ಪ್ರಧಾನ ಮಂತ್ರಿಯವರ ಕಛೇರಿ

ಕೋವಿಡ್ ಪ್ರಕರಣ ಅತ್ಯಧಿಕವಿರುವ ಏಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರ ವರ್ಚುಯಲ್ ಸಭೆಯನ್ನುದ್ದೇಶಿಸಿ ಪ್ರಧಾನಿ ಭಾಷಣ

Posted On: 23 SEP 2020 8:05PM by PIB Bengaluru

ಮಿತ್ರರೇ,

ಕೊರೊನಾ ಬಿಕ್ಕಟ್ಟಿನ ಬಗ್ಗೆ ಇಂದು ನಾವು ಮಾತನಾಡುತ್ತಿರುವ ಸಂದರ್ಭದಲ್ಲಿ ಕಾಕತಾಳೀಯವೆಂದರೆ, ಭಾರತದ ಆರೋಗ್ಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನ ಎಂಬುದನ್ನು ನಾವು ಕಾಣಬಹುದಾಗಿದೆ.

ಅದೆಂದರೆ, ಎರಡು ವರ್ಷಗಳ ಹಿಂದೆ ಇದೇ ದಿನ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗೆ ಚಾಲನೆ ನೀಡಲಾಯಿತು.

ಈ ಎರಡು ವರ್ಷಗಳ ಅವಧಿಯಲ್ಲಿ 1.25 ಕೋಟಿಗೂ ಅಧಿಕ ಬಡ ರೋಗಿಗಳು ಯೋಜನೆಯಡಿ ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ.

ಈ ಸಂದರ್ಭದಲ್ಲಿ ನಾನು, ಆಯುಷ್ಮಾನ್ ಭಾರತ್ ಯೋಜನೆಯಡಿ, ಬಡಜನರಿಗೆ ಸೇವೆ ಸಲ್ಲಿಸುತ್ತಿರುವ ಎಲ್ಲ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ಅಭಿನಂದಿಸಲು ಬಯಸುತ್ತೇನೆ.

ಮಿತ್ರರೇ,

ಇಂದಿನ ನಮ್ಮ ಸಂವಾದದ ವೇಳೆ ಹಲವು ವಿಷಯಗಳು ಚರ್ಚೆಗೆ ಬಂದವು ಮತ್ತು ಅವು ಭವಿಷ್ಯದ ಕಾರ್ಯತಂತ್ರವನ್ನು ಸಿದ್ಧಪಡಿಸಲು ನಮಗೆ ನೆರವಾಗಲಿದೆ.

ಭಾರತದಲ್ಲಿ ಸೋಂಕು ಪ್ರಕರಣಗಳು ಸ್ಥಿರವಾಗಿ ಹೆಚ್ಚಾಗುತ್ತಿರುವುದು ಸತ್ಯ. ಆದರೆ ಇಂದು ನಾವು ಪ್ರತಿ ದಿನ ಹತ್ತು ಲಕ್ಷಕ್ಕೂ ಅಧಿಕ ಪರೀಕ್ಷೆಗಳನ್ನು ನಡೆಸುತ್ತಿದ್ದೇವೆ ಹಾಗೂ ಸೋಂಕಿನಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗುತ್ತಿದೆ.

ರಾಜ್ಯಗಳಲ್ಲಿ ಸ್ಥಳೀಯ ಮಟ್ಟದಲ್ಲಿ ಹಾಗೂ ಹಲವು ರಾಜ್ಯಗಳಲ್ಲಿ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಂಡಿರುವ ಸಾಕ್ಷ್ಯ ಇದೆ.

ನಾವು ಈ ಅನುಭವಗಳನ್ನು ಹೆಚ್ಚು ಹೆಚ್ಚು ಉತ್ತೇಜಿಸಬೇಕಿದೆ.

ಮಿತ್ರರೇ,

ಕೊರೊನಾಗೆ ಚಿಕಿತ್ಸೆ ನೀಡಲು ಕಳೆದ ಕೆಲವು ತಿಂಗಳುಗಳಿಂದೀಚೆಗೆ ನಾವು ಅಭಿವೃದ್ಧಿಪಡಿಸಿರುವ ಸೌಕರ್ಯಗಳು ದೇಶದಲ್ಲಿ ಕೊರೊನಾ ವಿರುದ್ಧ ಹೋರಾಟಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೆರವಾಗುತ್ತಿವೆ.

ಮತ್ತೊಂದೆಡೆ ಕೊರೊನಾಗೆ ಸಂಬಂಧಿಸಿದಂತೆ ನಾವು ನಮ್ಮ ಮೂಲಸೌಕರ್ಯವನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕಿದೆ. ಸೋಂಕು ಪತ್ತೆ ಮತ್ತು ಸಂಪರ್ಕ ಪತ್ತೆ ಹಾಗೂ ಉತ್ತಮ ತರಬೇತಿ ಖಾತ್ರಿಪಡಿಸಲು ನಮ್ಮ ಜಾಲವನ್ನು ಇನ್ನಷ್ಟು ಸುಧಾರಿಸಬೇಕಿದೆ.

ಇಂದು ಕೊರೊನಾಗೆ ಸಂಬಂಧಿಸಿದ ವಿಶೇಷ ಮೂಲಸೌಕರ್ಯವೃದ್ಧಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್ ಡಿ ಆರ್ ಎಫ್) ಬಳಕೆಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ

ಈ ಬಗ್ಗೆ ಹಲವು ರಾಜ್ಯಗಳು ಮನವಿಗಳನ್ನು ಸಲ್ಲಿಸಿದ್ದವು.

ಇದೀಗ ಎಸ್ ಡಿ ಆರ್ ಎಫ್ ಬಳಕೆ ಮಿತಿಯನ್ನು ಶೇ.35ರಿಂದ ಶೇ.50ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.

ಈ ನಿರ್ಧಾರದಿಂದಾಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ರಾಜ್ಯಗಳಿಗೆ ಹೆಚ್ಚಿನ ಹಣಕಾಸು ದೊರಕುವುದಲ್ಲದೆ, ಅದರಿಂದ ಸಹಾಯಕವಾಗಲಿದೆ.

ಇದೇ ವೇಳೆ ನಾನು ಮತ್ತೊಂದು ಪ್ರಮುಖ ಸಂಗತಿಯ ಬಗ್ಗೆ ನಿಮಗೆ ಹೇಳಬಯಸುತ್ತೇನೆ.

ಪ್ರತಿಯೊಂದು ರಾಜ್ಯವೂ ಕೊರೊನಾ ನಿಯಂತ್ರಣಕ್ಕೆ 1-2 ದಿನಗಳ ಕಾಲ ಸ್ಥಳೀಯವಾಗಿ ಲಾಕ್ ಡೌನ್ ಮಾಡುವ ಪರಿಣಾಮದ ಬಗ್ಗೆ ವಿಶ್ಲೇಷಿಸುವ ಅಗತ್ಯವಿದೆ.

ಇದರಿಂದಾಗಿ ನಿಮ್ಮ ರಾಜ್ಯದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ ಹಾಗೂ ಆರ್ಥಿಕ ಚಟುವಟಿಕೆಗಳ ಪುನರಾರಂಭಕ್ಕೆ ತೊಂದರೆಗಳಾಗುವುದಿಲ್ಲ.

ಆ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಗಂಭೀರವಾಗಿ ಪರಿಶೀಲಿಸಬೇಕು ಎಂದು ನಾನು ಮನವಿ ಮಾಡುತ್ತೇನೆ.

ಮಿತ್ರರೇ,

ಪರಿಣಾಮಕಾರಿ ಸೋಂಕು ಪರೀಕ್ಷೆ, ಪತ್ತೆ, ಚಿಕಿತ್ಸೆ, ನಿಗಾ ಮತ್ತು ಸ್ಪಷ್ಟ ಸಂದೇಶ ನೀಡುವ ಕ್ರಮಗಳನ್ನು ಹೆಚ್ಚಿಸಲು ಆದ್ಯತೆ ನೀಡುವ ಅಗತ್ಯವಿದೆ.

ಸೋಂಕಿನ ಕುರಿತಂತೆ ಸ್ಪಷ್ಟ ಸಂದೇಶಗಳನ್ನು ನೀಡುವುದು ಅತ್ಯಗತ್ಯ. ಏಕೆಂದರೆ ಬಹುತೇಕ ಸೋಂಕು ಪ್ರಕರಣಗಳಲ್ಲಿ ಯಾವುದೇ ಗುಣಲಕ್ಷಣಗಳು ಇರುವುದಿಲ್ಲ. ಇದರಿಂದಾಗಿ ವದಂತಿಗಳು ಹರಡುವುದು ಹೆಚ್ಚಾಗಲಿದೆ. ಪರೀಕ್ಷೆ ದೋಷಪೂರಿತವಾಗಿಯೇ ಎಂಬುದರ ಬಗ್ಗೆ ಸಾಮಾನ್ಯ ಜನರಲ್ಲಿ ಸಂದೇಹಗಳು ಉಂಟಾಗಬಹುದು. ಅದೊಂದೇ ಅಲ್ಲ, ಸೋಂಕಿನ ತೀವ್ರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಮಾನ್ಯ ಜನರು ತಪ್ಪು ಮಾಡುವ ಸಾಧ್ಯತೆಯೂ ಸಹ ಇದೆ.

ಸೋಂಕು ನಿಯಂತ್ರಣದಲ್ಲಿ ಮಾಸ್ಕ್ ಧರಿಸುವುದು ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ ಎಂಬುದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ. ಮಾಸ್ಕ್ ಧರಿಸುವ ಹವ್ಯಾಸವನ್ನು ರೂಢಿಸಿಕೊಳ್ಳುವುದು ತುಂಬಾ ಕಷ್ಟಕರ. ಆದರೆ ಅದನ್ನು ನಾವು ಪ್ರತಿ ದಿನ ನಮ್ಮ ಜೀವನದ ಅಗತ್ಯ ಭಾಗವನ್ನಾಗಿ ಮಾಡಿಕೊಳ್ಳದಿದ್ದರೆ ನಾವು ಅರ್ಥಪೂರ್ಣ ಫಲಿತಾಂಶಗಳನ್ನು ಪಡೆಯಲು ಸಾಧ್ಯವಿಲ್ಲ.

ಮಿತ್ರರೇ,

ನಾನು ಹೇಳ ಬಯಸುವ ಮೂರನೇ ಅಂಶ ಏನೆಂದರೆ ಹಿಂದಿನ ಅನುಭವಗಳಿಂದ ನಾವು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸರಕು ಮತ್ತು ಸೇವೆಗಳ ಸಾಗಾಣೆಯಲ್ಲಿ ಅಡಚಣೆ ಉಂಟಾದರೆ ಅದರಿಂದ ಸಾಮಾನ್ಯ ಜನರ ಮೇಲೆ ಅನಗತ್ಯ ಹೊರೆ ಬೀಳುತ್ತದೆ ಎಂಬುದನ್ನು ನಾವು ನೋಡಿದ್ದೇವೆ.

ಅಲ್ಲದೆ ಅದು ಸಾಮಾನ್ಯ ಜನಜೀವನ ಮತ್ತು ಜೀವನೋಪಾಯದ ಮೇಲೂ ಪರಿಣಾಮ ಬೀರುತ್ತದೆ.

ಉದಾಹರಣೆಗೆ, ಇತ್ತೀಚೆಗೆ ಕೆಲವು ರಾಜ್ಯಗಳಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಸಮಸ್ಯೆ ಎದುರಿಸಿದ್ದನ್ನು ಕಂಡಿದ್ದೇವೆ.

ನಾವು ಜೀವರಕ್ಷಕ ಆಕ್ಸಿಜನ್ ಪೂರೈಕೆ ಅನಿರ್ಬಂಧಿತವಾಗಿ ನಡೆಯುವುದನ್ನು ಖಾತ್ರಿಪಡಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಭಾರತ ಸಂಕಷ್ಟದ ಸಮಯದಲ್ಲೂ ಇಡೀ ವಿಶ್ವಕ್ಕೆ ಜೀವರಕ್ಷಕ ಔಷಧಿಗಳನ್ನು ಪೂರೈಕೆ ಮಾಡುವುದನ್ನು ಖಾತ್ರಿಪಡಿಸಿದೆ. ದೇಶಾದ್ಯಂತ ಸುಲಭವಾಗಿ ಔಷಧಗಳು ಲಭ್ಯವಾಗುವುದನ್ನು ನಾವು ಖಾತ್ರಿಪಡಿಸಬೇಕು.

ಮಿತ್ರರೇ

ಕೊರೊನಾ ಸಮಯದಲ್ಲಿ ದೇಶ ಪ್ರದರ್ಶಿಸಿದ ಸಂಯಮ, ಅನುಕಂಪ, ಸಹಕಾರ ಮತ್ತು ಸಂವಾದವನ್ನು ಮುಂದುವರಿಸುವ ಅಗತ್ಯವಿದೆ.

ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಜೊತೆ ಜೊತೆಗೆ ನಾವು ಆರ್ಥಿಕ ವಿಚಾರದಲ್ಲೂ ನಾವು ಪೂರ್ಣ ಶಕ್ತಿಯೊಂದಿಗೆ ಮುನ್ನಡೆಯಬೇಕಿದೆ.

ಇದರೊಂದಿಗೆ ನಮ್ಮೆಲ್ಲಾ ಜಂಟಿ ಪ್ರಯತ್ನಗಳು ಯಶಸ್ವಿಯಾಗಲಿ, ತುಂಬಾ ಧನ್ಯವಾದಗಳು.

***



(Release ID: 1658906) Visitor Counter : 194