ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ ಮೈಗೌ ಸಹಯೋಗದೊಂದಿಗೆ ಆಯೋಜಿಸಿದ್ದ ಕೋವಿಡ್-19 ಶ್ರೀ ಶಕ್ತಿ ಸ್ಪರ್ಧೆಯಲ್ಲಿ ಮಹಿಳೆಯರ ನೇತೃತ್ವದ ಆರು ನವೋದ್ಯಮಗಳಿಗೆ ಪ್ರಶಸ್ತಿ

ವಿನೂತನ ಪರಿಹಾರಗಳನ್ನು ನೀಡಿದ ಕರ್ನಾಟಕದ ಮೂವರು ಮಹಿಳೆಯರು ಪ್ರಶಸ್ತಿಗೆ ಭಾಜನ

Posted On: 03 NOV 2020 6:25PM by PIB Bengaluru

ವಿಶ್ವ ಸಂಸ್ಥೆಯ ಮಹಿಳಾ ಸಬಲೀಕರಣ ಘಟಕ, ಮೈಗೌ ಸಹಯೋಗದಲ್ಲಿ ಆಯೋಜಿಸಿದ್ದ ಕೋವಿಡ್-19 ಶ್ರೀ ಶಕ್ತಿ ಸ್ಪರ್ಧೆಯಲ್ಲಿ ಮಹಿಳೆಯರ ನೇತೃತ್ವದ ಆರು ನವೋದ್ಯಮಗಳು ಪ್ರಶಸ್ತಿಗಳನ್ನು ಪಡೆದಿವೆ. ಮಹಿಳೆಯರ ನೇತೃತ್ವದ ನವೋದ್ಯಮಗಳನ್ನು ಉತ್ತೇಜಿಸಲು ಮತ್ತು ಕೋವಿಡ್-19 ವಿರುದ್ಧದ ಹೋರಾಟಕ್ಕೆ ನೆರವು ನೀಡಲು ನವೀನ ಪರಿಹಾರಗಳನ್ನು ಕಂಡುಹಿಡಿಯುವುದನ್ನು ಅಥವಾ ಭಾರೀ ಸಂಖ್ಯೆಯ ಮಹಿಳೆಯರ ಮೇಲೆ ಪರಿಣಾಮ ಬೀರುವಂತಹ ಸಮಸ್ಯೆಗಳನ್ನು ಬಗೆಹರಿಸುವ ಉದ್ದೇಶ ಹೊಂದಿರುವ ಮಹಿಳೆಯರನ್ನು ಪ್ರೋತ್ಸಾಹಿಸಲು ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ಘಟಕ, ಮೈಗೌ ಸಹಯೋಗದೊಂದಿಗೆ 2020ರ ಏಪ್ರಿಲ್ ನಲ್ಲಿ ಕೋವಿಡ್-19 ಶ್ರೀ ಶಕ್ತಿ ಸ್ಪರ್ಧೆಯನ್ನು ಆಯೋಜಿಸಿತ್ತು. 

ಇದು ಅತ್ಯಂತ ವಿನೂತನ ಸ್ಪರ್ಧೆಯಾಗಿದ್ದು, ಮೈಗೌ ಆಯೋಜಿಸಿದ್ದ ಆವಿಷ್ಕಾರಿ ವೇದಿಕೆಯಲ್ಲಿ ಮಹಿಳೆಯರ ನೇತೃತ್ವದ ನವೋದ್ಯಮಗಳು ಮತ್ತು ಅವುಗಳು ಕಂಡು ಹಿಡಿದಿರುವ ಪರಿಹಾರಗಳು ಮತ್ತು ಬಹು ದೊಡ್ಡ ಪ್ರಮಾಣದ ಮಹಿಳೆಯರ ಮೇಲೆ ಪರಿಣಾಮ ಬೀರುವಂತಹ ನವೀನ ಪರಿಹಾರಗಳನ್ನು ಕಂಡುಹಿಡಿದಿರುವ ಉದ್ಯಮಗಳನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಲಾಗಿತ್ತು. 

ಈ ಸ್ಪರ್ಧೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಯಿತು: ಆಲೋಚನಾ ಹಂತ ಮತ್ತು ಪರಿಕಲ್ಪನೆ ಸಾಬೀತುಪಡಿಸುವ(ಪಿಒಸಿ) ಹಂತ. ಈ ಸ್ಪರ್ಧೆಗೆ ದೇಶಾದ್ಯಂತ ಅತ್ಯದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಒಟ್ಟು 1265 ಪ್ರವೇಶಗಳು ಬಂದಿದ್ದವು. 

ನಾಸ್ಕಾಮ್ ಅಧ್ಯಕ್ಷ ದೇಬ್ಜಾನಿ ಘೋಷ್, ಮೈಕ್ರೋಸಾಫ್ಟ್ ಇಂಡಿಯಾದ ರಾಷ್ಟ್ರೀಯ ತಂತ್ರಜ್ಞಾನ ಅಧಿಕಾರಿ(ಸಿಟಿಒ) ರೋಹಿಣಿ ಶ್ರೀವಾತ್ಸವ, ಅಟಲ್ ಇನೋವೇಷನ್ ಮಿಷನ್ ನ ವ್ಯವಸ್ಥಾಪಕ ನಿರ್ದೇಶಕ ಆರ್. ರಮಣನ್, ವಿಶ್ವಸಂಸ್ಥೆಯ ಮಹಿಳಾ ಸಬಲೀಕರಣ ವಿಭಾಗದ ಭಾರತದ ಪ್ರತಿನಿಧಿ ನಿಶ್ಥಾ ಸತ್ಯಂ ಮತ್ತು ಮೈಗೌ ಸಿಇಒ ಅಭಿಷೇಕ್ ಸಿಂಗ್ ನೇತೃತ್ವದ ಸಮಿತಿ  ಸಮಗ್ರ ಪರಿಶೀಲನೆ ನಂತರ 25 ನವೋದ್ಯಮಗಳನ್ನು ಆಯ್ಕೆ ಮಾಡಿತು. 

ಈ 25 ಆಯ್ದ ನವೋದ್ಯಮಗಳು, ಆಯ್ಕೆ ಸಮಿತಿ ಮುಂದೆ ತಮ್ಮ ಕಂಡುಹಿದಿಡಿರುವ ಹೊಸ ಮತ್ತು ನವೀನ ಪರಿಹಾರಗಳನ್ನು ಪ್ರಸ್ತುತಪಡಿಸಿದವು. ಅವುಗಳನ್ನು ಆವಿಷ್ಕಾರ, ಉಪಯುಕ್ತತೆ, ಪ್ರಸ್ತುತತೆ, ಸಮಾಜದ ಮೇಲೆ ಅವುಗಳು ಬೀರಲಿರುವ ಪರಿಣಾಮಗಳು ಸೇರಿದಂತೆ ಹಲವು ಅಂಶಗಳ ಬಗ್ಗೆ ಪರಿಶೀಲಿಸಿದ ಸಮಿತಿ ಅಂತಿಮವಾಗಿ ಮುಂದಿನ ಹಂತಕ್ಕೆ 11 ನವೋದ್ಯಮಗಳನ್ನು ಆಯ್ಕೆ ಮಾಡಿತು. ಆ 11 ಆಯ್ದ ನವೋದ್ಯಮಗಳಿಗೆ  ತಮ್ಮ ಚಿಂತನೆಗಳನ್ನು ಅಭಿವೃದ್ಧಿಪಡಿಸಲು ತಲಾ 75,000 ರೂ. ನಗದು ಬಹುಮಾನ ನೀಡಲಾಯಿತು. 

ನಂತರ ಆ ಚಿಂತನೆಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಾರ್ಗದರ್ಶನ ಗೋಷ್ಠಿಗಳನ್ನು ನಡೆಸಲಾಯಿತು. ಅವುಗಳಲ್ಲಿ ಬಿಸಿನೆಸ್ ಮಾಡೆಲಿಂಗ್, ಹಣಕಾಸು ಮಾಡೆಲಿಂಗ್, ಲೀಗಲ್ ಸರ್ಟಿಫಿಕೇಷನ್  ಸೇರಿ ನಾನಾ ಭರವಸೆಯ ಪರಿಹಾರಗಳ ಕುರಿತು ನ್ಯಾಸ್ಕಾಮ್, ಉದ್ಯಮ ತಜ್ಞರು, ಅಟಲ್ ಸಂಪೋಷಣಾ ಕೇಂದ್ರದ ನೆರವಿನಲ್ಲಿ ಗೋಷ್ಠಿಗಳನ್ನು ನಡೆಸಿ ಮಾರ್ಗದರ್ಶನ ನೀಡಲಾಯಿತು. 

ಅಗ್ರ ಮೂರು ವಿಜೇತರ ವಿವರ ಈ ಕೆಳಗಿನಂತಿದೆ. 

1. ಡಾ. ಪಿ. ಗಾಯತ್ರಿ ಹೆಲಾ. ಇವರು ಬೆಂಗಳೂರು ಮೂಲದ ರೆಸೆಡಾ ಲೈಫ್ ಸೈನ್ಸ್ ಪ್ರವೈಟ್ ಲಿಮಿಟೆಡ್ ಕಂಪನಿಯ ಸಂಸ್ಥಾಪಕರು. ಈ ಕಂಪನಿ ಸಿಂಥೆಟಿಕ್ ರಾಸಾಯನಿಕಗಳ ಬದಲಾಗಿ ಗಿಡಗಳ ಸಾರವನ್ನು ಬಳಸಿ, ಕೃಷಿ ಆಧಾರಿತ ಗೃಹ ಉತ್ಪನ್ನಗಳ ವಿನ್ಯಾಸ ಮತ್ತು ಅಭಿವೃದ್ಧಿಗೊಳಿಸುತ್ತದೆ. ಗಾಯತ್ರಿ ಅವರು ಹೇಳುವಂತೆ, ಕಾಲ ಕ್ರಮೇಣ ಬ್ಯಾಕ್ಟೀರಿಯಾ/ಸೋಂಕು ರಾಸಾಯನಿಕಗಳೊಂದಿಗೆ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಆದರೆ ನಿಸರ್ಗ ಸದಾ ಇಂತಹ ಕೀಟಗಳ ವಿರುದ್ಧ ತನಗೆ ತಾನೇ ಹೋರಾಡುತ್ತಿರುತ್ತದೆ. ಶ್ರೀ ಶಕ್ತಿ ಸ್ಪರ್ಧೆಗೆ ಗಾಯತ್ರಿ ಅವರು, ಕೋವಿಡ್-19 ಸೋಂಕಿಗಲ್ಲದೆ, ಇತರೆ ಸೋಂಕುಗಳಿಗೂ ಬಳಸಬಹುದಾದ ಮದ್ಯ ಸಾರವಿಲ್ಲದ ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದಿಸುವ ವಿನೂತನ ಚಿಂತನೆಯನ್ನು ಮಂಡಿಸಿದ್ದರು. ಅವರಿಗೆ 2017ರಲ್ಲಿ ತಮ್ಮ ಒಂದೂವರೆ ವರ್ಷದ ಮಗುವಿನ ಜೊತೆ ಸಾರ್ಸ್ ಸಾಂಕ್ರಾಮಿಕ ಎದುರಿಸುತ್ತಿದ್ದ ಸಂದರ್ಭದಲ್ಲಿ ಈ ಚಿಂತನೆ ಹೊಳೆದಿತ್ತು. 

2. ರೋಮಿತಾ ಘೋಷ್. ಕ್ಯಾನ್ಸರ್ ನಿಂದ ಬದುಕುಳಿದಿರುವ ಇವರು ಶಿಮ್ಲಾ ಮೂಲದ ಐಹೀಲ್ ಹೆಲ್ತ್ ಟೆಕ್ ಪ್ರೈವೆಟ್ ಲಿಮಿಟೆಡ್ ನ ಸಂಸ್ಥಾಪಕಿ. ಇದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವ ಆರೋಗ್ಯ ಆರೈಕೆ ನವೋದ್ಯಮವಾಗಿದ್ದು, ಇದು ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಗಳನ್ನು ಪೂರೈಸಲಿದೆ. ರೋಮಿತಾ ಅವರು, ಪಿಪಿಇ ಕಿಟ್ ಮತ್ತು ಮಾಸ್ಕ್ ಗಳ ಸುರಕ್ಷಿತ ಮರುಬಳಕೆಗೆ ಭಾರತದಲ್ಲೇ ತಯಾರಿಸಿದ ಯುವಿ ಸ್ಟೆರಲೈಜೇಷನ್ ಬಾಕ್ಸ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಆಸ್ಪತ್ರೆಗಳ ವೆಚ್ಚವನ್ನು ತಗ್ಗಿಸಲಿದೆ. 

3. ಡಾ. ಅಂಜನಾ ರಾಮಕುಮಾರ್ ಮತ್ತು ಡಾ. ಅನುಷ್ಕಾ ಅಶೋಕನ್. ಇವರು ಕೇರಳ ಮೂಲದ ಥನ್ಮತ್ರ ಇನೋವೇಷನ್ ಪ್ರೈವೆಟ್ ಲಿಮಿಟೆಡ್ ನ ಸಂಸ್ಥಾಪಕರು ಹಾಗೂ ಉತ್ಪನ್ನ ನಿರ್ವಾಹಕರು. ಕರವಸ್ತ್ರ ಮತ್ತು ದುಪ್ಪಟಾಗಳನ್ನು ಮುಖಗವಸುಗಳನ್ನಾಗಿ ಧರಿಸಲು ಅವುಗಳ ಮೇಲೆ ಸಿಂಪಡಿಸಬಹುದಾದ ವೈರಾಣು ನಿಗ್ರಹ ದ್ರಾವಣವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಮಕ್ಕಳನ್ನು ರಕ್ಷಿಸಲು ಸಹ ನೆರವಾಗಲಿದೆ. 

ಮೂರು ನವೋದ್ಯಮಗಳಿಗೆ ‘ಭರವಸೆಯ ಪರಿಹಾರ’ದ ನವೋದ್ಯಮಗಳೆಂದು ಗುರುತಿಸಲಾಗಿದೆ:

1. ವಾಸಂತಿ ಪಳನಿವೇಲ್. ಇವರು ಬೆಂಗಳೂರು ಮೂಲದ ಸೆರಾಗೇನ್ ಬಯೋ ಥೆರಪೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಇಒ ಮತ್ತು ಸಹ ಸಂಸ್ಥಾಪಕರು, ಓರ್ವ ವಿಜ್ಞಾನಿ ಮತ್ತು ಸಂಶೋಧಕರಾಗಿ ಅವರು ಕೋವಿಡ್ ಸೋಂಕಿನಿಂದಾಗಿ ಶ್ವಾಸಕೋಶದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂಬುದರ ಕುರಿತು ಅಧ್ಯಯನ ನಡೆಸಿ, ಕೋವಿಡ್-19ನಿಂದಾಗಿ ಉಂಟಾಗುವ ಉಸಿರಾಟ ತೊಂದರೆಗಳ ಚಿಕಿತ್ಸೆಗೆ ಪ್ಲಾಸ್ಮಾ ಪರಿಹಾರವನ್ನು ಅಭಿವೃದ್ಧಿಪಡಿಸಿದ್ದಾರೆ.

2. ಶಿವಿ ಕಪಿಲ್. ಇವು ಬೆಂಗಳೂರು ಮೂಲದ ಎಂಪಥಿ ಡಿಸೈನ್ ಲ್ಯಾಬ್ ನ ಸಹ ಸಂಸ್ಥಾಪಕಿ, ಈ ಸಂಸ್ಥೆ ಆರೋಗ್ಯ ರಕ್ಷಣೆಯ ಬಗ್ಗೆ ಗಮನಹರಿಸಲಿದ್ದು, ಅದು ಸಾಂಕ್ರಾಮಿಕ ಅವಕಾಶವನ್ನು ಬಳಸಿಕೊಂಡು ಸೋಂಕಿನ ಭೀತಿಯಿಂದಾಗಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗದ ಗರ್ಭಿಣಿಯರಿಗೆ ವಿನೂತನ ಪರಿಹಾರವನ್ನು ಒದಗಿಸಿದೆ. ಅವರು ಕ್ರಿಯಾ ಎಂಬ ಸಾಧನ ಅಭಿವೃದ್ಧಿಪಡಿಸಿದ್ದು, ಅದು ಪ್ರತಿ ದಿನ ಗರ್ಭದ ಬಗ್ಗೆ ನಿಗಾವಹಿಸುವಂತಹ ಉಪಕರಣವಾಗಿದೆ. ಐಒಟಿ ಆಧಾರಿತ  ಈ ಸಾಧನ, ಮಗುವಿನ ನಿರೀಕ್ಷೆಯಲ್ಲಿರುವವರಿಗೆ ಸಕಾಲದಲ್ಲಿ ಸೂಕ್ತ ಸಲಹೆ , ಮುನ್ನೆಚ್ಚರಿಕೆಗಳನ್ನು ನೀಡಲಿದೆ. 

3. ಜಯಾ ಪರಾಷರ್ ಮತ್ತು ಅಂಕಿತಾ ಪರಾಷರ್ – ಈ ತಾಯಿ, ಮಗಳ ಜೋಡಿ ಸ್ಟ್ರೀಮ್ ಮೈಂಡ್ಸ್ ನ ಸ್ಥಾಪಕರು ಮತ್ತು ಸಹ ಸಂಸ್ಥಾಪಕರು, ಶಿಕ್ಷಣ ತಂತ್ರಜ್ಞಾನ ಕುರಿತು ಈ ಕಂಪನಿ ವಿಜ್ಞಾನ, ತಂತ್ರಜ್ಞಾನ, ಓದುವುದು/ಬರೆಯುವುದು/ಕಲೆ ಮತ್ತು ಗಣಿತ ಶಿಕ್ಷಣ ಕುರಿತಂತೆ ಕಾರ್ಯನಿರ್ವಹಿಸುತ್ತಿದೆ. ಅವರು ‘ಡೊಬೊಟ್’ ಅನ್ನು ವಿನ್ಯಾಸಗೊಳಿಸಿದ್ದು, ಈ ಸಂಪೂರ್ಣ ಸ್ವಯಂಚಾಲಿತ ರೊಬೋಟ್, ಆಸ್ಪತ್ರೆಗಳು ಮತ್ತು ಆರೋಗ್ಯ ರಕ್ಷಣಾ ಕೇಂದ್ರಗಳಲ್ಲಿ ಕೋವಿಡ್ ಸೋಂಕು ಹರಡುವುದನ್ನು ತಡೆಯುವ ಜೊತೆಗೆ, ವಿತರಣಾ ಸಹಾಯಕನಾಗಿ ಕಾರ್ಯನಿರ್ವಹಿಸಲಿದೆ. 

ಮೈಗೌ ಎಲ್ಲ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದೆ ಮತ್ತು ವಿನೂತನ ಪರಿಹಾರಗಳನ್ನು ನೀಡಿರುವವರು ಪೂರ್ಣ ಪ್ರಮಾಣದಲ್ಲಿ ತಮ್ಮ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಬೇಕು. ಹಾಗೂ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಪರಿಹಾರಗಳ ಮೂಲಕ ನೆರವು ನೀಡಬೇಕು ಎಂದು ಹೇಳಿದೆ. ಈ ಎಲ್ಲ ವಿಜೇತರು ಮತ್ತು ಶ್ರೀ ಶಕ್ತಿ ಸ್ಪರ್ಧೆಯ ಭಾಗಿದಾರರು ಭಾರತದಲ್ಲಿನ ಪ್ರತಿಭೆಗೆ ಹಿಡಿದ ಸಾಕ್ಷಿಯಾಗಿದ್ದು, ಇದು ಭಾರತದಲ್ಲಿ ಮಹಿಳಾ ಉದ್ಯಮಿಗಳ ಉತ್ತೇಜನ ನಿಟ್ಟಿನಲ್ಲಿ ದೀರ್ಘಾವಧಿಯಲ್ಲಿ ನೆರವಾಗಲಿದೆ. 

*****(Release ID: 1669886) Visitor Counter : 20