ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರಿಂದ ಕೋವಿಡ್ ಮತ್ತು ಸಾರ್ವಜನಿಕ ಆರೋಗ್ಯ ಕ್ರಮಗಳ ಕುರಿತು 9 ರಾಜ್ಯಗಳ ಆರೋಗ್ಯ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ


ಪ್ರಧಾನಮಂತ್ರಿ ಅವರ ಜನಾಂದೋಲನ ಅಭಿಯಾನಕ್ಕೆ ಒತ್ತು ನೀಡಲು ಕರೆ

Posted On: 09 NOV 2020 4:01PM by PIB Bengaluru

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಇಂದು 9 ರಾಜ್ಯಗಳ ಆರೋಗ್ಯ ಸಚಿವರು ಮತ್ತು ಪ್ರಧಾನ ಕಾರ್ಯದರ್ಶಿಗಳು/ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು. ಆ ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅಸ್ಸಾಂ, ಪಶ್ಚಿಮ ಬಂಗಾಳ, ರಾಜಸ್ಥಾನ, ಹಿಮಾಚಲಪ್ರದೇಶ, ತೆಲಂಗಾಣ, ಪಂಜಾಬ್, ಹರಿಯಾಣ, ಮತ್ತು ಕೇರಳ ಸೇರಿವೆ. ಶ್ರೀಮತಿ ಕೆ.ಕೆ. ಶೈಲಜಾ, ಆರೋಗ್ಯ ಸಚಿವರು (ಕೇರಳ), ಶ್ರೀ ಪಿಜೂಷ್ ಹಜಾರಿಕಾ, ಆರೋಗ್ಯ ಸಚಿವರು(ಅಸ್ಸಾಂ), ಶ್ರೀ ಬಲ್ಬೀರ್ ಸಿಂಗ್ ಸಿಧು, ಆರೋಗ್ಯ ಸಚಿವರು (ಪಂಜಾಬ್), ಶ್ರೀ ಎತೆಲಾ ರಾಜೇಂದ್ರ, ಆರೋಗ್ಯ ಸಚಿವರು (ತೆಲಂಗಾಣ), ಶ್ರೀ ರಾಜೀವ್ ಸೈಜಲ್, ಆರೋಗ್ಯ ಸಚಿವರು(ಹಿಮಾಚಲಪ್ರದೇಶ) ಅವರು ತಮ್ಮ ತಮ್ಮ ರಾಜ್ಯಗಳ ಪರ ಸಭೆಯಲ್ಲಿ ಭಾಗವಹಿಸಿದ್ದರು.

ಈ ರಾಜ್ಯಗಳ ಕೆಲವು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಏಳು ದಿನಗಳಿಂದ ಸರಾಸರಿ ಪ್ರಕರಣದಲ್ಲಿ ಏರಿಕೆಯಾಗುತ್ತಿವೆ. ಸೋಂಕು ಪತ್ತೆ ಪರೀಕ್ಷೆ ಇಳಿಕೆಯಾಗಿದೆ, ಆಸ್ಪತ್ರೆ ಸೇರಿದ ಮೊದಲ 24/48/72 ಗಂಟೆಗಳಲ್ಲಿ ಮರಣ ಪ್ರಮಾಣ ಹೆಚ್ಚಾಗಿರುವುದು ಸೂಕ್ಷ್ಮ ಜನರಲ್ಲಿ ಹೆಚ್ಚುತ್ತಿರುವ ಮರಣ ಪ್ರಮಾಣಗಳು ಕಂಡುಬಂದಿವೆ.

ಡಾ. ಹರ್ಷವರ್ಧನ್ ಅವರು, ದೇಶ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ 11ನೇ ತಿಂಗಳಿಗೆ ಕಾಲಿಟ್ಟಿದೆ. ಜನವರಿ 8ರಂದು ಕೋವಿಡ್ ಕುರಿತಂತೆ ಮೊದಲ ಸಭೆ ನಡೆದಿತ್ತು ಎಂದು ಎಲ್ಲರಿಗೂ ನೆನಪು ಮಾಡಿಕೊಟ್ಟರು. ಚಳಿಗಾಲ ಮತ್ತು ಸುದೀರ್ಘ ಹಬ್ಬಗಳ ಸಾಲಿನ ಹಿನ್ನೆಲೆಯಲ್ಲಿ ಕೋವಿಡ್-19 ವಿರುದ್ಧ ಈವರೆಗೆ ಸಾಮೂಹಿಕವಾಗಿ ಮಾಡಿರುವ ಪ್ರಯತ್ನಗಳಿಗೆ ಸಂದಿರುವ ಪ್ರಯೋಜನಗಳಿಗೆ ಅಪಾಯ ಇದೆ ಎಂಬ ಕಳಕಳಿಯನ್ನು ಪುನರುಚ್ಚರಿಸಿದ ಅವರು, “ದಸರಾದಿಂದ ಆರಂಭವಾಗಿರುವ ಹಬ್ಬದ ಋತುಮಾನ ದೀಪಾವಳಿ, ಛಾತ್ ಪೂಜಾ, ಕ್ರಿಸ್ ಮಸ್ ಮತ್ತು ಮುಂದಿನ ವರ್ಷದ ಮಕರ ಸಂಕ್ರಾಂತಿ ವರೆಗೆ ಮುಂದುವರಿಯಲಿದ್ದು, ಈ ಅವಧಿಯಲ್ಲಿ ನಾವು ಹೆಚ್ಚು ಜಾಗೃತವಾಗಿರಬೇಕು. ಚಳಿಗಾಲದ ತಿಂಗಳುಗಳಲ್ಲಿ ಉಸಿರಾಟಕ್ಕೆ ತೊಂದರೆ ಮಾಡುವ ಈ ಸೋಂಕು ಕ್ಷಿಪ್ರಗತಿಯಲ್ಲಿ ಹರಡಬಹುದುಎಂದು ಹೇಳಿದರು.

ಕೋವಿಡ್ ವಿರುದ್ಧದ ರಾಷ್ಟ್ರದ ಪಯಣದ ಕುರಿತು ಮಾಹಿತಿಯನ್ನು ಹಂಚಿಕೊಂಡ ಅವರು, ಜನವರಿಯಲ್ಲಿ ಪುಣೆಯಲ್ಲಿ ಒಂದೇ ಒಂದು ಎನ್ಐವಿ ಪ್ರಯೋಗಾಲಯದಲ್ಲಿ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಅವುಗಳ ಸಂಖ್ಯೆ 2074ಕ್ಕೆ ಏರಿಕೆಯಾಗಿದ್ದು, ಪ್ರತಿ ದಿನ ಪರೀಕ್ಷಾ ಸಾಮರ್ಥ್ಯ 1.5 ಮಿಲಿಯನ್ ಗೆ ಏರಿದೆ ಎಂದರು. ಪ್ರತಿಯೊಂದು ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಸಾಮಾನ್ಯ ಆಕ್ಸಿಜನ್ ಸಹಿತ ಮತ್ತು ಐಸಿಯು ಹಾಸಿಗೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳ ಮಾಡಲಾಗಿದೆ ಎಂದು ಅವರು ಉಲ್ಲೇಖಿಸಿದರು. ಒಟ್ಟು ಸಕ್ರಿಯ ಪ್ರಕರಣಗಳಲ್ಲಿ ಕೇವಲ 0.44ರಷ್ಟು ಮಾತ್ರ ವೆಂಟಿಲೇಟರ್ ನೆರವು ಪಡೆಯುತ್ತಿದ್ದು, ಶೇ.2.47ರಷ್ಟು ಪ್ರಕರಣಗಳಲ್ಲಿ ಸೋಂಕಿತರು ಐಸಿಯುನಲ್ಲಿದ್ದಾರೆ ಹಾಗೂ ಕೇವಲ 4.13ರಷ್ಟು ಪ್ರಕರಣಗಳಲ್ಲಿ ಆಕ್ಸಿಜನ್ ನೆರವಿನ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಜಾಗತಿಕ ಮಟ್ಟಕ್ಕೆ ಹೋಲಿಸಿದರೆ ಭಾರತದಲ್ಲಿ ಅತಿ ಹೆಚ್ಚಿನ ಚೇತರಿಕೆಯ ಪ್ರಮಾಣ ಮತ್ತು ಅತಿ ಕಡಿಮೆ ಮರಣ ಪ್ರಮಾಣವಿದೆ ಎಂದು ಹೇಳಿದರು.

ಇತ್ತೀಚೆಗೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ದೆಹಲಿ, ತಮಿಳುನಾಡು, ಕರ್ನಾಟಕ ಮತ್ತು ಛತ್ತೀಸ್ ಗಢ ರಾಜ್ಯಗಳ ಆರೋಗ್ಯ ಸಚಿವರಗಳು ಮತ್ತು ಹಿರಿಯ ಆರೋಗ್ಯಾಧಿಕಾರಿಗಳೊಂದಿಗೆ ನಡೆಸಿದ ಸಂವಾದ ವಿವರಗಳ ಕುರಿತು ವಿವರಿಸಿದ ಸಚಿವರು, ಈ ಸೋಂಕಿನ ಪ್ರತಿಯೊಂದು ಬೆಳವಣಿಗೆಗಳ ಕುರಿತು ಪ್ರಧಾನಮಂತ್ರಿ ಅವರು ಖುದ್ದು ನಿಗಾವಹಿಸುತ್ತಿದ್ದಾರೆ ಎಂದು ಭರವಸೆ ನೀಡಿದರು. “ಕೋವಿಡ್ ಕುರಿತ ಹಲವು ವಿಷಯಗಳ ಬಗ್ಗೆ  ಪ್ರಧಾನಮಂತ್ರಿ ಅವರು ಹಲವು ಭಾರಿ ರಾಷ್ಟ್ರದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆಗಳನ್ನು ನಡೆಸಿದ್ದಾರೆ. ಅವರು ಇತ್ತೀಚೆಗೆ ಕೇವಲ ಹತ್ತು ನಿಮಿಷ ರಾಷ್ಟ್ರವನ್ನುದ್ದೇಶಿ ಭಾಷಣ ಮಾಡಿದರು. ಅದು ಕೋವಿಡ್-19 ಸೂಕ್ತ ನಡವಳಿಕೆ ಕಡ್ಡಾಯ ಪಾಲನೆ ಮುಂದುವರಿಕೆ ಕುರಿತ ಪ್ರಮುಖ ಸಂದೇಶವನ್ನು ಒಳಗೊಂಡಿತ್ತು. ಅದು ಇದೀಗ ಜನಾಂದೋಲನವಾಗಿ ಪರಿವರ್ತನೆಯಾಗಿದೆಎಂದು ಹರ್ಷವರ್ಧನ್ ಹೇಳಿದರು.

ಜನಾಂದೋಲನ ಉತ್ತೇಜನಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು, ಕಾಲರ್ ಟ್ಯೂನ್ ಮತ್ತು ಐಇಸಿ ಚಟುವಟಿಕೆಗಳ ಮೂಲಕ ಆ ಸಂದೇಶಗಳನ್ನು ಪ್ರಚುರ ಪಡಿಸಲಾಗುತ್ತಿದೆ ಎಂದರು. ಕೋವಿಡ್ ವಿರುದ್ಧ ಸದ್ಯ ಕೋವಿಡ್ ಸೂಕ್ತ ನಡವಳಿಕೆಯೊಂದೇ ಅತ್ಯುತ್ತಮ ಮಾರ್ಗ ಮತ್ತು ಅದನ್ನು ಅನುಸರಿಸುವುದು ಸುಲಭ ಎಂದು ಹೇಳಿ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ(ಎನ್ ಸಿ ಡಿಸಿ) ನಿರ್ದೇಶಕ ಡಾ. ಸುಜಿತ್ ಕೆ. ಸಿಂಗ್, ಕೋವಿಡ್ ಮತ್ತು ಸಾರ್ವಜನಿಕ ಆರೋಗ್ಯ ನಿರ್ವಹಣಾ ಪ್ರಯತ್ನಗಳು ಮತ್ತು ಆಯಾ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅವರು ಆಯಾ ಪ್ರದೇಶ, ಜಿಲ್ಲಾವಾರು ಕೈಗೊಂಡಿರುವ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

 

ರಾಜ್ಯಗಳ ಆರೋಗ್ಯ ಸಚಿವರುಗಳು, ಸೋಂಕು ನಿಯಂತ್ರಣ, ನಿಗಾ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಚಿಕಿತ್ಸೆಗೆ ಕೈಗೊಂಡಿರುವ ಕ್ರಮಗಳ ಸಂಕ್ಷಿಪ್ತ ವಿವರಗಳನ್ನು ಹಂಚಿಕೊಂಡರು. ಅಲ್ಲದೆ ಅವರು ತಾವು ಅನುಸರಿಸುತ್ತಿರುವ ಉತ್ತಮ ಪದ್ಧತಿಗಳನ್ನೂ ಕೂಡ ಪ್ರಮುಖವಾಗಿ ಪ್ರಸ್ತಾಪಿಸಿದರು.

ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಭೂಷಣ್, ಕೋವಿಡ್ ನಿಯಂತ್ರಣಕ್ಕೆ ಹತ್ತು ಪ್ರಮುಖ ವಲಯಗಳಲ್ಲಿ ರಾಜ್ಯಗಳು ಗಂಭೀರ ಗಮನಹರಿಸಬೇಕು ಎಂದು ಮನವಿ ಮಾಡಿದರು ಹಾಗೂ ಆ ಮೂಲಕ ಸೋಂಕಿನ ವಿರುದ್ಧ ಮೇಲುಗೈ ಸಾಧಿಸಬೇಕು ಎಂದರು. ಅವುಗಳೆಂದರೆ ಸೋಂಕು ಪತ್ತೆ ಪರೀಕ್ಷೆ ಹೆಚ್ಚಳ; ಮಾರುಕಟ್ಟೆ ತಾಣಗಳು; ದುಡಿಯುವ ಸ್ಥಳಗಳು; ಧಾರ್ಮಿಕ ಸಮಾರಂಭಗಳು ಸೇರಿದಂತೆ ಹೆಚ್ಚು ಜನ ಸೇರುವ ನಿರ್ದಿಷ್ಟ ಪ್ರದೇಶಗಳಲ್ಲಿ ಸೋಂಕು ಪರೀಕ್ಷೆಗಳನ್ನು ಹೆಚ್ಚಿಸುವುದು; ಆರ್ ಟಿಪಿಸಿಆರ್ ಪರೀಕ್ಷೆಗಳ ಪ್ರಮಾಣ ಹೆಚ್ಚಳ; ವ್ಯವಸ್ಥಿತ ಆರ್ ಎಟಿ ನೆಗೆಟಿವ್ ಪರೀಕ್ಷೆಗಳನ್ನು ಕಡ್ಡಾಯಗೊಳಿಸುವುದು; ಮೊದಲು 72 ಗಂಟೆಗಳಲ್ಲಿ ಸಂಪರ್ಕ ಪತ್ತೆಗಳನ್ನು ಪೂರ್ಣಗೊಳಿಸುವುದು, ಹೊಸ ಪ್ರಕರಣ ಪತ್ತೆಯಾದ ಕೂಡಲೇ ಸರಾಸರಿ 10 ರಿಂದ 15 ಸಂಪರ್ಕಗಳನ್ನು ಪತ್ತೆಹಚ್ಚುವುದು; ಸೋಂಕಿತರು ಆಸ್ಪತ್ರೆ ಸೇರಿದ ಮೊದಲ 24 ರಿಂದ 72 ಗಂಟೆಗಳ ಅವಧಿಯಲ್ಲಿ ಮರಣ ಪ್ರಮಾಣ ತಡೆಗಟ್ಟಲು ಸೂಕ್ತ ಆರೋಗ್ಯ ನಡವಳಿಕೆ ಉತ್ತೇಜಿಸುವುದು. ಪ್ರತಿ ದಿನ ಆಸ್ಪತ್ರೆವಾರು ಮರಣ ವಿಶ್ಲೇಷಣೆಗಳನ್ನು ನಡೆಸುವುದು ಮತ್ತು ಅಗತ್ಯಬಿದ್ದರೆ ಹಸ್ತಕ್ಷೇಪ ಮಾಡುವುದು; ಮರಣ ಪ್ರಮಾಣವನ್ನು ಶೇ.1ಕ್ಕಿಂತ ಕೆಳಗೆ ತರುವುದು; 60 ವರ್ಷ ಮೇಲ್ಪಟ್ಟ ಹಾಗೂ ಇತರೆ ಅನಾರೋಗ್ಯದಿಂದ ಬಳಲುತ್ತಿರುವ ಸೂಕ್ಷ್ಮ ವರ್ಗದವರ ರಕ್ಷಣೆ, ನಡವಳಿಕೆ ಬದಲಾವಣೆ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿನ ಚುನಾಯಿತ ಪ್ರತಿನಿಧಿಗಳು, ನಗರ ಸ್ಥಳೀಯ ಸಂಸ್ಥೆಗಳು, ಸಂಸದರು, ಶಾಸಕರು ಮತ್ತು ಸ್ಥಳೀಯ ಪ್ರಭಾವಿ ವ್ಯಕ್ತಿಗಳ ಮೂಲಕ ಜನರಲ್ಲಿ ಕೋವಿಡ್ ಸೂಕ್ತ ನಡವಳಿಕೆ ಪಾಲನೆಗೆ ಉತ್ತೇಜನ ನೀಡುವುದು.

ಶ್ರೀ ಅರ್ತಿ ಅಹುಜಾ, ಹೆಚ್ಚುವರಿ ಕಾರ್ಯದರ್ಶಿ (ಆರೋಗ್ಯ) ಶ್ರೀ ಲವ್ ಅಗರ್ ವಾಲ್, ಜಂಟಿ ಕಾರ್ಯದರ್ಶಿ(ಆರೋಗ್ಯ) ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

***



(Release ID: 1671463) Visitor Counter : 275