ಆಯುಷ್

5ನೇ ಆಯುರ್ವೇದ ದಿನವಾದ ನವೆಂಬರ್ 13 ರಂದು ಎರಡು ಆಯುರ್ವೇದ ಸಂಸ್ಥೆಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿರುವ ಪ್ರಧಾನಿ

Posted On: 12 NOV 2020 11:31AM by PIB Bengaluru

ಐದನೇ ಆಯುರ್ವೇದ ದಿನವಾದ  2020 ರ ನವೆಂಬರ್ 13 ರಂದು ಪ್ರಧಾನಮಂತ್ರಿಯವರು ಭವಿಷ್ಯಕ್ಕಾಗಿ ಸಿದ್ಧವಾಗಿರುವ ಜಾಮ್‌ನಗರದ ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ (ಐ ಟಿ ಆರ್ ಎ) ಮತ್ತು ಜೈಪುರದ ರಾಷ್ಟ್ರೀಯ ಆಯುರ್ವೇದ ಸಂಸ್ಥೆ (ಎನ್‌ ಐ ಎ) ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಎರಡೂ ಸಂಸ್ಥೆಗಳು ದೇಶದ ಆಯುರ್ವೇದದ ಪ್ರಮುಖ ಸಂಸ್ಥೆಗಳು. ಜಾಮ್‌ನಗರದ ಸಂಸ್ಥೆಗೆ ಸಂಸತ್ತಿನಲ್ಲಿ ಕಾಯ್ದೆಯ ಮೂಲಕ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ (ಐಎನ್‌ಐ) ಯ ಸ್ಥಾನಮಾನವನ್ನು ನೀಡಲಾಗಿದೆ ಮತ್ತು ಜೈಪುರದ ಸಂಸ್ಥೆಯನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಡೀಮ್ಡ್ ವಿಶ್ವವಿದ್ಯಾಲಯವೆಂದು ಪರಿಗಣಿಸಿದೆ.
ಆಯುಷ್ ಸಚಿವಾಲಯವು 2016 ರಿಂದ ಧನ್ವಂತರಿ ಜಯಂತಿ (ಧಾಂತೇರಸ್) ಯಂದು ಪ್ರತಿ ವರ್ಷ ‘ಆಯುರ್ವೇದ ದಿನ’ ಆಚರಿಸುತ್ತಿದೆ. ಈ ವರ್ಷ, ಇದು ನವೆಂಬರ್ 13 ರಂದು ಬರುತ್ತದೆ.
ಕೋವಿಡ್-19 ರ ಸದ್ಯದ ಪರಿಸ್ಥಿತಿಯ ಹಿನ್ನೆಲೆಯಲ್ಲಿ, 5 ನೇ ಆಯುರ್ವೇದ ದಿನ 2020 ಅನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವರ್ಚುವಲ್ ವೇದಿಕೆಗಳಲ್ಲಿ ಹೆಚ್ಚಾಗಿ ಆಚರಿಸಲಾಗುತ್ತಿದೆ. ಮೇಲಿನ ಎರಡು ಸಂಸ್ಥೆಗಳನ್ನು ಪ್ರಧಾನಮಂತ್ರಿಯವರು ರಾಷ್ಟ್ರಕ್ಕೆ ಸಮರ್ಪಿಸುವ ಕಾರ್ಯಕ್ರಮವನ್ನು ನವೆಂಬರ್ 13 ರಂದು ಬೆಳಿಗ್ಗೆ 10.30 ರಿಂದ MyGov ವೇದಿಕೆಯ https://pmevents.ncog.gov.in ನಲ್ಲಿ ಪ್ರಸಾರ ಮಾಡಲಾಗುತ್ತದೆ. MyGov ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಯುಷ್ ಸಚಿವಾಲಯವು ಎಲ್ಲರನ್ನೂ ಆಹ್ವಾನಿಸಿದೆ.
ಐ ಟಿ ಆರ್ ಎ ಜಾಮ್‌ನಗರ: ಇತ್ತೀಚೆಗೆ ಸಂಸತ್ತಿನ ಕಾಯಿದೆಯ ಮೂಲಕ ರಚಿಸಲಾದ ಆಯುರ್ವೇದದ ಬೋಧನೆ ಮತ್ತು ಸಂಶೋಧನಾ ಸಂಸ್ಥೆ (ಐಟಿಆರ್ಎ) ವಿಶ್ವ ದರ್ಜೆಯ ಆರೋಗ್ಯ ಸಂಸ್ಥೆಯಾಗಿ ಹೊರಹೊಮ್ಮಲು ಸಜ್ಜಾಗಿದೆ. ಐ ಟಿ ಆರ್ ಎ 12 ಇಲಾಖೆಗಳು, ಮೂರು ಕ್ಲಿನಿಕಲ್ ಪ್ರಯೋಗಾಲಯಗಳು ಮತ್ತು ಮೂರು ಸಂಶೋಧನಾ ಪ್ರಯೋಗಾಲಯಗಳನ್ನು ಹೊಂದಿದೆ. ಇದು ಸಾಂಪ್ರದಾಯಿಕ ಔಷಧದಲ್ಲಿ ಸಂಶೋಧನಾ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದೆ ಮತ್ತು ಪ್ರಸ್ತುತ ಇದು 33 ಸಂಶೋಧನಾ ಯೋಜನೆಗಳನ್ನು ನಡೆಸುತ್ತಿದೆ. ಜಾಮ್‌ನಗರದ ಗುಜರಾತ್ ಆಯುರ್ವೇದ ವಿಶ್ವವಿದ್ಯಾಲಯದ ಆವರಣದಲ್ಲಿ ನಾಲ್ಕು ಆಯುರ್ವೇದ ಸಂಸ್ಥೆಗಳ ಕ್ಲಸ್ಟರ್ ಅನ್ನು ಒಟ್ಟುಗೂಡಿಸುವ ಮೂಲಕ ಐ ಟಿ ಆರ್ ಎ ರಚಿಸಲಾಗಿದೆ. ಇದು ರಾಷ್ಟ್ರೀಯ ಪ್ರಾಮುಖ್ಯತೆ ಸಂಸ್ಥೆ (ಐಎನ್‌ಐ) ಸ್ಥಾನಮಾನವನ್ನು ಪಡೆದಿರುವ ಆಯುಷ್ ವಲಯದ ಮೊದಲ ಸಂಸ್ಥೆಯಾಗಿದೆ. ಉನ್ನತೀಕರಿಸಿದ ಸ್ಥಿತಿಯೊಂದಿಗೆ, ಐ ಟಿ ಆರ್ ಎ ಆಯುರ್ವೇದ ಶಿಕ್ಷಣದ ಗುಣಮಟ್ಟವನ್ನು ನವೀಕರಿಸಲು ಸ್ವಾಯತ್ತತೆಯನ್ನು ಹೊಂದಿರುತ್ತದೆ. ಇದು ಆಧುನಿಕ, ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಕೋರ್ಸ್‌ಗಳನ್ನು ನೀಡುತ್ತದೆ. ಇದಲ್ಲದೆ, ಸಮಕಾಲೀನ ಅಗತ್ಯವನ್ನು ಪೂರೈಸಲು ಆಯುರ್ವೇದಕ್ಕೆ ಅಂತರ-ಶಿಸ್ತೀಯ ಸಹಯೋಗವನ್ನು ರೂಪಿಸುತ್ತದೆ.
ಎನ್ಐಎ, ಜೈಪುರ: ದೇಶಾದ್ಯಂತ ಖ್ಯಾತಿ ಪಡೆದ ಆಯುರ್ವೇದ ಸಂಸ್ಥೆಯಾದ ಎನ್ಐಎಗೆ ಡೀಮ್ಡ್ ವಿಶ್ವವಿದ್ಯಾಲಯ (ಡಿ ನೊವೊ ವರ್ಗ) ಸ್ಥಾನಮಾನ ನೀಡಲಾಗಿದೆ. 175 ವರ್ಷಗಳ ಪರಂಪರೆಯ ವಾರಸುದಾರನಾಗಿರುವ ಎನ್ಐಎ, ಕಳೆದ ಕೆಲವು ದಶಕಗಳಲ್ಲಿ ನೈಜ ಆಯುರ್ವೇದವನ್ನು ಸಂರಕ್ಷಿಸಲು, ಉತ್ತೇಜಿಸಲು ಮತ್ತು ಮುನ್ನಡೆಸಲು ನೀಡಿದ ಕೊಡುಗೆ ಗಮನಾರ್ಹವಾಗಿದೆ. ಪ್ರಸ್ತುತ ಎನ್ಐಎ 14 ವಿವಿಧ ವಿಭಾಗಗಳನ್ನು ಹೊಂದಿದೆ. 2019-20ರ ಅವಧಿಯಲ್ಲಿ ಒಟ್ಟು 955 ವಿದ್ಯಾರ್ಥಿಗಳು ಮತ್ತು 75 ಬೋಧಕವರ್ಗವನ್ನು ಹೊಂದಿರುವ ಈ ಸಂಸ್ಥೆ ಉತ್ತಮ ವಿದ್ಯಾರ್ಥಿ ಶಿಕ್ಷಕರ ಅನುಪಾತವನ್ನು ಹೊಂದಿದೆ. ಇದು ಆಯುರ್ವೇದದಲ್ಲಿ ಪ್ರಮಾಣಪತ್ರದಿಂದ ಡಾಕ್ಟರೇಟ್ ಹಂತದವರೆಗೆ ಹಲವಾರು ಕೋರ್ಸ್‌ಗಳನ್ನು ನೀಡುತ್ತದೆ. ಅತ್ಯಾಧುನಿಕ ಪ್ರಯೋಗಾಲಯ ಸೌಲಭ್ಯಗಳೊಂದಿಗೆ, ಎನ್ಐಎ ಸಹ ಸಂಶೋಧನಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ, ಇದು 54 ವಿವಿಧ ಸಂಶೋಧನಾ ಯೋಜನೆಗಳನ್ನು ನಡೆಸುತ್ತಿದೆ. ಡೀಮ್ಡ್ ವಿಶ್ವವಿದ್ಯಾಲಯ (ಡಿ ನೊವೊ ವರ್ಗ) ಎಂದು ಘೋಷಿಸುವುದರೊಂದಿಗೆ, ರಾಷ್ಟ್ರೀಯ ಸಂಸ್ಥೆಯು ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಉನ್ನತ ಗುಣಮಟ್ಟವನ್ನು ಸಾಧಿಸುವ ಮೂಲಕ ಹೊಸ ಎತ್ತರವನ್ನು ತಲುಪಲು ಸಜ್ಜಾಗಿದೆ.

***

 



(Release ID: 1672229) Visitor Counter : 305