ಪ್ರಧಾನ ಮಂತ್ರಿಯವರ ಕಛೇರಿ

ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆ 2020 ಉದ್ಘಾಟನಾ ಕಾರ್ಯಕ್ರಮ ಉದ್ದೇಶಿಸಿ ಪ್ರಧಾನ ಭಾಷಣ ಮಾಡಲಿರುವ ಪ್ರಧಾನಮಂತ್ರಿ

Posted On: 17 OCT 2020 11:09AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಕ್ಟೋಬರ್ 19ರಂದು ಸಂಜೆ 7.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆ 2020 ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಪ್ರಧಾನ ಭಾಷಣ ಮಾಡಲಿದ್ದಾರೆ.
ಗ್ರ್ಯಾಂಡ್ ಚಾಲೆಂಜರ್ಸ್ ನ ವಾರ್ಷಿಕ ಸಭೆ ಕಳೆದ 15 ವರ್ಷಗಳಿಂದ ನಡೆಯುತ್ತಿದ್ದು, ಆರೋಗ್ಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ಎದುರಾಗುವ ದೊಡ್ಡ ಸವಾಲುಗಳನ್ನು ಅಂತಾರಾಷ್ಟ್ರೀಯ ಆವಿಷ್ಕಾರ ಸಹಭಾಗಿತ್ವದ ಮೂಲಕ ಎದುರಿಸಲು ನೆರವಾಗುತ್ತಿದೆ. ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆ 2020ಯನ್ನು ಅಕ್ಟೋಬರ್ 19ರಿಂದ 21ರ ವರೆಗೆ ವರ್ಚುವಲ್ ರೂಪದಲ್ಲಿ ಆಯೋಜಿಸಲಾಗಿದ್ದು, ಇದರಲ್ಲಿ ನೀತಿ ನಿರೂಪಕರು ಮತ್ತು ವೈಜ್ಞಾನಿಕ ನಾಯಕರನ್ನು ಒಂದೆಡೆ ಸೇರಿಸಲಾಗುವುದು. ಜಾಗತಿಕ ಆರೋಗ್ಯ ಸಮಸ್ಯೆಗಳು ವಿಶೇಷವಾಗಿ ಕೋವಿಡ್-19ಕ್ಕೆ ಹೆಚ್ಚಿನ ಒತ್ತು ನೀಡಿ, ‘ಜಗತ್ತಿಗಾಗಿ ಭಾರತ’ ಎನ್ನುವ ಘೋಷಣೆ ಅಡಿ ವೈಜ್ಞಾನಿಕ ಸಹಭಾಗಿತ್ವಗಳ ಬಲವರ್ಧನೆಗೆ ಆದ್ಯತೆ ನೀಡಲಾಗುತ್ತಿದೆ. ವಿಶ್ವದಾದ್ಯಂತ ಇರುವ ಜಾಗತಿಕ ನಾಯಕರು, ಪ್ರಮುಖ ವಿಜ್ಞಾನಿಗಳು ಮತ್ತು ಸಂಶೋಧಕರು ಈ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದು, ಅವರು ಸಾಂಕ್ರಾಮಿಕದ ನಂತರದ ಜಗತ್ತಿನಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಆಗಿರುವ ಪ್ರಗತಿಗೆ ಇನ್ನಷ್ಟು ಪುಷ್ಟಿ ನೀಡುವ ಕುರಿತಂತೆ ಚರ್ಚೆ ನಡೆಸಲಿದ್ದಾರೆ, ಜೊತೆಗೆ ಕೋವಿಡ್-19 ನಿರ್ವಹಣೆ ಸವಾಲುಗಳನ್ನು ಎದುರಿಸುವ ಕುರಿತು ವಿಸ್ತೃತ ಸಮಾಲೋಚನೆ ನಡೆಸುವರು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಾಂಕ್ರಾಮಿಕ ಎದುರಿಸಲು ವೈಜ್ಞಾನಿಕ ಮಧ್ಯಪ್ರವೇಶ, ಸಾಂಕ್ರಾಮಿಕ ನಿರ್ವಹಣೆ ಮತ್ತು ಅಭಿವೃದ್ಧಿಗೆ ಚುರುಕು ನೀಡುವುದು ಮತ್ತು ಸಾಂಕ್ರಾಮಿಕವನ್ನು ಎದುರಿಸಲು ಜಾಗತಿಕ ಪರಿಹಾರಗಳನ್ನು ಜಾರಿಗೊಳಿಸುವುದು ಮತ್ತು ಮುಂದಿನ ಅಪಾಯಗಳನ್ನು ತಡೆಯುವುದು ಸೇರಿದಂತೆ ಹಲವು ವಿಷಯಗಳ ಕುರಿತಂತೆ ನಾಯಕರ ಭಾಷಣಗಳು, ಸಂವಾದಗಳು, ಚರ್ಚಾಗೋಷ್ಠಿಗಳು, ವರ್ಚುವಲ್ ಅನೌಪಚಾರಿಕ ಸಮಾಲೋಚನೆಗಳು ನಡೆಯಲಿವೆ. ಈ ವಾರ್ಷಿಕ ಸಭೆಯಲ್ಲಿ ಜಗತ್ತಿನ 40 ರಾಷ್ಟ್ರಗಳ ಸುಮಾರು 1600ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

          ಈ ಗ್ರ್ಯಾಂಡ್ ಚಾಲೆಂಜ್ ವಾರ್ಷಿಕ ಸಭೆ 2020ಯ ಸಹ ಆತಿಥ್ಯವನ್ನು, ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಜೈವಿಕ ತಂತ್ರಜ್ಞಾನ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ನೀತಿ ಆಯೋಗ ಅಲ್ಲದೆ ಕೆನಡಾದ ಗ್ರ್ಯಾಂಡ್ ಚಾಲೆಂಜಸ್ ಮತ್ತು ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಮತ್ತು ವೆಲ್ಕಮ್ ಏಜೆನ್ಸಿ ವಹಿಸುತ್ತಿವೆ.

          ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನಗಳ ಸಚಿವ ಡಾ. ಹರ್ಷವರ್ಧನ್ ಅವರು, ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್ ನ ಸಹ ಅಧ್ಯಕ್ಷ ಶ್ರೀ ಬಿಲ್ ಗೇಟ್ಸ್ ಸಮಾವೇಶದ ಸಮಾಲೋಚನೆಗಳ ವಿವರಗಳನ್ನು ಪ್ರಸ್ತುತಪಡಿಸಲಿದ್ದಾರೆ.

          ಗ್ರ್ಯಾಂಡ್ ಚಾಲೆಂಜರ್ಸ್ ಇಂಡಿಯಾ ಸಂಸ್ಥೆಯನ್ನು ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಸಹಭಾಗಿತ್ವದಲ್ಲಿ ಬಿಲ್ ಮತ್ತು ಮಿಲಿಂಡಾ ಗೇಟ್ಸ್ ಫೌಂಡೇಷನ್ 2012ರಲ್ಲಿ ಸ್ಥಾಪಿಸಿತು. ಆನಂತರ ವೆಲ್ಕಮ್ ಸಂಸ್ಥೆ ಕೂಡ ಅದಕ್ಕೆ ಸೇರ್ಪಡೆಗೊಂಡಿತು ಗ್ರ್ಯಾಂಡ್ ಚಾಲೆಂಜರ್ಸ್ ಇಂಡಿಯಾ ಸಂಸ್ಥೆ ಕೃಷಿ, ಪೌಷ್ಠಿಕಾಂಶ, ನೈರ್ಮಲೀಕರಣ, ತಾಯಿ ಮತ್ತು ಮಗುವಿನ ಆರೋಗ್ಯದಿಂದ ಹಿಡಿದು, ಸೋಂಕು ನಿವಾರಕ ಕಾಯಿಲೆಗಳು ಸೇರಿದಂತೆ ಆರೋಗ್ಯ ಹಾಗೂ ಅಭಿವೃದ್ಧಿಯ ಆದ್ಯತೆಗಳ ಕುರಿತ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿದೆ.

***



(Release ID: 1665540) Visitor Counter : 140