ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು 2020ರ ಸೆಪ್ಟೆಂಬರ್ 14ರಂದು ಲೋಕಸಭೆ/ರಾಜ್ಯಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಮಾಡಿದ ಸ್ವಯಂ ಹೇಳಿಕೆ

Posted On: 14 SEP 2020 12:20PM by PIB Bengaluru

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್ ಅವರು ಲೋಕಸಭೆ/ರಾಜ್ಯಸಭೆಯಲ್ಲಿ  ಇಂದು ಮಾಡಿದ ಸ್ವಯಂ ಹೇಳಿಕೆಯ ಪೂರ್ಣ ಪಠ್ಯ ಈ ಕೆಳಗಿನಂತಿದೆ:
1.     ಕೋವಿಡ್-19 ಸಾಂಕ್ರಾಮಿಕದ ಕುರಿತು ಈ ಗೌರವಾನ್ವಿತ ಸದನಕ್ಕೆ ನಾನು ಈ ಮೊದಲು ಕಳೆದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಎರಡು ಬಾರಿ ವಿವರ ನೀಡಿದ್ದೇನೆ. ಇದೀಗ ಕೋವಿಡ್-19 ಸಾಂಕ್ರಾಮಿಕದ ಪ್ರಸಕ್ತ ಸ್ಥಿತಿಗತಿ ಮತ್ತು ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತು ಗೌರವಾನ್ವಿತ ಸದಸ್ಯರಿಗೆ ಮತ್ತೊಮ್ಮೆ ಸಮಗ್ರ ವಿವರಗಳನ್ನು ನೀಡಲು ಬಯಸುತ್ತಿದ್ದೇನೆ.  
2.     ಕಳೆದ ಬಾರಿ ನಾನು ವಿವರ ನೀಡಿದ್ದಾಗ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ ಒ) ಕೋವಿಡ್-19 ಅನ್ನು ಸಾಂಕ್ರಾಮಿಕ ಎಂದು ಘೋಷಿಸಿತು ಮತ್ತು ಸಾರ್ವಜನಿಕ ಆರೋಗ್ಯ ತುರ್ತು ಸ್ಥಿತಿಯನ್ನು ನಿರ್ವಹಿಸಲು ಎಲ್ಲ ದೇಶಗಳು ತುರ್ತು ಹಾಗೂ ತೀವ್ರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತ್ತು.      
3.     2020ರ ಸೆಪ್ಟೆಂಬರ್ 11ರ ವೇಳೆಗೆ ಜಗತ್ತಿನಾದ್ಯಂತ 215 ರಾಷ್ಟ್ರಗಳು/ಭೂಪ್ರದೇಶಗಳಲ್ಲಿ ಈ ಸೋಂಕು ವ್ಯಾಪಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜಗತ್ತಿನಾದ್ಯಂತ 2.79 ಕೋಟಿಗೂ ಅಧಿಕ ಸೋಂಕಿತ ಪ್ರಕರಣಗಳಿವೆ ಮತ್ತು 9.05 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ಸಾವಿನ ಪ್ರಮಾಣ ಶೇಕಡ 3.2ರಷ್ಟಿದೆ.  
4.     2020ರ ಸೆಪ್ಟೆಂಬರ್ 11ರ ವೇಳೆಗೆ ಭಾರತದಲ್ಲಿ ಒಟ್ಟು 45,62,414 ಸೋಂಕಿತ ಪ್ರಕರಣಗಳಿವೆ ಮತ್ತು 76,271 ಸಾವು (ಸೋಂಕಿತರ ಸಾವಿನ ಪ್ರಮಾಣ ಶೇ.1.67ರಷ್ಟು) ವರದಿಯಾಗಿದೆ. 35,42,663 ಸೋಂಕಿತರು(ಶೇ.77.65ಷ್ಟು) ಗುಣಮುಖರಾಗಿದ್ದಾರೆ. ಗರಿಷ್ಠ ಸಂಖ್ಯೆಯ ಪ್ರಕರಣ ಮತ್ತು ಸಾವುಗಳು,ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ, ಉತ್ತರಪ್ರದೇಶ, ದೆಹಲಿ ರಾಜ್ಯಗಳಲ್ಲಿ ವರದಿಯಾಗಿವೆ. ಈ ಎಲ್ಲ ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಕೋವಿಡ್-19 ನಿರ್ವಹಣೆಗೆ ಸರ್ಕಾರ ಸಮಗ್ರ ಕ್ರಮಗಳನ್ನು ಕೈಗೊಂಡಿದ್ದು, ಇಡೀ ಸಮಾಜ ಒಟ್ಟಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಭಾರತದಲ್ಲಿ ಪ್ರಕರಣಗಳ ಸಂಖ್ಯೆಯನ್ನು ಮತ್ತು ಸಾವುಗಳನ್ನು ಮಿತಿಗೊಳಿಸಲು ಅಂದರೆ ಪ್ರತಿ ದಶಲಕ್ಷ ಮಂದಿಗೆ 3,328 ಪ್ರಕರಣಗಳು ಮತ್ತು ಪ್ರತಿ ದಶಲಕ್ಷ ಜನಸಂಖ್ಯೆಗೆ 55 ಸಾವುಗಳು ವರದಿಯಾಗಿವೆ. ಇದು ಇತರೆ ಸೋಂಕಿತ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಅತಿ ಕಡಿಮೆಯಾಗಿದೆ.
5.    ಸಾಂಕ್ರಾಮಿಕ ರೋಗದ ಹಲವು ಮಾನದಂಡಗಳು ಅಂದರೆ ಪ್ರಸರಣ ವಿಧಾನ, ಸೋಂಕು ಹರಡುವುದು, ವೈರಾಣುವಿನ ಅವಧಿ, ರೋಗ ನಿಗ್ರಹದ ಪಾತ್ರ ಮತ್ತಿತರ ಅಂಶಗಳ ಕುರಿತು ಇನ್ನೂ ಸಂಶೋಧನೆ ಪ್ರಗತಿಯಲ್ಲಿದೆ. ಒಮ್ಮೆ ವ್ಯಕ್ತಿ ಸೋಂಕಿಗೆ ತೆರೆದುಕೊಂಡರೆ ಆತನಲ್ಲಿ ಒಂದರಿಂದ 14 ದಿನಗಳೊಳಗೆ ಯಾವಾಗ ಬೇಕಾದರು ರೋಗ ಉಲ್ಬಣಗೊಳ್ಳಬಹುದು. ಈ ಕೋವಿಡ್ ನ ಪ್ರಮುಖ ಗುಣಲಕ್ಷಣಗಳೆಂದರೆ ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ. ನಮ್ಮ ದೇಶದಲ್ಲಿ ವರದಿಯಾಗಿರುವ ಶೇ.92ರಷ್ಟು  ಪ್ರಕರಣಗಳು ಸಾಧಾರಣ (ಮೈಲ್ಡ್ ) ಎನಿಸಿವೆ. ಕೇವಲ ಶೇ.5.8ರಷ್ಟು ಪ್ರಕರಣಗಳಲ್ಲಿ ಮಾತ್ರ ಆಕ್ಸಿಜನ್ ಚಿಕಿತ್ಸೆ ಅಗತ್ಯವಿದೆ ಮತ್ತು ಶೇ.1.7ರಷ್ಟು ಪ್ರಕರಣಗಳಲ್ಲಿ ಮಾತ್ರ ತೀವ್ರ ನಿಗಾ ಘಟಕದ ಅಗತ್ಯತೆ ಕಂಡುಬಂದಿದೆ.  
6.    ಭಾರತದಲ್ಲಿ ಸೋಂಕಿನ ತೀವ್ರತೆ ಹರಡುತ್ತಿರುವುದನ್ನು ಮುನ್ನೆಚ್ಚರಿಕೆ, ಕ್ರಿಯಾಶೀಲ, ಶ್ರೇಣೀಕೃತ ಮತ್ತು ಇಡೀ ಸರ್ಕಾರ ಹಾಗೂ ಇಡೀ ಸಾಮಾಜಿಕ ಮನೋಭಾವ ಮತ್ತು ಸೋಂಕು ತಡೆಗೆ ಸಮಗ್ರ ಕಾರ್ಯತಂತ್ರವನ್ನು ಪಾಲಿಸಲಾಗುತ್ತಿದೆ ಮತ್ತು ಸಾವಿನ ಪ್ರಮಾಣ ತಡೆಗಟ್ಟಿ, ಸೋಂಕಿನಿಂದಾಗುವ ಪರಿಣಾಮಗಳನ್ನು ಕನಿಷ್ಠಗೊಳಿಸಲಾಗುತ್ತಿದೆ.
7.    ಭಾರತ ಸರ್ಕಾರ ಕೋವಿಡ್-19 ಸವಾಲನ್ನು ಅತ್ಯುನ್ನತ ಮಟ್ಟದ ರಾಜಕೀಯ ಬದ್ಧತೆಯೊಂದಿಗೆ ಎದುರಿಸುತ್ತಿದೆ. ರಾಷ್ಟ್ರವ್ಯಾಪಿ ಲಾಕ್ ಡೌನ್ ಒಂದು ದಿಟ್ಟ ನಿರ್ಧಾರವಾಗಿದ್ದು, ಇದನ್ನು ಸರ್ಕಾರ ಕೈಗೊಂಡು ಅದರಲ್ಲಿ ಸಮುದಾಯವನ್ನೂ ಸಹ ಸೇರಿಸಿಕೊಂಡಿತು. ಗೌರವಾನ್ವಿತ ಪ್ರಧಾನಮಂತ್ರಿಗಳ ಕರೆಯಿಂದಾಗಿ ಸ್ವಯಂಘೋಷಿತ ಜನತಾ ಕರ್ಫ್ಯೂ ಆಚರಣೆಯೊಂದಿಗೆ ಭಾರತ ಸಾಮೂಹಿಕವಾಗಿ ಕೋವಿಡ್-19 ನಿರ್ವಹಣೆಗೆ ಎದ್ದು ನಿಂತಿತು ಮತ್ತು ಕೋವಿಡ್-19 ಅತ್ಯಂತ ವೇಗವಾಗಿ ಹರಡುವುದನ್ನು ಯಶಸ್ವಿಯಾಗಿ ನಿರ್ವಹಿಸಲಾಯಿತು. ಈ ನಿರ್ಧಾರದಿಂದಾಗಿ ಅಂದಾಜು ಸುಮಾರು 14 ರಿಂದ 29 ಲಕ್ಷ ಪ್ರಕರಣಗಳನ್ನು ಹಾಗೂ 37 ರಿಂದ 78 ಸಾವಿರ ಸಾವುಗಳನ್ನು ತಡೆಯಲಾಗಿದೆ ಎಂದು ಅಂದಾಜಿಸಲಾಗಿದೆ.  
ಅಲ್ಲದೆ ಈ ನಾಲ್ಕು ತಿಂಗಳನ್ನು ಹೆಚ್ಚುವರಿ ಮೂಲಸೌಕರ್ಯವೃದ್ಧಿ, ಮಾನವ ಸಂಪನ್ಮೂಲ ಅಭಿವೃದ್ಧಿ, ಗಂಭೀರ ವೈದ್ಯಕೀಯ ಸಾಧನಗಳಾದ ಪಿಪಿಇ ಕಿಟ್, ಎನ್-95 ಮಾಸ್ಕ್ ಮತ್ತು ವೆಂಟಿಲೇಟರ್ ಮತ್ತಿತರ ಉಪಕರಣಗಳ ಉತ್ಪಾದನೆಗೆ ಒತ್ತು ನೀಡಲು ಬಳಸಿಕೊಳ್ಳಲಾಯಿತು. 2020ರ ಮಾರ್ಚ್ ನಲ್ಲಿ ಹಾಲಿ ಇದ್ದ ಹಾಸಿಗೆಗಳಿಗೆ ಹೋಲಿಸಿದರೆ  ನಿರ್ದಿಷ್ಟ ಐಸೋಲೇಷನ್ ಹಾಸಿಗೆಗಳ ಸಂಖ್ಯೆಯನ್ನು 36.3ಪಟ್ಟು ಹೆಚ್ಚಿಸಲಾಗಿದೆ ಮತ್ತು ನಿರ್ದಿಷ್ಟ ಐಸಿಯು ಹಾಸಿಗೆಗಳನ್ನು 24.6ಪಟ್ಟು ಹೆಚ್ಚಿಸಲಾಗಿದೆ. ದೇಶದಲ್ಲಿ ಒಂದು ಹಂತದಲ್ಲಿ ನಿರ್ದಿಷ್ಟ ಮಾನದಂಡದ ಸ್ವತಃ ಪಿಪಿಇ ಕಿಟ್ ಗಳ ಉತ್ಪಾದನೆ ಇರಲಿಲ್ಲ. ಆದರೆ ಈಗ ನಾವು ಸ್ವಾವಲಂನೆ ಸಾಧಿಸಿದ್ದೇವೆ ಮತ್ತು ಅವುಗಳನ್ನು ರಫ್ತು ಮಾಡುವ ಸ್ಥಾನದಲ್ಲಿದ್ದೇವೆ. ದೇಶವಾಸಿಗಳ ಪರವಾಗಿ ನಾನು ಈ ಸಂದರ್ಭದಲ್ಲಿ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ. ಅವರು ವೈಯಕ್ತಿಕವಾಗಿ ಈ ವಿಚಾರದಲ್ಲಿ ನಿರಂತರವಾಗಿ ಪರಿಸ್ಥಿತಿಯನ್ನು ಖುದ್ದು ಅವಲೋಕಿಸಿದರಲ್ಲದೆ, ಅಗತ್ಯ ನಾಯಕತ್ವವನ್ನು ವಹಿಸಿದರು.
8.    ರೋಗದ ಪ್ರವೇಶ ನಿಯಂತ್ರಣ ಮತ್ತು ಹರಡುವುದನ್ನು ತಡೆಯಲು ಭಾರತ ಸರ್ಕಾರ ಸರಣಿ ಕ್ರಮಗಳನ್ನು ಕೈಗೊಂಡಿದೆ. ನಾನು ಪ್ರತಿ ದಿನವೂ ಪರಿಸ್ಥಿತಿಯನ್ನು ಪರಿಶೀಲನೆ ನಡೆಸುತ್ತಿದ್ದೇನೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಸಂಬಂಧಿಸಿದವರೊಂದಿಗೆ ನಿರಂತರವಾಗಿ ಸಮಾಲೋಚನೆ ನಡೆಸುತ್ತಿದ್ದಾರೆ. ವಿಷಯಗಳನ್ನು ಅರ್ಥೈಸಿಕೊಂಡು ರಾಜ್ಯಗಳ ಸಹಭಾಗಿತ್ವದಲ್ಲಿ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲಾಗುತ್ತಿದೆ. ನನ್ನ ಅಧ್ಯಕ್ಷತೆಯಲ್ಲಿನ ಸಚಿವರ ಉನ್ನತ ಮಟ್ಟದ ಸಮಿತಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರು, ನಾಗರಿಕ ವಿಮಾನಯಾನ ಸಚಿವರು, ಗೃಹ ವ್ಯವಹಾರಗಳ ರಾಜ್ಯ ಸಚಿವರು, ಬಂದರು ಖಾತೆ ರಾಜ್ಯ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರು 2020ರ ಫೆಬ್ರವರಿ 3ರಿಂದೀಚೆಗೆ ಸಮಿತಿ ರಚನೆಯಾದ ನಂತರ 20 ಬಾರಿ ಸಭೆ ಸೇರಿದ್ದೇವೆ. ಸಂಪುಟ ಕಾರ್ಯದರ್ಶಿ ಅಧ್ಯಕ್ಷತೆಯ ಕಾರ್ಯದರ್ಶಿಗಳ ಸಮಿತಿಯಲ್ಲಿ ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಅಲ್ಲಿ ಆರೋಗ್ಯ, ರಕ್ಷಣೆ, ವಿದೇಶಾಂಗ ವ್ಯವಹಾರಗಳು, ನಾಗರಿಕ ವಿಮಾನಯಾನ, ಗೃಹ, ಜವಳಿ, ಫಾರ್ಮ, ವಾಣಿಜ್ಯ ಮತ್ತು ಇತರೆ ಸಚಿವಾಲಯಗಳ ಹಿರಿಯ ಅಧಿಕಾರಿಗಳು ಮತ್ತು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿದ್ದಾರೆ.
ಗೌರವಾನ್ವಿತ ಪ್ರಧಾನಮಂತ್ರಿ ಅವರ ಒಟ್ಟಾರೆ ಮಾರ್ಗದರ್ಶನದಲ್ಲಿ ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯ ದೇಶದಲ್ಲಿ ಕೋವಿಡ್-19 ನಿರ್ವಹಣೆಯ ನಾನಾ ಆಯಾಮಗಳ ಕುರಿತಂತೆ 2020ರ ಮಾರ್ಚ್ 29ರಂದು 11 ಉನ್ನತ ಮಟ್ಟದ ಸಮಿತಿಗಳನ್ನು ರಚಿಸಿದೆ. ವಿಷಯವಾರು ಸಮಿತಿಗಳನ್ನು ರಚಿಸಲಾಗಿದ್ದು, ಅವುಗಳು ತಾವು ಕೈಗೊಳ್ಳುವ ನಿರ್ಧಾರಗಳನ್ನು ತಿಳಿಸಲಿವೆ. ಅವುಗಳೆಂದರೆ (i) ವೈದ್ಯಕೀಯ ತುರ್ತು ಯೋಜನೆ, (ii) ಆಸ್ಪತ್ರೆಗಳ ಲಭ್ಯತೆ, ಐಸೋಲೇಷನ್ ಮತ್ತು ಕ್ವಾರಂಟೈನ್ ಸೌಲಭ್ಯ, ರೋಗದ ನಿಗಾ ಮತ್ತು ಪರೀಕ್ಷೆ  (iii) ಅಗತ್ಯ ವೈದ್ಯಕೀಯ ಸಾಧನೆಗಳ ಲಭ್ಯತೆ ಖಾತ್ರಿಪಡಿಸುವುದು (iv) ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಸಾಮರ್ಥ್ಯವೃದ್ಧಿ (v) ಸರಣಿ ಪೂರೈಕೆ ಮತ್ತು ಸಾಗಾಣೆ ನಿರ್ವಹಣೆ (vi) ಖಾಸಗಿ ವಲಯದೊಂದಿಗೆ ಸಮನ್ವಯ (vii) ಆರ್ಥಿಕ ಮತ್ತು ಕಲ್ಯಾಣ ಕ್ರಮಗಳು (viii) ಮಾಹಿತಿ ಸಂವಹನ ಮತ್ತು ಸಾರ್ವಜನಿಕ ಜಾಗೃತಿ (ix) ತಂತ್ರಜ್ಞಾನ ಮತ್ತು ದತ್ತಾಂಶ ನಿರ್ವಹಣೆ (x) ಸಾರ್ವಜನಿಕ ಕುಂದುಕೊರತೆಗಳು ಮತ್ತು (xi) ಲಾಕ್ ಡೌನ್ ಗೆ ಸಂಬಂಧಿಸಿದಂತೆ ಕಾರ್ಯತಂತ್ರ ವಿಚಾರಗಳು. ಈ ಸಮಿತಿಗಳನ್ನು ಬದಲಾಗುತ್ತಿರುವ ಸನ್ನಿವೇಶ ಮತ್ತು ಅಗತ್ಯತೆಗಳನ್ನು ಆಧರಿಸಿ ಸೆಪ್ಟೆಂಬರ್ 10ರಂದು ಪುನಾರಚನೆ ಮಾಡಲಾಗಿದೆ.
ನಮ್ಮ ಸಚಿವಾಲಯ ನಿರಂತರವಾಗಿ ಪರಿಶೀಲನೆ ನಡೆಸುತ್ತಿದೆ ಮತ್ತು ಬದಲಾಗುತ್ತಿರುವ ಪರಿಸ್ಥಿತಿಯನ್ನು ಅವಲೋಕಿಸುತ್ತಿದೆ. ರಾಜ್ಯಗಳ ಜೊತೆ ನಿರಂತರವಾಗಿ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತಿದೆ. ರಾಜ್ಯಗಳ ಆರೋಗ್ಯ ಸಚಿವರು, ಆರೋಗ್ಯ ಅಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಈವರೆಗೆ 63 ವಿಡಿಯೋ ಕಾನ್ಫರೆನ್ಸ್ ಗಳನ್ನು ನಡೆಸಲಾಗಿದೆ ಡಿಜಿಎಚ್ಎಸ್ ಅಧ್ಯಕ್ಷತೆಯಲ್ಲಿ ಜಂಟಿ ಮೇಲ್ವಿಚಾರಣಾ ಸಮಿತಿ(ಜೆಎಂಜಿ)ಅನ್ನು ರಚಿಸಲಾಗಿದ್ದು, ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ನೀಡಲಿದೆ. ಆ ಸಮಿತಿ ಈವರೆಗೆ 40 ಬಾರಿ ಭೇಟಿ ಮಾಡಿ ಅಪಾಯವನ್ನು ಅಂದಾಜಿಸಿ, ಸಿದ್ಧತೆಗಳ ಪರಮಾರ್ಶೆ ನಡೆಸಿ, ಪ್ರತಿಕ್ರಿಯೆ ಕಾರ್ಯತಂತ್ರಗಳನ್ನು ಅನುಸರಿಸುತ್ತಾ ತಾಂತ್ರಿಕ ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಕೆಲಸ ಮಾಡಿದೆ.
9.     ಭಾರತ ಸರ್ಕಾರ ಹಿಂದೆ ಸಾಂಕ್ರಾಮಿಕಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಅನುಭವಗಳನ್ನು ಆಧರಿಸಿ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯ ಕಾರ್ಯತಂತ್ರ ಯೋಜನೆ ಮತ್ತು ನಿಯಮಾವಳಿಗಳನ್ನು ಒದಗಿಸಿದೆ. ಇದರಲ್ಲಿ ನಿರ್ಬಂಧಿತ ಯೋಜನೆಗಳು ಮತ್ತು ಪ್ರವಾಸ, ನಡವಳಿಕೆ ಮತ್ತು ಮಾನಸಿಕ – ಸಾಮಾಜಿಕ ಆರೋಗ್ಯ, ಮೇಲ್ವಿಚಾರಣೆ, ಪ್ರಯೋಗಾಲಯದ ಬೆಂಬಲ, ಆಸ್ಪತ್ರೆ ಮೂಲಸೌಕರ್ಯ, ಕ್ಲಿನಿಕಲ್ ನಿರ್ವಹಣೆ, ವೈಯಕ್ತಿಕ ರಕ್ಷಣಾ ಸಾಧನ(ಪಿಪಿಇ ಕಿಟ್ ) ಸೇರಿದಂತೆ ಆರೋಗ್ಯ ಸಿಬ್ಬಂದಿಗಳಿಗೆ ಸ್ಫೂರ್ತಿದಾಯಕ ಮಾರ್ಗದರ್ಶನ ನೀಡುವ ಕ್ರಮಗಳನ್ನು ಕೈಗೊಳ್ಳಲಾಗಿದೆ.
10.    ಕೋವಿಡ್ ಪ್ರಸರಣ ತಡೆ ಮತ್ತು ನಿಯಂತ್ರಣಕ್ಕೆ ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ಮೊದಲಿಗೆ 2020ರ ಜನವರಿ 17ರಂದು ಪ್ರಯಾಣ ಸಲಹಾ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ನಂತರ ಪರಿಸ್ಥತಿ ಬದಲಾದಂತೆ ಹಂತಹಂತವಾಗಿ ಪ್ರಯಾಣಿಕರ ಸಲಹಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಯಿತು. 2020ರ ಮಾರ್ಚ್ 23ರ ವರೆಗೆ(ಎಲ್ಲ ಬಗೆಯ ವಾಣಿಜ್ಯ ವಿಮಾನಗಳ ಸಂಚಾರ ರದ್ದುಪಡಿಸುವವರೆಗೆ) ಪ್ರಯಾಣಿಕರ ಸಾಮೂಹಿಕ ತಪಾಸಣೆ ಪರಿಚಯಿಸಲಾಗಿತ್ತು. ಒಟ್ಟು  14,154 ವಿಮಾನಗಳಲ್ಲಿ ಬಂದ 15,24,266 ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಲಾಯಿತು. ವಿಮಾನ ನಿಲ್ದಾಣಗಳಲ್ಲದೆ, 16.31 ಲಕ್ಷ ವ್ಯಕ್ತಿಗಳನ್ನು ಗಡಿ ಭಾಗದಲ್ಲಿ ತಪಾಸಣೆ ಮಾಡಲಾಗಿತ್ತು ಮತ್ತು 12 ಪ್ರಮುಖ ಹಾಗೂ 65 ಸಣ್ಣ ಸಮುದ್ರ ಬಂದರುಗಳಲ್ಲಿ 86,379 ವ್ಯಕ್ತಿಗಳನ್ನು ತಪಾಸಣೆಗೊಳಪಡಿಸಲಾಯಿತು.  
11.   ಪ್ರಸ್ತುತ ಭಾರತ ಸರ್ಕಾರ ಸದ್ಯ ಭಾರತದ ಯಾವುದೇ ವಿಮಾನ ನಿಲ್ದಾಣದಿಂದ ವಿದೇಶಿ ವಿಮಾನಗಳು ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕೊಂಡೊಯ್ಯುವಂತಿಲ್ಲ ಎಂದು ಸೂಚಿಸಲಾಗಿದೆ. 2020ರ ಮಾರ್ಚ್ 22ರಿಂದೀಚೆಗೆ ಮೇ 7, 2020ರವರೆಗೆ ವಂದೆ ಭಾರತ್ ಮಿಷನ್ ಆರಂಭವಾಗುವವರೆಗೆ ಯಾವುದೇ ವಿಮಾನಕ್ಕೆ ಅವಕಾಶವಿರಲಿಲ್ಲ. ಕೋವಿಡ್-19 ಸಾಂಕ್ರಾಮಿಕದಿಂದಾಗಿ ಹಲವು ಹದೇಶಗಳಲ್ಲಿ ಸಿಲುಕಿದ್ದ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರಲು 2020ರ ಮೇ 7 ರಿಂದೀಚಗೆ ವಂದೇ ಭಾರತ್ ಮಿಷನ್ ಆರಂಭಿಸಲಾಯಿತು. ತಾತ್ಕಾಲಿಕ ವಿಮಾನಯಾನ ಸಂಚಾರ ವ್ಯವಸ್ಥೆ(ಟ್ರಾನ್ಸ್ ಪೋರ್ಟ್ ಬಬ್ಬಲ್ಸ್) ಅನ್ನು ಭಾರತ ಮತ್ತು ಇತರ 9 ಪರಸ್ಪರ ಒಪ್ಪಿಕೊಂಡ ರಾಷ್ಟ್ರಗಳ ನಡುವೆ ಕೈಗೊಳ್ಳಲಾಯಿತು. ಅವು ವಾಣಿಜ್ಯ ಪ್ರಯಾಣಿಕರ ಸೇವೆಗಳನ್ನು ಪುನರಾರಂಭಿಸಲು ಒಪ್ಪಿದವು. ಅವುಗಳು ಸ್ವಭಾವತಃ ಪರಸ್ಪರ ಸಹಕಾರ ನೀಡುತ್ತಿದ್ದು, ಎರಡೂ ದೇಶಗಳ ವಿಮಾನಯಾನ ಸಂಸ್ಥೆಗಳು ಸಮಾನ ಅವಕಾಶಗಳ ಪ್ರಯೋಜನ ಪಡೆಯುತ್ತಿವೆ. 2020ರ ಮೇ 24ರಂದು ಸಚಿವಾಲಯ, ಅಂತಾರಾಷ್ಟ್ರೀಯ ಪ್ರಯಾಣಿಕರ ಆಗಮನ ಕುರಿತ ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಅವುಗಳನ್ನು 2020ರ ಆಗಸ್ಟ್ 2ರಂದು ಮತ್ತೆ ಪರಿಷ್ಕರಿಸಲಾಗಿದೆ.
ಭಾರತ ಸರ್ಕಾರ, ಲಾಕ್ ಡೌನ್ 1.0ಗೂ ಮುನ್ನ ಚೀನಾದ ವೂಹಾನ್ ನಿಂದ ಡೈಮಂಡ್ ಪ್ರಿನ್ಸಸ್ ಹಡಗಿನ ಮೂಲಕ, ಜಪಾನ್, ಇರಾನ್, ಇಟಲಿ ಮತ್ತು ಮಲೇಷಿಯಾದಿಂದ ಭಾರತೀಯರನ್ನು ವಾಪಸ್ ಕರೆತರಲಾಯಿತು. ವಂದೇ ಭಾರತ್ ಮಿಷನ್ ಅಡಿಯಲ್ಲಿ 2020ರ ಸೆಪ್ಟೆಂಬರ್ 11ರ ವರೆಗೆ ಒಟ್ಟು 12,69,172 ಪ್ರಯಾಣಿಕರನ್ನು ಸ್ವದೇಶಕ್ಕೆ ಕರೆತರಲಾಗಿದೆ.
12.  ಆರಂಭದಲ್ಲಿ ಪ್ರಯಾಣ ಸಂಬಂಧಿ ಪ್ರಕರಣಗಳಲ್ಲಿ ಸಮುದಾಯದ ಮೇಲೆ ನಿಗಾ ವಹಿಸುವ ವ್ಯವಸ್ಥೆಯನ್ನು ಕೈಗೊಳ್ಳಲಾಗಿತ್ತು ಮತ್ತು ಕ್ರಮೇಣ ಸಮಗ್ರ ರೋಗ ಮೇಲ್ವಿಚಾರಣಾ ಕಾರ್ಯಕ್ರಮ(ಐಡಿಎಸ್ ಪಿ) ಅಡಿ ಪ್ರಕರಣಗಳನ್ನು ವರದಿ ಮಾಡಲಾಗುತ್ತಿತ್ತು. 2020ರ ಸೆಪ್ಟೆಂಬರ್ 11ರ ವರೆಗೆ ಒಟ್ಟು 40 ಲಕ್ಷ ವ್ಯಕ್ತಿಗಳ ಮೇಲೆ ನಿಗಾ ಇಡಲಾಗಿದ್ದು, ಎಲ್ಲ ಪಾಸಿಟಿವ್ ಪ್ರಕರಣಗಳಲ್ಲಿ ವ್ಯಾಪಕ ಸಂಪರ್ಕ ಪತ್ತೆ ನಡೆಸಲಾಗಿದೆ ಮತ್ತು ಸೋಂಕು ಪ್ರಸರಣವಾಗುವುದನ್ನು ತಡೆಯಲು ಕಣ್ಗಾವಲು ಜಾಲವನ್ನು ಬಳಸಿಕೊಳ್ಳಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ 2020ರ ಮಾರ್ಚ್ 2 ಮತ್ತು ಏಪ್ರಿಲ್ 4 ರಂದು ನಿರ್ಬಂಧಿತ ವಲಯಗಳ ಕ್ಲಸ್ಟರ್ ಮತ್ತು ದೊಡ್ಡ ಪ್ರಮಾಣದಲ್ಲಿ ಸೋಂಕು ಹರಡುವುದನ್ನು ತಡೆಯಲು ಯೋಜನೆಗಳನ್ನು ಪ್ರಕಟಿಸಿತ್ತು ಮತ್ತು ಈ ಯೋಜನೆಗಳನ್ನು ಕಾಲಕಾಲಕ್ಕೆ ಪರಿಷ್ಕರಿಸಲಾಯಿತು. ನಿರ್ಬಂಧಿತ ವಲಯಗಳ ಯೋಜನೆಗಳಲ್ಲಿ ಸೋಂಕು ಪ್ರಸರಣ ಸರಪಳಿಯನ್ನು ಕತ್ತರಿಸುವ ಗುರಿ ಹೊಂದಲಾಗಿತ್ತು. ಅದಕ್ಕಾಗಿ (i) ನಿರ್ಬಂಧಿತ ವಲಯ ಮತ್ತು ಬಫರ್ ವಲಯದ ವ್ಯಾಖ್ಯಾನ (ii) ಕಠಿಣ ಮಾನದಂಡ ನಿಯಂತ್ರಣ ಕ್ರಮಗಳ ಜಾರಿ (iii) ಪ್ರಕರಣಗಳ ಮತ್ತು ಸಂಪರ್ಕಗಳ ಪತ್ತೆಗೆ ವ್ಯಾಪಕ ಮನೆ-ಮನೆ ಶೋಧ ಕಾರ್ಯ (iv) ಐಸೋಲೇಷನ್ ಮತ್ತು ಶಂಕಿತ ಪ್ರಕರಣಗಳ ಪರೀಕ್ಷೆ ಹಾಗೂ ಹೆಚ್ಚಿನ ಅಪಾಯವಿರುವ ಸಂಪರ್ಕಗಳ ಪತ್ತೆ(v) ಹೆಚ್ಚಿನ ಅಪಾಯವಿರುವ ಸಂಪರ್ಕಗಳ ಕ್ವಾರಂಟೈನ್ (vi) ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸಲು ವ್ಯಾಪಕ ಸಂವಹನ ಕ್ರಮಗಳು ಮತ್ತು ಸರಳ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಪ್ರಾಮಾಣಿಕ ಚಿಕಿತ್ಸಾ ಕ್ರಮಗಳು (vii) ಐಎಲ್ಐ/ ಗಂಭೀರ ಉಸಿರಾಟದ ಕಾಯಿಲೆ(ಎಸ್ಎಆರ್ ಐ) ಸೇರಿ ಜ್ವರದಂತಹ ಪ್ರಕರಣಗಳ ಮೇಲೆ ವರಿ ತಿಂಗಳಲ್ಲಿ ಕೋವಿಡ್ ಪರೀಕ್ಷೆಗೆ ಒಂದೇ ಒಂದು ಪ್ರಯೋಗಾಲಯ ಸಜ್ಜಾಗಿತ್ತು. ಪ್ರಸ್ತುತ ಕೋವಿಡ್-19 ಪರೀಕ್ಷೆಗೆ ದೇಶಾದ್ಯಂತ 1705 ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ ಕಷ್ಟಕರ ಮತ್ತು ಕಡಿದಾದ ಕಣಿವೆ ಪ್ರದೇಶಗಳಾದ ಲಡಾಖ್, ಸಿಕ್ಕಿಂ, ಅರುಣಾಚಲಪ್ರದೇಶ, ನಾಗಾಲ್ಯಾಂಡ್, ಈಶಾನ್ಯ ರಾಜ್ಯಗಳು, ಲಕ್ಷದ್ವೀಪ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿಯೂ ಪ್ರಯೋಗಾಲಯಗಳನ್ನು ಸ್ಥಾಪಿಸಲಾಗಿದೆ. ಪ್ರಸ್ತುತ ದೇಶದಲ್ಲಿ ಪ್ರತಿ ದಿನ ಒಂದು ಮಿಲಿಯನ್ ಟೆಸ್ಟ್ ಗಳನ್ನು(ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರತಿ ದಿನ 720 ಪರೀಕ್ಷೆಗಳು) ನಡೆಸಲಾಗುತ್ತಿದ್ದು, ಇದು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಪ್ರತಿ ಮಿಲಿಯನ್ ಜನಸಂಖ್ಯೆಗೆ ಪ್ರತಿ ದಿನ 140 ಪರೀಕ್ಷೆಗಳಿಗೂ ಅಧಿಕವಾಗಿದೆ. 2020ರ ಸೆಪ್ಟೆಂಬರ್ 11ರ ವರೆಗೆ ಒಟ್ಟಾರೆ 5,51,89,226 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಆದರೆ ಪ್ರಯೋಗಾಲಯದಲ್ಲಿ ಬಳಕೆ ಮಾಡಲಾಗುವ ಉಪಕರಣಗಳ ದೇಶೀಯ ಉತ್ಪಾದನೆ ಇಲ್ಲ. ಅಥವಾ ಕೋವಿಡ್ ಪರೀಕ್ಷಾ ಯಂತ್ರಗಳು ಇರಲಿಲ್ಲ. ಇಂದು ನಾವು ಪ್ರತಿ ದಿನ 10 ಲಕ್ಷಕ್ಕೂ ಅಧಿಕ ಪರೀಕ್ಷಾ ಕಿಟ್ ಗಳನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯ ಹೊಂದಿದ್ದೇವೆ.  
14.  ಕೋವಿಡ್-19 ಪ್ರಕರಣಗಳ ಸೂಕ್ತ ನಿರ್ವಹಣೆಗಾಗಿ ಆರೋಗ್ಯ ಸೌಕರ್ಯಗಳ ವ್ಯವಸ್ಥೆಯಲ್ಲಿ ಮೂರು ಹಂತಗಳನ್ನು ಸೃಷ್ಟಿಸಲಾಗಿದೆ. (i) ಸಾಧಾರಣ ಅಥವಾ ಮುನ್ಸೂಚನೆ ಇರುವಂತಹ ಪ್ರಕರಣಗಳಿಗಾಗಿ ಐಸೋಲೇಷನ್ ಹಾಸಿಗೆಗಳುಳ್ಳ ಕೋವಿಡ್ ಆರೈಕೆ ಕೇಂದ್ರಗಳು (ii)ಸಾಧಾರಣ ಪ್ರಕರಣಗಳಿಗಾಗಿ ಐಸೋಲೇಷನ್ ಹಾಸಿಗೆಗಳುಳ್ಳ, ಆಕ್ಸಿಜನ್ ಬೆಂಬಲವಿರುವ ನಿರ್ದಿಷ್ಟ ಕೋವಿಡ್ ಆರೋಗ್ಯ ಕೇಂದ್ರಗಳು(ಡಿಸಿಎಚ್ ಸಿ) (iii) ಗಂಭೀರ ಪ್ರಕರಣಗಳಿಗಾಗಿ ಐಸಿಯು ಹಾಸಿಗೆಗಳುಳ್ಳ ನಿರ್ದಿಷ್ಟ ಕೋವಿಡ್ ಆಸ್ಪತ್ರೆಗಳು(ಡಿಸಿಎಚ್) ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇಎಸ್ಐಸಿ, ರಕ್ಷಣಾ, ರೈಲ್ವೆ, ಅರೆ ಮಿಲಿಟರಿ ಪಡೆಗಳು, ಉಕ್ಕು ಸಚಿವಾಲಯ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ತೃತೀಯ ಹಂತದ ಆರೈಕೆಗಳಿಗೆ ಪ್ರಕರಣಗಳ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳಲಾಗಿದೆ. 
2020ರ ಸೆಪ್ಟೆಂಬರ್ 12ರ ವರೆಗೆ ಒಟ್ಟು 15,284 ಕೋವಿಡ್ ಚಿಕಿತ್ಸಾ ಸೌಕರ್ಯಗಳು ಇದ್ದು, ಅವುಗಳಲ್ಲಿ 13,14,646 ನಿರ್ದಿಷ್ಟ ಐಸೋಲೇಷನ್ ಹಾಸಿಗೆಗಳು ಇದ್ದು, ಅವುಗಳಲ್ಲಿ ಆಕ್ಸಿಜನ್ ಇರುವುದಿಲ್ಲ. ಅಲ್ಲದೆ, 2,31,093 ಆಕ್ಸಿಜನ್ ಬೆಂಬಲವಿರುವ ಐಸೋಲೇಷನ್ ಹಾಸಿಗೆಗಳು ಮತ್ತು 62,717 ಐಸಿಯು ಹಾಸಿಗೆಗಳು(32,575 ವೆಂಟಿಲೇಟರ್ ಹಾಸಿಗೆಗಳು ಸೇರಿ) ಸೃಷ್ಟಿಸಲಾಗಿದೆ. ರೋಗದ ಸ್ಥಿತಿಗತಿಯನ್ನು ನಿರಂತರವಾಗಿ ನಿಗಾವಹಿಸಲಾಗುತ್ತಿದ್ದು, ಲಭ್ಯವಿರುವ ಮೂಲಸೌಕರ್ಯ ಮತ್ತು ಭವಿಷ್ಯಕ್ಕಾಗಿ ಮೊದಲೇ ಯೋಜನೆಗಳನ್ನು ರೂಪಿಸುವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹಲವು ಅಭಿವೃದ್ಧಿಶೀಲ ರಾಷ್ಟ್ರಗಳು ತೀವ್ರ ಬಿಕ್ಕಟ್ಟುಗಳನ್ನು ಎದುರಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಲ್ಲದೆ ಒಟ್ಟು 12,826 ಕ್ವಾರಂಟೈನ್ ಕೇಂದ್ರಗಳಲ್ಲಿ 5,98,811 ಹಾಸಿಗೆಗಳನ್ನು ಸೃಷ್ಟಿಸಲಾಗಿದೆ.
ಕೋವಿಡ್-19 ಚಿಕಿತ್ಸಾ ನಿರ್ವಹಣೆ ಕುರಿತಂತೆ ಮಾರ್ಗಸೂಚಿಗಳನ್ನು ಆಗಾಗ್ಗೆ ಹೊರಡಿಸಲಾಗುತ್ತಿದ್ದು, ನಿರಂತರವಾಗಿ ಅವುಗಳನ್ನು ಪರಿಷ್ಕರಿಸಲಾಗುತ್ತಿದೆ ಮತ್ತು ವ್ಯಾಪಕವಾಗಿ ಪ್ರಚುರಪಡಿಸಲಾಗುತ್ತಿದೆ. ಅವುಗಳಲ್ಲಿ ಪ್ರಕರಣಗಳ ವ್ಯಾಖ್ಯಾನ, ಸೋಂಕು ನಿಯಂತ್ರಣ ಮುನ್ನೆಚ್ಚರಿಕೆ, ಪ್ರಯೋಗಾಲಯ ಪತ್ತೆ, ಶೀಘ್ರ ಚಿಕಿತ್ಸಾ ನೆರವು, ಗಂಭೀರ ಪ್ರಕರಣಗಳ ನಿರ್ವಹಣೆ ಮತ್ತಿತರ ಅಂಶಗಳು ಸೇರಿವೆ. ಈವರೆಗೆ ಯಾವುದೇ ನಿರ್ದಿಷ್ಟ  ರೋಗ ನಿರೋಧಕಗಳು ಇಲ್ಲ. ಜ್ವರ ಮತ್ತು ಕೆಮ್ಮು ಲಕ್ಷಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅದಕ್ಕೆ ಸೂಕ್ತ ರಿಹೈಡ್ರೇಷನ್ ಮತ್ತು ಆಕ್ಸಿಜನ್ ಪೂರಕ ಚಿಕಿತ್ಸೆಗಳನ್ನು ಪ್ರಮುಖವಾಗಿ ನೀಡಲಾಗುತ್ತಿದೆ. ನಾವು ಹೈಡ್ರೋ ಕ್ಲೋರೊ ಕ್ವಿನ್ ಔಷಧವನ್ನು ಮರು ಸಂಶೋಧಿಸಿದ್ದೇವೆ. ಅದನ್ನು ಸಾಧಾರಣ ಮತ್ತು ಅಲ್ಪ ಪ್ರಮಾಣದ ಸೋಂಕಿನ ಪ್ರಕರಣಗಳಲ್ಲಿ ಬಳಸಲಾಗುತ್ತಿದೆ. ಸೀಮಿತ ವೈಜ್ಞಾನಿಕ ಸಾಕ್ಷ್ಯಾಧಾರದ ಮೇಲೆ ಇದನ್ನು ಮಾಡಲಾಗಿದ್ದು, ಆ ಔಷಧವನ್ನು ಭಾರತದಾದ್ಯಂತ ಇತರೆ ಕಾಯಿಲೆಗಳಿಗೆ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಉತ್ತಮ ಸುರಕ್ಷತೆಯೊಂದಿಗೆ ದೀರ್ಘಾವಧಿಯವರೆಗೆ ಅದನ್ನು ಬಳಸಬಹುದಾಗಿದೆ.  
ರೆಮ್ ಡೆಸಿವರ್, ಕೊನ್ವಾಲ್ಸೆಂಟ್ ಪ್ಲಾಸ್ಮಾ ಮತ್ತು ತೊಸಿಲಿಝುಮಾಬ್ ಅನ್ನು ಬಳಸಿ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಗಂಭೀರ ಪ್ರಕರಣಗಳಲ್ಲಿ ಇವುಗಳನ್ನು ವೈದ್ಯಕೀಯ ನಿಗಾದೊಂದಿಗೆ ಬಳಕೆ ಮಾಡಲಾಗುತ್ತಿದೆ.
ಈ ನಿರ್ದಿಷ್ಟ ಚಿಕಿತ್ಸಾ ಶಿಷ್ಟಾಚಾರಗಳ ಬಗ್ಗೆ ಪ್ರಚಾರ ನೀಡಲು ಮತ್ತು ಗರಿಷ್ಠ ಸಂಖ್ಯೆಯಲ್ಲಿ ಸಾವಿನ ಪ್ರಮಾಣವನ್ನು ತಗ್ಗಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಏಮ್ಸ್ ನಲ್ಲಿ ಕೊರೊನಾ ಸಹಾಯವಾಣಿ 9971876591 ಅನ್ನು ಆರಂಭಿಸಲಾಗಿದ್ದು, ಆ ಮೂಲಕ ವೈದ್ಯಕೀಯ ನಿರ್ವಹಣೆಗೆ ವೈದ್ಯರಿಗೆ ಮಾರ್ಗದರ್ಶನ ನೀಡಲಾಗುತ್ತಿದೆ. ಏಮ್ಸ್ ದೆಹಲಿ ಕೋವಿಡ್-19 ರಾಷ್ಟ್ರೀಯ ಟೆಲಿ ಸಮಾಲೋಚನಾ ಕೇಂದ್ರ(ಸಿಒಎನ್ ಟಿಇಸಿ)ಯನ್ನು ನಡೆಸುತ್ತಿದ್ದು, ಅದನ್ನು +91-9115444155 ಮೂಲಕ ತಲುಪಬಹುದು. ಇದನ್ನು ದೇಶದ ಯಾವುದೇ ಮೂಲೆಯಿಂದ ಬೇಕಾದರು ವೈದ್ಯರು ಸಂಪರ್ಕಿಸಬಹುದು. ಅವರು ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಏಮ್ಸ್ ಬೋಧನಾ ಸಿಬ್ಬಂದಿಯ ನೆರವು ಪಡೆಯಬಹುದು ಮತ್ತು ಸಾರ್ವಜನಿಕ ಮಾಹಿತಿಯನ್ನೂ ಸಹ ಪಡೆಯಬಹುದು. 25.03.2020 ರಂದು ಟೆಲಿಮೆಡಿಸನ್ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಅದರಲ್ಲಿ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಟೆಲಿ ಸಮಾಲೋಚನೆ ಸೇವೆಗಳನ್ನು ನೀಡಲಾಗುತ್ತಿದೆ ಮತ್ತು ಕ್ಲಿನಿಕ್ ಗಳಲ್ಲಿ ಜನದಟ್ಟಣೆಯಾಗುವುದನ್ನು ತಪ್ಪಿಸಿದೆ. ಅಲ್ಲದೆ ಇದು ಅನಾರೋಗ್ಯ ಪೀಡಿತ ರೋಗಿಗಳಿಗೆ ಆರೈಕೆ ಮತ್ತು ಮಾರ್ಗದರ್ಶನ ನೀಡಲು ಸೀಮಿತ ಸಂಖ್ಯೆಯಲ್ಲಿ ಆರೋಗ್ಯ ರಕ್ಷಣೆಯನ್ನು ಒದಗಿಸಲು ಸಾಧ್ಯವಾಗಲಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೆಹಲಿಯ ಏಮ್ಸ್ ನ ಸಹಯೋಗದಲ್ಲಿ ಶ್ರೇಷ್ಠ ಚಿಕಿತ್ಸಾ ಕೇಂದ್ರ(ಸಿಒಇ)ಅನ್ನು ಆರಂಭಿಸಿದೆ. ಇದರಲ್ಲಿ ದೆಹಲಿ ಏಮ್ಸ್ ನೋಡಲ್ ಸಂಸ್ಥೆಯಾಗಿದ್ದು, ರಾಜ್ಯ ಮಟ್ಟದ ಸಿಒಇಗಳು ಚಿಕಿತ್ಸಾ ನಿರ್ವಹಣಾ ಶಿಷ್ಟಾಚಾರಗಳಿಗೆ ಮಾರ್ಗದರ್ಶನ ನೀಡಲಿವೆ. ಏಮ್ಸ್ ಪ್ರತಿ ವಾರ ವೆಬಿನಾರ್ ಗಳನ್ನು ಆಯೋಜಿಸುತ್ತಿದೆ ಆ ಮೂಲಕ ರಾಜ್ಯಮಟ್ಟದ ಸಿಒಇಗಳಿಗೆ ಗಂಭೀರ ಚಿಕಿತ್ಸಾ ಕ್ರಮಗಳ ಕುರಿತು ವೈದ್ಯರಿಗೆ ಕೋವಿಡ್-19 ಪ್ರಕರಣಗಳ ನಿರ್ವಹಣೆಗೆ ಅಗತ್ಯ ಮಾರ್ಗದರ್ಶನ ನೀಡುತ್ತಿವೆ. ರಾಜ್ಯಮಟ್ಟದ ಸಿಒಇಗಳು ತಮ್ಮ ಜಿಲ್ಲೆಗಳಲ್ಲಿ ಈ ಕುರಿತ ಮಾಹಿತಿಯನ್ನು ಪಸರಿಸುತ್ತಿದೆ ಎಂದು ನಿರೀಕ್ಷಿಸಲಾಗುತ್ತಿದೆ  
ಕೋವಿಡ್ ಮತ್ತು ಕೋವಿಡೇತರ ಆರೋಗ್ಯ ಸಮಸ್ಯೆ ಹೊಂದಿರುವ ಇಬ್ಬರಿಗೂ ಗುಣಮಟ್ಟದ ಚಿಕಿತ್ಸೆ ಲಭ್ಯವಾಗುವುದನ್ನು ಖಾತ್ರಿಪಡಿಸಲು ದೂರದ ಗುಡ್ಡಗಾಡು ಪ್ರದೇಶಗಳಲ್ಲಿ ಟೆಲಿ ಮೆಡಿಸನ್ ಬಳಕೆಯನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ‘ಇ-ಸಂಜೀವಿನಿ’ ಆರಂಭಿಸಲಾಗಿದೆ. ವೆಬ್ ಆಧಾರಿತ ಈ ಸಮಗ್ರ ಟೆಲಿ ಮೆಡಿಸನ್ ಪರಿಹಾರವನ್ನು(23 ರಾಜ್ಯಗಳು) ಬಳಕೆ ಮಾಡುತ್ತಿದ್ದು, ಅದನ್ನು ವಿಶೇಷ ಆರೋಗ್ಯ ರಕ್ಷಣಾ ಸೇವೆಯಡಿ ಗ್ರಾಮೀಣ ಪ್ರದೇಶಗಳು ಮತ್ತು ಇತರೆ ಸಮುದಾಯಗಳಿಗೆ ಸಾಮೂಹಿಕವಾಗಿ ವಿಸ್ತರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.  
ಐಸಿಎಂಆರ್, ಕೋವಿಡ್ ಕುರಿತಂತೆ ರಾಷ್ಟ್ರೀಯ ಚಿಕಿತ್ಸಾ ನೋಂದಣಿಯನ್ನು ಆರಂಭಿಸಿದೆ. ಅದು ಕೋವಿಡ್-19 ರೋಗದ ಕುರಿತಂತೆ ಚಿಕಿತ್ಸಾ ಕ್ರಮಗಳ ಕುರಿತು ಒಳನೋಟವನ್ನು ನೀಡಲಿದೆ ಮತ್ತು ಅದರ ವ್ಯಾಪ್ತಿ ಹಾಗೂ ರೋಗಿಗಳ ಅನುಭವಗಳನ್ನು ವಿವರಿಸಲಿದೆ.
15.    ಮರು ಸಂಶೋಧಿಸಿದ ಔಷಧಗಳಿಂದ 13 ಕ್ಲಿನಿಕಲ್ ಟ್ರಯಲ್ ಗಳನ್ನು ನಡೆಸಲಾಗಿದೆ ಮತ್ತು ಸಾಂಪ್ರದಾಯಿಕ ಜ್ಞಾನವನ್ನು ಆಧರಿಸಿ ಆಧುನಿಕ ಔಷಧಗಳನ್ನು ಬಳಸಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆ ಆಯ್ಕೆಯ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಇಮ್ಯುನೊಮಾಡುಲೇಟರ್ ಸೆಪ್ಸಿವಾಕ್ ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಮೊದಲ ಪೈಟೊಫಾರ್ಮಸಿಟಿಕಲ್ ಎಸಿಕ್ಯೂಎಚ್ ನ ಎರಡನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರಗತಿಯಲ್ಲಿದೆ. ಅಶ್ವಗಂಧ ಮತ್ತು ಇತರೆ ಮೂರು ಪ್ರಯೋಗಗಳಾದ ಗುಡುಚಿ + ಪಿಪಾಲಿ; ಯಶ್ಟಿಮಧು ಹಾಗೂ ಅಶ್ವಗಂಧದ ಒಂದು ಪ್ರೊಪಲೈಟಿಕ್ ಪರೀಕ್ಷೆ ಪ್ರಗತಿಯಲ್ಲಿದೆ ಮತ್ತು ಪಾಲಿಹರ್ಬಲ್ ಆಯುಷ್ ಔಷಧ(ಆಯುಷ್-64) ಅನ್ನು ಸಾಧಾರಣವಾಗಿ ಅನಾರೋಗ್ಯಕ್ಕೊಳಗಾದ ರೋಗಿಗಳಿಗೆ ನೀಡಲು ಯೋಜಿಸಲಾಗಿದೆ.   ಈ ರೋಗದ ವಿರುದ್ಧ ಪರಿಣಾಮಕಾರಿ ಲಸಿಕೆ ಕಂಡುಹಿಡಿಯುವ ಪ್ರಯತ್ನಗಳು ನಡೆದಿವೆ. ಆ ನಿಟ್ಟಿನಲ್ಲಿ ಜಾಗತಿಕವಾಗಿ 145 ಲಸಿಕೆಗಳು ಪ್ರಿಕ್ಲಿನಿಕಲ್ ಹಂತದಲ್ಲಿ ಮೌಲ್ಯಮಾಪನಕ್ಕೆ ಒಳಪಟ್ಟಿದ್ದವು ಮತ್ತು ಸದ್ಯ 35 ಲಸಿಕೆಗಳ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಭಾರತದಲ್ಲಿ ಕೋವಿಡ್-19 ಲಸಿಕೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. 30ಕ್ಕೂ ಅಧಿಕ ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಅವು ನಾನಾ ಹಂತದಲ್ಲಿವೆ. ಮೂರು ಲಸಿಕೆಗಳು I/II/III ಹಂತದ ಪ್ರಯೋಗಗಳನ್ನು ಮುಗಿಸಿವೆ ಮತ್ತು ನಾಲ್ಕಕ್ಕೂ ಅಧಿಕ ಲಸಿಕೆಗಳು ಪ್ರಿಕ್ಲಿನಿಕಲ್ ಅಭಿವೃದ್ಧಿ ಹಂತದಲ್ಲಿದೆ.
ಕೋವಿಡ್-19 ಬಯೋರೆಸ್ಪಿರೇಟರ್ಸ್ ಗಳನ್ನು ಸ್ಥಾಪಿಸಲಾಗಿದೆ. ಅವುಗಳ ಮೂಲಕ 40,000ಕ್ಕೂ ಅಧಿಕ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅವುಗಳನ್ನು ಡಯಾಗ್ನೊಸ್ಟಿಕ್ ಚಿಕಿತ್ಸೆ ಮತ್ತು ಲಸಿಕೆಗಳ ಅಭಿವೃದ್ಧಿಗೆ ಉದ್ಯಮ ಮತ್ತು ಸಂಶೋಧಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ.
ಕೋವಿಡ್ ಲಸಿಕೆ ಖರೀದಿ ಮತ್ತು ವಿತರಣೆಗೆ ಸಮನ್ವಯ ಮೂಡಿಸಲು ಭಾರತ ಸರ್ಕಾರ ರಾಷ್ಟ್ರಮಟ್ಟದ ಕೋವಿಡ್-19 ಲಸಿಕೆ ಆಡಳಿತ ನಿರ್ವಹಣಾ ಸಮಿತಿಯನ್ನು 2020ರ ಆಗಸ್ಟ್ 7ರಂದು ನೀತಿ ಆಯೋಗದ ಸದಸ್ಯ(ಆರೋಗ್ಯ) ಅಧ್ಯಕ್ಷತೆಯಲ್ಲಿ ರಚಿಸಲಾಗಿದೆ.
16.  ಆಯುಷ್ ಸಚಿವಾಲಯ ನಾನಾ ಕ್ರಮಗಳ ಮೂಲಕ ಕೋವಿಡ್-19 ನಿಯಂತ್ರಣ ಮತ್ತು ನಿರ್ವಹಣೆಗೆ ನೆರವು ನೀಡುತ್ತಿದೆ. ಸಚಿವಾಲಯ ರೋಗನಿರೋಧಕ ಶಕ್ತಿ ವೃದ್ಧಿ ಮತ್ತು ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ ಕ್ರಮಗಳನ್ನು ಒಳಗೊಂಡ ಸ್ವಯಂ ಆರೋಗ್ಯ ಮಾರ್ಗಸೂಚಿಗಳನ್ನು ಶಿಫಾರಸ್ಸು ಮಾಡಿದೆ. ಆಯುಷ್ ಸಚಿವಾಲಯ, ಪ್ರೊಪೈಲ್ ಆಕ್ಸಿಸ್ ಮತ್ತು ರೋಗ ನಿರೋಧಕ ಶಕ್ತಿ ಉತ್ತೇಜಿಸುವ ಹಲವು ಔಷಧ ಪದ್ಧತಿಗಳ ಕುರಿತು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಮತ್ತು ಅದನ್ನು 8 ವಿದೇಶಿ ಭಾಷೆಗಳಿಗೆ ಅನುವಾದಗೊಳಿಸಿ ಅವುಗಳನ್ನು ಭಾರತೀಯ ರಾಯಭಾರ ಕಚೇರಿಗಳಲ್ಲಿ ಹಂಚಲಾಗಿದೆ. ನಾನಾ ಆಯುಷ್ ಆಸ್ಪತ್ರೆಗಳನ್ನು ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ಕೇಂದ್ರಗಳು, ಕೋವಿಡ್ ಆರೈಕೆ ಕೇಂದ್ರಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳನ್ನಾಗಿ ನಿಯೋಜಿಸಲಾಗಿದೆ. ಸುಮಾರು 8.5 ಲಕ್ಷಕ್ಕೂ ಅಧಿಕ ಆಯುಷ್ ಆರೋಗ್ಯ ವೃತ್ತಿಪರರರು covidwarriors.gov.in. ಅದರಲ್ಲಿ ನೋಂದಾಯಿಸಿಕೊಂಡಿದ್ದಾರೆ. ಆಯುಷ್ ಸಚಿವಾಲಯ “ಬಹುಶಿಸ್ತೀಯ ಆಯುಷ್ ಸಂಶೋಧನಾ ಮತ್ತು ಅಭಿವೃದ್ಧಿ ಕಾರ್ಯಪಡೆ”ಯನ್ನು ರಚನೆ ಮಾಡಿದೆ. ಈ ಕಾರ್ಯಪಡೆ ಕೋವಿಡ್-19 ಪ್ರಕರಣಗಳಲ್ಲಿ ಮಧ್ಯಪ್ರವೇಶ ಮಾಡುವುದು ಮತ್ತು ಆಯುಷ್ ಪ್ರೊಪಲೈಟಿಕ್ ಅಧ್ಯಯನಗಳ ಚಿಕಿತ್ಸಾ ಸಂಶೋಧನಾ ಮಾನದಂಡಗಳನ್ನು ರೂಪಿಸುವ ಕಾರ್ಯ ಮಾಡುತ್ತಿದೆ. ಆಯುಷ್-ಸಿಎಸ್ಐಆರ್ ಸಹಭಾಗಿತ್ವದಲ್ಲಿ ಆಯುಷ್ ಚಿಕಿತ್ಸೆಗಳ ಪ್ರೊಪೈಲಾಕ್ಸಿಸ್ ಚಿಕಿತ್ಸೆ ಕುರಿತಂತೆ ಅಧ್ಯಯನಗಳು ನಡೆಯುತ್ತಿವೆ. ಆಯುಷ್ ಸಂಶೋಧನಾ ಮಂಡಳಿಗಳ ಮೂಲಕ ಬಹುದೊಡ್ಡ ಸಂಖ್ಯೆಯ ಜನಸಂಖ್ಯೆ ಮತ್ತು ಸಚಿವಾಲಯದಡಿ ರಾಷ್ಟ್ರೀಯ ಸಂಸ್ಥೆಗಳ ಮೂಲಕ ನಿರ್ಬಂಧಿತ ವಲಯಗಳಲ್ಲಿ ನಿಗದಿತ ಜನಸಂಖ್ಯೆಗಳನ್ನು ತಲುಪಲಾಗುತ್ತಿದೆ. ಆಯುಷ್ ಸಚಿವಾಲಯ ಕೋವಿಡ್-19 ನಿಯಂತ್ರಣಕ್ಕೆ ಆಯುಷ್ ಸಲಹೆಗಳು ಮತ್ತು ಮಾರ್ಗಸೂಚಿಗಳ ಬಳಕೆ ಹಾಗೂ ಆ ಕುರಿತಂತೆ ಪರಿಣಾಮಕಾರಿ ಅಧ್ಯಯನಗಳನ್ನು ಕೈಗೊಳ್ಳಲು ಮೊಬೈಲ್ ಆಪ್ ಆಯುಷ್-ಸಂಜೀವಿನಿ ಹೆಸರಿನಲ್ಲಿ ಕ್ರಮಗಳನ್ನು ಕೈಗೊಂಡಿದೆ.
17.   ರಾಜ್ಯಗಳು ತಮ್ಮಲ್ಲಿರುವ ಔಷಧಗಳ ದಾಸ್ತಾನು ವಿಶೇಷವಾಗಿ ಪಿಪಿಇ ಕಿಟ್ ಗಳು ಹಾಗೂ ಅವುಗಳ ಖರೀದಿ ಕುರಿತಂತೆ ನಿಗಾವಹಿಸುವಂತೆ ಸೂಚಿಸಲಾಗಿದೆ. ಕೇಂದ್ರ ಸರ್ಕಾರ ಈವರೆಗೆ 1.92 ಕೋಟಿ ಪಿಪಿಇಗಳಿಗೆ ಬೇಡಿಕೆ ಸಲ್ಲಿಸಿದೆ. ಸಚಿವಾಲಯ ಈಗಾಗಲೇ 1.39 ಕೋಟಿ ಪಿಪಿಇ ಕಿಟ್ ಗಳು ಮತ್ತು 3.43 ಎನ್-95 ಮಾಸ್ಕ್ ಗಳನ್ನು(2020ರ ಸೆಪ್ಟೆಂಬರ್ 11ರ ವರೆಗೆ) ರಾಜ್ಯಗಳಿಗೆ ಪೂರೈಕೆ ಮಾಡಲಾಗಿದೆ.    ಫಾರ್ಮಸಿಟಿಕಲ್ಸ್ ಇಲಾಖೆ ಹೈಡ್ರೋಕ್ಸಿಕ್ಲೋರೊಕ್ವಿನ್ ಔಷಧದ ಉತ್ಪಾದನೆಯನ್ನು ಹಲವು ಪಟ್ಟು ಹೆಚ್ಚಿಸಿದೆ. 2020ರ ಸೆಪ್ಟೆಂಬರ್ 11ರ ವರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 10.84 ಕೋಟಿ ಎಚ್ ಸಿ ಕ್ಯೂ ಮಾತ್ರೆಗಳನ್ನು ವಿತರಿಸಿದೆ.  ಅಲ್ಲದೆ ಭಾರತ 140ಕ್ಕೂ ಅಧಿಕ ರಾಷ್ಟ್ರಗಳಿಗೆ ಈ ಮಾತ್ರೆಗಳನ್ನು ರಫ್ತು ಮಾಡಿದೆ.
ಕೇಂದ್ರ ಸರ್ಕಾರ ಈಗಾಗಲೇ ಯಾವುದೇ ರೀತಿಯ ಅನಾಹುತಗಳನ್ನು ತಡೆಯುವ ಉದ್ದೇಶದಿಂದ 60,948 ವೆಂಟಿಲೇಟರ್ ಗಳ ಖರೀದಿಗೆ ಬೇಡಿಕೆಯನ್ನು ಸಲ್ಲಿಸಿದೆ. 2020ರ ಸೆಪ್ಟೆಂಬರ್ 11ರ ವರೆಗೆ ರಾಜ್ಯಗಳಿಗೆ 32,109 ವೆಂಟಿಲೇಟರ್ ಗಳನ್ನು ಹಂಚಿಕೆ ಮಾಡಿದ್ದು, ಈಗಾಗಲೇ 30,170ಅನ್ನು ವಿತರಿಸಲಾಗಿದೆ. ದೇಶದಲ್ಲಿ ಆಕ್ಸಿಜನ್ ಮತ್ತು ಆಕ್ಸಿಜನ್ ಸಿಲಿಂಡರ್ ಗಳಲ್ಲಿ ಸ್ವಾವಲಂಬನೆ ಸಾಧಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಾನಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಾಗಿ ಈವರೆಗೆ 1,02,400 ಆಕ್ಸಿಜನ್ ಸಿಲಿಂಡರ್ ಗಳನ್ನು ಖರೀದಿ ಮಾಡಿ ಪೂರೈಸಿದೆ. ಅಲ್ಲದೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳನ್ನೂ ಸಹ ರಾಜ್ಯಗಳಿಗೆ ಪೂರೈಸಲಾಗಿದೆ.
18.  ಅತ್ಯಂತ ಪ್ರಮುಖ ಸವಾಲೆಂದರೆ ಹಲವು ವಲಯಗಳು ಮತ್ತು ಇಲಾಖೆಗಳಲ್ಲಿ ಬಹುದೊಡ್ಡ ಸಂಖ್ಯೆಯ ಕೋವಿಡ್ ಯೋಧರನ್ನು ಗುರುತಿಸುವುದು ಮತ್ತು ಅವರನ್ನು ತರಬೇತುಗೊಳಿಸುವುದಾಗಿತ್ತು ಅವರುಗಳನ್ನು ಕೋವಿಡ್ ಕೆಲಸಗಳಿಗೆ ಮಾತ್ರವಲ್ಲ, ಇತರೆ ಅಗತ್ಯ ವೈದ್ಯಕೀಯ ಸೇವೆಗಳಿಗೂ ಸಹ ಬಳಕೆ ಮಾಡಿಕೊಳ್ಳಲಾಗಿತ್ತು. ರಕ್ಷಣಾ, ಆಯುಷ್, ಎನ್ ಸಿಸಿ, ಎನ್ಎಸ್ಎಸ್, ಎನ್ ವೈಕೆ, ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಖಾಸಗಿ ವಲಯದಿಂದ ಮಾನವ ಸಂಪನ್ಮೂಲವನ್ನು ಒಟ್ಟು ಮಾಡಲಾಯಿತು.  
19.   ಹಲವು ಅಡೆತಡೆಗಳು ಮತ್ತು ಸವಾಲುಗಳ ನಡುವೆಯೂ ಕೋವಿಡ್ ಯೋಧರು ಸಂದರ್ಭಕ್ಕೆ ತಕ್ಕಂತೆ ಮನುಕುಲಕ್ಕೆ ಸೇವೆ ಸಲ್ಲಿಸಿದ್ದಾರೆ. ವೈದ್ಯರು, ನರ್ಸ್ ಗಳು, ಅರೆ ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಕ್ಷೇತ್ರ ಕಾರ್ಯಕರ್ತರು ಹಾಗೂ ಭದ್ರತಾ ಮತ್ತು ಪೊಲೀಸ್ ಸಿಬ್ಬಂದಿ, ಪೌರ ಕಾರ್ಮಿಕರು, ಸ್ವಯಂ ಸೇವಕರು ಮತ್ತು ಪತ್ರಕರ್ತರು ನಿರಂತರವಾಗಿ ಕೋವಿಡ್ ನಿಂದ ದೇಶವಾಸಿಗಳನ್ನು ರಕ್ಷಿಸಲು ಅತ್ಯಮೂಲ್ಯ ಸೇವೆಯನ್ನು ದೇಶಕ್ಕೆ ಸಲ್ಲಿಸಿದ್ದಾರೆ. ಅವರ ಸೇವೆಗೆ ಬೆಲೆ ಕಟ್ಟಲಾಗದು. ಅವರ ಅಮೂಲ್ಯ ಸೇವೆಗಳನ್ನು ಶ್ಲಾಘಿಸಿ ಈ ಸದನದಲ್ಲಿ ಅದನ್ನು ದಾಖಲಿಸಲು ನಿಮ್ಮೆಲ್ಲರಲ್ಲೂ ಮನವಿ ಮಾಡುತ್ತೇನೆ. ಕರ್ತವ್ಯ ನಿರ್ವಹಣೆ ವೇಳೆ ಹಲವು ಆರೋಗ್ಯ ರಕ್ಷಣಾ ಸಿಬ್ಬಂದಿ, ದೌರ್ಜನ್ಯ, ಹಿಂಸಾಚಾರ, ಪ್ರಚೋದನೆ ಮತ್ತು ಜೀವಕ್ಕೆ ಅಪಾಯ ತಂದೊಡ್ಡುವಂತಹ ಘಟನೆಗಳನ್ನು ಎದುರಿಸಿದ್ದಾರೆ. ಇದರಿಂದ ಹೊರಬರಲು ಮತ್ತು ಮುಂಚೂಣಿ ಸಿಬ್ಬಂದಿಯ ಪ್ರಯತ್ನಗಳನ್ನು ಬೆಂಬಲಿಸಿ, ಭಾರತ ಸರ್ಕಾರ ಸಾಂಕ್ರಮಿಕ ರೋಗಗಳ(ತಿದ್ದುಪಡಿ ಸುಗ್ರೀವಾಜ್ಞೆ 2020)ಅನ್ನು 2020ರ ಏಪ್ರಿಲ್ 22ರಂದು ಜಾರಿಗೊಳಿಸಿತು.
ಆಸ್ಪತ್ರೆಗಳಲ್ಲಿನ ರೋಗಿಗಳ ನಿರ್ವಹಣೆಗೆ ನೆರವಾಗಲು ವೈದ್ಯಕೀಯ ಸಂಪನ್ಮೂಲ ಸೇರಿದಂತೆ ಮಾನವ ಸಂಪನ್ಮೂಲದ ಸಾಮರ್ಥ್ಯವೃದ್ಧಿಗೆ, ವೈದ್ಯಕಿಯೇತರ ಸಿಬ್ಬಂದಿ ಮತ್ತು ಕ್ಷೇತ್ರ ಕಾರ್ಯಕರ್ತರನ್ನೊಳಗೊಂಡಂತೆ ನಿಗಾವ್ಯವಸ್ಥೆ, ಸಾರಿಗೆ ಮತ್ತಿತರ ಮಾದರಿಗಳನ್ನು ಸಿದ್ಧಪಡಿಸಿ, ಅವುಗಳನ್ನು ಐಗಾಟ್, ದಿಕ್ಷಾ(ಆನ್ ಲೈನ್ ವೇದಿಕೆಯಲ್ಲಿ) ಅಳವಡಿಸಲಾಗಿತ್ತು. ಅದನ್ನು  ಡಿಒಪಿಟಿ(https://igot.gov.in/igot/) ಲಭ್ಯವಿದೆ. ಈ ತರಬೇತಿ ಮಾದರಿಗಳನ್ನು ಪ್ರಾದೇಶಿಕ ಭಾಷೆಗಳಿಗೂ ಅನುವಾದ ಮಾಡಲಾಗಿದೆ.  ಒಟ್ಟಾರೆ 29.15 ಲಕ್ಷ ಮಂದಿ ನಾನಾ ಕೋರ್ಸ್ ಗಳಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 5,699 ಮಂದಿ ವೈದ್ಯರು, 86,018 ಆಯುಷ್ ವೃತ್ತಿಪರರು, 4,102 ನರ್ಸ್ ಗಳು, 963 ಆರೋಗ್ಯ ಸಂಬಂಧಿ ವೃತ್ತಿಪರರು, 5,881ಮುಂಚೂಣಿ ಕಾರ್ಯಕರ್ತರು ಮತ್ತು 2,70,736 ಸ್ವಯಂ ಸೇವಕರು ಮತ್ತು 25,42,892 ಇತರೆ ಪ್ರತಿನಿಧಿಗಳು ಸೇರಿದ್ದಾರೆ. ಐಗಾಟ್ ದೀಕ್ಷಾ ವೇದಿಕೆಯಲ್ಲಿ ಸುಮಾರು 18.96 ಲಕ್ಷ ಕೋರ್ಸ್ ಗಳನ್ನು ಪೂರ್ಣಗೊಳಿಸಲಾಗಿದೆ. ವೈದ್ಯಕೀಯ ಮತ್ತು ವೈದ್ಯಕೀಯೇತರ ಸಿಬ್ಬಂದಿಗಳಿಗೆ ತರಬೇತಿ ಸಂಪನ್ಮೂಲವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ.
 ನಾವು ನಿರ್ಬಂಧಿತ ವಲಯಗಳಲ್ಲಿನ ಪ್ರಯಾಣ ಸಂಬಂಧಿ ಪ್ರಕರಣಗಳ ನಿರ್ವಹಣೆಯಿಂದ ಸ್ಥಳೀಯ ಪ್ರಸರಣದಿಂದಾಗಿ ನಗರಗಳು, ಅರೆ ನಗರಗಳು ಮತ್ತು ಗ್ರಾಮೀಣ ಪ್ರದೇಶದಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಂತವನ್ನು ತಲುಪಿದ್ದೇವೆ. ಇದಕ್ಕೆ ಸರ್ಕಾರದ ನಿರ್ದಿಷ್ಟ ಪ್ರಯತ್ನಗಳು ಮತ್ತು ಜನರ ಸಹಭಾಗಿತ್ವ ಅಗತ್ಯವಿದೆ. ಆ ಮೂಲಕ ಹೆಚ್ಚಿನ ಜನ ಅನಾರೋಗ್ಯಕ್ಕೊಳಗಾಗುವುದನ್ನು ಮತ್ತು ಸಾವುಗಳನ್ನು ತಡೆಯಬಹುದಾಗಿದೆ. ಅಷ್ಟೇ ಗಂಭೀರವಾದ ವಿಷಯವೆಂದರೆ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಯಶಸ್ಸನ್ನು ಸಾಧಿಸುವುದು. ಕ್ಷಯರೋಗ, ಮಲೇರಿಯಾ ಮತ್ತಿತರ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆಗಳನ್ನು ಹಾಕಲಾಗುತ್ತಿದೆ. ಹಾಗಾಗಿ ಕೋವಿಡೇತರ ಅಗತ್ಯ ಸೇವೆಗಳನ್ನು ನಿರ್ವಹಿಸಲು ಸಹ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿದೆ.
20.   ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ಅನ್ನು ಪ್ರತಿ ದಿನ ಭಾರತದಲ್ಲಿ ಕೋವಿಡ್-19 ಹರಡುತ್ತಿರುವ ಸ್ಥಿತಿಗತಿಯ ಮಾಹಿತಿಯನ್ನೊಳಗೊಂಡಂತೆ ಅಪ್ ಡೇಟ್ ಮಾಡಿ ಸಾರ್ವಜನಿಕರಿಗೆ ಮಾಹಿತಿ ಒದಗಿಸಲಾಗುತ್ತಿದೆ. ನಿರಂತರವಾಗಿ ಪತ್ರಿಕಾ ಪ್ರಕಟಣೆಗಳನ್ನು ಹೊರಡಿಸಲಾಗುತ್ತಿದೆ ಮತ್ತು ಸುದ್ದಿ ಗೋಷ್ಠಿಗಳನ್ನು ನಡೆಸಲಾಗುತ್ತಿದೆ.
ಸಂವಹನ ಸಾಮಗ್ರಿ ಮತ್ತು ಕಿಟ್ ಗಳನ್ನು(ಕರಪತ್ರ, ಪೋಸ್ಟರ್, ಆಡಿಯೋ ಮತ್ತು ಎವಿ ಚಿತ್ರಗಳು) ಅಭಿವೃದ್ಧಿಪಡಿಸಲಾಗಿದೆ ಮತ್ತು ಕೋವಿಡ್-19 ರೋಗ, ಸಮುದಾಯಗಳು ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವ ಕ್ರಮಗಳು, ಸಹಾಯವಾಣಿ ಸಂಖ್ಯೆಗಳು ಮತ್ತಿತರ ಕ್ರಮಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಸಂವಹನ ಸಾಮಗ್ರಿಗಳನ್ನು ಎಂಒಎಚ್ಎಫ್ ಡಬ್ಲ್ಯೂ ವೆಬ್ ಸೈಟ್ ನಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲಾಗುತ್ತಿದೆ. ಎಸ್ಎಂಎಸ್ ಮೂಲಕ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದನ್ನು ಕುರಿತು(550 ಕೋಟಿ ಎಸ್ಎಂಎಸ್ ಗಳನ್ನು ಕಳುಹಿಸಲಾಗಿದೆ) ಜಾಗೃತಿ ಮೂಡಿಸಲಾಗುತ್ತಿದೆ. 13 ಭಾಷೆಗಳಲ್ಲಿ ದೂರವಾಣಿ ಗ್ರಾಹಕರಿಗೆ ಕಾಲರ್ ಟ್ಯೂನ್ ಸಂದೇಶಗಳನ್ನು ಕಳುಹಿಸಲಾಗುತ್ತಿದ್ದು, ಅದು 117 ಕೋಟಿ ಗ್ರಾಹಕರನ್ನು ತಲುಪಿದೆ.
ನಿರ್ದಿಷ್ಟ ಕಾಲ್ ಸೆಂಟರ್/ ಸಹಾಯವಾಣಿ (1075) ಅನ್ನು ಆರಂಭದ ದಿನಗಳಲ್ಲಿಯೇ ಸ್ಥಾಪಿಸಲಾಗಿತ್ತು. ಆ ಮೂಲಕ ಸಮುದಾಯಕ್ಕೆ ನಿರಂತರವಾಗಿ, ಪರಿಣಾಮಕಾರಿ ಮಾರ್ಗದರ್ಶನ ನೀಡಲಾಗುತ್ತಿದೆ. ಈವರೆಗೆ ಒಟ್ಟಾರೆ 41.04 ಲಕ್ಷ ಕರೆಗಳನ್ನು ಸ್ವೀಕರಿಸಲಾಗಿದೆ
21.  ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಿಎಸ್ಐಆರ್ ಮತ್ತು ಆರೋಗ್ಯ ಸಂಶೋಧನಾ ಇಲಾಖೆ ಇಡೀ ವೈಜ್ಞಾನಿಕ ಮತ್ತು ತಾಂತ್ರಿಕ ಸರಣಿಯನ್ನು ತಲುಪಿ, ಕೋವಿಡ್-19ಗೆ ಸಮಗ್ರ ಪರಿಹಾರವನ್ನು ಕಂಡುಹಿಡಿಯಲು ಬುದ್ಧಿಜೀವಿಗಳು, ಸಂಶೋಧನಾ ಮತ್ತು ಅಭಿವೃದ್ಧಿ ಪ್ರಯೋಗಾಲಯಗಳು, ಉದ್ಯಮ, ನವೋದ್ಯಮ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಶ್ರಮಿಸುತ್ತಿದೆ. ಈ ಪರಿಹಾರಗಳಲ್ಲಿ ನಡವಳಿಕೆ, ಪ್ರಸರಣ, ಸೋಂಕಿನ ಪರಿಣಾಮಗಳು, ಸಾಂಕ್ರಾಮಿಕ ನಿರ್ವಹಣಾ ಪದ್ಧತಿ, ಮೂಲ ವೈಜ್ಞಾನಿಕ ಅಧ್ಯಯನಗಳನ್ನು ನಡೆಸಲು ಹಾಗೂ ವಿಶ್ವದರ್ಜೆಯ ವೆಂಟಿಲೇಟರ್ ಗಳು, ಪ್ರಯೋಗಾಲಯ ಕಿಟ್ ಗಳು, ಲಸಿಕೆ, ಚಿಕಿತ್ಸಾ ಕ್ರಮಗಳು, ಸೋಂಕು ನಿವಾರಕ ಕ್ರಮಗಳು, ಪಿಪಿಇ, ಮಾಸ್ಕ್, ಸಂಚಾರಿ ಪ್ರಯೋಗಾಲಯ ಬೂತ್, ಆಸ್ಪತ್ರೆ, ಕೃತಕ ಬುದ್ಧಿಮತ್ತೆ, ಮತ್ತಿತರ ಸಾಧನಗಳನ್ನು ಆಧರಿಸಿ ಮಾಹಿತಿಗಳನ್ನು ಜನಸಮೂಹಕ್ಕೆ ಒದಗಿಸಲಾಗುತ್ತಿದೆ.  ಈ ಉದ್ದೇಶಗಳಿಗಾಗಿ ನಮ್ಮ ನವೋದ್ಯಮ ವ್ಯವಸ್ಥೆಯನ್ನು ಸಮಗ್ರವಾಗಿ ಗುರುತಿಸುವ ಕಾರ್ಯ ಮಾಡಲಾಗಿದ್ದು, ಸುಮಾರು 110 ತಾಂತ್ರಿಕ ನವೋದ್ಯಮಗಳು ಹಾಗೂ ಸುಮಾರು 20 ಉದ್ಯಮದ ನವೋದ್ಯಮಗಳನ್ನು ಗುರುತಿಸಿ, ವಾಣಿಜ್ಯ ಉತ್ಪಾದನೆಗೆ ಬೆಂಬಲ ನೀಡಲಾಗಿದೆ. ಸೋಂಕಿನ ಸ್ವಭಾವದ ಬಗ್ಗೆ ಅಧ್ಯಯನ ನಡೆಸಲು ಸುಮಾರು 150 ಯೋಜನೆಗಳನ್ನು ಕೈಗೊಳ್ಳಲಾಗಿದೆ.
22. ಭಾರತ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆ –ಡಬ್ಲ್ಯೂಎಚ್ಒದ ಕೇಂದ್ರ ಕಚೇರಿ ಮತ್ತು ಪ್ರಾದೇಶಿಕ ಕಚೇರಿ ಹಾಗೂ ದೇಶದ ಕಚೇರಿಯೊಂದಿಗೆ ಆಗುತ್ತಿರುವ ಬೆಳವಣಿಗೆಯ ಬಗ್ಗೆ ನಿರಂತರ ಸಮನ್ವಯ ನಡೆಸುತ್ತಿದೆ. ಭಾರತ ಸರ್ಕಾರ ಕೋವಿಡ್ ಒಡ್ಡಿರುವ ಈ ಸವಾಲನ್ನು ಎದುರಿಸಲು ಇತರೆ ದೇಶಗಳಿಗೂ ಸಹ ನೆರವು ನೀಡುತ್ತಿದೆ. ಕೋವಿಡ್ ಕುರಿತಂತೆ ಜಿ20 ಮತ್ತು ಬ್ರಿಕ್ಸ್ ರಾಷ್ಟ್ರಗಳ ಪ್ರತಿಕ್ರಿಯೆಯನ್ನು ರೂಪಿಸುವಲ್ಲಿ ಭಾರತ ಮಹತ್ವದ ಪಾತ್ರವಹಿಸಿತು. ನೆರೆಯ ಸಾರ್ಕ್  ರಾಷ್ಟ್ರಗಳಿಗೆ ಅಗತ್ಯ ನೆರವನ್ನೂ ಸಹ ಭಾರತ ವಿಸ್ತರಿಸುತ್ತಾ ಬಂದಿದೆ.
23.       ಸರ್ಕಾರ, ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಅಗತ್ಯ ಅಂತರಗಳನ್ನು ಗುರುತಿಸಿ ಕ್ರಿಯಾಶೀಲವಾಗಿ ಅವುಗಳನ್ನು ಅಭಿವೃದ್ಧಿಗೊಳಿಸುತ್ತಿರುವುದಲ್ಲದೆ, ಭವಿಷ್ಯದಲ್ಲಿ ಇಂತಹುದೇ ಸಾಂಕ್ರಾಮಿಕ ಮತ್ತು ವಿಪತ್ತುಗಳ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಪ್ರಧಾನಮಂತ್ರಿ ಅವರ ಆತ್ಮನಿರ್ಭರ ಸ್ವಾಸ್ಥ ಭಾರತ ಯೋಜನೆಯಲ್ಲಿ 65,560.98 ಕೋಟಿ ರೂ. ಒಪ್ಪಂದ ಪರಿಶೀಲನೆಯಲ್ಲಿದೆ. ಇದರಲ್ಲಿ ಸಂಶೋಧನೆ, ಆರೋಗ್ಯ ರಕ್ಷಣೆ ಮತ್ತು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ಮತ್ತು ವಿಶೇಷವಾಗಿ ಸಾಂಕ್ರಾಮಿಕ ನಿರ್ವಹಣೆಗೆ ಒತ್ತು ನೀಡುವುದಕ್ಕೆ ಹೂಡಿಕೆಗಳೂ ಸೇರಿವೆ.
24.     ಕೋವಿಡ್ ವಿರುದ್ಧದ ಸಮರ ಇನ್ನೂ ಮುಗಿದಿಲ್ಲ ಎಂದು ನಮ್ಮೆಲ್ಲಾ ಗೌರವಾನ್ವಿತ ಸದಸ್ಯರಿಗೆ ಹೇಳಲು ಬಯಸುತ್ತೇನೆ. ಒಂದೆಡೆ ನಾವು ಆರ್ಥಿಕ ಪುನಶ್ಚೇತನಕ್ಕಾಗಿ ಅನ್ ಲಾಕ್ ಹಂತದಲ್ಲಿದ್ದೇವೆ ಹಾಗೂ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ ಮತ್ತು ಇನ್ನೊಂದೆಡೆ ಕೋವಿಡ್ ಸೋಂಕು ನಿಯಂತ್ರಣ ಮತ್ತು ಸೋಂಕು ಹರಡುವ ಸರಪಳಿಯನ್ನು ಕತ್ತರಿಸಲು ಸಮುದಾಯದ ಸುಸ್ಥಿರ ಬೆಂಬಲದೊಂದಿಗೆ ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.
ಕೋವಿಡ್ ನಿಯಂತ್ರಣಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸುವಂತೆ ನಿಮ್ಮ ನಿಮ್ಮ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಮೂಡಿಸುವಲ್ಲಿ ನಿಮ್ಮ ಬೆಂಬಲ ಅತ್ಯಂತ ಮಹತ್ವದ್ದಾಗಿದೆ. ಮಾಸ್ಕ್ ಧರಿಸುವುದು/ಮುಖ ರಕ್ಷಾ ಕವಚ ಧರಿಸುವುದು, ಪದೇ ಪದೇ ಕೈತೊಳೆಯುವುದು, ಉಸಿರಾಟ ಕ್ರಮಗಳನ್ನು ಅನುಸರಿಸುವುದು ಮತ್ತು ಎರಡು ಗಜ ದೂರ ವೈಯಕ್ತಿಕ ಅಂತರ ಕಾಯ್ದುಕೊಳ್ಳುವುದು ಮತ್ತಿತರ ಸರಳ ಸಾರ್ವಜನಿಕ ಆರೋಗ್ಯ ಮುನ್ನೆಚ್ಚರಿಕೆ ಕ್ರಮಗಳೇ ಸದ್ಯ ಇದಕ್ಕೆ ಸಾಮಾಜಿಕ ಲಸಿಕೆಯಾಗಿವೆ. ಇವುಗಳನ್ನು ಜವಾಬ್ದಾರಿಯುತವಾಗಿ ಪಾಲಿಸಿದರೆ ಕೋವಿಡ್ ಹರಡುವುದನ್ನು ನಿಯಂತ್ರಿಸಲು ಮತ್ತು ತಗ್ಗಿಸಲು ಸಹಾಯಕವಾಗುತ್ತದೆ.
25.   ಭಾರತದಲ್ಲಿ ಕೋವಿಡ್ ಹರಡುವುದನ್ನು ನಿಯಂತ್ರಿಸಲು ಎಲ್ಲ ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ನಾನು ಈ ಸದನಕ್ಕೆ ಮಾಹಿತಿ ನೀಡಲು ಬಯಸುತ್ತೇನೆ.

***



(Release ID: 1654173) Visitor Counter : 2715