ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

ರಸ್ತೆ ಸುರಕ್ಷತೆ ಕುರಿತ ವೆಬಿನಾರ್ ಉದ್ದೇಶಿಸಿ ಸಚಿವರ ಭಾಷಣ


ರಸ್ತೆ ಅಪಘಾತದ ಮರಣ 2030 ರ ವೇಳೆಗೆ 1.5 ಲಕ್ಷದಿಂದ ಅರ್ಧಕ್ಕೆ ಇಳಿಸುವ ಗುರಿಯನ್ನು 2025 ರ ವೇಳೆಗೆ ಸಾಧಿಸುವ ವಿಶ್ವಾಸವಿದೆ:  ಶ್ರೀ ನಿತಿನ್ ಗಡ್ಕರಿ

ರಸ್ತೆಗಳ ಅಡೆತಡೆಗಳನ್ನು ತೆಗೆದುಹಾಕಲು ಜಿಲ್ಲಾ ಸಮಿತಿಗಳಿಗೆ ಮಾರ್ಗದರ್ಶನ ನೀಡಲು ಸಂಸದರಿಗೆ ಕರೆ

ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಷ್ಠಾನಗೊಳಿಸಲು ಸಲಹೆಗಳಿಗೆ ಆಹ್ವಾನ

ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಪುರಸಭೆ, ಪ್ರಾಂತೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೀತಿ ಮತ್ತು ಟೆಂಡರಿಂಗ್ ಮಾದರಿಗಳನ್ನು ರೂಪಿಸಲು ನಿರ್ದೇಶನಗಳನ್ನು ಪ್ರಕಟಿಸಲಾಗುವುದು: ಶ್ರೀ ಗಡ್ಕರಿ

Posted On: 08 SEP 2020 3:56PM by PIB Bengaluru

ರಸ್ತೆ ಅಪಘಾತಗಳ ಮರಣ ವಾರ್ಷಿಕ 1.5 ಲಕ್ಷದಿಂದ ಅರ್ಧಕ್ಕೆ ಇಳಿಸುವ 2030 ಗುರಿಯನ್ನು 2025 ವೇಳೆಗೆ ಸಾಧಿಸುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಸ್ತೆ ಸುರಕ್ಷತೆ ಕುರಿತ ವೆಬಿನಾರ್ನಲ್ಲಿ ಮಾತನಾಡಿದ ಸಚಿವರು, ಎಲ್ಲಾ ಪಾಲುದಾರರ ವಿಶೇಷವಾಗಿ ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಗುರಿಯನ್ನು ಸಾಧಿಸಲು ನಾವು ತ್ವರಿತ ಗತಿಯಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ದೇಶದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆ ಸೇರಿದಂತೆ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ತಮ್ಮ ಸಚಿವಾಲಯ ಸಾಕಷ್ಟು ಉಪಕ್ರಮಗಳನ್ನು ಕೈಗೊಂಡಿದೆ ಎಂದು ಶ್ರೀ ಗಡ್ಕರಿ ಹೇಳಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದ ವಿಶ್ವಬ್ಯಾಂಕ್ ಮತ್ತು ಏಷ್ಯಾ ಅಭಿವೃದ್ಧಿ ಬ್ಯಾಂಕ್ ತಲಾ 7000 ಕೋಟಿ ರೂ. ಒದಗಿಸಿವೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಾವು ಈಗಾಗಲೇ ಅಂತಹ ಅಡೆತಡೆಗಳನ್ನು ಗುರುತಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ರಸ್ತೆಗಳ ಅಡೆತಡೆಗಳನ್ನು ತೆಗೆದುಹಾಕಲು ಭಾರತ ಈಗಾಗಲೇ 20,000 ಕೋಟಿ ರೂ. ವೆಚ್ಚ ಮಾಡಿದೆ. ನಿಟ್ಟಿನಲ್ಲಿ ಇರುವ ತುರ್ತಿನ ಬಗ್ಗೆ ಮಾತನಾಡಿದ ಶ್ರೀಗಡ್ಕರಿ, ವಾರ್ಷಿಕವಾಗಿ ಸುಮಾರು 1.5 ಲಕ್ಷ ರಸ್ತೆ ಅಪಘಾತ ಸಾವುಗಳಲ್ಲಿ, ಸುಮಾರು 53,000 ಹೆದ್ದಾರಿಗಳಲ್ಲಿ ಸಂಭವಿಸುತ್ತಿದೆ ಎಂದರು. ವಿಶ್ವ ಬ್ಯಾಂಕಿನ ನೆರವಿನೊಂದಿಗೆ ಯೋಜನೆಯನ್ನು ಜಾರಿಗೆ ತರುವ ಮೂಲಕ ತಮಿಳುನಾಡು ಅಪಘಾತಗಳ ಸಾವುನೋವುಗಳನ್ನು ಶೇ.25 ರಷ್ಟು ಕಡಿಮೆ ಮಾಡಿದೆ ಎಂದು ಶ್ರೀ ಗಡ್ಕರಿ ಹೇಳಿದರು.

ವಿವಿಧ ಪಾಲುದಾರರ ಪ್ರಮುಖ ಪಾತ್ರದ ಬಗ್ಗೆ ಮಾತನಾಡಿದ ಅವರು, ನಮಗೆ ವಿಶೇಷವಾಗಿ ವಿಶ್ವವಿದ್ಯಾಲಯಗಳು, ಶಿಕ್ಷಣ ಸಂಸ್ಥೆಗಳು, ಎನ್ಜಿಒಗಳು, ರಾಜ್ಯ ಸರ್ಕಾರಗಳ ಸಹಕಾರದ ಅಗತ್ಯವಿದೆ ಎಂದು ಹೇಳಿದರು. ಅಪಘಾತಗಳನ್ನು ಕಡಿಮೆ ಮಾಡುವಲ್ಲಿ ಇವುಗಳಿಗಾಗಿ ಸರ್ಕಾರವು ಒಂದು ದೊಡ್ಡ ಪಾತ್ರವನ್ನು ರೂಪಿಸಿದೆ ಎಂದು ಸಚಿವರು ಹೇಳಿದರು.

ಜಿಲ್ಲಾ ರಸ್ತೆ ಸಮಿತಿಗಳ ಅಧ್ಯಕ್ಷರಾಗಿರುವ ಸಂಸತ್ ಸದಸ್ಯರು ರಸ್ತೆಗಳ ಅಡೆತಡೆಗಳನ್ನು ಗುರುತಿಸಬೇಕು ಮತ್ತು ಅವುಗಳಿಗೆ ಪರಿಹಾರ ಒದಗಿಸಬೇಕು ಎಂದು ಶ್ರೀ ಗಡ್ಕರಿ ಕರೆ ನೀಡಿದರು. ರಾಜ್ಯ ಮತ್ತು ಮುನ್ಸಿಪಲ್ ರಸ್ತೆಗಳಲ್ಲಿ ಅಡೆತಡೆಗಳನ್ನು ಗುರುತಿಸುವ ಅವಶ್ಯಕತೆಯಿದೆ ಎಂದ ಅವರು, ಅಲ್ಲಿ ಸಾರ್ವಜನಿಕರು, ರಾಜ್ಯ ಸರ್ಕಾರಗಳು, ಶಾಸಕರು, ಸಂಸದರು ಮುಂತಾದವರ ಸಹಕಾರವು ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದರು.

ಸಾಮಾಜಿಕ ಜಾಗೃತಿ ಮತ್ತು ಶಿಕ್ಷಣ, ತುರ್ತು ಸೇವೆಗಳನ್ನು ಸುಧಾರಿಸುವುದು, ವೈದ್ಯಕೀಯ ಸೌಲಭ್ಯಗಳ ಹೆಚ್ಚಳ ಮುಂತಾದವುಗಳ ಬಗ್ಗೆ ಸಾರ್ವಜನಿಕ ಆಂದೋಲನಕ್ಕೆ ಶ್ರೀ ಗಡ್ಕರಿ ಕರೆ ನೀಡಿದರು. ರಸ್ತೆ ಸುರಕ್ಷತೆಯ ಗುರಿಗಳನ್ನು ಸಾಧಿಸಲು ವಾಹನ ಉದ್ಯಮದ ಸಹಕಾರವನ್ನೂ ಅವರು ಕೋರಿದರು. ಭಾರತದ ಸಾರಿಗೆ ಕ್ಷೇತ್ರದ ಎಲ್ಲಾ ಅಂಶಗಳ ಬಗ್ಗೆ ಸಮಗ್ರ ಕಾಯ್ದೆಯಾದ 2019 ಎಂವಿ ಕಾಯ್ದೆಯನ್ನು ಅವರು ಉಲ್ಲೇಖಿಸಿದರು,

ಕೋವಿಡ್ ಸಾಂಕ್ರಾಮಿಕದಿಂದ ಉಂಟಾಗಿರುವ ಒತ್ತಡದ ಬಗ್ಗೆ ಮಾತನಾಡಿದ ಸಚಿವರು, ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮೂಲಕ ದೇಶದಲ್ಲಿ ರಸ್ತೆ ಸಾರಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದರು. ಪಿಪಿಪಿ ಮೋಡ್ ಮೂಲಕ ಪುರಸಭೆ, ಪ್ರಾಂತೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೀತಿ ಮತ್ತು ಟೆಂಡರಿಂಗ್ ಮಾದರಿಗಳನ್ನು ರೂಪಿಸಲು ನಿರ್ದೇಶನಗಳನ್ನು ನೀಡುತ್ತಿದ್ದೇನೆ ಎಂದು ಹೇಳಿದರು. ಉದ್ದೇಶಕ್ಕಾಗಿ ಅವರು ಎಲ್ಲಾ ಪಾಲುದಾರರಿಂದ ಸಲಹೆಗಳನ್ನು ಆಹ್ವಾನಿಸಿದರು, ಇದರಿಂದಾಗಿ ದೇಶವು ಜಾಗತಿಕ ಅತ್ಯುತ್ತಮ ಅಭ್ಯಾಸಗಳನ್ನು ಅನುಸರಿಸುವ ವ್ಯವಸ್ಥೆಯನ್ನು ಜಾರಿಗೆ ತರಬಹುದು ಎಂದು ಶ್ರೀ ಗಡ್ಕರಿ ತಿಳಿಸಿದರು.

***



(Release ID: 1652349) Visitor Counter : 152