ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಕರ್ನಾಟಕ ಸೇರಿ ಏಳು ದೊಡ್ಡ ರಾಜ್ಯಗಳಲ್ಲಿನ ಆರೋಗ್ಯ ರಕ್ಷಣಾ ಸೌಕರ್ಯಗಳಲ್ಲಿ ಆಕ್ಸಿಜನ್ ಲಭ್ಯತೆ ಖಾತ್ರಿಪಡಿಸಲು ಕೇಂದ್ರ ಆರೋಗ್ಯ ಸಚಿವಾಲಯ ಕರೆ

Posted On: 13 SEP 2020 5:57PM by PIB Bengaluru

ಕೇಂದ್ರ ಆರೋಗ್ಯ ಸಚಿವಾಲಯ ಇಂದು ಆಯೋಜಿಸಿದ್ದ ವರ್ಚುಯಲ್ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ, ಡಿಪಿಐಐಟಿಯ ಕಾರ್ಯದರ್ಶಿ ಮತ್ತು ಫಾರ್ಮಸುಟಿಕಲ್ಸ್ ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು. ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಗುಜರಾತ್, ರಾಜಸ್ಥಾನ ಮತ್ತು ಮಧ್ಯಪ್ರದೇಶಗಳ ರಾಜ್ಯ ಆರೋಗ್ಯ ಕಾರ್ಯದರ್ಶಿಗಳು ಮತ್ತು ಕೈಗಾರಿಕಾ ಕಾರ್ಯದರ್ಶಿಗಳೂ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಭೆಯ ಉದ್ದೇಶ ಈ ರಾಜ್ಯಗಳಲ್ಲಿನ ಆರೋಗ್ಯ ರಕ್ಷಣಾ ಸೌಕರ್ಯಗಳಲ್ಲಿ ಅಗತ್ಯ ಆಕ್ಸಿಜನ್ ಲಭ್ಯತೆಯನ್ನು ಖಾತ್ರಿಪಡಿಸಲು ಕ್ರಮ ಕೈಗೊಳ್ಳುವುದಾಗಿತ್ತು ಮತ್ತು ಆಕ್ಸಿಜನ್ ಸಾಗಾಣೆಗೆ ರಾಜ್ಯಗಳ ನಡುವೆ ಯಾವುದೇ ಅಡೆತಡೆ ಇಲ್ಲದಂತೆ ನೋಡಿಕೊಳ್ಳುವುದಾಗಿತ್ತು. 
ಸಭೆಯ ಕೊನೆಯಲ್ಲಿ ಕೇಂದ್ರ ಕೈಗಾರಿಕಾ ಮತ್ತು ವಾಣಿಜ್ಯ ಹಾಗೂ ರೈಲ್ವೆ ಸಚಿವ ಶ್ರೀ ಪಿಯೂಷ್ ಗೋಯಲ್ ಎಲ್ಲರನ್ನುದ್ದೇಶಿಸಿ ಮಾತನಾಡಿದರು. ಅವರು ರಾಜ್ಯಗಳಿಗೆ ಈ ನಿರ್ದಿಷ್ಟ ಸೂಚನೆಗಳನ್ನು ನೀಡಿದರು ಅವುಗಳೆಂದರೆ:-
ಆಕ್ಸಿಜನ್ ದಾಸ್ತಾನು ನಿರ್ವಹಣೆ ಕುರಿತಂತೆ ಸೌಕರ್ಯವಾರು, ಆಸ್ಪತ್ರೆವಾರು ಕ್ರಮ ಕೈಗೊಳ್ಳುವುದು ಮತ್ತು ಯಾವುದೇ ರೀತಿಯ ಕೊರತೆ ಉಂಟಾಗದಂತೆ ಸಕಾಲದಲ್ಲಿ ಮರುಸ್ಥಾಪನೆಗೆ ಮೊದಲೇ ಯೋಜನೆಗಳನ್ನು ರೂಪಿಸುವುದು. 
ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ವೈದ್ಯಕೀಯ ಆಕ್ಸಿಜನ್ ಸಾಗಾಣೆಗೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸದಂತೆ ಖಾತ್ರಿಪಡಿಸುವುದು. 
ನಗರಗಳೊಳಗೆ ದ್ರವರೂಪದ ವೈದ್ಯಕೀಯ ಆಕ್ಸಿಜನ್(ಎಲ್ಎಂಒ) ‘ಹಸಿರು ಕಾರಿಡಾರ್’ ವ್ಯವಸ್ಥೆ ಕಲ್ಪಿಸುವುದು. 
ಆಸ್ಪತ್ರೆಗಳು ಮತ್ತು ಸಂಸ್ಥೆಗಳು ಆಕ್ಸಿಜನ್ ಉತ್ಪಾದಕರೊಂದಿಗೆ ಆಕ್ಸಿಜನ್ ಪೂರೈಕೆಗೆ ದೀರ್ಘಕಾಲದ ಟೆಂಡರ್/ಗುತ್ತಿಗೆ ಒಪ್ಪಂದಗಳನ್ನು ಮಾಡಿಕೊಳ್ಳಬೇಕು ಮತ್ತು ಅವುಗಳನ್ನು ಪಾಲಿಸಬೇಕು. ಆದ್ದರಿಂದ ರಾಜ್ಯಗಳು ಆಕ್ಸಿಜನ್ ಸಾಗಾಣೆಗೆ ಯಾವುದೇ ರೀತಿಯ ನಿರ್ಬಂಧಗಳನ್ನು ವಿಧಿಸದೆ, ಮುಕ್ತ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. 
ಆಕ್ಸಿಜನ್ ಉತ್ಪಾದಕರು ಮತ್ತು ಪೂರೈಕೆದಾರರು ನಿರಂತರ ಆಕ್ಸಿಜನ್ ಪೂರೈಕೆ ಮಾಡಲು ಅನುಕೂಲವಾಗುವಂತೆ ಯಾವುದೇ ಬಿಲ್ ಪಾವತಿ ಬಾಕಿ ಉಳಿಸಿಕೊಳ್ಳದೆ ಸಕಾಲದಲ್ಲಿ ಪಾವತಿಸಬೇಕು 
ವಿದ್ಯುತ್ ಪೂರೈಕೆ ವ್ಯವಸ್ಥೆ ಸುಧಾರಣೆ ಮತ್ತು ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಅಡೆತಡೆ ಇಲ್ಲದೆ, ವಿದ್ಯುತ್ ಪೂರೈಕೆ ಖಾತ್ರಿಪಡಿಸಬೇಕು. 
ಆಕ್ಸಿಜನ್ ಸಿಲಿಂಡರ್ ಗಳನ್ನು ಮತ್ತೆ ಭರ್ತಿಮಾಡಲು ಕಳುಹಿಸುವಾಗ ಹಾಗೂ ಅವುಗಳನ್ನು ಕಾರ್ಯನಿರ್ವಹಿಸದಂತೆ ಮಾಡುವಾಗ ನಿಗದಿತ ಮಾನದಂಡಗಳನ್ನು ಪಾಲನೆ ಮಾಡುವುದು ಕಡ್ಡಾಯ.
ಆಕ್ಸಿಜನ್ ಉತ್ಪಾದಕರು ಪ್ರತಿ ದಿನ 6,400 ಮಿಲಿಯನ್ ಟನ್ ಆಕ್ಸಿಜನ್ ಒದಗಿಸುತ್ತಿದ್ದಾರೆ. ಹೆಚ್ಚುವರಿಯಾಗಿ ಉಕ್ಕು ಘಟಕಗಳು ಅಂದಾಜು ಪ್ರತಿ ದಿನ 550 ಮಿಲಿಯನ್ ಟನ್ ಆಕ್ಸಿಜನ್ ಒದಗಿಸುತ್ತಿರುವುದರಿಂದ ಆಕ್ಸಿಜನ್ ಖರೀದಿ ಕುರಿತಂತೆ ಉಕ್ಕು ಘಟಕಗಳ ನಡುವೆ ಪರಿಣಾಮಕಾರಿ ಸಮನ್ವಯ ಕಾಯ್ದುಕೊಳ್ಳುವ ಅಗತ್ಯವಿದೆ


(Release ID: 1653881) Visitor Counter : 238