ಪ್ರಧಾನ ಮಂತ್ರಿಯವರ ಕಛೇರಿ

ಶ್ರೀ ಕೇಶುಭಾಯಿ ಪಟೇಲ್ ಅವರ ನಿಧನದ ಹಿನ್ನೆಲೆ ಪ್ರಧಾನಮಂತ್ರಿ ಅವರ ಸಂದೇಶ

Posted On: 29 OCT 2020 4:20PM by PIB Bengaluru

ಇಂದು, ದೇಶದ ಮತ್ತು ಗುಜರಾತಿನ ಶ್ರೇಷ್ಟ ಪುತ್ರ ನಮ್ಮನ್ನು ಅಗಲಿದ್ದಾರೆ. ನಮ್ಮ ಪ್ರೀತಿಯ ಕೇಶುಭಾಯಿ ಪಟೇಲ್ ಅವರ ನಿಧನದಿಂದ ನಾನು ದುಃಖಿತನಾಗಿದ್ದೇನೆ ಮತ್ತು ದಿಗ್ಬ್ರಾಂತನಾಗಿದ್ದೇನೆ. ಕೇಶುಭಾಯಿ ಅವರು ನನಗೆ ನನ್ನ ಪಿತ ಸಮಾನರಂತಿದ್ದು, ಅವರ ನಿಧನ ನನಗೆ ಭಾರೀ ದೊಡ್ಡ ನಷ್ಟ ಮತ್ತು ನಿರ್ವಾತವನ್ನು ಎಂದೂ ತುಂಬಲಾಗದು. ಅವರು ತಮ್ಮ ಆರು ದಶಕಗಳ ಸಾರ್ವಜನಿಕ ಬದುಕಿನಲ್ಲಿ, ಏಕೈಕ ಗುರಿಯನ್ನು ಹೊಂದಿದವರಾಗಿದ್ದರು ಮತ್ತು ಗುರಿ :ರಾಷ್ಟ್ರೀಯತೆ - ದೇಶದ ಕಲ್ಯಾಣ ಆಗಿತ್ತು.

ಕೇಶುಭಾಯಿ ಶ್ರೀಮಂತ ವ್ಯಕ್ತಿತ್ವವನ್ನು ಹೊಂದಿದ್ದರು. ಒಂದೆಡೆ ಅವರು ತೀರಾ ಮೃದು ಸ್ವಭಾವದವರಾಗಿದ್ದರು ಮತ್ತು ತಮ್ಮ ವರ್ತನೆಯಲ್ಲಿ ನಮ್ರತೆಯನ್ನು ಅಳವಡಿಸಿಕೊಂಡಿದ್ದರು. ಮತ್ತು ಇನ್ನೊಂದೆಡೆ ಅವರು ಕಠಿಣವಾದ ಹಾಗು ದೃಢವಾದ ನಿರ್ಧಾರಗಳನ್ನು ಕೈಗೊಳ್ಳುವ ದೃಢತೆಯನ್ನೂ ಹೊಂದಿದ್ದರು. ಅವರು ತಮ್ಮ ಬದುಕನ್ನು ಸಮಾಜಕ್ಕೆ ಅರ್ಪಿಸಿದ್ದರು ಮತ್ತು ಸಮಾಜದ ಪ್ರತೀಯೊಂದು ವರ್ಗಕ್ಕೂ ಸೇವೆ ಸಲ್ಲಿಸುವುದಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಗುಜರಾತಿನ ಅಭಿವೃದ್ಧಿ ಅವರ ಅಚ್ಚುಮೆಚ್ಚಿನ ಮತ್ತು ಆದ್ಯತೆಯ ಕೆಲಸವಾಗಿತ್ತು. ಮತ್ತು ಅವರ ನಿರ್ಧಾರವು ಪ್ರತೀಯೊಬ್ಬ ಗುಜರಾತಿಯನ್ನು ಸಶಕ್ತೀಕರಣಗೊಳಿಸುವಂತಹದಾಗಿತ್ತು.

ನಮ್ಮ ಕೇಶುಭಾಯಿ , ಬಹಳ ಸರಳ ರೈತ ಕುಟುಂಬಕ್ಕೆ ಸೇರಿದವರು ಮತ್ತು ಕೃಷಿಕರ ಹಾಗು ಬಡವರ ಸಂಕಷ್ಟಗಳನ್ನು ಅರಿತುಕೊಂಡಿದ್ದರು. ರೈತರ ಕಲ್ಯಾಣ ಅವರಿಗೆ ಗರಿಷ್ಟ ಆದ್ಯತೆಯಾಗಿತ್ತು. ಶಾಸಕರಾಗಿ, ಸಂಸದರಾಗಿ , ಸಚಿವರಾಗಿ, ಅಥವಾ ಮುಖ್ಯ ಮಂತ್ರಿಯಾಗಿ ತಮ್ಮ ನಿರ್ಧಾರಗಳಲ್ಲಿ ಮತ್ತು ನೀತಿಗಳಲ್ಲಿ ಸದಾ ರೈತರ ಹಿತಾಸಕ್ತಿಗಳಿಗೆ ಗರಿಷ್ಟ ಆದ್ಯತೆಯನ್ನು ಕೊಡುತ್ತಿದ್ದರು. ಗ್ರಾಮೀಣ ಜನತೆಯ , ಬಡವರ, ರೈತರ ಬದುಕನ್ನು ಉತ್ತಮ ಪಡಿಸಲು ಅವರು ಮಾಡಿದ ಕೆಲಸ , ರಾಷ್ಟ್ರೀಯತೆಯ ಆದರ್ಶ ಮತ್ತು ಸಾರ್ವಜನಿಕ ಕೆಲಸಗಳತ್ತ ಅರ್ಪಣಾಭಾವವನ್ನು ಅವರು ತಮ್ಮ ಜೀವನದುದ್ದಕ್ಕೂ ಅನುಸರಿಸಿಕೊಂಡು ಬಂದ ರೀತಿ ಹಲವಾರು ತಲೆಮಾರುಗಳನ್ನು ಸದಾ ಪ್ರಭಾವಿಸುತ್ತಿರುತ್ತದೆ.

ಕೇಶುಭಾಯಿ ಗುಜರಾತಿನ ಪ್ರತೀ ಭಾಗದಲ್ಲೂ ಚಿರಪರಿಚಿತರಾಗಿದ್ದರು. ಅವರು ಜನ ಸಂಘ ಮತ್ತು ಬಿ.ಜೆ.ಪಿ.ಯನ್ನು ಗುಜರಾತಿನ ಪ್ರತೀ ಮೂಲೆಗೂ ಕೊಂಡೊಯ್ದರು ಮತ್ತು ಪ್ರತೀ ವಲಯದಲ್ಲಿಯೂ ಅದನ್ನು ಬಲಪಡಿಸಿದರು. ತುರ್ತು ಪರಿಸ್ಥಿತಿಯಲ್ಲಿ ಕೇಶುಭಾಯಿ ಅವರು ಪ್ರಜಾಪ್ರಭುತ್ವವನ್ನು ರಕ್ಷಿಸಲು ತಮ್ಮೆಲ್ಲಾ ಪ್ರಯತ್ನಗಳೊಂದಿಗೆ ಹೇಗೆ ಹೋರಾಡಿದರು ಎಂಬುದನ್ನು ನಾನು ಈಗಲೂ ನೆನಪಿಟ್ಟುಕೊಂಡಿದ್ದೇನೆ.

ಕೇಶುಭಾಯಿ ನನ್ನಂತಹ ಹಲವು ಸಾಮಾನ್ಯ ಕಾರ್ಯಕರ್ತರಿಗೆ ಸದಾ ಮಾರ್ಗದರ್ಶನ ಮಾಡುತ್ತಿದ್ದರು ಮತ್ತು ಹಲವಾರು ವಿಷಯಗಳನ್ನು ಹೇಳಿಕೊಡುತ್ತಿದ್ದರು. ನಾನು ಪ್ರಧಾನ ಮಂತ್ರಿಯಾದ ಬಳಿಕವೂ ಅವರ ಜೊತೆ ಸದಾ ಸಂಪರ್ಕದಲ್ಲಿದ್ದೆ. ಗುಜರಾತಿಗೆ ಭೇಟಿ ನೀಡುವ ಅವಕಾಶ ನನಗೆ ಲಭಿಸಿದಾಗೆಲ್ಲ, ನಾನು ಅವರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆಯುತ್ತಿದ್ದೆ.

ಕೆಲವೇ ಕೆಲವು ವಾರಗಳ ಹಿಂದೆ , ಸೋಮನಾಥ ಟ್ರಸ್ಟಿನ ವರ್ಚುವಲ್ ಸಭೆಯಲ್ಲಿ ನಾನು ಅವರೊಂದಿಗೆ ಬಹಳ ಧೀರ್ಘ ಕಾಲ ಸಂಭಾಷಣೆ ನಡೆಸಿದ್ದೆ ಮತ್ತು ಅವರು ಸಂತೋಷದಿಂದ ಇದ್ದಂತೆ ಕಾಣುತ್ತಿದ್ದರು. ಕೊರೊನಾ ಕಾಲದಲ್ಲಿ , ನಾನು ಹಲವಾರು ಬಾರಿ ದೂರವಾಣಿ ಮೂಲಕ ಅವರ ಜೊತೆ ಮಾತನಾಡಿದ್ದೆ, ನಾನು ಅವರ ಆರೋಗ್ಯದ ಬಗ್ಗೆ ಕೇಳುತ್ತಿದ್ದೆ. ಅವರನ್ನು ಸುಮಾರು 45 ವರ್ಷಗಳಿಂದ ನಿಕಟವಾಗಿ ಬಲ್ಲೆ. ಸಂಘಟನೆ ಇರಲಿ, ಹೋರಾಟವಿರಲಿ, ಅಥವಾ ಅದು ವ್ಯವಸ್ಥೆಯ ಕುರಿತ ಸಂಗತಿ ಇರಲಿ ; ಇಂದು ವಿವಿಧ ಘಟನೆಗಳು ಮತ್ತು ಕಾರ್ಯಕ್ರಮಗಳು ನನ್ನ ಸ್ಮೃತಿಪಟಲದಲ್ಲಿ ಬಂದು ಹೋಗುತ್ತಿವೆ.

ಇಂದು ಬಿ.ಜೆ.ಪಿ. ಪ್ರತಿಯೊಬ್ಬ ಕಾರ್ಯಕರ್ತರೂ ನನ್ನಂತೆ ದುಃಖಿತರಾಗಿದ್ದಾರೆ. ಕೇಶುಭಾಯಿ ಅವರ ಕುಟುಂಬಕ್ಕೆ ಮತ್ತು ಅವರ ಹಿತೈಷಿಗಳಿಗೆ ನನ್ನ ಸಂತಾಪಗಳು. ದುಃಖದ ಸಂದರ್ಭದಲ್ಲಿ , ನಾನು ಅವರ ಕುಟುಂಬದ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.

ಕೇಶುಭಾಯಿ ಅವರಿಗೆ ದೇವರು ತನ್ನ ಪಾದದೆಡೆಯಲ್ಲಿ ಸ್ಥಾನ ಕೊಡಲಿ ಮತ್ತು ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಓಂ ಶಾಂತಿ !!!

***


(Release ID: 1669699) Visitor Counter : 243