ಪ್ರಧಾನ ಮಂತ್ರಿಯವರ ಕಛೇರಿ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಸಾಗರತಳದ ಕೇಬಲ್ ಸಂಪರ್ಕ ಉದ್ಘಾಟಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ

ಈ ಸಂಪರ್ಕದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅವಕಾಶಗಳು ಹೆಚ್ಚಳ: ಪ್ರಧಾನಿ ಸುಲಭ ವ್ಯವಹಾರವನ್ನು ಉತ್ತೇಜಿಸುವುದು ಮತ್ತು ಕಡಲ ಸಾಗಣೆಯನ್ನು ಸರಳಗೊಳಿಸುವುದು ಸರ್ಕಾರದ ಆದ್ಯತೆಯಾಗಿದೆ: ಪ್ರಧಾನಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಬಂದರು ಕೇಂದ್ರಿತ ಅಭಿವೃದ್ಧಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿವೆ: ಪ್ರಧಾನಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಅಂತರರಾಷ್ಟ್ರೀಯ ಕಡಲ ವ್ಯಾಪಾರದ ಪ್ರಮುಖ ಬಂದರು ಕೇಂದ್ರವಾಗಲಿವೆ: ಪ್ರಧಾನಿ

Posted On: 10 AUG 2020 12:37PM by PIB Bengaluru

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ದೇಶದ ಮುಖ್ಯ ಭೂ ಪ್ರದೇಶದೊಂದಿಗೆ ಸಂಪರ್ಕಿಸುವ ಸಾಗರತಳದ ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್‌ಸಿ) ಅನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. 2018 ರ ಡಿಸೆಂಬರ್ 30 ರಂದು ಪೋರ್ಟ್ ಬ್ಲೇರ್‌ನಲ್ಲಿ ಪ್ರಧಾನಿಯವರು ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದರು.

ಈ ಸಂಪರ್ಕವು ಈಗ ದ್ವೀಪಗಳಲ್ಲಿ ಅಪರಿಮಿತ ಅವಕಾಶಗಳನ್ನು ಒದಗಿಸುತ್ತದೆ ಎಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಹೇಳಿದರು. 2300 ಕಿಲೋಮೀಟರ್ ದೂರ ಸಾಗರತಳದಲ್ಲಿ ಕೇಬಲ್ ಹಾಕುವುದು ಮತ್ತು ಈ ಗುರಿಯನ್ನು ನಿಗದಿತ ಅವಧಿಗಿಂತ ಮೊದಲೇ ಸಾಧಿಸಿರುವುದು ಪ್ರಶಂಸನೀಯವಾದುದು ಎಂದು ಅವರು ಹೇಳಿದರು.

ಈ ಸೇವೆಯು ಚೆನ್ನೈನಿಂದ ಪೋರ್ಟ್ ಬ್ಲೇರ್, ಪೋರ್ಟ್ ಬ್ಲೇರ್ ನಿಂದ ಲಿಟಲ್ ಅಂಡಮಾನ್ ಮತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ ಇಂದಿನಿಂದಲೇ ಪ್ರಾರಂಭವಾಗಿದೆ ಎಂದು ಪ್ರಧಾನಿ ಹೇಳಿದರು.

ಸಾಗರತಳದಲ್ಲಿ ಸುಮಾರು 2300 ಕಿಲೋಮೀಟರ್ ದೂರ ಕೇಬಲ್‌ಗಳನ್ನು ಹಾಕುವುದು, ಆಳ ಸಮುದ್ರದಲ್ಲಿ ಸಮೀಕ್ಷೆ ನಡೆಸುವುದು, ಕೇಬಲ್‌ನ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ವಿಶೇಷ ಹಡಗುಗಳೊಂದಿಗೆ ಕೇಬಲ್ ಹಾಕುವುದು ಸುಲಭದ ಕೆಲಸವಲ್ಲ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯೋಜನೆಯು ಭಾರೀ ಅಲೆ, ಬಿರುಗಾಳಿ, ಮುಂಗಾರು ಹಾಗೂ ಕೊರೊನಾ  ಸಾಂಕ್ರಾಮಿಕದ ಕಾರಣದಿಂದಾಗಿ ಕಠಿಣ ಸವಾಲುಗಳನ್ನು ಎದುರಿಸಬೇಕಾಯಿತು ಎಂದು ಅವರು ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಹಲವು ವರ್ಷಗಳಿಂದ ಇದರ ಅಗತ್ಯವಿತ್ತು.  ಆದರೆ ಅದನ್ನು ಈಡೇರಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಪ್ರಧಾನಿ ಹೇಳಿದರು. ಪ್ರಮುಖ ಸವಾಲುಗಳ ನಡುವೆಯೂ ಯೋಜನೆಯನ್ನು ಕಾರ್ಯಗತಗಳಿಸಿದ್ದಕ್ಕಾಗಿ ಪ್ರಧಾನಿ ಹರ್ಷ ವ್ಯಕ್ತಪಡಿಸಿದರು.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಜನರಿಗೆ ಉತ್ತಮ ಮತ್ತು ಅಗ್ಗದ ಸಂಪರ್ಕವನ್ನು ಒದಗಿಸುವುದು ದೇಶದ ಜವಾಬ್ದಾರಿಯಾಗಿದೆ ಎಂದು ಪ್ರಧಾನಿ ಹೇಳಿದರು. ಯೋಜನೆಯ ಅನುಷ್ಠಾನಕ್ಕಾಗಿ ಶ್ರಮಿಸಿದ ಎಲ್ಲರನ್ನು ಅವರು ಅಭಿನಂದಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ದೆಹಲಿಯಿಂದ ಮತ್ತು ದೇಶದ ಮುಖ್ಯ ಭೂಮಿಯಿಂದ ದೂರದಲ್ಲಿಲ್ಲ ಎಂಬುದನ್ನು ಸಾಬೀತುಪಡಿಸಲು ಸಾಗರತಳದ ಕೇಬಲ್ ಒಂದು ಪ್ರಯತ್ನವಾಗಿದೆ ಎಂದು ಶ್ರೀ ಮೋದಿ ಹೇಳಿದರು.

ಪ್ರತಿಯೊಬ್ಬರಿಗೂ ಸುಲಭ ಜೀವನ

ಪ್ರತಿಯೊಬ್ಬ ನಾಗರಿಕ ಮತ್ತು ಪ್ರತಿಯೊಂದು ವಲಯಕ್ಕೂ ಆಧುನಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ, ಇದರಿಂದ ಉತ್ತಮ ಜೀವನ ಸುಲಭವಾಗಬಹುದು ಎಂದು ಶ್ರೀ ಮೋದಿ ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ಈ ಆಪ್ಟಿಕಲ್ ಫೈಬರ್ ಯೋಜನೆಯು ಸರಕಾರದ ಸುಲಭ ಜೀವನದೆಡೆಗಿನ ಬದ್ಧತೆಗೆ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗಡಿ ಪ್ರದೇಶಗಳು ಮತ್ತು ದ್ವೀಪ ರಾಜ್ಯಗಳ ತ್ವರಿತ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದರು.

ಡಿಜಿಟಲ್ ಇಂಡಿಯಾ ಮೂಲಕ ಅವಕಾಶಗಳ ಹೆಚ್ಚಳ

ಅಗ್ಗವಾದ ಉತ್ತಮ ಸಂಪರ್ಕವನ್ನು ಪಡೆಯಲು ಮತ್ತು ಡಿಜಿಟಲ್ ಇಂಡಿಯಾದ ಎಲ್ಲಾ ಪ್ರಯೋಜನಗಳನ್ನು ಪಡೆಯಲು, ವಿಶೇಷವಾಗಿ ಆನ್‌ಲೈನ್ ಶಿಕ್ಷಣ, ಟೆಲಿ-ಮೆಡಿಸಿನ್, ಬ್ಯಾಂಕಿಂಗ್ ವ್ಯವಸ್ಥೆ, ಆನ್‌ಲೈನ್ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಸಾಗರತಳದ ಕೇಬಲ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ನೆರವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಹಿಂದೂ ಮಹಾಸಾಗರವು ಸಾವಿರಾರು ವರ್ಷಗಳಿಂದ ಭಾರತದ ವ್ಯಾಪಾರ ಮತ್ತು ಕಾರ್ಯತಂತ್ರ ಪರಿಣತಿಯ ಕೇಂದ್ರವಾಗಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಭಾರತದ ಆರ್ಥಿಕ-ಕಾರ್ಯತಂತ್ರ ಸಹಕಾರದ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ಹೇಳಿದರು.

ಇಂಡೋ-ಪೆಸಿಫಿಕ್ ಪ್ರದೇಶದ ಭಾರತದ ಹೊಸ ವ್ಯಾಪಾರ ತಂತ್ರದಡಿಯಲ್ಲಿ ಭಾರತದ ಎಲ್ಲಾ ದ್ವೀಪಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದರು.

ಪೂರ್ವದೆಡೆಗಿನ ಕ್ರಮ (ಆ್ಯಕ್ಟ್-ಈಸ್ಟ್) ನೀತಿಯಡಿಯಲ್ಲಿ, ಪೂರ್ವ ಏಷ್ಯಾದ ದೇಶಗಳು ಮತ್ತು ಸಮುದ್ರಕ್ಕೆ ಸಂಪರ್ಕ ಹೊಂದಿರುವ ಇತರ ದೇಶಗಳೊಂದಿಗಿನ ಭಾರತದ ಗಾಢ ಸಂಬಂಧದಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪಾತ್ರ ತುಂಬಾ ಮಹತ್ವದ್ದಾಗಿದೆ ಮತ್ತು ಅದು ಇನ್ನಷ್ಟು ಹೆಚ್ಚಾಗಲಿದೆ ಎಂದು ಶ್ರೀ ಮೋದಿ ಹೇಳಿದರು.

ದ್ವೀಪದ ಅಭಿವೃದ್ಧಿಗಾಗಿ ಮೂರು ವರ್ಷಗಳ ಹಿಂದೆ ದ್ವೀಪ ಅಭಿವೃದ್ಧಿ ಸಂಸ್ಥೆಯನ್ನು ರಚಿಸಲಾಗಿದೆ ಎಂದು ಅವರು ಹೇಳಿದರು. ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗಳು ಈಗ ಶೀಘ್ರವಾಗಿ ಪೂರ್ಣಗೊಳ್ಳುತ್ತಿವೆ ಎಂದು ಅವರು ಹೇಳಿದರು.

ಹೆಚ್ಚು ಪರಿಣಾಮದ ಯೋಜನೆಗಳು ಮತ್ತು ಉತ್ತಮವಾದ ರಸ್ತೆವಾಯು ಮತ್ತು ಜಲ ಮಾರ್ಗಗಳು

ಅಂಡಮಾನ್ ಮತ್ತು ನಿಕೋಬಾರ್‌ನ 12 ದ್ವೀಪಗಳಲ್ಲಿ ಹೆಚ್ಚು ಪರಿಣಾಮದ ಯೋಜನೆಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಉತ್ತಮ ಅಂತರ್ಜಾಲ ಮತ್ತು ಮೊಬೈಲ್ ಸಂಪರ್ಕವನ್ನು ಒದಗಿಸುವುದರ ಜೊತೆಗೆ, ರಸ್ತೆ, ವಾಯು ಮತ್ತು ಜಲ ಮಾರ್ಗಗಳ ಮೂಲಕ ಭೌತಿಕ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಉತ್ತರ ಮತ್ತು ಮಧ್ಯ ಅಂಡಮಾನ್‌ನ ರಸ್ತೆ ಸಂಪರ್ಕ ಸುಧಾರಣೆಗಾಗಿ ಕೈಗೊಂಡಿರುವ ಎರಡು ಪ್ರಮುಖ ಸೇತುವೆಗಳು ಮತ್ತು ರಾಷ್ಟ್ರೀಯ ಹೆದ್ದಾರಿ-4 ರ ಕಾಮಗಾರಿಗಳನ್ನು ಪ್ರಧಾನಿ ಉಲ್ಲೇಖಿಸಿದರು.

1200 ಪ್ರಯಾಣಿಕರ ಸಾಮರ್ಥ್ಯವನ್ನು ನಿಭಾಯಿಸಲು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣವನ್ನು ಉನ್ನತೀಕರಿಸಲಾಗುತ್ತಿದೆ ಎಂದು ಹೇಳಿದರು. ಇದರಲ್ಲದೇ ಡಿಗ್ಲಿಪುರ, ಕಾರ್ ನಿಕೋಬಾರ್ ಮತ್ತು ಕ್ಯಾಂಪ್ಬೆಲ್ – ಬೇ ವಿಮಾನ ನಿಲ್ದಾಣಗಳು ಕಾರ್ಯಾಚರಣೆಗೆ ಸಿದ್ಧವಾಗಿವೆ ಎಂದರು.

ಸ್ವರಾಜ್ ದ್ವೀಪ, ಶಾಹೀದ್ ದ್ವೀಪ ಮತ್ತು ಲಾಂಗ್ ಐಲ್ಯಾಂಡ್‌ನಲ್ಲಿನ ಪ್ರಯಾಣಿಕರ ಟರ್ಮಿನಲ್ ಜೊತೆಗೆ ತೇಲುವ ಜೆಟ್ಟಿಯಂತಹ ವಾಟರ್ ಏರೋಡ್ರಮ್ ಮೂಲಸೌಕರ್ಯಗಳು ಮುಂಬರುವ ದಿನಗಳಲ್ಲಿ ಸಿದ್ಧವಾಗಲಿವೆ ಎಂದು ಶ್ರೀ ಮೋದಿ ಹೇಳಿದರು.

ದ್ವೀಪಗಳು ಮತ್ತು ಮುಖ್ಯಭೂಮಿಯ ನಡುವಿನ ಜಲ ಮಾರ್ಗದ ಸಂಪರ್ಕವನ್ನು ಸುಧಾರಿಸಲು ಕೊಚ್ಚಿ ಹಡಗುಕಟ್ಟೆಯಲ್ಲಿ ನಿರ್ಮಿಸಲಾಗುತ್ತಿರುವ 4 ಹಡಗುಗಳನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಅವರು ಹೇಳಿದರು.

ಬಂದರು ಕೇಂದ್ರಿತ ಅಭಿವೃದ್ಧಿ

ವಿಶ್ವದ ಹಲವು ಬಂದರುಗಳಿಂದ ಸ್ಪರ್ಧಾತ್ಮಕ ದೂರದಲ್ಲಿರುವುದರಿಂದ ಅಂಡಮಾನ್ ಮತ್ತು ನಿಕೋಬಾರ್ ಅನ್ನು ಬಂದರು ಕೇಂದ್ರಿತ ಅಭಿವೃದ್ಧಿ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದರು.

ಉತ್ತಮ ಬಂದರುಗಳ ಜಾಲ ಮತ್ತು ಅವುಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದ ದೇಶವು 21 ನೇ ಶತಮಾನದಲ್ಲಿ ವ್ಯಾಪಾರಕ್ಕೆ ಉತ್ತೇಜನ ನೀಡಲು ಸಾಧ್ಯವಾಗುತ್ತದೆ ಎಂದು ಪ್ರಧಾನಿ ಹೇಳಿದರು.

ಇಂದು, ಭಾರತವು ಸ್ವಾವಲಂಬನೆಯ ಸಂಕಲ್ಪದೊಂದಿಗೆ ಮುಂದುವರಿಯುತ್ತಿರುವಾಗ ಮತ್ತು ಜಾಗತಿಕ ಪೂರೈಕೆ ಮತ್ತು ಮೌಲ್ಯ ಸರಪಳಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಿದ್ಧಾವಾಗುತ್ತಿರುವಾಗ, ನಮ್ಮ ಜಲಮಾರ್ಗಗಳು ಮತ್ತು ಬಂದರುಗಳ ಜಾಲವನ್ನು ಬಲಪಡಿಸುವುದು ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದರು. ಬಂದರು ಮೂಲಸೌಕರ್ಯ ಅಭಿವೃದ್ಧಿಯಲ್ಲಿರುವ ಕಾನೂನು ತೊಡಕುಗಳನ್ನು ಸಹ ನಿರಂತರವಾಗಿ ತೆಗೆದುಹಾಕಲಾಗುತ್ತಿದೆ ಎಂದು ಶ್ರೀ ಮೋದಿ ಹೇಳಿದರು.

ಅಂತರರಾಷ್ಟ್ರೀಯ ಕಡಲ ವ್ಯಾಪಾರ

ಸಮುದ್ರದ ವ್ಯವಹಾರವನ್ನು ಸುಲಭಗೊಳಿಸುವುದು ಮತ್ತು ಕಡಲ ಸಾಗಣೆಯನ್ನು  ಸರಳೀಕರಿಸುವತ್ತಲೂ ಸರ್ಕಾರದ ಗಮನ ಇದೆ ಎಂದು ಪ್ರಧಾನಿ ಹೇಳಿದರು. ಆಳ ಕಂದಕದ ಒಳ ಬಂದರಿನ ತ್ವರಿತ ನಿರ್ಮಾಣ ಮತ್ತು ಗ್ರೇಟ್ ನಿಕೋಬಾರ್‌ನಲ್ಲಿ ಸುಮಾರು 10 ಸಾವಿರ ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಟ್ರಾನ್ಸ್‌ ಶಿಪ್ಮೆಂಟ್ ಬಂದರನ್ನು ನಿರ್ಮಿಸುವ ಪ್ರಸ್ತಾಪವನ್ನು ಅವರು ಉಲ್ಲೇಖಿಸಿದರು. ಇದು ದೊಡ್ಡ ಹಡಗುಗಳು ಲಂಗರು ಹಾಕಲು ಅನುವು ಮಾಡಿಕೊಡುತ್ತದೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯೊಂದಿಗೆ ಕಡಲ ವ್ಯಾಪಾರದಲ್ಲಿ ಭಾರತದ ಪಾಲನ್ನು ವೃದ್ಧಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು.

ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಯಿಂದಾಗಿ ಮೀನುಗಾರಿಕೆ, ಮೀನು ಸಾಕಣಿಕೆ ಮತ್ತು ಕಡಲಕಳೆ ಕೃಷಿಯಂತಹ ಸಾಗರ ಆರ್ಥಿಕತೆಯು ವೇಗಪಡೆಯಲಿದೆ ಎಂದು ಅವರು ಹೇಳಿದರು. ಸರ್ಕಾರದ ಪ್ರಯತ್ನಗಳು ಅಂಡಮಾನ್ ಮತ್ತು ನಿಕೋಬಾರ್‌ಗೆ ಹೊಸ ಸೌಲಭ್ಯಗಳನ್ನು ಒದಗಿಸುವುದು ಮಾತ್ರವಲ್ಲದೆ ವಿಶ್ವ ಪ್ರವಾಸಿ ನಕ್ಷೆಯಲ್ಲಿ ಪ್ರಮುಖ ಸ್ಥಾನವನ್ನೂ ನೀಡಲಿ ಎಂದು ಪ್ರಧಾನಿ ಹಾರೈಸಿದರು.



(Release ID: 1644820) Visitor Counter : 279