ಚುನಾವಣಾ ಆಯೋಗ

ನೂತನ ಚುನಾವಣಾ ಆಯುಕ್ತರಾಗಿ ಶ್ರೀ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

Posted On: 01 SEP 2020 12:40PM by PIB Bengaluru

ಭಾರತದ ನೂತನ ಚುನಾವಣಾ ಆಯುಕ್ತರಾಗಿ (ಇಸಿ) ಶ್ರೀ ರಾಜೀವ್ ಕುಮಾರ್ ಅವರಿಂದು ಅಧಿಕಾರ ವಹಿಸಿಕೊಂಡರು. ಶ್ರೀ ಕುಮಾರ್ ಅವರು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಮತ್ತು ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಅವರೊಂದಿಗೆ ಸೇರ್ಪಡೆಗೊಂಡರು.

1960ರ ಫೆಬ್ರವರಿ 19ರಂದು ಜನಿಸಿದ ರಾಜೀವ್ ಕುಮಾರ್ 1984ರ ತಂಡದ ಭಾರತೀಯ ಆಡಳಿತ ಸೇವೆಯ ಅಧಿಕಾರಿಯಾಗಿದ್ದಾರೆ. ತಮ್ಮ 36 ವರ್ಷಗಳ ಸುದೀರ್ಘ ಭಾರತೀಯ ಆಡಳಿತ ಸೇವೆಯಲ್ಲಿ ಅವರು ಕೇಂದ್ರ ಮತ್ತು ಬಿಹಾರ/ಜಾರ್ಖಂಡ್ ಕೇಡರ್ ನಲ್ಲಿ ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದ್ದರು.

ಬಿಎಸ್ಸಿ, ಎಲ್.ಎಲ್.ಬಿ, ಪಿಜಿಡಿಎಂ ಮತ್ತು ಸಾರ್ವಜನಿಕ ನೀತಿಯಲ್ಲಿ ಎಂ.ಎ. ಪದವಿ ಪಡೆದಿರುವ ಶ್ರೀ ಕುಮಾರ್ ಅವರಿಗೆ ಸಾಮಾಜಿಕ ವಲಯ, ಪರಿಸರ ಮತ್ತು ಅರಣ್ಯ, ಮಾನವ ಸಂಪನ್ಮೂಲ, ಹಣಕಾಸು ಮತ್ತು ಬ್ಯಾಂಕಿಂಗ್ ವಲಯದಲ್ಲಿ ವ್ಯಾಪಕ ಕಾರ್ಯಾನುಭವವಿದೆ.

ಹೆಚ್ಚಿನ ಪಾರದರ್ಶಕತೆ, ನಾಗರಿಕರಿಗೆ ನೇರವಾಗಿ ಸೇವೆಗಳನ್ನು ತಲುಪಿಸಲು, ಮಧ್ಯವರ್ತಿಗಳನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಸ್ತಿತ್ವದಲ್ಲಿರುವ ನೀತಿ ಆಡಳಿತದಲ್ಲಿ ತಿದ್ದುಪಡಿ ತರಲು ಅವರು ತಂತ್ರಜ್ಞಾನದ ಅನ್ವಯಿಕೆಗಳ ಬಳಕೆಗೆ ತೀವ್ರ ಬದ್ಧತೆಯನ್ನು ಹೊಂದಿದ್ದಾರೆ.

2020ರ ಫೆಬ್ರವರಿಯಲ್ಲಿ ಅವರು ಭಾರತ ಸರ್ಕಾರದ ಹಣಕಾಸು ಕಾರ್ಯದರ್ಶಿಯಾಗಿ ನಿವೃತ್ತರಾಗಿದ್ದರು. ನಂತರ ಅವರು ಸಾರ್ವಜನಿಕ ಉದ್ದಿಮೆಗಳ ಆಯ್ಕೆ ಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡು, 2020ರ ಏಪ್ರಿಲ್ ನಿಂದ ಹುದ್ದೆ ಬಿಡುವ ತನಕ 2020ರ ಆಗಸ್ಟ್ 31ರವರೆಗೆ ಆ ಹುದ್ದೆಯಲ್ಲಿದ್ದರು. ಶ್ರೀ ಕುಮಾರ್ 2015-17ರ ಅವಧಿಯಲ್ಲಿ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯಲ್ಲಿ ಎಸ್ಟಾಬ್ಲಿಷ್ಮೆಂಟ್ ಅಧಿಕಾರಿಯಾಗಿದ್ದರು, ಅದಕ್ಕೂ ಮೊದಲು ವೆಚ್ಚ ಇಲಾಖೆಯಲ್ಲಿ ಜಂಟಿ ಕಾರ್ಯದರ್ಶಿಯಾಗಿದ್ದರು. ಈ ಹಿಂದೆ ಅವರು ಬುಡಕಟ್ಟು ವ್ಯವಹಾರಗಳ ಸಚಿವಾಲಯ, ಪರಿಸರ ಮತ್ತು ಅರಣ್ಯ ಸಚಿವಾಲಯ ಮತ್ತು ರಾಜ್ಯ ಕೇಡರ್ ನಲ್ಲಿ ಶಿಕ್ಷಣ ಇಲಾಖೆಯಲ್ಲಿಯೂ ಸೇವೆ ಸಲ್ಲಿಸಿದ್ದರು.

ಶ್ರೀ ರಾಜೀವ್ ಕುಮಾರ್ ಅವರು ಭಾರತೀಯ ಶಾಸ್ತ್ರೀಯ ಮತ್ತು ಭಕ್ತಿ ಸಂಗೀತದಲ್ಲಿ ತೀವ್ರ ಆಸಕ್ತಿ ಹೊಂದಿದ್ದು, ಚಾರಣಿಗರೂ ಆಗಿದ್ದಾರೆ.

 

https://static.pib.gov.in/WriteReadData/userfiles/image/image00113NS.jpg

ಭಾರತದ ನೂತನ ಚುನಾವಣಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಶ್ರೀ ರಾಜೀವ್ ಕುಮಾರ್

***



(Release ID: 1650511) Visitor Counter : 329