ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ
ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯ ಪರಿಶೀಲನಾ ಸಭೆ ನಡೆಸಿದ ಕೇಂದ್ರ ಸಚಿವ ಶ್ರೀ ಸದಾನಂದ ಗೌಡ
ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ (ಅಕ್ಟೋಬರ್ 31 ರವರೆಗೆ) ಜನೌಷಧಿ ಮಳಿಗೆಗಳ ಮೂಲಕ 358 ಕೋಟಿ ರೂ. ಮೌಲ್ಯದ ಫಾರ್ಮಾ ಉತ್ಪನ್ನಗಳ ಮಾರಾಟ; ಇಡೀ ಹಣಕಾಸು ವರ್ಷದಲ್ಲಿ 600 ಕೋಟಿ ರೂ.ಗಳ ಮಾರಾಟದ ಸಾಧ್ಯತೆ
Posted On:
03 NOV 2020 5:42PM by PIB Bengaluru
ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಡಿ.ವಿ.ಸದಾನಂದ ಗೌಡ ಅವರು ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ (ಪಿಎಂಬಿಜೆಪಿ) ಯ ಸಮಗ್ರ ಪರಿಶೀಲನಾ ಸಭೆ ನಡೆಸಿದರು.
ಈ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ (ಅಕ್ಟೋಬರ್ 31 ರವರೆಗೆ) 6600 ಜನೌಷಧಿ ಮಳಿಗೆಗಳ ಮೂಲಕ 358 ಕೋಟಿ ರೂ. (2019 ರ ಹಣಕಾಸು ವರ್ಷದಲ್ಲಿ 433 ಕೋಟಿ ರೂ. ಮಾರಾಟ) ಮೌಲ್ಯದ ಫಾರ್ಮಾ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ. ಇಡೀ ಹಣಕಾಸು ವರ್ಷದಲ್ಲಿ 600 ಕೋಟಿ ರೂ. ಗೂ ಹೆಚ್ಚು ಮಾರಾಟ ನಡೆಯುವ ಸಾಧ್ಯತೆಯಿದೆ.
ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಮುಖಗವಸುಗಳು, ಔಷಧಿಗಳು ಮತ್ತು ಇತರ ಉತ್ಪನ್ನಗಳ ಸರಬರಾಜನ್ನು ಖಾತ್ರಿಪಡಿಸಿದ್ದಕ್ಕಾಗಿ ಸಚಿವ ಶ್ರೀ ಸದಾನಂದಗೌಡ ಬಿಪಿಪಿಐ ತಂಡವನ್ನು ಅಭಿನಂದಿಸಿದರು.
ಔಷಧಿಗಳಿಗಾಗಿ ಜನರ, ವಿಶೇಷವಾಗಿ ಬಡಜನರ ಖರ್ಚನ್ನು ಕಡಿಮೆ ಮಾಡುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವು ಅಂತಿಮವಾಗಿ ರೂಪುಪಡೆಯುತ್ತಿದೆ ಎಂದು ಶ್ರೀ ಗೌಡ ಒತ್ತಿಹೇಳಿದರು. ನವೀನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೂರೈಕೆ ಸರಪಳಿಗಳನ್ನು ಬಲಪಡಿಸಿ ಈ ಪ್ರಯೋಜನಗಳನ್ನು ಕ್ರೋಢೀಕರಿಸಲು ಬಿಪಿಪಿಐ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಜನೌಷಧಿಯ ಔಷಧಗಳ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ದೂರದ ಮತ್ತು ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಪ್ರತಿ ಜನೌಷಧಿ ಅಂಗಡಿಯಲ್ಲೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.. ಈ ಗುರಿಯನ್ನು ಸಾಧಿಸಲು ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಬಿಪಿಪಿಐಗೆ ಸೂಚಿಸಿದರು.
ಪಿಎಂಪಿಜೆಪಿ ಯೋಜನೆಯ ಕಾರ್ಯಾಚರಣೆಗಳ ಕುರಿತು ಬಿಪಿಪಿಐ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಸಚಿನ್ ಕುಮಾರ್ ಸಿಂಗ್ ವಿವರಗಳನ್ನು ನೀಡಿದರು.
ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಯೋಜನೆಯನ್ನು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಅಗ್ಗವಾಗಿ ಒದಗಿಸುವ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ.ಶ್ರೀ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ 2015-16ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ (ಪಿಎಂಬಿಜೆಪಿ) ಯೋಜನೆಯಾಗಿ ಪರಿಷ್ಕರಿಸಲಾಯಿತು. ಕೈಗೆಟುಕುವ ಬೆಲೆಗಳ ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡುವ ಜನೌಷಧಿ ಮಳಿಗೆಗಳು 2014-15ರಲ್ಲಿ ಕೇವಲ 99 ಇದ್ದವು. ಪ್ರಸ್ತುತ 6600 ಮಳಿಗೆಗಳಿವೆ. ಇವುಗಳ ಮಾರಾಟವು 2014-15ರಲ್ಲಿದ್ದ 7.29 ಕೋಟಿ ರೂ.ಗಳಿಂದ 2019-20ರಲ್ಲಿ 433 ಕೋಟಿ ರೂ.ಗೆ ಏರಿಕೆಯಾಗಿದೆ.
ಸಭೆಯಲ್ಲಿ ಔಷಧೀಯ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ಅಪರ್ಣ ಮತ್ತು ಜಂಟಿ ಕಾರ್ಯದರ್ಶಿ ಶ್ರೀ ರಜನೀಶ್ ಟಿಂಗಲ್ ಭಾಗವಹಿಸಿದ್ದರು.
***
(Release ID: 1669829)
Visitor Counter : 300