ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)

ಸೊಹ್ನಾ-ಮಾನೇಸರ್-ಖಾರ್ಖೌಡ ಮಾರ್ಗವಾಗಿ ಪಲ್ವಾಲ್ ನಿಂದ ಸೋನಿಪತ್ ವರೆಗೆ ಹರಿಯಾಣ ವರ್ತುಲ ರೈಲ್ವೆ ಕಾರಿಡಾರ್ ಯೋಜನೆಗೆ ಸಂಪುಟ ಒಪ್ಪಿಗೆ


ಒಟ್ಟು ಯೋಜನೆಯ ಉದ್ದ 121.7 ಕಿಲೋಮೀಟರ್

ಹರಿಯಾಣ ಸರ್ಕಾರದ ಜೊತೆಗೆ ರೈಲ್ವೆ ಸಚಿವಾಲಯ ಸ್ಥಾಪಿಸಿರುವ ಜಂಟಿ ಸಹಭಾಗಿತ್ವ ಕಂಪನಿ ಹರಿಯಾಣ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ(ಎಚ್ಆರ್ ಐಡಿಸಿ)ದಿಂದ ಯೋಜನೆ ಅನುಷ್ಠಾನ

ಇದರಿಂದ ದೆಹಲಿಯಲ್ಲಿ ವಾಹನ ದಟ್ಟಣೆ ತಪ್ಪಿಸಲು ನೆರವು ಮತ್ತು ಎನ್ ಸಿ ಆರ್ ಉಪ ಪ್ರಾಂತ್ಯದ ಹರಿಯಾಣ ರಾಜ್ಯದಲ್ಲಿ ಬಹು ಮಾದರಿಯ ಸಾರಿಗೆ ತಾಣಗಳ ಅಭಿವೃದ್ಧಿಗೆ ಸಹಕಾರಿ

ಒಟ್ಟು ಯೋಜನೆಯ ಅಂದಾಜು ವೆಚ್ಚ 5,617 ಕೋಟಿ ರೂ. ಮತ್ತು ಐದು ವರ್ಷಗಳಲ್ಲಿ ಪೂರ್ಣಗೊಳಿಸುವ ಉದ್ದೇಶ

Posted On: 15 SEP 2020 2:24PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಮಿತಿ ಸೊಹ್ನಾ-ಮಾನೇಸರ್-ಖಾರ್ಖೌಡ ಮಾರ್ಗವಾಗಿ ಪಲ್ವಾಲ್ ನಿಂದ ಸೋನಿಪತ್ ವರೆಗೆ ಹರಿಯಾಣ ವರ್ತುಲ ರೈಲ್ವೆ ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿತು.

ರೈಲ್ವೆ ಮಾರ್ಗ ಪಲ್ವಾಲ್ ನಿಂದ ಆರಂಭವಾಗಲಿದೆ ಮತ್ತು ಹಾಲಿ ಇರುವ ಹರ್ಸಾನಾ ಕಲ್ಯಾಣ ನಿಲ್ದಾಣದಲ್ಲಿ ಮುಕ್ತಾಯಗೊಳ್ಳಲಿದೆ.(ದೆಹಲಿ-ಅಂಬಾಲಾ ವಲಯದಲ್ಲಿ) ಇದರಿಂದ ಹಾಲಿ ಇರುವ ಪಾಟ್ಲಿ ನಿಲ್ದಾಣ(ದೆಹಲಿ-ರೆವಾರಿ ಮಾರ್ಗ), ಸುಲ್ತಾನ್ ಪುರ್ ನಿಲ್ದಾಣ(ಗರ್ಹಿ ಹರ್ಸಾರು-ಫರೂಖ್ ನಗರ ಮಾರ್ಗ) ಮತ್ತು ಅಸುಢ ನಿಲ್ದಾಣ(ದೆಹಲಿ-ರೋಟಕ್ ಮಾರ್ಗ)ಗಳಿಗೆ ಸಂಪರ್ಕ ಕಲ್ಪಿಸಲಿದೆ.

ಅನುಷ್ಠಾನ

ಯೋಜನೆಯನ್ನು ರೈಲ್ವೆ ಸಚಿವಾಲಯ, ಹರಿಯಾಣ ಸರ್ಕಾರದೊಂದಿಗೆ ಸೇರಿ ಸ್ಥಾಪಿಸಿರುವ ಜಂಟಿ ಪಾಲುದಾರಿಕೆಯ ಕಂಪನಿ, ಹರಿಯಾಣ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ನಿಯಮಿತ(ಎಚ್ಆರ್ ಐಡಿಸಿ)ದಿಂದ ಅನುಷ್ಠಾನಗೊಳಿಸಲಾಗುವುದು. ಯೋಜನೆಯಲ್ಲಿ ರೈಲ್ವೆ ಸಚಿವಾಲಯ, ಹರಿಯಾಣ ಸರ್ಕಾರ ಮತ್ತು ಖಾಸಗಿ ಪಾಲುದಾರರ ಜಂಟಿ ಸಹಭಾಗಿತ್ವ ಒಳಗೊಂಡಿದೆ.

ಯೋಜನೆಯ ಅಂದಾಜು ವೆಚ್ಚ 5,617 ಕೋಟಿ ರೂ., ಯೋಜನೆ ಐದು ವರ್ಷಗಳಲ್ಲಿ ಮುಕ್ತಾಯಗೊಳ್ಳುವ ಸಾಧ್ಯತೆ ಇದೆ.

ಅನುಕೂಲತೆಗಳು

ರೈಲು ಮಾರ್ಗದಿಂದ ಹರಿಯಾಣದ ಪಲ್ವಾಲ್, ನುಹ್, ಗುರುಗ್ರಾಮ್, ಝಜ್ಜರ್ ಮತ್ತು ಸೋನಿಪತ್ ಜಿಲ್ಲೆಗಳಿಗೆ ಅನುಕೂಲವಾಗಲಿದೆ.      ಯೋಜನೆಯಿಂದ ವಾಹನ ದಟ್ಟಣೆ ತಗ್ಗಲಿದೆ, ಅದು ದೆಹಲಿಯಲ್ಲಿ ಅಲ್ಲ, ಎನ್ ಸಿ ಆರ್ ಪ್ರಾಂತ್ಯದಲ್ಲಿ ವಾಹನದಟ್ಟಣೆ ಇಳಿಮುಖವಾಗಲಿದೆ ಮತ್ತು ಹರಿಯಾಣ ರಾಜ್ಯದ ಎನ್ ಸಿ ಆರ್ ಉಪ ಪ್ರಾಂತ್ಯದಲ್ಲಿ ಬಹು ಮಾದರಿಯ ಸಾಗಾಣೆ ತಾಣಗಳ ಅಭಿವೃದ್ಧಿಗೆ ನೆರವಾಗಲಿದೆ. ಇದರಿಂದ ಭಾಗದಲ್ಲಿ ಯಾವುದೇ ಅಡೆತಡೆ ಇಲ್ಲದೆ ವೇಗದ ಸಂಪರ್ಕ ಲಭ್ಯವಾಗಲಿದೆ ಮತ್ತು ನಿರ್ದಿಷ್ಟ ಸರಕು ಸಾಗಾಣೆ ಕಾರಿಡಾರ್ ಜಾಲದಿಂದ ವೆಚ್ಚ ಮತ್ತು ಸಾರಿಗೆ ಸಮಯ ಉಳಿತಾಯವಾಗಲಿದ್ದು, ಎನ್ ಸಿ ಆರ್ ನಿಂದ ಭಾರತದ ಬಂದರುಗಳಿಗೆ ಎಕ್ಸಿಮ್ ಸಂಚಾರಕ್ಕೆ ನೆರವಾಗಲಿದ್ದು, ಸರಕುಗಳು ರಫ್ತು ಇನ್ನಷ್ಟು ಸ್ಪರ್ಧಾತ್ಮಕವಾಗಲಿದೆ. ಪರಿಣಾಮಕಾರಿ ಸಾರಿಗೆ ಕಾರಿಡಾರ್ ಮತ್ತು ಇತರ ಕ್ರಮಗಳಿಂದಾಗಿ ಮೇಕ್ ಇನ್ ಇಂಡಿಯಾ ಅಭಿಯಾನದ ಉದ್ದೇಶ ಈಡೇರಿಕೆಗೆ ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಅಗತ್ಯ ಮೂಲಸೌಕರ್ಯವೃದ್ಧಿಯಾಗಲಿದೆ. ಹರಿಯಾಣದ ಅತ್ಯಂತ ಹಿಂದುಳಿದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲಿದ್ದು, ಮೂಲಕ ಹರಿಯಾಣ ರಾಜ್ಯದಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಬಹು ಉದ್ದೇಶದ ಸಾರಿಗೆ ಯೋಜನೆ ಕೈಗೆಟಕುವ ದರದಲ್ಲಿ ಅತ್ಯಂತ ವೇಗದ ಪಯಣಕ್ಕೆ ಸಹಕಾರಿಯಾಗುವುದಲ್ಲದೆ, ಗುರುಗ್ರಾಮದಿಂದ ನಾನಾ ದಿಕ್ಕುಗಳಲ್ಲಿ ದೀರ್ಘ ದೂರ ಕ್ರಮಿಸಲು ಸಾಧ್ಯವಾಗಲಿದೆ ಮತ್ತು ಕೈಗಾರಿಕಾ ಪ್ರಾಂತ್ಯಗಳಾದ ಮಾನೇಸರ್, ಸೊಹ್ನಾ, ಫಾರೂಖ್ ನಗರ್, ಖಾರ್ಖೌಡ ಮತ್ತು ಸೋನಿಪತ್ ಗಳಿಗೆ ಸಂಪರ್ಕ ದೊರಕಲಿದೆ.    

ಮಾರ್ಗದ ಮೂಲಕ ಅಂದಾಜು  20,000 ಪ್ರಯಾಣಿಕರು ಪ್ರತಿದಿನ ಪ್ರಯಾಣಿಸುವ ಸಾಧ್ಯತೆ ಇದೆ ಮತ್ತು ಪ್ರತಿ ವರ್ಷ ಸುಮಾರು 50 ಮಿಲಿಯನ್ ಟನ್ ಸರಕು ಸಾಗಿಸುವ ನಿರೀಕ್ಷೆ ಇದೆ.

ಹಿನ್ನೆಲೆ

ಪಲ್ವಾಲ್ ನಿಂದ ಸೋನಿಪತ್ ವರೆಗಿನ ವರ್ತುಲ ರೈಲು ಕಾರಿಡಾರ್ ಯೋಜನೆ ದೆಹಲಿ ಮೂಲಕ ಸಾಗಲಿದ್ದು, ಇದು ರಾಷ್ಟ್ರೀಯ ರಾಜಧಾನಿ ಪ್ರಾಂತ್ಯ-ಎನ್ ಸಿ ಆರ್ ನಲ್ಲಿ ಸುಸ್ಥಿರ ಅಭಿವೃದ್ಧಿಗೆ ಮಹತ್ವದ ಮೂಲಸೌಕರ್ಯ ಯೋಜನೆಯಾಗಿದೆ ಮತ್ತು ದೆಹಲಿ ಪ್ರದೇಶದಲ್ಲಿ ಹಾಲಿ ಇರುವ ಭಾರತೀಯ ರೈಲ್ವೆ ಜಾಲದ ದಟ್ಟಣೆಯನ್ನು ತಗ್ಗಿಸಲು ನೆರವಾಗಲಿದೆ. ಯೋಜನೆಯ ವಿನ್ಯಾಸ ಪಶ್ಚಿಮ ಫೆರಿಫೆರಲ್(ಕುಂಡಲಿ-ಮಾನೆಸರ್-ಪಲ್ವಾಲ್) ಎಕ್ಸ್ ಪ್ರೆಸ್ ವೆಗೆ ಹೊಂದಿಕೊಂಡಿದೆ ಮತ್ತು ಇದು ಹಲವು ವರ್ಷಗಳಿಂದ ಪರಿಶೀಲನೆಯಲ್ಲಿತ್ತು. ಯೋಜನೆ ದೆಹಲಿಯಿಂದ ಆರಂಭವಾಗುವ ಎಲ್ಲ ರೈಲು ಮಾರ್ಗಗಳಿಗೆ ಸಂಪರ್ಕ ಕಲ್ಪಿಸಲಿದೆ ಮತ್ತು ಹರಿಯಾಣ ಮಾರ್ಗದ ಮೂಲಕ ಸಾಗಲಿದೆ ಹಾಗೂ ನಿರ್ದಿಷ್ಟ ಸರಕು ಕಾರಿಡಾರ್ ಜಾಲಕ್ಕೂ ಸಂಪರ್ಕ ಕಲ್ಪಿಸಲಿದೆ.

***


(Release ID: 1654570) Visitor Counter : 265