ಪ್ರಧಾನ ಮಂತ್ರಿಯವರ ಕಛೇರಿ

ಉನ್ನತ ಶಿಕ್ಷಣ ಸಮಾವೇಶವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಉದ್ಘಾಟನಾ ಭಾಷಣ

ರಾಷ್ಟ್ರೀಯ ಶಿಕ್ಷಣ ನೀತಿ ವರ್ತಮಾನ ಮತ್ತು ಭವಿಷ್ಯದ ಪೀಳಿಗೆಯ ಭವಿಷ್ಯ ರೂಪಿಸುವ ಗುರಿ ಹೊಂದಿದೆ

ನೀತಿ ನವ ಭಾರತಕ್ಕೆ ಅಡಿಪಾಯ ಹಾಕುತ್ತದೆ

ಇದು ಸಮಗ್ರ ದೃಷ್ಟಿಕೋನದ ಆಧಾರದ ಮೇಲಿದೆ: ಪ್ರಧಾನಮಂತ್ರಿ

Posted On: 07 AUG 2020 2:14PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉನ್ನತ ಶಿಕ್ಷಣ ಸಮಾವೇಶದ ಉದ್ದೇಶಿಸಿ ಉದ್ಘಾಟನಾ ಭಾಷಣ ಮಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು 3-4 ವರ್ಷಗಳ ಕಾಲ ವ್ಯಾಪಕ ಚರ್ಚೆ ಮತ್ತು ಲಕ್ಷಾಂತರ ಸಲಹೆಗಳ ಕುರಿತಂತೆ ಬುದ್ಧಿಮತ್ತೆ ಬಳಸಿದ ಬಳಿಕ ಅನುಮೋದಿಸಲಾಗಿದೆ  ಎಂದು ಪ್ರಧಾನಮಂತ್ರಿ  ತಿಳಿಸಿದರು. ದೇಶದಾದ್ಯಂತ ರಾಷ್ಟ್ರೀಯ ಶಿಕ್ಷಣ ನೀತಿಯ ಮೇಲೆ ಆರೋಗ್ಯಪೂರ್ಣ ಚರ್ಚೆಗಳು ನಡೆಯುತ್ತಿವೆ ಎಂಬುದನ್ನು ಅವರು ಉಲ್ಲೇಖಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಯುವಕರನ್ನು ಭವಿಷ್ಯಕ್ಕೆ ಸನ್ನದ್ಧಗೊಳಿಸುವ ಗುರಿ ಹೊಂದಿದ್ದು, ರಾಷ್ಟ್ರೀ ಮೌಲ್ಯಗಳು ಮತ್ತು ರಾಷ್ಟ್ರೀಯ ಗುರಿಗಳ ಮೇಲೆ ಗಮನ ಹರಿಸಿದೆ ಎಂದರು.  

ಈ ನೀತಿಯು ನವ ಭಾರತಕ್ಕೆ, 21ನೇ ಶತಮಾನದ ಭಾರತಕ್ಕೆ ಮತ್ತು  ಭಾರತವನ್ನು ಬಲಪಡಿಸಲು ಯುವಜನರಿಗೆ ಅಗತ್ಯವಾದ ಶಿಕ್ಷಣ ಮತ್ತು ಕೌಶಲಕ್ಕೆ, ಅಭಿವೃದ್ಧಿಯ ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲು ಮತ್ತು ಭಾರತದ ನಾಗರಿಕರಿಗೆ ಗರಿಷ್ಠ ಸೂಕ್ತ ಅವಕಾಶಗಳು ದೊರಕುವಂತೆ ಮಾಡಲು ಅವರನ್ನು ಮತ್ತಷ್ಟು ಸಬಲೀಕರಿಸಲು ಅಡಿಪಾಯ ಹಾಕಲಿದೆ ಎಂದು ಶ್ರೀ ನರೇಂದ್ರ ಮೋದಿ ತಿಳಿಸಿದರು.

ಹಲವಾರು ವರ್ಷಗಳ ಕಾಲ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗದೆ ಹಾಗೆಯೇ ಉಳಿದಿತ್ತು, ಅದರಲ್ಲಿ ಜನರು ವೈದ್ಯರಾಗಲು, ಎಂಜಿನಿಯರ್ ಅಥವಾ ವಕೀಲರಾಗಲು ಗಮನಹರಿಸುತ್ತಿದ್ದರು. ಆಸಕ್ತಿ, ಸಾಮರ್ಥ್ಯ ಮತ್ತು ಬೇಡಿಕೆಯನ್ನು ಯಾವುದೇ ರೀತಿ ಪರಿಶೋಧಣೆ ಇರುತ್ತಿರಲಿಲ್ಲ ಎಂದು ಅವರು ಹೇಳಿದರು.

ನಮ್ಮ ಶಿಕ್ಷಣದಲ್ಲಿ ಉತ್ಸಾಹ, ಶಿಕ್ಷಣದಲ್ಲಿ ತತ್ವ, ಶಿಕ್ಷಣಿಕ ಉದ್ದೇಶ ಇಲ್ಲದಿದ್ದರೆ ಯುವಕರಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ನವೀನ ಚಿಂತನೆ ಹೇಗೆ ಬೆಳೆಯಲು ಸಾಧ್ಯ ಎಂದು ಪ್ರಧಾನಿ ಪ್ರಶ್ನಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣ ಕುರುತಂತೆ ಗುರು ರವೀಂದ್ರನಾಥ ಠ್ಯಾಗೋರ್ ಅವರ ಆದರ್ಶಗಳನ್ನು ಬಿಂಬಿಸುತ್ತದೆ, ಅದು ಎಲ್ಲ ಅಸ್ತಿತ್ವದಲ್ಲಿ ನಮ್ಮ ಬದುಕಿನಲ್ಲಿ ಸೌಹಾರ್ದತೆ ತರುವ ಗುರಿ ಹೊಂದಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಅಗತ್ಯವಿದ್ದ ಸಮಗ್ರ ದೃಷ್ಟಿಕೋನವನ್ನು ರಾಷ್ಟ್ರೀಯ ಶಿಕ್ಷಣ ನೀತಿ ಯಶಸ್ವಿಯಾಗಿ ಸಾಧಿಸಿದೆ ಎಂದರು.

ಎರಡು ಅತಿ ದೊಡ್ಡ ಪ್ರಶ್ನೆಗಳನ್ನು ಗಮನದಲ್ಲಿಟ್ಟುಕೊಂಡು ಈ ನೀತಿಯನ್ನು ರೂಪಿಸಲಾಗಿದೆ: ಸೃಜನಶೀಲ, ಕೌತಕಭರಿತ ಮತ್ತು ಬದ್ಧತೆ ಚಾಲಿತ ಬದುಕಿಗೆ ನಮ್ಮ ಯುವಜನರನ್ನು ಶಿಕ್ಷಣ ವ್ಯವಸ್ಥೆ ಉತ್ತೇಜಿಸುತ್ತದೆಯೇ? ಮತ್ತು ನಮ್ಮ ಶಿಕ್ಷಣ ವ್ಯವಸ್ಥೆ ನಮ್ಮ ಯುವಜನರನ್ನು ಸಬಲೀಕರಿಸುತ್ತದೆಯೇ, ದೇಶದಲ್ಲಿ ಬಲಿಷ್ಠ ಸಮಾಜ ನಿರ್ಮಿಸಬಲ್ಲುದೇ? ಈ ಕುರಿತಂತೆ ಸಂತೃಪ್ತಿ ವ್ಯಕ್ತಪಡಿಸಿದ ಅವರು ರಾಷ್ಟ್ರೀಯ ಶಿಕ್ಷಣ ನೀತಿ ಈ ಮಹತ್ವದ ವಿಚಾರಗಳ ಬಗ್ಗೆ ಕಾಳಜಿ ವಹಿಸಿದೆ ಎಂದರು.

ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣವೂ ಬದಲಾಗಬೇಕಾದ ಅಗತ್ಯವಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. 5 + 3 + 3 + 4 ಹೊಸ ಶೈಕ್ಷಣಿಕ ವ್ಯವಸ್ಥೆ ಈ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದೂ ಅವರು ತಿಳಿಸಿದರು. ನಮ್ಮ ವಿದ್ಯಾರ್ಥಿಗಳು ಜಾಗತಿಕ ನಾಗರಿಕರಾಗುತ್ತಿದ್ದಾರೆ ಮತ್ತು ಅವರು ತಮ್ಮ ಬೇರುಗಳಿಗೆ ಸಂಪರ್ಕಿತರಾಗಿದ್ದಾರೆ  ಎಂಬುದನ್ನು ನಾವು ಖಾತ್ರಿಪಡಿಸಿಕೊಳ್ಳಬೇಕು ಎಂದು ತಿಳಿಸಿದರು.  

ಹೊಸ ಶಿಕ್ಷಣ ನೀತಿಯು “ಹೇಗೆ ಚಿಂತಿಸಬೇಕು’ ಎಂಬುದರ ಮೇಲೆ ಒತ್ತು ನೀಡಿದೆ ಎಂದು ಪ್ರಧಾನಮಂತ್ರಿ ತಿಳಿಸಿದರು. ಮಕ್ಕಳಿಗೆ ಪ್ರಶ್ನೆ -ಆಧಾರಿತ, ಸಂಶೋಧನೆ- ಆಧಾರಿತ, ಚರ್ಚೆ ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕಾ ವಿಧಾನಗಳಿಗೆ ಒತ್ತು ನೀಡಲಾಗಿದ್ದು, ಇದು ಅವರ ಕಲಿಕಾ ದಾಹವನ್ನು ಮತ್ತು ತರಗತಿಯಲ್ಲಿ ಅಭ್ಯಾಸ ಮಾಡುವುದನ್ನು ಹೆಚ್ಚಿಸುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಉತ್ಸಾಹವನ್ನು ಅನುಸರಿಸಲು ಅವಕಾಶವನ್ನು ಪಡೆಯಬೇಕು ಎಂದು ಪ್ರಧಾನಿ ಆಗ್ರಹಿಸಿದರು. ಕೋರ್ಸ್ ಮುಗಿಸಿದ ನಂತರ ವಿದ್ಯಾರ್ಥಿಯು ಉದ್ಯೋಗಕ್ಕೆ ಹೋದಾಗ, ತಾನು ಅಧ್ಯಯನ ಮಾಡಿದ ವಿಷಯಗಳು ಉದ್ಯೋಗದ ಅವಶ್ಯಕತೆಗಳನ್ನು ಪೂರೈಸುವುದಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾನೆ. ಅನೇಕ ವಿದ್ಯಾರ್ಥಿಗಳು ಕೋರ್ಸ್ ಸಹ ತೊರೆಯುತ್ತಾರೆ ಎಂದು ಅವರು ಹೇಳಿದರು. ಅಂತಹ ಎಲ್ಲ ವಿದ್ಯಾರ್ಥಿಗಳ ಅಗತ್ಯಗಳ ಕಾಳಜಿ ವಹಿಸುವ ಸಲುವಾಗಿ, ಹೊಸ ಶಿಕ್ಷಣ ನೀತಿಯಲ್ಲಿ ಬಹು ಪ್ರವೇಶ-ನಿರ್ಗಮನದ ಆಯ್ಕೆಯನ್ನು ಒದಗಿಸಲಾಗಿದೆ ಎಂದು ಅವರು ಹೇಳಿದರು.

ಹೊಸ ಶಿಕ್ಷಣ ನೀತಿ ಒಂದು ಕ್ರೆಡಿಟ್ ಬ್ಯಾಂಕ್ ಒದಗಿಸುತ್ತದೆ, ಇದರಿಂದ ವಿದ್ಯಾರ್ಥಿಗಳಿಗೆ ಮಧ್ಯದಲ್ಲೇ ಕೋರ್ಸ್ ಅನ್ನು ತ್ಯಜಿಸುವ ಮತ್ತು ಮತ್ತೆ ತಮ್ಮ ಕೋರ್ಸ್ ಮರು ಸೇರುವ ಅವಕಾಶ ಇರುತ್ತದೆ ಎಂದು ತಿಳಿಸಿದರು. ನಾವು ಎಲ್ಲಿ ವ್ಯಕ್ತಿಯೊಬ್ಬ ನಿರಂತರವಾಗಿ ಸ್ವಯಂ ಮರು ಕೌಶಲ್ಯ ಪಡೆವ ಮತ್ತು ಕೌಶಲ್ಯ ಹೆಚ್ಚಿಸಿಕೊಳ್ಳುವ ಯುಗದತ್ತ ಸಾಗುತ್ತಿದ್ದೇವೆ ಎಂದರು.

ಯಾವುದೇ ದೇಶದ ಅಭಿವೃದ್ಧಿಯಲ್ಲಿ ಸಮಾಜದ ಪ್ರತಿಯೊಂದು ವರ್ಗದ ಘನತೆಯೂ ದೊಡ್ಡ ಪಾತ್ರ ವಹಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಹೀಗಾಗಿಯೇ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಎಲ್ಲ ಕೆಲಸಕ್ಕೂ ಘನತೆ ಒದಗಿಸಲು ಹೆಚ್ಚಿನ ಗಮನ ಹರಿಸಲಾಗಿದೆ ಎಂದು ಪ್ರಧಾನಿ ತಿಳಿಸಿದರು

ಇಡೀ ವಿಶ್ವಕ್ಕೆ ತಂತ್ರಜ್ಞಾನ ಮತ್ತು ಪ್ರತಿಭಾಪೂರ್ಣ ಪರಿಹಾರ ನೀಡುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದ ಪ್ರಧಾನಮಂತ್ರಿಯವರು, ರಾಷ್ಟ್ರೀಯ ಶಿಕ್ಷಣ ನೀತಿ ಈ ಜವಾಬ್ದಾರಿಯನ್ನು ನಿರ್ವಹಿಸುತ್ತದೆ, ಇದು ಹಲವು ತಂತ್ರಜ್ಞಾನ ಆಧಾರಿತ ವಿಷಯ ಮತ್ತು ಕೋರ್ಸ್ ಗಳನ್ನು ಅಭಿವೃದ್ಧಿಪಡಿಸಲು ಬಯಸುತ್ತದೆ ಎಂದರು. ವರ್ಚುವಲ್ ಪ್ರಯೋಗಾಲಯದಂಥ ಕಲ್ಪನೆಯು ಪ್ರಯೋಗಾಲಯದಲ್ಲಿ ಪ್ರಯೋಗ ನಡೆಸುವ ಅಗತ್ಯವಿರುವಂಥ ವಿಷಯವನ್ನು ಈ ಹಿಂದೆ ಓದಲು ಸಾಧ್ಯವಾಗದಿದ್ದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವರ ಕನಸು ಈಡೇರಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದಲ್ಲಿನ ಶಿಕ್ಷಣ ಮತ್ತು ಸಂಶೋಧನೆಯ ನಡುವಿನ ಕಂದಕವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ತಿಳಿಸಿದರು.

ಈ ಸುಧಾರಣೆಗಳು ಸಂಸ್ಥೆಗಳಲ್ಲಿ ಮತ್ತು ಮೂಲಸೌಕರ್ಯದಲ್ಲಿ ಪ್ರತಿಫಲಿಸಿದಾಗ ಮಾತ್ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಕಾರ್ಯಗತಗೊಳಿಸಬಹುದು ಎಂದು ಪ್ರಧಾನಿ ಹೇಳಿದರು. ಸಮಾಜದಲ್ಲಿ ನಾವೀನ್ಯತೆಯ ಮೌಲ್ಯಗಳನ್ನು ನಿರ್ಮಿಸುವುದು ಈ ಹೊತ್ತಿನ ಅವಶ್ಯಕತೆಯಾಗಿದೆ ಮತ್ತು ಇದು ನಮ್ಮ ದೇಶದ ಸಂಸ್ಥೆಗಳಿಂದ ಪ್ರಾರಂಭವಾಗಬೇಕು ಎಂದು ಅವರು ಹೇಳಿದರು.

ಸ್ವಾಯತ್ತತೆಯ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಧಿಕಾರ ನೀಡಬೇಕಾದ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಸ್ವಾಯತ್ತತೆಯ ಬಗ್ಗೆ ಎರಡು ರೀತಿಯ ಚರ್ಚೆಗಳಿವೆ ಎಂದೂ ಅವರು ಹೇಳಿದರು. ಎಲ್ಲವನ್ನೂ ಸರ್ಕಾರದ ನಿಯಂತ್ರಣದಲ್ಲಿ ಕಟ್ಟುನಿಟ್ಟಾಗಿ ಮಾಡಬೇಕು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ಎಲ್ಲಾ ಸಂಸ್ಥೆಗಳು ಪೂರ್ವನಿಯೋಜಿತವಾಗಿ ಸ್ವಾಯತ್ತತೆಯನ್ನು ಪಡೆಯಬೇಕು ಎಂದು ಹೇಳುತ್ತಾರೆ ಎಂದರು.  ಮೊದಲ ಅಭಿಪ್ರಾಯವು ಸರ್ಕಾರೇತರ ಸಂಸ್ಥೆಗಳ ಬಗೆಗಿನ ಅಪನಂಬಿಕೆಯಿಂದ ಹೊರಬಂದಿದ್ದರೆ, ಎರಡನೆಯ ವಿಧಾನದಲ್ಲಿ ಸ್ವಾಯತ್ತತೆಯನ್ನು ಅರ್ಹತೆಯೆಂದು ಪರಿಗಣಿಸಲಾಗಿದೆ ಎಂದು ಅವರು ಹೇಳಿದರು. ಉತ್ತಮ ಗುಣಮಟ್ಟದ ಶಿಕ್ಷಣದ ಮಾರ್ಗ ಈ 2 ಅಭಿಪ್ರಾಯಗಳ ಮಧ್ಯದಲ್ಲಿ ಎಲ್ಲೋ ನಿಲ್ಲುತ್ತದೆ ಎಂದು ಅವರು ತಿಳಿಸಿದರು.

ಗುಣಮಟ್ಟದ ಶಿಕ್ಷಣಕ್ಕಾಗಿ ಹೆಚ್ಚಿನ ಕಾರ್ಯ ಮಾಡುವ ಸಂಸ್ಥೆಗೆ ಹೆಚ್ಚಿನ ಸ್ವಾತಂತ್ರ್ಯ ನೀಡಬೇಕು ಎಂದು ಅವರು ಅಭಿಪ್ರಾಯಪಟ್ಟರು. ಇದು ಗುಣಮಟ್ಟಕ್ಕೆ ಉತ್ತೇಜನ ನೀಡುತ್ತದೆ ಮತ್ತು ಪ್ರತಿಯೊಬ್ಬರೂ ಬೆಳೆಯಲು ಪ್ರೋತ್ಸಾಹ ನೀಡುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿ ವಿಸ್ತರಿಸಿದಂತೆ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆಯೂ ವೇಗವಾಗಿ ಸಾಗಬೇಕು ಎಂದು ಆಶಿಸಿದರು.

“ಶಿಕ್ಷಣದ ಉದ್ದೇಶ ಕೌಶಲ್ಯ ಮತ್ತು ತಜ್ಞತೆಯೊಂದಿಗೆ ಉತ್ತಮ ಮಾನವರನ್ನು ರೂಪಿಸುವಾಗಿದೆ. ಪ್ರಬುದ್ಧ ಮಾನವರನ್ನು ಶಿಕ್ಷಕರು ರೂಪಿಸುತ್ತಾರೆ’’ ಎಂಬ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಮಾತುಗಳನ್ನು ಅವರು ಉಲ್ಲೇಖಿಸಿದರು.  

ಈ ನೀತಿಯು ಬಲವಾದ ಬೋಧನಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸುತ್ತದೆ, ಅಲ್ಲಿ ಶಿಕ್ಷಕರು ಉತ್ತಮ ವೃತ್ತಿಪರರನ್ನು ಮತ್ತು ಉತ್ತಮ ನಾಗರಿಕರನ್ನು ರೂಪಿಸಬಹುದು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಿಕ್ಷಕರ ತರಬೇತಿಗೆ ಹೆಚ್ಚಿನ ಒತ್ತು ನೀಡಲಾಗಿದೆ, ಅವರು ತಮ್ಮ ಕೌಶಲ್ಯಗಳನ್ನು ನಿರಂತರವಾಗಿ ನವೀಕರಿಸುತ್ತಿರುತ್ತಾರೆ, ಇದಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತರುವ ಸಂಕಲ್ಪದೊಂದಿಗೆ ಜನರು ಒಗ್ಗೂಡಿ ಶ್ರಮಿಸಬೇಕೆಂದು ಪ್ರಧಾನಮಂತ್ರಿಯವರು ಮನವಿ ಮಾಡಿದರು. ವಿಶ್ವವಿದ್ಯಾಲಯಗಳು, ಕಾಲೇಜುಗಳು, ಶಾಲಾ ಶಿಕ್ಷಣ ಮಂಡಳಿಗಳು, ವಿವಿಧ ರಾಜ್ಯಗಳು, ವಿವಿಧ ಬಾಧ್ಯಸ್ಥರೊಂದಿಗೆ ಹೊಸ ಸುತ್ತಿನ ಸಂವಾದ ಮತ್ತು ಸಮನ್ವಯವು ಇಲ್ಲಿಂದ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಂತೆ ವೆಬಿನಾರ್ ಅನ್ನು ಮುಂದುವರೆಸಬೇಕು ಮತ್ತು ಅದರ ಬಗ್ಗೆ ಚರ್ಚೆಯನ್ನು ಮುಂದುವರಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಮಾವೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಉತ್ತಮ ಸಲಹೆಗಳು, ಪರಿಣಾಮಕಾರಿ ಪರಿಹಾರಗಳು ಹೊರಬರುತ್ತವೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

***



(Release ID: 1644733) Visitor Counter : 200