ಸಿಬ್ಬಂದಿ, ಸಾರ್ವಜನಿಕ ಅಹವಾಲು ಮತ್ತು ಪಿಂಚಣಿ ಸಚಿವಾಲಯ

ಕೇಂದ್ರ ಸರ್ಕಾರದ ಉದ್ಯೋಗಿಗಳ ಚೈಲ್ಡ್ ಕೇರ್ ಲೀವ್ (ಸಿ ಸಿ ಎಲ್)ಗೆ ಸಂಬಂಧಿಸಿದಂತೆ ಡಿಓಪಿಟಿ ಸುಧಾರಣೆ

Posted On: 26 OCT 2020 7:11PM by PIB Bengaluru

ಕೇಂದ್ರ ಸರ್ಕಾರದ ಪುರುಷ ನೌಕರರು ಸಹ ಮಕ್ಕಳ ಆರೈಕೆ ರಜೆಗೆ ಅರ್ಹರಾಗಿರುತ್ತಾರೆ. ಆದರೆ, ಈ ಮಕ್ಕಳ ಆರೈಕೆ ರಜೆ (ಸಿಸಿಎಲ್)ಯ ಅವಕಾಶ ಮತ್ತು ಸವಲತ್ತು “ಏಕ ಪುರುಷ ಪೋಷಕರು” ಉದ್ಯೋಗಿಗಳಿಗೆ ಮಾತ್ರ ಲಭ್ಯವಿರುತ್ತದೆ, ಇದರಲ್ಲಿ ಪತ್ನಿವಿಯೋಗ ಅಥವಾ ವಿಚ್ಛೇದಿತರು ಅಥವಾ ಅವಿವಾಹಿತರೂ ಸೇರುತ್ತಾರೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಪಿಂಚಣಿ, ಖಾತೆ ರಾಜ್ಯ ಸಚಿವ ಡಾ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.

ಸಿಬ್ಬಂದಿ ಮತ್ತು ತರಬೇತಿ (ಡಿಓಪಿಟಿ) ತಂದಿರುವ ಪ್ರಮುಖ ಸುಧಾರಣೆಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರ ನೀಡಿದ ಅವರು, ಇದರಿಂದ ಏಕ ಪೋಷಕರು ತಮ್ಮ ಮಕ್ಕಳ ಆರೈಕೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಬಹುದಾಗಿರುತ್ತದೆ ಎಂದರು.

ಸರ್ಕಾರಿ ನೌಕರರಿಗೆ ಜೀವನ ಸುಗಮವಾಗಿಸುವ ಇದು ಮಹತ್ವದ ಮತ್ತು ಪ್ರಗತಿಪರ ಸುಧಾರಣೆ ಎಂದು ವಿವರಿಸಿದ ಡಾ.ಜಿತೇಂದ್ರ ಸಿಂಗ್, ಈ ಬಗ್ಗೆ ಈ ಹಿಂದೆಯೇ ಆದೇಶ ಜಾರಿಗೊಂಡಿದ್ದರು ಅದು ಕಾರ್ಯರೂಪಗೊಂಡಿರಲಿಲ್ಲ ಎಂದರು.

ಈ ನಿಬಂಧನೆಗೆ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ಮಕ್ಕಳ ಆರೈಕೆ ರಜೆ ಪಡೆದ ನೌಕರರು ಈಗ ಸೂಕ್ತ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ಕೇಂದ್ರ ಸ್ಥಾನದಿಂದ ಹೊರಗೆ ಹೋಗಬಹುದು ಎಂದು ಡಾ. ಜಿತೇಂದ್ರ ಸಿಂಗ್ ಅವರು ಮಾಹಿತಿ ನೀಡಿದರು. ಇದರ ಜೊತೆಗೆ, ನೌಕರರು ಮಕ್ಕಳ ಆರೈಕೆ ರಜೆಯಲ್ಲಿದ್ದರೂ ಸಹ ರಜೆಸಹಿತ ಪ್ರಯಾಣದ ರಿಯಾಯಿತಿ (ಎಲ್‌.ಟಿಸಿ) ಪಡೆಯಬಹುದು. ಹೆಚ್ಚಿನ ವಿವರ ನೀಡಿದ ಅವರು, ಮಕ್ಕಳ ಆರೈಕೆ ರಜೆಯನ್ನು ಶೇ.100ರಷ್ಟು ರಜೆ ವೇತನದೊಂದಿಗೆ ಮೊದಲ 365 ದಿನಗಳ ಕಾಲಕ್ಕೆ ಮತ್ತು ಮುಂದಿನ 365 ದಿನಗಳವರೆಗೆ ಶೇ. 80 ರಜೆ ವೇತನದೊಂದಿಗೆ ನೀಡಬಹುದಾಗಿದೆ ಎಂದು ತಿಳಿಸಿದರು.

ಕೆಲವು ಕಾಲದ ಸಂಗ್ರಹಿತ ಮಾಹಿತಿ ಆಧಾರದ ಮೇಲೆ, ಈ ನಿಟ್ಟಿನಲ್ಲಿ ಪರಿಚಯಿಸಲಾಗಿರುವ ಮತ್ತೊಂದು ಕಲ್ಯಾಣ ಕ್ರಮವೆಂದರೆ, ದಿವ್ಯಾಂಗ ಮಗುವಿನ ಸಂದರ್ಭದಲ್ಲಿ, ಮಗುವಿಗೆ 22 ವರ್ಷ ವಯಸ್ಸು ಆಗುವವರೆಗೆ ಮಕ್ಕಳ ಆರೈಕೆ ರಜೆ ಪಡೆಯುವ ಅವಕಾಶವನ್ನು ತೆಗೆದುಹಾಕಿದ್ದು, ಈಗ ಯಾವುದೇ ವಯಸ್ಸಿನವರೆಗೆ ದಿವ್ಯಾಂಗ ಮಗುವಿಗಾಗಿ ಸರ್ಕಾರಿ ನೌಕರರು ಮಕ್ಕಳ ಆರೈಕೆ ರಜೆ ಪಡೆಯಬಹುದಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ತಿಳಿಸಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವೈಯಕ್ತಿಕ ಮಧ್ಯಸ್ಥಿಕೆ ಮತ್ತು ಆಡಳಿತ ಸುಧಾರಣೆ ಕುರಿತು ಅವರು ನೀಡುತ್ತಿರುವ ವಿಶೇಷ ಒತ್ತಿನಿಂದಾಗಿ, ಕಳೆದ ಆರು ವರ್ಷಗಳಲ್ಲಿ ಡಿಒಪಿಟಿಯಲ್ಲಿ ಹಲವಾರು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ ಎಂದು ಡಾ.ಜಿತೇಂದ್ರ ಸಿಂಗ್ ತಿಳಿಸಿದರು. ಈ ಎಲ್ಲ ನಿರ್ಧಾರಗಳ ಹಿಂದಿನ ಮೂಲ ಉದ್ದೇಶ ಸರ್ಕಾರಿ ನೌಕರರು ತಮ್ಮ ಸಾಮರ್ಥ್ಯಕ್ಕೆ ಗರಿಷ್ಠ ಕೊಡುಗೆ ನೀಡಲು ಅನುವು ಮಾಡಿಕೊಡುವುದಾಗಿದೆ, ಅದೇ ವೇಳೆ ಭ್ರಷ್ಟಾಚಾರ ಅಥವಾ ಕಾರ್ಯಕ್ಷಮತೆಯ ಬಗ್ಗೆ ಯಾವುದೇ ಮೃದು ಧೋರಣೆ ಅಥವಾ ಸಹಿಷ್ಣುತೆ ಇರುವುದಿಲ್ಲ ಎಂದು ಅವರು ಹೇಳಿದರು.

<><><>


(Release ID: 1667672) Visitor Counter : 315