ಪ್ರಧಾನ ಮಂತ್ರಿಯವರ ಕಛೇರಿ

ಸ್ವಾಮಿತ್ವ ಯೋಜನೆಯಡಿ ಆಸ್ತಿಯ ಕಾರ್ಡ್ ಗಳ ಭೌತಿಕ ವಿತರಣೆಗೆ ಪ್ರಧಾನಮಂತ್ರಿ ಚಾಲನೆ


ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಪ್ರತಿಯೊಂದು ಕುಟುಂಬಕ್ಕೂ ಸ್ವತ್ತಿನ ಕಾರ್ಡ್ ನೀಡುವ ಭರವಸೆ

ಆಸ್ತಿ ಕಾರ್ಡ್ ಗಳು ಬ್ಯಾಂಕ್ ಸಾಲದ ಲಭ್ಯತೆ ಖಾತ್ರಿ ಪಡಿಸುತ್ತವೆ: ಪ್ರಧಾನಮಂತ್ರಿ

Posted On: 11 OCT 2020 2:13PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸ್ವಾಮಿತ್ವ ಯೋಜನೆ ಅಡಿಯಲ್ಲಿ ಆಸ್ತಿಗಳ ಕಾರ್ಡ್ ಗಳ ಭೌತಿಕ ವಿತರಣೆಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಿದರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ಪ್ರಧಾನಮಂತ್ರಿಯವರು ತಮ್ಮ ಮನೆಗಳಿಗೆ ಇಂದು ಆಸ್ತಿಯ ಕಾರ್ಡ್ ಪಡೆದ ಸ್ವಾಮಿತ್ವ ಯೋಜನೆಯ ಫಲಾನುಭವಿಗಳಿಗೆ ಶುಭ ಕೋರಿ, ಈಗ ಫಲಾನುಭವಿಗಳಿಗೆ ತಮ್ಮ ಹಕ್ಕು ಮತ್ತು ಮನೆಯ ಒಡೆತನದ ಕಾನೂನುಬದ್ಧ ದಸ್ತಾವೇಜು ದೊರೆತಂತಾಗಿದೆ ಎಂದರು. ಯೋಜನೆ ದೇಶದ ಗ್ರಾಮೀಣ ಪ್ರದೇಶಗಳಲ್ಲಿ ಐತಿಹಾಸಿಕ ಬದಲಾವಣೆ ತರಲಿದೆ ಎಂದರು. ಆತ್ಮನಿರ್ಭರ ಭಾರತದ ನಿಟ್ಟಿನಲ್ಲಿ ದೇಶ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಯೋಜನೆ ಗ್ರಾಮೀಣ ಭಾರತ ಸ್ವಾವಲಂಬಿಯಾಗಲು ನೆರವಾಗಲಿದೆ ಎಂದರು.

ಹರಿಯಾಣ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಒಂದು ಲಕ್ಷ ಫಲಾನುಭವಿಗಳಿಗೆ ಇಂದು ಅವರ ಮನೆಗಳ ಕಾನೂನಾತ್ಮಕ ದಾಖಲೆಗಳನ್ನು ಹಸ್ತಾಂತರಿಸಲಾಗುತ್ತಿದೆ ಎಂದ ಪ್ರಧಾನಮಂತ್ರಿಯವರು, ಅಂಥ ಸ್ವತ್ತಿನ ಕಾರ್ಡ್ ಗಳನ್ನು ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ದೇಶದ ಪ್ರತಿಯೊಂದು ಗ್ರಾಮದ ಮನೆಗಳಿಗೂ ನೀಡುವ ಭರವಸೆ ನೀಡಿದರು.

ದೇಶದ ಇಬ್ಬರು ಮಹಾಪುರುಷರಾದ ಜಯಪ್ರಕಾಶ್ ನಾರಾಯಣ್ ಮತ್ತು ನಾನಾಜಿ ದೇಶ್ ಮುಖ್ ಅವರ ಜಯಂತಿಯಂದು ಸ್ವತ್ತಿನ ಕಾರ್ಡ್ ವಿತರಿಸುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು. ಇಬ್ಬರು ನಾಯಕರ ಜನ್ಮ ದಿನ ಒಂದೇ ದಿನ ಬರುವುದಷ್ಟೇ ಅಲ್ಲ, ಅವರಿಬ್ಬರ ಆದರ್ಶಗಳು, ಹೋರಾಟವೂ ಒಂದೇ ರೀತಿಯಲ್ಲಿತ್ತು ಎಂದರು. ನಾನಾಜಿ ಮತ್ತು ಜೆಪಿ ಅವರಿಬ್ಬರೂ ತಮ್ಮ ಇಡೀ ಜೀವನವನ್ನು ಗ್ರಾಮೀಣ ಭಾರತ ಮತ್ತು ಬಡವರ ಸಬಲೀಕರಣಕ್ಕೆ ಮೀಸಲಿಟ್ಟಿದ್ದರು ಎಂದು ಸ್ಮರಿಸಿದರು.

"ಹಳ್ಳಿಯ ಜನರು ವಿವಾದಗಳಲ್ಲಿ ಸಿಲುಕಿಕೊಂಡಾಗ, ಅವರು ತಮ್ಮನ್ನು ಅಥವಾ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗುವುದಿಲ್ಲ" ಎಂಬ ನಾನಾಜಿಯವರ ಮಾತುಗಳನ್ನು ಸ್ಮರಿಸಿದ ಶ್ರೀ ಮೋದಿ, ನಮ್ಮ ಹಳ್ಳಿಗಳಲ್ಲಿ ಅನೇಕ ವಿವಾದಗಳನ್ನು ಕೊನೆಗೊಳಿಸಲು ಮಾಲೀಕತ್ವದ ಕಾರ್ಡ್  ಒಂದು ಉತ್ತಮ ಮಾಧ್ಯಮವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಭೂಮಿಯ ಮತ್ತು ಮನೆಯ ಒಡೆತನವು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಧಾನಿ ಹೇಳಿದರು. ಸ್ವತ್ತಿನ ದಾಖಲೆ ಇದ್ದಾಗ, ಜನರಲ್ಲಿ ವಿಶ್ವಾಸ ಇರುತ್ತದೆ ಮತ್ತು ಹೂಡಿಕೆಯ ಹೊಸ ದಾರಿ ತೆರೆದುಕೊಳ್ಳುತ್ತದೆ ಎಂದರು. ಸ್ವತ್ತಿನ ದಾಖಲೆಗಳ ಮೇಲೆ ಬ್ಯಾಂಕ್ ಗಳಿಂದ ಸುಲಭವಾಗಿ ಸಾಲ ದೊರಕುತ್ತದೆ, ಸ್ವಯಂ ಉದ್ಯೋಗ ಮತ್ತು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ ಎಂದರು. ಕಷ್ಟದ ಸಂಗತಿಯೆಂದರೆ ಇಂದು ಜಗತ್ತಿನ ಮೂರನೇ ಒಂದು ಭಾಗದ ಜನಸಂಖ್ಯೆ ಮಾತ್ರ ತಮ್ಮ ಸ್ವತ್ತಿನ ಕಾನೂನುಬದ್ಧ ದಾಖಲೆ ಹೊಂದಿದ್ದಾರೆ. ಆಸ್ತಿ ಕಾರ್ಡ್ ಗ್ರಾಮಸ್ಥರಿಗೆ ಯಾವುದೇ ವಿವಾದವಿಲ್ಲದೆ ಆಸ್ತಿ ಖರೀದಿಸುವ ಮತ್ತು ಮಾರಾಟ ಮಾಡುವ ಮಾರ್ಗವನ್ನು ಮುಕ್ತಗೊಳಿಸುತ್ತದೆ ಎಂದು ಅವರು ಹೇಳಿದರು. ಇಂದು ಹಳ್ಳಿಯಲ್ಲಿರುವ ಅನೇಕ ಯುವಕರನ್ನು ನಾವು ಹೊಂದಿದ್ದೇವೆ, ಅವರು ಸ್ವಂತವಾಗಿ ಏನನ್ನಾದರೂ ಮಾಡಲು ಬಯಸುತ್ತಾರೆ. ಆಸ್ತಿ ಕಾರ್ಡ್ ಪಡೆದ ನಂತರ, ಬ್ಯಾಂಕುಗಳಿಂದ ಅವರ ಮನೆಗಳ ಮೇಲೆ ಸುಲಭವಾಗಿ ಸಾಲ ಪಡೆಯುವುದನ್ನು ಖಾತ್ರಿಪಡಿಸಬಹುದು ಎಂದರು. ಹೊಸ ತಂತ್ರಜ್ಞಾನ ಅಂದರೆ ಡ್ರೋನ್ ಬಳಸಿ ಮ್ಯಾಪಿಂಗ್ ಮತ್ತು ಭೂಮಾಪನ ಮಾಡುವುದರಿಂದ ನಿಖರವಾದ ಭೂ ದಾಖಲೆಗಳನ್ನು ಗ್ರಾಮಗಳಲ್ಲಿ ರೂಪಿಸಬಹುದು. ನಿಖರವಾದ ಭೂ ದಾಖಲೆಗಳಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಸಂಬಂಧಿತ ಕಾಮಗಾರಿಗಳು ಸಹ ಸುಲಭವಾಗುತ್ತವೆ. ಇದು ಸ್ವತ್ತಿನ ಕಾರ್ಡ್ ಗಳ ಮತ್ತೊಂದು ಪ್ರಯೋಜನ ಎಂದರು.

ಪ್ರಧಾನಮಂತ್ರಿಯವರು ಸ್ವಾಮಿತ್ವ ಯೋಜನೆ ಪಂಚಾಯತಿ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ನೆರವಾಗುತ್ತದೆ, ನಿಟ್ಟಿನಲ್ಲಿ ಕಳೆದ ಆರು ವರ್ಷಗಳಿಂದ ಪ್ರಯತ್ನ ಸಾಗಿದೆ ಎಂದರು. ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕೆ ಕಳೆದ ಆರು ವರ್ಷಗಳಿಂದ ಕೈಗೊಂಡಿರುವ ಕ್ರಮಗಳನ್ನು ಪಟ್ಟಿ ಮಾಡಿದ ಅವರು, ಸ್ವಾಮಿತ್ವ ಯೋಜನೆಯು ನಮ್ಮ ಗ್ರಾಮ ಪಂಚಾಯಿತಿಗಳಿಗೆ, ಪುರಸಭೆಗಳು ಮತ್ತು ನಗರಸಭೆಗಳಿಗೆ ವ್ಯವಸ್ಥಿತ ರೀತಿಯಲ್ಲಿ ಗ್ರಾಮ ನಿರ್ವಹಣೆ ಮಾಡಲು ಸುಗಮಗೊಳಿಸುತ್ತದೆ ಎಂದರು. ಕಳೆದ 6 ವರ್ಷಗಳಲ್ಲಿ ಹಳ್ಳಿಗಳಲ್ಲಿನ ದೀರ್ಘಕಾಲದ ಕೊರತೆಯನ್ನು ನೀಗಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯ ಬಂದ 70 ವರ್ಷಗಳಲ್ಲಿ  ಆಗದಷ್ಟು ಅಭೂತಪೂರ್ವವಾದ ಅಭಿವೃದ್ಧಿ ಕಳೆದ ಆರು ವರ್ಷಗಳಲ್ಲಿ ಆಗಿದೆ ಎಂದು ಅವರು ಹೇಳಿದರು. ಬ್ಯಾಂಕ್ ಖಾತೆ, ವಿದ್ಯುತ್ ಸಂಪರ್ಕ, ಶೌಚಾಲಯದ ಲಭ್ಯತೆ, ಅನಿಲ ಸಂಪರ್ಕ, ಪಕ್ಕಾ ಮನೆ ಮತ್ತು ಕೊಳವೆಯ ಮೂಲಕ ಕುಡಿಯುವ ನೀರು ಸೇರಿದಂತೆ ಕಳೆದ ಆರು ವರ್ಷಗಳಲ್ಲಿ ಗ್ರಾಮೀಣ ಜನರು ಪಡೆದುಕೊಂಡಿರುವ ಸೌಲಭ್ಯಗಳ ಪಟ್ಟಿ ಮಾಡಿದರು. ಆಪ್ಟಿಕಲ್ ಫೈಬರ್ ಜಾಲದ ಮೂಲಕ ದೇಶದ ಎಲ್ಲ ಗ್ರಾಮಗಳನ್ನೂ ಸಂಪರ್ಕಿಸುವ ಪ್ರಮುಖ ಅಭಿಯಾನ ತ್ವರಿತಗತಿಯಲ್ಲಿ ಸಾಗಿದೆ ಎಂದರು.

ನಮ್ಮ ರೈತರು ಸ್ವಾವಲಂಬಿಗಳಾಗುವುದನ್ನು ಬಯಸದವರಿಗೆ ಕೃಷಿ ವಲಯದಲ್ಲಿನ ಸುಧಾರಣೆಗಳ ಬಗ್ಗೆ ತಕರಾರಿದೆ ಎಂದು ಪ್ರತಿಪಕ್ಷಗಳನ್ನು ಪ್ರಧಾನಮಂತ್ರಿಯವರು ದೂಷಿಸಿದರುಸಣ್ಣ ರೈತರು, ದನಗಾಹಿಗಳು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಪರಿಚಯಿಸುವುದರೊಂದಿಗೆ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳಿಗೆ ತೊದರೆಯಾಗಿದೆ, ಅವರ ಅಕ್ರಮ ಆದಾಯ ನಿಂತುಹೋಗಿದೆ ಎಂದರು. ಬೇವು ಲೇಪಿತ ಯೂರಿಯಾದಿಂದ ಸೋರಿಕೆ ನಿಂತು ಹೋಗಿರುವುದನ್ನೂ ಪ್ರಸ್ತಾಪಿಸಿದ ಅವರು, ರೈತರ ಖಾತೆಗೆ ನೇರ ಸವಲತ್ತು ವರ್ಗಾವಣೆಯಾಗುತ್ತಿದೆ ಎಂದ ಅವರು, ಸೋರಿಕೆ  ಕಸಿದುಕೊಳ್ಳುವುದರಿಂದ ಪ್ರಭಾವಿತರಾದವರು ಇಂದು ಕೃಷಿ ಸುಧಾರಣೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು. ಅವರುಗಳಿಂದಾಗಿ ದೇಶದ ಅಭಿವೃದ್ಧಿ ನಿಲ್ಲುವುದಿಲ್ಲ ಬದಲಾಗಿ ಗ್ರಾಮ ಮತ್ತು ಬಡವರು ಸ್ವಾವಲಂಬಿಗಳಾಗುವುದು ಮುಂದುವರಿಯುತ್ತದೆ ಎಂದರು. ನಿರ್ಣಾಯಕ ಸಾಧನೆಗೆ ಸ್ವಾಮಿತ್ವ ಯೋಜನೆಪಾತ್ರವೂ ಬಹಳ ಮುಖ್ಯ ಎಂದು ಅವರು ಹೇಳಿದರು.

***



(Release ID: 1663582) Visitor Counter : 242