ಪ್ರಧಾನ ಮಂತ್ರಿಯವರ ಕಛೇರಿ
ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಸಭೆ
ಮುನ್ಸೂಚನೆ ಮತ್ತು ಎಚ್ಚರಿಕೆ ವ್ಯವಸ್ಥೆಯನ್ನು ಸುಧಾರಿಸಲು ನವೀನ ತಂತ್ರಜ್ಞಾನಗಳ ವ್ಯಾಪಕ ಬಳಕೆಗೆ ಪ್ರಧಾನಿ ಕರೆ
ಸ್ಥಳೀಯ ಮುನ್ನೆಚ್ಚರಿಕೆ ವ್ಯವಸ್ಥೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು: ಪ್ರಧಾನಿ
ಪ್ರವಾಹ ಪರಿಸ್ಥಿತಿ ಮತ್ತು ಪರಿಹಾರ ಪ್ರಯತ್ನಗಳ ಬಗ್ಗೆ ಮುಖ್ಯಮಂತ್ರಿಗಳಿಂದ ಮಾಹಿತಿ; ಸಮಯೋಚಿತ ನಿಯೋಜನೆ ಮತ್ತು ಜನರನ್ನು ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್ ಸೇರಿದಂತೆ ಕೇಂದ್ರ ಸಂಸ್ಥೆಗಳ ಪ್ರಯತ್ನಗಳಿಗೆ ಅಭಿನಂದನೆ
Posted On:
10 AUG 2020 3:10PM by PIB Bengaluru
ನೈರುತ್ಯ ಮುಂಗಾರು ಮತ್ತು ದೇಶದ ಪ್ರವಾಹ ಪರಿಸ್ಥಿತಿ ಹಾಗೂ ಅದನ್ನು ಎದುರಿಸಲು ನಡೆದಿರುವ ಸನ್ನದ್ಧತೆಯನ್ನು ಪರಿಶೀಲಿಸಲು ಪ್ರಧಾನಿ ಶ್ರೀ ನರೇಂದ್ರ ಅವರು ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳಗಳ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ರಕ್ಷಣಾ ಸಚಿವರು, ಆರೋಗ್ಯ ಸಚಿವರು, ಗೃಹ ವ್ಯವಹಾರಗಳ ರಾಜ್ಯ ಸಚಿವರು ಮತ್ತು ಸಂಬಂಧಪಟ್ಟ ಕೇಂದ್ರ ಸಚಿವಾಲಯಗಳು ಮತ್ತು ಸಂಸ್ಥೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರವಾಹದ ಮುನ್ಸೂಚನೆಗಾಗಿ ಶಾಶ್ವತ ವ್ಯವಸ್ಥೆಯನ್ನು ಹೊಂದಬೇಕು, ಎಲ್ಲಾ ಮುನ್ಸೂಚನೆ ಮತ್ತು ಎಚ್ಚರಿಕೆ ವ್ಯವಸ್ಥೆಯನ್ನು ಸುಧಾರಿಸಲು ನವೀನ ತಂತ್ರಜ್ಞಾನಗಳ ವ್ಯಾಪಕ ಬಳಕೆ ಮಾಡಿಕೊಳ್ಳಬೇಕು ಹಾಗೂ ಎಲ್ಲಾ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ನಡುವೆ ಉತ್ತಮ ಸಮನ್ವಯ ಸಾಧಿಸಬೇಕು ಎಂದು ಈ ಸಂದರ್ಭದಲ್ಲಿ ಪ್ರಧಾನಿ ಒತ್ತಿ ಹೇಳಿದರು.
ಕಳೆದ ಕೆಲವು ವರ್ಷಗಳಿಂದ, ಮುನ್ಸೂಚನೆ ನೀಡುವ ಸಂಸ್ಥೆಗಳಾದ ಭಾರತ ಹವಾಮಾನ ಇಲಾಖೆ ಮತ್ತು ಕೇಂದ್ರ ಜಲ ಆಯೋಗವು ಉತ್ತಮ ಮತ್ತು ಹೆಚ್ಚು ಬಳಸಬಹುದಾದ ಪ್ರವಾಹ ಮುನ್ಸೂಚನೆಗಳನ್ನು ನೀಡಲು ಸಮಗ್ರ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪ್ರಧಾನಿ ಹೇಳಿದರು. ಈ ಸಂಸ್ಥೆಗಳು ಮಳೆ ಮತ್ತು ನದಿ ಮಟ್ಟದ ಮುನ್ಸೂಚನೆ ಮಾತ್ರವಲ್ಲದೆ ಪ್ರವಾಹದ ಸ್ಥಳ ಕುರಿತು ನಿರ್ದಿಷ್ಟ ಮುನ್ಸೂಚನೆಯನ್ನು ಸಹ ನೀಡಲು ಪ್ರಯತ್ನಿಸುತ್ತಿವೆ. ಪ್ರವಾಹ ಸ್ಥಳಗಳ ನಿರ್ದಿಷ್ಟ ಮುನ್ಸೂಚನೆಯನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆಯಂತಹ ನವೀನ ತಂತ್ರಜ್ಞಾನಗಳನ್ನು ಬಳಸಲು ಪ್ರಾಯೋಗಿಕ ಪ್ರಯತ್ನಗಳು ನಡೆಯುತ್ತಿವೆ, ಇದಕ್ಕಾಗಿ ರಾಜ್ಯಗಳು ಈ ಸಂಸ್ಥೆಗಳಿಗೆ ಅಗತ್ಯ ಮಾಹಿತಿಯನ್ನು ಒದಗಿಸಬೇಕು ಮತ್ತು ಸ್ಥಳೀಯ ಸಮುದಾಯಗಳಿಗೆ ಎಚ್ಚರಿಕೆಗಳನ್ನು ಸಮಯೋಚಿತವಾಗಿ ಪ್ರಸಾರ ಮಾಡಬೇಕು ಎಂದು ಅವರು ಹೇಳಿದರು.
ಸ್ಥಳೀಯ ಮುನ್ನೆಚ್ಚಚ್ಚರಿಕೆ ವ್ಯವಸ್ಥೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು, ಇದರಿಂದಾಗಿ ನದಿಯ ಅಪಾಯದಮಟ್ಟದ ಏರಿಕೆ, ಪ್ರವಾಹ ಮಟ್ಟ, ಸಿಡಿಲು ಮುಂತಾದ ಯಾವುದೇ ಬೆದರಿಕೆ ಪರಿಸ್ಥಿತಿಯ ಸಂದರ್ಭದಲ್ಲಿ ನಿರ್ದಿಷ್ಟ ಪ್ರದೇಶದ ಜನರಿಗೆ ಸಮಯೋಚಿತ ಎಚ್ಚರಿಕೆ ನೀಡಬಹುದು ಎಂದರು.
ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಪರಿಹಾರ ಪ್ರಯತ್ನಗಳನ್ನು ಕೈಗೊಳ್ಳುವಾಗ, ಜನರು ಮುಖಗವಸು ಧರಿಸುವುದು, ಕೈ ಸ್ವಚ್ಛಗೊಳಿಸುವುದು ಮತ್ತು ಸಾಕಷ್ಟು ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದೂ ಸೇರಿದಂತೆ ಎಲ್ಲಾ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಅನುಸರಿಸುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಪ್ರಧಾನಿ ಒತ್ತಿ ಹೇಳಿದರು ರಾಜ್ಯಗಳು ಖಾತ್ರಿಪಡಿಸಿಕೊಳ್ಳಬೇಕು. ಸಂತ್ರಸ್ತತಿಗೆ ಒದಗಿಸುವ ಪರಿಹಾರ ಸಾಮಗ್ರಿಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್, ಮುಖಗವಸುಗಳನ್ನು ಕಡ್ಡಾಯವಾಗಿ ಸೇರಿಸಬೇಕು. ಈ ನಿಟ್ಟಿನಲ್ಲಿ, ವೃದ್ಧರು, ಗರ್ಭಿಣಿಯರು ಮತ್ತು ಸಹ-ಅಸ್ವಸ್ಥತೆಯ ಜನರಿಗೆ ವಿಶೇಷ ಸವಲತ್ತುಗಳನ್ನು ಒದಗಿಸಬೇಕು ಎಂದರು.
ಸ್ಥಳೀಯ ವಿಕೋಪಗಳನ್ನು ತಡೆದುಕೊಳ್ಳಲು ಮತ್ತು ನಷ್ಟವನ್ನು ಕಡಿಮೆ ಮಾಡಲು ಎಲ್ಲಾ ಅಭಿವೃದ್ಧಿ ಮತ್ತು ಮೂಲಸೌಕರ್ಯ ಯೋಜನೆಗಳನ್ನು ಸ್ಥಿತಿಸ್ಥಾಪಕತ್ವದಿಂದ ನಿರ್ಮಾಣವಾಗಿರುವುದನ್ನು ರಾಜ್ಯಗಳು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಅಸ್ಸಾಂ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಕೇರಳದ ಮುಖ್ಯಮಂತ್ರಿಗಳು ಮತ್ತು ಕರ್ನಾಟಕದ ಗೃಹ ಸಚಿವರು ಆಯಾ ರಾಜ್ಯಗಳ ಪ್ರವಾಹ ಪರಿಸ್ಥಿತಿ, ರಕ್ಷಣಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಮಯೋಚಿತ ನಿಯೋಜನೆ ಮತ್ತು ಜನರನ್ನು ರಕ್ಷಿಸುವಲ್ಲಿ ಎನ್‌ಡಿಆರ್‌ಎಫ್ ತಂಡಗಳು ಸೇರಿದಂತೆ ಕೇಂದ್ರ ಸಂಸ್ಥೆಗಳ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಪ್ರವಾಹದ ಪರಿಣಾಮಗಳನ್ನು ತಗ್ಗಿಸಲು ಅಲ್ಪಾವಧಿಯ ಮತ್ತು ದೀರ್ಘಕಾಲೀನ ಕ್ರಮಗಳಿಗೆ ಅವರು ಕೆಲವು ಸಲಹೆಗಳನ್ನು ನೀಡಿದರು.
ರಾಜ್ಯಗಳು ನೀಡಿದ ಸಲಹೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳುವಂತೆ ಪ್ರಧಾನಮಂತ್ರಿಯವರು ಸಂಬಂಧಪಟ್ಟ ಸಚಿವಾಲಯಗಳು ಮತ್ತು ಸಂಸ್ಥೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿಪತ್ತುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತನ್ನ ಬೆಂಬಲವನ್ನು ಮುಂದುವರೆಸುತ್ತದೆ ಎಂದು ಅವರು ಭರವಸೆ ನೀಡಿದರು.
***
(Release ID: 1645322)
Visitor Counter : 261
Read this release in:
Odia
,
English
,
Urdu
,
Hindi
,
Marathi
,
Manipuri
,
Bengali
,
Assamese
,
Punjabi
,
Gujarati
,
Tamil
,
Telugu
,
Malayalam