ಪ್ರಧಾನ ಮಂತ್ರಿಯವರ ಕಛೇರಿ
ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಮನ್ ಕಿ ಬಾತ್ 2.0’ - 14 ನೇ ಕಂತಿನ ಭಾಷಣದ ಕನ್ನಡ ಅವತರಣಿಕೆ
Posted On:
26 JUL 2020 11:39AM by PIB Bengaluru
ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ಜುಲೈ 26, ಮತ್ತು ಇಂದಿನ ದಿನ ಬಹಳ ವಿಶೇಷವಾದದ್ದು. ಇಂದು ಕಾರ್ಗಿಲ್ ವಿಜಯ ದಿನ. 21 ವರುಷಗಳ ಹಿಂದೆ ಇಂದಿನ ದಿನವೇ ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೇನೆ ಭಾರತದ ವಿಜಯ ಧ್ವಜವನ್ನು ಹಾರಿಸಿತ್ತು. ಸ್ನೇಹಿತರೆ, ಕಾರ್ಗಿಲ್ ಯುದ್ಧ ನಡೆದಂತಹ ಪರಿಸ್ಥಿತಿಯನ್ನು ಭಾರತ ಎಂದಿಗೂ ಮರೆಯಲಾರದು. ಪಾಕಿಸ್ತಾನ ದೊಡ್ಡ ಪ್ರಮಾಣದ ಸಂಚು ಹೂಡಿ ಭಾರತದ ನೆಲವನ್ನು ಕಬಳಿಸುವ ಮತ್ತು ಅವರಲ್ಲಿನ ಆಂತರಿಕ ಕಲಹಗಳಿಂದ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯುವಂತಹ ದುಸ್ಸಾಹಸಕ್ಕೆ ಕೈಹಾಕಿತ್ತು. ಭಾರತ ಅಂದು ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧಗಳಿಸುವ ಪ್ರಯತ್ನದಲ್ಲಿತ್ತು. ಆದರೆ
“ಬಯರೂ ಅಕಾರಣ್ ಸಬ್ ಕಾಹೂ ಸೊ. ಜೊ ಕರ್ ಹಿತ್ ಅನಹಿತ್ ತಾಹು ಸೊ” ಎಂದು ಹೇಳುತ್ತಾರಲ್ಲವೆ.
ಅಂದರೆ, ಪ್ರತಿಯೊಬ್ಬರ ಜೊತೆಯೂ ವಿನಾಕಾರಣ ವೈರತ್ವ ಸಾಧಿಸುವುದು ದುಷ್ಟರ ಸ್ವಭಾವವೇ ಆಗಿರುತ್ತದೆ. ಇಂಥ ಸ್ವಭಾವದವರು ಒಳಿತನ್ನು ಬಯಸುವವರಿಗೂ ಕೆಡುಕನ್ನೇ ಮಾಡುತ್ತಾರೆ. ಆದ್ದರಿಂದ ಭಾರತದ ಸ್ನೇಹ ಹಸ್ತಕ್ಕೆ ಬೆನ್ನಿಗೆ ಚೂರಿ ಇರಿಯುವ ಮೂಲಕ ಪಾಕಿಸ್ತಾನ ಉತ್ತರ ನೀಡುವ ಪ್ರಯತ್ನ ಮಾಡಿತ್ತು. ಆದರೆ ಭಾರತದ ವೀರ ಸೈನಿಕರು ತೋರಿದ ಪರಾಕ್ರಮ, ಭಾರತ ತೋರಿದ ಶೌರ್ಯಕ್ಕೆ ವಿಶ್ವವೇ ಸಾಕ್ಷಿಯಾಯಿತು. ಎತ್ತರದ ಪರ್ವತ ಪ್ರದೇಶದ ಮೇಲೆ ಕುಳಿತ ವೈರಿ ಮತ್ತು ಕೆಳಗಿನಿಂದ ಹೋರಾಡುತ್ತಿರುವ ನಮ್ಮ ಸೇನೆ, ನಮ್ಮ ವೀರ ಸೇನಾನಿಗಳ ಬಗ್ಗೆ ನೀವು ಊಹಿಸಬಹುದೇ! ಗೆಲುವು ಪರ್ವತದ ಅಗಾಧತೆಯದ್ದಲ್ಲ, ಗೆಲುವು ಭಾರತದ ಸೇನೆಯ ಉಚ್ಚ ಮಟ್ಟದ ಸ್ಥೈರ್ಯ ಮತ್ತು ನಿಜವಾದ ಶೌರ್ಯದ್ದಾಗಿತ್ತು. ಸ್ನೇಹಿತರೆ, ಆಗ ನನಗೂ ಕಾರ್ಗಿಲ್ ಗೆ ಹೋಗುವ ಮತ್ತು ನಮ್ಮ ಸೈನಿಕರ ಶೌರ್ಯದ ದರ್ಶನ ಭಾಗ್ಯ ಲಭಿಸಿತ್ತು. ಆ ದಿನ ನನ್ನ ಜೀವನದ ಅತ್ಯಂತ ಅಮೂಲ್ಯ ಕ್ಷಣಗಳಲ್ಲಿ ಒಂದಾಗಿದೆ. ಇಂದು ದೇಶದೆಲ್ಲೆಡೆ ಜನರು ಕಾರ್ಗಿಲ್ ವಿಯಜವನ್ನು ಸ್ಮರಿಸುತ್ತಿದ್ದಾರೆ ಎಂಬುದನ್ನು ನಾನು ನೋಡುತ್ತಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಒಂದು hashtag #courageinkargil ನಲ್ಲಿ ಜನರು ನಮ್ಮ ವೀರರಿಗೆ ನಮಿಸುತ್ತಿದ್ದಾರೆ. ಹುತಾತ್ಮರಾದವರಿಗೆ ಶೃದ್ಧಾಂಜಲಿ ಅರ್ಪಪಿಸುತ್ತಿದ್ದಾರೆ. ಇಂದು ನಾನು ಸಮಸ್ತ ದೇಶಬಾಂಧವರ ಪರವಾಗಿ ನಮ್ಮ ಈ ವೀರ ಯೋಧರ ಜೊತೆ ಜೊತೆಗೆ ತಾಯಿ ಭಾರತಿಯ ನಿಜವಾದ ಸುಪುತ್ರರಿಗೆ ಜನ್ಮ ನೀಡಿದ ಆ ವೀರ ಮಾತೆಯರಿಗೂ ನಮಿಸುತ್ತೇನೆ. ಇಂದು ದಿನಪೂರ್ತಿ ಕಾರ್ಗಿಲ್ ವಿಜಯಕ್ಕೆ ಸಂಬಂಧಿಸಿದ ನಮ್ಮ ವೀರರ ಕಥೇಗಳನ್ನು, ವೀರ ಮಾತೆಯರ ತ್ಯಾಗದ ಬಗ್ಗೆ ಪರಸ್ಪರ ವಿಚಾರಗಳನ್ನು ಹಂಚಿಕೊಳ್ಳಿ ಎಂದು ನನ್ನ ದೇಶದ ಯುವಜನತೆಗೆ ಆಗ್ರಹಿಸುತ್ತೇನೆ. ಸ್ನೇಹಿತರೆ, www.gallantryawards.gov.in ಎಂಬ ಜಾಲತಾಣವಿದೆ, ಇದನ್ನು ಖಂಡಿತ ನೋಡಿರಿ ಎಂದು ನಿಮ್ಮನ್ನು ಒತ್ತಾಯಿಸುತ್ತೇನೆ. ಅಲ್ಲಿ ನಿಮಗೆ ನಮ್ಮ ವೀರ ಪರಾಕ್ರಮಿ ಯೋಧರ ಬಗ್ಗೆ, ಅವರ ಪರಾಕ್ರಮದ ಬಗ್ಗೆ ಬಹಳಷ್ಟು ಮಾಹಿತಿ ಲಭಿಸುತ್ತದೆ. ಈ ಮಾಹಿತಿಯ ಬಗ್ಗೆ ನೀವು ನಿಮ್ಮ ಸ್ನೇಹಿತರೊಂದಿಗೆ ಚರ್ಚಿಸಿದಾಗ ಅದು ಅವರಿಗೂ ಪ್ರೇರಣೆಯನ್ನು ನೀಡುತ್ತದೆ. ಖಂಡಿತ ನೀವು ಈ ಜಾಲತಾಣಕ್ಕೆ ಭೇಟಿ ನೀಡಿ ಅಷ್ಟೇ ಅಲ್ಲ ಮತ್ತೆ ಮತ್ತೆ ಭೇಟಿ ನೀಡಿ ಎಂದು ನಾನು ಹೇಳಬಯಸುತ್ತೇನೆ
ಸ್ನೇಹಿತರೆ, ಕಾರ್ಗಿಲ್ ಯುದ್ಧದ ಸಮಯದಲ್ಲಿ ಅಂದು ಅಟಲ್ ಜಿಯವರು ಕೆಂಪು ಕೋಟೆಯಿಂದ ಹೇಳಿದ್ದು ಇಂದಿಗೂ ನಮ್ಮೆಲ್ಲರಿಗೂ ಪ್ರಸ್ತುತವಾಗಿದೆ. ಅಂದು ಅಟಲ್ ಜಿಯವರು ದೇಶಕ್ಕೆ ಗಾಂಧೀಜಿಯವರ ಒಂದು ಮಂತ್ರದ ಕುರಿತು ನೆನಪಿಸಿದ್ದರು. ಯಾರಿಗೇ ಆಗಲಿ ಏನು ಮಾಡಬೇಕು, ಏನು ಮಾಡಬಾರದು ಎಂಬ ಕುರಿತು ದ್ವಂದ್ವವಿದ್ದಲ್ಲಿ ಅವರು ಭಾರತದ ಕಡುಬಡವ ಮತ್ತು ಅಸಹಾಯಕ ವ್ಯಕ್ತಿಯ ಕುರಿತು ಆಲೋಚಿಸಬೇಕು ಎಂಬುದು ಮಹಾತ್ಮಾ ಗಾಂಧಿಯವರ ಮಂತ್ರವಾಗಿತ್ತು. ತಾನು ಏನು ಮಾಡುತ್ತಿರುವೆನೋ ಅದರಿಂದ ಆ ವ್ಯಕ್ತಿಯ ಒಳಿತು ಆಗುವುದೋ ಇಲ್ಲವೋ ಎಂಬುದನ್ನು ಆಲೋಚಿಸಬೇಕು. ಗಾಂಧೀಜಿಯವರ ಈ ವಿಚಾರದಿಂದಲೂ ಮುಂದುವರಿದು ಅಟಲ್ ಜಿಯವರು ಹೀಗೆ ಹೇಳಿದ್ದರು, ಕಾರ್ಗಿಲ್ ಯುದ್ಧ, ನಮಗೆ ಮತ್ತೊಂದು ಮಂತ್ರವನ್ನು ನೀಡಿದೆ – ಅದೇನೆಂದರೆ ಯಾವುದೇ ಮಹತ್ವಪೂರ್ಣ ನಿರ್ಣಯ ಕೈಗೊಳ್ಳುವ ಮೊದಲು, ನಾವು ಕೈಗೊಳ್ಳುವ ಈ ಕ್ರಮ ಆ ದುರ್ಗಮ ಪರ್ವತ ಪ್ರದೇಶಗಳಲ್ಲಿ ತನ್ನ ಪ್ರಾಣದ ಆಹುತಿಯನ್ನು ನೀಡಿದ ಆ ಸೈನಿಕರ ಗೌರವಕ್ಕೆ ತಕ್ಕುದಾಗಿದೆಯೇ ಎಂಬುದನ್ನು ಆಲೋಚಿಸುವುದಾಗಿದೆ. ಬನ್ನಿ ಅಟಲ್ ಜಿಯವರ ಧ್ವನಿಯಲ್ಲೇ ಅವರ ಈ ಭಾವನೆಯನ್ನು ನಾವೆಲ್ಲ ಕೇಳೋಣ, ಅರಿತುಕೊಳ್ಳೋಣ ಮತ್ತು ಅದನ್ನು ಸ್ವೀಕರಿಸುವುದು ಪ್ರಸ್ತುತ ಸಮಯದ ಅವಶ್ಯಕತೆಯೂ ಆಗಿದೆ
“ಗಾಂಧೀಜಿಯವರು ಒಂದು ಮಂತ್ರವನ್ನು ನೀಡಿದ್ದು ನಮ್ಮೆಲ್ಲರಿಗೂ ನೆನಪಿದೆ. ನೀವು ಏನು ಮಾಡಬೇಕು, ಎಂಬ ಕುರಿತು ದ್ವಂದ್ವವಿದ್ದಲ್ಲಿ ಭಾರತದ ಅಸಹಾಯಕ ವ್ಯಕ್ತಿಯ ಕುರಿತು ಆಲೋಚಿಸಿ ಮತ್ತು ನೀವು ಏನು ಮಾಡುತ್ತಿರುವಿರೋ ಅದರಿಂದ ಆ ವ್ಯಕ್ತಿಯ ಒಳಿತು ಆಗುವುದೇ ಎಂಬುದನ್ನು ಆಲೋಚಿಸಬೇಕು” ಎಂದು ಅವರು ಹೇಳಿದ್ದರು. “ಕಾರ್ಗಿಲ್ ನಮಗೆ ಮತ್ತೊಂದು ಮಂತ್ರವನ್ನು ನೀಡಿದೆ –ಯಾವುದೇ ಮಹತ್ವಪೂರ್ಣ ನಿರ್ಣಯ ಕೈಗೊಳ್ಳುವ ಮೊದಲು, ನಾವು ಕೈಗೊಳ್ಳುವ ಈ ಕ್ರಮ ಆ ದುರ್ಗಮ ಪರ್ವತ ಪ್ರದೇಶಗಳಲ್ಲಿ ತನ್ನ ಪ್ರಾಣದ ಆಹುತಿಯನ್ನು ನೀಡಿದ ಆ ಸೈನಿಕನ ಗೌರವಕ್ಕೆ ತಕ್ಕುದಾಗಿದೆಯೇ”
ಸ್ನೇಹಿತರೆ, ಯುದ್ಧ ಸ್ಥಿತಿಯಲ್ಲಿ ನಾವು ಏನು ಮಾತನಾಡುತ್ತೇವೆಯೋ, ಮಾಡುತ್ತೆವೆಯೋ, ಅದರಿಂದ ಗಡಿಯಲ್ಲಿ ಹೋರಾಡುತ್ತಿರುವ ಸೈನಿಕರ ಆತ್ಮ ಸ್ಥೈರ್ಯದ ಮೇಲೆ ಮತ್ತು ಅವರ ಕುಟುಂಬದ ಆತ್ಮ ಸ್ಥೈರ್ಯದ ಮೇಲೆ ಬಹಳ ಗಾಢ ಪರಿಣಾಮ ಬೀರುತ್ತದೆ. ಈ ಮಾತನ್ನು ನಾವು ಎಂದಿಗೂ ಮರೆಯಬಾರದು. ಹಾಗಾಗಿ ನಮ್ಮ ಆಚಾರ ವಿಚಾರಗಳು ಮತ್ತು ನಡೆ, ನುಡಿ, ನಮ್ಮ ಗೌರವ ನಮ್ಮ ಗುರಿ ಎಲ್ಲವೂ ಪರೀಕ್ಷೆಗೊಳಪಡುತ್ತವೆ. ನಾವು ಏನು ಮಾಡುತ್ತೇವೆಯೋ, ಮಾತನಾಡುತ್ತೇವೆಯೋ ಅದರಿಂದ ಸೈನಿಕರ ಮನಸ್ಥೈರ್ಯ ವೃದ್ಧಿಸಬೇಕು. ಅವರ ಗೌರವ ವೃದ್ಧಿಸಬೇಕು. ರಾಷ್ಟ್ರವೇ ಎಲ್ಲಕ್ಕಿಂತ ಮಿಗಿಲು ಎಂಬ ಮಂತ್ರದೊಂದಿಗೆ ಏಕತೆಯ ಸೂತ್ರದಲ್ಲಿ ಹೆಣೆದಂತಿರುವ ದೇಶವಾಸಿಗಳು ನಮ್ಮ ಸೈನಿಕರ ಶಕ್ತಿಯನ್ನು ಸಾವಿರ ಪಟ್ಟು ಹೆಚ್ಚಿಸುತ್ತಾರೆ. ಅದಕ್ಕೆಂದೇ ನಮ್ಮಲ್ಲಿ ‘ಸಂಘೆ ಶಕ್ತಿ ಕಲೌ ಯುಗೆ’ ಎಂದು ಹೇಳುತ್ತಾರಲ್ಲವೇ.
ಕೆಲವೊಮ್ಮೆ ನಾವು ಈ ಮಾತನ್ನು ಅರಿಯದೇ ನಮ್ಮ ದೇಶಕ್ಕೆ ಬಹಳಷ್ಟು ನಷ್ಟವನ್ನು ಉಂಟು ಮಾಡುವಂತಹ ವಿಷಯಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಒತ್ತು ನೀಡುತ್ತೇವೆ. ಕೆಲವೊಮ್ಮೆ ಜಿಜ್ಞಾಸೆಗೆ ಒಳಪಟ್ಟು ಫಾರ್ವರ್ಡ್ ಕೂಡಾ ಮಾಡುತ್ತೇವೆ. ಇದು ತಪ್ಪು ಎಂಬುದು ಗೊತ್ತು – ಆದರೂ ಮಾಡ್ತಾನೇ ಇರುತ್ತೇವೆ. ಈ ಮಧ್ಯೆ ಯುದ್ಧ, ಕೇವಲ ಗಡಿ ಭಾಗದಲ್ಲಿ ಮಾತ್ರನಡೆಯುವುದಿಲ್ಲ ಹಲವಾರು ರಂಗಗಳಲ್ಲೂ ಜೊತೆ ಸೇರಿ ಹೋರಾಡಲಾಗುತ್ತದೆ ಮತ್ತು ಪ್ರತಿಯೊಬ್ಬ ದೇಶವಾಸಿಯೂ ತನ್ನ ಪಾತ್ರವನ್ನು ನಿರ್ಧರಿಸಬೇಕಾಗುತ್ತದೆ. ನಾವೂ ನಮ್ಮ ಪಾತ್ರವನ್ನು, ದೇಶದ ಗಡಿ ಭಾಗದಲ್ಲಿ ದುರ್ಗಮ ಪರಿಸ್ಥಿತಿಯಲ್ಲಿ ಹೋರಾಡುತ್ತಿರುವ ಸೈನಿಕರನ್ನು ನೆನೆದು ನಿರ್ಧರಿಸಬೇಕಾಗುತ್ತದೆ.
ನನ್ನ ಪ್ರಿಯ ದೇಶಬಾಂಧವರೇ, ಕಳೆದ ಕೆಲ ತಿಂಗಳುಗಳಿಂದ ಸಂಪೂರ್ಣ ರಾಷ್ಟ್ರ ಒಗ್ಗಟ್ಟಿನಿಂದ ಕೊರೊನಾ ವಿರುದ್ಧ ಹೋರಾಡುತ್ತಿರುವುದು ಹಲವಾರು ಶಂಕೆಗಳನ್ನು ತಪ್ಪು ಎಂದು ಸಾಬೀತುಪಡಿಸಿದೆ. ಇಂದು ನಮ್ಮ ದೇಶದಲ್ಲಿ ಚೇತರಿಕೆ ದರ ಬೇರೆ ದೇಶಗಳಿಗೆ ಹೋಲಿಸಿದಲ್ಲಿ ಉತ್ತಮವಾಗಿದೆ. ಜೊತೆಗೆ ನಮ್ಮ ದೇಶದಲ್ಲಿ ಕೊರೊನಾದಿಂದಾದ ಮರಣ ಪ್ರಮಾಣ ಕೂಡ ವಿಶ್ವದ ಹೆಚ್ಚಿನ ದೇಶಗಳಿಗಿಂತ ಅತ್ಯಂತ ಕಡಿಮೆಯಿದೆ. ಒಬ್ಬ ವ್ಯಕ್ತಿಯನ್ನು ಕಳೆದುಕೊಳ್ಳುವುದು ಖಂಡಿತ ದುಃಖದ ಸಂಗತಿ. ಆದರೆ, ಲಕ್ಷಾಂತರ ದೇಶಬಾಂಧವರ ಜೀವನವನ್ನು ರಕ್ಷಿಸುವಲ್ಲಿ ಭಾರತ ಸಫಲವೂ ಆಗಿದೆ. ಆದರೆ ಸ್ನೇಹಿತರೆ, ಕೊರೊನಾ ಆತಂಕ ಇನ್ನೂ ಹೋಗಿಲ್ಲ. ಕೆಲವೊಂದು ಸ್ಥಳಗಳಲ್ಲಿ ಇದು ಬಹಳಷ್ಟು ವೇಗವಾಗಿ ಹರಡುತ್ತಿದೆ. ನಾವು ಬಹಳಷ್ಟು ಜಾಗೃತರಾಗಿರುವುದು ಅವಶ್ಯಕವಾಗಿದೆ. ಇಂದಿಗೂ ಕೊರೊನಾ ಆರಂಭದಲ್ಲಿದ್ದಷ್ಟೇ ಆಘಾತಕಾರಿಯಾಗಿದೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಅದಕ್ಕಾಗಿಯೇ, ನಾವು ಸಂಪೂರ್ಣ ಜಾಗೃತೆವಹಿಸಬೇಕು. ಮುಖಕ್ಕೆ ಮಾಸ್ಕ ಹಾಕಿಕೊಳ್ಳಬೇಕು ಅಥವಾ ಟವಲ್ ಬಳಸಬೇಕು. 2 ಗಜ ದೂರವನ್ನು ಪಾಲಿಸಬೇಕು. ನಿರಂತರ ಕೈತೊಳೆಯಬೇಕು, ಎಲ್ಲಿಯೂ ಉಗುಳಬಾರದು. ಸ್ವಚ್ಛತೆಯ ಕುರಿತು ಸಂಪೂರ್ಣ ಗಮನಹರಿಸಬೇಕು. ಇವೇ ನಮ್ಮನ್ನು ಕೊರೊನಾದಿಂದ ರಕ್ಷಿಸುವ ಅಸ್ತ್ರಗಳಾಗಿವೆ. ಒಮ್ಮೊಮ್ಮೆ ನಮಗೆ ಮಾಸ್ಕ್ ಧರಿಸುವುದರಿಂದ ಕಷ್ಟವಾಗಬಹುದು ಮತ್ತು ಮಾಸ್ಕ ತೆಗೆದುಬಿಡೋಣ ಎಂದೆನ್ನಿಸಬಹುದು. ಮಾತನಾಡಲು ಆರಂಭಿಸುತ್ತೇವೆ. ಮಾಸ್ಕ ಅತ್ಯವಶ್ಯವಾಗಿರುವಾಗಲೇ ತೆಗೆದುಬಿಡುತ್ತೇವೆ. ಇಂಥ ಸಮಯದಲ್ಲಿ ನಿಮ್ಮನ್ನು ಕೇಳಿಕೊಳ್ಳುವುದೇನೆಂದರೆ, ನಿಮಗೆ ಮಾಸ್ಕ್ ಧರಿಸುವುದರಿಂದ ಕಷ್ಟವಾದಾಗ ಮತ್ತು ಮಾಸ್ಕ ತೆಗೆದುಬಿಡೋಣ ಎಂದೆನ್ನಿಸಿದಾಗ ಒಂದು ಕ್ಷಣ ಆ ವೈದ್ಯರನ್ನು ಸ್ಮರಿಸಿಕೊಳ್ಳಿ, ಆ ಸುಶ್ರೂಷಕಿಯರನ್ನು ಸ್ಮರಿಸಿಕೊಳ್ಳಿ, ನಮ್ಮ ಕೊರೊನಾ ಯೋಧರನ್ನು ಸ್ಮರಿಸಿಕೊಳ್ಳಿ. ನಿರಂತರವಾಗಿ ನಮ್ಮೆಲ್ಲರ ಜೀವನ ಸಂರಕ್ಷಣೆಗೆ ಅವರು ಮಾಸ್ಕ್ ಧರಿಸಿ ಗಂಟೆಗಳಗಟ್ಟಲೆ ಇರುತ್ತಾರೆ. 8 – 10 ಗಂಟೆವರೆಗೆ ಮಾಸ್ಕ್ ಧರಿಸಿಯೇ ಇರುತ್ತಾರೆ. ಅವರಿಗೆ ಕಷ್ಟವಾಗಲಿಕ್ಕಿಲ್ಲವೇ? ಅವರನ್ನು ಸ್ವಲ್ಪ ಸ್ಮರಿಸಿಕೊಳ್ಳಿ, ಒಬ್ಬ ನಾಗರಿಕನಾಗಿ ಒಂದಿಷ್ಟೂ ಅಲಕ್ಷ್ಯವಹಿಸಬಾರದು, ಬೇರೆಯವರೂ ಅಲಕ್ಷ್ಯಮಾಡದಂತೆ ನೋಡಿಕೊಳ್ಳಬೇಕೆಂದು ನಿಮಗೂ ಅನ್ನಿಸುತ್ತದೆ. ಒಂದೆಡೆ ಕೊರೊನಾ ವಿರುದ್ಧದ ಯುದ್ಧವನ್ನು ಸಂಪೂರ್ಣ ಸಿದ್ಧತೆಯೊಂದಿಗೆ ಮತ್ತು ಜಾಗೃತೆಯಿಂದ ಹೋರಾಡಬೇಕಿದೆ. ಮತ್ತೊಂದೆಡೆ ಕಠಿಣ ಪರಿಶ್ರಮದಿಂದ ವ್ಯವಸಾಯ, ಉದ್ಯೋಗ, ಓದು ಯಾವುದೇ ಕರ್ತವ್ಯವನ್ನು ನಿಭಾಯಿಸುತ್ತೇವೆಯೋ ಅದರಲ್ಲಿ ವೇಗವನ್ನು ವೃದ್ಧಿಸಬೇಕಿದೆ. ಅದನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕಿದೆ. ಸ್ನೇಹಿತರೆ, ಕೊರೊನಾ ಸಂದರ್ಭದಲ್ಲಿ ನಮ್ಮ ಗ್ರಾಮೀಣ ಕ್ಷೇತ್ರ ಸಂಪೂರ್ಣ ದೇಶಕ್ಕೆ ಮಾರ್ಗ ತೋರಿದೆ. ಗ್ರಾಮಗಳ ಸ್ಥಳೀಯ ನಾಗರಿಕರ, ಗ್ರಾಮ ಪಂಚಾಯ್ತಿಗಳ, ಹಲವಾರು ಉತ್ತಮ ಪ್ರಯತ್ನಗಳು ನಿರಂತರವಾಗಿ ಕಂಡುಬರುತ್ತಿವೆ. ಜಮ್ಮುದಲ್ಲಿ ತ್ರೆವಾ ಎಂಬ ಗ್ರಾಮವಿದೆ. ಬಲಬೀರ್ ಕೌರ್ ಅವರು ಅಲ್ಲಿಯ ಸರಪಂಚರು. ಬಲಬೀರ್ ಕೌರ್ ಅವರು ತಮ್ಮ ಪಂಚಾಯ್ತಿಯಲ್ಲಿ 30 ಹಾಸಿಗೆಗಳ ಕ್ವಾರಂಟೈನ್ ಕೇಂದ್ರವನ್ನು ಸ್ಥಾಪಿಸಿದ್ದಾರೆ ಎಂದು ತಿಳಿದು ಬಂದಿದೆ. ಜನರಿಗೆ ಕೈತೊಳೆಯಲು ತೊಂದರೆಯಾಗದಂತೆ ಪಂಚಾಯ್ತಿಗೆ ಬರುವ ಮಾರ್ಗಗಳಲ್ಲಿ ನೀರಿನ ವ್ಯವಸ್ಥೆ ಮಾಡಲಾಗಿದೆ. ಇಷ್ಟೇ ಅಲ್ಲದೆ, ಸ್ವತಃ ಬಲಬೀರ್ ಕೌರ್ ಅವರು ತಮ್ಮ ಹೆಗಲ ಮೇಲೆ ಸ್ಪ್ರೇ ಪಂಪ್ ಹೊತ್ತುಕೊಂಡು ಸ್ವಯಂ ಸೇವಕರೊಂದಿಗೆ ಸೇರಿ ಸಂಪೂರ್ಣ ಪಂಚಾಯ್ತಿಯಲ್ಲಿ, ಸುತ್ತ ಮುತ್ತಲ ಪ್ರದೇಶದಲ್ಲಿ ಸ್ಯಾನಿಟೈಸೇಶನ್ ಕೆಲಸವನ್ನೂ ಮಾಡುತ್ತಾರೆ. ಇಂಥ ಇನ್ನೊಬ್ಬ ಕಾಶ್ಮೀರಿ ಮಹಿಳಾ ಸರಪಂಚರಿದ್ದಾರೆ. ಗಾಂದರ್ ಬಲ್ ನ ಚೌಂಟಲೀವಾರ್ ನ ಜೈತೂನಾ ಬೇಗಂ. ತಮ್ಮ ಪಂಚಾಯ್ತಿ ಕೊರೊನಾ ವಿರುದ್ಧ ಹೋರಾಡಲಿದೆ ಮತ್ತು ಜೀವನೋಪಾಯಕ್ಕೆ ಅವಕಾಶಗಳನ್ನೂ ಶೋಧಿಸಲಿದೆ ಎಂದು ಜೈತೂನಾ ಬೇಗಂ ಅವರು ನಿರ್ಧರಿಸಿದರು. ಅವರು ಸಂಪೂರ್ಣ ಪ್ರದೇಶದಲ್ಲಿ ಉಚಿತವಾಗಿ ಮಾಸ್ಕ ವಿತರಿಸಿದರು. ಉಚಿತ ಪಡಿತರ ಹಂಚಿದರು. ಜೊತೆಗೆ ಜನರಿಗೆ ಕೃಷಿಯಲ್ಲಿ ತೋಟಗಾರಿಕೆಯಲ್ಲಿ ತೊಂದರೆಯಾಗದಂತೆ ಬೀಜಗಳನ್ನು ಮತ್ತು ಸೇಬಿನ ಸಸಿಗಳನ್ನು ನೀಡಿದರು. ಸ್ನೇಹಿತರೆ, ಕಾಶ್ಮೀರದ ಮತ್ತೊಂದು ಪ್ರೇರಣಾದಾಯಕ ಘಟನೆಯಿದೆ. ಇಲ್ಲಿಯ ಅನಂತನಾಗ್ ನಗರಸಭೆ ಅಧ್ಯಕ್ಷರು ಶ್ರೀಯುತ ಮೊಹಮ್ಮದ್ ಇಕ್ಬಾಲ್ ಅವರು. ತಮ್ಮ ಪ್ರದೇಶದಲ್ಲಿ ಸ್ಯಾನಿಟೈಸೇಶನ್ ಗಾಗಿ ಸ್ಪ್ರೇಯರ್ ಅವಶ್ಯಕತೆಯಿತ್ತು. ಅವರು ಮಾಹಿತಿ ಕಲೆಹಾಕಿದಾಗ ಬೇರೆ ನಗರದಿಂದ ಯಂತ್ರವನ್ನು ತರಬೇಕೆಂದು ಮತ್ತು ಅದರ ಬೆಲೆ 6 ಲಕ್ಷ ರೂಪಾಯಿ ಎಂದು ತಿಳಿಯಿತು. ಶ್ರೀಯುತ ಇಕ್ಬಾಲ್ ಅವರು. ಸ್ವತಃ ಪ್ರಯತ್ನದಿಂದ ತಾವೇ ಕೇವಲ 50 ಸಾವಿರ ರೂಪಾಯಿಯಲ್ಲಿ ಸ್ಪ್ರೇಯರ್ ಯಂತ್ರವನ್ನು ಸಿದ್ಧಪಡಿಸಿಕೊಂಡರು. ದೇಶದಲ್ಲಿ ಇಂಥ ಇನ್ನೂ ಹಲವಾರು ವಿಷಯಗಳಿವೆ. ಇಂಥ ಪ್ರೇರಣಾತ್ಮಕ ಘಟನೆಗಳು ಪ್ರತಿದಿನ ನಮ್ಮ ಮುಂದೆ ಕಂಡುಬರುತ್ತವೆ. ಇವರೆಲ್ಲರೂ ಅಭಿನಂದನೆಗೆ ಪಾತ್ರರಾಗಿದ್ದಾರೆ. ಸವಾಲುಗಳು ಎದುರಾದವು ಆದರೆ ಜನರು ಅಷ್ಟೇ ಶಕ್ತಿಯಿಂದ ಅದನ್ನು ಎದುರಿಸಿದರು.
ನನ್ನ ಪ್ರಿಯ ದೇಶಬಾಂಧವರೆ, ಸೂಕ್ತ ಸ್ಪಂದನೆಯಿಂದ ಮತ್ತು ಸಕಾರಾತ್ಮಕ ಕ್ರಮಗಳಿಂದ ಸದಾ ಆಪತ್ತನ್ನು ಅವಕಾಶಗಳಾಗಿ ಮತ್ತು ವಿಪತ್ತನ್ನು ವಿಕಾಸದ ರೂಪದಲ್ಲಿ ಬದಲಿಸಲು ಬಹಳ ಸಹಾಯಕವಾಗುತ್ತದೆ. ಇದೀಗ ಕೊರೊನಾ ಸಮಯದಲ್ಲಿ ಹೇಗೆ ನಮ್ಮ ದೇಶದ ಯುವಜನತೆ ಮತ್ತು ಮಹಳೆಯರು ತಮ್ಮ ಕೌಶಲ್ಯದಿಂದ ಕೆಲವಾರು ಹೊಸ ಪ್ರಯೋಗಗಳಿಗೆ ಮುಂದಾಗಿದ್ದಾರೆ ಎಂಬುದನ್ನು ನಾವು ನೋಡುತ್ತಿದ್ದೇವೆಕಾಣುತ್ತಿದ್ದೇವೆ. ಬಿಹಾರದ ಕೆಲವೊಂದು ಮಹಿಳಾ ಸ್ವಸಹಾಯ ಗುಂಪುಗಳು ಮಧುಬನಿ ಪೇಂಟಿಂಗ್ ಇರುವ ಮಾಸ್ಕಗಳ ತಯಾರಿಕೆಗೆ ಮುಂದಾಗಿದ್ದಾರೆ. ನೋಡ ನೋಡುತ್ತಿದ್ದಂತೆ ಅವರು ಬಹಳ ಪ್ರಸಿದ್ಧಿಯನ್ನು ಪಡೆದರು. ಈ ಮಧುಬನಿ ಮಾಸ್ಕ್ ಗಳು ಒಂದು ರೀತಿ ನಮ್ಮ ಪರಂಪರೆಯನ್ನು ಸಾರುತ್ತವೆ ಜೊತೆಗೆ ಜನರಿಗೆ ಆರೋಗ್ಯದೊಂದಿಗೆ ಉದ್ಯೋಗವನ್ನೂ ದೊರಕಿಸಿಕೊಟ್ಟಿದೆ.
ಈಶಾನ್ಯ ಭಾಗದಲ್ಲಿ ಬಿದಿರು ಎಷ್ಟು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತದೆ ಎಂಬುದು ನಿಮಗೆನಿಮಗೆ ಗೊತ್ತು. ಈಗ ಇದೇ ಬಿದಿರಿನಿಂದ ಅಸ್ಸಾಂ, ತ್ರಿಪುರಾ ಮತ್ತು ಮಣಿಪುರದ ಜನತೆ ಉತ್ತಮ ಗುಣಮಟ್ಟದ ನೀರಿನ ಬಾಟಲಿಗಳು ಮತ್ತು ಊಟದ ಡಬ್ಬಿಗಳನ್ನು ತಯಾರಿಸುತ್ತಿದ್ದಾರೆ. ಇದರ ಗುಣಮಟ್ಟವನ್ನು ನೀವು ನೋಡಿದಲ್ಲಿ ಇಷ್ಟು ಉತ್ತಮ ಮಟ್ಟದ ಬಿದಿರಿನ ಉತ್ಪನ್ನಗಳಿರಲು ಸಾಧ್ಯವೇ ಎಂದು ಆಶ್ಚರ್ಯವಾಗಬಹುದು. ಈ ಬಾಟಲಿಗಳು ಪರಿಸರ ಸ್ನೇಹಿಯೂ ಆಗಿವೆ. ಇವುಗಳನ್ನು ಸಿದ್ಧಪಡಿಸುವಾಗ, ಬಿದಿರನ್ನು ಬೇವು ಮತ್ತು ಇತರ ಔಷಧೀಯ ಸಸ್ಯಗಳಲ್ಲಿ ಕುದಿಸಲಾಗುತ್ತದೆ. ಇದರಿಂದ ಇವುಗಳಲ್ಲಿ ಔಷಧೀಯ ಗುಣಗಳೂ ಸೇರಿಕೊಳ್ಳುತ್ತವೆ.
ಸಣ್ಣ ಸಣ್ಣ ಸ್ಥಳೀಯ ಉತ್ಪನ್ನಗಳಿಂದ ಹೇಗೆ ದೊಡ್ಡ ಸಫಲತೆ ದೊರೆಯುತ್ತದೆ ಎಂಬುದಕ್ಕೆ ಜಾರ್ಖಂಡ್ ನಿಂದಲೂ ಒಂದು ಉದಾಹರಣೆ ನಮಗೆ ದೊರೆಯುತ್ತದೆ. ಜಾರ್ಖಂಡ್ ನ ಬಿಶುನ್ ಪುರ್ ನಲ್ಲಿ ಈ ಮಧ್ಯೆ 30 ಕ್ಕಿಂತ ಹೆಚ್ಚು ಸಂಘಗಳು ಸೇರಿ ಲೆಮನ್ ಗ್ರಾಸ್ ಕೃಷಿಯಲ್ಲಿ ತೊಡಗಿದ್ದಾರೆ. ಲೆಮನ್ ಗ್ರಾಸ್ 4 ತಿಂಗಳಲ್ಲಿ ಕಟಾವಿಗೆ ಸಿದ್ಧಗೊಳ್ಳುತ್ತದೆ. ಇದರ ತೈಲಕ್ಕೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭ್ಯ. ಈ ಮಧ್ಯೆ ಇದರ ಬೇಡಿಕೆಯೂ ಹೆಚ್ಚಿದೆ. ನಾನು, ದೇಶದ 2 ಸ್ಥಳಗಳ ಬಗ್ಗೆಯೂ ಮಾತನಾಡಬಯಸುತ್ತೇನೆ. ಎರಡೂ ಒಂದಕ್ಕೊಂದು ಸಾವಿರಾರು ಕೀ ಮೀ ದೂರವಿವೆ. ತಮ್ಮದೇ ರೀತಿಯಲ್ಲಿ ಭಾರತವನ್ನು ಸ್ವಾವಲಂಬಿಯಾಗಿಸಲು ವಿಭಿನ್ನವಾಗಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಲದ್ದಾಖ್ ಮತ್ತೊಂದು ಕಛ್. ಲೇಹ್-ಲದ್ದಾಖ್ ಹೆಸರು ಬಂದರೆ ಸಾಕು ಸುಂದರ ಪರ್ವತ ಶ್ರೇಣಿ ಮತ್ತು ಎತ್ತರದ ಬೆಟ್ಟ ಪ್ರದೇಶಗಳ ನೋಟ ಕಣ್ಣ ಮುಂದೆ ತೇಲುತ್ತವೆ. ತಾಜಾ ತಂಗಾಳಿಯ ತಂಪು ಅನುಭವವಾಗುತ್ತದೆ, ಕಛ್ ಹೆಸರು ಕೇಳಿದರೆ ಸಾಕು ದೂರ ದೂರದವರೆಗೆ ಮರುಭೂಮಿ, ಎಲ್ಲೂ ಗಿಡಮರಗಳ ಕುರುಹೂ ಕಾಣುವುದಿಲ್ಲ. ಇದೆಲ್ಲವೂ ಕಣ್ಣ ಮುಂದೆ ಸುಳಿಯುತ್ತದೆ. ಲದ್ದಾಖ್ ನಲ್ಲಿ ಒಂದು ವಿಶಿಷ್ಟ ಹಣ್ಣಿದೆ. ಅದರ ಹೆಸರು ಚೂಲೀ ಅಥವಾ ಏಪ್ರಿಕಾಟ್ ಅಥವಾ ಖುಬಾನಿ. ಈ ಫಸಲು, ಈ ಕ್ಷೇತ್ರದ ಅರ್ಥ ವ್ಯವಸ್ಥೆಯನ್ನು ಸುಧಾರಿಸುವ ಸಾಮರ್ಥ್ಯ ಹೊಂದಿದೆ ಆದರೆ, ಸರಬರಾಜು ಸರಪಳಿ, ವಾತಾವರಣದ ಏರುಪೇರಿನಂಥ ಹಲವಾರು ಸವಾಲುಗಳನ್ನು ಎದುರಿಸುತ್ತಿರುತ್ತದೆ ಎಂಬುದು ವಿಷಾದದ ಸಂಗತಿ. ಇದರಿಂದಾಗುವ ನಷ್ಟವನ್ನು ತಗ್ಗಿಸಲು ಈ ಮಧ್ಯೆ ಒಂದು ಹೊಸ ಆವಿಷ್ಕಾರ ಬಳಕೆಗೆ ಬಂದಿದೆ. ಇದು ಒಂದು ಡುವೆಲ್ ಸಿಸ್ಟೆಮ್ ಆಗಿದೆ. ಇದರ ಹೆಸರು ಸೋಲಾರ್ ಏಪ್ರಕಾಟ್ ಡ್ರೈಯರ್ ಮತ್ತು ಸ್ಪೇಸ್ ಹೀಟರ್. ಇದು ಖುಬಾನಿ, ಇತರ ಹಣ್ಣುಗಳು ಮತ್ತು ತರಕಾರಿಗಳನ್ನು ಅವಶ್ಯಕತೆಗನುಸಾರ ಹೈಜಿನಿಕ್ ರೂಪದಲ್ಲಿ ಒಣಗಿಸುತ್ತದೆ. ಈ ಹಿಂದೆ ಖುಬಾನಿಯನ್ನು ಗದ್ದೆಗಳ ಪಕ್ಕದಲ್ಲಿ ಒಣಗಿಸುವಾಗ ನಷ್ಟವಂತೂ ಆಗುತ್ತಿತ್ತು ಜೊತೆಗೆ ಧೂಳು ಮತ್ತು ಮಳೆ ನೀರಿನಿಂದಾಗಿ ಹಣ್ಣಿನ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತಿತ್ತು. ಇನ್ನೊಂದೆಡೆ ಈ ಮಧ್ಯೆ ಕಛ್ ನಲ್ಲಿ ಡ್ರ್ಯಾಗನ್ ಹಣ್ಣಿನ ಕೃಷಿಗಾಗಿ ಅಭಿನಂದನಾರ್ಹ ಪ್ರಯತ್ನ ಮಾಡುತ್ತಿದ್ದಾರೆ. ಕಛ್-ಡ್ರ್ಯಾಗನ್ ಹಣ್ಣು ಎಂದು ಕೇಳಿದಾಗ ಬಹಳಷ್ಟು ಜನರು ಆಶ್ಚರ್ಯಪಡುತ್ತಾರೆ. ಆದರೆ ಇಂದು ಅಲ್ಲಿ ಹಲವಾರು ಕೃಷಿಕರು ಈ ಕೆಲಸದಲ್ಲಿ ತೊಡಗಿದ್ದಾರೆ. ಹಣ್ಣಿನ ಗುಣಮಟ್ಟ ಮತ್ತು ಕಡಿಮೆ ಭೂಮಿಯಲ್ಲಿ ಹೆಚ್ಚಿನ ಉತ್ಪಾದನೆ ಸಾಧಿಸಲು ಸಾಕಷ್ಟು ಆವಿಷ್ಕಾರಗಳು ನಡೆದಿವೆ. ಡ್ರ್ಯಾಗನ್ ಹಣ್ಣಿನ ಜನಪ್ರೀಯತೆ ನಿರಂತರವಾಗಿ ಹೆಚ್ಚುತ್ತಾ ಸಾಗಿದೆ ಎಂದು ನನಗೆ ತಿಳಿಸಲಾಗಿದೆ. ವಿಶೇಷವಾಗಿ ತಿಂಡಿಗಳಲ್ಲಿ ಇದರ ಬಳಕೆ ಹೆಚ್ಚಿದೆ. ದೇಶಕ್ಕೆ ಡ್ರ್ಯಾಗನ್ ಹಣ್ಣು ಆಮದು ಮಾಡಿಕೊಳ್ಳುವ ಪ್ರಮೇಯ ಬರಬಾರದು ಎಂಬುದು ಕಛ್ ನ ಕೃಷಿಕರ ಸಂಕಲ್ಪವಾಗಿದೆ. ಇದೇ ಸ್ವಾವಲಂಬನೆಯ ಮಾತಲ್ಲವೇ!
ಸ್ನೇಹಿತರೆ, ನಾವು ಏನಾದರೂ ಹೊಸತನ್ನು ಮಾಡಲು ಯೋಚಿಸಿದಾಗ ಆವಿಷ್ಕಾರಕವಾದದ್ದನ್ನು ಆಲೋಚಿಸುತ್ತೇವೆ. ಆಗ ಸಾಮಾನ್ಯವಾಗಿ ಯಾರೂ ಊಹಿಸಲಾರದಂಥ ಕೆಲಸ ಕೂಡ ಸಾಧ್ಯವಾಗುತ್ತದೆ, ಬಿಹಾರದ ಕೆಲ ಯುವಕರನ್ನೇ ತೆಗೆದುಕೊಳ್ಳಿ. ಹಿಂದೆ ಇವರು ಸಾಮಾನ್ಯ ಉದ್ಯೋಗದಲ್ಲಿದ್ದರು. ಒಂದು ದಿನ ಅವರು ಮುತ್ತಿನ ಕೃಷಿ ಬಗ್ಗೆ ಆಲೋಚಿಸಿದರು. ಅವರ ಕ್ಷೇತ್ರದಲ್ಲಿ ಜನರಿಗೆ ಈ ಕುರಿತು ಹೆಚ್ಚು ಮಾಹಿತಿಯೇನೂ ಇರಲಿಲ್ಲ. ಆದರೆ ಇವರು ಮೊದಲು ಎಲ್ಲ ಮಾಹಿತಿ ಕಲೆಹಾಕಿದರು. ಜೈಪುರ ಮತ್ತು ಭುವನೇಶ್ವರಕ್ಕೆ ತೆರಳಿ ತರಬೇತಿ ಪಡೆದರು ಮತ್ತು ತಮ್ಮ ಗ್ರಾಮದಲ್ಲೇ ಮುತ್ತಿನ ಕೃಷಿ ಆರಂಭಿಸಿದರು. ಇಂದು ಸ್ವತಃ ಅವರು ಇದರಿಂದ ಸಾಕಷ್ಟು ಆದಾಯಗಳಿಸುತ್ತಿದ್ದಾರೆ, ಅಲ್ಲದೇ ಮುಝಫರ್ ಪುರ್, ಬೇಗೂಸರಾಯ್ ಮತ್ತು ಪಾಟ್ನಾದಲ್ಲಿ ಬೇರೆ ರಾಜ್ಯಗಳಿಂದ ಮರಳಿ ಬಂದ ವಲಸಿಗ ಕಾರ್ಮಿಕರಿಗೆ ಇದರ ತರಬೇತಿ ನೀಡುವುದನ್ನೂ ಆರಂಭಿಸಿದ್ದಾರೆ. ಎಷ್ಟೋ ಜನರಿಗೆ ಇದರಿಂದ ಸ್ವಾವಲಂಬಿ ಮಾರ್ಗ ತೆರೆದಂತಾಗಿದೆ.
ಸ್ನೇಹಿತರೆ, ಕೆಲ ದಿನಗಳ ನಂತರ ರಕ್ಷಾ ಬಂಧನದ ಪವಿತ್ರ ಹಬ್ಬ ಬರುತ್ತಿದೆ. ಈ ಮಧ್ಯೆ ಬಹಳಷ್ಟು ಜನರು ಮತ್ತು ಸಂಸ್ಥೆಗಳು ಈ ಬಾರಿ ರಕ್ಷಾ ಬಂಧನವನ್ನು ವಿಭಿನ್ನ ರೀತಿಯಲ್ಲಿ ಆಚರಿಸುವ ಅಭಿಯಾನವನ್ನು ಆರಂಭಿಸಿದ್ದಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ಹಲವಾರು ಜನರು ಇದನ್ನು ವೋಕಲ್ ಫಾರ್ ಲೋಕಲ್ (ಸ್ಥಳೀಯತೆಗಾಗಿ ಧ್ವನಿ ಎತ್ತಿ) ನೊಂದಿಗೂ ಜೋಡಿಸುತ್ತಿದ್ದಾರೆ. ಇದು ಸೂಕ್ತವಾಗಿಯೂ ಇದೆ. ನಮ್ಮ ಹಬ್ಬಗಳು, ನಮ್ಮ ಸಮಾಜದ, ನಮ್ಮ ಮನೆಯ ಹತ್ತಿರದ ಯಾವುದೇ ವ್ಯಕ್ತಿಯ ವ್ಯಾಪಾರ ವೃದ್ಧಿಸಿದಲ್ಲಿ ಅವರ ಹಬ್ಬವೂ ಸಂತೋಷದಾಯಕವಾಗುತ್ತದೆ ಎಂದಾದಲ್ಲಿ ಹಬ್ಬದ ಆನಂದ ಇಮ್ಮಡಿಗೊಳ್ಳುತ್ತದೆ. ಸಮಸ್ತ ದೇಶಬಾಂಧವರಿಗೆ ರಕ್ಷಾ ಬಂಧನದ ಶುಭಹಾರೈಕೆಗಳು.
ಸ್ನೇಹಿತರೆ, ಆಗಸ್ಟ್ 7 ಕ್ಕೆ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯಿದೆ. ಭಾರತದ ಕೈಮಗ್ಗ ಮತ್ತು ನಮ್ಮ ಕರಕುಶಲ ವಸ್ತುಗಳು ಹಲವಾರು ವರ್ಷಗಳ ಗೌರವಯುತ ಇತಿಹಾಸವನ್ನು ಹೊಂದಿವೆ. ಭಾರತೀಯ ಕೈಮಗ್ಗ ಮತ್ತು ಕರಕುಶಲ ವಸ್ತುಗಳನ್ನು ಹೆಚ್ಚೆಚ್ಚು ಬಳಕೆ ಮಾಡುವುದಷ್ಟೇ ಅಲ್ಲ ಇದರ ಬಗ್ಗೆ ಹೆಚ್ಚೆಚ್ಚು ಜನರಿಗೆ ತಿಳಿಸುವುದು ನಮ್ಮೆಲ್ಲರ ಪ್ರಯತ್ನವಾಗಬೇಕು. ಭಾರತದ ಕೈಮಗ್ಗ, ಮತ್ತು ಕರಕುಶಲ ವಸ್ತುಗಳು ಬಹಳ ಶ್ರೀಮಂತವಾಗಿವೆ, ಇವುಗಳಲ್ಲಿ ಬಹಳಷ್ಟು ವಿವಿಧತೆಯಿದೆ, ವಿಶ್ವ ಹೆಚ್ಚೆಚ್ಚು ಇವುಗಳ ಬಗ್ಗೆ ಅರಿತಂತೆ ಅಷ್ಟಷ್ಟು ಸ್ಥಳೀಯ ಕುಶಲಕರ್ಮಿಗಳು ಮತ್ತು ನೇಕಾರರಿಗೆ ಲಾಭವಾಗುತ್ತದೆ.
ಸ್ನೇಹಿತರೆ, ಅದರಲ್ಲೂ ವಿಶೇಷವಾಗಿ ನನ್ನ ಯುವ ಸ್ನೇಹಿತರೆ, ನಮ್ಮ ದೇಶ ಬದಲಾಗುತ್ತಿದೆ. ಹೇಗೆ ಬದಲಾಗುತ್ತಿದೆ? ಎಷ್ಟು ವೇಗವಾಗಿ ಬದಲಾಗುತ್ತಿದೆ? ಎಂಥೆಂಥ ಕ್ಷೇತ್ರಗಳಲ್ಲಿ ಬದಲಾಗುತ್ತಿದೆ? ಒಂದು ಸಕಾರಾತ್ಮಕ ವಿಚಾರದೊಂದಿಗೆ ಅವಲೋಕನಗೈದಾಗ ನಾವೇ ಸ್ವತಃ ಆಶ್ಚರ್ಯಚಕಿತಗೊಳ್ಳುತ್ತೇವೆ. ಒಂದು ಕಾಲದಲ್ಲಿ ಕ್ರೀಡೆ ಮತ್ತಿತರ ಕ್ಷೇತ್ರಗಳಲ್ಲಿ ಹೆಚ್ಚು ಜನರು ದೊಡ್ಡ ದೊಡ್ಡ ನಗರಗಳಿಂದ ಬಂದವರಾಗಿರುತ್ತಿದ್ದರು ಇಲ್ಲವೆ ದೊಡ್ಡ ಕುಟುಂಬಗಳ ಅಥವಾ ಹೆಸರಾಂತ ಶಾಲೆ ಕಾಲೇಜುಗಳಿಂದ ಬಂದವರಾಗಿರುತ್ತಿದ್ದರು. ಈಗ ದೇಶ ಬದಲಾಗುತ್ತಿದೆ. ಗ್ರಾಮಗಳಿಂದ, ಸಣ್ಣ ಪುಟ್ಟ ನಗರಗಳಿಂದ ಸಾಮಾನ್ಯ ಕುಟುಂಬಗಳಿಂದ ನಮ್ಮ ಯುವಜನತೆ ಮುಂದೆ ಬರುತ್ತಿದ್ದಾರೆ. ಸಫಲತೆಯ ಹೊಸ ಉತ್ತುಂಗವನ್ನು ತಲುಪುತ್ತಿದ್ದಾರೆ. ಇವರು ಸಂಕಷ್ಟಗಳ ಮಧ್ಯೆಯೂ ಹೊಸ ಕನಸುಗಳನ್ನು ಹೆಣೆಯುತ್ತಾ ಮುಂದೆ ಸಾಗಿದ್ದಾರೆ. ಇತ್ತೀಚೆಗೆ ಬಂದ ಬೋರ್ಡ್ ಪರೀಕ್ಷೆಯ ಫಲಿತಾಂಶದಲ್ಲಿಯೂ ಇದು ಕಂಡುಬಂದಿದೆ. ಇಂದು ಮನದ ಮಾತಿನಲ್ಲಿ ನಾವು ಇಂಥ ಕೆಲವು ಪ್ರತಿಭಾವಂತ ಮಕ್ಕಳೊಂದಿಗೆ ಮಾತನಾಡೋಣ. ಇಂಥ ಒಬ್ಬ ಪ್ರತಿಭಾವಂತ ಹೆಣ್ಣು ಮಗಳು ಕೃತ್ತಿಕಾ ನಾಂದಲ್. ಕೃತ್ತಿಕಾ ಹರಿಯಾಣದ ಪಾಣಿಪತ್ ನಿವಾಸಿ
ಮೋದಿಜಿ: ಹಲೋ ಕೃತ್ತಿಕಾ ಅವರೆ ನಮಸ್ಕಾರ
ಕೃತ್ತಿಕಾ: ನಮಸ್ತೆ ಸರ್
ಮೋದಿಜಿ: ಇಷ್ಟೊಂದು ಉತ್ತಮ ಫಲಿತಾಂಶಕ್ಕೆ ನಿಮಗೆ ಅನಂತ ಅನಂತ ಶುಭಾಷಯಗಳು
ಕೃತ್ತಿಕಾ: ಧನ್ಯವಾದ ಸರ್
ಮೋದಿಜಿ: ನಿಮಗೆ ಈ ಮಧ್ಯೆ ಫೋನ್ ರಿಸೀವ್ ಮಾಡಿ ದಣಿದಿರಬಹುದು. ಬಹಳಷ್ಟು ಜನರ ಫೋನ್ ಬರುತ್ತಿರಬಹುದು
ಕೃತ್ತಿಕಾ: ಹೌದು ಸರ್
ಮೋದಿಜಿ: ಶುಭಾಷಯ ಕೋರುವವರು ನೀವು ಅವರಿಗೆ ಪರಿಚಯ ಎಂಬ ಬಗ್ಗೆ ಹೆಮ್ಮೆ ಪಡುತ್ತಿರಬಹುದು. ನಿಮಗೆ ಹೇಗನ್ನಿಸುತ್ತದೆ.
ಕೃತ್ತಿಕಾ: ಸರ್ ತುಂಬಾ ಖುಷಿಯಾಗುತ್ತದೆ. ಪಾಲಕರಿಗೆ ಹೆಮ್ಮೆಯೆನಿಸುವಂತೆ ನನಗೂ ತುಂಬಾ ಹೆಮ್ಮೆಯೆನಿಸುತ್ತದೆ.
ಮೋದಿಜಿ: ಆಗಲಿ ನಿಮಗೆ ಪ್ರೇರಣೆ ನೀಡಿದವರಾರು?
ಕೃತ್ತಿಕಾ: ನನ್ನ ಪ್ರೇರಣೆ ನನ್ನ ತಾಯಿ ಸರ್
ಮೋದಿಜಿ: ಹೌದಾ, ನೀವು ನಿಮ್ಮ ತಾಯಿಯಿಂದ ನೀವು ಏನೇನು ಕಲಿಯುತ್ತಿದ್ದೀರಿ?
ಕೃತ್ತಿಕಾ: ಸರ್, ಅವರು ತಮ್ಮ ಜೀವನದಲ್ಲಿ ಎಷ್ಟೊಂದು ಕಷ್ಟ ನುಭವಿಸಿದ್ದಾರೆ ಆದರೂ ಅವರು ತುಂಬಾ ಧೈರ್ಯವಂತರೂ ಮತ್ತು ಆತ್ಮ ಸ್ಥೈರ್ಯ ಹೊಂದಿದವರಾಗಿದ್ದಾರೆ ಸರ್. ಅವರಿಂದ ನಾನು ಎಷ್ಟು ಪ್ರೇರಿತಳಾಗಿದ್ದೇನೆ ರಣೆ ದೊರೆಯುತ್ತಿದೆ ಎಂದರೆ ನಾನೂ ಅವರಂತಾಗಬಯಸುತ್ತೇನೆ.
ಮೋದಿಜಿ: ನಿಮ್ಮ ತಾಯಿ ಎಷ್ಟು ಓದಿದ್ದಾರೆ
ಕೃತ್ತಿಕಾ: ಸರ್ ಅವರು ಬಿ ಎ ಓದಿದ್ದಾರೆ
ಮೋದಿಜಿ : ಬಿ ಎ ಓದಿದ್ದಾರೆ
ಕೃತ್ತಿಕಾ: ಹೌದು ಸರ್
ಮೋದಿಜಿ: ಹೌದಾ, ಹಾಗಾದರೆ ಅಮ್ಮ ನಿಮಗೆ ಪಾಠವನ್ನೂ ಹೇಳಿಕೊಡುತ್ತಾರೆ.
ಕೃತ್ತಿಕಾ: ಹೌದು ಸರ್, ವ್ಯಾವಹಾರಿಕ ಜ್ಞಾನವನ್ನು ಹೇಳಿಕೊಡುತ್ತಾರೆ
ಮೋದಿಜಿ: ಗದರುತ್ತಲೂ ಇರಬಹುದಲ್ಲವೆ
ಕೃತ್ತಿಕಾ : ಹೌದು ಸರ್, ಗದರುತ್ತಾರೆ
ಮೋದಿಜಿ: ಮುಂದೆ ನೀವೇನು ಮಾಡಬಯಸುತ್ತೀರಾ?
ಕೃತ್ತಿಕಾ : ನಾನು ವೈದ್ಯಳಾಗಬಯಸುತ್ತೇನೆ.
ಮೋದಿಜಿ : ತುಂಬಾ ಒಳ್ಳೆಯದು
ಕೃತ್ತಿಕಾ: ಎಂ ಬಿ ಬಿ ಎಸ್
ಮೋದಿಜಿ : ನೋಡಿ ವೈದ್ಯರಾಗುವುದು ಸುಲಭದ ಮಾತಲ್ಲ!
ಕೃತ್ತಿಕಾ : ಹೌದು ಸರ್,
ಮೋದಿಜಿ : ಡಿಗ್ರಿಯಂತೂ ನಿಮಗೆ ಲಭಿಸುತ್ತದೆ. ಏಕೆಂದರೆ ನೀವು ತುಂಬಾ ಮೇಧಾವಿ. ಆದರೆ ವೈದ್ಯರ ಜೀವನ ಸಮಾಜಕ್ಕೆ ಸಮರ್ಪಿತವಾಗಿರುತ್ತದೆ
ಕೃತ್ತಿಕಾ : ಹೌದು ಸರ್,
ಮೋದಿ – ಅವರಿಗಂತೂ ರಾತ್ರಿಗಳಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ರೋಗಿಯಿಂದ ದೂರವಾಣಿ ಕರೆ ಬರುತ್ತದೆ, ಕೆಲವೊಮ್ಮೆ ಆಸ್ಪತ್ರೆಯಿಂದ ಕರೆ ಬರುತ್ತದೆ ಆಗ ಅಲ್ಲಿಗೆ ಓಡಬೇಕಾಗುತ್ತದೆ. ಒಂದುರೀತಿಯಲ್ಲಿ ಹೇಳಬೇಕೆಂದರೆ, ದಿನದ 24 ಗಂಟೆಗಳ ಕಾಲ, ವರ್ಷದ 365 ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ವೈದ್ಯರ ಜೀವನ ಯಾವಾಗಲೂ ಜನರ ಸೇವೆಯಲ್ಲಿ ತೊಡಗಿರುವುದೇ ಆಗಿದೆ.
ಕೃತ್ತಿಕಾ – ಹೌದು ಸರ್
ಮೋದಿ – ಮತ್ತು ಅಪಾಯವೂ ಇರುತ್ತದೆ, ಏಕೆಂದರೆ ಯಾವ ರೀತಿಯ ಕಾಯಿಲೆ ಇರುತ್ತದೆಯೆಂದು ಗೊತ್ತೇ ಆಗುವುದಿಲ್ಲ, ವೈದ್ಯರ ಎದುರು ಕೂಡಾ ಬಹಳ ದೊಡ್ಡ ಬಿಕ್ಕಟ್ಟು ಇರುತ್ತದೆ.
ಕೃತ್ತಿಕಾ – ಹೌದು ಸರ್
ಮೋದಿ – ನೋಡಿ ಕೃತ್ತಿಕಾ, ಹರಿಯಾಣಾ ಯಾವಾಗಲೂ ಕ್ರೀಡೆಗಳಲ್ಲಿ ಇಡೀ ಭಾರತ ದೇಶಕ್ಕೆ ಪ್ರೇರಣೆ ನೀಡುವ, ಪ್ರೋತ್ಸಾಹ ನೀಡುವ ರಾಜ್ಯವಾಗಿದೆ.
ಕೃತ್ತಿಕಾ – ನಿಜ ಸರ್
ಮೋದಿ – ನೀವು ಕೂಡಾ ಯಾವುದಾದರೂ ಕ್ರೀಡೆಯಲ್ಲಿ ಭಾಗವಹಿಸುತ್ತಿರುತ್ತೀರಾ, ನಿಮಗೆ ಕೆಲವು ಕ್ರೀಡೆಗಳೆಂದರೆ ಇಷ್ಟವೇ?
ಕೃತ್ತಿಕಾ – ಶಾಲೆಯಲ್ಲಿ ಬಾಸ್ಕೆಟ್ ಬಾಲ್ ಆಡುತ್ತಿದ್ದೆ
ಮೋದಿ – ಹೌದಾ, ನಿಮ್ಮ ಎತ್ತರ ಎಷ್ಟು, ಎತ್ತರ ಹೆಚ್ಚೇ
ಕೃತ್ತಿಕಾ – ಇಲ್ಲ ಸರ್, ಐದು ಎರಡು ಇದ್ದೇನೆ
ಮೋದಿ – ಹೌದಾ, ಆಟದಲ್ಲಿ ನಿಮ್ಮನ್ನು ಇಷ್ಟ ಪಡುತ್ತಾರಾ?
ಕೃತ್ತಿಕಾ – ಸರ್ ನನಗೆ ಆಟದಲ್ಲಿ ಒಲವಿದೆ, ಅದಕ್ಕೆ ಆಡುತ್ತೇನೆ ಅಷ್ಟೇ
ಮೋದಿ – ಸರಿ ಸರಿ. ಕೃತ್ತಿಕಾ ಅವರೆ ನಿಮ್ಮ ಮಾತೃಶ್ರೀ ಅವರಿಗೆ ನನ್ನ ನಮಸ್ಕಾರಗಳನ್ನು ತಿಳಿಸಿ. ಅವರು ನಿಮ್ಮನ್ನು ಇಷ್ಟು ಯೋಗ್ಯರನ್ನಾಗಿ ಮಾಡಿದ್ದಾರೆ. ನಿಮ್ಮ ಜೀವನವನ್ನು ರೂಪಿಸಿದ್ದಾರೆ. ನಿಮ್ಮ ತಾಯಿಯವರಿಗೆ ನಮನಗಳು ಮತ್ತು ನಿಮಗೆ ಅನೇಕಾನೇಕ ಅಭಿನಂದನೆ ಮತ್ತು ಶುಭಾಕಾಂಕ್ಷೆಗಳು.
ಕೃತ್ತಿಕಾ – ಧನ್ಯವಾದ ಸರ್
ಬನ್ನಿ . ಈಗ ನಾವು ಕೇರಳದ ಎರ್ನಾಕುಲಮ್ ಗೆ ಹೋಗೋಣ. ಕೇರಳದ ಯುವಕನೊಂದಿಗೆ ಮಾತನಾಡೋಣ.
ಮೋದಿ - ಹಲೋ
ವಿನಾಯಕ್ – ಹಲೋ ಸರ್ ನಮಸ್ಕಾರ
ಮೋದಿ – ವಿನಾಯಕ್ ಅವರೇ, ಅಭಿನಂದನೆ
ವಿನಾಯಕ್ - ಸರ್, ಧನ್ಯವಾದ ಸರ್
ಮೋದಿ – ಶಭಾಷ್ ವಿನಾಯಕ್, ಶಭಾಷ್
ವಿನಾಯಕ್ – ಸರ್, ಧನ್ಯವಾದ ಸರ್,
ಮೋದಿ –ಉತ್ಸಾಹ ಹೇಗಿದೆ (how is the जोश)
ವಿನಾಯಕ್ – ಅತ್ಯಂತ ಹೆಚ್ಚಾಗಿದೆ ಸರ್ (High sir)
ಮೋದಿ – ನೀವು ಯಾವುದಾದರೂ ಕ್ರೀಡೆ ಆಡುತ್ತೀರಾ?(Do you play any sport?)
ವಿನಾಯಕ್ – ಬ್ಯಾಡ್ಮಿಂಟನ್.
ಮೋದಿ - ಬ್ಯಾಡ್ಮಿಂಟನ್
ವಿನಾಯಕ್ – ಹೌದು ಸರ್.
ಮೋದಿ – ಶಾಲೆಯಲ್ಲಿ ಅಥವಾ ಯಾವುದಾದರೂ ತರಬೇತಿ ಪಡೆಯಲು ನಿಮಗೆ ಅವಕಾಶ ದೊರೆತಿತ್ತೇ? (In a school or you have any chance to take a training ? )
ವಿನಾಯಕ್ – ಇಲ್ಲ, ಶಾಲೆಯಲ್ಲಿ ನಮಗೆ ಈಗಾಗಲೇ ಸ್ವಲ್ಪ ತರಬೇತಿ ದೊರೆತಿರುತ್ತದೆ) (No, In school we have already get some training)
ಮೋದಿ – ಸರಿ ಸರಿ
ವಿನಾಯಕ್ – ನಮ್ಮ ಶಿಕ್ಷಕರುಗಳಿಂದ (from our teachers.)
ಮೋದಿ – ಸರಿ ಸರಿ
ವಿನಾಯಕ್ –ಇದರಿಂದಾಗಿ ನಮಗೆ ಹೊರಗಡೆ ಭಾಗವಹಿಸಲು ಅವಕಾಶ ದೊರೆಯುತ್ತದೆ (So that we get opportunity to participate outside )
ಮೋದಿ – ವ್ಹಾವ್
ವಿನಾಯಕ್ - ಶಾಲೆಯ ಕಡೆಯಿಂದಲೇ (From the school itself)
ಮೋದಿ – ನೀವು ಎಷ್ಟು ರಾಜ್ಯಗಳಿಗೆ ಭೇಟಿ ನೀಡಿದ್ದೀರಿ? (How many states you have visited ?)
ವಿನಾಯಕ್ - ನಾನು ಕೇವಲ ಕೇರಳ ಮತ್ತು ತಮಿಳುನಾಡು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ (I have visited only Kerala and Tamilnadu)
ಮೋದಿ - ಕೇವಲ ಕೇರಳ ಮತ್ತು ತಮಿಳುನಾಡು (Only Kerala and Tamilnadu),
ವಿನಾಯಕ್ – ಹೌದು (Oh yes)
ಮೋದಿ - ಹಾಗಾದರೆ, ದೆಹಲಿಗೆ ಭೇಟಿ ನೀಡಲು ಇಷ್ಟಪಡುತ್ತೀರಾ? (So, would you like to visit Delhi ?)
ವಿನಾಯಕ್ – ಹೌದು ಸರ್, ಈಗ ನಾನು ನನ್ನ ಉನ್ನತ ವ್ಯಾಸಂಗಕ್ಕಾಗಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಅರ್ಜಿ ಸಲ್ಲಿಸಲಿದ್ದೇನೆ (Sir, now, I am applying in Delhi University for my Higher Studies.)
ಮೋದಿ – ವ್ಹಾವ್, ಹಾಗಾದರೆ ನೀವು ದೆಹಲಿಗೆ ಬರುತ್ತಿದ್ದೀರಿ (Wah, so you are coming to Delhi )
ವಿನಾಯಕ್ – ಹೌದು ಸರ್. (yes sir.)
ಮೋದಿ – ಹೇಳಿ, ಭವಿಷ್ಯದಲ್ಲಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವ ಸಹ ವಿದ್ಯಾರ್ಥಿಗಳಿಗೆ ಯಾವುದಾದರೂ ಸಂದೇಶ ನೀಡಬಯಸುತ್ತೀರಾ (tell me, do you have any message for fellow students who will give Board Exams in future)
ವಿನಾಯಕ್ – ಕಠಿಣ ಪರಿಶ್ರಮ ಮತ್ತು ಸಮಯದ ಸದ್ಬಳಕೆ (hard work and proper time utilization )
ಮೋದಿ – ಹಾಗಾದರೆ ಸಮಯದ ಸೂಕ್ತ ನಿರ್ವಹಣೆ (So perfect time management )
ವಿನಾಯಕ್ – ಹೌದು ಸರ್ (हाँ, sir)
ಮೋದಿ – ವಿನಾಯಕ್, ನಿಮ್ಮ ಹವ್ಯಾಸಗಳನ್ನು ತಿಳಿದುಕೊಳ್ಳಲು ಬಯಸುತ್ತೇನೆ (Vinayak, I would like to know your hobbies.)
ವಿನಾಯಕ್ – ಬ್ಯಾಡ್ಮಿಂಟನ್ ಮತ್ತು ರೋಯಿಂಗ್ (……Badminton and thanrowing).
ಮೋದಿ – ಹಾಗಿದ್ದಲ್ಲಿ ನೀವು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿದ್ದೀರಿ (So, you are active on social media)
ವಿನಾಯಕ್ – ಇಲ್ಲ, ಶಾಲೆಯಲ್ಲಿ ಯಾವುದೇ ವಿದ್ಯುನ್ಮಾನ ವಸ್ತುಗಳನ್ನಾಗಲೀ ಗ್ಯಾಜೆಟ್ ಗಳನ್ನಾಗಲೀ ಉಪಯೋಗಿಸುವುದಕ್ಕೆ ನಮಗೆ ಅನುಮತಿ ಇಲ್ಲ (Not, we are not allowed to use any electronic items or gadgets in the school)
ಮೋದಿ – ಹಾಗಿದ್ದಲ್ಲಿ ನೀವು ಅದೃಷ್ಟವಂತರು (So you are lucky)
ವಿನಾಯಕ್ – ಹೌದು ಸರ್ (Yes Sir,)
ಮೋದಿ – ಒಳ್ಳೆಯದು, ವಿನಾಯಕ್, ನಿಮಗೆ ಮತ್ತೊಮ್ಮೆ ಅಭಿನಂದನೆಗಳು ಮತ್ತು ನಿಮಗೆ ಎಲ್ಲವೂ ಒಳಿತಾಗಲಿ (Well, Vinayak, congratulations again and wish you all the best.)
ವಿನಾಯಕ್ – ಧನ್ಯವಾದ ಸರ್ (Thank you sir.)
ಬನ್ನಿ. ನಾವು ಉತ್ತರ ಪ್ರದೇಶಕ್ಕೆ ಹೋಗೋಣ. ಉತ್ತರ ಪ್ರದೇಶದಲ್ಲಿ ಅಮ್ರೋಹಾದ ಶ್ರೀ ಉಸ್ಮಾನ್ ಸೈಫಿ ಅವರೊಂದಿಗೆ ಮಾತನಾಡೋಣ.
ಮೋದಿ – ಹಲೋ ಉಸ್ಮಾನ್, ಅನೇಕಾನೇಕ ಅಭಿನಂದನೆ, ಬಹಳ ಬಹಳ ಅಭಿನಂದನೆ
ಉಸ್ಮಾನ್ – ಧನ್ಯವಾದ ಸರ್ (Thank you sir.)
ಮೋದಿ – ಹೇಳಿ ಉಸ್ಮಾನ್ ಅವರೇ, ನೀವು ಬಯಸಿದ ಅದೇ ಫಲಿತಾಂಶ ದೊರೆತಿದೆಯೇ ಅಥವಾ ಕಡಿಮೆ ಬಂದಿದೆಯೇ
ಉಸ್ಮಾನ್ – ಇಲ್ಲ, ಬಯಸಿದಷ್ಟೇ ಬಂದಿದೆ. ನನ್ನ ತಂದೆತಾಯಿ ಕೂಡಾ ಬಹಳ ಸಂತೋಷದಿಂದ ಇದ್ದಾರೆ
ಮೋದಿ – ವ್ಹಾವ್, ಹೌದಾ, ಮನೆಯಲ್ಲಿ ನಿಮ್ಮ ಸೋದರನೂ ಇಷ್ಟೇ ಪ್ರತಿಭಾವಂತನೇ ಅಥವಾ ನೀವು ಮಾತ್ರ ಇಷ್ಟು ಪ್ರತಿಭಾವಂತರೋ
ಉಸ್ಮಾನ್ –ನಾನು ಮಾತ್ರಾ. ನನ್ನ ಸೋದರ ಸ್ವಲ್ಪ ತುಂಟ
ಮೋದಿ – ಸರಿ ಸರಿ
ಉಸ್ಮಾನ್ –ಆದರೆ ನನ್ನ ಜೊತೆ ಬಹಳ ಸಂತೋಷದಿಂದ ಇರುತ್ತಾನೆ
ಮೋದಿ – ಹೌದಾ, ಸರಿ. ಉಸ್ಮಾನ್ ಅವರೆ ನೀವು ಓದುತ್ತಿದ್ದಾಗ ನಿಮ್ಮ ಇಷ್ಟದ ವಿಷಯ ಯಾವುದಾಗಿತ್ತು?
ಉಸ್ಮಾನ್ – ಗಣಿತ (Mathematics )
ಮೋದಿ – ಅರೆ ವ್ಹಾವ್ . ಹಾಗಿದ್ದರೆ ಗಣಿತದಲ್ಲಿ ಯಾವುದು ಇಷ್ಟವಾಗುತ್ತಿತ್ತು?ಇದು ಹೇಗಾಯಿತು? ಯಾವ ಶಿಕ್ಷಕರು ನಿಮಗೆ ಸ್ಫೂರ್ತಿ ತುಂಬಿದರು?
ಉಸ್ಮಾನ್ – ಸರ್ ನಮ್ಮ ಓರ್ವ ಶಿಕ್ಷಕರು. ರಜತ್ ಸರ್. ಅವರು ನನಗೆ ಪ್ರೇರಣೆ ತುಂಬಿದರು ಮತ್ತು ಬಹಳ ಚೆನ್ನಾಗಿ ಪಾಠ ಮಾಡುತ್ತಾರೆ ಮತ್ತು ಗಣಿತದಲ್ಲಿ ನಾನು ಮೊದಲಿನಿಂದಲೂ ಉತ್ತಮವಾಗಿದ್ದೆ ಮತ್ತು ಅದು ಬಹಳ ಆಸಕ್ತಿಕರ ವಿಷಯವೂ ಹೌದು.
ಮೋದಿ – ಹೌದು ಹೌದು
ಉಸ್ಮಾನ್ – ಎಷ್ಟು ಹೆಚ್ಚಾಗಿ ಮಾಡಿದರೆ ಅಷ್ಟು ಆಸಕ್ತಿ ಮೂಡುತ್ತದೆ ಆದ್ದರಿಂದಲೇ ಅದು ನನ್ನ ಇಷ್ಟದ ವಿಷಯ
ಮೋದಿ - ಹಾ. ಹಾ. ಆನ್ಲೈನ್ ವೇದಿಕ್ ಮ್ಯಾಥಮೆಟಿಕ್ಸ್ ತರಗತಿಗಳು ನಡೆಯುತ್ತವೆಂದು ನಿಮಗೆ ಗೊತ್ತೇ
ಉಸ್ಮಾನ್ – ಹೌದು ಸರ್
ಮೋದಿ - ಹೌದು, ಯಾವಾಗಲಾದರೂ ಇದನ್ನು ಪ್ರಯತ್ನಿಸಿದ್ದೀರಾ?
ಉಸ್ಮಾನ್ – ಇಲ್ಲ ಸರ್, ಇಲ್ಲಿಯವರೆಗೂ ಮಾಡಿಲ್ಲ
ಮೋದಿ – ನೋಡಿ, ನಿಮ್ಮ ಬಹಳಷ್ಟು ಗೆಳೆಯರಿಗೆ ನೀವೊಬ್ಬರು ಜಾದೂಗಾರರೆಂದು ಅನ್ನಿಸಬಹುದು ಏಕೆಂದರೆ ನೀವು ವೇದಿಕ್ ಮ್ಯಾಥಮ್ಯಾಟಿಕ್ಸ್ ಅನ್ನು ಕಂಪ್ಯೂಟರ್ ವೇಗದಲ್ಲಿ ಮಾಡಬಲ್ಲಿರಿ. ಬಹಳ ಸರಳ ತಂತ್ರಗಳು ಮತ್ತು ಇವು ಇಂದಿನ ದಿನಗಳಲ್ಲಿ ಆನ್ ಲೈನ್ ನಲ್ಲಿ ಕೂಡಾ ಲಭ್ಯವಿವೆ.
ಉಸ್ಮಾನ್ – ಸರಿ ಸರ್.
ಮೋದಿ – ನಿಮಗೆ ಗಣಿತದಲ್ಲಿ ಆಸಕ್ತಿ ಇರುವುದರಿಂದ, ಬಹಳಷ್ಟು ಹೊಸ ಹೊಸ ವಿಷಯಗಳನ್ನು ಕೂಡಾ ನೀವು ನೀಡಬಹುದಾಗಿದೆ.
ಉಸ್ಮಾನ್ – ಸರಿ ಸರ್
ಮೋದಿ – ಸರಿ ಉಸ್ಮಾನ್, ನೀವು ಬಿಡುವಿನ ವೇಳೆಯಲ್ಲಿ ಏನು ಮಾಡುತ್ತೀರಿ
ಉಸ್ಮಾನ್ – ಬಿಡುವಿನ ವೇಳೆಯಲ್ಲಿ ನಾನು ಏನನ್ನಾದರೂ ಬರೆಯುತ್ತಾ ಇರುತ್ತೇನೆ. ನನಗೆ ಬರವಣಿಗೆಯಲ್ಲಿ ಬಹಳ ಆಸಕ್ತಿ ಇದೆ.
ಮೋದಿ – ಅರೆ ವ್ಹಾವ್. ನಿಮಗೆ ಗಣಿತದಲ್ಲೂ ಆಸಕ್ತಿ ಇದೆ ಮತ್ತು ಸಾಹಿತ್ಯದಲ್ಲೂ ಆಸಕ್ತಿ ಇದೆ.
ಉಸ್ಮಾನ್ – ಹೌದು ಸರ್.
ಮೋದಿ – ಏನು ಬರೆಯುತ್ತೀರಿ? ಕವಿತೆಗಳನ್ನು ಬರೆಯುತ್ತೀರಾ, ಶಾಯರಿ ಬರೆಯುತ್ತೀರಾ
ಉಸ್ಮಾನ್ –ಪ್ರಸಕ್ತ ವಿದ್ಯಮಾನಗಳಿಗೆ ಸಂಬಂಧಿಸಿದ ಯಾವುದಾದರೂ ವಿಷಯವಿದ್ದರೆ ಅದರ ಬಗ್ಗೆ ಬರೆಯುತ್ತಿರುತ್ತೇನೆ.
ಮೋದಿ – ಸರಿ ಸರಿ
ಉಸ್ಮಾನ್ – ಹೊಸ ಹೊಸ ವಿಷಯಗಳು ತಿಳಿದುಬರುತ್ತಿರುತ್ತವೆ ಅಂದರೆ ಜಿಎಸ್ ಟಿ ಇತ್ತು ಮತ್ತು ನಮ್ಮ ನೋಟ್ ರದ್ದು – ಎಲ್ಲಾ ವಿಷಯಗಳು.
ಮೋದಿ – ಅರೆ ವ್ಹಾವ್ . ಹಾಗಾದರೆ ಕಾಲೇಜಿನಲ್ಲಿ ವ್ಯಾಸಂಗ ಮಾಡುವುದಕ್ಕಾಗಿ ನೀವು ಮುಂದೆ ಯಾವ ಯೋಜನೆ ಮಾಡಿದ್ದೀರಿ?
ಉಸ್ಮಾನ್ – ಕಾಲೇಜು ವ್ಯಾಸಂಗ, ಸರ್ ನನ್ನ ಜೆಇಇ ಮೈನ್ಸ್ ನಲ್ಲಿ ಮೊದಲ ಪ್ರಯತ್ನ ಸಫಲವಾಗಿದೆ ಮತ್ತು ನಾನು ಸೆಪ್ಟೆಂಬರ್ ನಲ್ಲಿ ಮುಂದಿನ ಹಂತದ ಪರೀಕ್ಷೆ ಬರೆಯಲಿದ್ದೇನೆ. ನನ್ನ ಮುಖ್ಯ ಗುರಿ, ನಾನು ಮೊದಲು ಐಐಟಿ ಯಿಂದ ಮೊದಲ ಪದವಿ ಪಡೆಯಬೇಕು ಮತ್ತು ನಂತರ, ನಾಗರಿಕ ಸೇವೆಗಳಿಗೆ ಹೋಗಬೇಕು ಮತ್ತು ಐಎಎಸ್ ಅಧಿಕಾರಿ ಆಗಬೇಕು.
ಮೋದಿ – ಅರೆ ವ್ಹಾವ್ . ನಿಮಗೆ ತಂತ್ರಜ್ಞಾನದಲ್ಲೂ ಕೂಡಾ ಆಸಕ್ತಿ ಇದೆಯೇ?
ಉಸ್ಮಾನ್ – ಹೌದು ಸರ್. ನನ್ನ ಆಯ್ಕೆ ಐ ಟಿ ಕ್ಷೇತ್ರ – ಅತ್ಯುತ್ತಮಮ ಐಐಟಿ ನಲ್ಲಿ ಮೋದಿ – ಒಳ್ಳೆಯದು ಉಸ್ಮಾನ್. ನನ್ನ ಕಡೆಯಿಂದ ಬಹಳ ಶುಭಾಕಾಂಕ್ಷೆಗಳು ಮತ್ತು ನಿಮ್ಮ ಸೋದರ ತುಂಟನಾಗಿರುವುದರಿಂದ ನಿಮಗೆ ಸಮಯ ಉತ್ತಮವಾಗಿ ಕಳೆಯುತ್ತದೆ ಮತ್ತು ನಿಮ್ಮ ತಂದೆ ತಾಯಿಗೆ ಕೂಡಾ ನನ್ನ ಕಡೆಯಿಂದ ನಮನಗಳನ್ನು ತಿಳಿಸಿಬಿಡಿ. ಅವರು ನಿಮಗೆ ಇಂತಹ ಅವಕಾಶ ನೀಡಿದ್ದಾರೆ, ನಿಮ್ಮ ಆತ್ಮವಿಶ್ವಾಸಕ್ಕೆ ಬಲತುಂಬಿದ್ದಾರೆ, ಮತ್ತು ನೀವು ಓದಿನ ಜೊತೆ ಜೊತೆಗೆ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಅಧ್ಯಯನ ಮಾಡುತ್ತೀರಿ ಮತ್ತು ಬರೆಯುತ್ತೀರಿ ಕೂಡಾ ಎಂದು ತಿಳಿದು ನನಗೆ ಬಹಳ ಸಂತೋಷವಾಯಿತು. ನೋಡಿ, ಬರೆಯುವುದರಿಂದ ಆಗುವ ಪ್ರಯೋಜನವೆಂದರೆ ಅದು ನಿಮ್ಮ ಚಿಂತನೆಗಳಲ್ಲಿ ಚುರುಕುತನ ತುಂಬುತ್ತದೆ. ಬರೆಯುವುದರಿಂದ ಬಹಳ ಬಹಳ ಲಾಭ ದೊರೆಯುತ್ತದೆ. ಸರಿ ಹಾಗಾದರೆ, ನನ್ನ ಕಡೆಯಿಂದ ಬಹಳ ಬಹಳ ಅಭಿನಂದನೆ
ಉಸ್ಮಾನ್ – ಧನ್ಯವಾದ ಸರ್ (Thank you sir.)
ಬನ್ನಿ. ಈಗ ನೇರವಾಗಿ ದಕ್ಷಿಣದತ್ತ ಸಾಗೋಣ. ತಮಿಳುನಾಡಿನ ನಾಮಕ್ಕಲ್ ನ ಮಗಳು ಕನ್ನಿಗಾಳೊಂದಿಗೆ ಮಾತನಾಡೋಣ ಮತ್ತು ಕನ್ನಿಗಾಳ ಮಾತಂತೂ ಬಹಳವೇ ಪ್ರೇರಣಾದಾಯಕವಾಗಿರುತ್ತದೆ.
ಮೋದಿ – ಕನ್ನಿಗಾ ಅವರೆ ವಣಕ್ಕಂ
ಕನ್ನಿಗಾ – ವಣಕ್ಕಂ ಸರ್
ಮೋದಿ – ಹೇಗಿದ್ದೀರಿ (How are you )
ಕನ್ನಿಗಾ – ಚೆನ್ನಾಗಿದ್ದೇನೆ ಸರ್ (Fine sir)
ಮೋದಿ - ಮೊಟ್ಟ ಮೊದಲಿಗೆ ನಿಮ್ಮ ಯಶಸ್ಸಿಗಾಗಿ ನಾನು ನಿಮ್ಮನ್ನು ಅಭಿನಂದಿಸಲು ಬಯಸುತ್ತೇನೆ.
ಕನ್ನಿಗಾ - ಧನ್ಯವಾದ ಸರ್ (Thank you sir.)
ಮೋದಿ -ನಾನು ನಾಮಕ್ಕಲ್ ಹೆಸರು ಕೇಳಿದಾಗ ನನಗೆ ಆಂಜನೇಯ ದೇವಾಲಯ ನೆನಪಿಗೆ ಬರುತ್ತದೆ.
ಕನ್ನಿಗಾ - ಸರಿ ಸರ್ (Yes sir).
ಮೋದಿ - ನಿಮ್ಮೊಂದಿಗಿನ ಮಾತುಕತೆಯನ್ನು ಕೂಡಾ ಇನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ.
ಕನ್ನಿಗಾ - ಸರಿ ಸರ್ (Yes sir.)
ಮೋದಿ - ನಿಮಗೆ ಮತ್ತೊಮ್ಮೆ ಅಭಿನಂದನೆಗಳು (So, Congratulations again. )
ಕನ್ನಿಗಾ - ಧನ್ಯವಾದ ಸರ್ (Thank you sir.)
ಮೋದಿ – ಪರೀಕ್ಷೆಗಳಿಗಾಗಿ ನೀವು ಬಹಳ ಕಷ್ಟಪಟ್ಟಿರಬೇಕು, ಸಿದ್ಧತೆ ಮಾಡಿಕೊಳ್ಳುವ ನಿಮ್ಮ ಅನುಭವ ಹೇಗಿತ್ತು
ಕನ್ನಿಗಾ – ಸರ್, ಆರಂಭದಿಂದಲೇ ನಾವು ಕಷ್ಟಪಡುತ್ತಿದ್ದೆವು. ಈ ಫಲಿತಾಂಶವನ್ನು ನಾನು ನಿರೀಕ್ಷಿಸಿರಲಿಲ್ಲ. ಆದರೆ ನಾನು ಚೆನ್ನಾಗಿ ಬರೆದಿದ್ದೆ ಆದ್ದರಿಂದ ಉತ್ತಮ ಫಲಿತಾಂಶ ದೊರೆತಿದೆ. (Sir, we are working hard from the start so, I didn’t expect this result but I have written well so I get a good result. )
ಮೋದಿ - ನಿಮ್ಮ ನಿರೀಕ್ಷೆಗಳು ಏನಿದ್ದವು (What were your expectation ?)
ಕನ್ನಿಗಾ – ಸುಮಾರು 485 ಅಥವಾ 486 ಹೀಗೆಂದುಕೊಂಡಿದ್ದೆ (485 or486 like that, I thought so)
ಮೋದಿ – ಮತ್ತು ಈಗ (and now )
ಕನ್ನಿಗಾ - 490
ಮೋದಿ – ನಿಮ್ಮ ಕುಟುಂಬದ ಸದಸ್ಯರ ಮತ್ತು ನಿಮ್ಮ ಶಿಕ್ಷಕರ ಪ್ರತಿಕ್ರಿಯೆ ಏನು? (So what is the reaction of your family members & your teachers?)
ಕನ್ನಿಗಾ – ಅವರು ಬಹಳ ಸಂತೋಷ ಪಟ್ಟರು ಮತ್ತು ಹೆಮ್ಮೆ ಪಟ್ಟರು ಸರ್. (They were so happy and they were so proud sir.)
ಮೋದಿ – ನಿಮ್ಮ ಇಷ್ಟದ ವಿಷಯ ಯಾವುದು (Which one is your favorite subject.)
ಕನ್ನಿಗಾ – ಗಣಿತ (Mathematics )
ಮೋದಿ – ಓಹ್. ನಿಮ್ಮ ಭವಿಷ್ಯದ ಯೋಜನೆಗಳೇನು? (Ohh! And what are your future plans?)
ಕನ್ನಿಗಾ –ಸಾಧ್ಯವಾದಲ್ಲಿ ನಾನು ಎಎಫ್ ಎಂ ಸಿ ನಲ್ಲಿ ವೈದ್ಯೆಯಾಗುತ್ತೇನೆ ಸರ್ (I’m going to become a Doctor if possible in AFMC sir.)
ಮೋದಿ – ಮತ್ತು ನಿಮ್ಮ ಕುಟುಂಬದ ಸದಸ್ಯರು ಕೂಡಾ ವೈದ್ಯ ವೃತ್ತಿಯಲ್ಲಿದ್ದಾರೆಯೇ ಅಥವಾ ಬೇರಾವುದೇ ವೃತ್ತಿಯಲ್ಲಿದ್ದಾರೆಯೇ? (And your family members are also in a medical profession or somewhere else ?)
ಕನ್ನಿಗಾ – ಇಲ್ಲ ಸರ್ ನನ್ನ ತಂದೆ ಓರ್ವ ಚಾಲಕರಾಗಿದ್ದಾರೆ ಆದರೆ ನನ್ನ ಸೋದರಿ ಎಂಬಿಬಿಎಸ್ ಕಲಿಯುತ್ತಿದ್ದಾರೆ (No sir, my father is a driver but my sister is studying in MBBS sir.)
ಮೋದಿ – ಅರೆ ವ್ಹಾವ್ .! ಮೊದಲಿಗೆ ನಿಮ್ಮ ಮತ್ತು ನಿಮ್ಮ ಸೋದರಿಯ ಕುರಿತು ಎಷ್ಟೊಂದು ಕಾಳಜಿ ವಹಿಸುತ್ತಿರುವ ನಿಮ್ಮ ತಂದೆಗೆ ವಂದಿಸಲು ಬಯಸುತ್ತೇನೆ. ಅವರು ಮಾಡುತ್ತಿರುವುದು ಒಂದು ಮಹಾನ್ ಸೇವೆ (so first of all I will do the प्रणाम to your father whois taking lot of care your sister and yourself. It’s great service he is doing)
ಕನಿಗ್ಗಾ –ಹೌದು ಸರ್ (Yes sir)
ಮೋದಿ – ಮತ್ತು ನಿಮ್ಮೆಲ್ಲರಿಗೂ ಅವರು ಸ್ಫೂರ್ತಿ (and he is inspiration for all.)
ಕನಿಗ್ಗಾ – ಹೌದು ಸರ್ (Yes sir)
ಮೋದಿ – ನಿಮಗೆ,ನಿಮ್ಮ ಸೋದರಿಗೆ, ಮತ್ತು ನಿಮ್ಮ ತಂದೆಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಅಭಿನಂದನೆಗಳು (So my congratulations to you, your sister and your father and your family.)
ಕನಿಗ್ಗಾ – ಧನ್ಯವಾದ ಸರ್ (Thank you sir.)
ಸ್ನೇಹಿತರೇ, ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕೂಡಾ ತಮ್ಮ ಆತ್ಮ ವಿಶ್ವಾಸದಿಂದ ಸಫಲರಾದಂತಹ ಅನೇಕ ಯುವ ಸ್ನೇಹಿತರ ಕತೆಗಳು ಬಹಳಷ್ಟಿವೆ ಮತ್ತು ಅವುಗಳು ನಮಗೆ ಪ್ರೇರಣೆ ನೀಡುತ್ತವೆ. ಹೆಚ್ಚು ಹೆಚ್ಚು ಯುವ ಸ್ನೇಹಿತರೊಂದಿಗೆ ಮಾತನಾಡುವ ಅವಕಾಶ ದೊರೆಯಬೇಕೆಂದು ನಾನು ಬಯಸಿದ್ದೆ ಆದರೆ ಸಮಯಕ್ಕೆ ಕೂಡಾ ಮಿತಿ ಇರುತ್ತದೆ. ತಮ್ಮ ಕತೆಗಳನ್ನು ದೇಶಕ್ಕೆ ಪ್ರೇರಣೆ ನೀಡುವ ರೀತಿಯಲ್ಲಿ ನಮ್ಮೆಲ್ಲರೊಂದಿಗೆ ಖಂಡಿತಾ ಹಂಚಿಕೊಳ್ಳಬೇಕೆಂದು ಯುವ ಸ್ನೇಹಿತರೆಲ್ಲರಿಗೂ ನಾನು ಮನವಿ ಮಾಡುತ್ತಿದ್ದೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಸಪ್ತ ಸಮುದ್ರಗಳಾಚೆ, ಭಾರತದಿಂದ ಸಾವಿರಾರು ಮೈಲಿ ದೂರದಲ್ಲಿ ಒಂದು ಪುಟ್ಟ ದೇಶವಿದೆ, ಅದರ ಹೆಸರು ‘ಸೂರೀನಾಮ್‘. ಭಾರತಕ್ಕೆ ಸೂರಿನಾಮ್ ನೊಂದಿಗೆ ಬಹಳ ನಿಕಟ ಸಂಬಂಧವಿದೆ. ನೂರು ವರ್ಷಕ್ಕಿಂತಲೂ ಹಿಂದೆ, ಭಾರತದಿಂದ ಜನರು ಅಲ್ಲಿಗೆ ಹೋಗಿದ್ದಾರೆ ಮತ್ತು ಅದನ್ನೇ ತಮ್ಮ ನೆಲೆಯಾಗಿಸಿಕೊಂಡಿದ್ದಾರೆ. ಇಂದು, ನಾಲ್ಕನೇ – ಐದನೇ ಪೀಳಿಗೆ ಅಲ್ಲಿದೆ. ಇಂದು ಸೂರಿನಾಮ್ ನಲ್ಲಿ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಜನರು ಭಾರತೀಯ ಮೂಲದವರಾಗಿದ್ದಾರೆ. ಅಲ್ಲಿನ ಸಾಮಾನ್ಯ ಭಾಷೆಗಳಲ್ಲಿ ಒಂದು ‘ಸರನಾಮೀ’ ಎನ್ನುವುದು ‘ಭೋಜಪುರಿ’ ಯ ಒಂದು ಭಾಷೆಯೇ ಆಗಿದೆ ಎಂದು ನಿಮಗೆ ಗೊತ್ತೇ. ಈ ಸಾಂಸ್ಕೃತಿಕ ಬಾಂಧವ್ಯ ಕುರಿತು ನಾವು ಭಾರತೀಯರು ಬಹಳ ಹೆಮ್ಮೆ ಪಡುತ್ತೇವೆ.
ಇತ್ತೀಚೆಗೆ, ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರು ಸೂರಿನಾಮ್ ನ ನೂತನ ರಾಷ್ಟ್ರಪತಿಯಾಗಿದ್ದಾರೆ. ಅವರು ಭಾರತದ ಮಿತ್ರರು ಮತ್ತು ಅವರು 2018 ರಲ್ಲಿ ಆಯೋಜಿಸಲಾಗಿದ್ದ Person of Indian Origin(PIO) Parliamentary conference ನಲ್ಲಿ ಕೂಡಾ ಪಾಲ್ಗೊಂಡಿದ್ದರು. ಶ್ರೀ ಚಂದ್ರಿಕಾ ಪ್ರಸಾದ್ ಸಂತೋಖಿ ಅವರು ವೇದ ಮಂತ್ರಗಳೊಂದಿಗೆ ಪ್ರಮಾಣವಚನ ಸ್ವೀಕರಿಸಿದರು, ಅವರು ಸಂಸ್ಕೃತದಲ್ಲಿ ಮಾತನಾಡಿದರು. ಅವರು, ವೇದಗಳನ್ನು ಉಲ್ಲೇಖಿಸಿದರು ಮತ್ತು ಓಂ ಶಾಂತಿಃ ಶಾಂತಿಃ ಶಾಂತಿಃ ಮಂತ್ರದೊಂದಿಗೆ ತಮ್ಮ ಪ್ರಮಾಣವಚನ ಸ್ವೀಕಾರ ಪೂರ್ಣಗೊಳಿಸಿದರು. ತಮ್ಮ ಕೈಗಳಲ್ಲಿ ವೇದಗಳನ್ನು ಹಿಡಿದು ಹೀಗೆ ಹೇಳಿದರು – ನಾನು, ಚಂದ್ರಿಕಾ ಪ್ರಸಾದ್ ಸಂತೋಖಿ, ಮತ್ತು ಮುಂದೆ ಅವರು ಪ್ರಮಾಣ ವಚನದಲ್ಲಿ ಏನು ಹೇಳಿದರು? ಅವರು ವೇದದ ಒಂದು ಮಂತ್ರವನ್ನು ಉಚ್ಛಾರಣೆ ಮಾಡಿದರು. ಅವರು ಹೇಳಿದರು –
ಓಂ ಅಗ್ನೇ ವ್ರತಪತೇ ವ್ರತಂ ಚರಿಷ್ಯಾಮಿ ತಚ್ಛಕೇಯಮ್ ತನ್ಮೇ ರಾಧ್ಯತಾಮ್
ಇದಮಹಮನೃತಾತ್ ಸತ್ಯಮುಪೈಮಿ
(ॐ अग्ने व्रतपते व्रतं चरिष्यामि तच्छकेयम तन्मे राध्यताम |
इदमहमनृतात सत्यमुपैमि || )
ಅಂದರೆ, ಹೇ ಅಗ್ನಿ, ಸಂಕಲ್ಪ ದೇವತೆ, ನಾನು ಒಂದು ಪ್ರತಿಜ್ಞೆ ಮಾಡುತ್ತಿದ್ದೇನೆ. ನನಗೆ ಇದಕ್ಕಾಗಿ ಶಕ್ತಿ ಮತ್ತು ಸಾಮರ್ಥ್ಯ ನೀಡು. ನಾನು ಅಸತ್ಯದಿಂದ ದೂರವಿರುವಂತೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವಂತೆ ಆಶೀರ್ವಾದ ಮಾಡು. ನಿಜವಾಗಿಯೂ, ಇದು ನಮಗೆಲ್ಲರಿಗೂ ಹೆಮ್ಮೆ ತರುವಂತಹ ವಿಷಯವಾಗಿದೆ.
ನಾನು ಶ್ರೀ ಚಂದ್ರಿಕಾ ಪ್ರಸಾದ್ ಸಂತೋಷಿ ಅವರನ್ನು ಅಭಿನಂದಿಸುತ್ತೇನೆ, ಮತ್ತು ತಮ್ಮ ರಾಷ್ಟ್ರದ ಸೇವೆ ಮಾಡುವುದಕ್ಕಾಗಿ, 130 ಕೋಟಿ ಭಾರತೀಯರ ಪರವಾಗಿ ಅವರಿಗೆ ಶುಭಾಕಾಂಕ್ಷೆಗಳನ್ನು ತಿಳಿಯಪಡಿಸುತ್ತೇನೆ.
ನನ್ನ ಪ್ರೀತಿಯ ದೇಶವಾಸಿಗಳೇ, ಇದು ಮಳೆಗಾಲದ ಸಮಯ ಕೂಡಾ ಆಗಿದೆ. ಹಿಂದಿನ ಬಾರಿ ಕೂಡಾ ನಾನು ನಿಮಗೆ ಹೇಳಿದ್ದೆ ಮಳೆಗಾಲದಲ್ಲಿ ಕಲ್ಮಷಗಳು ಮತ್ತು ಅವುಗಳಿಂದ ಉಂಟಾಗುವ ರೋಗಗಳ ಅಪಾಯ ಹೆಚ್ಚಾಗುತ್ತದೆ, ಆಸ್ಪತ್ರೆಗಳಲ್ಲಿ ದಟ್ಟಣೆ ಹೆಚ್ಚಾಗುತ್ತದೆ ಎಂದು. ಆದ್ದರಿಂದ ನೀವೆಲರೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ನೀಡಿ. ರೋಗನಿರೋಧಕ ಶಕ್ತಿ (Immunity) ಹೆಚ್ಚಿಸುವಂತಹ ಪದಾರ್ಥಗಳನ್ನು, ಆಯುರ್ವೇದದ ಕಷಾಯ ಮುಂತಾದುವುಗಳನ್ನು ಸೇವಿಸುತ್ತಿರಿ. ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ, ನಾವು ಇತರ ರೋಗಗಳಿಂದ ದೂರವಿರಬೇಕು. ನಾವು ಆಸ್ಪತ್ರೆಗಳಿಗೆ ಹೋಗುವ ಸಂದರ್ಭ ಬಾರದಂತೆ ಸಂಪೂರ್ಣ ಕಾಳಜಿ ವಹಿಸಬೇಕಾಗುತ್ತದೆ.
ಸ್ನೇಹಿತರೆ, ಮಳೆಗಾಲದ ಋತುವಿನಲ್ಲಿ ದೇಶದ ಬಹುದೊಡ್ಡ ಭಾಗ ಪ್ರವಾಹವನ್ನು ಕೂಡಾ ಎದುರಿಸುತ್ತಿದೆ. ಬಿಹಾರ, ಅಸ್ಸಾಂನಂತಹ ರಾಜ್ಯಗಳ ಅನೇಕ ಕ್ಷೇತ್ರಗಳಲ್ಲಿ ಪ್ರವಾಹ ಅತಿ ಹೆಚ್ಚು ಕಷ್ಟಗಳನ್ನು ತಂದೊಡ್ಡಿದೆ ಅಂದರೆ, ಒಂದೆಡೆ ಕೊರೊನಾ ಇದ್ದರೆ, ಮತ್ತೊಂದೆಡೆ ಇದು ಮತ್ತೊಂದು ಸವಾಲಾಗಿದೆ. ಇಂತಹದ್ದರಲ್ಲಿ, ಎಲ್ಲಾ ಸರ್ಕಾರಗಳು, ಎನ್ ಡಿ ಆರ್ ಎಫ್ ತಂಡಗಳು, ರಾಜ್ಯದ ವಿಪತ್ತು ನಿರ್ವಹಣಾ ತಂಡಗಳು, ಸ್ವಯಂ ಸೇವಕ ಸಂಘಗಳು, ಎಲ್ಲರೂ ಒಟ್ಟಾಗಿ ಸೇರಿದ್ದಾರೆ ಮತ್ತು ಪ್ರತಿಯೊಂದು ರೀತಿಯ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ. ಈ ವಿಪತ್ತಿನಿಂದ ಪೀಡಿತರಾಗಿರುವ ಎಲ್ಲ ಜನರೊಂದಿಗೆ ಇಡೀ ದೇಶವೇ ನಿಂತಿದೆ.
ಸ್ನೇಹಿತರೇ, ನಾವು ಮುಂದಿನ ಸಲ ಮನ್ ಕೀ ಬಾತ್ ನಲ್ಲಿ ಭೇಟಿಯಾಗುವುದಕ್ಕೆ ಮುನ್ನವೇ ಆಗಸ್ಟ್ 15 ಬರಲಿದೆ. ಈ ಸಲ ಆಗಸ್ಟ್ 15 ಕೂಡಾ ವಿಭಿನ್ನ ಪರಿಸ್ಥಿತಿಯಲ್ಲಿ ನಡೆಯಲಿದೆ – ಕೊರೊನಾ ಮಹಾಮಾರಿಯ ಈ ವಿಪತ್ತಿನ ನಡುವೆಯೇ ನಡೆಯಲಿದೆ.
ನಮ್ಮ ಯುವಜನತೆಯಲ್ಲಿ, ಎಲ್ಲಾ ದೇಶವಾಸಿಗಳಲ್ಲಿ ನಾನು ಮಾಡುವ ಮನವಿಯೆಂದರೆ, ನಾವು ಸ್ವಾತಂತ್ರ್ಯ ದಿನದಂದು, ಮಹಾಮಾರಿಯಿಂದ ಮುಕ್ತರಾಗುವ ಸಂಕಲ್ಪ ಮಾಡೋಣ, ಸ್ವಾಭಿಮಾನಿ ಭಾರತದ ಸಂಕಲ್ಪ ಮಾಡೋಣ, ಏನಾದರೂ ಹೊಸದನ್ನು ಕಲಿಯುವ ಮತ್ತು ಕಲಿಸುವ ಸಂಕಲ್ಪ ತೊಡೋಣ, ನಮ್ಮ ಕರ್ತವ್ಯ ಪಾಲನೆಯ ಸಂಕಲ್ಪ ಮಾಡೋಣ. ರಾಷ್ಟ್ರ ನಿರ್ಮಾಣಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅನೇಕ ಮಹನೀಯರ ತಪಸ್ಸಿನಿಂದಾಗಿ ನಮ್ಮ ದೇಶ ಇಂದು ಉತ್ತುಂಗ ಸ್ಥಿತಿಯಲ್ಲಿದೆ. ಅಂತಹ ಮಹನೀಯರಲ್ಲಿ ಒಬ್ಬರು ‘ಲೋಕಮಾನ್ಯ ತಿಲಕ್’ ಅವರು. ಬರುವ ಆಗಸ್ಟ್ 1 ರಂದು ಲೋಕಮಾನ್ಯ ತಿಲಕ್ ಅವರ 100 ನೇ ಪುಣ್ಯ ತಿಥಿ. ಲೋಕಮಾನ್ಯ ತಿಲಕ್ ಅವರ ಜೀವನ ನಮ್ಮೆಲ್ಲರಿಗೂ ಬಹುದೊಡ್ಡ ಸ್ಫೂರ್ತಿಯಾಗಿದೆ. ಅದು ನಮ್ಮೆಲ್ಲರಿಗೂ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ.
ಮುಂದಿನ ಬಾರಿ ನಾವು ಭೇಟಿಯಾದಾಗ, ಮತ್ತಷ್ಟು ವಿಷಯಗಳ ಕುರಿತು ಮಾತನಾಡೋಣ, ಒಟ್ಟಾಗಿ ಹೊಸದನ್ನೇನಾದರೂ ಕಲಿಯೋಣ, ಮತ್ತು ಎಲ್ಲರೊಂದಿಗೆ ಹಂಚಿಕೊಳ್ಳೋಣ. ನೀವೆಲ್ಲರೂ ನಿಮ್ಮ ಬಗ್ಗೆ ಕಾಳಜಿ ವಹಿಸಿ, ನಿಮ್ಮ ಪರಿವಾರದವರ ಬಗ್ಗೆ ಕಾಳಜಿ ವಹಿಸಿ ಮತ್ತು ಆರೋಗ್ಯದಿಂದಿರಿ. ದೇಶವಾಸಿಗಳಿಗೆಲ್ಲಾ ಮುಂಬರಲಿರುವ ಎಲ್ಲಾ ಹಬ್ಬಗಳಿಗಾಗಿ ಅನೇಕಾನೇಕ ಶುಭಾಶಯಗಳು. ಅನೇಕಾನೇಕ ಧನ್ಯವಾದಗಳು.
***
(Release ID: 1641334)
Visitor Counter : 740
Read this release in:
Punjabi
,
Hindi
,
Telugu
,
Urdu
,
Assamese
,
Manipuri
,
English
,
Marathi
,
Bengali
,
Gujarati
,
Odia
,
Tamil
,
Malayalam