ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇ.ಪಿ.ಎಸ್ ಪಿಂಚಣಿದಾರರಿಗೆ ಡಿಜಿಟಲ್ ಜೀವಿತ (ಜೀವಮಾನ) ಪ್ರಮಾಣಪತ್ರ ಸಲ್ಲಿಕೆಗೆ ಬಹು ಆಯ್ಕೆ ಅವಕಾಶ ಕಲ್ಪಿಸಿದ ಇ.ಪಿ.ಎಫ್.ಒ
Posted On:
16 NOV 2020 3:47PM by PIB Bengaluru
1995ರ ನೌಕರರ ಪಿಂಚಣಿ ಯೋಜನೆ (ಇಪಿಎಸ್-95)ಯ ಎಲ್ಲಾ ಪಿಂಚಣಿದಾರರು ಪ್ರತಿ ವರ್ಷ ಪಿಂಚಣಿ ಪಡೆಯಬೇಕಾದರೆ, ಜೀವನ ಪ್ರಮಾಣಪತ್ರ (ಜೆಪಿಪಿ)/ ಡಿಜಿಟಲ್ ಜೀವಿತ (ಜೀವಮಾನ) ಪ್ರಮಾಣಪತ್ರ (ಡಿಎಲ್’ಸಿ)ವನ್ನು ಸಲ್ಲಿಸಲೇಬೇಕು. ಆದರೆ ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕ ರೋಗ ಭೀತಿ ಸನ್ನಿವೇಶದಲ್ಲಿ, ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್ಒ), ಡಿಜಿಟಲ್ ಜೀವಿತ ಪ್ರಮಾಣಪತ್ರ ಸಲ್ಲಿಸಲು ತನ್ನ ಪಿಂಚಣಿದಾರರಿಗೆ ಬಹು ಆಯ್ಕೆಗಳ ಅವಕಾಶ ಕಲ್ಪಿಸಿದೆ. ನೀಡಿದೆ. ಪಿಂಚಣಿದಾರರು ತಮ್ಮ ಮನೆಯ ಸಮೀಪ ಅಥವಾ ಮನೆ ಬಾಗಿಲಲ್ಲೇ ಜೀವನ ಪ್ರಮಾಣಪತ್ರ ಸಲ್ಲಿಸಬಹುದು. ಹಲವು ವಿಧಾನ ಮತ್ತು ಏಜೆನ್ಸಿಗಳ ಆಯ್ಕೆ ಮೂಲಕ ಸಲ್ಲಿಕೆಯಾಗುವ ಜೀವಿತ ಪ್ರಮಾಣಪತ್ರಗಳು ಸಮಾನವಾಗಿ ಮಾನ್ಯವಾಗುತ್ತವೆ.
ದೇಶಾದ್ಯಂತ ಇಪಿಎಫ್ಒ ಹೊಂದಿರುವ 117 ಜಿಲ್ಲಾ ಕಚೇರಿಗಳು ಮತ್ತು 135 ಪ್ರಾದೇಶಿಕ ಕಚೇರಿಗಳ ಜತೆಗೆ, ಇಪಿಎಸ್ ಪಿಂಚಣಿದಾರರು ಇದೀಗ ತಮ್ಮ ಮನೆಯ ಸಮೀಪದ ಅಂಚೆ ಕಚೇರಿಗಳು ಮತ್ತು ಪಿಂಚಣಿ ವಿತರಿಸುವ ಬ್ಯಾಂಕ್ ಶಾಖೆಗಳಲ್ಲಿ ಜೀವನ ಪ್ರಮಾಣ ಪತ್ರಗಳನ್ನು ಸಲ್ಲಿಸಬಹುದು. ಅದಲ್ಲದೆ, ರಾಷ್ಟ್ರವ್ಯಾಪಿ ಜಾಲ ಹೊಂದಿರುವ 3.65 ಲಕ್ಷಕ್ಕಿಂತ ಹೆಚ್ಚಿನ ಸಾಮಾನ್ಯ ಸೇವಾ ಕೇಂದ್ರಗಳಲ್ಲೂ ಜೀವಿತ ಪ್ರಮಾಣಪತ್ರ(ಡಿಎಲ್’ಸಿ)ಗಳನ್ನು ಸಲ್ಲಿಸಬಹುದು. ಇದಲ್ಲದೆ, ಪಿಂಚಣಿದಾರರು ‘ಉಮಾಂಗ್ ಆ್ಯಪ್’ ಬಳಸಿ ಡಿಎಲ್’ಸಿ ಸಲ್ಲಿಸಬಹುದು.
ಇತ್ತೀಚೆಗೆ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ)’ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸಲ್ಲಿಸಲು ಪಿಂಚಣಿದಾರರಿಗೆ ಮನೆ ಬಾಗಿಲ ಸೇವೆ ಆರಂಭಿಸಿದೆ. ಹಾಗಾಗಿ, ಇಪಿಎಸ್ ಪಿಂಚಣಿದಾರರು ಮನೆ ಬಾಗಿಲ ಡಿಎಲ್’ಸಿ ಸೇವೆ ಪಡೆಯಲು ಆನ್’ಲೈನ್ ಮನವಿ ಸಲ್ಲಿಸಬಹುದು. ಇದಕ್ಕೆ ಅತ್ಯಲ್ಪ ಶುಲ್ಕ ವಿಧಿಸಲಾಗುತ್ತದೆ. ಸಮೀಪದ ಅಂಚೆ ಕಚೇರಿಯ ಅಂಚೆಯವ (ಅಂಚೆ ವಿತರಕ) ಪಿಂಚಣಿದಾರರ ಮನೆ ಬಾಗಿಲಿಗೆ ಹೋಗಿ, ಅವರ ಜೀವನ ಪ್ರಮಾಣಪತ್ರ ಸೃಷ್ಟಿಸುವ ಮತ್ತು ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.
ಇಪಿಎಫ್ಒ ಹೊಸ ಮಾರ್ಗಸೂಚಿ ಪ್ರಕಾರ, ಇಪಿಎಸ್ ಪಿಂಚಣಿದಾರರು ತಮಗೆ ಅನುಕೂಲವಾಗುವಂತೆ ಇದೀಗ, ವರ್ಷದ ಯಾವುದೇ ಸಮಯದಲ್ಲಿ ಜೀವಿತ ಪ್ರಮಾಣಪತ್ರ ಸಲ್ಲಿಸಬಹುದು. ಡಿಎಲ್’ಸಿ ಸಲ್ಲಿಸಿದ ದಿನದಿಂದ 1 ವರ್ಷದವರೆಗೆ ಅದು ಮಾನ್ಯತೆ ಹೊಂದಿರುತ್ತದೆ. 2020ರಲ್ಲಿ ಅಂದರೆ ಈ ವರ್ಷ ಪಿಂಚಣಿ ಪಾವತಿ ಆದೇಶ ಸ್ವೀಕರಿಸಿದ (ಸಿಕ್ಕಿದ) ಪಿಂಚಣಿದಾರರು, 1 ವರ್ಷ ಪೂರ್ಣವಾಗುವ ತನಕ ಜೀವಿತ ಪ್ರಮಾಣಪತ್ರ ಅಪ್’ಲೋಡ್ ಮಾಡುವ ಅಗತ್ಯವಿಲ್ಲ. ಇದಕ್ಕೂ ಮುಂಚೆ, ಎಲ್ಲಾ ಇಪಿಎಸ್ ಪಿಂಚಣಿದಾರರು ನವೆಂಬರ್ ತಿಂಗಳಲ್ಲೇ ಡಿಎಲ್’ಸಿ ಸಲ್ಲಿಸಬೇಕಿತ್ತು. ಇದರ ಪರಿಣಾಮವೆಂಬಂತೆ, ಕಚೇರಿಗಳ ಮುಂದೆ ಉದ್ದನೆಯ ಕ್ಯೂ(ಪಿಂಚಣಿದಾರರ ಸಾಲುಗಟ್ಟಿ ನಿಲ್ಲುತ್ತಿದ್ದ ದೃಶ್ಯ) ಸಾಮಾನ್ಯವಾಗಿ, ಡಿಎಲ್’ಸಿ ಸಲ್ಲಿಕೆಗೆ ಜನಸಂದಣಿ ಹೆಚ್ಚಿ, ವಿಳಂಬವಾಗುತ್ತಿತ್ತು. ಪಿಂಚಣಿದಾರರಿಗೆ ರಗಳೆಮುಕ್ತ ಸಾಮಾಜಿಕ ಭದ್ರತೆಯ ರಕ್ಷಣೆ ಒದಗಿಸಲು ಪಿಂಚಣಿದಾರ-ಸ್ನೇಹಿಯಾದ ಈ ಹೊಸ ಕ್ರಮ ಕೈಗೊಳ್ಳಲಾಗಿದೆ.
ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ನಂತರ ಹಿರಿಯ ನಾಗರಿಕರು ಗಂಭೀರ ಕಾಯಿಲೆಗಳ ಹೆಚ್ಚಿನ ಅಪಾಯದಲ್ಲಿದ್ದಾರೆ. ಇಂತಹ ಕಷ್ಟಕರ ಸನ್ನಿವೇಶದಲ್ಲಿ, ಇಪಿಎಫ್ಒ ಸಂಘಟನೆ ಪಿಂಚಣಿದಾರರ ಅಗತ್ಯ ಸೇವೆಗೆ ನಿಂತಿದೆ. ಅವರಿಗೆ ಸಕಾಲದಲ್ಲಿ ಪಿಂಚಣಿ ಹಣ ದೊರೆಯುವುದನ್ನು ಖಾತ್ರಿಪಡಿಸಲು, ಅವರ ಮನೆ ಬಾಗಿಲಿಗೆ ಹಲವು ಸೇವೆಗಳನ್ನು ಒದಗಿಸಲು ಮುಂದಾಗಿದೆ. ಈ ಎಲ್ಲಾ ಉಪಕ್ರಮಗಳಿಂದ ದೇಶದ ಸುಮಾರು 67 ಲಕ್ಷ ಇಪಿಎಸ್ ಪಿಂಚಣಿದಾರರಿಗೆ ಪ್ರಯೋಜನ ಲಭಿಸಲಿದೆ. 67 ಲಕ್ಷ ಪಿಂಚಣಿದಾರರ ಪೈಕಿ ಸುಮಾರು 21 ಲಕ್ಷ ವಿಧವೆಯರು, ವಿಧುರರು, ಮಕ್ಕಳು ಮತ್ತು ಅನಾಥ ಪಿಂಚಣಿದಾರರು ಸೇರಿದ್ದಾರೆ.
***
(Release ID: 1673237)
Visitor Counter : 342