ಪ್ರಧಾನ ಮಂತ್ರಿಯವರ ಕಛೇರಿ

ಕೆನಡಾದಲ್ಲಿ ಜರುಗಿದ ಇನ್ವೆಸ್ಟ್ ಇಂಡಿಯಾ ಸಮಾವೇಶವನ್ನುದ್ದೇಶಿಸಿ ಪ್ರಧಾನಮಂತ್ರಿ ಪ್ರಾಸ್ತಾವಿಕ ಭಾಷಣ


ಭಾರತದಲ್ಲಿ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣ

ಭಾರತದಲ್ಲಿ ರಾಜಕೀಯ ಸ್ಥಿರತೆ ಇದ್ದು, ಹೂಡಿಕೆ ಸ್ನೇಹಿ ನೀತಿಗಳು, ಪಾರದರ್ಶಕತೆ, ಕೌಶಲ್ಯಹೊಂದಿದ ಪ್ರತಿಭಾ ಸಂಪನ್ಮೂಲವಿದೆ

ಭಾರತದ ಅಭಿವೃದ್ಧಿಗಾಥೆ ಇಂದು ಬಲಿಷ್ಠವಾಗಿದೆ ಮತ್ತು ನಾಳೆ ಅದು ಇನ್ನಷ್ಟು ಸದೃಢವಾಗಲಿದೆ

ಕೃಷಿ, ಕಾರ್ಮಿಕ ವಲಯದಲ್ಲಿ ಮಹತ್ವದ  ಸುಧಾರಣೆ ತರಲಾಗಿದೆ ಮತ್ತು ಭಾರತದಲ್ಲಿ ಶೈಕ್ಷಣಿಕ ವಲಯದಲ್ಲಿ ಹೂಡಿಕೆಗೆ ವಿಪುಲ ಅವಕಾಶಗಳು ತೆರೆದಿವೆ

ಭಾರತದಲ್ಲಿ ಮನಸ್ಸುಗಳು ಮತ್ತು ಮಾರುಕಟ್ಟೆಗಳಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ: ಪ್ರಧಾನಮಂತ್ರಿ

Posted On: 08 OCT 2020 8:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೆನಡಾದಲ್ಲಿ ನಡೆದ ಇನ್ವೆಸ್ಟ್ ಇಂಡಿಯಾ (ಭಾರತದಲ್ಲಿ ಹೂಡಿಕೆಮಾಡಿ) ಸಮಾವೇಶವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಪ್ರಾಸ್ತಾವಿಕ ಭಾಷಣ ಮಾಡಿದರು. 

ಬಂಡವಾಳ ಹೂಡಿಕೆಯ ಎಲ್ಲ ಮಾನದಂಡಗಳಲ್ಲೂ ಇಂದು ಪ್ರಕಾಶಿಸುತ್ತಿರುವ ಏಕೈಕ ರಾಷ್ಟ್ರ ಭಾರತ ಎಂಬುದು ನಿರ್ವಿವಾದವಾಗಿ ದೃಢಪಟ್ಟಿದೆ. ಇಲ್ಲಿ ರಾಜಕೀಯ ಸ್ಥಿರತೆ ಇದ್ದು, ಬಂಡವಾಳ ಮತ್ತು ವಾಣಿಜ್ಯಸ್ನೇಹಿ ನೀತಿಗಳಿವೆ, ಆಡಳಿತದಲ್ಲಿ ಪಾರದರ್ಶಕತೆ ಇದೆ, ಕೌಶಲ್ಯ ಹೊಂದಿದ ಪ್ರತಿಭಾ ಸಂಪನ್ಮೂಲ ಮತ್ತು ಬೃಹತ್ ಮಾರುಕಟ್ಟೆ ಇದೆ ಎಂದು  ಪ್ರಧಾನಮಂತ್ರಿ ಹೇಳಿದರು. ಇಲ್ಲಿ ಸಾಂಸ್ಥಿಕ ಹೂಡಿಕೆದಾರರು, ಉತ್ಪಾದಕರು, ನಾವಿನ್ಯ ಪೂರಕ ವ್ಯವಸ್ಥೆಯನ್ನು ಬೆಂಬಲಿಸುವವರು ಮತ್ತು ಮೂಲಸೌಕರ್ಯ ಕಂಪನಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಹೂಡಿಕೆಗೆ ವಿಫುಲ ಅವಕಾಶಗಳಿವೆ ಎಂದು ಹೇಳಿದರು.

ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ ಅತ್ಯಂತ ಸಮರ್ಥವಾಗಿ ಸ್ಥಿತಿಸ್ಥಾಪಕತ್ವ ಪ್ರದರ್ಶಿಸಿದೆ ಮತ್ತು ಉತ್ಪಾದನೆ ಪೂರೈಕೆ ಸರಣಿ ಸೇರಿದಂತೆ ನಾನಾ ಬಗೆಯ ಸವಾಲುಗಳಿಂದ ಹೊರಬರಲು ಪರಿಹಾರಗಳನ್ನು ಕಂಡುಹಿಡಿಯುವ ತಾಣವಾಗಿ ಹೊರಹೊಮ್ಮಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸಾಗಾಣೆ ಅಡೆತಡೆ ನಡುವೆಯೂ ಸುಮಾರು 400 ಮಿಲಿಯನ್ ರೈತರು, ಮಹಿಳೆಯರು, ಬಡವರು ಮತ್ತು ಅಗತ್ಯವಿರುವವರಿಗೆ ಕೆಲವೇ ದಿನಗಳಲ್ಲಿ ಬ್ಯಾಂಕ್ ಖಾತೆಗಳಿಗೆ ನೇರ ಹಣ ವರ್ಗಾವಣೆ ಮಾಡಲಾಗಿದೆ ಎಂದರು. ಕೋವಿಡ್-19 ಸಾಂಕ್ರಾಮಿಕದಿಂದ ಆಗಿರುವ ಸಂಕಷ್ಟಗಳಿಂದ ಹೊರಬರಲು ಸರ್ಕಾರ ಕೈಗೊಂಡಿರುವ ಹಲವು ಉಪಕ್ರಮಗಳನ್ನು ಉಲ್ಲೇಖಿಸಿದ ಅವರು, ಇದು ಸರ್ಕಾರದ ವ್ಯವಸ್ಥೆಯ ಶಕ್ತಿಯನ್ನು ತೋರಿಸುತ್ತದೆ ಮತ್ತು ಕಳೆದ ಕೆಲವು ವರ್ಷಗಳಿಂದೀಚೆಗೆ ಅತ್ಯಂತ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.

ಇಡೀ ದೇಶದಲ್ಲಿ ಅತ್ಯಂತ ಕಠಿಣ ಲಾಕ್ ಡೌನ್ ಜಾರಿಯಿದ್ದ ವೇಳೆ, ಭಾರತ ಸುಮಾರು 150 ರಾಷ್ಟ್ರಗಳಿಗೆ ಔಷಧವನ್ನು ಪೂರೈಸಿದೆ ಮತ್ತು ಇಡೀ ಜಗತ್ತಿಗೆ ಫಾರ್ಮರ್ಸಿಯಾಗಿ ಪಾತ್ರವನ್ನು ನಿರ್ವಹಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ವರ್ಷದ ಮಾರ್ಚ್ – ಜೂನ್ ಅವಧಿಯಲ್ಲಿ ಕೃಷಿ ಉತ್ಪನ್ನಗಳ ರಫ್ತು ಪ್ರಮಾಣ ಶೇ.23ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು. ಸಾಂಕ್ರಾಮಿಕಕ್ಕೂ ಮುನ್ನ ಭಾರತದಲ್ಲಿ ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್ ಗಳ ಉತ್ಪಾದನೆ ಬೆರಳೆಣಿಕೆಯಷ್ಟಿತ್ತು, ಆದರೆ ಇಂದು ಭಾರತ ಪ್ರತಿ ತಿಂಗಳೂ ಮಿಲಿಯನ್ ಗಟ್ಟಲೆ ಪಿಪಿಇ ಕಿಟ್ ಗಳನ್ನು ಉತ್ಪಾದಿಸುತ್ತಿರುವುದೇ ಅಲ್ಲದೆ ಅದನ್ನು ರಫ್ತು ಮಾಡುತ್ತಿದೆ ಎಂದರು. ಕೋವಿಡ್-19ಗೆ ಲಸಿಕೆ ಉತ್ಪಾದಿಸಿ, ಇಡೀ ವಿಶ್ವಕ್ಕೆ ಸಹಾಯ ಮಾಡಲು ಮತ್ತು ಉತ್ಪಾದನಾ ಚಟುವಟಿಕೆ ಚುರುಕುಗೊಳಿಸಲು ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.

ವಾಣಿಜ್ಯಸ್ನೇಹಿ ವಾತಾವರಣ ಸೃಷ್ಟಿಸಲು ಭಾರತ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಗಳು, ಭಾರತದ ಪ್ರಗತಿಗಾಥೆ ಬಲಿಷ್ಠವಾಗಿ ಬೆಳೆಯುತ್ತಿರುವುದನ್ನು ವಿವರಿಸಿದರು. ಎಫ್ ಡಿ ಐ ನೀತಿ ಸರಳೀಕರಣ, ಸಂಪತ್ತು ಮತ್ತು ಪಿಂಚಣಿ ನಿಧಿಗಳ ತೆರಿಗೆ ಸ್ನೇಹಿ ಪದ್ಧತಿ ಸೃಷ್ಟಿ, ಉತ್ಕೃಷ್ಟ ಷೇರು ಮಾರುಕಟ್ಟೆ ಅಭಿವೃದ್ಧಿಗೆ ಮಹತ್ವದ ಸುಧಾರಣೆಗಳು, ಮಹತ್ವದ ವಲಯಗಳಿಗೆ ಪ್ರೋತ್ಸಾಹಕರ ಯೋಜನೆಗಳ ಕುರಿತು ಅವರು ಉಲ್ಲೇಖಿಸಿದರು. ಫಾರ್ಮ, ವೈದ್ಯಕೀಯ ಸಾಧನಗಳು ಮತ್ತು ವಿದ್ಯುನ್ಮಾನ ಉಪಕರಣಗಳ ಉತ್ಪಾದನಾ ವಲಯದಲ್ಲಿ ಹಲವು ಯೋಜನೆಗಳು ಈಗಾಗಲೇ ಜಾರಿಯಲ್ಲಿವೆ ಎಂದು ಅವರು ಹೇಳಿದರು. ಹೂಡಿಕೆದಾರರನ್ನು ಪರಿಣಾಮಕಾರಿಯಾಗಿ ಬೆಂಬಲಿಸಲು ಮತ್ತು ಅವರಿಗೆ ಹೆಚ್ಚಿನ ಮಟ್ಟದ ಗಮನಹರಿಸಲು ಕಾರ್ಯದರ್ಶಿಗಳನ್ನೊಳಗೊಂಡ ನಿರ್ದಿಷ್ಟ ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ವಿಮಾನ ನಿಲ್ದಾಣ, ರೈಲ್ವೆ, ಹೆದ್ದಾರಿ, ವಿದ್ಯುತ್ ಪ್ರಸರಣಾ ಮಾರ್ಗಗಳು ಇತ್ಯಾದಿ ವಲಯಗಳಲ್ಲಿ ಕ್ರಿಯಾಶೀಲ ಸ್ವತ್ತುಗಳ ಸೃಷ್ಟಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು. ಖಾಸಗಿ ಮತ್ತು ಸಾರ್ವಜನಿಕ ಆಸ್ತಿಗಳ ನಗದೀಕರಣಕ್ಕಾಗಿ ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ ಮತ್ತು ಮೂಲಸೌಕರ್ಯ ಹೂಡಿಕೆ ಟ್ರಸ್ಟ್ ಗಳನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೊಳಿಸಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದಲ್ಲಿಂದು ಮನೋಭಾವದಲ್ಲಿ ಮತ್ತು ಮಾರುಕಟ್ಟೆಗಳಲ್ಲಿ ಕ್ಷಿಪ್ರ ಬದಲಾವಣೆಗಳಾಗುತ್ತಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಕಂಪನಿ ಕಾಯ್ದೆ ಅಡಿಯಲ್ಲಿ ಹಲವು ನಿಯಂತ್ರಣಗಳನ್ನು ತೆಗೆದು ಹಾಕಲಾಗಿದೆ ಮತ್ತು ಹಲವು ಅಪರಾಧಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ ಎಂದು ಹೇಳಿದರು. ಜಾಗತಿಕ ಆವಿಷ್ಕಾರಿ ಸೂಚ್ಯಂಕದಲ್ಲಿ ಭಾರತ 81ನೇ ಸ್ಥಾನದಿಂದ 48ನೇ ಸ್ಥಾನಕ್ಕೆ ಏರಿಕೆಯಾಗಿದೆ ಎಂದ ಅವರು, ಕಳೆದ ಐದು ವರ್ಷಗಳಿಂದೀಚೆಗೆ ವಿಶ್ವ ಬ್ಯಾಂಕ್ ನ ವ್ಯಾಪಾರ ಸ್ನೇಹಿ ಶ್ರೇಯಾಂಕದಲ್ಲಿ 142ನೇ ಸ್ಥಾನದಿಂದ 63ನೇ ಸ್ಥಾನಕ್ಕೆ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಈ ಎಲ್ಲ ಸುಧಾರಣೆಗಳ ಪರಿಣಾಮ ಭಾರತ, 2019ರ ಜನವರಿಯಿಂದ 2020ರ ಜುಲೈ ನಡುವಿನ ಅವಧಿಯಲ್ಲಿ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು 70 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಸ್ವೀಕರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದು ನಾಲ್ಕು ವರ್ಷಗಳ ಹಿಂದೆ 2013 ರಿಂದ 2017ರ ವರೆಗೆ ಸ್ವೀಕರಿಸಿರುವ ಮೊತ್ತಕ್ಕೆ ಸಮನಾದುದು. ಜಾಗತಿಕ ಹೂಡಿಕೆದಾರರ ಸಮುದಾಯದಲ್ಲಿ ಭಾರತದ ಬಗ್ಗೆ ವಿಶ್ವಾಸ ಮೂಡಿಸಲು ಹೆಚ್ಚಿನ ಒತ್ತು ನೀಡುತ್ತಿರುವ ಪರಿಣಾಮದಿಂದಾಗಿ ಭಾರತಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ(ಎಫ್ ಡಿ ಐ) ಹರಿದುಬರುತ್ತಿದ್ದು, ಜಾಗತಿಕ ಮಟ್ಟದಲ್ಲಿ ಎಫ್ ಡಿ ಐ ಒಳಹರಿವಿನ ಪ್ರಮಾಣ ಶೇ.1ರಷ್ಟು ಕುಸಿತದ ನಡುವೆಯೂ ಭಾರತದಲ್ಲಿ 2019ರಲ್ಲಿ ಎಫ್ ಡಿ ಐ ಹರಿವಿನ ಪ್ರಮಾಣ ಶೇ.20ರಷ್ಟು ಹೆಚ್ಚಳವಾಗಿದೆ.

ಜಾಗತಿಕವಾಗಿ ಕೋವಿಡ್-19 ಸಾಂಕ್ರಾಮಿಕ ಭಾರೀ ಪ್ರಮಾಣದಲ್ಲಿ ವ್ಯಾಪಿಸುತ್ತಿರುವುದರ ನಡುವೆಯೇ  ಈ ವರ್ಷ ಮೊದಲ ಆರು ತಿಂಗಳಲ್ಲಿ ಭಾರತ ಈಗಾಗಲೇ 20 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ವಿದೇಶಿ ಬಂಡವಾಳ ಸ್ವೀಕರಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಕೋವಿಡ್-19 ಸಾಂಕ್ರಾಮಿಕ ಎದುರಿಸಿರುವ ಸವಾಲುಗಳನ್ನು ಹತ್ತಿಕ್ಕಲು ಭಾರತ ವಿಭಿನ್ನ ರೀತಿಯ ಕಾರ್ಯತಂತ್ರಗಳನ್ನು ಅವಳವಡಿಸಿಕೊಂಡಿದೆ ಎಂದರು. ಬಡವರು  ಮತ್ತು ಸಣ್ಣ ಉದ್ದಿಮೆದಾರರಿಗೆ ಪರಿಹಾರ ಮತ್ತು ಸಂಕಷ್ಟ ಪ್ಯಾಕೇಜ್ ಗಳನ್ನು ನೀಡಲಾಗಿದೆ ಮತ್ತು ಇದೇ ವೇಳೆ ಹೆಚ್ಚಿನ ಉತ್ಪಾದಕತೆ ಮತ್ತು ಏಳಿಗೆಯನ್ನು ಖಾತ್ರಿಪಡಿಲು ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳನ್ನು ತರಲಾಗಿದೆ ಎಂದು ಹೇಳಿದರು.

ಶಿಕ್ಷಣ, ಕಾರ್ಮಿಕ ಮತ್ತು ಕೃಷಿ ವಲಯಗಳಲ್ಲಿ ಭಾರತ ಮಹತ್ವದ ಸುಧಾರಣೆಗಳನ್ನು ಕೈಗೊಂಡಿದೆ. ಅವುಗಳು ಬಹುತೇಕ ಪ್ರತಿಯೊಬ್ಬ ಭಾರತೀಯರ ಮೇಲೂ ಪರಿಣಾಮಗಳನ್ನು ಬೀರುತ್ತಿದೆ ಎಂದು ಅವರು ಹೇಳಿದರು. ಕಾರ್ಮಿಕ ಮತ್ತು ಕೃಷಿ ವಲಯಗಳಲ್ಲಿ ಹಳೆಯ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದು ಭಾರತ ಸುಧಾರಣೆಗಳನ್ನು  ಕೈಗೊಂಡಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರಿಂದಾಗಿ ಖಾಸಗಿ ವಲಯದ ಹೆಚ್ಚಿನ ಸಹಭಾಗಿತ್ವಕ್ಕೆ ಅವಕಾಶ ಮಾಡಿಕೊಡುವುದಲ್ಲದೆ, ಸರ್ಕಾರದ ಸುರಕ್ಷತಾ ಕ್ರಮಗಳನ್ನೂ ಸಹ ಬಲವರ್ಧನೆಗೊಳಿಸಿದೆ ಹಾಗೂ ಉದ್ಯಮಿಗಳಿಗೆ ಮತ್ತು ನಮ್ಮ ಶ್ರಮಜೀವಿ ಜನರಿಗೆ ಇಬ್ಬರಿಗೂ ಸಹ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಯಾಗಲಿದೆ ಎಂದರು. ಶಿಕ್ಷಣ ವಲಯದಲ್ಲಿನ ಸುಧಾರಣೆಗಳಿಂದಾಗಿ ನಮ್ಮ ಯುವಕರಲ್ಲಿನ ಪ್ರತಿಭೆಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿದೆ ಮತ್ತು ಹೆಚ್ಚಿನ ವಿದೇಶಿ ವಿಶ್ವವಿದ್ಯಾಲಯಗಳು ಭಾರತಕ್ಕೆ ಬರಲು ವೇದಿಕೆಯನ್ನು ಸೃಷ್ಟಿಸಲಾಗಿದೆ ಎಂದರು.

ಕಾರ್ಮಿಕ ಕಾನೂನುಗಳಲ್ಲಿ ಸುಧಾರಣೆಗಳನ್ನು ತರಲಾಗಿದ್ದು, ಕಾರ್ಮಿಕ ಸಂಹಿತೆಗಳ ಸಂಖ್ಯೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಇಳಿಕೆ ಮಾಡಲಾಗಿದೆ ಮತ್ತು ಸಂಹಿತೆಗಳನ್ನು ಉದ್ಯೋಗಿ ಮತ್ತು ಉದ್ಯೋಗದಾತರ ಸ್ನೇಹಿಯನ್ನಾಗಿ ಮಾಡಲಾಗಿದೆ ಹಾಗೂ ಉದ್ದಿಮೆಗಳ ಕಾರ್ಯ ನಿರ್ವಹಣೆಗೆ ಮತ್ತಷ್ಟು ಪೂರಕ ವಾತಾವರಣ ಸೃಷ್ಟಿಯಾಗಲಿದೆ ಎಂದರು. ಕೃಷಿ ವಲಯದಲ್ಲಿ ಸುಧಾರಣೆಗಳು ಅತ್ಯಂತ ದೂರಗಾಮಿಯಾಗಿವೆ ಎಂದ ಅವರು, ಅವುಗಳಿಂದಾಗಿ ರೈತರಿಗೆ ಹೆಚ್ಚಿನ ಅವಕಾಶಗಳು ದೊರೆಯುವುದಲ್ಲದೆ, ರಫ್ತು ಉತ್ತೇಜನಕ್ಕೆ ಸಹಕಾರಿಯಾಗಲಿವೆ ಎಂದರು. ಈ ಎಲ್ಲ ಸುಧಾರಣೆಗಳು ಆತ್ಮನಿರ್ಭರ ಭಾರತ ಅಥವಾ ಸ್ವಾವಲಂಬಿ ಭಾರತ ನಿರ್ಮಾಣ ಮಾಡುವ ನಮ್ಮ ಪ್ರಯತ್ನಗಳನ್ನು ಬೆಂಬಲಿಸಲಿವೆ ಮತ್ತು ಆ ಮೂಲಕ ಸ್ವಾವಲಂಬನೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ ಜಾಗತಿಕ ಒಳಿತು ಮತ್ತು ಅಭ್ಯುದಯಕ್ಕೆ ಕೊಡುಗೆ ನೀಡಲು ನಾವು ಎದುರು ನೋಡುತ್ತಿದ್ದೇವೆ ಎಂದರು. ಶಿಕ್ಷಣ ವಲಯದಲ್ಲಿ ಭಾರತದೊಂದಿಗೆ ಸಹಭಾಗಿತ್ವ ಸಾಧಿಸಲು ಉತ್ತಮ ಅವಕಾಶವಿದೆ. ಉತ್ಪಾದನೆ ಮತ್ತು ಸೇವಾ ವಲಯದಲ್ಲೂ ಸಹ ಹೂಡಿಕೆಗೆ ಅವಕಾಶವಿದೆ ಹಾಗೂ ಕೃಷಿ ವಲಯದಲ್ಲೂ ಸಹ ಸಹಭಾಗಿತ್ವ ಸಾಧಿಸಬಹುದಾಗಿದೆ ಎಂದರು.

ಭಾರತ-ಕೆನಡಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಪರಸ್ಪರ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಹಲವು ಸಮಾನ ಆಸಕ್ತಿಗಳ ವಿನಿಮಯ ಆಧರಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ನಡುವಿನ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳು ನಮ್ಮ ಬಹು ಆಯಾಮದ ಸಂಬಂಧಗಳ ಆಂತರಿಕ ಭಾಗವಾಗಿದೆ ಎಂದು ಅವರು ಹೇಳಿದರು. ಕೆನಡಾ ಕೆಲವು ಬೃಹತ್ ಮತ್ತು ಹೆಚ್ಚಿನ ಅನುಭವ ಹೊಂದಿರುವ ಮೂಲಸೌಕರ್ಯ ಹೂಡಿಕೆದಾರರ ತವರೂರಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕೆನಡಾದ ಪಿಂಚಣಿ ನಿಧಿಗಳು ಭಾರತದಲ್ಲಿ ಮೊದಲಿಗೆ ನೇರವಾಗಿ ಹೂಡಿಕೆಯಲ್ಲಿ ತೊಡಗಿವೆ ಎಂದು ಅವರು ಹೇಳಿದರು. ಆ ಪೈಕಿ ಹಲವರು ಹೆದ್ದಾರಿ, ವಿಮಾನ ನಿಲ್ದಾಣ, ಸಾರಿಗೆ, ದೂರಸಂಪರ್ಕ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಹಲವು ವಲಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಈಗಾಗಲೇ ಕಂಡುಕೊಂಡಿದ್ದಾರೆ ಎಂದು ಹೇಳಿದರು. ಹಲವು ವರ್ಷಗಳಿಂದ ಭಾರತದಲ್ಲಿರುವ ಕೆನಡಾದ ಪ್ರಬುದ್ಧ  ಹೂಡಿಕೆದಾರರು ಇದೀಗ ನಮ್ಮ ಅತ್ಯುತ್ತಮ ಬ್ರ್ಯಾಂಡ್ ರಾಯಭಾರಿಗಳಾಗಿದ್ದಾರೆ. ಅವರ ಅನುಭವ, ಅವರ ವಿಸ್ತರಣಾ ಯೋಜನೆ ಮತ್ತು ವೈವಿಧ್ಯತೆ ಕೆನಡಾದ ಹೂಡಿಕೆದಾರರು ಇಲ್ಲಿಗೆ ಆಗಮಿಸಲು ಅತ್ಯಂತ ವಿಶ್ವಾಸಾರ್ಹ ಸಾಕ್ಷಿಯಾಗಿದೆ. ಭಾರತದಲ್ಲಿ ಕೆನಡಾದ ಹೂಡಿಕೆದಾರರಿಗೆ ಯಾವುದೇ ಅಡೆತಡೆ ಇರುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಭರವಸೆ ನೀಡಿದರು.

***


(Release ID: 1663037) Visitor Counter : 236