ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಭೂ ದಾಖಲೆ ಮತ್ತು ನಕ್ಷೆ  ಸೇರಿ ಸಮಗ್ರ ವಿವರ ಒದಗಿಸುವ ಇ-ಧಾತ್ರಿ ಪೋರ್ಟಲ್ ಗೆ  ಚಾಲನೆ ನೀಡಿದ ಸಚಿವ ಹರ್ದೀಪ್ ಸಿಂಗ್ ಪುರಿ


ತಂತ್ರಜ್ಞಾನದ ಸಮರ್ಪಕ ಬಳಕೆ ಸ್ವಯಂಚಾಲಿತ ಚಟುವಟಿಕೆಗಳನ್ನು ಚುರುಕುಗೊಳಿಸಲು ಸಲಹೆ  

Posted On: 21 OCT 2020 5:29PM by PIB Bengaluru

ಮಾನವರ ಮುಖಾಮುಖಿ ರಹಿತ ಹಾಗೂ ಸ್ವಯಂಚಾಲಿತವಾಗಿ ಹೆಚ್ಚಿನ ಚಟುವಟಿಕೆಗಳನ್ನು ಗುರುತಿಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಗಳು ಪ್ರಯತ್ನಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಖಾತೆ (ಸ್ವತಂತ್ರ ಹೊಣೆಗಾರಿಕೆ) ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

“ತಂತ್ರಜ್ಞಾನದ ಶಕ್ತಿ ಅದ್ಭುತವಾಗಿದೆ ಮತ್ತು ಸಾಫ್ಟ್ ವೇರ್ ತಂತ್ರಜ್ಞಾನ ವಲಯದಲ್ಲಿ ಭಾರತ ಅತ್ಯದ್ಭುತ ಸಾಮರ್ಥ್ಯವನ್ನು ತೋರುತ್ತಿದ್ದು, ಅಂತಹ ಶಕ್ತಿಯನ್ನು ನಾವು ನಮ್ಮ ಅನುಕೂಲಕ್ಕಾಗಿ ಸದ್ಭಳಕೆ ಮಾಡಿಕೊಳ್ಳಬೇಕಿದೆ’’ಎಂದು ಅವರು ತಿಳಿಸಿದರು.

ದೆಹಲಿಯಲ್ಲಿಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವಾಲಯದ ಕಾರ್ಯದರ್ಶಿ ಶ್ರೀ ದುರ್ಗಾಶಂಕರ್ ಮಿಶ್ರಾ ಅವರ ಸಮಕ್ಷಮದಲ್ಲಿ ಇ-ಧಾತ್ರಿ ಜಿಯೊ ಪೋರ್ಟಲ್ ಅನ್ನು ಉದ್ಘಾಟಿಸಿ ಮಾತನಾಡಿದರು.

ಅಲ್ಲದೆ ಸಚಿವರು ಇ-ಧಾತ್ರಿ ಜಿಯೊ ಪೋರ್ಟಲ್ ಮೂಲಕ ಭೂ ಮತ್ತು ಅಭಿವೃದ್ಧಿ ಕಚೇರಿ(ಎಲ್&ಡಿಒ) ನೀಡುವ ಆಸ್ತಿ ಪ್ರಮಾಣಪತ್ರ ಸೇವೆಯನ್ನೂ ಉದ್ಘಾಟಿಸಿದರು. ಈ ಪ್ರಮಾಣಪತ್ರದಲ್ಲಿ ಭೂಮಿಯ ವಿಧಾನ, ಆಸ್ತಿಯ ವರ್ಗ, ಹಂಚಿಕೆ ದಿನಾಂಕ, ಆಸ್ತಿಯ ಸ್ಥಿತಿಗತಿ, ಉಪವರ್ಗ, ಜಾಗದ ವಿಸ್ತೀರ್ಣ, ಜಾಗದ ಗುತ್ತಿಗೆ ದಿನಾಂಕ, ಆಸ್ತಿಯ ವಿಳಾಸ, ಪ್ರಸಕ್ತ ಆಸ್ತಿಯ ಗುತ್ತಿಗೆ ಸ್ಥಿತಿಗತಿ, ವ್ಯಾಜ್ಯಗಳ ಸ್ಥಿತಿಗತಿ ಅಲ್ಲದೆ ನಿಖರ ನಕ್ಷೆಯನ್ನೂ ಸಹ ಒಳಗೊಂಡಿರಲಿದೆ. ಈ ಆಸ್ತಿಯ ಪ್ರಮಾಣಪತ್ರವನ್ನು 1,000 ರೂ. ಸಾಮಾನ್ಯ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ ಮತ್ತು ಇದನ್ನು ಸಾರ್ವಜನಿಕರು ಎಲ್&ಡಿಒ ವೆಬ್ ಸೈಟ್ www.ldo.gov.in.ಗೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ. ಶ್ರೀ ಪುರಿ ಅವರು, ಈ ಪೋರ್ಟಲ್ ರೂಪಿಸಿರುವುದಕ್ಕಾಗಿ ಎನ್ಐಸಿಯ ಮಹಾನಿರ್ದೇಶಕರಾದ ಡಾ. ನೀತಾ ವರ್ಮಾ ಅವರನ್ನು ಅಭಿನಂದಿಸಿದರು.

ಈ ಪ್ರಮಾಣಪತ್ರದ ಮೂಲಕ ಆಸ್ತಿಯ ಗುತ್ತಿಗೆದಾರರು ಆತ ಅಥವಾ ಆಕೆಯ ಆಸ್ತಿಯ ಮೂಲ ವಿವರಗಳ ಜೊತೆಗೆ ಅದರ ನಕ್ಷೆಯನ್ನೂ ಸಹ ಪಡೆಯಬಹುದಾಗಿದೆ. ಇದು ಆಸ್ತಿಯ ಸಂಭಾವ್ಯ ಖರೀದಿದಾರರಿಗೆ ಆಸ್ತಿಯ ಕುರಿತಂತೆ ಯಾವುದೇ ವ್ಯಾಜ್ಯಗಳು ಬಾಕಿ ಇವೆಯೇ ಅಥವಾ ಇತರೆ ವಿಷಯಗಳ ಬಗ್ಗೆ ಖಾತ್ರಿಪಡಿಸಿಕೊಳ್ಳಲು ನೆರವಾಗಲಿದೆ. ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ದಾಖಲೆಗಳು ಸರಿಯಿಲ್ಲದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ವ್ಯಾಜ್ಯಗಳು ಏರ್ಪಡುತ್ತಿವೆ. ಈ ಕ್ರಮದಿಂದಾಗಿ ಸಾಮಾನ್ಯ ಜನರಿಗೆ ಅದರಲ್ಲೂ ವಿಶೇಷವಾಗಿ ವೃದ್ಧರಿಗೆ ಅನಾರೋಗ್ಯದಿಂದ ಬಳಲುತ್ತಿರುವವರು, ವಿಧವೆಯರು ಹಾಗೂ ಮಹಿಳೆಯರಿಗೆ ನೆರವಾಗಲಿದ್ದು, ಅನಗತ್ಯ ವ್ಯಾಜ್ಯಗಳು ಉಂಟಾಗುವುದನ್ನು ತಪ್ಪಿಸಲಿದೆ.

ಎಲ್&ಡಿಒ ಜಿಐಎಸ್ ಆಧಾರಿತ ನಕ್ಷೆ ಮೂಲಕ ವೈಯಕ್ತಿಕ ಆಸ್ತಿಗಳ ದಾಖಲೆಗಳನ್ನು ಸಂಯೋಜಿಸಿ ಅವುಗಳನ್ನು ಇ-ಧಾತ್ರಿ ಜಿಯೊ ಪೋರ್ಟಲ್ ನಲ್ಲಿ ಕ್ರೂಢೀಕರಿಸಲಿದೆ. ಎಲ್&ಡಿಒ ಸುಮಾರು 60,000 ಆಸ್ತಿಗಳು ಅವುಗಳಲ್ಲಿ ವಾಣಿಜ್ಯ, ವಸತಿ, ಕೈಗಾರಿಕಾ ಮತ್ತು ಸಂಸ್ಥೆಗಳ ಆಸ್ತಿಗಳೂ ಸಹ ಒಳಗೊಂಡಿವೆ. ಈ 60,000 ಆಸ್ತಿಗಳ ಪೈಕಿ 49,000 ಪುನರ್ ವಸತಿ ಆಸ್ತಿಗಳಾಗಿದ್ದು, ಅವನ್ನು ಹಿಂದಿನ ಪೂರ್ವ ಮತ್ತು ಪಶ್ಚಿಮ ಪಾಕಿಸ್ತಾನದಿಂದ ನಿರಾಶ್ರಿತರಾದ ವ್ಯಕ್ತಿಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಲಾಗಿರುತ್ತದೆ. ಬಹುತೇಕ ಆಸ್ತಿಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲಾಗಿದ್ದು, ಅವುಗಳ ಪರಿಶೀಲನಾ ಪ್ರಕ್ರಿಯೆ ನಡೆದಿದೆ. ಈ ಅಪ್ಲಿಕೇಶನ್, ಸಾರ್ವಜನಿಕರಿಗೆ ಮಾತ್ರವಲ್ಲ, ಸರ್ಕಾರಕ್ಕೂ ಕೂಡ ಖಾಲಿ ಇರುವ ತನ್ನ ಆಸ್ತಿಗಳ ಸ್ಥಿತಿಗತಿ ಅರಿಯಲು ಹಾಗೂ ಆ ಸ್ವತ್ತುಗಳೂ ಯಾರಾದರೂ ಒತ್ತುವರಿ ಮಾಡಿದ್ದಾರೆಯೇ ಎಂಬುದನ್ನು ತಿಳಿಯಲು ನೆರವಾಗಲಿದೆ

ಎಲ್&ಡಿಒ ಇದು ತನ್ನ ಕಾರ್ಯವೈಖರಿಯಲ್ಲಿ ಪಾರದರ್ಶಕತೆಯನ್ನು ತರಲು ಕೈಗೊಂಡ ಕ್ರಮವಾಗಿದೆ ಮತ್ತು ಮಾನವರ ಸಂಪರ್ಕ ರಹಿತವಾಗಿ ಹಾಗೂ ವ್ಯಾಜ್ಯಗಳನ್ನು ಕಾಲಮಿತಿಯಲ್ಲಿ ಬಗೆಹರಿಸಲು ಕೈಗೊಂಡಿರುವ ಕ್ರಮವಾಗಿದೆ ಹಾಗೂ ಡಿಜಿಟಲೀಕರಣ ನಿಟ್ಟಿನಲ್ಲಿ ವೇಗವಾಗಿ ಕಾರ್ಯನಿರ್ವಹಿಸಲು ಮ್ಯುಟೇಶನ್, ಬದಲಾವಣೆ, ಉಡುಗೊರೆ ಅನುಮತಿ, ಮಾರಾಟ ಅನುಮತಿ ಮತ್ತು ಗುತ್ತಿಗೆ ಅನುಮತಿಗಳನ್ನು ಆನ್ ಲೈನ್ ಮೂಲಕವೇ ಪಡೆದುಕೊಳ್ಳಲು ಈಗಾಗಲೇ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಈ ಅರ್ಜಿಗಳ ಪೈಕಿ ಶೇ.95ರಷ್ಟನ್ನು ಎಲ್&ಡಿಒ ಸ್ವೀಕರಿಸಲಿದೆ. ಅಲ್ಲದೆ ಎಲ್&ಡಿಒ ಆಸ್ತಿಗಳ ದಾಖಲೆಗಳನ್ನು ಅಪ್ ಡೇಟ್ ಮಾಡುವ ವಿನೂತನ ಉಪಕ್ರಮವನ್ನು ಕೈಗೊಂಡಿದೆ. ಪ್ರಸ್ತುತ ಆಸ್ತಿ ದಾಖಲೆಗಳು ಅಪ್ ಡೇಟ್ ಆಗಿಲ್ಲ. ಆಸ್ತಿಯ ಗುತ್ತಿಗೆ ಅವಧಿ ಮುಗಿದ ನಂತರ ಅವುಗಳ ದಾಖಲೆಗಳು ಮುಕ್ತವಾಗಬೇಕು. ಇದರಿಂದಾಗಿ ಭೂಮಿ ಒಡೆತನದ ಸಂಸ್ಥೆಗೆ ದಾಖಲೆಗಳನ್ನು ಅಪ್ ಡೇಟ್ ಮಾಡಲು ಮತ್ತು ಪ್ರಸಕ್ತ ಮಾಲೀಕರಿಗೆ ಅದರ ದಾಖಲೆಗಳನ್ನು ಒದಗಿಸಲು, ಆಸ್ತಿ ವಹಿವಾಟಿನಲ್ಲಿ ಪಾರದರ್ಶಕತೆ ತರಲು ಇದು ನೆರವಾಗಲಿದೆ. ಎಲ್&ಡಿಒದ ಈ ಉಪಕ್ರಮದಿಂದಾಗಿ ಅದರ ಕಾರ್ಯವೈಖರಿ ಮೇಲೆ ಮುಂದಿನ ದಿನಗಳಲ್ಲಿ ದೂರಗಾಮಿ ಪರಿಣಾಮಗಳಾಗಲಿವೆ ಮತ್ತು ಅದು ಹೆಚ್ಚು ಸಾರ್ವಜನಿಕ ಸ್ನೇಹಿ, ಉತ್ತರದಾಯಿ, ಪರಿಣಾಮಕಾರಿ ಮತ್ತು ಪಾರದರ್ಶಕವಾಗಲಿದೆ.

ಸಚಿವರು ವರ್ಚುವಲ್ ಸಮಾವೇಶದ ಮೂಲಕ ಅರ್ಜಿದಾರರಿಗೆ ಆಸ್ತಿ ಹಕ್ಕು ಪ್ರಮಾಣಪತ್ರಗಳನ್ನು ವಿತರಿಸಿದರು. ಅರ್ಜಿದಾರರು ಸಚಿವರ ಮಾರ್ಗದರ್ಶನದಲ್ಲಿ ಎಲ್&ಡಿಒ ಕೈಗೊಂಡಿರುವ ತನ್ನ ಸೇವೆಗಳನ್ನು ಡಿಜಿಟಲೀಕರಣಗೊಳಿಸುವುದು ಮತ್ತು ಆಸ್ತಿ ಪ್ರಮಾಣಪತ್ರ ವಿತರಿಸುವ ಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಚಿವರಿಗೆ ಧನ್ಯವಾದಗಳನ್ನು ಹೇಳಿದರು. ಈ ಸಾರ್ವಜನಿಕ ಸ್ನೇಹಿ ಉಪಕ್ರಮದ ಬಗ್ಗೆ ಅರ್ಜಿದಾರರು ಪ್ರಶಂಸೆ ವ್ಯಕ್ತಪಡಿಸಿ, ಸಾಮಾನ್ಯವಾಗಿ ಆಸ್ತಿ ದಾಖಲೆಗಳನ್ನು ಪಡೆಯುವುದು ಕಷ್ಟಕರ. ಆದರೆ ಸಾರ್ವಜನಿಕ ಕಲ್ಯಾಣ ಕ್ರಮವಾಗಿ ಇಂತಹ ಕ್ರಮ ಕೈಗೊಂಡಿರುವುದು ಶ್ಲಾಘನೀಯ ಎಂದರು.

***


(Release ID: 1666652) Visitor Counter : 299