ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಸಿಎಲ್ ಸಿ, ಇಪಿಎಫ್ ಒ ಮತ್ತು ಇಎಸ್ ಐಸಿ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳನ್ನು ಸನ್ಮಾನಿಸಿದ ಕೇಂದ್ರ ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್
Posted On:
11 NOV 2020 3:34PM by PIB Bengaluru
ಕೇಂದ್ರ ಕಾರ್ಮಿಕ ಆಯುಕ್ತರ(ಕೇಂದ್ರ) ಕಚೇರಿ, ನೌಕರರ ಭವಿಷ್ಯನಿಧಿ ಸಂಸ್ಥೆ ಮತ್ತು ನೌಕರರ ರಾಜ್ಯ ವಿಮಾ ನಿಗಮಗಳ ಕೋವಿಡ್-19 ಯೋಧರ ನಿರಂತರ ಪ್ರಯತ್ನಗಳು ಹಾಗೂ ಕಠಿಣ ಶ್ರಮವನ್ನು ಶ್ಘಾಘಿಸಲು ಮತ್ತು ಅವರನ್ನು ಗುರುತಿಸಿ ಸನ್ಮಾನಿಸಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಇಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಮಿಕ ಖಾತೆ ಸಚಿವ(ಸ್ವತಂತ್ರ ಹೊಣೆಗಾರಿಕೆ) ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ಈ ಸಂಸ್ಥೆಗಳ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳು ತೋರಿದ ಗರಿಷ್ಠ ಮಟ್ಟದ ವೃತ್ತಿಪರತೆ ಮತ್ತು ಬದ್ಧತೆಯನ್ನು ಗುರುತಿಸಿ ಪ್ರಶಂಸಾ ಪತ್ರಗಳನ್ನು ನೀಡಿ ಗೌರವಿಸಿದರು. ಈ ವೇಳೆ ಸಚಿವರು, ಸಚಿವಾಲಯ ಕಾರ್ಮಿಕರು ಮತ್ತು ಉದ್ಯಮದ ಒಳಿತಿಗಾಗಿ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ ಎಂದರು. ಅಲ್ಲದೆ ಎರಡು ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ಐದು ಸಾವಿರ ಕೋಟಿ ರೂಪಾಯಿ ಹಣವನ್ನು ಜಮೆ ಮಾಡಲಾಗಿದೆ ಎಂದು ಅವರು ಹೇಳಿದರು. ಸಿ ಎಲ್ ಸಿ ಈ ಯೋಜನೆಯ ಸುಗಮ ಜಾರಿಗೆ 80 ಅಧಿಕಾರಿಗಳನ್ನು ನಿಯೋಜಿಸಿತ್ತು ಎಂದು ಅವರು ವಿವರಿಸಿದರು.
ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಇಎಸ್ಐಸಿ ಮತ್ತು ಇಪಿಎಫ್ಒನ ನೋಡಲ್ ಅಧಿಕಾರಿಗಳು ಒಳಗೊಂಡಂತೆ ಪ್ರಾದೇಶಿಕ ಕಚೇರಿಗಳು ಹಗಲಿರುಳು ಶ್ರಮಿಸಿವೆ ಎಂದರು. 20 ನಿಯಂತ್ರಣ ಕೋಣೆಗಳ ಮೂಲಕ ಸುಮಾರು 16 ಸಾವಿರ ದೂರುಗಳನ್ನು ಸ್ವೀಕರಿಸಲಾಗಿತ್ತು. ಆ ಪೈಕಿ ಸಿಎಲ್ ಸಿ(ಸಿ), ಇಪಿಎಫ್ಒ ಮತ್ತು ಇಎಸ್ಐಸಿಗೆ ಸೇರಿದ ಶೇ.96ರಷ್ಟು ದೂರುಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗಿದೆ ಎಂದು ಅವರು ಹೇಳಿದರು. ಈ ಮೂರು ಸಂಸ್ಥೆಗಳ ಎಲ್ಲ ಪ್ರಾದೇಶಿಕ ಕಚೇರಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಾಮೂಹಿಕ ಬದ್ಧತೆಗೆ ಸಚಿವರು ಕೃತಜ್ಞತೆಗಳನ್ನು ಸಲ್ಲಿಸಿದರು. 23 ಇಎಸ್ಐಸಿ ಆಸ್ಪತ್ರೆಗಳನ್ನು ಕೋವಿಡ್-19 ಆಸ್ಪತ್ರೆಗಳೆಂದು ಘೋಷಿಸಲಾಗಿದ್ದು, ಅವುಗಳಲ್ಲಿ 2600 ಐಸೋಲೇಷನ್ ಹಾಸಿಗೆಗಳು, 555ಕ್ಕೂ ಅಧಿಕ ಐಸಿಯು ಹಾಸಿಗೆಗಳು ಮತ್ತು 213ಕ್ಕೂ ಅಧಿಕ ವೆಂಟಿಲೇಟರ್ ಗಳು ಒಳಗೊಂಡಿವೆ ಎಂದು ಶ್ರೀ ಗಂಗ್ವಾರ್ ಹೇಳಿದರು.
ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ವಿಶೇಷ ಕೋವಿಡ್-19 ಕ್ಲೈಮ್ ಮಂಡನೆಗೆ ಇಪಿಎಫ್ಒ ನೀಡಿದ್ದ ಅವಕಾಶದಲ್ಲಿ ಸುಮಾರು 47 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದರು. ಅವರಿಗೆ ಸುಮಾರು 12 ಸಾವಿರ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ ಎಂದರು.
ಕಾರ್ಮಿಕ ಮತ್ತು ಔದ್ಯೋಗಿಕ ಇಲಾಖೆ ಕಾರ್ಯದರ್ಶಿ ಶ್ರೀ ಅಪೂರ್ವ ಚಂದ್ರ ಅವರು ಈ ಮೂರು ಸಂಸ್ಥೆಗಳ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಅಸಮಾನ್ಯ ಪ್ರಯತ್ನಗಳನ್ನು ಶ್ಲಾಘಿಸಿದರು. ಕೋವಿಡ್-19 ಸಂಕಷ್ಟದ ಸಮಯದಲ್ಲಿ ಪ್ರತಿಯೊಬ್ಬ ಅಧಿಕಾರಿ ಮತ್ತು ಪ್ರಾದೇಶಿಕ ಕಚೇರಿಗಳು ತಮ್ಮ ಕರ್ತವ್ಯದ ವ್ಯಾಪ್ತಿಯನ್ನು ಮೀರಿ ಅತ್ಯುತ್ಸಾಹದಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಸುಮಾರು 2 ಕೋಟಿ ಕಟ್ಟಡ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ 5 ಸಾವಿರ ಕೋಟಿ ರೂ. ಹಣವನ್ನು ಜಮೆ ಮಾಡಲಾಗಿದೆ. ಇದರ ಸುಗಮ ಜಾರಿಗಾಗಿ ಸಿಎಲ್ ಸಿಗಳು 80 ಅಧಿಕಾರಿಗಳನ್ನು ನಿಯೋಜಿಸಿದ್ದವು ಎಂದರು. ಇಎಸ್ಐಸಿ ಮತ್ತು ಇಪಿಎಫ್ಒನ ನೋಡಲ್ ಅಧಿಕಾರಿಗಳು ಕಾರ್ಮಿಕರು ಎದುರಿಸುತ್ತಿದ್ದ ಸಮಸ್ಯೆಗಳನ್ನು ಬಗೆಹರಿಸಲು ಪ್ರಾದೇಶಿಕ ಕಚೇರಿಗಳ ಜೊತೆಗೂಡಿ ಹಗಲು ರಾತ್ರಿ ಶ್ರಮಿಸಿದ್ದಾರೆ. ಸಿಎಲ್ ಸಿಗಳು ಸ್ಥಾಪಿಸಿದ್ದ 20 ನಿಯಂತ್ರಣ ಕೊಠಡಿಗಳ ಮೂಲಕ ಕುಂದುಕೊರತೆಗಳ ಪರಿಹಾರದಲ್ಲಿ ಉತ್ತಮ ಸಾಧನೆ ಮಾಡಲಾಗಿದೆ ಎಂದು ಅವರು ಹೇಳಿದರು.
ಅವರು ಕೇಂದ್ರೀಯ ಪ್ರಾವಿಡೆಂಟ್ ಫಂಡ್ ಆಯುಕ್ತರು(ಸಿಪಿಎಫ್ ಸಿ) ಹಾಗೂ ದೇಶಾದ್ಯಂತ ಇರುವ ಇಪಿಎಫ್ಒ ಅಧಿಕಾರಿಗಳ ಮೂಲಕ ವಿನೂತನ ರೀತಿಯಲ್ಲಿ ಸ್ವಯಂ ಇತ್ಯರ್ಥ ವಿಧಾನ ಮತ್ತು ಹಲವು ಸ್ಥಳಗಳಲ್ಲಿ ಕ್ಲೈಮ್ ಸಲ್ಲಿಕೆಗೆ ಅವಕಾಶ ಮತ್ತು ಶೇ.50ರಷ್ಟು ಸಿಬ್ಬಂದಿಯೊಂದಿಗೆ ಕೋವಿಡ್-19 ಕ್ಲೈಮ್ ಸಲ್ಲಿಕೆಯಾದ 72 ಗಂಟೆಗಳಲ್ಲಿ ಇತ್ಯರ್ಥಪಡಿಸಲಾಗಿದೆ. ಇಎಸ್ಐಸಿ ಅಧಿಕಾರಿಗಳ ಕಠಿಣ ಶ್ರಮ ಮತ್ತು ಪ್ರಯತ್ನಗಳ ಬಗ್ಗೆ ಶ್ರೀ ಚಂದ್ರ ಶ್ಲಾಘಿಸಿದರು ಮತ್ತು ಎಲ್ಲ ಇಎಸ್ಐಸಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೋವಿಡ್ ಆರೈಕೆ ಹಾಸಿಗೆಗಳು, ಐಸಿಯು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿತ್ತು ಮತ್ತು ಕೋವಿಡ್-19 ಪರೀಕ್ಷೆಗಳನ್ನು, ಪ್ಲಾಸ್ಮಾ ವರ್ಗಾವಣೆಯನ್ನು, ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ಕೈಗೊಳ್ಳಲಾಯಿತು ಎಂದರು. ವಿಮೆ ಮಾಡಿಸಿದ ವ್ಯಕ್ತಿಗಳು/ಫಲಾನುಭವಿಗಳು/ಭಾಗಿದಾರರ ಸಮಸ್ಯೆಗಳನ್ನು ನಿವಾರಿಸಲು ಇಎಸ್ಐಸಿ ಪ್ರಾದೇಶಿಕ ಕಚೇರಿಗಳು ದಿನದ 24 ಗಂಟೆಗಳು ಕಾರ್ಯನಿರ್ವಹಿಸಿವೆ ಎಂದರು.
ಶ್ರೀ ಡಿಪಿಎಸ್ ನೇಗಿ, ಸಿಎಲ್ ಸಿ(ಸಿ), ಶ್ರೀ ಸುನಿಲ್ ಬರತ್ವಾಲ್, ಸಿಪಿಎಫ್ ಸಿ ಮತ್ತು ಶ್ರೀಮತಿ ಅನುರಾಧಾ ಪ್ರಸಾದ್, ಡಿಜಿ, ಇಎಸ್ಐಸಿ ಅವರು ತಮ್ಮ ತಮ್ಮ ಸಂಸ್ಥೆಗಳಲ್ಲಿ ಕೈಗೊಂಡಿರುವ ಕ್ರಮಗಳು ಹಾಗೂ ಸಾಧನೆಗಳನ್ನು ವಿವರಿಸಿದರು. ಸಚಿವರ ಸೂಚನೆಯಂತೆ ಸಿಎಲ್ ಸಿ(ಸಿ) ನೇರ ಮೇಲ್ವಿಚಾರಣೆಯಲ್ಲಿ 20 ಸಿಎಲ್ ಸಿ ಪ್ರಾದೇಶಿಕ ಕಚೇರಿಗಳಲ್ಲಿ 20 ನಿಯಂತ್ರಣ ಕೋಣೆಗಳನ್ನು ತೆರೆಯಲಾಗಿತ್ತು ಎಂದು ನೇಗಿ ತಿಳಿಸಿದರು. ಈ ನಿಯಂತ್ರಣ ಕೋಣೆಗಳು, ದಿನದ 24 ಗಂಟೆಗಳು ಕಾರ್ಯನಿರ್ವಹಿಸಿದವು. ಕ್ಷೇತದ ಅಧಿಕಾರಿಗಳು ದೂರು ಬಂದ 72 ಗಂಟೆಗಳೊಳಗೆ ಅವುಗಳನ್ನು ಇತ್ಯರ್ಥಪಡಿಸುವಂತೆ ಸೂಚಿಸಲಾಗಿತ್ತು. ನೌಕರರನ್ನು ಟೆಲಿಫೋನ್/ಇಮೇಲ್ ಮತ್ತು ವಿಡಿಯೋ ಕಾನ್ಫರೆನ್ಸ್ ಮೂಲಕ ಸಂಪರ್ಕಿಸಿ ಅವರುಗಳ ಸಮಸ್ಯೆಗಳನ್ನು ಬಗೆಹರಿಸಲಾಯಿತು ಎಂದರು. ನಿಯಂತ್ರಣ ಕೊಠಡಿಗಳ ಮಧ್ಯ ಪ್ರವೇಶದಿಂದಾಗಿ ಕೇಂದ್ರ ಸರ್ಕಾರದಿಂದ 1,86,365 ಕಾರ್ಮಿಕರಿಗೆ 2,95,33,43,880 ರೂ. ವೇತನವನ್ನು ಜಮೆ ಮಾಡಿಸಿರುವುದಷ್ಟೇ ಅಲ್ಲದೆ ರಾಜ್ಯಗಳ ಕಡೆಯಿಂದ 3,863 ಕಾರ್ಮಿಕರಿಗೆ 2,63,73,458 ರೂ. ವೇತನವನ್ನು ವಿತರಿಸಲಾಗಿದೆ ಎಂದರು. ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಿದ ನಿಯಂತ್ರಣ ಕೊಠಡಿಗಳ ಮೂಲಕ ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ ಆಹಾರ, ವಸತಿ ಮತ್ತು ಪಡಿತರ ವಿತರಣೆಯ ಕರೆಗಳನ್ನು ಸ್ವೀಕರಿಸಿ ಅವುಗಳಿಗೆ ಸ್ಪಂದಿಸಲಾಯಿತು ಎಂದರು.
ಕೇಂದ್ರೀಯ ಪ್ರಾವಿಡೆಂಟ್ ಫಂಡ್ (ಸಿಪಿಎಫ್ ಸಿ) ಆಯುಕ್ತರಾದ ಶ್ರೀ ಸುನಿಲ್ ಬರತ್ವಾಲ್ ಅವರು, ಯಾರು ನಿರೀಕ್ಷಿಸದಂತಹ ಸ್ವಭಾವದ ಸಮಸ್ಯೆಗಳನ್ನು ಎದುರಿಸಲು ಭಾಗೀದಾರರ ಅಗತ್ಯತೆಗಳನ್ನು ಪೂರೈಸಲು ಇಪಿಎಫ್ಒ ಸಜ್ಜಾಗಿತ್ತು. ಪಿಎಂಜಿಕೆವೈ ಯೋಜನೆಯ ಭಾಗವಾಗಿ ವಿಶೇಷ ಕೋವಿಡ್-19 ಮುಂಗಡ ಪಾವತಿ ಕುರಿತಂತೆ ವಿವರಿಸಿದ ಅವರು, ಇಪಿಎಫ್ ಸದಸ್ಯರಿಗೆ ಇಪಿಎಫ್ ಖಾತೆಯ ಮುಂಗಡ ಮರು ಪಾವತಿಸಲಾಗದ ಹಣವನ್ನು ಸ್ವೀಕರಿಸಲು ಪ್ಯಾರಾ 68ಎಲ್ ಅನ್ವಯ ಅವಕಾಶ ನೀಡಲಾಗಿತ್ತು. ಯಾವುದೇ ಉದ್ದಿಮೆ ಅಥವಾ ಸಂಸ್ಥೆ ಎಲ್ಲೇ ಇದ್ದರೂ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಜರುಗಿಸಲಾಗಿತ್ತು. ದೇಶಾದ್ಯಂತ ಇಪಿಎಫ್ ಕಚೇರಿಗಳು 47.58 ಲಕ್ಷ ಕೋವಿಡ್-19 ಮುಂಗಡ ಠೇವಣಿ ಪಾವತಿಗಳನ್ನು ಇತ್ಯರ್ಥಪಡಿಸಿ, 12,220.26 ಕೋಟಿ ರೂ.ಗಳನ್ನು ಪಾವತಿಸಿದೆ. ಸ್ವಯಂ ಇತ್ಯರ್ಥ ವಿಧಾನ, ಬಹು ಸ್ಥಳದಲ್ಲಿ ಕ್ಲೈಮ್ ವಿಲೇವಾರಿ, ಶೇ.50ಕ್ಕಿಂತ ಕಡಿಮೆ ಸಿಬ್ಬಂದಿಯೊಂದಿಗೆ 72 ಗಂಟೆಗಳ ಒಳಗೆ ಕೋವಿಡ್-19 ಕ್ಲೈಮ್ ಗಳ ಸಲ್ಲಿಕೆಗೆ ಹಗಲು-ರಾತ್ರಿ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದಾರೆ ಎಂದರು. ಏಪ್ರಿಲ್ ನಿಂದ ಸೆಪ್ಟೆಂಬರ್ 2020ರ ವರೆಗೆ ಸಾಂಕ್ರಾಮಿಕದ ಅವಧಿಯಲ್ಲಿ ಉಮಾಂಗ್(ಹೊಸ ತಲೆಮಾರಿನ ನವ ಯುಗದ ಆಡಳಿತದ ಸಮಗ್ರ ಮೊಬೈಲ್ ಅಪ್ಲಿಕೇಶನ್) ಆನ್ ಲೈನ್ ಮೂಲಕ 19.20 ಲಕ್ಷ ಅರ್ಜಿಗಳು ಬಂದಿದ್ದವು. 2019ರ ಮಾರ್ಚ್ ವರೆಗಿನ ಕೋವಿಡ್ ಪೂರ್ವದ ಅವಧಿಗೆ ಹೋಲಿಸಿದರೆ ಈ ಅರ್ಜಿಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಶೇ.274ರಷ್ಟು ಹೆಚ್ಚಾಗಿದೆ. ಸಾಂಕ್ರಾಮಿಕದ ಸಮಯದಲ್ಲಿ ಅಗತ್ಯವಿರುವವರಿಗೆ ಸ್ಪಂದಿಸಲು ಸ್ವಯಂ ಇತ್ಯರ್ಥ ವಿಧಾನ ಅಭಿವೃದ್ಧಿಪಡಿಸಿದ್ದಕ್ಕಾಗಿ ಇಪಿಎಫ್ಒಗೆ ಡಿಜಿಟಲ್ ತಂತ್ರಜ್ಞಾನ ಸಭಾ ಪ್ರಶಸ್ತಿ ಲಭಿಸಿದೆ ಎಂದು ಬರತ್ವಾಲ್ ಹೇಳಿದರು. ಈ ಯೋಜನೆಯನ್ನು ಸಂಸ್ಥೆಯೊಳಗೆ ಅಭಿವೃದ್ಧಿಪಡಿಸಲಾಗಿದ್ದು, ಇದು ಕೋವಿಡ್-19 ಕ್ಲೈಮ್ ಸಲ್ಲಿಕೆ ಸಮಯವನ್ನು 72 ಗಂಟೆಗೆ ಇಳಿಸಲು ಅತ್ಯಂತ ಉಪಯುಕ್ತವಾಯಿತು.
ಇಎಸ್ಐಸಿ ಮಹಾ ನಿರ್ದೇಶಕರಾದ ಶ್ರೀಮತಿ ಅನುರಾಧಾ ಪ್ರಸಾದ್ ಅವರು, ಇಎಸ್ಐಸಿಯ ಸಾಧನೆಗಳು ಮತ್ತು ಉಪಕ್ರಮಗಳನ್ನು ವಿವರಿಸಿದರು. ಆಸ್ಪತ್ರೆಗಳಲ್ಲಿ ವಿಶೇಷ ಕೋವಿಡ್ ಆರೈಕೆ ಹಾಸಿಗೆಗಳು, ಐಸಿಯು ಹಾಸಿಗೆಗಳು, ಕೋವಿಡ್-19 ಪರೀಕ್ಷೆಗಳನ್ನು ಕೈಗೊಳ್ಳಲು ಪ್ಲಾಸ್ಮಾ ದಾನ, ಆರ್ ಟಿಪಿಸಿಆರ್ ಪರೀಕ್ಷೆಗಳನ್ನು ನಡೆಸಲು ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಇಎಸ್ಐಸಿ ಪ್ರಾದೇಶಿಕ ಕಚೇರಿಗಳು, ವಿಮಾ ವ್ಯಕ್ತಿಗಳು/ ಫಲಾನುಭವಿಗಳು/ ಭಾಗಿದಾರರ ಕುಂದುಕೊರತೆಗಳನ್ನು ನೀಗಿಸಲು ದಿನದ 24 ಗಂಟೆಗಳೂ ಕಾರ್ಯನಿರ್ವಹಿಸಿವೆ ಎಂದರು. ನಿಗದಿತ ಕಾಲಮಿತಿಯಲ್ಲಿ ಹಲವು ಪ್ರಕರಣಗಳನ್ನು ಬಗೆಹರಿಸಲಾಗಿದೆ. ದೂರುಗಳ ಇತ್ಯರ್ಥ ಗುಣಮಟ್ಟದಿಂದ ಕೂಡಿದೆ. ದತ್ತಾಂಶ ವರದಿ ಮಾಡುವುದು ಕೂಡ ನಿಖರವಾಗಿತ್ತು. ಆವಿಷ್ಕಾರಗಳು ಮತ್ತು ಸೃಜನಾತ್ಮಕ ಕ್ರಮಗಳ ಮೂಲಕ ದೂರುಗಳನ್ನು ಪರಿಹರಿಸಲಾಗಿದೆ. ಅಲ್ಲದೆ ರಾಜ್ಯ ಸರ್ಕಾರಗಳ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯದ ಮೂಲಕ ರಾಜ್ಯಗಳಿಗೆ ಸಂಬಂಧಿಸಿದ ವಿಷಯಗಳನ್ನು ತಂಡದ ಸ್ಫೂರ್ತಿಯೊಂದಿಗೆ ಬಗೆಹರಿಸಿದ್ದರಿಂದ ಸಕಾರಾತ್ಮಕ ಫಲಿತಾಂಶ ಲಭ್ಯವಾಯಿತು ಎಂದು ಶ್ರೀಮತಿ ಪ್ರಸಾದ್ ವಿವರಿಸಿದರು.
ಎಲ್ಲಾ ಮೂರು ಸಂಸ್ಥೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಸಾಮೂಹಿಕ ಪ್ರಯತ್ನಗಳಿಂದಾಗಿ ಈ ಎಲ್ಲಾ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಯಿತು ಎಂದು ಪ್ರತಿಪಾದಿಸಲಾಯಿತು.
ಕೇಂದ್ರೀಯ ಕಾರ್ಮಿಕ ಆಯುಕ್ತಾಲಯದಲ್ಲಿ ಪ್ರಶಸ್ತಿ ಪಡೆದವರ ಪಟ್ಟಿ (ಕೇಂದ್ರೀಯ), ಸಿಎಲ್ ಸಿ(ಸಿ):
1. ಶ್ರೀ ಸಂತೋಷ್ ಮಹೂರ್, ಎಲ್ಇಒ(ಸಿ) ಸಿಎಲ್ ಸಿ(ಸಿ) (ಎಚ್ ಕ್ಯೂ)
2. ಸಿಎಲ್ ಸಿ (ಸಿ) ಪ್ರಾದೇಶಿಕ ಕಚೇರಿ, ಚೆನ್ನೈ
3. ಸಿಎಲ್ ಸಿ (ಸಿ) ಪ್ರಾದೇಶಿಕ ಕಚೇರಿ, ಕೊಲ್ಕತ್ತಾ
4. ಸಿಎಲ್ ಸಿ (ಸಿ) ಪ್ರಾದೇಶಿಕ ಕಚೇರಿ, ಕೊಚ್ಚಿನ್
ನೌಕರರ ಭವಿಷ್ಯನಿಧಿ ಸಂಸ್ಥೆ (ಇಪಿಎಫ್ಒ)ಯ ಪ್ರಶಸ್ತಿ ಪಡೆದವರ ಪಟ್ಟಿ:
1. ಶ್ರೀ ರುಪ್ರೇಶ್ವರ್ ಸಿಂಗ್, ಆರ್ ಪಿಎಫ್ ಸಿ-1, ಇಪಿಎಫ್ಒ(ಎಚ್ ಕ್ಯೂ)-
2. ಇಪಿಎಫ್ಒ ಪ್ರಾದೇಶಿಕ ಕಚೇರಿ, ದೆಹಲಿ(ಕೇಂದ್ರೀಯ)
3. ಇಪಿಎಫ್ಒ ಪ್ರಾದೇಶಿಕ ಕಚೇರಿ, ದೆಹಲಿ(ಪೂರ್ವ)
4. ಇಪಿಎಫ್ಒ ಪ್ರಾದೇಶಿಕ ಕಚೇರಿ, ಕೆ.ಆರ್. ಪುರಂ, ಬೆಂಗಳೂರು
ನೌಕರರ ರಾಜ್ಯ ವಿಮಾ ನಿಗಮ(ಇಎಸ್ಐಸಿ) ಪ್ರಶಸ್ತಿ ಪಡೆದವರ ಪಟ್ಟಿ
1. ಶ್ರೀ ಎಸ್.ಎಲ್. ಮೀನಾ, ಡಿಡಿ, ಇಎಸ್ಐಸಿ(ಎಚ್ ಕ್ಯೂ)
2. ಇಎಸ್ಐಸಿ ಪ್ರಾದೇಶಿಕ ಕಚೇರಿ, ಒಡಿಶಾ
3. ಇಎಸ್ಐಸಿ ಪ್ರಾದೇಶಿಕ ಕಚೇರಿ, ಮಹಾರಾಷ್ಟ್ರ
4. ಇಎಸ್ಐಸಿ ಪ್ರಾದೇಶಿಕ ಕಚೇರಿ, ದೆಹಲಿ
5. ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫರಿದಾಬಾದ್
6. ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಸನಾಥನನಗರ
7. ಇಎಸ್ಐಸಿ ವೈದ್ಯಕೀಯ ಕಾಲೇಜು ಮತ್ತು ಪಿಜಿಐಎಂಎಸ್ಆರ್ ಮತ್ತು ಮಾದರಿ ಆಸ್ಪತ್ರೆ, ರಾಜಾಜಿನಗರ
*****
(Release ID: 1672112)
Visitor Counter : 187