ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಇಪಿಎಸ್ 1995 ಅಡಿಯಲ್ಲಿ ಯೋಜನಾ ಪ್ರಮಾಣಪತ್ರ (ಸ್ಕೀಂ ಸರ್ಟಿಫಿಕೇಟ್) ಪಡೆಯಲು ಇದೀಗ ಉಮಾಂಗ್ ಅಪ್ಲಿಕೇಶನ್ ಲಭ್ಯ
ಉಮಾಂಗ್ ಆಪ್ ನಲ್ಲಿ ಬಹುತೇಕ ಇಪಿಎಫ್ಒ ಸೇವೆಗಳು ಲಭ್ಯ; ಆಗಸ್ಟ್ 2019ರಿಂದೀಚೆಗೆ 47.3 ಕೋಟಿ ಭೇಟಿ, ಅದರಲ್ಲಿ 41.6 ಕೋಟಿ ಅಥವಾ ಶೇ.88ರಷ್ಟು ಇಪಿಎಫ್ಒ ಸೇವೆಗಳಿಗೆ
Posted On:
28 SEP 2020 5:17PM by PIB Bengaluru
ಹೊಸ ಯುಗದ ಆಡಳಿತಕ್ಕಾಗಿ ಸಮಗ್ರ ಮೊಬೈಲ್ ಅಪ್ಲಿಕೇಶನ್(ಉಮಾಂಗ್) ಇಪಿಎಫ್ ವಂತಿಗೆದಾರರಲ್ಲಿ ಭಾರೀ ದೊಡ್ಡ ಯಶಸ್ಸು ಗಳಿಸಿದ್ದು, ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಅವರಿಗೆ ಯಾವುದೇ ಅಡೆತಡೆ ಇಲ್ಲದೆ ಮನೆಯಿಂದಲೇ ಸಾಕಷ್ಟು ಸೇವೆಗಳು ಲಭ್ಯವಾಗುವಂತೆ ಮಾಡಿದೆ. ಉಮಾಂಗ್ ಆಪ್ ನಲ್ಲಿ ಈಗಾಗಲೇ ಲಭ್ಯವಿರುವ 16 ಸೇವೆಗಳ ಜೊತೆಗೆ ಇಪಿಎಫ್ಒ ಇದೀಗ ಮತ್ತೊಂದು ಸೌಕರ್ಯವನ್ನು ಒದಗಿಸಿದ್ದು, 1995ರ ನೌಕರರ ಪಿಂಚಣಿ ಯೋಜನೆ ಅನ್ವಯ ಯೋಜನಾ ಪ್ರಮಾಣಪತ್ರ(ಸ್ಕೀಮ್ ಸರ್ಟಿಫಿಕೇಟ್)ಗೆ ಅರ್ಜಿ ಸಲ್ಲಿಸಲು ಇಪಿಎಸ್ ಸದಸ್ಯರಿಗೆ ಅವಕಾಶ ಮಾಡಿಕೊಟ್ಟಿದೆ.
ಯೋಜನಾ ಪ್ರಮಾಣಪತ್ರ ಎಂದರೆ ಅದನ್ನು ಯಾರು ತಮ್ಮ ಇಪಿಎಫ್ ವಂತಿಗೆಯನ್ನು ವಾಪಸ್ ಪಡೆಯುತ್ತಾರೋ ಅಂತಹವರು ತಾವು ಇಪಿಎಫ್ಒ ಸದಸ್ಯತ್ವವನ್ನು ಉಳಿಸಿಕೊಳ್ಳಬೇಕಾದರೆ ಅಂತಹ ಸಂದರ್ಭದಲ್ಲಿ ನೀಡಲಾಗುವುದು. ಆನಂತರ ಅವರು ನಿವೃತ್ತಿ ವಯಸ್ಸು ಬಂದಾಗ ಎಲ್ಲಾ ಪಿಂಚಣಿ ಲಾಭಗಳನ್ನು ಪಡೆಯಲು ಅದು ನೆರವಾಗಲಿದೆ. ಯಾವುದೇ ಸದಸ್ಯ ಪಿಂಚಣಿಯನ್ನು ಪಡೆಯಲು ಅರ್ಹತೆ ಪಡೆಯಬೇಕಾದರೆ ಆತ ನೌಕರರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಕನಿಷ್ಠ ಹತ್ತು ವರ್ಷಗಳ ಅವಧಿಗೆ ಸದಸ್ಯರಾಗಿರಬೇಕು. ಯಾವುದೇ ಹೊಸ ಕೆಲಸಕ್ಕೆ ಸೇರಿದಾಗ ಯೋಜನಾ ಪ್ರಮಾಣಪತ್ರದಲ್ಲಿ ಹಿಂದಿನ ಪಿಂಚಣಿ ಪಡೆಯುವ ಸೇವಾ ಅವಧಿಯನ್ನು ಸೇರಿಸಲಾಗುವುದು ಮತ್ತು ಹೊಸ ಉದ್ಯೋಗದ ವಿವರಗಳನ್ನು ಸೇರ್ಪಡೆ ಮಾಡಲಾಗುವುದು. ಆ ಮೂಲಕ ಪಿಂಚಣಿ ಲಾಭದ ಮೊತ್ತ ಹೆಚ್ಚಳವಾಗಲಿದೆ. ಅಲ್ಲದೆ ಈ ಯೋಜನಾ ಪ್ರಮಾಣಪತ್ರದಿಂದ ಒಂದು ವೇಳೆ ಅರ್ಹ ಸದಸ್ಯ ಅಕಾಲಿಕವಾಗಿ ಮರಣವನ್ನಪ್ಪಿದ್ದರೆ ಕುಟುಂಬದ ಸದಸ್ಯರು ಪಿಂಚಣಿಯನ್ನು ಪಡೆಯಲು ಅನುಕೂಲವಾಗಲಿದೆ.
ಇದೀಗ ಈ ಯೋಜನಾ ಪ್ರಮಾಣಪತ್ರಕ್ಕೆ ಉಮಾಂಗ್ ಆಪ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದರಿಂದ ಕುಟುಂಬದ ಸದಸ್ಯರು ದೈಹಿಕವಾಗಿ ಅದನ್ನು ಪಡೆಯಲು ಅನಗತ್ಯ ಕಷ್ಟಗಳನ್ನು ಪಡೆಯಬೇಕಾಗಿಲ್ಲ. ವಿಶೇಷವಾಗಿ ಸಾಂಕ್ರಾಮಿಕ ಸಂದರ್ಭಗಳಲ್ಲಿ ಇದು ನೆರವಾಗಲಿದೆ ಮತ್ತು ಅನಗತ್ಯ ಕಾಗದ ಪತ್ರಗಳ ತೊಂದರೆಯನ್ನು ತಪ್ಪಿಸಲಿದೆ. ಈ ಸೌಕರ್ಯ ಸುಮಾರು 5.89 ವಂತಿಗೆದಾರರಿಗೆ ಪ್ರಯೋಜನವಾಗಲಿದೆ. ಉಮಾಂಗ್ ಆಪ್ ನಲ್ಲಿ ಈ ಸೇವೆಯನ್ನು ಪಡೆದುಕೊಳ್ಳಲು ಸಕ್ರಿಯವಾಗಿರುವ ಏಕರೂಪದ ಖಾತೆ ಸಂಖ್ಯೆ(ಯುಎಎನ್) ಮತ್ತು ಇಪಿಎಫ್ಒನಲ್ಲಿ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ಇರಬೇಕು.
ಇಪಿಎಫ್ಒ, ಅತ್ಯಾಧುನಿಕ ತಂತ್ರಜ್ಞಾನವನ್ನು ಯಶಸ್ವಿಯಾಗಿ ತನ್ನ ವಂತಿಗೆದಾರರ ಮನೆ ಬಾಗಿಲಿಗೆ ತಲುಪಿಸುತ್ತಿದೆ ಮತ್ತು ಉಮಾಂಗ್ ಆಪ್ ನಲ್ಲಿ ಅತ್ಯಂತ ಯಶಸ್ವಿ ಸೇವೆ ನೀಡುತ್ತಿರುವುದಕ್ಕೆ ಹೆಸರಾಗಿದೆ. ಆಗಸ್ಟ್ 2019ರಿಂದೀಚೆಗೆ ಆಪ್ ನಲ್ಲಿ 47.3 ಕೋಟಿ ಮಂದಿ ಭೇಟಿ ನೀಡಿದ್ದು, ಆ ಪೈಕಿ 41.6 ಕೋಟಿ ಅಥವಾ ಶೇ.88ರಷ್ಟು ಸೇವೆಗಳು ಇಪಿಎಫ್ಒಗೆ ಸಂಬಂಧಿಸಿದವು. ಭಾರತ ಮೊಬೈಲ್ ಫೋನ್ ಮೂಲಕ ಡಿಜಿಟಲ್ ಸಂಪರ್ಕದಲ್ಲಿ ಅದ್ಭುತ ಪ್ರಗತಿ ಸಾಧಿಸಿದೆ. ಇಪಿಎಫ್ಒ ಉಮಾಂಗ್ ಆಪ್ ಮೂಲಕ ದೂರದ ಪ್ರದೇಶಗಳಲ್ಲೂ ಸಹ ಡಿಜಿಟಲ್ ಮೂಲಕ ಹೆಚ್ಚು ಹೆಚ್ಚು ಸೇವೆಗಳನ್ನು ಒದಗಿಸುವಲ್ಲಿ ಯಶಸ್ವಿಯಾಗಿದೆ.
ಉಮಾಂಗ್ ಆಪ್ ಕುರಿತು:
ಉಮಾಂಗ್ (ಹೊಸ ಯುಗದ ಆಡಳಿತಕ್ಕೆ ಸಮಗ್ರ ಮೊಬೈಲ್ ಅಪ್ಲಿಕೇಶನ್) ಇದನ್ನು ಭಾರತ ಸರ್ಕಾರ ಮೊಬೈಲ್ ಆಡಳಿತಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ(ಎಂಇಐಟಿವೈ) ಮತ್ತು ರಾಷ್ಟ್ರೀಯ ಇ-ಆಡಳಿತ ವಿಭಾಗ(ಎನ್ಇಜಿಡಿ) ಅಭಿವೃದ್ಧಿಗೊಳಿಸಿದೆ.
ಕೇಂದ್ರ ಸರ್ಕಾರದಿಂದ ಹಿಡಿದು, ಸ್ಥಳೀಯ ಸರ್ಕಾರಗಳು ಮತ್ತು ಸಂಸ್ಥೆಗಳ ವರೆಗಿನ ಹಾಗೂ ಇತರೆ ನಾಗರಿಕ ಕೇಂದ್ರಿತ ಸೇವೆಗಳು ಸೇರಿದಂತೆ ದೇಶದ ಎಲ್ಲ ಇ-ಆಡಳಿತ ಸೇವೆಗಳನ್ನು ಭಾರತದ ಎಲ್ಲ ಪ್ರಜೆಗಳಿಗೆ ಲಭ್ಯವಾಗುವಂತೆ ಮಾಡುವ ಏಕೈಕ ವೇದಿಕೆ ಉಮಾಂಗ್ ಆಗಿದೆ.
***
(Release ID: 1659967)
Visitor Counter : 240