್ನ ಶುಭ ಹಾರೈಕೆಗಳು. ನಿಮ್ಮೆರಡೂ ಮುಷ್ಟಿಗಳನ್ನು ಎತ್ತಿ ಗಟ್ಟಿಯಾಗಿ ಹೇಳಿ-ಭಾರತ ಮಾತೆಗೆ ಜಯವಾಗಲಿ !, ಭಾರತ ಮಾತೆಗೆ ಜಯವಾಗಲಿ ! ಭಾರತ ಮಾತೆಗೆ ಜಯವಾಗಲಿ !

ಬಹಳ ಬಹಳ ಧನ್ಯವಾದಗಳು !.

****



(Release ID: 1673430) Visitor Counter : 201