ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್ ಸಕ್ರಿಯ ಪ್ರಕರಣಗಳು 4.8 ಲಕ್ಷಕ್ಕೆ ಇಳಿಕೆ
ಪ್ರತಿನಿತ್ಯ ಹೊಸ ಪ್ರಕರಣಗಳಿಗಿಂತ ಗುಣಮುಖ ಸಂಖ್ಯೆ ಹೆಚ್ಚಳ; ಚೇತರಿಕೆ ದರ 93%ಗೆ ಸುಧಾರಣೆ
Posted On:
14 NOV 2020 11:32AM by PIB Bengaluru
ದೇಶದಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಗಣನೀಯವಾಗಿ ತಗ್ಗುತ್ತಿದ್ದು, ಸತತ 4ನೇ ದಿನವೂ ಸಕ್ರಿಯ ಪ್ರಕರಣಗಳ ಪ್ರಮಾಣ 5 ಲಕ್ಷದ ಮಟ್ಟಕ್ಕಿಂತ ಕೆಳಗಿರುವುದು ಆಶಾದಾಯಕ ಬೆಳವಣಿಗೆ. ದೇಶಾದ್ಯಂತ ಸಕ್ರಿಯ ಸೋಂಕಿತರ ಸಂಖ್ಯೆ ನಿಖರವಾಗಿ 4 ಲಕ್ಷದ 80 ಸಾವಿರದ 719ಕ್ಕೆ ಇಳಿಕೆ ಕಂಡಿದ್ದು, ಅವರೆಲ್ಲಾ ವಿವಿಧ ಆಸ್ಪತ್ರೆಗಳು ಮತ್ತು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪಾಲು 5.48%ಗೆ ತಗ್ಗಿದೆ.
ಪ್ರತಿನಿತ್ಯ ಕಾಣಿಸಿಕೊಳ್ಳುತ್ತಿರುವ ಹೊಸ ಪ್ರಕರಣಗಳಿಗಿಂತ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿದೆ. ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 44,684 ಹೊಸ ಪ್ರಕರಣಗಳು ದೃಢಪಟ್ಟರೆ, 47,992 ರೋಗಿಗಳು ಒಂದೇ ದಿನ ಗುಣಮುಖರಾಗಿದ್ದಾರೆ.
ಪ್ರತಿನಿತ್ಯ ಕೋವಿಡ್ ಹೊಸ ಪ್ರಕರಣಗಳ ಪ್ರಮಾಣ ನಿರಂತರ ತಗ್ಗುತ್ತಾ ಬಂದಿದೆ. ಜನರ ಮುಂಜಾಗ್ರತೆ, ಎಚ್ಚರಿಕೆಯ ನಡವಳಿಕೆ ಮಾರ್ಗಸೂಚಿಗಳ ಪಾಲನೆ, ಕೇಂದ್ರ ಸರಕಾರ ಹೊರಡಿಸಿದ ಕೋವಿಡ್ ಮಾರ್ಗಸೂಚಿಗಳನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳು ಕಟ್ಟುನಿಟ್ಟಾಗಿ ಸೋಂಕು ನಿಯಂತ್ರಣಕ್ಕೆ ಕೈಗೊಳ್ಳುತ್ತಿರುವ ಪರಿಣಾಮಕಾರಿ ಕ್ರಮಗಳಿಂದಾಗಿ ಸೋಂಕು ಪ್ರತಿನಿತ್ಯ ನಿಯಂತ್ರಣಕ್ಕೆ ಬರುತ್ತಿದೆ. ಕಳೆದ ಐದು ವಾರಗಳ ಅವಧಿಯಲ್ಲಿ ಪ್ರತಿದಿನದ ಸರಾಸರಿ ಹೊಸ ಪ್ರಕರಣಗಳ ಇಳಿಕೆ ಪ್ರವೃತ್ತಿಯ ರೇಖಾನಕ್ಷೆ ಇಲ್ಲಿದೆ.
ಈ ಪ್ರವೃತ್ತಿಯಿಂದ ಕೋವಿಡ್ ಸೋಂಕಿನ ಚೇತರಿಕೆ ದರ 93%ಗೆ ಸುಧಾರಣೆ ಕಂಡಿದೆ. ಸಂಚಿತ ರಾಷ್ಟ್ರೀಯ ಚೇತರಿಕೆ ದರ 93.05%ಗೆ ಏರಿಕೆ ಕಂಡಿದೆ. ದೇಶದಲ್ಲಿ ಕೊರೊನಾ ಕಾಣಿಸಿಕೊಂಡಾಗಿನಿಂದ ಇಲ್ಲಿಯ ತನಕ ಒಟ್ಟು 81,63,572 ಸೋಂಕಿತರು ಗುಣಮುಖರಾಗಿದ್ದಾರೆ. ಗುಣಮುಖರಾಗುತ್ತಿರುವವರು ಮತ್ತು ಸಕ್ರಿಯ ಸೋಂಕಿತರ ನಡುವಿನ ಅಂತರ ದಿನೇದಿನೆ ಸ್ಥಿರವಾಗಿ ಹೆಚ್ಚಳ ಕಾಣುತ್ತಿದ್ದು, ಪ್ರಸ್ತುತ, ಸದು 76,82,853ರಷ್ಟಿದೆ.
ಹೊಸ ಪ್ರಕರಣಗಳ ಪೈಕಿ 75.38% ಪ್ರಕರಣಗಳು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲೇ ಪತ್ತೆಯಾಗಿವೆ.
ದೆಹಲಿಯೊಂದರಲ್ಲೇ ಕಳೆದ 24 ತಾಸುಗಳಲ್ಲಿ 6,498 ಸೋಕಿತರು ಗುಣಮುಖರಾಗಿದ್ದು, ಕೇರಳದಲ್ಲಿ 6,201 ಮತ್ತು ಮಹಾರಾಷ್ಟ್ರದಲ್ಲಿ 4,543 ಸೋಂಕಿತರು ಚೇತರಿಸಿಕೊಂಡಿದ್ದಾರೆ.
10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 76.38% ಹೊಸ ಪ್ರಕರಣಗಳು ದೃಢಪಟ್ಟಿವೆ.
ಕಳೆದ 24 ತಾಸುಗಳಲ್ಲಿ ದೆಹಲಿಯಲ್ಲಿ 7,802 ಹೊಸ ಪ್ರಕರಣಗಳು ಪತ್ತೆಯಾಗಿ, ಅಗ್ರ ಸ್ಥಾನದಲ್ಲಿದೆ. ಕೇರಳದಲ್ಲಿ 5,804, ಮಹಾರಾಷ್ಟ್ರದಲ್ಲಿ 4,132 ಪ್ರಕರಣಗಳು ನಿನ್ನೆ ಕಾಣಿಸಿಕೊಂಡಿವೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 520 ಸೋಂಕಿತರು ಮೃತಪಟ್ಟಿದ್ದಾರೆ. ಅದರಲ್ಲಿ 79.23% ಪ್ರಮಾಣ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದಲೇ ವರದಿಯಾಗಿದೆ.
24.4% ಸಾವು ಮಹಾರಾಷ್ಟ್ರದಲ್ಲಿ ಅಂದರೆ 127 ಸೋಂಕಿತರು ಮರಣ ಹೊಂದಿದ್ದಾರೆ. ದೆಹಲಿಯಲ್ಲಿ 91 ಮತ್ತು ಪಶ್ಚಿಮ ಬಂಗಾಳದಲ್ಲಿ 51 ಹೊಸ ಸಾವುಗಳು ಸಂಭವಿಸಿವೆ.
***
(Release ID: 1672937)
Visitor Counter : 201