ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ

ಹವಾಮಾನ ಸ್ನೇಹಿ ಸ್ಮಾರ್ಟ್ ನಗರಗಳ ಮೌಲ್ಯಮಾಪನ ಚೌಕಟ್ಟು (ಸಿಎಸ್‌ಸಿಎಎಫ್ 2.0) ಮತ್ತು ಜನರಿಗಾಗಿ ಬೀದಿಗಳು ಸವಾಲು - 'ಸ್ಟ್ರೀಟ್ಸ್ ಫಾರ್ ಪೀಪಲ್ ಚಾಲೆಂಜ್ ‘ - ಗೆ ಕೇಂದ್ರ ಸಚಿವ ಹರ್ದೀಪ್ ಎಸ್ ಪುರಿ ಚಾಲನೆ


ಹೂಡಿಕೆಗಳು ಸೇರಿದಂತೆ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಹವಾಮಾನ ಬದಲಾವಣೆಯನ್ನು ಎದುರಿಸಲು ಸಿಎಸ್‌ಸಿಎಎಫ್ ನಗರಗಳಿಗೆ ಮಾರ್ಗಸೂಚಿಯನ್ನು ಒದಗಿಸಲಿದೆ

ಸಿಎಸ್‌ಸಿಎಎಫ್ ಉಪಕ್ರಮವು ನಗರ ಯೋಜನೆ ಮತ್ತು ಅಭಿವೃದ್ಧಿಗೆ ಹವಾಮಾನ ಸ್ನೇಹಿ ವಿಧಾನವನ್ನು ಅಳವಡಿಸಿಕೊಳ್ಳಲಿದೆ

ಜಾಗತಿಕ ಚೌಕಟ್ಟು/ ಮೌಲ್ಯಮಾಪನ ವಿಧಾನಗಳ ಪರಿಶೀಲನೆಯ ನಂತರ ಐದು ವಿಭಾಗಗಳಲ್ಲಿ 28 ಸೂಚಕಗಳನ್ನು ಹೊಂದಿರುವ ಚೌಕಟ್ಟು ಅಭಿವೃದ್ಧಿಪಡಿಸಲಾಗಿದೆ

'ಸ್ಟ್ರೀಟ್ಸ್ ಫಾರ್ ಪೀಪಲ್ ಚಾಲೆಂಜ್' -ಜನರಿಗಾಗಿ ಬೀದಿಗಳು ಸವಾಲು- ಉಪಕ್ರಮವು ಬೀದಿಗಳ ಏಕೀಕೃತ ಗೋಚರತೆಯನ್ನು ಅಭಿವೃದ್ಧಿಪಡಿಸಲು ನಗರಗಳಿಗೆ ನೆರವಾಗುತ್ತದೆ

ತ್ವರಿತ, ನವೀನ/ ಕಡಿಮೆ ವೆಚ್ಚದ ಕ್ರಮಗಳ ಮೂಲಕ ಪಾದಚಾರಿ ಸ್ನೇಹಿ ಬೀದಿಗಳನ್ನು ರೂಪಿಸಲು ನಗರಗಳನ್ನು ಪ್ರೇರೇಪಿಸುವ ಗುರಿ ಹೊಂದಿದೆ

Posted On: 11 SEP 2020 2:40PM by PIB Bengaluru

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ಮಾರ್ಟ್ ಸಿಟೀಸ್ ಮಿಷನ್ ಆಯೋಜಿಸಿದ ವರ್ಚುವಲ್ ಕಾರ್ಯಕ್ರಮವೊಂದರಲ್ಲಿ 'ಸ್ಟ್ರೀಟ್ಸ್ ಫಾರ್ ಪೀಪಲ್ ಚಾಲೆಂಜ್' - ಜನರಿಗಾಗಿ ಬೀದಿಗಳು ಸವಾಲು- ಮತ್ತು ಹವಾಮಾನ ಸ್ನೇಹಿ ಸ್ಮಾರ್ಟ್ ನಗರಗಳ ಮೌಲ್ಯಮಾಪನ ಚೌಕಟ್ಟು (ಸಿಎಸ್ಸಿಎಎಫ್) 2.0 ಕ್ಕೆ ವಸತಿ ಮತ್ತು ನಗರ ವ್ಯವಹಾರಗಳ ರಾಜ್ಯ ಸಚಿವ ಶ್ರೀ ಹರ್ದೀಪ್ ಸಿಂಗ್ ಪುರಿ ಇಂದು ಚಾಲನೆ ನೀಡಿದರು.

ಹೂಡಿಕೆಗಳು ಸೇರಿದಂತೆ ಯೋಜನೆಗಳನ್ನು ಕಾರ್ಯಗತಗೊಳಿಸುವಾಗ ಹವಾಮಾನ ಬದಲಾವಣೆಯನ್ನು ಎದುರಿಸಲು ನಗರಗಳಿಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ಒದಗಿಸುವುದು ಸಿಎಸ್‌ಸಿಎಎಫ್‌ನ ಉದ್ದೇಶವಾಗಿದೆ. ಕಳೆದ ಒಂದು ದಶಕದಲ್ಲಿ, ಚಂಡಮಾರುತ, ಪ್ರವಾಹ, ನೀರಿನ ಕೊರತೆ ಮತ್ತು ಬರಗಾಲದಂತಹ ಪರಿಸ್ಥಿತಿಗಳು ನಮ್ಮ ಅನೇಕ ನಗರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿವೆ. ಇಂತಹ ವೈಪರೀತ್ಯಗಳು ಮತ್ತು ಅಪಾಯಗಳು ಪ್ರಾಣಹಾನಿಗೆ ಕಾರಣವಾಗುತ್ತವೆ ಮತ್ತು ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಇಂತಹ ಸನ್ನಿವೇಶದಲ್ಲಿ, ಸಿಎಸ್‌ಸಿಎಎಫ್‌ ಉಪಕ್ರಮವು ಭಾರತದಲ್ಲಿ ನಗರ ಯೋಜನೆ ಮತ್ತು ಅಭಿವೃದ್ಧಿಗೆ ಹವಾಮಾನ ಸ್ನೇಹಿ ವಿಧಾನವನ್ನು ಅನುಸರಿಸಲು ಉದ್ದೇಶಿಸಿದೆ.

ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಮತ್ತು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳು (ನಗರಾಭಿವೃದ್ಧಿ), ಸ್ಮಾರ್ಟ್ ಸಿಟೀಸ್ ಮಿಷನ್‌ನ ರಾಜ್ಯ ಮಿಷನ್ ನಿರ್ದೇಶಕರು, ಪುರಸಭೆ ಆಯುಕ್ತರು / ಸ್ಮಾರ್ಟ್ ನಗರಗಳ ಸಿಇಒಗಳು, ಪಾಲುದಾರ ಏಜೆನ್ಸಿಗಳು / ದ್ವಿಪಕ್ಷೀಯ / ಬಹುಪಕ್ಷೀಯ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಇತರ ಪ್ರಮುಖ ಪಾಲುದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಗತ್ತಿನಾದ್ಯಂತ ಅಸ್ತಿತ್ವದಲ್ಲಿರುವ ಚೌಕಟ್ಟುಗಳು ಮತ್ತು ಮೌಲ್ಯಮಾಪನ ವಿಧಾನಗಳ ಪರಿಶೀಲನೆ ಮತ್ತು 26 ಕ್ಕೂ ಹೆಚ್ಚು ಸಂಸ್ಥೆಗಳು ಹಾಗೂ ವಿವಿಧ ಕ್ಷೇತ್ರಗಳ 60 ವಿಷಯ ತಜ್ಞರೊಂದಿಗೆ ವ್ಯಾಪಕವಾದ ಸಮಾಲೋಚನೆ ಪ್ರಕ್ರಿಯೆಯ ನಂತರ ಈ ಮೌಲ್ಯಮಾಪನ ಚೌಕಟ್ಟನ್ನು ಅಭಿವೃದ್ಧಿಪಡಿಸಲಾಗಿದೆ. ಚೌಕಟ್ಟಿನಲ್ಲಿ (i) ಇಂಧನ ಮತ್ತು ಪರಿಸರ ಸ್ನೇಹಿ ಕಟ್ಟಡಗಳು, (ii) ನಗರ ಯೋಜನೆ, ಹಸಿರು ವ್ಯಾಪ್ತಿ ಮತ್ತು ಜೀವವೈವಿಧ್ಯ, (iii) ಸಂಚಾರ ಮತ್ತು ವಾಯು ಗುಣಮಟ್ಟ, (iv) ನೀರು ನಿರ್ವಹಣೆ ಮತ್ತು (v) ತ್ಯಾಜ್ಯ ನಿರ್ವಹಣೆ ಎಂಬ ಐದು ವಿಭಾಗಗಳಲ್ಲಿ 28 ಸೂಚಕಗಳಿವೆ. ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ (ಎನ್‌ಐಯುಎ) ಅಡಿಯಲ್ಲಿರುವ ನಗರಗಳ ಹವಾಮಾನ ಕೇಂದ್ರವು ಸಿಎಸ್‌ಸಿಎಎಫ್ ಅನುಷ್ಠಾನದಲ್ಲಿ ಸಚಿವಾಲಯಕ್ಕೆ ನೆರವು ನೀಡುತ್ತಿದೆ.

ಲಾಕ್‌ಡೌನ್‌ ತೆರವುಗೊಳಿಸುತ್ತಿದ್ದಂತೆ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಸುರಕ್ಷಿತ, ಕೈಗೆಟುಕುವ ಮತ್ತು ಸಾರಿಗೆ ವಿಧಾನಗಳನ್ನು ಒದಗಿಸುವಲ್ಲಿ ನಗರಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಸಾರ್ವಜನಿಕ ಸಾರಿಗೆಯ ಸೀಮಿತ ಆಯ್ಕೆಗಳು, ವಿಶೇಷವಾಗಿ ಮಾರುಕಟ್ಟೆ ಸ್ಥಳಗಳಲ್ಲಿ ಕಿರಿದಾದ, ಕಿಕ್ಕಿರಿದ ಕಾಲುದಾರಿಗಳು ಮತ್ತು ಮಾನಸಿಕ ಆರೋಗ್ಯದ ಕ್ಷೀಣಿಸುವಿಕೆ  ಇವುಗಳು ಆದ್ಯತೆಯ ಮೇಲೆ ಗಮನಹರಿಸಬೇಕಾದ ಪ್ರಮುಖ ವಿಷಯಗಳಾಗಿವೆ. ಸಾರ್ವಜನಿಕ ಸ್ಥಳಗಳನ್ನು ಸೃಷ್ಟಿಸುವುದು ಮತ್ತು ಪಾದಚಾರಿ ಸ್ನೇಹಿ ಮಾರ್ಗಗಳ ಸೃಷ್ಟಿಯು ಈ ಸಮಸ್ಯೆಗಳನ್ನು ತಗ್ಗಿಸುವ ನಿರ್ಣಾಯಕ ಹಂತವಾಗಿದೆ. ಕೋವಿಡ್-19 ಸಮಯದಲ್ಲಿ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಬೊಗೋಟಾ, ಬರ್ಲಿನ್ ಮತ್ತು ಮಿಲನ್ ನಗರಗಳು ಪಾದಚಾರಿ ಮತ್ತು ಸೈಕ್ಲಿಂಗ್‌ಗಾಗಿ ರಸ್ತೆಗಳನ್ನು ಪರಿವರ್ತಿಸುವ ಮೂಲಕ ಸ್ಪಂದಿಸಿವೆ.

ನಮ್ಮ ನಗರಗಳನ್ನು ನಡೆದಾಡಲು ಸೂಕ್ತವಾದ ಮತ್ತು ಪಾದಚಾರಿ ಸ್ನೇಹಿಯನ್ನಾಗಿ ಮಾಡುವ ಅಗತ್ಯವನ್ನು ಮನಗಂಡು ಸ್ಟ್ರೀಟ್ಸ್ ಫಾರ್ ಪೀಪಲ್ ಚಾಲೆಂಜ್ -ಜನರಿಗಾಗಿ ಬೀದಿಗಳು ಸವಾಲು- ರೂಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಪಾದಚಾರಿ ಸ್ನೇಹಿ ಮಾರುಕಟ್ಟೆ ಸ್ಥಳಗಳ ಸಮಗ್ರ ಯೋಜನೆಗಾಗಿ ಸಚಿವಾಲಯ ಹೊರಡಿಸಿದ ಮಾರ್ಗಸೂಚಿಗಳ ಆಧಾರದಲ್ಲಿ ಇದನ್ನು ರೂಪಿಸಲಾಗಿದೆ. ಪಾಲುದಾರರು ಮತ್ತು ನಾಗರಿಕರೊಂದಿಗೆ ಸಮಾಲೋಚಿಸಿ ಜನರಿಗೆ ಬೀದಿಗಳ ಏಕೀಕೃತ ಗೋಚರತೆಯನ್ನು ರೂಪಿಸಲು ಚಾಲೆಂಜ್ ದೇಶದಾದ್ಯಂತ ನಗರಗಳಿಗೆ ನೆರವಾಗುತ್ತದೆ. ಭಾಗವಹಿಸುವ ವಿಧಾನವನ್ನು ಅಳವಡಿಸಿಕೊಂಡು, ತ್ವರಿತ, ನವೀನ ಮತ್ತು ಕಡಿಮೆ-ವೆಚ್ಚದ ಪರಿಹಾರಗಳಿಗಾಗಿ ವೃತ್ತಿಪರರಿಂದ ನವೀನ ಆಲೋಚನೆಗಳನ್ನು ಪಡೆಯಲು ನಗರಗಳು ತಮ್ಮದೇ ಆದ ವಿನ್ಯಾಸ ಸ್ಪರ್ಧೆಗಳನ್ನು ಪ್ರಾರಂಭಿಸಲು ಮಾರ್ಗದರ್ಶನ ನೀಡುತ್ತವೆ.

ತ್ವರಿತ, ನವೀನ ಮತ್ತು ಕಡಿಮೆ-ವೆಚ್ಚದ ಕ್ರಮಗಳ ಮೂಲಕ ಪಾದಚಾರಿ ಸ್ನೇಹಿ ಬೀದಿಗಳನ್ನು ರೂಪಿಸಲು ನಗರಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಇದು ಹೊಂದಿದೆ. ಸವಾಲಿನಲ್ಲಿ ಭಾಗವಹಿಸುವ ಎಲ್ಲಾ ನಗರಗಳು ಪ್ರಮುಖ ಮತ್ತು ನೆರೆಹೊರೆಯ ಪಾದಚಾರಿ ಉಪಕ್ರಮಗಳನ್ನು ಪ್ರಾರಂಭಿಸಲು ‘ಟೆಸ್ಟ್-ಲರ್ನ್-ಸ್ಕೇಲ್’ವಿಧಾನವನ್ನು ಬಳಸಲು ಪ್ರೋತ್ಸಾಹಿಸಲಾಗುವುದು. ಈ ಉಪಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಓಡಾಡುವ ಪ್ರದೇಶಗಳಲ್ಲಿ ಪಾದಚಾರಿ-ಸ್ನೇಹಿ ಬೀದಿಗಳನ್ನು ರಚಿಸುವುದು, ಫ್ಲೈಓವರ್ ಕೆಳಗಿನ ಸ್ಥಳಗಳನ್ನು ಮರು ವಿನ್ಯಾಸಗೊಳಿಸುವುದು, ನಿಷ್ಕ್ರಿಯವಾಗಿರುವ ನೆರೆಹೊರೆಯ ಸ್ಥಳಗಳನ್ನು ಪುನಶ್ಚೇತನಗೊಳಿಸುವುದು ಮತ್ತು ಉದ್ಯಾನವನಗಳು ಮತ್ತು ಸಾಂಸ್ಥಿಕ ಪ್ರದೇಶಗಳ ಮೂಲಕ ವಾಕಿಂಗ್ ಲಿಂಕ್‌ಗಳನ್ನು ರಚಿಸುವುದು ಒಳಗೊಂಡಿರಬಹುದು.

ಈ ಸವಾಲು ಸ್ಪರ್ಧೆಗೆ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ಅಧೀನದಲ್ಲಿರುವ ಫಿಟ್ ಇಂಡಿಯಾ ಮಿಷನ್, ಸಾರಿಗೆ ಅಭಿವೃದ್ಧಿ ಮತ್ತು ನೀತಿ ಸಂಸ್ಥೆಯ (ಐಟಿಡಿಪಿ) ಭಾರತ ಕಾರ್ಯಕ್ರಮಗಳು ಸ್ಮಾರ್ಟ್ ಸಿಟೀಸ್ ಮಿಷನ್‌ನೊಂದಿಗೆ ಸಹಭಾಗಿತ್ವ ನೀಡಿವೆ.

Click here to see PDF on Climate Smart Cities

Click here to see PDF on Streets for People

ಹೆಚ್ಚಿನ ಮಾಹಿತಿಗಾಗಿ ಜಾಲತಾಣಗಳಿಗೆ ಭೇಟಿ ನೀಡಿ:

https://smartnet.niua.org/csc/

https://smartnet.niua.org/indiastreetchallenge/

***



(Release ID: 1653388) Visitor Counter : 342