ಕೃಷಿ ಸಚಿವಾಲಯ

10 ಸಾವಿರ ಕೋಟಿ ರೂ. ಗಳ ಎನ್.ಸಿ.ಡಿ.ಸಿ. ಆಯುಷ್ಮಾನ್ ಸಹಕಾರ್ ನಿಧಿ, ಆರೋಗ್ಯ ರಕ್ಷಣಾ ಮೂಲಸೌಕರ್ಯ: ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರಿಂದ ಚಾಲನೆ


ಸಹಕಾರಿ, ಗ್ರಾಮೀಣ ಪ್ರದೇಶಗಳ ಸಮಗ್ರ ಆರೋಗ್ಯ ರಕ್ಷಣಾ ಸೇವೆಯ ಕ್ರಾಂತಿಕಾರಿ ಬದಲಾವಣೆಗೆ ಯೋಜನೆ ಪೂರಕ

Posted On: 19 OCT 2020 3:43PM by PIB Bengaluru

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗು ಆಹಾರ ಸಂಸ್ಕರಣಾ ಕೈಗಾರಿಕೆಗಳ  ಸಚಿವರಾದ ಶ್ರೀ ನರೇಂದ್ರ ಸಿಂಗ್ ಥೋಮರ್ ಅವರಿಂದು ’ಆಯುಷ್ಮಾನ್ ಸಹಕಾರ’ ಕ್ಕೆ ಚಾಲನೆ ನೀಡಿದರು. ದೇಶದಲ್ಲಿ ಆರೋಗ್ಯರಕ್ಷಣಾ ಮೂಲಸೌಕರ್ಯವನ್ನು ರೂಪಿಸುವಲ್ಲಿ ಸಹಕಾರಿಗಳು ಪ್ರಮುಖ ಪಾತ್ರವಹಿಸಲು ನೆರವಾಗುವ  ವಿಶಿಷ್ಟ ಯೋಜನೆ ಇದಾಗಿದೆ. ಇದನ್ನು ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದಡಿಯಲ್ಲಿ ಬರುವ ಅಪೆಕ್ಸ್ ಸ್ವಾಯತ್ತ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮ (ಎನ್.ಸಿ.ಡಿ.ಸಿ.) ರೂಪಿಸಿದೆ. 

ಎನ್.ಸಿ.ಡಿ.ಸಿ. ಯು ಬರಲಿರುವ ವರ್ಷಗಳಲ್ಲಿ ನಿರೀಕ್ಷಿತ/ ಸಮರ್ಥ   ಸಹಕಾರಿಗಳಿಗೆ 10,000 ಕೋಟಿ ರೂ. ಗಳವರೆಗೆ ಅವಧಿ ಸಾಲವನ್ನು ಒದಗಿಸಲಿದೆ ಎಂದು ಶ್ರೀ ಥೋಮರ್ ಪ್ರಕಟಿಸಿದರು. ಚಾಲ್ತಿಯಲ್ಲಿರುವ ಜಾಗತಿಕ ಸಾಂಕ್ರಾಮಿಕವು ಹೆಚ್ಚಿನ ಸೌಲಭ್ಯಗಳನ್ನು ರೂಪಿಸಬೇಕಾದ ಅಗತ್ಯವನ್ನು ಮುಂಚೂಣಿಗೆ ತಂದಿದೆ ಎಂದಿರುವ ಶ್ರೀ ಥೋಮರ್ ಅವರು ಎನ್.ಸಿ.ಡಿ.ಸಿ. ಯ ಯೋಜನೆಯು ರೈತರ ಕಲ್ಯಾಣ ಕಾರ್ಯಚಟುವಟಿಕೆಗಳನ್ನು ಬಲಪಡಿಸುವ ದಿಶೆಯಲ್ಲಿ ಕೇಂದ್ರ ಸರಕಾರದ ಹೆಜ್ಜೆ ಎಂದರು. 

ಎನ್.ಸಿ.ಡಿ.ಸಿ.ಯ ಎಂ.ಡಿ. ಶ್ರೀ ಸಂದೀಪ ನಾಯಕ್ ಮಾತನಾಡಿ ದೇಶದಲ್ಲಿ ಸಹಕಾರಿಗಳು ನಡೆಸುತ್ತಿರುವ ಸುಮಾರು 52 ಆಸ್ಪತ್ರೆಗಳು ಇವೆ ಎಂದರು.ಅವುಗಳು ಒಟ್ಟು 5,000 ಕ್ಕೂ ಅಧಿಕ ಹಾಸಿಗೆ ಸಾಮರ್ಥ್ಯವನ್ನು ಹೊಂದಿವೆ. ಎನ್.ಸಿ.ಡಿ.ಸಿ.ನಿಧಿಯು ಸಹಕಾರಿಗಳ ಆರೋಗ್ಯ ಸೇವಾ ಪ್ರಸ್ತಾವನೆಗಳಿಗೆ ಉತ್ತೇಜನ ನೀಡಲಿದೆ ಎಂದರು.  

ಎನ್.ಸಿ.ಡಿ.ಸಿ. ಯ ಯೋಜನೆಗಳು ರಾಷ್ಟ್ರೀಯ ಆರೋಗ್ಯ ನೀತಿ, 2017 ರ ಆದ್ಯತೆಯನುಸಾರ ಇವೆ. ಎಲ್ಲಾ ಆಯಾಮದಲ್ಲಿ ಆರೋಗ್ಯ ವ್ಯವಸ್ಥೆಗಳನ್ನು ಹೊಂದುವುದು,-ಆರೋಗ್ಯ ವಲಯದಲ್ಲಿ ಹೂಡಿಕೆ, ಆರೋಗ್ಯ ರಕ್ಷಣಾ ಸೇವೆಗಳ ಸಂಘಟನೆ,  ತಂತ್ರಜ್ಞಾನ ಬಳಸಿಕೊಳ್ಳುವಿಕೆ, ಮಾನವ ಸಂಪನ್ಮೂಲದ ಅಭಿವೃದ್ಧಿ, ವೈದ್ಯಕೀಯ ಬಹುತ್ವಕ್ಕೆ ಪ್ರೋತ್ಸಾಹ, ರೈತರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ರಕ್ಷಣಾ ಸೇವೆ ಇತ್ಯಾದಿಗಳು ಇದರಲ್ಲಿ ಅಡಕವಾಗಿವೆ. ಇದು ಆಸ್ಪತ್ರೆಗಳು, ಆರೋಗ್ಯ ರಕ್ಷಣೆ, ವೈದ್ಯಕೀಯ ಶಿಕ್ಷಣ, ನರ್ಸಿಂಗ್ ಶಿಕ್ಷಣ, ಅರೆ ವೈದ್ಯಕೀಯ ಶಿಕ್ಷಣ, ಆರೋಗ್ಯ ವಿಮೆ ಮತ್ತು ಸಮಗ್ರ ಆರೋಗ್ಯ ವ್ಯವಸ್ಥೆಗಳಾದಂತಹ ಆಯುಷ್ ಗಳನ್ನು ಒಳಗೊಂಡ ಸಮಗ್ರ ಧೋರಣೆಯನ್ನು ಹೊಂದಿದೆ. ಆಯುಷ್ಮಾನ್ ಸಹಕಾರ ಯೋಜನಾ ನಿಧಿಯು ಸಹಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ / ಆಯುಷ್ ಶಿಕ್ಷಣವನ್ನು ಕೈಗೆತ್ತಿಕೊಳ್ಳಲು ಸಹಾಯ ಮಾಡಲಿದೆ. 

ಗೌರವಾನ್ವಿತ ಪ್ರಧಾನ ಮಂತ್ರಿ ಅವರು 2020ರ ಆಗಸ್ಟ್ 15 ರಂದು ಕಾರ್ಯಾರಂಭಗೊಳಿಸಿದ ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಮಿಶನ್ನಿನಂತೆಯೇ  ಎನ್.ಸಿ.ಡಿ.ಸಿ.ಯ ಅಯುಷ್ಮಾನ್ ಸಹಕಾರ ಗ್ರಾಮೀಣ ಪ್ರದೇಶಗಳಲ್ಲಿ ಪರಿವರ್ತನೆ ತರಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ತಮ್ಮ ಬಲಿಷ್ಟ ಹಾಜರಾತಿಯಿಂದಾಗಿ ಸಹಕಾರಿಗಳು ಈ ಯೋಜನೆ ಬಳಸಿ ಸಮಗ್ರ ಆರೋಗ್ಯ ರಕ್ಷಣಾ ಸೇವೆಗಳಲ್ಲಿ ಕ್ರಾಂತಿಯನ್ನು ತರಬಲ್ಲವು. 

ಯಾವುದೇ ಸಹಕಾರ ಸೊಸೈಟಿಯು ,ಆರೋಗ್ಯ ರಕ್ಷಣಾ ಸಂಬಂಧಿ ಕಾರ್ಯಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ತನ್ನ ಬೈಲಾಗಳಲ್ಲಿ  ಸೂಕ್ತ ಪ್ರಸ್ತಾವನೆಗಳನ್ನು ಹೊಂದಿದ್ದರೆ ಎನ್.ಸಿ.ಡಿ.ಸಿ. ನಿಧಿಯನ್ನು ಪಡೆಯಬಹುದು. ಎನ್.ಸಿ.ಡಿ.ಸಿ. ನೆರವು ರಾಜ್ಯ ಸರಕಾರಗಳ/ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳ ಮೂಲಕ ಬರಲಿದೆ ಅಥವಾ ಅರ್ಹ ಸಹಕಾರಿಗಳಿಗೆ ನೇರವಾಗಿ ಲಭಿಸಲಿದೆ. ಇತರ ಮೂಲಗಳಿಂದ ಸಬ್ಸಿಡಿ/ ನೆರವನ್ನು ಜೋಡಿಸಿಕೊಳ್ಳಬಹುದು. 

ಆಯುಷ್ಮಾನ್ ಸಹಕಾರವು ನಿರ್ದಿಷ್ಟವಾಗಿ ಸಂಸ್ಥೆಗಳ ಸ್ಥಾಪನೆ, ಆಧುನೀಕರಣ, ವಿಸ್ತರಣೆ, ದುರಸ್ತಿ, ಆಸ್ಪತ್ರೆಗಳ ಮರುನವೀಕರಣ ಮತ್ತು ಆರೋಗ್ಯ ರಕ್ಷಣೆ ಹಾಗು ಶಿಕ್ಷಣ ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ: 

I. ಆಸ್ಪತ್ರೆಗಳು ಮತ್ತು ಅಥವಾ ವೈದ್ಯಕೀಯ/ಆಯುಷ್/ ದಂತ ವೈದ್ಯಕೀಯ / ನರ್ಸಿಂಗ್/ ಔಷಧಾಲಯ/ ಅರೆವೈದ್ಯಕೀಯ/ ಫಿಸಿಯೋಥೆರಪಿ ಕಾಲೇಜುಗಳಿಗೆ ಪದವಿ ಮತ್ತು /ಅಥವಾ ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳನ್ನು ನಡೆಸುವುದಕ್ಕಾಗಿ 

II. ಯೋಗ ಕ್ಷೇಮ ಕೇಂದ್ರಗಳು 

III. ಆಯುರ್ವೇದ, ಅಲೋಪಥಿ, ಯುನಾನಿ, ಸಿದ್ಧ, ಹೋಮಿಯೋಪಥಿ ಮತ್ತು ಇತರ ಸಾಂಪ್ರದಾಯಿಕ ವೈದ್ಯಕೀಯ ಆರೋಗ್ಯರಕ್ಷಣಾ ಕೇಂದ್ರಗಳು,

IV. ಹಿರಿಯರಿಗೆ ಆರೋಗ್ಯ ರಕ್ಷಣಾ ಸೇವೆಗಳು. 

V. ಉಪಶಮನ ಆರೋಗ್ಯ ರಕ್ಷಣಾ ಸೇವೆಗಳು

VI. ಅಂಗವೈಕಲ್ಯ, ದೈಹಿಕ ನ್ಯೂನತೆ ಇರುವ ವ್ಯಕ್ತಿಗಳಿಗೆ ಆರೋಗ್ಯ ರಕ್ಷಣಾ ಸೇವೆಗಳು

VII. ಮಾನಸಿಕ ಆರೋಗ್ಯ ರಕ್ಷಣಾ ಸೇವೆಗಳು. 

VIII. ತುರ್ತು ವೈದ್ಯಕೀಯ ಸೇವೆಗಳು/ ಟ್ರೂಮಾ ಕೇಂದ್ರಗಳು

IX. ಫಿಯೋಥೆರಪಿ ಕೇಂದ್ರಗಳು.

X. ಮೊಬೈಲ್ ಕ್ಲಿನಿಕ್ ಸೇವೆಗಳು

XI. ಆರೋಗ್ಯ ಕ್ಲಬ್ ಗಳು ಮತ್ತು ಜಿಮ್ 

XII. ಆಯುಶ್ ಔಷಧಿ ತಯಾರಿಕೆ

XIII. ಔಷಧಿ ಪರೀಕ್ಷಾ ಪ್ರಯೋಗಾಲಯಗಳು

XIV. ದಂತ ಚಿಕಿತ್ಸಾ ಕೇಂದ್ರಗಳು

XV. ನೇತ್ರ ಚಿಕಿತ್ಸಾ ಕೇಂದ್ರಗಳು 

XVI. ಪ್ರಯೋಗಾಲಯ ಸೇವೆಗಳು 

XVII. ರೋಗ ಪತ್ತೆ ಸೇವೆಗಳು 

XVIII. ರಕ್ತದ ಬ್ಯಾಂಕುಗಳು/ ಟ್ರಾನ್ಸ್ಫ್ಯೂಶನ್ ಸೇವೆಗಳು. 

XIX. ಪಂಚಕರ್ಮ/ ತೊಕ್ಕಾನಂ/ ಕ್ಷಾರ ಸೂತ್ರ ಚಿಕಿತ್ಸಾ ಕೇಂದ್ರಗಳು

XX. ಯುನಾನಿಯ ರೆಜಿಮೆಂಟಲ್ ಚಿಕಿತ್ಸೆ (ಇಲಾಜ್ ಬಿಲ್ ತಡ್ಬೀರ್) ಕೇಂದ್ರಗಳು 

XXI. ಬಾಣಂತಿ ಮತ್ತು ಶಿಶು ಚಿಕಿತ್ಸಾ ಸೇವೆಗಳು

XXII. ಗರ್ಭಧಾರಣೆ ಮತ್ತು ಮಕ್ಕಳ ಆರೋಗ್ಯ ಸೇವೆಗಳು. 

XXIII. ಎನ್.ಸಿ.ಡಿ.ಸಿ.ಯು ನೆರವಿಗಾಗಿ ಸೂಕ್ತ ಎಂದು ಪರಿಗಣಿಸುವ ಇತರ ಯಾವುದೇ ಆ ಸಂಬಂಧಿತ ಕೇಂದ್ರಗಳು ಅಥವಾ ಸೇವೆಗಳು. 

XXIV. ಟೆಲಿವೈದ್ಯಕೀಯ ಮತ್ತು ದೂರಸಂವೇದಿ ನೆರವಿನ ವೈದ್ಯಕೀಯ ಪ್ರಕ್ರಿಯೆಗಳು. 

XXV. ಆರೋಗ್ಯ, ಆರೋಗ್ಯ ರಕ್ಷಣೆ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಸಾರಿಗೆ

XXVI. ಡಿಜಿಟಲ್ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ.

XXVII. ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐ.ಆರ್.ಡಿ.ಎ.) ಮಾನ್ಯತೆ ಪಡೆದ ಆರೋಗ್ಯ ವಿಮೆ

ಈ ಯೋಜನೆಯು ಕಾರ್ಯಾಚರಣಾ ಆವಶ್ಯಕತೆಗಳನ್ನು ಈಡೇರಿಸಲು ಕಾರ್ಯಾಚರಣಾ ಬಂಡವಾಳ ಮತ್ತು ಪಾಲು ಬಂಡವಾಳವನ್ನು ಒದಗಿಸುತ್ತದೆ. ಮಹಿಳಾ ಬಹುಸಂಖ್ಯಾತ ಸಹಕಾರಿ ಸಂಸ್ಥೆಗಳಿಗೆ ಈ ಯೋಜನೆಯಲ್ಲಿ 1 ಶೇಖಡಾ ಬಡ್ಡಿ ರಿಯಾಯತಿಯನ್ನೂ ಒದಗಿಸಲಾಗುತ್ತದೆ. 

ಎನ್.ಸಿ.ಡಿ.ಸಿ.ಯನ್ನು ಸಂಸತ್ತಿನ ಕಾಯ್ದೆ 1963 ರಡಿಯಲ್ಲಿ ಸಹಕಾರಿಗಳ ಉತ್ತೇಜನ ಮತ್ತು ಅಭಿವೃದ್ಧಿಗಾಗಿ ರೂಪಿಸಲಾಗಿದೆ. 1963 ರಿಂದ, ಇದರಲ್ಲಿ ಸಹಕಾರಿಗಳಿಗೆ ಸುಮಾರು 1.60 ಲಕ್ಷ ಕೋ.ರೂ. ಗಳ ಸಾಲವನ್ನು ವಿತರಿಸಲಾಗಿದೆ.

***


(Release ID: 1665832) Visitor Counter : 381