ಆಯುಷ್

5ನೇ ಆಯುರ್ವೇದ ದಿನ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಭವಿಷ್ಯಕ್ಕೆ ಸಜ್ಜಾದ ಎರಡು ಆಯುರ್ವೇದ ಸಂಸ್ಥೆಗಳ ಲೋಕಾರ್ಪಣೆ

Posted On: 13 NOV 2020 12:55PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 5ನೇ ಆಯುರ್ವೇದ ದಿನವಾದ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭವಿಷ್ಯಕ್ಕೆ ಸಜ್ಜಾದ ಎರಡು ಆಯುರ್ವೇದ ಸಂಸ್ಥೆಗಳ ಲೋಕಾರ್ಪಣೆ ಮಾಡಿದರು. ಈ ಸಂಸ್ಥೆಗಳೆಂದರೆ ಜಾಮ್ ನಗರದ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್.ಎ) ಹಾಗೂ ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್.ಐ.ಎ.). ಈ ಎರಡೂ ಸಂಸ್ಥೆಗಳು ದೇಶದ ಆಯುರ್ವೇದ ಕ್ಷೇತ್ರದಲ್ಲಿನ ಪ್ರಮುಖ ಸಂಸ್ಥೆಗಳಾಗಿವೆ. ಈ ಹಿಂದೆ ಸಂಸತ್ತಿನ ಶಾಸನದ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ (ಐ.ಎನ್‌.ಐ)ಯ ಸ್ಥಾನಮಾನವನ್ನು ನೀಡಲಾಗಿತ್ತು, ಮತ್ತು ನಂತರ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಸ್ವಾಯತ್ತ ವಿಶ್ವವಿದ್ಯಾಲಯವೆಂದು ಪರಿಗಣಿಸಿತ್ತು. ಆಯುಷ್ ಸಚಿವಾಲಯವು 2016 ರಿಂದ ಧನ್ವಂತರಿ ಜಯಂತಿ (ಧಂತೇರಸ್) ಸಂದರ್ಭದಲ್ಲಿ ಪ್ರತಿ ವರ್ಷ 'ಆಯುರ್ವೇದ ದಿನ' ಆಚರಿಸುತ್ತಿದೆ.

ಕೇಂದ್ರ ಆಯುಷ್ ಸಚಿವ (ಸ್ವತಂತ್ರ ನಿರ್ವಹಣೆ) ಶ್ರೀ ಶ್ರೀಪಾದ್ ನಾಯಕ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ, ರಾಜಾಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಾಸ್ಥಾನದ ರಾಜ್ಯಪಾಲ ಶ್ರೀ ಕಲ್ ರಾಜ್ ಮಿಶ್ರಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವರತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವಿಶ್ವ ಆರೋಗ್ಯ ಸಂಸ್ಥೆಯ ಮಹಾ ನಿರ್ದೇಶಕ ಡಾ. ಟೆಡ್ರಸ್ ಅಡೋನಮ್ ಗೇಬ್ರಿಯಾಸಿಸ್ ಈ ಸಂದರ್ಭದಲ್ಲಿ ವಿಡಿಯೋ ಸಂದೇಶ ನೀಡಿ, ಆಯುಷ್ಮಾನ್ ಭಾರತ ಅಡಿಯಲ್ಲಿ ಆರೋಗ್ಯ ಸಂಬಂಧಿತ ಉದ್ದೇಶಗಳ ಸಾಧನೆಗಾಗಿ ಸಾಂಪ್ರದಾಯಿಕ ವೈದ್ಯಪದ್ಧತಿಯನ್ನು ಸಾಕ್ಷ್ಯಾಧಾರಿತವಾಗಿ ಉತ್ತೇಜಿಸಲು ಮತ್ತು ಸಾರ್ವತ್ರಿಕ ವ್ಯಾಪ್ತಿಗಾಗಿ ಪ್ರಧಾನಮಂತ್ರಿಯವರ ಬದ್ಧತೆಯ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಡಿಜಿ ಸಾಂಪ್ರದಾಯಿಕ ವೈದ್ಯಪದ್ಧತಿಯ ಜಾಗತಿಕ ಕೇಂದ್ರಕ್ಕಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ಅವರು ಧನ್ಯವಾದ ಅರ್ಪಿಸಿದರು. ಆಯುರ್ವೇದ ಭಾರತದ ಸಂಪ್ರದಾಯ ಪರಂಪರೆಯಾಗಿದೆ ಮತ್ತು ಭಾರತದ ಈ ಪಾರಂಪರಿಕ ಜ್ಞಾನ ಇತರ ದೇಶಗಳನ್ನೂ ಶ್ರೀಮಂತಗೊಳಿಸುತ್ತಿರುವುದು ಸಂತಸದ ವಿಷಯ ಎಂದರು.

ಆಯುರ್ವೇದ ಜ್ಞಾನವನ್ನು ಪುಸ್ತಕಗಳು, ಗ್ರಂಥಗಳು ಮತ್ತು ಮನೆಮದ್ದಿನ ವ್ಯಾಪ್ತಿಯಿಂದ ಹೊರತರುವ ಮತ್ತು ಆಧುನಿಕ ಅಗತ್ಯಗಳಿಗೆ ಅನುಗುಣವಾಗಿ ಈ ಪ್ರಾಚೀನ ಜ್ಞಾನವನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನು ಶ್ರೀ ಮೋದಿ ಪ್ರತಿಪಾದಿಸಿದರು. 21ನೇ ಶತಮಾನದ ಆಧುನಿಕ ವಿಜ್ಞಾನದಿಂದ ಪಡೆದ ಮಾಹಿತಿಯನ್ನು ನಮ್ಮ ಪ್ರಾಚೀನ ವೈದ್ಯಕೀಯ ಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ದೇಶದಲ್ಲಿ ಹೊಸ ಸಂಶೋಧನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಮೂರು ವರ್ಷಗಳ ಹಿಂದೆ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು ಇಲ್ಲಿ ಸ್ಥಾಪಿಸಲಾಯಿತು. ಆಯುರ್ವೇದವು ಇಂದು ಕೇವಲ ಪರ್ಯಾಯವಲ್ಲ ಆದರೆ ದೇಶದ ಆರೋಗ್ಯ ನೀತಿಯ ಪ್ರಮುಖ ಆಧಾರವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಲೇಹ್‌ ನಲ್ಲಿರುವ ಸೋವಾ-ರಿಗ್ಪಾಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಇತರ ಅಧ್ಯಯನಗಳಿಗಾಗಿ ರಾಷ್ಟ್ರೀಯ ಸೋವಾ-ರಿಗ್ಪಾ ಸಂಸ್ಥೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಇಂದು, ನವೀಕರಿಸಲ್ಪಟ್ಟ ಗುಜರಾತ್ ಮತ್ತು ರಾಜಸ್ಥಾನದ ಎರಡು ಸಂಸ್ಥೆಗಳು ಸಹ ಈ ಅಭಿವೃದ್ಧಿಯ ವಿಸ್ತರಣೆಯಾಗಿದೆ ಎಂದರು.

ಎರಡು ಸಂಸ್ಥೆಗಳ ಉನ್ನತೀಕರಣಕ್ಕಾಗಿ ಅಭಿನಂದನೆ ಸಲ್ಲಿಸಿದ ಪ್ರಧಾನಮತ್ರಿ, ಈಗ ಅವುಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಅವು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಆಯುರ್ವೇದ ಪಠ್ಯ ರೂಪಿಸಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಆಯುರ್ವೇದ ಭೌತಶಾಸ್ತ್ರ ಮತ್ತು ಆಯುರ್ವೇದ ರಸಾಯನಶಾಸ್ತ್ರದಂತಹ ವಿಭಾಗಗಳಲ್ಲಿ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಅವರು ಶಿಕ್ಷಣ ಸಚಿವಾಲಯ ಮತ್ತು ಯುಜಿಸಿಗೆ ಕರೆ ನೀಡಿದರು. ಜಾಗತಿಕ ಪ್ರವೃತ್ತಿಗಳು ಮತ್ತು ಬೇಡಿಕೆಗಳನ್ನು ಅಧ್ಯಯನ ಮಾಡಲು ಮತ್ತು ಈ ವಲಯದಲ್ಲಿ ಅವರ ಭಾಗವಹಿಸುವಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಅವರು ನವೋದ್ಯಮ ಮತ್ತು ಖಾಸಗಿ ವಲಯಕ್ಕೆ ಕರೆ ನೀಡಿದರು. ಭಾರತೀಯ ವೈದ್ಯ ಪದ್ಧತಿಗಳ ರಾಷ್ಟ್ರೀಯ ಆಯೋಗ ಮತ್ತು ರಾಷ್ಟ್ರೀಯ ಹೋಮಿಯೋಪತಿ ಆಯೋಗಗಳನ್ನು ಕಳೆದ ಅಧಿವೇಶನದಲ್ಲಿ ಸಂಸತ್ತು ಸ್ಥಾಪಿಸಿತು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ ಸಹ ಸಮಗ್ರ ವಿಧಾನವನ್ನು ಉತ್ತೇಜಿಸುತ್ತದೆ. ಈ ನೀತಿಯ ಮೂಲ ಕಲ್ಪನೆ ಆಯುರ್ವೇದ ಶಿಕ್ಷಣದಲ್ಲಿ ಅಲೋಪತಿ ಪದ್ಥತಿಗಳ ಜ್ಞಾನ ಕಡ್ಡಾಯವಾಗಿರಬೇಕು ಎಂಬುದಾಗಿದೆ ಎಂದರು.

  • ಸಮಯದಲ್ಲಿ ಆಯುರ್ವೇದ ಉತ್ಪನ್ನಗಳಿಗೆ ವಿಶ್ವದಾದ್ಯಂತ ತ್ವರಿತವಾಗಿ ಬೇಡಿಕೆ ಹೆಚ್ಚಾಯಿತು ಎಂದು ಪ್ರಧಾನಮಂತ್ರಿ ತಿಳಿಸಿದರು. ಈ ವರ್ಷ ಸೆಪ್ಟೆಂಬರ್ ನಲ್ಲಿ ಆಯುರ್ವೇದ ಉತ್ಪನ್ನಗಳ ರಫ್ತು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ.45ರಷ್ಟು ಹೆಚ್ಚಳವಾಯಿತು ಎಂದರು. ಅಲ್ಲದೆ ರೋಗನಿರೋಧಕ ವರ್ಧಕ ಎನ್ನಲಾದ ಹರಿಶಿನ, ಶುಂಠಿಯ ರಫ್ತಿನಲ್ಲೂ ಹೆಚ್ಚಳವಾಯಿತು. ಈ ಹಠಾತ್ ಚೇತರಿಕೆ ಆಯುರ್ವೇದ ಪರಿಹಾರ ಮತ್ತು ಭಾರತದ ಸಾಂಬಾರದ ಮೇಲಿನ ವಿಶ್ವದ ವಿಶ್ವಾಸದ ದ್ಯೋತಕ ಎಂದರು. ಈಗ ಹಲವು ದೇಶಗಳಲ್ಲಿ ಹರಿಶಿನಕ್ಕೆ ಸಂಬಂಧಿಸಿದ ವಿಶಿಷ್ಟ ಪಾನೀಯಗಳ ಬೇಡಿಕೆ ಹೆಚ್ಚುತ್ತಿದ್ದು, ವಿಶ್ವದ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕಗಳು ಕೂಡ ಆಯುರ್ವೇದದಲ್ಲಿ ಹೊಸ ವಿಶ್ವಾಸ ವ್ಯಕ್ತಪಡಿಸುತ್ತಿವೆ ಎಂದರು. ಈ ಸಮಯದಲ್ಲಿ ಆಯುರ್ವೇದ ಬಳಕೆಗೆ ಮಾತ್ರವೇ ಸೀಮಿತವಾಗಿಲ್ಲ, ಜೊತೆಗೆ ದೇಶದಲ್ಲಿ ಮತ್ತು ವಿಶ್ವದಲ್ಲಿ ಆಯುಷ್ ನ ಮುಂದುವರಿದ ಸಂಶೋಧನೆಗೂ ಗಮನ ಹರಿಸಲಾಗಿದೆ ಎಂದರು.

ಕೋವಿಡ್ ವಿರುದ್ಧ ಹೋರಾಡಲು ಇಂದು ಒಂದೆಡೆ ಭಾರತ ಲಸಿಕೆಗಳ ಪರೀಕ್ಷೆಯನ್ನೂ ನಡೆಸುತ್ತಿದೆ, ಮತ್ತೊಂದೆಡೆ ಆಯುರ್ವೇದ ಸಂಶೋಧನೆಯಲ್ಲಿ ಅಂತಾರಾಷ್ಟ್ರೀಯ ಸಹಕಾರವನ್ನೂ ಹೆಚ್ಚಿಸುತ್ತಿದೆ ಎಂದರು. ಈ ಹೊತ್ತು ದೆಹಲಿಯ ಅಖಿಲ ಭಾರತ ಆಯುರ್ವೇದ ಸಂಸ್ಥೆ ಸೇರಿದಂತೆ ನೂರಕ್ಕೂ ಹೆಚ್ಚು ಸ್ಥಳಗಳಲ್ಲಿ ಸಂಶೋಧನೆ ನಡೆಯುತ್ತಿದೆ, ಇದು 80 ಸಾವಿರ ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ರೋಗ ನಿರೋಧಕ ಶಕ್ತಿವರ್ಧನೆಯ ಕುರಿತಂತೆ ಸಂಶೋಧನೆ ನಡೆಯುತ್ತಿದೆ ಎಂದು ಅವರು ತಿಳಿಸಿದರು. ಇದು ವಿಶ್ವದ ಅತಿದೊಡ್ಡ ಸಮೂಹ ಅಧ್ಯಯನವಾಗಿದ್ದು, ಉತ್ತೇಜಕ ಫಲಿತಾಂಶ ದೊರೆಯುತ್ತಿವೆ. ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಅಂತಾರಾಷ್ಟ್ರೀಯ ಪ್ರಯೋಗಗಳನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

ಇಂದು ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಯುರ್ವೇದ ಔಷಧ, ಗಿಡಮೂಲಿಕೆ, ಪೌಷ್ಟಿಕ ಆಹಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಇಂದು ಹಿಮಾಲಯ ಶ್ರೇಣಿಯಲ್ಲಿ ಮತ್ತು ಗಂಗಾ ನದಿಯ ತಟದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳ ಉತ್ಪಾದನೆಗೆ ರೈತರಿಗೆ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು. ವಿಶ್ವದ ಸ್ವಾಸ್ಥ್ಯಕ್ಕೆ ಹೆಚ್ಚಿನ ಕೊಡುಗೆ ನೀಡುವ ಭಾರತದ ಸಮಗ್ರ ಯೋಜನೆಯಡಿ ಆಯುಷ್ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ, ನಮ್ಮ ರಫ್ತು ಕೂಡ ಹೆಚ್ಚಾಗಬೇಕು ಮತ್ತು ನಮ್ಮ ರೈತರ ಆದಾಯವೂ ಹೆಚ್ಚಾಗಬೇಕು ಎಂದು ಅವರು ಹೇಳಿದರು. ಕೋವಿಡ್ ಸಾಂಕ್ರಾಮಿಕ ರೋಗ ಪಸರಿಸಿದ ತರುವಾಯ ಆಯುರ್ವೇದ ಗಿಡಮೂಲಿಕೆಗಳಾದ ಅಶ್ವಗಂಧ, ಗಿಲೋಯ್, ತುಳಸಿ ಇತ್ಯಾದಿಗಳ ಬೆಲೆಗಳು ಕೂಡ ಬಹಳಷ್ಟು ಹೆಚ್ಚಾಗಿವೆ ಎಂದು ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಅಶ್ವಗಂಧದ ಬೆಲೆ ದ್ವಿಗುಣವಾಗಿದೆ ಮತ್ತು ಇದರ ನೇರ ಲಾಭ ಈ ಗಿಡಮೂಲಿಕೆಗಳನ್ನು ಬೆಳೆಸುವ ನಮ್ಮ ರೈತರಿಗೆ ತಲುಪುತ್ತಿದೆ ಎಂದರು.

ಭಾರತದಲ್ಲಿ ಲಭ್ಯವಿರುವ ಅನೇಕ ಗಿಡಮೂಲಿಕೆಗಳ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಲು ಕೃಷಿ ಸಚಿವಾಲಯ, ಆಯುಷ್ ಸಚಿವಾಲಯ ಅಥವಾ ಇತರ ಇಲಾಖೆಗಳು ಒಟ್ಟಾಗಿ ಕೆಲಸ ಮಾಡಬೇಕೆಂದು ಪ್ರಧಾನಮಂತ್ರಿ ಆಗ್ರಹಿಸಿದರು. ಆಯುರ್ವೇದಕ್ಕೆ ಸಂಬಂಧಿಸಿದ ಸಂಪೂರ್ಣ ಪರಿಸರ ವ್ಯವಸ್ಥೆಯ ಅಭಿವೃದ್ಧಿಯು ದೇಶದ ಆರೋಗ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿದ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಜಾಮ್ ನಗರ ಮತ್ತು ಜೈಪುರದಲ್ಲಿ ಇಂದು ಉದ್ಘಾಟಿಸಲಾದ ಎರಡು ಸಂಸ್ಥೆಗಳು ಈ ದಿಕ್ಕಿನಲ್ಲಿ ಪ್ರಯೋಜನಕಾರಿಯಾಗಲಿ ಎಂದು ಅವರು ಹಾರೈಸಿದರು.

ಐಟಿಆರ್.ಎ, ಜಾಮ್ ನಗರ: ಇತ್ತೀಚೆಗೆ ಸಂಸತ್ತಿನ ಶಾಸನದ ಮೂಲಕ ಸ್ಥಾಪಿಸಲಾದ, ಆಯುರ್ವೇದ ಬೋಧನೆ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್.ಎ) ವಿಶ್ವ ದರ್ಜೆಯ ಆರೋಗ್ಯ ಸಂಸ್ಥೆಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಐಟಿಆರ್.ಎ. 12 ವಿಭಾಗಗಳು, ಮೂರು ಚಿಕಿತ್ಸಾಲಯ ಪ್ರಯೋಗಾಲಯಗಳು ಮತ್ತು ಮೂರು ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದೆ. ಇದು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಸಂಶೋಧನಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಪ್ರಸ್ತುತ ಇದು 33 ಸಂಶೋಧನಾ ಯೋಜನೆಗಳನ್ನು ಕೈಗೊಂಡಿದೆ. ಗುಜರಾತ್ ಜಾಮ್ ನಗರದ ಆಯುರ್ವೇದ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ಆಯುರ್ವೇದ ಸಂಸ್ಥೆಗಳ ಕ್ಲಸ್ಟರ್ ಅನ್ನು ಒಗ್ಗೂಡಿಸುವ ಮೂಲಕ ಐಟಿಆರ್.ಎ. ರಚಿಸಲಾಗಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ (ಐಎನ್‌.ಐ) ಸ್ಥಾನಮಾನವನ್ನು ಹೊಂದಿರುವ ಆಯುಷ್ ವಲಯದ ಮೊದಲ ಸಂಸ್ಥೆಯಾಗಿದೆ. ನವೀಕರಣದೊಂದಿಗೆ ಐಟಿಆರ್.ಎ. ಆಯುರ್ವೇದ ಶಿಕ್ಷಣದ ಗುಣಮಟ್ಟವನ್ನು ನವೀಕರಿಸುವ ಸ್ವಾಯತ್ತತೆಯನ್ನು ಹೊಂದಿರುತ್ತದೆ ಏಕೆಂದರೆ ಇದು ಆಧುನಿಕ, ಅಂತಾರಾಷ್ಟ್ರೀಯ ಮಾನದಂಡಗಳ ಪ್ರಕಾರ ಕೋರ್ಸ್‌ ಗಳನ್ನು ನೀಡುತ್ತದೆ. ಜೊತೆಗೆ, ಇದು ಆಯುರ್ವೇದಕ್ಕೆ ಸಮಕಾಲೀನ ಒತ್ತು ನೀಡಲು ಅಂತರಶಿಸ್ತಿನ ಸಹಯೋಗವನ್ನು ರೂಪಿಸುತ್ತದೆ.

ಎನೇ.ಐ.ಎ. ಜೈಪುರ: ದೇಶಾದ್ಯಂತ ಖ್ಯಾತಿಯನ್ನು ಹೊಂದಿರುವ ಆಯುರ್ವೇದ ಸಂಸ್ಥೆ, ಎನ್.ಐಎ ಸ್ವಾಯತ್ತ ವಿಶ್ವವಿದ್ಯಾಲಯ (ಡಿ ನೊವೊ ಪ್ರವರ್ಗ) ಸ್ಥಾನಮಾನದೊಂದಿಗೆ ಗರಿಗೆದರಿದೆ. 175 ವರ್ಷಗಳ ಪರಂಪರೆಯೊಂದಿಗೆ, ಕಳೆದ ಕೆಲವು ದಶಕಗಳಲ್ಲಿ ಅಧಿಕೃತವಾಗಿ ಆಯುರ್ವೇದವನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು ಮುನ್ನಡೆಸಲು ಎನ್.ಐಎ ನೀಡಿದ ಕೊಡುಗೆ ಗಮನಾರ್ಹವಾಗಿದೆ. ಪ್ರಸ್ತುತ ಎನ್..ಎ. 14 ವಿವಿಧ ವಿಭಾಗಗಳನ್ನು ಹೊಂದಿರುವ ಈ ಸಂಸ್ಥೆ ಉತ್ತಮ ವಿದ್ಯಾರ್ಥಿ ಶಿಕ್ಷಕರ ಅನುಪಾತವನ್ನು ಹೊಂದಿದ್ದು, 2019-20ರ ಅವಧಿಯಲ್ಲಿ ಒಟ್ಟು 955 ವಿದ್ಯಾರ್ಥಿಗಳು ಮತ್ತು 75 ಬೋಧಕವರ್ಗವನ್ನು ಹೊಂದಿದೆ. ಇದು ಆಯುರ್ವೇದದಲ್ಲಿ ವೈದ್ಯ ಪ್ರಮಾಣಪತ್ರದವರೆಗಿನ ಹಂತದವರೆಗೆ ಹಲವಾರು ಕೋರ್ಸ್‌ ಗಳನ್ನು ನಡೆಸುತ್ತದೆ. ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯಗಳೊಂದಿಗೆ, ಎನ್.ಐಎ ಸಹ ಸಂಶೋಧನಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ, ಇದು 54 ವಿವಿಧ ಸಂಶೋಧನಾ ಯೋಜನೆಗಳನ್ನು ನಡೆಸುತ್ತದೆ. ಸ್ವಾಯತ್ತ ವಿಶ್ವವಿದ್ಯಾಲಯ (ಡಿ ನೊವೊ ಪ್ರವರ್ಗ) ಎಂದು ಘೋಷಿಸುವುದರೊಂದಿಗೆ, ರಾಷ್ಟ್ರೀಯ ಸಂಸ್ಥೆ ತೃತೀಯ ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉನ್ನತ ಗುಣಮಟ್ಟವನ್ನು ಸಾಧಿಸುವ ಮೂಲಕ ಹೊಸ ಎತ್ತರವನ್ನು ತಲುಪಲು ಅಣಿಯಾಗಿದೆ.

***



(Release ID: 1672604) Visitor Counter : 216