ಉಪರಾಷ್ಟ್ರಪತಿಗಳ ಕಾರ್ಯಾಲಯ

ಭಗವಾನ್ ಶ್ರೀ ರಾಮನ ಜೀವನ ಮತ್ತು ಸದ್ಗುಣಗಳಿಂದ ಪಾಠ ಕಲಿತು, ಸನ್ಮಾರ್ಗದಲ್ಲಿ ಸಾಗೋಣ – ಉಪ ರಾಷ್ಟ್ರಪತಿ : ವೆಂಕಯ್ಯ ನಾಯ್ಡು


ಭಗವಾನ್ ಶ್ರೀ ರಾಮ ಉತ್ತಮ ಆಡಳಿತಕ್ಕೆ ಮತ್ತೊಂದು ಹೆಸರಾಗಿದ್ದ ಶ್ರೇಷ್ಠ ದೊರೆ ಮತ್ತು ಸದಾ ಜನರ ಹೃದಯದಲ್ಲಿ ಉಳಿದಿರುತ್ತಾನೆ ಎಂದು ಹೇಳಿಕೆ

ರಾಮಾಯಣ ಭಾರತದ ಸಂಘಟಿತ ಸಾಂಸ್ಕೃತಿಕ ಪರಂಪರೆಯಲ್ಲಿ ಅಂತರ್ಗತವಾದ ಒಂದು ಅಮರ ಮಹಾಕಾವ್ಯವಾಗಿದೆ ಎಂದು ಬಣ್ಣನೆ

ವಾಲ್ಮೀಕಿ ರಾಮಾಯಣ ಕೇವಲ ಆದಿ ಕಾವ್ಯವಷ್ಟೇ ಅಲ್ಲ, ಅದು ಅನಾದಿ ಕಾವ್ಯ – ಉಪ ರಾಷ್ಟ್ರಪತಿ

ಭಗವಾನ್ ಶ್ರೀರಾಮನಿಂದ ಪ್ರೇರಣೆ ಪಡೆದು, ಜನರು ಸದಾ ತಾಯ್ನಾಡಿನ ಕರ್ತವ್ಯ ನೆನಪಿನಲ್ಲಿಡಬೇಕು
ಮಲಗುವಾಗ ಕಥೆ ಓದುವ ಅಭ್ಯಾಸ ಕ್ಷೀಣಿಸುತ್ತಿರುವ ಬಗ್ಗೆ ಕಳವಳ

"ಥವಾಸ್ಮಿ: ಲೈಫ್ ಅಂಡ್ ಸ್ಕಿಲ್ಸ್ ಥ್ರೂ ದಿ ಲೆನ್ಸ್ ಆಫ್ ರಾಮಾಯಣ " ಎಂಬ ಹೆಸರಿನ ಕೃತಿ ಬಿಡುಗಡೆ

Posted On: 06 NOV 2020 11:21AM by PIB Bengaluru

ನವ ಪೀಳಿಗೆ ಯಶಸ್ವಿ ಮತ್ತು ಪರಿಪೂರ್ಣ ಬದುಕಿಗಾಗಿ ಭಗವಾನ್ ರಾಮನ ಜೀವನ ಮತ್ತು ಸದ್ಗುಣಗಳಿಂದ ಪಾಠ ಕಲಿತು, ಶ್ರೀ ರಾಮ ತೋರಿದ ಸನ್ಮಾರ್ಗದಲ್ಲಿ ನಡೆಯಬೇಕು ಎಂದು ಭಾರತದ ಉಪ ರಾಷ್ಟ್ರಪತಿ ಎಂ. ವೆಂಕಯ್ಯನಾಯ್ಡು ಅವರಿಂದು ಕರೆ ನೀಡಿದ್ದಾರೆ.

"ಥವಾಸ್ಮಿ: ಲೈಫ್ ಅಂಡ್ ಸ್ಕಿಲ್ಸ್ ಥ್ರೂ ದಿ ಲೆನ್ಸ್ ಆಫ್ ರಾಮಾಯಣ (ರಾಮಾಯಣದ ಮಸೂರದ ಮೂಲಕ ಜೀವನ ಮತ್ತು ಕೌಶಲ್ಯಗಳು)" ಎಂಬ ಪುಸ್ತಕವನ್ನು ಬಿಡುಗಡೆ ಮಾಡಿದ ಶ್ರೀ ನಾಯ್ಡು, ಭಗವಾನ್ ರಾಮನ ಜೀವನ, ನಡೆ ಮತ್ತು ನುಡಿ ಹೇಗೆ "ಸತ್ಯ" ಮತ್ತು "ಧರ್ಮ" ಪ್ರತಿಯೊಬ್ಬರ ಜೀವನದ ಭಾಗವಾಗಲು ಸಾಧ್ಯ ಎಂಬುದನ್ನು ವ್ಯಾಖ್ಯಾನಿಸುತ್ತದೆ ಎಂದು ಹೇಳಿದರು. "ಪೋಷಕರು, ಸಹೋದರರು, ಹೆಂಡತಿ, ಸ್ನೇಹಿತರು ಮತ್ತು ಶತ್ರುಗಳು ಮತ್ತು ಅವರ ಗುರುಗಳೊಂದಿಗಿನ ರಾಮನ ಸಂಬಂಧವು ಆದರ್ಶ ವ್ಯಕ್ತಿಯು ಬದುಕಿನ ವಿವಿಧ ಸವಾಲುಗಳಿಗೆ ಹೇಗೆ ಪ್ರತಿಕ್ರಿಯಿಸುತ್ತಿದ್ದ ಮತ್ತು ಬಲವಾಗಿ ಹೇಗೆ ಹೊರಹೊಮ್ಮುತ್ತಿದ್ದ ಎಂಬುದನ್ನು ತೋರಿಸುತ್ತದೆ" ಎಂದು ಅವರು ಹೇಳಿದರು.

ಭಗವಾನ್ ಶ್ರೀ ರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಉಲ್ಲೇಖಿಸಿದ ಉಪ ರಾಷ್ಟ್ರಪತಿಯವರು, ರಾಮ ಉತ್ತಮ ಆಡಳಿತಕ್ಕೆ ಮತ್ತೊಂದು ಹೆಸರಾಗಿದ್ದು, ಉತ್ತಮ ಆಡಳಿತಗಾರನಾಗಿದ್ದ ಮತ್ತು ಜನರ ಹೃದಯದಲ್ಲಿ ಸದಾ ಉಳಿದಿರುತ್ತಾನೆ ಎಂದರು.

ರಾಮಾಯಣ ಭಾರತದ ಸಂಘಟಿತ ಸಾಂಸ್ಕೃತಿಕ ಪರಂಪರೆಯಲ್ಲಿ ಅಂತರ್ಗತವಾದ ಒಂದು ಅಮರ ಮಹಾ ಕಾವ್ಯ ಎಂದು ಬಣ್ಣಿಸಿದ ಅವರು, ಶ್ರೀ ರಾಮನು ಪ್ರತಿಪಾದಿಸಿದ ಮೌಲ್ಯಗಳು ಹಲವಾರು ಕವಿಗಳು ಮತ್ತು ಸಂತರಿಗೆ ವಿವಿಧ ಭಾಷೆಗಳಲ್ಲಿ ರಾಮಾಯಣವನ್ನು ರಚಿಸಲು ಪ್ರೇರೇಪಿಸಿವೆ ಎಂಬ ಅಂಶವನ್ನು ಒತ್ತಿಹೇಳಿದರು. "ಅನೇಕ ಬಗೆಯ ಆಕರ್ಷಕ ರೀತಿಯಲ್ಲಿ ಮತ್ತೆ ಮತ್ತೆ ಹೇಳಲಾದ, ಮತ್ತೆ ಹಾಡಲಾದ ಮತ್ತು ಪುನರ್ ಹೆಣೆಯಲಾದ ರಾಮಾಯಣವನ್ನು ಬಿಟ್ಟರೆ ಯಾವುದೇ ಅನ್ಯ ಮಹಾಕಾವ್ಯವು ಬಹುಶಃ ಜಗತ್ತಿನಲ್ಲಿ ಇಲ್ಲ" ಎಂದು ಉಪ ರಾಷ್ಟ್ರಪತಿ ಹೇಳಿದರು.

ವಾಲ್ಮೀಕಿ ರಾಮಾಯಣ ಕೇವಲ ಒಂದು ಆದಿ ಕಾವ್ಯವಷ್ಟೇ ಅಲ್ಲ ಅದೊಂದು ಅನಾದಿ ಕಾವ್ಯ ಕಾರಣ ಅದು ಕಾಲಾತೀತ, ಶಾಶ್ವತ ಮತ್ತು ಯಾವುದೇ ಜೀವನ ಸನ್ನಿವೇಶದಲ್ಲಿ ಅದರ ಪ್ರಸ್ತುತತೆ ಕಳೆದುಕೊಳ್ಳುವುದಿಲ್ಲ. "ಇದು ವಿದ್ವಜ್ಜನರನ್ನಷ್ಟೇ ಅಲ್ಲ ಸಾಮಾನ್ಯ, ಅನಕ್ಷರಸ್ಥ ನಾಗರಿಕನನ್ನೂ ಮೋಡಿ ಮಾಡುತ್ತದೆ" ಎಂದು ಉಪರಾಷ್ಟ್ರಪತಿಗಳು ಹೇಳಿದರು.

ರಾಮಾಯಣ ಧನಾತ್ಮಕ ಚಿಂತನೆಗಳೊಂದಿಗೆ ಯುವ ಮತ್ತು ಹಿರಿಯರಿಗೆ ಪರಿಪೂರ್ಣ ಜೀವನ ಸಾಗಿಸಲು ಪ್ರೇರಣೆ ನೀಡುತ್ತದೆ. "ನಾವು ದುಷ್ಟ, ವಿಚ್ಛಿದ್ರಕಾರಕ ಮತ್ತು ಹಿಂಸಾಚಾರದ ಮೇಲೆ ಒಳ್ಳೆಯತನ, ಸದಾಚಾರ ಮತ್ತು ಸಾಮರಸ್ಯದ ವಿಜಯವನ್ನು ಆಚರಿಸುತ್ತೇವೆ" ಎಂದು ಅವರು ಒತ್ತಿ ಹೇಳಿದರು.

ರಾವಣನನ್ನು ಮಣಿಸಿದ ಮೇಲೆ ಲಕ್ಷ್ಮಣ ಭಗವಾನ್ ಶ್ರೀ ರಾಮನಿಗೆ ಲಂಕೆಯಲ್ಲೇ ಇದ್ದು ಬಿಡೋಣ ಎಂದು ಮನವಿ ಮಾಡಿದಾಗ, ಶ್ರೀರಾಮ “ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಅಂದರೆ ಜನ್ಮಕೊಟ್ಟ ತಾಯಿ, ಜನ್ಮಕೊಟ್ಟ ಭೂಮಿ ಎರಡೂ ಸ್ವರ್ಗಕ್ಕೆ ಸಮಾನ ಎಂದು ಹೇಳುವ ಮೂಲಕ ನಿರಾಕರಿಸಿದ ಪ್ರಸಂಗವನ್ನು ಶ್ರೀ ನಾಯ್ದು ಉಲ್ಲೇಖಿಸಿದರು.

ಈ ಮಾತುಗಳಿಂದ ಜನರು ಪ್ರೇರೇಪಿತರಾಗಬೇಕು ಎಂದ ಶ್ರೀ ನಾಯ್ಡು, ಉದ್ಯೋಗ ಅರಸಿ ಯಾರು ಎಲ್ಲಿಗೇ ಹೋಗಿ ನೆಲೆಸಿರಲಿ ಅಥವಾ ಯಾವುದೇ ಸ್ಥಾನದಲ್ಲಿರಲಿ ತಾವು ಹುಟ್ಟಿದ ನಾಡನ್ನು ಸದಾ ಸ್ಮರಿಸಬೇಕು ಎಂದರು.

“ಥವಾಸ್ಮಿ” ನಾಲ್ಕು ಸಂಪುಟದ ಕೃತಿಯಾಗಿದ್ದು, ಇದನ್ನು ಯುವ ವೃತ್ತಿಪರರ ತಂಡ ಹಲವು ವರ್ಷಗಳ ವ್ಯಾಪಕ ಸಂಶೋಧನೆಯ ಬಳಿಕ ಸಿದ್ಧಪಡಿಸಿದೆ. ಇದು ತಂದೆ ಮತ್ತು ಮಗಳ ನಡುವಿನ ಸಂಭಾಷಣೆಯ ರೀತಿಯಲ್ಲಿ ರಾಮಾಯಣವನ್ನು ಪ್ರಸ್ತುತಪಡಿಸುತ್ತದೆ, ಹಲವಾರು ಕಸರತ್ತುಗಳ ಮೂಲಕ ಉತ್ತಮ ಕಲಿಕೆಯ ಅನುಭವ ನೀಡುತ್ತದೆ ಎಂದರು.

ಮಲಗುವಾಗ ಕಥೆಗಳನ್ನು ಓದುವ ಅಭ್ಯಾಸ ಕ್ಷೀಣಿಸುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿಯವರು ಥವಾಸ್ಮಿ.. ಅದನ್ನು ಪುನಶ್ಚೇತನಗೊಳಿಸುತ್ತದೆ ಎಂದರು. ಈ ನಾಲ್ಕು ಪುಸ್ತಕಗಳು ಮಲುಗುವಾಗ ಓದಲು ಉತ್ತಮ ಕಥೆಗಳಾಗಿವೆ ಎಂದರು.

ಉತ್ತಮ ಕೃತಿಯನ್ನು ಹೊರತಂದಿರುವ ಲೇಖಕ ಶ್ರೀ ರಲ್ಲಬಾಂಡಿ ಶ್ರೀರಾಮ ಚಕ್ರಧರ್, ಸಹ ಲೇಖಕಿ ಶ್ರೀಮತಿ ಅಮರ ಶಾರದ ದೀಪ್ತಿ ಮತ್ತು ಇಡೀ ಥವಾಸ್ಮೀ ತಂಡವನ್ನು ಅವರು ಶ್ಲಾಘಿಸಿದರು.

 ಕೇಂದ್ರೀಯ ಜಾಗೃತಿ ಆಯೋಗದ ಮಾಜಿ ಆಯುಕ್ತ ಶ್ರೀ ಕೆ.ವಿ. ಚೌಧರಿ, ಥವಾಸ್ಮೀ ಲೇಖಕ ಶ್ರೀ ಆರ್. ಶ್ರೀರಾಮ ಚಕ್ರಧರ್, ಸಹ ಲೇಖಕಿ ಶ್ರೀಮತಿ ಎ. ಶಾರದಾ ದೀಪ್ತಿ, ಥವಾಸ್ಮೀ ತಂಡ ಮತ್ತು ವಿದ್ಯಾರ್ಥಿಗಳು ಹಾಗೂ ವಿವಿಧ ಶಾಲೆಗಳ ಬೋಧಕರು ಆನ್ ಲೈನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಭಾಷಣದ ಪೂರ್ಣ ಪಠ್ಯ ಈ ಕೆಳಗಿನಂತಿದೆ

“ನಾನು ಥವಾಸ್ಮೀಯ ನಾಲ್ಕು ಸಂಪುಟಗಳನ್ನು ಬಿಡುಗಡೆ ಮಾಡಲು ಹರ್ಷಿಸುತ್ತೇನೆ, ಇದು ಓದುಗರಿಗೆ ಭಾರತದ ಮಹಾಕಾವ್ಯ ರಾಮಾಯಣದ ಒಳನೋಟವನ್ನು ನೀಡುತ್ತದೆ.

ರಾಮಾಯಣ ವಿಶ್ವದ ಅತ್ಯಂತ ಪುರಾತನ ಮಹಾಕಾವ್ಯಗಳಲ್ಲಿ ಒಂದಾಗಿದೆ. ಜೀವನದಲ್ಲಿ ಹಲವಾರು ಸವಾಲುಗಳು ಎದುರಾದರೂ ಅನುಕರಣೀಯ ಜೀವನ ನಡೆಸಿದ ಅಸಾಧಾರಣ ಮಾನವನ ಕಥೆ ಇದಾಗಿದೆ. ವಿಭಿನ್ನ ಮಾನವೀಯ ಮೌಲ್ಯಗಳನ್ನು ಉದಾಹರಿಸುವ ಅನೇಕ ಪಾತ್ರಗಳನ್ನು ಇದು ಒಳಗೊಂಡಿದೆ.

ಲೇಖಕರು ರಾಮಾಯಣದ ಕಥೆಯನ್ನು ಹೇಳುವ ಆಸಕ್ತಿದಾಯಕ ನಿರೂಪಣೆಯನ್ನು ನೀಡಿದ್ದಾರೆ ಜೊತೆಗೆ ಅದಕ್ಕೆ ಆಧಾರವಾಗಿರುವ ಸಂದೇಶದ ಪ್ರತಿಫಲನಗಳು ಮತ್ತು ವಿಶ್ಲೇಷಣೆಯನ್ನೂ ಉತ್ತೇಜಿಸುತ್ತಾರೆ.

ರಾಮಾಯಣದ ಕಥೆಯನ್ನು ತಂದೆ ಮತ್ತು ಮಗಳ ನಡುವಿನ ಸಂವಾದದ ರೂಪದಲ್ಲಿ ಹಲವಾರು ಕಸರತ್ತುಗಳೊಂದಿಗೆ ಪ್ರಸ್ತುತಪಡಿಸಲಾಗಿದೆ, ಇದು ಕಲಿಕೆಯ ಅನುಭವ ನೀಡುತ್ತದೆ. ಹೋಲಿಕೆಯ ಕನ್ನಡಿಗಳು, ಆತ್ಮಾವಲೋಕನದ ಕನ್ನಡಿಗಳು, ಮಾಧ್ಯಮ ವರದಿ ಮಾಡುವಿಕೆ, ಚಾರಿತ್ರ್ಯದ ಪ್ರಸ್ತುತಿ ಮತ್ತು ಸಂಶೋಧನಾ ಪ್ರಶ್ನೆಗಳಂತಹ ವಿಭಿನ್ನ ಚಿಂತನೆ ಹುಟ್ಟಿಸುವ ಸಾಧನಗಳನ್ನು ಓದುಗರಿಗೆ ನೀಡಿದ್ದಾರೆ. ಇವು ಆತ್ಮಾವಲೋಕನ ಮತ್ತು ಈ ಮಹಾಕಾವ್ಯದ ಆಳವಾದ ತಿಳಿವಳಿಕೆಯನ್ನು ಸುಲಭಗೊಳಿಸುತ್ತವೆ.

ಈ ನಾಲ್ಕು ಪುಸ್ತಕಗಳು ಮಲಗುವಾಗ ಓದುವ ಉತ್ತಮ ಕಥೆಗಳೂ ಆಗಿವೆ. ನಾವು ಮಲಗುವಾಗ ಕಥೆ ಓದುವ ಹವ್ಯಾಸವನ್ನು ಕ್ರಮೇಣ ಕಳೆದುಕೊಳ್ಳುತ್ತಿದ್ದೇವೆ. ಥವಾಸ್ಮಿ ಅದರ ಪುನಶ್ಚೇತನದ ಪ್ರಯತ್ನವಾಗಿದೆ.

ಶ್ರೀ ರಾಮನನ್ನು ಮರ್ಯಾದಾ ಪುರುಷೋತ್ತಮ ಅಥವಾ ಉತ್ತಮ ಚಾರಿತ್ರ್ಯದ ಸತ್ಪುರುಷ ಎನ್ನುತ್ತಾರೆ.

ಆತನ ಜೀವನ, ನುಡಿ, ಚಿಂತನೆ, ನಡೆ ಮತ್ತು ಸ್ಪಂದನೆ ಎಲ್ಲವೂ ಸತ್ಯ ಮತ್ತು ಧರ್ಮ ಪ್ರತಿಯೊಬ್ಬರ ಬದುಕಿನ ಭಾಗವಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ಆತ ಪಾಲಕರೊಂದಿಗೆ, ಸೋದರರೊಂದಿಗೆ, ಹೆಂಡತಿಯೊಂದಿಗೆ, ಸ್ನೇಹಿತರೊಂದಿಗೆ ಮತ್ತು ಶತ್ರುವಿನೊಂದಿಗೆ ಹಾಗೂ ಗುರುಗಳೊಂದಿಗೆ ಹೊಂದಿದ್ದ ಬಾಂಧವ್ಯ ಒಬ್ಬ ಆದರ್ಶ ವ್ಯಕ್ತಿ ಬದುಕಿನ ವಿವಿಧ ಸವಾಲುಗಳಿಗೆ ಹೇಗೆ ಸ್ಪಂದಿಸುತ್ತಾನೆ ಮತ್ತು ಇನ್ನೂ ಬಲಿಷ್ಠವಾಗಿ ಹೇಗೆ ಹೊರಹೊಮ್ಮುತ್ತಾನೆ ಎಂಬುದನ್ನು ತೋರಿಸುತ್ತದೆ.

ಈ ಮೌಲ್ಯಗಳ ಸಮೂಹವೇ ಭಾರತದ ಹಲವಾರು ಕವಿಗಳು, ಸಂತರು ಮತ್ತು ಗಾಯಕರನ್ನು ವಿವಿಧ ಭಾಷೆಗಳಲ್ಲಿ ಮತ್ತು ಉಪಭಾಷೆಗಳಲ್ಲಿ ರಾಮಾಯಣವನ್ನು ರಚಿಸಲು ಪ್ರೇರೇಪಿಸಿದೆ.

ಈ ಅಮರ ಗಾಥೆ ಭಾರತದ ಸಾಮೂಹಿಕ ಸಾಂಸ್ಕೃತಿಕ ಆನುವಂಶಿಕತೆಯಲ್ಲಿ ಅಂತರ್ಗತವಾಗಿದೆ.

  • ಪರಿಯಲ್ಲಿ, ಮತ್ತೆ ಹೇಳಲಾದ, ಮತ್ತೆ ಹಾಡಲಾದ ಮತ್ತು ಮತ್ತೆ ಹೆಣೆಯಲಾದ ಮತ್ತೊಂದು ಮಹಾಕಾವ್ಯ ಜಗತ್ತಿನಲ್ಲೇ ಇಲ್ಲ.

ಮಹರ್ಷಿ ವಾಲ್ಮೀಕಿ ಅವರ ಮೂಲ ರಾಮಾಯಣ ಆದಿ ಕಾವ್ಯ ಎಂದು ಹೆಸರಾಗಿದೆ. ಇದು ಕೇವಲ ಆದಿ ಕಾವ್ಯವಷ್ಟೇ ಅಲ್ಲ ಕಾಲಾತೀತವಾದ, ಶಾಶ್ವತವಾದ ಮತ್ತು ಯಾವುದೇ ಕಾಲಘಟ್ಟದಲ್ಲೂ ತನ್ನ ಅಸ್ತಿತ್ವ ಕಳೆದುಕೊಳ್ಳದ ಅನಾದಿ ಕಾವ್ಯವಾಗಿದೆ. ಇದು ವಿದ್ವತ್ಪೂರ್ಣ ಜನರಿಗಷ್ಟೇ ಅಲ್ಲ ಸಾಮಾನ್ಯ, ಅಶಿಕ್ಷಿತ ನಾಗರಿಕನನ್ನೂ ಮೋಡಿ ಮಾಡುತ್ತದೆ. ಇದು ಮುಂದಿನ ಜೀವನ ನಡೆಸಲು ಯುವಕರು ಮತ್ತು ಹಿರಿಯರನ್ನು ಸಕಾರಾತ್ಮಕ ಆಲೋಚನೆಗಳೊಂದಿಗೆ ಪ್ರೇರೇಪಿಸುತ್ತದೆ. ಈ ಮಹಾಕಾವ್ಯದ ಪ್ರತಿಯೊಂದು ಸಂಚಿಕೆಯಿಂದಲೂ ನಾವು ಪಾಠ ಕಲಿಯಬಹುದು.

ಕೋತಿಗಳು, ಪಕ್ಷಿಗಳು, ಅಳಿಲುಗಳು ಮತ್ತು ರಾಕ್ಷಸರು, ದೈತ್ಯರು ಸೇರಿದಂತೆ ಇಡೀ ರಾಮಾಯಣದ ಎಲ್ಲ ಶ್ರೇಣಿಯ ಪಾತ್ರಗಳಿಂದ ನಾವು ಆಕರ್ಷಿತರಾಗಿದ್ದೇವೆ.

ಕೆಟ್ಟತನ, ಕಿಡಿಗೇಡಿತನ ಮತ್ತು ವಿಚ್ಛಿದ್ರಕಾರಕ ಹಿಂಸಾಚಾರದ ಮೇಲೆ ಒಳ್ಳೆಯತನ, ಸದಾಚಾರ ಮತ್ತು ಸಾಮರಸ್ಯದ ವಿಜಯವನ್ನು ನಾವು ಆಚರಿಸುತ್ತೇವೆ.

*****



(Release ID: 1670635) Visitor Counter : 442