ಪ್ರಧಾನ ಮಂತ್ರಿಯವರ ಕಛೇರಿ

ಹಾಜೀರಾದಲ್ಲಿ ರೋ-ಪ್ಯಾಕ್ಸ್ ಟರ್ಮಿನಲ್ ಉದ್ಘಾಟಿಸಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅನುವಾದ

Posted On: 08 NOV 2020 3:18PM by PIB Bengaluru

ಒಂದು ಯೋಜನೆಯೊಂದಿಗೆ ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಜೀವನವನ್ನು ಸುಲಭಗೊಳಿಸುವುದು ಹೇಗೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ನಾನು ಇದೀಗ ನಾಲ್ಕೈದು ಮಂದಿ  ಸೋದರ, ಸೋದರಿಯರೊಂದಿಗೆ ಮಾತನಾಡಿದೆ. ಅವರು ತಮ್ಮ ಅನುಭವವನ್ನು ಹಂಚಿಕೊಂಡ ರೀತಿ, ಅದು ತೀರ್ಥಯಾತ್ರೆಯ ಬಗ್ಗೆ ಅಥವಾ ವಾಹನದ ಕನಿಷ್ಠ ನಷ್ಟದ ಬಗ್ಗೆ ಅಥವಾ ಸಮಯವನ್ನು ಉಳಿಸುವ ಬಗ್ಗೆ ಅಥವಾ ಕೃಷಿ ಉತ್ಪಾದನೆಯಲ್ಲಿ ನಷ್ಟವನ್ನು ತಡೆಯುವ ಬಗ್ಗೆ ಅಥವಾ ಹಣ್ಣು ಮತ್ತು ತರಕಾರಿಗಳನ್ನು ಸೂರತ್‌ನ ಮಾರುಕಟ್ಟೆಗಳಿಗೆ ಕೊಂಡೊಯ್ಯುವದರ ಬಗ್ಗೆ ಚರ್ಚೆ ನಡೆಸುವ ಅವಕಾಶ ದೊರೆಯಿತು. ವೇಗದ ಹೆಚ್ಚಳವು ವ್ಯಾಪಾರ ವಹಿವಾಟಿಗೆ ಅನುಕೂಲವಾಗಲಿದೆ ಎಂಬ ಸಂತೋಷಕರವಾದ ವಾತಾವರಣ ಅಲ್ಲಿದೆ ಎಂದು ನಾನು ಭಾವಿಸುತ್ತೇನೆ. ಈ ಅತ್ಯುತ್ತಮ ಸಂಪರ್ಕದ ಮೂಲಕ ಉದ್ಯಮಿಗಳು, ವ್ಯಾಪಾರಿಗಳು, ಉದ್ಯೋಗಿಗಳು, ಕಾರ್ಮಿಕರು, ರೈತರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಪ್ರಯೋಜನ ಪಡೆಯಲಿದ್ದಾರೆ. ತಮ್ಮ ಸ್ವಂತದವರ ನಡುವಿನ ಅಂತರವು ಕಡಿಮೆಯಾದಾಗ ಸಾಕಷ್ಟು ತೃಪ್ತಿ ಸಿಗುತ್ತದೆ.

ಒಂದು ರೀತಿಯಲ್ಲಿ ಗುಜರಾತ್ ಜನರು ದೀಪಾವಳಿಯ ಈ ದೊಡ್ಡ ಉಡುಗೊರೆಯನ್ನು ಇಂದೇ ಪಡೆಯುತ್ತಿದ್ದಾರೆ. ಈ ಸಂತೋಷದ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ, ಶ್ರೀ ವಿಜಯ್ ರೂಪಾನಿಯವರು, ಕೇಂದ್ರ ಸರ್ಕಾರದ ನನ್ನ ಸಂಪುಟದ ಸಹೋದ್ಯೋಗಿ, ಭಾರತೀಯ ಜನತಾ ಪಕ್ಷದ ಗುಜರಾತ್ ಘಟಕದ ಅಧ್ಯಕ್ಷ ಮನ್ಸುಖ್ ಭಾಯ್ ಮಾಂಡವೀಯಾ ಅವರು ಮತ್ತು ಸಂಸತ್ತಿನಲ್ಲಿ ನನ್ನ ಸಹೋದ್ಯೋಗಿ ಶ್ರೀ ಸಿ. ಆರ್. ಪಾಟೀಲ್ ಅವರು, ಗುಜರಾತ್ ಸರ್ಕಾರದ ಎಲ್ಲ ಸಚಿವರು, ಸಂಸದರು, ಶಾಸಕರು, ಇತರ ಎಲ್ಲ ಜನಪ್ರತಿನಿಧಿಗಳು ಮತ್ತು ನನ್ನ ಆತ್ಮೀಯ ಸೋದರ ಮತ್ತು ಸೋದರಿಯರು ವಿವಿಧ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದಾರೆ. ಹಜೀರಾ ಮತ್ತು ಘೋಘಾ ನಡುವೆ ರೋ-ಪ್ಯಾಕ್ಸ್ ಸೇವೆಯ ಆರಂಭದೊಂದಿಗೆ ವರ್ಷಗಳಿಂದ ಕಂಡಿದ್ದ ಕನಸು ಸಾಕಾರಗೊಂಡಿದೆ ಮತ್ತು ಸೌರಾಷ್ಟ್ರ ಮತ್ತು ದಕ್ಷಿಣ ಗುಜರಾತ್ ಜನರ ದೀರ್ಘಕಾಲದ ಕಾಯುವಿಕೆಯೂ ಕೊನೆಗೊಂಡಿದೆ.ಹಜಿರಾದಲ್ಲಿ ಹೊಸ ಟರ್ಮಿನಲ್ ಅನ್ನು ಸಹ ಉದ್ಘಾಟಿಸಲಾಗಿದೆ. ಭಾವನಗರ ಮತ್ತು ಸೂರತ್ ನಡುವೆ ಈ ಹೊಸ ಕಡಲ ಸಂಪರ್ಕದ ಅರಂಭದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಅಭಿನಂದನೆಗಳು ಮತ್ತು ಶುಭಾಶಯಗಳು.

ಸ್ನೇಹಿತರೇ,

ಈ ಸೇವೆಯು ಘೋಘಾ ಮತ್ತು ಹಜೀರಾ ನಡುವಿನ ಪ್ರಸ್ತುತ ಇರುವ 375 ಕಿ.ಮೀ. ರಸ್ತೆಯ ದೂರವನ್ನು ಸಮುದ್ರದ ಮೂಲಕ ಕೇವಲ 90 ಕಿಲೋಮೀಟರ್‌ಗೆ ಇಳಿಸುತ್ತದೆ. ಈ ಮೊದಲು 1ದೂರವನ್ನು ಕ್ರಮಿಸಲು 10-12 ಗಂಟೆಗಳು ಬೇಕಾಗಿತ್ತು. ಈಗ ಕೇವಲ 3-4 ಗಂಟೆಯಲ್ಲಿ ದುರವನ್ನು ಕ್ರಮಿಸಬಹುದಾಗಿದೆ. ಇದು ಸಮಯವನ್ನು ಉಳಿಸುವುದಲ್ಲದೆ, ನಿಮ್ಮ ಖರ್ಚುಗಳನ್ನು ಸಹ ಕಡಿಮೆ ಮಾಡುತ್ತದೆ. ಇದಲ್ಲದೆ, ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿ ಮಾಲಿನ್ಯ ಕಡಿಮೆಯಾಗುತ್ತದೆ.. ಸುಮಾರು 80,000 ಪ್ರಯಾಣಿಕ ಕಾರುಗಳು ಮತ್ತು ಸುಮಾರು 30,000 ಟ್ರಕ್‌ಗಳು ಒಂದು ವರ್ಷದಲ್ಲಿ ಈ ಹೊಸ ಸೇವೆಯ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಇದರಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಆಗುವ ಉಳಿತಾಯವನ್ನು ನೀವು ಕಲ್ಪಿಸಿಕೊಳ್ಳಬಹುದು.

ಸ್ನೇಹಿತರೇ,

ಎಲ್ಲಕ್ಕಿಂತ ಹೆಚ್ಚಾಗಿ, ಗುಜರಾತ್‌ನ ದೊಡ್ಡ ವ್ಯಾಪಾರ ಕೇಂದ್ರದೊಂದಿಗೆ ಸೌರಾಷ್ಟ್ರದ ಸಂಪರ್ಕವು ಈ ಪ್ರದೇಶದ ಜನಜೀವನವನ್ನು ಬದಲಿಸಲಿದೆ. ಈಗ, ಸೌರಾಷ್ಟ್ರದ ರೈತರು ಮತ್ತು ದನಗಾಹಿಗಳು ಹಣ್ಣು, ತರಕಾರಿಗಳು ಮತ್ತು ಹಾಲನ್ನು ಸೂರತ್‌ಗೆ ಸಾಗಿಸುವುದು ತುಂಬಾ ಸುಲಭವಾಗುತ್ತದೆ. ರಸ್ತೆಯ ಸುದೀರ್ಘ ಪ್ರಯಾಣದಿಂದಾಗಿ ಹಣ್ಣುಗಳು, ತರಕಾರಿಗಳು ಮತ್ತು ಹಾಲು ಹಾಳಾಗುತ್ತಿದ್ದವು. ಈಗ ಆ ಸಮಸ್ಯೆ ಇದುವುದಿಲ್ಲ. ಈಗ ದನಗಾಹಿಗಳು ಮತ್ತು ರೈತರ ಉತ್ಪನ್ನಗಳು ಕಡಲ ಮಾರ್ಗದ ಮೂಲಕ ವೇಗವಾಗಿ ಮತ್ತು ಸುರಕ್ಷಿತವಾಗಿ ಮಾರುಕಟ್ಟೆಯನ್ನು ತಲುಪುತ್ತವೆ. ಅಂತೆಯೇ, ಪ್ರಯಾಣಿಕರು ಮತ್ತು ಕಾರ್ಮಿಕರ ಪ್ರಯಾಣ ಮತ್ತು ಸಾರಿಗೆಯು ಸುಗಮ ಮತ್ತು ಅಗ್ಗವಾಗಿರುತ್ತದೆ.

ಸ್ನೇಹಿತರೇ,

ಇದು ಅಷ್ಟೊಂದು ಸುಲಭವಾಗಿರಲಿಲ್ಲ, ರೋ-ಪ್ಯಾಕ್ಸ್ ದೋಣಿ ಸೇವೆಯಂತಹ ಸೌಲಭ್ಯಗಳ ಅಭಿವೃದ್ಧಿಗೆ ಅನೇಕ ಜನರು ಶ್ರಮಿಸಿದ್ದಾರೆ. ಈ ಸೌಲಭ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಅನೇಕ ಸಮಸ್ಯೆಗಳು ಮತ್ತು ಸವಾಲುಗಳು ಎದುರಾದವು. ನಾನು ಮೊದಲಿನಿಂದಲೂ ಈ ಯೋಜನೆಗಳೊಂದಿಗೆ ಸಂಬಂಧ ಹೊಂದಿರುವುದರಿಂದ, ಅದರ ಎಲ್ಲಾ ಸಮಸ್ಯೆಗಳ ಬಗ್ಗೆ ನನಗೆ ತಿಳಿದಿದೆ. ಕೆಲವೊಮ್ಮೆ, ಇದು ಆಗುವ ಕೆಲಸವೇ ಎಂಬ ಅನುಮಾನಗಲೂ ಇದ್ದವು, ಏಕೆಂದರೆ ಗುಜರಾತ್‌ನಲ್ಲಿ ಇದು ನಮಗೆ ಹೊಸ ಅನುಭವವಾಗಿತ್ತು. ಆದ್ದರಿಂದ, ಇದಕ್ಕಾಗಿ ಪ್ರಯತ್ನಗಳನ್ನು ಮಾಡಿದ ಪ್ರತಿಯೊಬ್ಬರೂ ಪ್ರಶಂಸೆಗೆ ಅರ್ಹರಾಗಿದ್ದಾರೆ. ಈ ಕನಸನ್ನು ನನಸಾಗಿಸಲು ದಿಟ್ಟತನದಿಂದ ಕೆಲಸ ಮಾಡಿದ ಎಲ್ಲ ಎಂಜಿನಿಯರ್‌ಗಳು ಮತ್ತು ಕಾರ್ಮಿಕರಿಗೆ ನನ್ನ ಕೃತಜ್ಞತೆಯನ್ನು ಅರ್ಪಿಸುತ್ತೇನೆ. ಕಠಿಣ ಪರಿಶ್ರಮ ಮತ್ತು ದಿಟ್ಟತನದಿಂದಾಗಿ ಈ ಸೌಲಭ್ಯ ದೊರಕಿದೆ ಮತ್ತು ಗುಜರಾತಿನ ಲಕ್ಷಾಂತರ ಮಂದಿಗೆ ಹೊಸ ಅವಕಾಶಗಳು ಒದಗಿವೆ.

ಸ್ನೇಹಿತರೇ,

ಗುಜರಾತ್ ಕಡಲ ವ್ಯಾಪಾರವು ಶ್ರೀಮಂತ ಪರಂಪರೆಯನ್ನು ಹೊಂದಿದೆ. ಸಾವಿರಾರು ವರ್ಷಗಳ ಹಿಂದೆ ನಾವು ಸಮುದ್ರ ವ್ಯಾಪಾರಕ್ಕೆ ಹೇಗೆ ಸಂಪರ್ಕ ಹೊಂದಿದ್ದೇವೆಂದು ಮನ್ಸುಖ್ ಭಾಯ್ ನಮಗೆ ಹೇಳುತ್ತಿದ್ದರು. ಕಳೆದ ಎರಡು ದಶಕಗಳಲ್ಲಿ ಗುಜರಾತ್ ತನ್ನ ಕಡಲ ಸಾಮರ್ಥ್ಯವನ್ನು ಅರಿತುಕೊಂಡಿದೆ ಮತ್ತು ಬಂದರು ಆಧಾರಿತ ಅಭಿವೃದ್ಧಿಗೆ ಆದ್ಯತೆ ನೀಡಿರುವುದು ಗುಜರಾತಿನ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವಾಗಿದೆ. ಈ ಸಮಯದಲ್ಲಿ, ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿನ ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಯೋಜನೆಗಳಿಗೆ ವಿಶೇಷ ಗಮನ ನೀಡಲಾಗಿದೆ. ಅದು ರಾಜ್ಯದ ಹಡಗು ನಿರ್ಮಾಣ ನೀತಿ ಇರಬಹುದು ಅಥವಾ ಹಡಗು-ನಿರ್ಮಾಣ ಪಾರ್ಕ್ ಅಥವಾ ವಿಶೇಷ ಟರ್ಮಿನಲ್‌ಗಳಿರಬಹುದು. ಪ್ರತಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ, ಉದಾಹರಣೆಗೆ, ದಹೇಜ್‌ನಲ್ಲಿ ಘನ ಸರಕು, ರಾಸಾಯನಿಕ ಮತ್ತು ಎಲ್‌ಎನ್‌ಜಿ ಟರ್ಮಿನಲ್ ಮತ್ತು ಮುಂಡ್ರಾದಲ್ಲಿ ಕಲ್ಲಿದ್ದಲು ಟರ್ಮಿನಲ್ ನಿರ್ಮಿಸಲಾಗಿದೆ. ಇದರ ಜೊತೆಯಲ್ಲಿ, ನಾವು ಹಡಗು ಸಂಚಾರ ನಿರ್ವಹಣಾ ವ್ಯವಸ್ಥೆಯನ್ನು ಪ್ರೋತ್ಸಾಹಿಸಿದ್ದೇವೆ. ಈ ಉಪಕ್ರಮಗಳೊಂದಿಗೆ ಗುಜರಾತ್‌ನ ಬಂದರು ಕ್ಷೇತ್ರಕ್ಕೆ ಹೊಸ ದಿಕ್ಕು ಸಿಕ್ಕಿದೆ.

ಸ್ನೇಹಿತರೇ,

ಬಂದರುಗಳ ಭೌತಿಕ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಬಂದರುಗಳ ಸುತ್ತಮುತ್ತ ವಾಸಿಸುವ ಜನರ ಜೀವನವನ್ನು ಸುಲಭಗೊಳಿಸಲು ಪ್ರಯತ್ನಿಸಲಾಗಿದೆ. ಕರಾವಳಿ ಪ್ರದೇಶದ ಸಂಪೂರ್ಣ ಪರಿಸರ ವ್ಯವಸ್ಥೆಯ ಆಧುನೀಕರಣದ ಬಗ್ಗೆ ನಾವು ಗಮನಹರಿಸಿದ್ದೇವೆ, ಅದು ಮಿಷನ್ ಮೋಡ್‌ನಲ್ಲಿರುವ ಸಾಗರ್‌ಖೇಡು ಯೋಜನೆಯಾಗಿರಬಹುದು ಅಥವಾ ಸ್ಥಳೀಯ ಯುವಕರಿಗೆ ಅವರ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಉದ್ಯೋಗವನ್ನು ಒದಗಿಸುವುದಾಗಿರಬಹುದು. ಗುಜರಾತ್‌ನಲ್ಲಿ ಬಂದರು ಆಧಾರಿತ ಅಭಿವೃದ್ಧಿಗೆ ಬೃಹತ್ ಅವಕಾಶವಿದೆ. ಕರಾವಳಿ ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳ ಅಭಿವೃದ್ಧಿಯನ್ನು ಸರ್ಕಾರ ಖಚಿತಪಡಿಸಿದೆ.

ಸ್ನೇಹಿತರೇ,

ಇಂತಹ ಪ್ರಯತ್ನಗಳ ಫಲವಾಗಿಯೇ ಇಂದು ಗುಜರಾತ್ ಭಾರತದ ಸಮುದ್ರ ಹೆಬ್ಬಾಗಿಲಾಗಿದೆ.. ಕಳೆದ ಎರಡು ದಶಕಗಳಲ್ಲಿ, ಗುಜರಾತ್‌ನ ಸಾಂಪ್ರದಾಯಿಕ ಬಂದರು ಕಾರ್ಯಾಚರಣೆಗಳಿಂದ ಸಮಗ್ರ ಬಂದರಿನ ವಿಶಿಷ್ಟ ಮಾದರಿ ವಿಕಸನಗೊಂಡಿದೆ. ಈ ಮಾದರಿಯನ್ನು ಇಂದು ಮಾನದಂಡವಾಗಿ ಅಭಿವೃದ್ಧಿಪಡಿಸಲಾಗಿದೆ. ಇಂದು, ಮುಂಡ್ರಾ ಭಾರತದ ಅತಿದೊಡ್ಡ ವಿವಿಧೋದ್ದೇಶ ಬಂದರು ಮತ್ತು ಸಿಕ್ಕಾ ಅತಿದೊಡ್ಡ ಕ್ಯಾಪ್ಟಿವ್ ಬಂದರಾಗಿದೆ. ಈ ಪ್ರಯತ್ನಗಳ ಫಲಿತಾಂಶವೆಂದರೆ ಗುಜರಾತ್ ಬಂದರುಗಳು ದೇಶದ ಪ್ರಮುಖ ಸಾಗರ ಕೇಂದ್ರಗಳಾಗಿ ಹೊರಹೊಮ್ಮಿವೆ. ಕಳೆದ ವರ್ಷ ದೇಶದ ಒಟ್ಟು ಸಾಗರ ವ್ಯಾಪಾರದಲ್ಲಿ 40 ಪ್ರತಿಶತಕ್ಕಿಂತ ಹೆಚ್ಚಿನದನ್ನು ಗುಜರಾತ್ ರಾಜ್ಯ ಹೊಂದಿದೆ. ನಾನು ಇದನ್ನು ಗುಜರಾತ್ ಜನರಿಗೆ ಬಹುಶಃ ಮೊದಲ ಬಾರಿಗೆ ಹೇಳುತ್ತಿದ್ದೇನೆ.

ಸ್ನೇಹಿತರೇ,

ಇಂದು, ಗುಜರಾತ್‌ನಲ್ಲಿ ಕಡಲ ವ್ಯಾಪಾರ ಸಂಬಂಧಿತ ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿಯ ಕೆಲಸಗಳು ಭರದಿಂದ ಸಾಗುತ್ತಿವೆ. ಗುಜರಾತ್‌ನಲ್ಲಿ ಗುಜರಾತ್ ಸಾಗರ ಕ್ಲಸ್ಟರ್, ಗುಜರಾತ್ ಸಾಗರ ವಿಶ್ವವಿದ್ಯಾಲಯ ಮತ್ತು ಭಾವನಗರದಲ್ಲಿ ದೇಶದ ಮೊದಲ ಸಿಎನ್‌ಜಿ ಟರ್ಮಿನಲ್ ನಂತಹ ಅನೇಕ ಸೌಲಭ್ಯಗಳು ಸಿದ್ಧವಾಗುತ್ತಿವೆ. ಗಿಫ್ಟ್ ನಗರದಲ್ಲಿ ನಿರ್ಮಿಸಲಿರುವ ಗುಜರಾತ್ ಸಾಗರ ಕ್ಲಸ್ಟರ್ ಬಂದರುಗಳು ಸಮುದ್ರ ಆಧಾರಿತ ಲಾಜಿಸ್ಟಿಕ್ಸ್ ಗಳಿಗೆ ಮೀಸಲಾದ ವ್ಯವಸ್ಥೆಯಾಗಿವೆ. ಈ ಕ್ಲಸ್ಟರ್‌ಗಳು ಸರ್ಕಾರ, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಈ ವಲಯದಲ್ಲಿ ಮೌಲ್ಯವರ್ಧನೆಗೆ ಸಹಕಾರಿಯಾಗುತ್ತವೆ.

ಸ್ನೇಹಿತರೇ,

ಇತ್ತೀಚಿನ ದಿನಗಳಲ್ಲಿ, ಭಾರತದ ಮೊದಲ ರಾಸಾಯನಿಕ ಟರ್ಮಿನಲ್ ಅನ್ನು ದಹೇಜ್‌ನಲ್ಲಿ ಸ್ಥಾಪಿಸಲಾಯಿತು, ಮೊದಲ ಎಲ್‌ಎನ್‌ಜಿ ಟರ್ಮಿನಲ್ ಅನ್ನು ಸ್ಥಾಪಿಸಲಾಯಿತು. ಈಗ ಭಾರತದ ಮೊದಲ ಸಿಎನ್‌ಜಿ ಟರ್ಮಿನಲ್ ಅನ್ನು ಭಾವನಗರ ಬಂದರಿನಲ್ಲಿ ಸ್ಥಾಪಿಸಲಾಗುವುದು. ಇದಲ್ಲದೆ, ಭಾವನಗರ ಬಂದರಿನಲ್ಲಿ ರೋ-ರೋ ಟರ್ಮಿನಲ್, ಲಿಕ್ವಿಡ್ ಕಾರ್ಗೋ ಟರ್ಮಿನಲ್ ಮತ್ತು ಹೊಸ ಕಂಟೇನರ್ ಟರ್ಮಿನಲ್ ಮುಂತಾದ ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಈ ಹೊಸ ಟರ್ಮಿನಲ್‌ಗಳ ಸೇರ್ಪಡೆಯೊಂದಿಗೆ, ಭಾವನಗರ ಬಂದರಿನ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗಲಿದೆ.

ಸ್ನೇಹಿತರೇ,

ಘೋಘಾ-ದಹೇಜ್ ನಡುವಿನ ದೋಣಿ ಸೇವೆಯನ್ನು ಶೀಘ್ರದಲ್ಲೇ ಪುನರಾರಂಭಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ. ಈ ಯೋಜನೆಯಲ್ಲಿ ಅನೇಕ ನೈಸರ್ಗಿಕ ಸವಾಲುಗಳು ಎದುರಾಗಿವೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಅವುಗಳನ್ನು ಬಗೆಹರಿಸುವ ಪ್ರಯತ್ನಗಳು ನಡೆಯುತ್ತಿವೆ. ಘೋಘಾ ಮತ್ತು ದಹೇಜ್ ಜನರು ಶೀಘ್ರದಲ್ಲೇ ಈ ಸೌಲಭ್ಯದ ಲಾಭವನ್ನು ಮತ್ತೆ ಪಡೆಯಲು ಸಾಧ್ಯವಾಗುತ್ತದೆ ಎಂದು ನಾನು ಭಾವಿಸುತ್ತೇನೆ.

ಸ್ನೇಹಿತರೇ,

ಗುಜರಾತ್ ಸಾಗರ ವಿಶ್ವವಿದ್ಯಾಲಯವು ತರಬೇತಿ ಪಡೆದ ಮಾನವ ಸಂಪನ್ಮೂಲ ಮತ್ತು ಕಡಲ ವ್ಯಾಪಾರಕ್ಕಾಗಿ ತಜ್ಞರನ್ನು ಒದಗಿಸುವ  ಒಂದು ದೊಡ್ಡ ಕೇಂದ್ರವಾಗಿದೆ. ಈ ವಲಯಕ್ಕೆ ಸಂಬಂಧಿಸಿದ ಅಗತ್ಯಗಳಿಗೆ ವೃತ್ತಿ ಶಿಕ್ಷಣವನ್ನು ನೀಡುವ ದೇಶದ ಮೊದಲ ಸಂಸ್ಥೆ ಇದಾಗಿದೆ. ಇಂದು, ಈ ವಿಶ್ವವಿದ್ಯಾಲಯದಿಂದ ಕಡಲ ಕಾನೂನು ಮತ್ತು ಅಂತರರಾಷ್ಟ್ರೀಯ ವ್ಯಾಪಾರ ಕಾನೂನು ಮತ್ತು ಕಡಲ ನಿರ್ವಹಣೆ, ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್‌ನಲ್ಲಿ ಎಂಬಿಎ ಪಡೆಯಬಹುದಾಗಿದೆ. ವಿಶ್ವವಿದ್ಯಾಲಯವಲ್ಲದೇ, ಲೋಥಾಲ್‌ನಲ್ಲಿ ದೇಶದ ಕಡಲ ಪರಂಪರೆಯನ್ನು ಸಂರಕ್ಷಿಸುವ ಮೊದಲ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ನಿರ್ಮಿಸುವ ಕೆಲಸವೂ ನಡೆಯುತ್ತಿದೆ ಎಂದು ಮನ್ ಸುಖ್ ಭಾಯ್ ಹೇಳಿದ್ದಾರೆ.

ಸ್ನೇಹಿತರೇ,

ಇಂದಿನ ರೋ-ಪ್ಯಾಕ್ಸ್ ದೋಣಿ ಸೇವೆ ಅಥವಾ ಕೆಲವು ದಿನಗಳ ಹಿಂದೆ ಉದ್ಘಾಟಿಸಿದ ಸಮುದ್ರ ವಿಮಾನದಂತಹ ಸೌಲಭ್ಯಗಳು ನೀರಿನ ಸಂಪನ್ಮೂಲ ಆಧಾರಿತ ಆರ್ಥಿಕತೆಗೆ ಹೆಚ್ಚಿನ ಆವೇಗವನ್ನು ನೀಡುತ್ತಿವೆ. ಗುಜರಾತ್ ಇತ್ತೀಚೆಗೆ ನೀರು, ಭೂಮಿ ಮತ್ತು ಆಗಸದಲ್ಲಿ ಭಾರಿ ಜಿಗಿತ ಕಂಡಿರುವುದನ್ನು ನೀವು ನೋಡಬಹುದು. ಕೆಲವು ದಿನಗಳ ಹಿಂದೆ, ಗಿರ್ನಾರ್‌ನಲ್ಲಿ ನಾನು ರೋಪ್‌ವೇ ಉದ್ಘಾಟಿಸಿದೆ. ಇದು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುತ್ತದೆ, ಪ್ರವಾಸಿಗರ ಸೌಲಭ್ಯಗಳನ್ನು ಸುಧಾರಿಸುತ್ತದೆ ಮತ್ತು ಆಕಾಶಕ್ಕೇರುವ ಹೊಸ ಮಾರ್ಗವಾಗಿದೆ. ಅದರ ನಂತರ, ನೀರಿನಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಾರುವ ಸಮುದ್ರ ವಿಮಾನವನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿತು, ನೀರಿನ ಮೂಲಕ ಸಂಚರಿಸುವಾಗ ಸಂಭವಿಸುವ ಆವೇಗವನ್ನು ನೀವು ಕಲ್ಪಿಸಿಕೊಳ್ಳಬಹುದು.

ಸ್ನೇಹಿತರೇ,

ಸಮುದ್ರ ಅಥವಾ ನೀರಿನ ವಿಷಯಕ್ಕೆ ಬಂದಾಗ, ಅದು ಮೀನು-ಸಂಬಂಧಿತ ವ್ಯವಹಾರ, ಸಮುದ್ರ-ಕಳೆ ಕೃಷಿ, ನೀರಿನ ಸಂಚಾರ ಮತ್ತು ಪ್ರವಾಸೋದ್ಯಮದವರೆಗೆ ವ್ಯಾಪಿಸಿದೆ. ಹಲವು ವರ್ಷಗಳಿಂದ ದೇಶದಲ್ಲಿ ಕಡಲ ಆರ್ಥಿಕತೆಯನ್ನು ಬಲಪಡಿಸಲು ಗಂಭೀರ ಪ್ರಯತ್ನಗಳನ್ನು ಮಾಡಲಾಗಿದೆ. ಈ ಮೊದಲು, ಸಾಗರ ಆರ್ಥಿಕತೆಯ ಬಗ್ಗೆ ಮಾತನ್ನಾಡಲಾಗುತ್ತಿತ್ತು. ಇಂದು ನಾವು ನೀಲಿ ಆರ್ಥಿಕತೆಯ ಬಗ್ಗೆಯೂ ಮಾತನಾಡುತ್ತಿದ್ದೇವೆ.

ಸ್ನೇಹಿತರೇ,

ಕರಾವಳಿ ಮತ್ತು ಮೀನುಗಾರರ ಸಂಪೂರ್ಣ ಪರಿಸರ ವ್ಯವಸ್ಥೆಗೆ ಸಹಾಯ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ, ಇದು ಮೀನುಗಾರರಿಗೆ ಆಧುನಿಕ ಟ್ರಾಲರ್‌ಗಳ ಆರ್ಥಿಕ ನೆರವು ಆಗಿರಬಹುದು ಅಥವಾ ಹವಾಮಾನ ಮತ್ತು ಸಮುದ್ರ ಮಾರ್ಗಗಳ ನಿಖರ ಮಾಹಿತಿಯನ್ನು ಒದಗಿಸುವ ಸಂಚರಣೆ ವ್ಯವಸ್ಥೆಗಳಾಗಿರಬಹುದು. ನಮ್ಮ ಆದ್ಯತೆ ಮೀನುಗಾರರ ಸುರಕ್ಷತೆ ಮತ್ತು ಸಮೃದ್ಧಿ. ಮೀನು ಸಂಬಂಧಿತ ವ್ಯಾಪಾರವನ್ನು ಉತ್ತೇಜಿಸಲು ಇತ್ತೀಚೆಗೆ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಪ್ರಾರಂಭಿಸಲಾಯಿತು. ಈ ಯೋಜನೆಯಡಿ ಮುಂಬರುವ ವರ್ಷಗಳಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಮೂಲಸೌಕರ್ಯಗಳಿಗಾಗಿ 20,000 ಕೋಟಿ ರೂ. ವೆಚ್ಚ ಮಾಡಲಾಗುವುದು. ಇದು ಗುಜರಾತ್‌ನ ಲಕ್ಷಾಂತರ ಮೀನುಗಾರ ಕುಟುಂಬಗಳಿಗೆ ಮತ್ತು ದೇಶದ ನೀಲಿ ಆರ್ಥಿಕತೆಗೆ ಭಾರಿ ಪ್ರಯೋಜನಗಳನ್ನು ನೀಡುತ್ತದೆ.

ಸ್ನೇಹಿತರೇ,

ಇಂದು, ದೇಶಾದ್ಯಂತ ಬಂದರುಗಳ ಸಾಮರ್ಥ್ಯವನ್ನು ವೃದ್ಧಿಸಲಾಗುತ್ತಿದೆ ಮತ್ತು ಹೊಸ ಬಂದರುಗಳ ನಿರ್ಮಾಣವೂ ವೇಗವಾಗಿ ನಡೆಯುತ್ತಿದೆ. ದೇಶದ ಅಭಿವೃದ್ಧಿಗಾಗಿ ಸುಮಾರು 21,000 ಕಿ.ಮೀ ಜಲಮಾರ್ಗವನ್ನು ಬಳಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಸಾಗರಮಾಲಾ ಯೋಜನೆಯಡಿ ದೇಶಾದ್ಯಂತ 500 ಕ್ಕೂ ಹೆಚ್ಚು ಯೋಜನೆಗಳು ನಡೆಯುತ್ತಿವೆ. ಕೋಟ್ಯಂತರ ರೂಪಾಯಿ ಮೌಲ್ಯದ ಅನೇಕ ಯೋಜನೆಗಳು ಪೂರ್ಣಗೊಂಡಿವೆ.

ಸ್ನೇಹಿತರೇ,

ಸಮುದ್ರ ಜಲಮಾರ್ಗಗಳಾಗಲಿ ಅಥವಾ ನದಿ ಜಲಮಾರ್ಗಗಳಾಗಲಿ ಭಾರತದಲ್ಲಿ ಸಮೃದ್ಧ ಸಂಪನ್ಮೂಲಗಳಿವೆ ಮತ್ತು ಪರಿಣತಿಯ ಕೊರತೆಯಿಲ್ಲ. ರಸ್ತೆ ಮತ್ತು ರೈಲ್ವೆಗಳಿಗಿಂತ ಜಲಮಾರ್ಗಗಳ ಸಾಗಣೆಯು ಅನೇಕ ಪಟ್ಟು ಅಗ್ಗವಾಗಿದೆ ಮತ್ತು ಪರಿಸರಕ್ಕೆ ಕಡಿಮೆ ಹಾನಿಯನ್ನುಂಟುಮಾಡುತ್ತದೆ. ಆದರೂ, 2014 ರ ನಂತರವೇ ಈ ದಿಕ್ಕಿನಲ್ಲಿ ಸಮಗ್ರವಾಗಿ ಕೆಲಸ ಮಾಡಲಾಗಿದೆ. ಮೋದಿ ಪ್ರಧಾನಿಯಾದ ನಂತರ ಈ ನದಿಗಳು ಮತ್ತು ಸಮುದ್ರಗಳು ಬರಲಿಲ್ಲ. ಅವೆಲ್ಲವೂ ಮೊದಲೇ ಇದ್ದವು. ಆದರೆ 2014 ರ ನಂತರ ದೇಶವು ಇಂದು ಕಂಡುಕೊಂಡಿರುವ ಆ ದೃಷ್ಟಿಕೋನ ಆಗ ಇರಲಿಲ್ಲ. ಇಂದು ದೇಶಾದ್ಯಂತ ಒಳನಾಡಿನ ನದಿಗಳಲ್ಲಿ, ಭೂಮಿಯಿಂದ ಸುತ್ತುವರೆದ ಅನೇಕ ರಾಜ್ಯಗಳನ್ನು ಸಮುದ್ರಕ್ಕೆ ಸಂಪರ್ಕಿಸುವ ಕೆಲಸ ನಡೆಯುತ್ತಿದೆ. ಇಂದು ನಾವು ನಮ್ಮ ಸಾಮರ್ಥ್ಯಗಳನ್ನು ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಅಭಿವೃದ್ಧಿಪಡಿಸುತ್ತಿದ್ದೇವೆ. ನಿರಂತರ ಕಾರ್ಯಗಳು ಪ್ರಗತಿಯಲ್ಲಿವೆ, ಇದರಿಂದಾಗಿ ದೇಶದ ಕಡಲ ಪ್ರದೇಶವು ಸ್ವಾವಲಂಬಿ ಭಾರತದ ಪ್ರಮುಖ ಭಾಗವಾಗಿ ಹೊರಹೊಮ್ಮುತ್ತದೆ. ಸರ್ಕಾರದ ಈ ಪ್ರಯತ್ನಗಳಿಗೆ ಆವೇಗ ನೀಡಲು ಇನ್ನೂ ಒಂದು ಹೆಜ್ಜೆ ಇಡಲಾಗುತ್ತಿದೆ. ಇನ್ನುಮುಂದೆ ಈ ಸಚಿವಾಲಯವನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಕರೆಯಲಾಗುತ್ತದೆ ಮತ್ತು ಅದನ್ನು ವಿಸ್ತರಿಸಲಾಗುತ್ತಿದೆ. ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ಹಡಗು ಸಚಿವಾಲಯವು ಬಂದರುಗಳು ಮತ್ತು ಜಲಮಾರ್ಗಗಳನ್ನು ನಿರ್ವಹಿಸುತ್ತದೆ. ಹಡಗು ಸಚಿವಾಲಯವು ಬಂದರುಗಳು ಮತ್ತು ಜಲಮಾರ್ಗಗಳಿಗೆ ಸಂಬಂಧಿಸಿದ ಹಲವಾರು ಕಾರ್ಯಗಳನ್ನು ಮಾಡುತ್ತಿದೆ. ಈಗ ಹೆಸರಿನಲ್ಲಿ ಹೆಚ್ಚು ಸ್ಪಷ್ಟತೆಯೊಂದಿಗೆ, ಕೆಲಸದಲ್ಲಿಯೂ ಹೆಚ್ಚು ಸ್ಪಷ್ಟತೆ ಇರುತ್ತದೆ.

ಸ್ನೇಹಿತರೇ,

ಸ್ವಾವಲಂಬಿ ಭಾರತದಲ್ಲಿ ನೀಲಿ ಆರ್ಥಿಕತೆಯ ಪಾಲನ್ನು ಬಲಪಡಿಸಲು, ಕಡಲ ಲಾಜಿಸ್ಟಿಕ್ಸ್ ಅನ್ನು ಬಲಪಡಿಸುವುದು ಬಹಳ ಅವಶ್ಯಕವಾಗಿದೆ. ಏಕೆಂದರೆ ಲಾಜಿಸ್ಟಿಕ್ಸ್ ಗೆ ಖರ್ಚು ಮಾಡುವ ಹಣವು ನಮ್ಮ ಆರ್ಥಿಕತೆಗೆ ಭಾರಿ ನಷ್ಟವನ್ನುಂಟು ಮಾಡುತ್ತದೆ. ಭಾರತದಲ್ಲಿ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸರಕುಗಳನ್ನು ಸಾಗಿಸುವ ವೆಚ್ಚ ಇತರ ದೇಶಗಳಿಗಿಂತ ಹೆಚ್ಚಾಗಿದೆ. ಜಲಮಾರ್ಗಗಳ ಮೂಲಕ ಸಾಗಣೆಯು ಲಾಜಿಸ್ಟಿಕ್ಸ್ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಆದ್ದರಿಂದ, ಸರಕುಗಳ ತಡೆರಹಿತ ಚಲನೆ ಇರುವಂತಹ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದು ನಮ್ಮ ಗಮನವಾಗಿದೆ. ಇಂದು, ಉತ್ತಮ ಮೂಲಸೌಕರ್ಯ ಮತ್ತು ಉತ್ತಮ ಕಡಲ ಲಾಜಿಸ್ಟಿಕ್ಸ್ ಗೆ ಸಿಂಗಲ್ ವಿಂಡೋ ವ್ಯವಸ್ಥೆಯಲ್ಲಿ ಕೆಲಸ ಮಾಡಲು ಸಿದ್ಧತೆಗಳು ನಡೆಯುತ್ತಿವೆ.

ಸ್ನೇಹಿತರೇ,

ದೇಶವು ಈಗ ಸಮಗ್ರ ದೃಷ್ಟಿಕೋನದಿಂದ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವ ದೀರ್ಘಕಾಲೀನ ಯೋಜನೆಗಳೊಂದಿಗೆ ಬಹುಮಾದರಿ ಸಂಪರ್ಕದ ಕಡೆಗೆ ಸಾಗುತ್ತಿದೆ. ರಸ್ತೆ, ರೈಲು, ವಾಯು ಮತ್ತು ಹಡಗು ಮೂಲಸೌಕರ್ಯಗಳ ಸಂಪರ್ಕವನ್ನು ಸುಧಾರಿಸಲು ಮತ್ತು ಅಡೆತಡೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುತ್ತಿದೆ. ದೇಶದಲ್ಲಿ ಬಹುಮಾದರಿ ಲಾಜಿಸ್ಟಿಕ್ಸ್ ಪಾರ್ಕ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬಹುಮಾದರಿ ಸಂಪರ್ಕವನ್ನು ದೇಶದಲ್ಲಿ ಮಾತ್ರವಲ್ಲದೆ ನೆರೆಯ ರಾಷ್ಟ್ರಗಳಲ್ಲೂ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಕ್ರಮಗಳೊಂದಿಗೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸ ನನಗಿದೆ. ಲಾಜಿಸ್ಟಿಕ್ಸ್ ವೆಚ್ಚವನ್ನು ನಿಯಂತ್ರಣದಲ್ಲಿಡಲು ತೆಗೆದುಕೊಳ್ಳುತ್ತಿರುವ ಕ್ರಮಗಳು ಆರ್ಥಿಕತೆಗೆ ಉತ್ತೇಜನ ನೀಡುತ್ತವೆ.

ಸ್ನೇಹಿತರೇ,

ಹಬ್ಬಗಳ ಸಮಯದಲ್ಲಿ ಸಾಕಷ್ಟು ಶಾಪಿಂಗ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸೂರತ್‌ನ ಜನರಲ್ಲಿ ನನ್ನ ವಿನಂತಿ ಏನೆಂದರೆ, ವಿಶ್ವದ ವಿವಿಧ ಭಾಗಗಳಿಗೆ ಭೇಟಿ ನೀಡುವುದು ವಾಡಿಕೆಯಾಗಿರುವ ನಿಮಗೆ, ಈ ಹಬ್ಬಗಳ ಸಮಯದಲ್ಲಿ ನೀವು ಸ್ಥಳೀಯತೆಗೆ ಆದ್ಯತೆಯ ಮಂತ್ರವನ್ನು ಮರೆಯಬಾರದು. ಜನರು ಮಣ್ಣಿನ ದೀಪಗಳನ್ನು ಖರೀದಿಸಿದರೆ ನಾವು ಸ್ವಾವಲಂಬಿಗಳಾಗಿಬಿಡುತ್ತೇವೆ ಎನ್ನುವುದನ್ನು ನಾನು ನೋಡಿದ್ದೇನೆ. ಅದು ಹಾಗಲ್ಲ, ನೀವು ಮಣ್ಣಿನ ದೀಪಗಳನ್ನು ಖರೀದಿಸುವುದು ಒಳ್ಳೆಯದೇ. ಆದರೆ ನೀವು ಮತ್ತು ನಿಮ್ಮ ಮನೆಯನ್ನು ಒಮ್ಮೆ ನೋಡಿಕೊಳ್ಳಿ, ಆಮದು ಮಾಡಿಕೊಂಡಿರುವ ಹಲವಾರು ವಸ್ತುಗಳನ್ನು ನೀವು ಕಾಣಬಹುದು. ಈ ಉತ್ಪನ್ನಗಳನ್ನು ನಮ್ಮ ಜನರು ಮತ್ತು ಕುಶಲಕರ್ಮಿಗಳೇ ತಯಾರಿಸುತ್ತಾರೆ. ಹಾಗಾದರೆ, ನಾವು ಅವರಿಗೆ ಏಕೆ ಅವಕಾಶ ನೀಡಬಾರದು. ಸ್ನೇಹಿತರೇ, ನಾವು ದೇಶವನ್ನು ಮುಂದೆ ಕೊಂಡೊಯ್ಯಬೇಕಾದರೆ, ನಮ್ಮ ಸಣ್ಣ ವ್ಯಾಪಾರಿಗಳು, ಕುಶಲಕರ್ಮಿಗಳು, ಕಲಾವಿದರು ಮತ್ತು ನಮ್ಮ ಸಹೋದರಿಯರು ಹಳ್ಳಿಗಳಲ್ಲಿ ತಯಾರಿಸುವ ಉತ್ಪನ್ನಗಳನ್ನು ಖರೀದಿಸಿ. ನೀವು ಅದರ ಬಗ್ಗೆ ಹೆಮ್ಮೆ ಪಡುತ್ತೀರಿ ಮತ್ತು ಹಳ್ಳಿಗಳು, ಜಿಲ್ಲೆಗಳು ಮತ್ತು ದೇಶಗಳಲ್ಲಿ ವಾಸಿಸುವ ನಮ್ಮ ಜನರು ಇದನ್ನು ತಯಾರಿಸಿದ್ದಾರೆ ಎಂದು ಜಗತ್ತಿಗೆ ತಿಳಿಸಿ. ನೀವು ಹೆಮ್ಮೆಯಿಂದ ಬೀಗುವಿರಿ. ನೀವು ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡುವುದರಿಂದ ನಿಮ್ಮ ದೀಪಾವಳಿ ಆಚರಣೆಯ ಮೋಜು ಮತ್ತಷ್ಟು ಹೆಚ್ಚಾಗುತ್ತದೆ.

ದೇಶವು ಸ್ವಾತಂತ್ರ್ಯದ 75 ವರ್ಷಗಳನ್ನು ಆಚರಿಸುವವರೆಗೆ ಈ ಮಂತ್ರವು ನಮ್ಮ ಜೀವನದ ಮತ್ತು ಕುಟುಂಬದ ಮಂತ್ರವಾಗಬೇಕು. ಕುಟುಂಬದ ಪ್ರತಿಯೊಬ್ಬರಲ್ಲೂ ಈ ಭಾವನೆಯನ್ನು ಬೆಳೆಸಲು ಒತ್ತು ನೀಡಬೇಕು. ಆದ್ದರಿಂದ, ಸ್ಥಳೀಯತೆಗೆ ಆದ್ಯತೆಯು ಈ ದೀಪಾವಳಿಯ ಮಹತ್ವದ ತಿರುವಾಗಬೇಕು ಎಂದು ನಾನು ಗುಜರಾತ್‌ನ ನನ್ನ ಸೋದರ ಸೋದರಿಯರಿಗೆ ವಿನಂತಿಸುತ್ತಿದ್ದೇನೆ. ನನಗೆ ಗೊತ್ತು, ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ. ನಂದಲಾಲ್ ಅವರು ಹಲವು ವರ್ಷಗಳ ಹಿಂದೆ ನಾನು ಹೇಳಿದ್ದನ್ನು ಹೇಗೆ ಕಾರ್ಯಗತಗೊಳಿಸಿದರು ಎಂಬ ಬಗ್ಗೆ ಹೇಳುತ್ತಿದ್ದರು. ಅವರು ನನ್ನ ಮಾತನ್ನು ಆಲಿಸಿ ಅದನ್ನು ಕಾರ್ಯಗತಗೊಳಿಸಿದ್ದರಿಂದ ನನಗೆ ಇಂದು ಸಂತೋಷವಾಗಿದೆ. ನೀವೆಲ್ಲರೂ ನನಗೆ ನಂದಲಾಲ್ ಅವರಂತೆ. ದೇಶದ ಬಡವರಿಗಾಗಿ ಏನಾದರೂ ಮಾಡಲು ಪ್ರಯತ್ನಗಳನ್ನು ಮಾಡೋಣ. ನೀವು ದೀಪಾವಳಿಯನ್ನು ಆಚರಿಸಿ, ಆದರೆ ದೀಪಾವಳಿಯನ್ನು ನಿಮ್ಮ ಮನೆಗಳಲ್ಲಿಯೇ ಆಚರಿಸಿ. ದೀಪವನ್ನು ಬೆಳಗಿಸಿ, ಆದರೆ ಬಡವನ ಮನೆಯಲ್ಲೂ ದೀಪ ಬೆಳಗುವುದನ್ನು ಖಚಿತಪಡಿಸಿಕೊಳ್ಳಿ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆಯ ಈ ಮಂತ್ರವನ್ನು ಮುಂದೆ ಕೊಂಡೊಯ್ಯಿರಿ. ಕೊರೊನಾದ ಈ ಸಂದರ್ಭದಲ್ಲಿ ಹಬ್ಬಗಳನ್ನು ಎಚ್ಚರಿಕೆಯಿಂದ ಆಚರಿಸಿ. ಏಕೆಂದರೆ ನಿಮ್ಮ ಸುರಕ್ಷತೆಯು ದೇಶದ ಸುರಕ್ಷತೆಯಾಗಿದೆ. ಮುಂಬರುವ ಧಾಂತೇರಸ್, ದೀಪಾವಳಿ, ಗುಜರಾತ್‌ನ ಹೊಸ ವರ್ಷ ಮತ್ತು ಎಲ್ಲ ಹಬ್ಬಗಳಿಗೂ ದೇಶದ ನನ್ನ ಆತ್ಮೀಯ ಸೋದರ, ಸೋದರಿಯರಿಗೆ ನನ್ನ ಶುಭಾಶಯಗಳು.

ತುಂಬು ಧನ್ಯವಾದಗಳು!

*****



(Release ID: 1671730) Visitor Counter : 227