ಪ್ರಧಾನ ಮಂತ್ರಿಯವರ ಕಛೇರಿ

ಗುಜರಾತಿನ ಮೂರು ಪ್ರಮುಖ ಯೋಜನೆಗಳಿಗೆ ಪ್ರಧಾನ ಮಂತ್ರಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿ ಮಾಡಿದ ಭಾಷಣ


Posted On: 24 OCT 2020 1:53PM by PIB Bengaluru

ನಮಸ್ಕಾರ !.

ಗುಜರಾತಿನ ಮುಖ್ಯಮಂತ್ರಿ ಶ್ರೀ ವಿಜಯ ರೂಪಾನಿ ಜೀ, ಉಪ ಮುಖ್ಯಮಂತ್ರಿ ಶ್ರೀ ನಿತಿನ್ ಪಟೇಲ್ ಜೀ, ಗುಜರಾತಿನ ಬಿ.ಜೆ.ಪಿ. ಪ್ರದೇಶ ಅಧ್ಯಕ್ಷರು ಮತ್ತು ಸಂಸತ್ ಸದಸ್ಯ, ಶ್ರೀ ಸಿ.ಆರ್. ಪಾಟೀಲ್ ಜೀ, ಇತರ ಸಚಿವರೇ, ಸಂಸತ್ ಸದಸ್ಯರೇ, ಶಾಸಕರೇ, ನನ್ನ ರೈತ ಮಿತ್ರರೇ ಮತ್ತು ಗುಜರಾತಿನ ಎಲ್ಲಾ ಸಹೋದರರೇ ಮತ್ತು ಸಹೋದರಿಯರೇ !.

ಗುಜರಾತಿನ ಅಭಿವೃದ್ಧಿಗೆ ಸಂಬಂಧಿಸಿದ ಮೂರು ಮುಖ್ಯ ಯೋಜನೆಗಳನ್ನು ಇಂದು ಅಂಬೆ ತಾಯಿಯ ಆಶೀರ್ವಾದದೊಂದಿಗೆ ಉದ್ಘಾಟಿಸಲಾಗುತ್ತಿದೆ. ಗುಜರಾತ್ ಇಂದು ಕಿಸಾನ್ ಸೂರ್ಯೋದಯ್ ಯೋಜನಾ, ಗಿರ್ನಾರ್ ರೋಪ್ ವೇ ಮತ್ತು ದೇಶದ ಅತ್ಯಂತ ದೊಡ್ಡ ಮತ್ತು ಅತ್ಯಾಧುನಿಕ ಹೃದಯ ಚಿಕಿತ್ಸಾ ಆಸ್ಪತ್ರೆಯನ್ನು ಪಡೆಯುತ್ತಿದೆ. ಈ ಎಲ್ಲಾ ಮೂರು ಯೋಜನೆಗಳು ಗುಜರಾತಿನ ಆರೋಗ್ಯ , ಅರ್ಪಣಾಭಾವ ಮತ್ತು ಶಕ್ತಿಯ ಸಂಕೇತಗಳಾಗಿವೆ. ಈ ಎಲ್ಲಾ ಯೋಜನೆಗಳಿಗಾಗಿ ಗುಜರಾತಿನ ಜನತೆಗೆ ಬಹಳ ಬಹಳ ಅಭಿನಂದನೆಗಳು.

ಸಹೋದರರೇ ಮತ್ತು ಸಹೋದರಿಯರೇ, ಗುಜರಾತ್ ಸದಾ ಅಸಾಮಾನ್ಯ ಶಕ್ತಿಯುಳ್ಳ ಜನತೆಯ ನಾಡು. ಗುಜರಾತಿನ ಹಲವು ಪುತ್ರರು, ಪೂಜ್ಯ ಬಾಪು ಮತ್ತು ಸರ್ದಾರ್ ಪಟೇಲ್ ಅವರು ದೇಶಕ್ಕೆ ಸಾಮಾಜಿಕ ಮತ್ತು ಆರ್ಥಿಕ ನಾಯಕತ್ವವನ್ನು ಒದಗಿಸಿದವರು. ಗುಜರಾತ್ ಈಗ ಮತ್ತೆ ಕಿಸಾನ್ ಸೂರ್ಯೋದಯ್ ಯೋಜನಾ ಎಂಬ ಹೊಸ ಉಪಕ್ರಮವನ್ನು ಅಳವಡಿಸಿಕೊಳ್ಳುತ್ತಿರುವುದಕ್ಕೆ ನನಗೆ ಹರ್ಷವಿದೆ. ಕಿಸಾನ್ ಸೂರ್ಯೋದಯ್ ಯೋಜನಾ ಗುಜರಾತಿನ ರೈತರಿಗೆ ಸುಜಲಾಂ –ಸುಫಲಾಂ ಮತ್ತು ಸೌನಿ ಯೋಜನೆಗಳ ಬಳಿಕ ಇನ್ನೊಂದು ಮೈಲಿಗಲ್ಲಾಗಿ ಒದಗಿ ಬರಲಿದೆ.

 

ಕಿಸಾನ್ ಸೂರ್ಯೋದಯ ಯೋಜನಾ ಅಡಿಯಲ್ಲಿ ಗುಜರಾತಿನ ರೈತರ ಆವಶ್ಯಕತೆಗಳಿಗೆ ಗರಿಷ್ಟ ಆದ್ಯತೆಯನ್ನು ನೀಡಲಾಗಿದೆ. ಗುಜರಾತಿನಲ್ಲಿ ವರ್ಷಗಳಿಂದ ವಿದ್ಯುತ್ ಕ್ಷೇತ್ರದಲ್ಲಿ ನಡೆದಿರುವ ಕೆಲಸಗಳು ಈ ಯೋಜನೆಗೆ ಆಧಾರವಾಗಿವೆ. ಗುಜರಾತ್ ಗಂಬೀರ ಪ್ರಮಾಣದಲ್ಲಿ ವಿದ್ಯುತ್ ಕೊರತೆಯನ್ನು ಎದುರಿಸಬೇಕಾದ ಕಾಲವೊಂದಿತ್ತು. 24 ಗಂಟೆ ಕಾಲ ವಿದ್ಯುತ್ ಒದಗಿಸುವುದು ಗಂಭೀರ ಸಮಸ್ಯೆಯಾಗಿತ್ತು. ವಿದ್ಯಾರ್ಥಿಗಳ ಓದು, ರೈತರಿಗೆ ನೀರಾವರಿ, ಕೈಗಾರಿಕೆಗಳ ಆದಾಯ –ಈ ಎಲ್ಲದಕ್ಕೂ ತೊಂದರೆಗಳುಂಟಾಗಿದ್ದವು. ವಿದ್ಯುತ್ ಸಾಮರ್ಥ್ಯ ವರ್ಧನೆಗಾಗಿ ವಿದ್ಯುತ್ ಉತ್ಪಾದನೆಯಿಂದ ಹಿಡಿದು ಸರಬರಾಜಿನವರೆಗೆ ಆಂದೋಲನದೋಪಾದಿಯಲ್ಲಿ ಕೆಲಸ ಮಾಡಲಾಯಿತು.

ದಶಕದ ಹಿಂದೆಯೇ ಸಮಗ್ರ ಸೌರ ವಿದ್ಯುತ್ ನೀತಿಯನ್ನು ಹೊಂದಿದ್ದ ದೇಶದ ರಾಜ್ಯಗಳಲ್ಲಿ ಗುಜರಾತ್ ಮೊದಲನೆಯದಾಗಿತ್ತು. 2010ರಲ್ಲಿ ಪಟಾನ್ ನಲ್ಲಿ ಸೌರ ವಿದ್ಯುತ್ ಸ್ಥಾವರ ಉದ್ಘಾಟನೆಯಾದಾಗ , ಭಾರತವು ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ ಪಥವನ್ನು ವಿಶ್ವಕ್ಕೆ ತೋರಿಸಬಲ್ಲದು ಎಂಬುದನ್ನು ಯಾರೂ ಕಲ್ಪಿಸಿಕೊಂಡಿರಲಿಲ್ಲ. ಇಂದು ಭಾರತವು ಸೌರ ವಿದ್ಯುತ್ ಉತ್ಪಾದನೆ ಮತ್ತು ಬಳಕೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ. ಕಳೆದ ಆರು ವರ್ಷಗಳಲ್ಲಿ , ದೇಶವು ಸೌರ ವಿದ್ಯುತ್ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಐದನೇ ಸ್ಥಾನದಲ್ಲಿದೆ ಮತ್ತು ಅದು ದಾಪುಗಾಲುಗಳನ್ನಿಡುತ್ತಿದೆ.

ಸಹೋದರರೇ ಮತ್ತು ಸಹೋದರಿಯರೇ,

ಹಳ್ಳಿಗಳ ಬಗ್ಗೆ ಮತ್ತು ಕೃಷಿಯ ಬಗ್ಗೆ ಉತ್ತಮ ತಿಳುವಳಿಕೆ ಇಲ್ಲದವರು ರೈತರು ನೀರಾವರಿಗಾಗಿ ಹೆಚ್ಚಾಗಿ ರಾತ್ರಿ ವೇಳೆ ವಿದ್ಯುತ್ ಬಳಸುತ್ತಾರೆ ಎಂಬುದನ್ನು ತಿಳಿದಿರಲಿಲ್ಲ. ಇದರಿಂದಾಗಿ ರೈತರು ತಮ್ಮ ಹೊಲ ಗದ್ದೆಗಳಿಗೆ ನೀರುಣಿಸಲು ರಾತ್ರಿ ಇಡೀ ಜಾಗರಣೆ ಮಾಡಬೇಕಾಗುತ್ತಿತ್ತು. ಜುನಾಘರ್ ಮತ್ತು ಗಿರ್ ಸೋಮನಾಥ್ ಪ್ರದೇಶದಲ್ಲಿ ವನ್ಯಜೀವಿಗಳಿಂದ ಅಪಾಯ ಇತ್ತು. ಅಲ್ಲಿಂದ ಕಿಸಾನ್ ಸೂರ್ಯೋದಯ ಯೋಜನೆಯನ್ನು ಆರಂಭಿಸಲಾಗಿದೆ. ಆದುದರಿಂದ ಕಿಸಾನ್ ಸೂರ್ಯೋದಯ ಯೋಜನಾ ರಾಜ್ಯದ ರೈತರಿಗೆ ಭದ್ರತೆ ಮಾತ್ರ ಒದಗಿಸುವುದಲ್ಲ ಜೊತೆಗೆ ಅವರ ಬದುಕಿನಲ್ಲಿ ಹೊಸ ಸೂರ್ಯೋದಯವನ್ನೂ ತರಲಿದೆ. ರೈತರಿಗೆ ಮೂರು ಫೇಸ್ ವಿದ್ಯುತ್ ಪೂರೈಕೆಯನ್ನು ರಾತ್ರಿಗೆ ಬದಲು ಸೂರ್ಯೋದಯದಿಂದ ರಾತ್ರಿ 9 ಗಂಟೆಯವರೆಗೆ ಮಾಡುವ ಈ ಯೋಜನೆ ರೈತರಿಗೆ ಹೊಸ ಸೂರ್ಯೋದಯ.

ಇತರ ಹಾಲಿ ಇರುವ ಯಾವುದೇ ವ್ಯವಸ್ಥೆಯ ಮೇಲೆ ಪರಿಣಾಮ ಬೀರದಂತೆ , ಸಂಪೂರ್ಣ ಹೊಸ ಸರಬರಾಜು ಸಾಮರ್ಥ್ಯವನ್ನು ಸಿದ್ದಪಡಿಸುವ ಮೂಲಕ ಗುಜರಾತ್ ಸರಕಾರ ಈ ಕಾರ್ಯ ಸಾಧನೆಯನ್ನು ಮಾಡಿರುವುದಕ್ಕೆ ನಾನು ಸರಕಾರವನ್ನು ಅಭಿನಂದಿಸುತ್ತೇನೆ. ಈ ಯೋಜನೆ ಅಡಿಯಲ್ಲಿ , ಸುಮಾರು 3,500 ಸರ್ಕ್ಯೂಟ್ ಕಿಲೋಮೀಟರುಗಳಷ್ಟು ಸರಬರಾಜು ಮಾರ್ಗವನ್ನು ಇನ್ನು ಮುಂದಿನ 2-3 ವರ್ಷಗಳಲ್ಲಿ ನಿರ್ಮಿಸಲಾಗುವುದು. ಈ ಯೋಜನೆಯನ್ನು ಮುಂದಿನ ದಿನಗಳಲ್ಲಿ ಸಾವಿರಕ್ಕೂ ಅಧಿಕ ಹಳ್ಳಿಗಳಲ್ಲಿ ಅನುಷ್ಟಾನಿಸಲಾಗುವುದು ಎಂದು ನನಗೆ ತಿಳಿಸಲಾಗಿದೆ. ಬಹುತೇಕ ಹಳ್ಳಿಗಳು ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳಲ್ಲಿವೆ. ಯೋಜನೆ ಇಡೀ ಗುಜರಾತನ್ನು ವ್ಯಾಪಿಸಿದಾಗ , ಅದು ಲಕ್ಷಾಂತರ ಕೃಷಿಕರ ಬದುಕನ್ನು ಬದಲು ಮಾಡಲಿದೆ.

ಸ್ನೇಹಿತರೇ,

ನಾವು ಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡಲು ಸತತ ಪ್ರಯತ್ನಗಳನ್ನು ಮಾಡಬೇಕಿದೆ. ,ಅವರ ಹೂಡಿಕೆಯನ್ನು ಕಡಿಮೆ ಮಾಡಿ , ಬದಲಾದ ಪರಿಸ್ಥಿತಿಯಲ್ಲಿ ಅವರ ಕಷ್ಟಗಳನ್ನು ನಿವಾರಿಸಬೇಕಿದೆ. ದೇಶದ ಕೃಷಿ ವಲಯವನ್ನು ಬಲಪಡಿಸುವುದು, ಮತ್ತು ಒಂದೋ ರೈತರಿಗೆ ಅವರ ಉತ್ಪಾದನೆಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡುವಂತಹ ಮುಕ್ತ ಸ್ವಾತಂತ್ರ್ಯ ನೀಡಿ, ಅಥವಾ ಸಾವಿರಾರು ಕೃಷಿ ಉತ್ಪಾದಕರ ಸಂಘಟನೆಗಳನ್ನು ರಚಿಸುವ ಮೂಲಕ ಅಥವಾ ವಿಳಂಬ ಗತಿಯಲ್ಲಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಇಲ್ಲವೇ ಬೆಳೆ ವಿಮಾ ಯೋಜನೆಯನ್ನು ಸುಧಾರಿಸುವ ಮೂಲಕ, ಅಥವಾ ನೂರು ಶೇಖಡಾ ಯೂರಿಯಾಕ್ಕೆ ಬೇವಿನ ಲೇಪನ ಮಾಡುವ ಮೂಲಕ , ಅಥವಾ ದೇಶದ ಕೋಟ್ಯಾಂತರ ಕೃಷಿಕರಿಗೆ ಮಣ್ಣು ಆರೋಗ್ಯ ಕಾರ್ಡ್ ಒದಗಿಸುವ ಮೂಲಕ ಬೆಳೆ ಬೆಳೆಯುವಲ್ಲಿ ರೈತರ ಸಂಕಷ್ಟಗಳನ್ನು ಕಡಿಮೆ ಮಾಡುವುದು ಗುರಿಯಾಗಿದೆ. ಈ ನಿಟ್ಟಿನಲ್ಲಿ ಹಲವಾರು ಹೊಸ ಉಪಕ್ರಮಗಳನು ಕೈಗೊಳ್ಳಲಾಗುತ್ತಿದೆ.

ದೇಶದಲ್ಲಿ ಕೃಷಿಕರನ್ನು ಇಂಧನ ದಾನಿಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಕೆಲಸ ಸಾಗಿದೆ. ಕುಸುಮ್ ಯೋಜನಾ ಅಡಿಯಲ್ಲಿ , ಎಫ್.ಪಿ.ಒ. ಗಳು, ಸಹಕಾರಿಗಳು, ಪಂಚಾಯತ್ ಗಳು, ಮತ್ತು ಇತರ ಎಲ್ಲಾ ಇಂತಹ ಸಂಘಟನೆಗಳಿಗೆ ಖಾಲಿ ಭೂಮಿಯಲ್ಲಿ ಸಣ್ಣ ಸೌರ ವಿದ್ಯುತ್ ಸ್ಥಾವರಗಳನ್ನು ಸ್ಥಾಪಿಸಲು ನೆರವು ನೀಡಲಾಗುತ್ತಿದೆ. ದೇಶಾದ್ಯಂತ ಲಕ್ಷಾಂತರ ಕೃಷಿಕರ ಸೌರ ಪಂಪುಗಳನ್ನು ಗ್ರಿಡ್ ಗೆ ಜೋಡಿಸಲಾಗುತ್ತಿದೆ. ಇವುಗಳಿಂದ ಲಭ್ಯವಾಗುವ ವಿದ್ಯುತ್ತನ್ನು ರೈತರು ತಮ್ಮ ನೀರಾವರಿಗೆ ಬಳಸಬಹುದು ಮತ್ತು ಹೆಚ್ಚುವರಿ ವಿದ್ಯುತ್ತನ್ನು ಅವರು ಮಾರಾಟ ಮಾಡಬಹುದು. ಸೌರ ಪಂಪುಗಳನು ಸ್ಥಾಪಿಸುವುದಕ್ಕಾಗಿ ದೇಶದಲ್ಲಿ ಸುಮಾರು 17.5 ಲಕ್ಷ ರೈತ ಕುಟುಂಬಗಳಿಗೆ ನೆರವು ನೀಡಲಾಗುತ್ತಿದೆ. ಇದರಿಂದ ರೈತರಿಗೆ ನೀರಾವರಿಗೆ ಸಹಾಯವಾಗುವುದು ಮಾತ್ರವಲ್ಲ, ಅವರಿಗೆ ಹೆಚ್ಚುವರಿ ಆದಾಯ ಗಳಿಸುವುದಕ್ಕೂ ಸಾಧ್ಯವಾಗುತ್ತದೆ.

ಸ್ನೇಹಿತರೇ,

ಗುಜರಾತ್, ವಿದ್ಯುತ್ತಿನ ಜೊತೆಗೆ ನೀರಾವರಿ ಮತ್ತು ಕುಡಿಯುವ ನೀರಿನ ಕ್ಷೇತ್ರದಲ್ಲಿ ಶ್ಲಾಘನೀಯ ಕೆಲಸ ಮಾಡಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ನಾವೆಲ್ಲರೂ ಗುಜರಾತಿನಲ್ಲಿ ನೀರಿನ ಪರಿಸ್ಥಿತಿ ಹೇಗಿತ್ತು ?. ಎಂಬುದನ್ನು ತಿಳಿದಿದ್ದೇವೆ. ಹಲವಾರು ವರ್ಷ ಕಾಲ ಬಜೆಟ್ಟಿನ ದೊಡ್ಡ ಪಾಲು ನೀರಿನ ಮೇಲೆ ವ್ಯಯವಾಗುತ್ತಿತ್ತು. ನೀರಿಗಾಗಿ ಗುಜರಾತ್ ಆರ್ಥಿಕ ಸಂಕಷ್ಟ ಎದುರಿಸಬೇಕಾಗುತ್ತಿತ್ತು ಎಂಬುದು ಬಹಳ ಮಂದಿಗೆ ತಿಳಿದಿರಲಾರದು. ಕಳೆದ ಎರಡು ದಶಕಗಳ ಪ್ರಯತ್ನದ ಫಲವಾಗಿ ಇಂದು , ಈ ಮೊದಲು ಕಲ್ಪಿಸಿಕೊಳ್ಳಲು ಸಾಧ್ಯವಾಗದಂತಹ ಜಿಲ್ಲೆಗಳಿಗೆ ಮತ್ತು ಹಳ್ಳಿಗಳಿಗೆ ನೀರು ತಲುಪಿದೆ.

ನರ್ಮದಾ ನದಿಯ ನೀರು ಗುಜರಾತಿನ ಬರ ಪೀಡಿತ ಪ್ರದೇಶಗಳಿಗೆ ಸರ್ದಾರ್ ಸರೋವರ ಯೋಜನೆಯ ಕಾಲುವೆ ಮತ್ತು ಜಲ ಜಾಲದ ಮೂಲಕ ತಲುಪುವುದನ್ನು ನಾವು ನೋಡುವಾಗ ಗುಜರಾತಿನ ಜನತೆಯ ಪ್ರಯತ್ನಗಳ ಬಗ್ಗೆ ನಮಗೆ ಹೆಮ್ಮೆ ಮೂಡುತ್ತದೆ. ಗುಜರಾತಿನ ಸುಮಾರು 80 % ಮನೆಗಳಿಗೆ ಕೊಳವೆ ಮೂಲಕ ನೀರು ಸರಬರಾಜಾಗುತ್ತಿದೆ. ಸದ್ಯದಲ್ಲಿಯೇ ಎಲ್ಲಾ ಮನೆಗಳಿಗೂ ಕೊಳವೆ ಮೂಲಕ ನೀರು ಒದಗಿಸುವ ಮೂಲಕ ಗುಜರಾತ್ ಈ ವ್ಯವಸ್ಥೆಯಲ್ಲಿ ನೀರೊದಗಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಸೇರಲಿದೆ. ಕಿಸಾನ್ ಸೂರ್ಯೋದಯ ಯೋಜನೆಯನ್ನು ಗುಜರಾತಿನಲ್ಲಿ ಆರಂಭಿಸಿರುವಾಗ, ಪ್ರತಿಯೊಬ್ಬರೂ ಒಂದು ಪ್ರತಿಜ್ಞೆ ಮಾಡಬೇಕು ಮತ್ತು ಒಂದು ಮಂತ್ರ ಹೇಳಬೇಕು. ಈ ಮಂತ್ರವೆಂದರೆ ಹನಿಯೊಂದಕ್ಕೆ ಹೆಚ್ಚು ಬೆಳೆ. ರೈತರಿಗೆ ಹಗಲು ವಿದ್ಯುತ್ ಕೊಡುವಾಗ , ನಾವೀಗ ನೀರು ಸಂರಕ್ಷಣೆಗೆ ಹೆಚ್ಚು ಆದ್ಯತೆ ಕೊಡಬೇಕು. ನಾವು ನಮ್ಮ ಗಮನವನ್ನು ಬೇರೆಡೆಗೆ ಬಿಟ್ಟರೆ ಅಲ್ಲ್ಲಿ ಅನಿರ್ಬಂಧಿತ ವಿದ್ಯುತ್ ಇರುವುದರಿಂದ ನೀರು ಪೋಲಾಗುತ್ತದೆ. ನೀರು ಖಾಲಿಯಾಗಿ, ಜೀವನ ನರಕವಾಗುತದೆ. ಹಗಲಿನಲ್ಲಿ ವಿದ್ಯುತ್ ಲಭ್ಯತೆಯಿಂದಾಗಿ , ರೈತರಿಗೆ ಕಿರು ನೀರಾವರಿ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಸುಲಭವಾಗುತದೆ. ಕಿರು ನೀರಾವರಿಯ ಕ್ಷೇತ್ರದಲ್ಲಿ ಗುಜರಾತ್ ಗಮನಾರ್ಹ ಪ್ರಗತಿ ಸಾಧಿಸಿದೆ. ಅದು ಹನಿ ನೀರಾವರಿ ಇರಲಿ, ಅಥವಾ ಸ್ಪ್ರಿಂಕ್ಲರ್ ಇರಲಿ ಪ್ರಗತಿ ಉತ್ತಮವಾಗಿದೆ. ಕಿಸಾನ್ ಸೂರ್ಯೋದಯ ಯೋಜನೆಯು ರಾಜ್ಯದಲ್ಲಿ ಕಿರು ನೀರಾವರಿ ವಿಸ್ತರಣೆಗೆ ನೆರವಾಗಲಿದೆ.

ಸಹೋದರರೇ ಮತು ಸಹೋದರಿಯರೇ,

“ಸರ್ವೋದಯ” ದಂತೆಯೇ “ಆರೋಗ್ಯಾದಯ” ಕೂಡಾ ಗುಜರಾತಿನಲ್ಲಿಂದು ಸಂಭವಿಸುತ್ತಿದೆ.”ಆರೋಗ್ಯಾದಯ” ಹೊಸ ಕೊಡುಗೆಯನ್ನೊಳಗೊಂಡಿದೆ. ದೇಶದ ಅತಿ ದೊಡ್ಡ ಹೃದಯ ಚಿಕಿತ್ಸಾ ಆಸ್ಪತ್ರೆಯಾದ ಯು.ಎನ್. ಮೆಹ್ತಾ ಹೃದಯ ವಿಜ್ಞಾನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರವನ್ನು ಇಂದು ಕಾರ್ಯಾರಂಭ ಮಾಡಲಾಗಿದೆ. ಆಧುನಿಕ ಆರೋಗ್ಯ ಸೌಲಭ್ಯಗಳು ಮತ್ತು ವಿಶ್ವ ದರ್ಜೆಯ ಮೂಲಸೌಕರ್ಯಗಳನ್ನು ಹೊಂದಿರುವ ದೇಶದ ಕೆಲವೇ ಕೆಲವು ಆಸ್ಪತ್ರೆಗಳಲ್ಲಿ ಇದು ಒಂದಾಗಿದೆ. ಬದಲಾಗುತ್ತಿರುವ ಜೀವನ ಶೈಲಿಯಿಂದಾಗಿ ನಾವೀಗ ಹೃದಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮತ್ತು ಮಕ್ಕಳನ್ನು ಕೂಡಾ ಕಾಡುತ್ತಿದೆ. ಈ ಆಸ್ಪತ್ರೆಯು ಗುಜರಾತಿನವರಿಗೆ ಮಾತ್ರವಲ್ಲ ಇಡೀ ದೇಶದ ಜನರಿಗೆ ಒಂದು ದೊಡ್ಡ ಸೌಲಭ್ಯ.

ಸಹೋದರರೇ ಮತ್ತು ಸಹೋದರಿಯರೇ,

ಕಳೆದೆರಡು ದಶಕಗಳಲ್ಲಿ ಗುಜರಾತ್ ಆರೋಗ್ಯ ಕ್ಷೇತ್ರದಲ್ಲಿಯೂ ಶ್ಲಾಘನೀಯ ಕೆಲಸ ಮಾಡಿದೆ. ಆಧುನಿಕ ಆಸ್ಪತ್ರೆಗಳ ಜಾಲವಿರಲಿ, ವೈದ್ಯಕೀಯ ಕಾಲೇಜು ಅಥವಾ ಆರೋಗ್ಯ ಕೇಂದ್ರಗಳಿರಲಿ, ಉತ್ತಮ ಆರೋಗ್ಯ ಸವಲತ್ತುಗಳೊಂದಿಗೆ ಹಳ್ಳಿಗಳನ್ನು ಜೋಡಿಸಲು ಬಹಳ ದೊಡ್ಡ ಕೆಲಸಗಳನ್ನು ಮಾಡಲಾಗಿದೆ. ಕಳೆದ ಆರು ವರ್ಷಗಳಲ್ಲಿ ಆರಂಭಿಸಲಾದ ಆರೋಗ್ಯ ಯೋಜನೆಗಳ ಪ್ರಯೋಜನಗಳನ್ನು ಗುಜರಾತ್ ಪಡೆಯುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆ ಅಡಿಯಲ್ಲಿ , ಗುಜರಾತಿನ 21 ಲಕ್ಷ ಜನರು ಉಚಿತ ಚಿಕಿತ್ಸೆ ಪಡೆದಿದ್ದಾರೆ. ಕಡಿಮೆ ಖರ್ಚಿನ ಔಷಧಿಗಳನ್ನು ಒದಗಿಸುವ 525 ಕ್ಕೂ ಅಧಿಕ ಜನೌಷಧಿ ಕೇಂದ್ರಗಳನ್ನು ಗುಜರಾತಿನಲ್ಲಿ ತೆರೆಯಲಾಗಿದೆ. ಇವುಗಳಿಂದಾಗಿ ಸುಮಾರು 100 ಕೋ.ರೂ. ಗಳಷ್ಟು ಹಣ ರೋಗಿಗಳಿಗೆ ಉಳಿತಾಯವಾಗಿದೆ.

ಸಹೋದರರೇ ಮತ್ತು ಸಹೋದರಿಯರೇ,

ಗುಜರಾತ್ ಇಂದು ಪಡೆದಿರುವ ಮೂರನೇ ಉಡುಗೊರೆ ಎಂದರೆ ಅದು ನಂಬಿಕೆ ಮತ್ತು ಪ್ರವಾಸೋದ್ಯಮವನ್ನು ಜೋಡಿಸುವಂತಹ ಉಡುಗೊರೆ. ಗಿರ್ನಾರ್ ಪರ್ವತ ಅಂಬಾ ಮಾತೆಯ ಪೀಠ. ಅಲ್ಲಿ ಗೋರಖ್ ನಾಥ ಶಿಖರವಿದೆ, ಗುರು ದತ್ತಾತ್ರೇಯ ಶಿಖರವಿದೆ. ಮತ್ತು ಜೈನ ದೇವಾಲಯವಿದೆ. ಯಾರಿಗೇ ಆದರೂ ಸಾವಿರಾರು ಮೆಟ್ಟಿಲುಗಳನ್ನೇರಿದ ಬಳಿಕ ಅವರಿಗಿಲ್ಲಿ ಅದ್ಭುತವಾದ ಶಕ್ತಿ ಮತ್ತು ಶಾಂತಿ ದೊರೆಯುತ್ತದೆ. ವಿಶ್ವ ದರ್ಜೆಯ ರೋಪ್ ವೇ ಯಿಂದಾಗಿ ಭಕ್ತಾದಿಗಳಿಗೆ ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಸೌಲಭ್ಯ ದೊರೆಯುತ್ತದೆ. ಇದುವರೆಗೆ ದೇವಾಲಯ ತಲುಪಲು 5-7 ಗಂಟೆ ತಗಲುತ್ತಿತ್ತು. ಆದರೆ ರೋಪ್ ವೇ ಯಿಂದಾಗಿ ಈ ದೂರವನ್ನು 7-8 ನಿಮಿಷಗಳಲ್ಲಿ ಕ್ರಮಿಸಬಹುದು. ರೋಪ್ ವೇ ಯು ಸಾಹಸ ಮತ್ತು ಕುತೂಹಲವನ್ನು ಉತ್ತೇಜಿಸಲಿದೆ. ಈ ಹೊಸ ಸೌಲಭ್ಯದಿಂದಾಗಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಇಲ್ಲಿಗೆ ಬರಲಿದ್ದಾರೆ.

ಸ್ನೇಹಿತರೇ, , ಇದು, ಗುಜರಾತಿನಲ್ಲಿರುವ ನಾಲ್ಕನೇ ರೋಪ್ ವೇ. ಅಂಬಾ ಮಾತಾ ಅವರಿಗೆ ಪೂಜೆ ಸಲ್ಲಿಸಲು ಬನಾಸ್ಕಾಂತಾ, ಪಾವಗದ್ ಮತ್ತು ಸತ್ಪುರಾಗಳಲ್ಲಿ ಈಗಾಗಲೇ ಮೂರು ರೋಪ್ ವೇ ಗಳಿವೆ. ಗಿರ್ನಾರ್ ರೋಪ್ ವೇ ಇಷ್ಟೊಂದು ಕಾಲ ವಿಳಂಬವಾಗಿಲ್ಲದೇ ಇದ್ದಿದ್ದರೆ ಜನತೆಗೆ ಮತ್ತು ಪ್ರವಾಸಿಗರಿಗೆ ಬಹಳ ಹಿಂದೆಯೇ ಈ ಸೌಲಭ್ಯ ಲಭಿಸುತ್ತಿತ್ತು. ರಾಷ್ಟ್ರವಾಗಿ ಇಂತಹ ವ್ಯವಸ್ಥೆಗಳು ಬಹಳ ಧೀರ್ಘ ಕಾಲ ಬಾಕಿಯಾಗುಳಿಯುವ ಮೂಲಕ ಜನತೆಗೆ ಆಗಿರುವ ಅನಾನುಕೂಲಕ್ಕೆ ಸಂಬಂಧಿಸಿ ನಾವು ವಿಮರ್ಶೆ ಮಾಡಬೇಕಾಗುತ್ತದೆ. ದೇಶಕ್ಕೆ ಎಷ್ಟೊಂದು ನಷ್ಟವಾಯಿತು ?. ಗಿರ್ನಾರ್ ರೋಪ್ ವೇ ಜನರಿಗೆ ಸವಲತ್ತುಗಳನ್ನು ಕೊಡುವುದಷ್ಟೇ ಅಲ್ಲ, ಅದು ಸ್ಥಳೀಯ ಯುವಜನತೆಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲಿದೆ.

ಸ್ನೇಹಿತರೇ,

ವಿಶ್ವದ ಅತ್ಯಂತ ದೊಡ್ಡ ಪ್ರವಾಸೀ ತಾಣಗಳು ಮತ್ತು ಯಾತ್ರಾ ಕೇಂದ್ರಗಳು ಆಧುನಿಕ ಸೌಲಭ್ಯಗಳನ್ನು ಪ್ರವಾಸಿಗರಿಗೆ ಒದಗಿಸಿದರೆ ಮಾತ್ರ ಅಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತದೆ ಎಂಬುದನ್ನು ಸಾಕ್ಷೀಕರಿಸುತ್ತವೆ. ಇಂದು ಪ್ರವಾಸಿಗರು ತಮ್ಮ ಕುಟುಂಬದೊಂದಿಗೆ ಯಾವುದೇ ಸ್ಥಳಕ್ಕೆ ಹೋಗಲಿ ಅವರು ಸುಲಭವಾಗಿ ಬದುಕಬೇಕು ಮತ್ತು ಪ್ರವಾಸವೂ ಸುಲಭ ಸಾಧ್ಯವಾಗಿರಬೇಕು ಎಂದು ಬಯಸುತ್ತಾರೆ. ಗುಜರಾತಿನಲ್ಲಿ ದೇಶದ ಮಾತ್ರವಲ್ಲ ವಿಶ್ವದ ಅತಿ ಶ್ರೇಷ್ಟ ಪ್ರವಾಸೀ ತಾಣವಾಗುವಂತಹ ಸಾಮರ್ಥ್ಯ ಇರುವ ಹಲವು ಪ್ರದೇಶಗಳಿವೆ. ನಾವು ಮಾತಾ ದೇವಾಲಯಗಳ ಬಗ್ಗೆಯೇ ಮಾತನಾಡುವುದಾದರೆ, ಆಗ ಭಕ್ತಾದಿಗಳಿಗೆ ಇಡೀ ವೃತ್ತವೇ ಇಲ್ಲಿದೆ. ನಾನು ಗುಜರಾತನ್ನು ಆಶೀರ್ವದಿಸುತ್ತಿರುವ ಎಲ್ಲಾ ಮಾತಾ ದೇವಾಲಯಗಳನ್ನು ಪ್ರಸ್ತಾಪಿಸುತ್ತಿಲ್ಲ. ಅಲ್ಲಿ ಅಂಬಾಜಿ, ಪಾವಘರ್, ಚೋಟಿಲಾ ಚಾಮುಂಡ ಮಾತಾಜಿ., ಉಮಿಯಾ ಮಾತಾಜಿ, ಕಚ್ ನಲ್ಲಿಯ ಮಾತಾ ನೋ ಮಧ್ ಮತ್ತು ಇತರ ಹಲವಾರು ದೇವಿ ದೇವಾಲಯಗಳಿವೆ. ಗುಜರಾತ್ ಶಕ್ತಿಯ ಪೀಠ ಎಂದು ನಾವು ಪರಿಭಾವಿಸಬಹುದು. ಅಲ್ಲಿ ಅನೇಕ ಪ್ರಖ್ಯಾತ ದೇವಾಲಯಗಳಿವೆ.

ನಂಬಿಕೆಯ ಸ್ಥಳಗಳಲ್ಲದೆ , ಗುಜರಾತಿನಲ್ಲಿ ಸೌಂದರ್ಯದ ಹಲವಾರು ಸ್ಥಳಗಳಿವೆ. ಇತ್ತೀಚೆಗೆ ದ್ವಾರಕಾದ ಶಿವರಾಜ್ ಪುರ ಸಮುದ್ರ ಕಿನಾರೆ ಬ್ಲ್ಯೂ ಫ್ಲ್ಯಾಗ್ ಪ್ರಮಾಣಪತ್ರದ ಮೂಲಕ ಅಂತಾರಾಷ್ಟ್ರೀಯ ಮನ್ನಣೆಯನ್ನು ಪಡೆದಿದೆ. ಪ್ರವಾಸಿಗರು ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಮತ್ತು ಈ ಸ್ಥಳಗಳನ್ನು ನಾವು ಅಭಿವೃದ್ಧಿ ಮಾಡಿದರೆ ಹಲವಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ, ನೀವು ನೋಡಿ, ಸರ್ದಾರ್ ಸಾಹೇಬ್ ರಿಗೆ ಅರ್ಪಿತವಾಗಿರುವ ಏಕತಾ ಪ್ರತಿಮೆ ವಿಶ್ವದ ಅತ್ಯಂತ ದೊಡ್ಡ ಪ್ರತಿಮೆ ಮತ್ತು ಅದೀಗ ದೊಡ್ಡ ಪ್ರವಾಸೀ ಆಕರ್ಷಣೆಯ ಕೇಂದ್ರವಾಗುತ್ತಿದೆ.

ಕೊರೊನಾ ಜಾಗತಿಕ ಸಾಂಕ್ರಾಮಿಕ ಬಂದಪ್ಪಳಿಸುವುದಕ್ಕೆ ಮೊದಲು ಸುಮಾರು 45 ಲಕ್ಷ ಜನರು ಏಕತಾ ಪ್ರತಿಮೆಗೆ ಭೇಟಿ ನೀಡಿದ್ದಾರೆ. ಇಷ್ಟೊಂದು ಅಲ್ಪ ಕಾಲದಲ್ಲಿ 45 ಲಕ್ಷ ಪ್ರವಾಸಿಗರ ಭೇಟಿ ಒಂದು ದೊಡ್ಡ ಸಂಗತಿ. ಈಗ ಏಕತಾ ಪ್ರತಿಮೆ ಮತ್ತೆ ಜನರ ಭೇಟಿಗೆ ತೆರೆದುಕೊಂಡಿದೆ. ಪ್ರವಾಸಿಗರ ಸಂಖ್ಯೆ ಏರುತ್ತಿದೆ. ಅದೇ ರೀತಿ ನಾನು ಒಂದು ಸಣ್ಣ ಉದಾಹರಣೆ ಕೊಡುತ್ತೇನೆ-ಅಹ್ಮದಾಬಾದಿನ ಕಂಕಾರಿಯಾ ಸರೋವರದ್ದು. ಒಂದು ಕಾಲದಲ್ಲಿ ಯಾರೂ ಅದರ ಸನಿಹದಿಂದ ಹಾದು ಹೋಗುತ್ತಿರಲಿಲ್ಲ. ಈಗ ಅಲ್ಲಿಯ ಪರಿಸ್ಥಿತಿ ನೋಡಿ. ಸ್ವಲ್ಪ ನವೀಕರಣ ಮತ್ತು ಪ್ರವಾಸಿಗರಿಗೆ ಕೆಲವು ಸೌಲಭ್ಯಗಳ ಬಳಿಕ , ಅಲ್ಲಿಗೆ ವಾರ್ಷಿಕ 75 ಲಕ್ಷ ಜನರು ಭೇಟಿ ನೀಡುತ್ತಿದ್ದಾರೆ. ಅಹ್ಮದಾಬದಿನಲ್ಲಿಯೇ ಈ ಪ್ರದೇಶ ಆಕರ್ಷಣೆಯ ಕೇಂದ್ರವಾಗಿದೆ ಮತ್ತು 75 ಲಕ್ಷ ಮಧ್ಯಮ ಹಾಗು ಕಡಿಮೆ ಆದಾಯದ ಕುಟುಂಬಗಳಿಗೆ ಆದಾಯದ ಮೂಲವಾಗಿದೆ. ಈ ಎಲ್ಲಾ ನವೀಕರಣಗಳು ಪ್ರವಾಸೋದ್ಯಮವನ್ನು ಹೆಚ್ಚಿಸಲು ಮತ್ತು ಸ್ಥಳೀಯ ಜನರ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಿವೆ. ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಲ್ಪ ಹೂಡಿಕೆ ಮಾಡಿದರೆ ಅನೇಕ ಉದ್ಯೋಗಾವಕಾಶಗಳು ಒದಗಿ ಬರುತ್ತವೆ.

ಗುಜರಾತಿನ ಜನರು ಮತ್ತು ವಿಶ್ವದಾದ್ಯಂತ ಹರಡಿರುವ ಗುಜರಾತಿನ ಸಹೋದರರು ಮತ್ತು ಸಹೋದರಿಯರು ಗುಜರಾತಿನ ಬ್ರಾಂಡ್ ರಾಯಭಾರಿಯಾಗುವ ಮೂಲಕ ಇಡೀ ವಿಶ್ವದಲ್ಲಿ ತಮ್ಮದೇ ಛಾಯೆಯನ್ನು ಮೂಡಿಸಿದ್ದಾರೆ. ವಿಶ್ವದ ವಿವಿಧೆಡೆ ಹರಡಿರುವ ಎಲ್ಲಾ ಗುಜರಾತಿ ಜನರು ಗುಜರಾತಿನ ಹೊಸ ಪ್ರವಾಸೀ ತಾಣಗಳ ಬಗ್ಗೆ ಮಾಹಿತಿ, ಸಂದೇಶ ಹರಡಬೇಕು ಮತ್ತು ವಿದೇಶೀ ಪ್ರವಾಸಿಗರನ್ನು ಆಕರ್ಷಿಸಲು ಸಹಾಯ ಮಾಡಬೇಕು ಎಂದು ನಾನು ಮನವಿ ಮಾಡುತ್ತೇನೆ. ನಾವದನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ.

ಮತ್ತೊಮ್ಮೆ, ನಾನು ಗುಜರಾತಿನ ನನ್ನ ಸಹೋದರರು ಮತ್ತು ಸಹೋದರಿಯರಿಗೆ ಈ ಆಧುನಿಕ ಸೌಲಭ್ಯಗಳನ್ನು ಹೊಂದುತ್ತಿರುವುದಕ್ಕಾಗಿ ಶುಭ ಹಾರೈಸುತ್ತೇನೆ. ಗುಜರಾತ್ ಅಂಬಾ ಮಾತೆಯ ಆಶೀರ್ವಾದದೊಂದಿಗೆ ಪ್ರಗತಿಯ ಹೊಸ ಎತ್ತರವನ್ನು ಏರಲಿ ಎಂದು ಪ್ರಾರ್ಥಿಸುತ್ತೇನೆ. ಗುಜರಾತ್ ಆರೋಗ್ಯವಂತವಾಗಿ ಉಳಿಯಲಿ, ಬಲಿಷ್ಟವಾಗಿ ಇರಲಿ. ಈ ಶುಭ ಹಾರೈಕೆಗಳೊಂದಿಗೆ ಧನ್ಯವಾದಗಳು. ಬಹಳ , ಬಹಳ ಅಭಿನಂದನೆಗಳು.



(Release ID: 1667612) Visitor Counter : 193