ಪ್ರಧಾನ ಮಂತ್ರಿಯವರ ಕಛೇರಿ

ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ಕುರಿತ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿದ ಪ್ರಧಾನಮಂತ್ರಿ


ಭ್ರಷ್ಟಾಚಾರದ ವಿರುದ್ಧ ಭಾರತ ಶೂನ್ಯ ಸಹಿಷ್ಣುತೆ ಮನೋಭಾವ: ಪ್ರಧಾನಮಂತ್ರಿ

ದಂಡನಾ ವಿಚಕ್ಷಣೆಗಿಂತ ಮುನ್ನೆಚ್ಚರಿಕೆಯ ಜಾಗೃತಿ ಮುಖ್ಯ: ಪ್ರಧಾನಮಂತ್ರಿ

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಆಡಳಿತದಲ್ಲಿ ಪಾರದರ್ಶಕತೆ, ಜವಾಬ್ದಾರಿ, ಹೊಣೆಗಾರಿಕೆ ಮತ್ತು ಸಾರ್ವಜನಿಕರಿಗೆ ಉತ್ತರದಾಯಿತ್ವವಿರಬೇಕು: ಪ್ರಧಾನಮಂತ್ರಿ

ಪೀಳಿಗೆಗಳಿಂದ ಬಂದಿರುವ ಭ್ರಷ್ಟಾಚಾರದಿಂದ ದೇಶದ ಪ್ರಗತಿಗೆ ಬಹುದೊಡ್ಡ ಅಡ್ಡಿ: ಪ್ರಧಾನಮಂತ್ರಿ

Posted On: 27 OCT 2020 7:38PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಸಮಾವೇಶದ ಘೋಷವಾಕ್ಯ ‘ಜಾಗೃತ ಭಾರತ, ಸಮೃದ್ಧ ಭಾರತ’ ಎಂಬುದಾಗಿದೆ. ಕೇಂದ್ರೀಯ ಅಪರಾಧ ತನಿಖಾ ಸಂಸ್ಥೆ-ಸಿಬಿಐ ಜಾಗೃತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಮಾವೇಶವನ್ನು ಆಯೋಜಿಸಿದೆ. ಸಾರ್ವಜನಿಕ ಸಹಭಾಗಿತ್ವದ ಮೂಲಕ ಸಾರ್ವಜನಿಕ ಜೀವನದಲ್ಲಿರುವವರಲ್ಲಿ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಉತ್ತೇಜಿಸುವ ಭಾರತದ ಬದ್ಧತೆಯನ್ನು ಪುನರುಚ್ಛರಿಸುವುದು ಸಮಾವೇಶದ ಗುರಿಯಾಗಿದೆ.

ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಸರ್ದಾರ್ ಪಟೇಲ್ ಅವರು ಸಮಗ್ರ ಭಾರತದ ಶಿಲ್ಪಿಯಷ್ಟೇ ಅಲ್ಲ, ದೇಶದ ಆಡಳಿತ ವ್ಯವಸ್ಥೆಯ ಶಿಲ್ಪಿಯೂ ಸಹ ಹೌದು. ದೇಶದ ಮೊದಲ ಗೃಹ ಸಚಿವರಾಗಿ ಅವರು ದೇಶದ ಸಾಮಾನ್ಯ ಜನರಿಗಾಗಿ ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲು ಸಾಕಷ್ಟು ಪ್ರಯತ್ನ ನಡೆಸಿದರು ಮತ್ತು ಅವರ ನೀತಿಗಳು ಪ್ರಾಮಾಣಿಕತೆಯನ್ನು ಆಧರಿಸಿದ್ದವು ಎಂದು ಹೇಳಿದರು. ದೇಶದಲ್ಲಿ ಹಲವು ದಶಕಗಳ ಕಾಲ ನಾನಾ ಸಂದರ್ಭಗಳಲ್ಲಿ ಕೋಟ್ಯಾಂತರ ರೂಪಾಯಿಯ ಹಗರಣಗಳು, ನಕಲಿ ಕಂಪನಿಗಳ ಸ್ಥಾಪನೆ, ತೆರಿಗೆ ವಂಚನೆ ಮತ್ತು ತೆರಿಗೆ ದ್ರೋಹದಂತಹ ಘಟನೆಗಳು ನಡೆಯುತ್ತಿದ್ದವು ಎಂದು ಅವರು ಹೇಳಿದರು. 

ದೇಶ 2014ರಲ್ಲಿ ಬದಲಾವಣೆಯನ್ನು ತರಲು ಹಾಗೂ ಹೊಸ ದಿಕ್ಕಿನತ್ತ ಸಾಗಲು ನಿರ್ಧರಿಸಿತು. ಆ ವಾತಾವರಣ ಬದಲಾಯಿಸುವ ಬಹುದೊಡ್ಡ ಸವಾಲು ಸರ್ಕಾರಕ್ಕೆ ಎದುರಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ಸುಪ್ರೀಂಕೋರ್ಟ್ ನ ನಿರ್ದೇಶನಗಳ ಹೊರತಾಗಿಯೂ ಕಪ್ಪು ಹಣದ ವಿರುದ್ಧ ಸಮಿತಿಯನ್ನು ರಚಿಸುವುದು ತೂಗುಯ್ಯಾಲೆಯಲ್ಲಿತ್ತು ಎಂದು ಅವರು ಹೇಳಿದರು. ತಮ್ಮ ಸರ್ಕಾರ ರಚನೆಯಾದ ಕೂಡಲೇ ಸಮಿತಿಯನ್ನು ರಚಿಸಲಾಯಿತು. ಇದು ಭ್ರಷ್ಟಾಚಾರದ ವಿರುದ್ಧ ಸರ್ಕಾರದ ಬದ್ಧತೆಯನ್ನು ತೋರುತ್ತದೆ ಎಂದರು. 2014ರಿಂದೀಚೆಗೆ ದೇಶದಲ್ಲಿ ಬ್ಯಾಂಕಿಂಗ್ ವಲಯ, ಆರೋಗ್ಯ ವಲಯ, ಶಿಕ್ಷಣ ವಲಯ, ಕಾರ್ಮಿಕ ಮತ್ತು ಕೃಷಿ ವಲಯ ಸೇರಿದಂತೆ ಹಲವು ವಲಯಗಳಲ್ಲಿ ಸುಧಾರಣೆಗಳನ್ನು ಕಾಣುತ್ತಿದೆ ಎಂದರು. ಆ ಸುಧಾರಣೆಗಳನ್ನು ಆಧರಿಸಿ ರಾಷ್ಟ್ರ ತನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ಆತ್ಮನಿರ್ಭರ ಭಾರತ ಅಭಿಯಾನ ಯಶಸ್ವಿ ನಿಟ್ಟಿನಲ್ಲಿ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು. ಭಾರತ ಇಂದು ಜಗತ್ತಿನ ಮುಂಚೂಣಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಮಂತ್ರಿ ವಿವರಿಸಿದರು. 

ಆಡಳಿತ ವ್ಯವಸ್ಥೆ ಪಾರದರ್ಶಕವಾಗಿರಬೇಕು, ಉತ್ತರದಾಯಿತ್ವ ಹೊಂದಿರಬೇಕು, ಹೊಣೆಗಾರಿಕೆಯಿರಬೇಕು ಮತ್ತು ಸಾರ್ವಜನಿಕರಿಗೆ ಉತ್ತರ ನೀಡುವ ರೀತಿಯಲ್ಲಿರಬೇಕು ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. ಇದಕ್ಕೆಲ್ಲಾ ಅತಿದೊಡ್ಡ ಶತೃ ಎಂದರೆ ಯಾವುದೇ ಬಗೆಯ ಭ್ರಷ್ಟಾಚಾರ ಎಂದವರು ಹೇಳಿದರು. ಒಂದು ಕಡೆ ಭ್ರಷ್ಟಾಚಾರ ದೇಶದ ಅಭಿವೃದ್ಧಿಯನ್ನು ಕುಂಠಿತಗೊಳಿಸುತ್ತಿದೆ, ಮತ್ತೊಂದೆಡೆ ಅದು ಸಾಮಾಜಿಕ ಸಮತೋಲನವನ್ನು ನಾಶಗೊಳಿಸುತ್ತಿರುವುದೇ ಅಲ್ಲದೆ, ವ್ಯವಸ್ಥೆಯಲ್ಲಿ ಜನಸಾಮಾನ್ಯರು ಇಟ್ಟಿರುವ ವಿಶ್ವಾಸವನ್ನು ನಾಶಮಾಡುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ ಭ್ರಷ್ಟಾಚಾರ ನಿಗ್ರಹ ಕೇವಲ ಒಂದು ಸಂಸ್ಥೆ ಅಥವಾ ಏಜೆನ್ಸಿಯ ಹೊಣೆಗಾರಿಕೆಯಲ್ಲ, ಅದು ಸಾಮೂಹಿಕ ಹೊಣೆಗಾರಿಕೆಯಾಗಬೇಕು ಎಂದು ಅವರು ಹೇಳಿದರು. ಭ್ರಷ್ಟಾಚಾರವನ್ನು ಒಂದೇ ಬಗೆಯ ಧೋರಣೆಯಲ್ಲಿ ಹತ್ತಿಕ್ಕಲಾಗದು ಎಂದು ಹೇಳಿದರು. 

ದೇಶದ ಪ್ರಶ್ನೆ ಬಂದಾಗ ಜಾಗೃತದ ವ್ಯಾಪ್ತಿ ಸ್ವಲ್ಪ ದುಬಾರಿ ಎನಿಸುತ್ತದೆ. ಅದು ಭ್ರಷ್ಟಾಚಾರ, ಆರ್ಥಿಕ ಅಪರಾಧಗಳು, ಮಾದಕದ್ರವ್ಯ ಜಾಲ, ಹಣ ದುರ್ಬಳಕೆ, ಭಯೋತ್ಪಾದನೆಗೆ ಆರ್ಥಿಕ ನೆರವು ನೀಡುವುದರಲ್ಲೂ ಸೇರಿದ್ದು, ಇವೆಲ್ಲಾ ಒಂದಕ್ಕೊಂದು ಬೆಸೆದುಕೊಂಡಿವೆ ಎಂಬುದು ನಾವು ಆಗಾಗ್ಗೆ ನೋಡುತ್ತಿರುತ್ತೇವೆ ಎಂದರು.

ಆದ್ದರಿಂದ ವ್ಯವಸ್ಥಿತ ತಪಾಸಣೆ, ಪರಿಣಾಮಕಾರಿ ಲೆಕ್ಕ ಪರಿಶೋಧನೆ ಮತ್ತು ಸಾಮರ್ಥ್ಯವೃದ್ಧಿ ಹಾಗೂ ತರಬೇತಿ ಅಗತ್ಯವಿದ್ದು, ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಸಮಗ್ರ ಕಾರ್ಯತಂತ್ರ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಎಲ್ಲ ಸಂಸ್ಥೆಗಳು ಸಹಕಾರಿ ಮನೋಭಾವದಿಂದ ಸಮನ್ವಯತೆಯಿಂದ ಒಗ್ಗೂಡಿ ಕೆಲಸ ಮಾಡುವುದಕ್ಕೆ ಇದು ಸಕಾಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು.  

ಭಾರತವನ್ನು ಜಾಗೃತ ಭಾರತ ಮತ್ತು ಸಮೃದ್ಧ ಭಾರತವನ್ನಾಗಿ ಮಾಡಲು ಹೊಸ ಮಾರ್ಗೋಪಾಯಗಳನ್ನು ಸೂಚಿಸಲು ಈ ಸಮಾವೇಶ ಅತ್ಯಂತ ಪರಿಣಾಮಕಾರಿ ವೇದಿಕೆಯಾಗಲಿದೆ ಎಂದು ಪ್ರಧಾನಮಂತ್ರಿ ಆಶಿಸಿದರು. 

2016ರ ಜಾಗೃತ ಅರಿವು ಕಾರ್ಯಕ್ರಮದ ವೇಳೆ ಬಡತನದ ವಿರುದ್ಧದ ಹೋರಾಡುತ್ತಿರುವ ನಮ್ಮ ರಾಷ್ಟ್ರದಲ್ಲಿ ಭ್ರಷ್ಟಾಚಾರಕ್ಕೆ ಕಿಂಚಿತ್ತೂ ಸ್ಥಳವಿಲ್ಲ ಎಂದು ಹೇಳಿದ್ದನ್ನು ಪ್ರಧಾನಮಂತ್ರಿ ನೆನಪು ಮಾಡಿಕೊಂಡರು. ದಶಕಗಳ ಕಾಲ ಬಡವರು ತಮಗೆ ನಿಜವಾಗಿಯೂ ಸಿಗಬೇಕಾಗಿದ್ದಂತಹ ಸೌಲಭ್ಯಗಳನ್ನು ಪಡೆಯಲಾಗುತ್ತಿರಲಿಲ್ಲ, ಆದರೆ ಇದೀಗ ಡಿಬಿಟಿ ಮೂಲಕ ಬಡವರು ನೇರವಾಗಿ ತಮ್ಮ ಸವಲತ್ತುಗಳನ್ನು ಪಡೆಯುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಡಿಬಿಟಿ ಒಂದರಿಂದಲೇ ಅಕ್ರಮ ಕೈಗಳಿಗೆ ಹೋಗುತ್ತಿದ್ದಂತಹ 1.7 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಉಳಿತಾಯ ಮಾಡಲಾಗಿದೆ ಎಂದು ಅವರು ಹೇಳಿದರು. 

ಸರ್ಕಾರಿ ಸಂಸ್ಥೆಗಳ ಬಗ್ಗೆ ಜನಸಾಮಾನ್ಯರಲ್ಲಿದ್ದ ವಿಶ್ವಾಸ ಮತ್ತೆ ಪುನರ್ ಸ್ಥಾಪನೆಯಾಗಿದೆ ಎಂದು ಪ್ರಧಾನಮಂತ್ರಿ ಅವರು ತೃಪ್ತಿ ವ್ಯಕ್ತಪಡಿಸಿದರು. 

ಸರ್ಕಾರದಿಂದ ಯಾವುದೇ ಬಲವಾದ ಹಸ್ತಕ್ಷೇಪ ಇರುವುದಿಲ್ಲ ಮತ್ತು ಸರ್ಕಾರದ ಗೈರು ಹಾಜರಿಯೂ ಇರುವುದಿಲ್ಲ. ಸರ್ಕಾರದ ಪಾತ್ರ ಎಷ್ಟು ಅಗತ್ಯವೋ ಅಷ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸರ್ಕಾರ ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತದೆ ಅಥವಾ ಅಗತ್ಯಬಿದ್ದಾಗ ಸರ್ಕಾರ ಕಾರ್ಯೋನ್ಮುಖವಾಗುವುದಿಲ್ಲ ಎಂಬ ಭಾವನೆ ಜನರಲ್ಲಿ ಬರಬಾರದು ಎಂದರು. 

ಕಳೆದ ಕೆಲವು ವರ್ಷಗಳಿಂದೀಚೆಗೆ 1500ಕ್ಕೂ ಅಧಿಕ ಕಾನೂನುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಹಲವು ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ  ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು. ಪಿಂಚಣಿ, ವಿದ್ಯಾರ್ಥಿವೇತನ, ಪಾಸ್ ಪೋರ್ಟ್, ನವೋದ್ಯಮ ಇತ್ಯಾದಿ ಹಲವು ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆನ್ ಲೈನ್ ಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ಆಗುತ್ತಿದ್ದ ತೊಂದರೆಗಳನ್ನು ತಗ್ಗಿಸಲಾಗಿದೆ ಎಂದು ಅವರು ಹೇಳಿದರು. 

ಪ್ರಧಾನಮಂತ್ರಿ ಅವರು “'प्रक्षालनाद्धि पंकस्य, दूरात् स्पर्शनम् वरम्'।” ಹೇಳಿಕೆ ಉಲ್ಲೇಖಿಸಿದರು. ಅದರರ್ಥ, “ಕೊಳೆ ಮಾಡಿಕೊಂಡು ನಂತರ ಅದನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುವ ಬದಲು ಕೊಳಕು ಮಾಡಿಕೊಳ್ಳದಿರುವುದೇ ಉತ್ತಮ” ಎಂಬುದು.. 

ಅದೇ ರೀತಿ ದಂಡನಾ ಜಾಗೃತಿಗಿಂತ ಮುನ್ನೆಚ್ಚರಿಕೆಯ ವಿಚಕ್ಷಣೆ ಒಳ್ಳೆಯದು ಎಂದು ಅವರು ಹೇಳಿದರು. ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುವಂತಹ ಎಲ್ಲ ಸಂದರ್ಭಗಳನ್ನು ತೊಡೆದು ಹಾಕುವ ಅಗತ್ಯವಿದೆ ಎಂದು ಅವರು ಕರೆ ನೀಡಿದರು. 

ಕೌಟಿಲ್ಯನ ಹೇಳಿಕೆಯನ್ನು ಅವರು ಉಲ್ಲೇಖಿಸಿ “न भक्षयन्ति ये त्वर्थान् न्यायतो वर्धयन्ति च । नित्याधिकाराः कार्यास्ते राज्ञः प्रियहिते रताः ॥”  ಎಂದರು. ಅದರ ಅರ್ಥ ಯಾರು ಸರ್ಕಾರದ ಹಣವನ್ನು ಸಾರ್ವಜನಿಕ ಒಳಿತಿಗಾಗಿ ವಿನಿಯೋಗಿಸಲು ಪ್ರಯತ್ನಿಸುತ್ತಾರೋ ಅಂತಹವರನ್ನು ರಾಜ್ಯದ ಹಿತದೃಷ್ಟಿಯಿಂದ ಪ್ರಮುಖ ಸ್ಥಾನಗಳಿಗೆ ನೇಮಕ ಮಾಡಬೇಕು ಎಂಬುದು.

ಹಿಂದೆ ವರ್ಗಾವಣೆ ಮತ್ತು ಹುದ್ದೆಗಳ ನಿಯೋಜನೆಗೆ ಉದ್ಯಮದಲ್ಲಿ ಲಾಬಿ ಮಾಡುವ ಒಂದು  ಮಾಫಿಯಾ ಉದ್ಯಮವಿತ್ತು. ಇದೀಗ ಸರ್ಕಾರ ಹಲವು ನೀತಿ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಅದರ ಪರಿಣಾಮ ಪರಿಸ್ಥಿತಿಯಲ್ಲಿ ಬದಲಾಗಿದೆ. ಉನ್ನತ ಹುದ್ದೆಗಳನ್ನು ಪಡೆಯಲು ಮಾಡುತ್ತಿದ್ದ ಲಾಬಿ ಅಂತ್ಯವಾಗಿದೆ. ಸರ್ಕಾರ ಬಿ ಮತ್ತು ಸಿ ಗುಂಪಿನ ವಿದ್ಯಾರ್ಥಿಗಳಿಗೆ ಸಂದರ್ಶನಗಳನ್ನು ರದ್ದುಮಾಡಿದೆ. ಬ್ಯಾಂಕ್ ಬೋರ್ಡ್ ಬ್ಯೂರೋ ಸ್ಥಾಪನೆಯಿಂದಾಗಿ ಬ್ಯಾಂಕ್ ನ ಉನ್ನತ ಸ್ಥಾನಗಳ ನೇಮಕಾತಿಯಲ್ಲಿ ಪಾರದರ್ಶಕತೆ ಬಂದಿದೆ ಎಂದು ಅವರು ಹೇಳಿದರು. 

ಹಲವು ಕಾನೂನು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಮತ್ತು ದೇಶದಲ್ಲಿ ಜಾಗೃತ ವ್ಯವಸ್ಥೆಯ ಬಲವರ್ಧನೆಗೆ ಹೊಸ ಕಾನೂನುಗಳನ್ನು ಜಾರಿಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ಕಪ್ಪುಹಣ, ಬೇನಾಮಿ ಆಸ್ತಿಗಳು, ಗಂಭೀರ ಆರ್ಥಿಕ ಅಪರಾಧಗಳ ನಿಯಂತ್ರಣ ಕಾಯ್ದೆ  ಸೇರಿ ಜಾಗೃತ ವ್ಯವಸ್ಥೆಯನ್ನು ಬಲವರ್ಧನೆಗೊಳಿಸಲು ಹೊಸ ಕಾನೂನು ಜಾರಿಗೊಳಿಸಿರುವುದನ್ನು ಅವರು ಉಲ್ಲೇಖಿಸಿದರು. ಮುಖಾಮುಖಿರಹಿತ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತ ಭ್ರಷ್ಟಾಚಾರವನ್ನು ನಿಯಂತ್ರಿಸಲು ಹೆಚ್ಚು ಹೆಚ್ಚು ತಂತ್ರಜ್ಞಾನವನ್ನು ಬಳಕೆ ಮಾಡುತ್ತಿರುವ ಕೆಲವು ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಒಂದಾಗಿದೆ ಎಂದು ಅವರು ಹೇಳಿದರು. ಉತ್ತಮ ತಂತ್ರಜ್ಞಾನ, ಸಾಮರ್ಥ್ಯವೃದ್ಧಿ, ಆಧುನಿಕ ಮೂಲಸೌಕರ್ಯ ಒದಗಿಸುವುದು ಸರ್ಕಾರದ ಆದ್ಯತೆಗಳಾಗಿವೆ ಎಂದ ಅವರು, ಜಾಗೃತಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಸಜ್ಜುಗೊಳಿಸುವ ಮೂಲಕ ಅವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಮತ್ತು ಉತ್ತಮ ಫಲಿತಾಂಶಗಳನ್ನು ನೀಡುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. 

ಭ್ರಷ್ಟಾಚಾರದ ವಿರುದ್ಧದ ಈ ಅಭಿಯಾನ ಒಂದು ದಿನದ್ದಲ್ಲ, ಅಥವಾ ಕೇವಲ ಒಂದು ವಾರದ್ದೂ ಅಲ್ಲ ಎಂದು ಪ್ರಧಾನಮಂತ್ರಿ ಪ್ರತಿಪಾದಿಸಿದರು. 

ಹಲವು ಪೀಳಿಗೆಗಳಿಂದಲೂ ಭ್ರಷ್ಟಾಚಾರ ಒಂದು ಬೃಹತ್ ಸವಾಲಾಗಿದ್ದು, ಹಿಂದಿನ ದಶಕಗಳಲ್ಲಿ ಅದು ಕ್ರಮೇಣ ಬೆಳೆದಿತ್ತು ಮತ್ತು ಅದು ದೇಶದಲ್ಲಿ ಆಳವಾಗಿ ಬೇರೂರಿತ್ತು. ಒಂದು ಪೀಳಿಗೆಯಿಂದ   ಭ್ರಷ್ಟಾಚಾರ, ಮತ್ತೊಂದು ಪೀಳಿಗೆಗೆ ವರ್ಗಾವಣೆಯಾಗುತ್ತಾ ಬಂದಿದೆ ಎಂದು ಅವರು ಹೇಳಿದರು. ಭ್ರಷ್ಟ ಜನರ ಒಂದು ಪೀಳಿಗೆಗೆ ಸೂಕ್ತ ಶಿಕ್ಷೆಯಾಗದಿದ್ದರೆ ನಂತರ ಎರಡನೇ ಪೀಳಿಗೆಯೂ ಸಹ ಅದೇ ಭ್ರಷ್ಟಾಚಾರವನ್ನು ಇನ್ನಷ್ಟು ಧೈರ್ಯದಿಂದ ಮುಂದುವರಿಸುತ್ತದೆ ಎಂದು ಅವರು ಹೇಳಿದರು. ಇದರಿಂದಾಗಿ ಹಲವು ರಾಜ್ಯಗಳಲ್ಲಿ ಇದು ರಾಜಕೀಯ ಪರಂಪರೆಯ ಭಾಗವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು. ಈ ಭ್ರಷ್ಟಾಚಾರ ಮತ್ತು ಭ್ರಷ್ಟಾಚಾರದ ಸಾಮ್ರಾಜ್ಯ ಪೀಳಿಗೆಯಿಂದ ಪೀಳಿಗೆಗೆ ಸಾಗಿ, ದೇಶವನ್ನು ಟೊಳ್ಳು ಮಾಡಿವೆ ಎಂದು ಅವರು ಹೇಳಿದರು. ಈ ಪರಿಸ್ಥಿತಿ ದೇಶದ ಅಭಿವೃದ್ಧಿ, ಸಮೃದ್ಧ ಭಾರತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ದೊಡ್ಡ ಅಡ್ಡಿಯಾಗಿದೆ ಎಂದ ಅವರು ಹೇಳಿದರು. ಈ ವಿಷಯ ಕೂಡ ರಾಷ್ಟ್ರೀಯ ಸಮಾವೇಶದಲ್ಲಿ ಚರ್ಚೆಯಾಗಬೇಕು ಎಂದು ಅವರು ಆಶಿಸಿದರು. 

ಭ್ರಷ್ಟಾಚಾರ ಸಂಬಂಧಿ ಸುದ್ದಿಗಳಿಗೆ ಹೆಚ್ಚಿನ ಗಮನಹರಿಸುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಕರೆ ನೀಡಿದರು. ಭ್ರಷ್ಟಾಚಾರದ ವಿರುದ್ಧ ಸಕಾಲಿಕವಾಗಿ ಕಠಿಣ ಕ್ರಮಗಳನ್ನು ಕೈಗೊಂಡ ಉದಾಹರಣೆಗಳನ್ನು ಮಾಧ್ಯಮಗಳು ತೋರಿಸಿದಾಗ ಜನರಿಗೆ ವಿಶ್ವಾಸ ಹೆಚ್ಚುತ್ತದೆ ಮತ್ತು ಭ್ರಷ್ಟಾಚಾರಿಗಳಿಗೆ ತಾವು ತಪ್ಪಿಸಿಕೊಳ್ಳುವುದು ಕಷ್ಟಕರ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಅವರು ಹೇಳಿದರು.

ಭ್ರಷ್ಟಾಚಾರವನ್ನು ಸೋಲಿಸಿದರೆ ದೇಶ ತನ್ನಿಂತಾನೆ ಬಲವರ್ಧನೆಯಾಗುತ್ತದೆ ಎಂದ ಅವರು, ಆ ಮೂಲಕ ಸರ್ದಾರ್ ಪಟೇಲ್ ಅವರ ಭಾರತವನ್ನು ಸಮೃದ್ಧ ಮತ್ತು ಸ್ವಾವಲಂಬಿಯನ್ನಾಗಿ ಮಾಡುವ ಕನಸನ್ನು ನನಸು ಮಾಡಬೇಕಿದೆ ಎಂದು ಅವರು ಹೇಳಿದರು. 

ಕೇಂದ್ರೀಯ ಅಪರಾಧ ತನಿಖಾ ಸಂಸ್ಥೆ,  ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದೆ. ಅದು ಅಕ್ಟೋಬರ್ 27ರಿಂದ ನವೆಂಬರ್ 2ರ ವರೆಗೆ ಪ್ರತಿ ವರ್ಷ ಜಾಗೃತ ಅರಿವು ಸಪ್ತಾಹವನ್ನು ಆಯೋಜಿಸುತ್ತದೆ. ಈ ಸಮಾವೇಶದಲ್ಲಿ ಜಾಗೃತಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಅರಿವು ಮೂಡಿಸಲು ಹೆಚ್ಚಿನ ಒತ್ತು ನೀಡುವ ಗುರಿ ಹೊಂದಲಾಗಿದೆ ಮತ್ತು ನಾಗರಿಕರ ಸಹಭಾಗಿತ್ವದ ಮೂಲಕ ಸಾರ್ವಜನಿಕ ಜೀವನದಲ್ಲಿರುವವರಲ್ಲಿ ದಕ್ಷತೆ ಹಾಗೂ ಪ್ರಾಮಾಣಿಕತೆ ಉತ್ತೇಜಿಸುವ ಭಾರತದ ಬದ್ಧತೆಯನ್ನು ಪುನರುಚ್ಛರಿಸಲಾಗುವುದು.

ಮೂರು ದಿನಗಳ ಈ ಸಮಾವೇಶದಲ್ಲಿ, ವಿದೇಶಗಳ ವ್ಯಾಪ್ತಿಯಲ್ಲಿ ತನಿಖೆಯಲ್ಲಿ ಎದುರಾಗುವ ಸವಾಲುಗಳು; ಭ್ರಷ್ಟಾಚಾರದ ವಿರುದ್ಧ ವ್ಯವಸ್ಥಿತ ರೀತಿಯಲ್ಲಿ ನಿಗಾ ಇಡಲು ಮುನ್ನೆಚ್ಚರಿಕೆ ಜಾಗೃತಗೊಳಿಸುವುದು; ಬ್ಯಾಂಕ್ ವಂಚನೆಗಳ ನಿಯಂತ್ರಣ ಮತ್ತು ಹಣಕಾಸು ಸೇರ್ಪಡೆಗಳಲ್ಲಿ ವ್ಯವಸ್ಥಿತ ಸುಧಾರಣೆಗಳು; ಪ್ರಗತಿಯ ಶಕ್ತಿಯಾಗಿ ಪರಿಣಾಮಕಾರಿ ಲೆಕ್ಕ ಪರಿಶೋಧನೆ ನಡೆಸುವುದು; ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ಕಾಯಿದೆಗೆ ಮಾಡಿರುವ ತಿದ್ದುಪಡಿಗಳನ್ನು ಬಳಸಿಕೊಳ್ಳುವುದು; ಸಾಮರ್ಥ್ಯ ವೃದ್ಧಿ ಮತ್ತು ತರಬೇತಿ; ಕ್ಷಿಪ್ರ ಮತ್ತು ಅತ್ಯಂತ ಹೆಚ್ಚು ಪರಿಣಾಮಕಾರಿ ತನಿಖೆಗೆ ಬಹು ಸಂಸ್ಥೆಗಳ ನಡುವೆ ಉತ್ತಮ ಸಮನ್ವಯತೆ ಸಾಧಿಸುವುದು; ಆರ್ಥಿಕ ಅಪರಾಧಗಳಲ್ಲಿನ ಹೊಸ ಬೆಳವಣಿಗೆಗಳು; ಸೈಬರ್ ಅಪರಾಧಗಳು ಮತ್ತು ಅಪರಾಧ ತನಿಖಾ ಏಜೆನ್ಸಿಗಳ ನಡುವೆ ದೇಶದ ವಿರುದ್ಧದ ಅಪರಾಧ ಕೃತ್ಯಗಳನ್ನು ಹತ್ತಿಕ್ಕುವ ಕ್ರಮಗಳ ನಿಯಂತ್ರಣ ಮತ್ತು ಉತ್ತಮ ಪದ್ಧತಿಗಳ ವಿನಿಮಯ ಮತ್ತಿತರ ವಿಚಾರಗಳ ಬಗ್ಗೆ ಚರ್ಚೆ ನಡೆಸಲಾಗುವುದು.

ಈ ಸಮಾವೇಶ ನೀತಿ ನಿರೂಪಕರು ಮತ್ತು ಅವುಗಳನ್ನು ಪಾಲನೆ ಮಾಡುವವರನ್ನು ಒಂದೇ ವೇದಿಕೆಗೆ ತರಲಿದೆ ಮತ್ತು ವ್ಯವಸ್ಥಿತ ಸುಧಾರಣೆಗಳು ಮತ್ತು ಮುನ್ನೆಚ್ಚರಿಕೆಯ ಜಾಗೃತ ಕ್ರಮಗಳ ಮೂಲಕ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಕ್ರಿಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಆ ಮೂಲಕ ಉತ್ತಮ ಆಡಳಿತ ಮತ್ತು ಜವಾಬ್ದಾರಿಯುತ ಆಡಳಿತವನ್ನು ಒದಗಿಸುವುದಾಗಿದೆ. ಭಾರತದಲ್ಲಿ ವ್ಯಾಪಾರಕ್ಕೆ ಉತ್ತಮ ವಾತಾವರಣ ನಿರ್ಮಿಸುವಲ್ಲಿ ಇದು ಅತ್ಯಂತ ಮಹತ್ವದ ಕೊಡುಗೆಯ ಅಂಶವಾಗಿದೆ.

ಭ್ರಷ್ಟಾಚಾರ ವಿರೋಧಿ ಘಟಕಗಳು, ಜಾಗೃತ ದಳಗಳು,ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಆರ್ಥಿಕ ಅಪರಾಧ ಘಟಕಗಳು/ಸಿಐಡಿ ಮುಖ್ಯಸ್ಥರು, ಸಿವಿಒಗಳು, ಸಿಬಿಐ ಅಧಿಕಾರಿಗಳು ಮತ್ತು ಕೇಂದ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮುಖ್ಯ ಕಾರ್ಯದರ್ಶಿಗಳು ಮತ್ತು ಡಿಜಿಪಿಗಳು ಪಾಲ್ಗೊಂಡಿದ್ದಾರೆ.

***



(Release ID: 1667993) Visitor Counter : 473