ಹಣಕಾಸು ಸಚಿವಾಲಯ

ಕೋವಿಡ್-19: ಸಿಬಿಡಿಟಿ ಯಿಂದ ತೆರಿಗೆ ಪಾವತಿದಾರರಿಗೆ 71,229 ಕೋಟಿ ರೂ. ಮರು ಪಾವತಿ

Posted On: 17 JUL 2020 6:00PM by PIB Bengaluru

ಕೋವಿಡ್-19: ಸಿಬಿಡಿಟಿ ಯಿಂದ ತೆರಿಗೆ ಪಾವತಿದಾರರಿಗೆ 71,229 ಕೋಟಿ ರೂ. ಮರು ಪಾವತಿ

 

ಕೋವಿಡ್-19 ಸಾಂಕ್ರಾಮಿಕದ ವೇಳೆ ತೆರಿಗೆ ಪಾವತಿದಾರರಿಗೆ ನಗದು ಲಭ್ಯವಾಗುವಂತೆ ಸಹಾಯ ಮಾಡಲು ಕೇಂದ್ರೀಯ ಪ್ರತ್ಯಕ್ಷ ತೆರಿಗೆಗಳ ಮಂಡಳಿ(ಸಿಬಿಡಿಟಿ), 2020 ಜುಲೈ 11 ವರೆಗೆ 21.24 ಲಕ್ಷಕ್ಕೂ ಅಧಿಕ ಪ್ರಕರಣಗಳಲ್ಲಿ 71,229 ಕೋಟಿ ರೂ. ಮರು ಪಾವತಿ ಮಾಡಿದೆ. 2020 ಆದಾಯ ತೆರಿಗೆ ಬಾಕಿ ಮರುಪಾವತಿಯನ್ನು ಆದಷ್ಟು ಶೀಘ್ರ ಮಾಡಬೇಕೆಂದು ಏಪ್ರಿಲ್ 8 ರಂದು ಸರ್ಕಾರ ಕೈಗೊಂಡಿದ್ದ ನಿರ್ಧಾರದಂತೆ ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್-19 ಸಮಯದಲ್ಲಿ ತೆರಿಗೆ ಪಾವತಿದಾರರಿಗೆ 19.79 ಲಕ್ಷ ಪ್ರಕರಣಗಳಲ್ಲಿ 24,603 ಕೋಟಿ ರೂ.ಗಳ ಆದಾಯ ತೆರಿಗೆ ಮರುಪಾವತಿ ಮಾಡಲಾಗಿದೆ ಹಾಗೂ 1.45 ಲಕ್ಷ ಪ್ರಕರಣಗಳಲ್ಲಿ 46,626 ಕೋಟಿ ರೂ. ಕಾರ್ಪೊರೇಟ್ ತೆರಿಗೆ ಮರುಪಾವತಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಕಷ್ಟಕರ ಸಂದರ್ಭದಲ್ಲಿ ತೆರಿಗೆ ಸಂಬಂಧಿ ಸೇವೆಗಳಿಂದ ತೆರಿಗೆ ಪಾವತಿದಾರರಿಗೆ ಯಾವುದೇ ರೀತಿಯ ಕಷ್ಟಗಳು ಆಗಬಾರದು ಎಂದು ಸರ್ಕಾರ ಹೆಚ್ಚಿನ ಒತ್ತು ನೀಡಿದ್ದು, ಹಲವು ತೆರಿಗೆ ಪಾವತಿದಾರರು ತಮ್ಮ ತೆರಿಗೆ ಬೇಡಿಕೆಗಾಗಿ ಮತ್ತು ಮರುಪಾವತಿ ಸಾಧ್ಯವಾದಷ್ಟು ಅಂತಿಮ ಹಂತ ಯಾವಾಗ ತಲುಪುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಮರುಪಾವತಿಗೆ ಸಂಬಂಧಿಸಿದಂತೆ ತೆರಿಗೆ ಬೇಡಿಕೆ ಕಡತಗಳನ್ನೆಲ್ಲಾ ವಿಲೇವಾರಿ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ಮೇಲೆ ಕಾರ್ಯ ಕೈಗೊಂಡಿದ್ದು, ಬಹುತೇಕ ಕಾರ್ಯ 2020 ಆಗಸ್ಟ್ 31ರೊಳಗೆ ಮುಕ್ತಾಯವಾಗುವ ಸಾಧ್ಯತೆ ಇದೆ. ಎಲ್ಲಾ ಸರಿಪಡಿಸುವಿಕೆ (ರೆಕ್ಟಿಫಿಕೇಶನ್) ಅರ್ಜಿಗಳನ್ನು ಮತ್ತು ಮೇಲ್ಮನವಿ ಆದೇಶಗಳ ಜಾರಿಯನ್ನು ಐಟಿಬಿಎನಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಎಲ್ಲಾ ರೆಕ್ಟಿಫಿಕೇಷನ್ ಮತ್ತು ಮೇಲ್ಮನವಿ ಜಾರಿಯನ್ನು ಐಟಿಬಿಎ ಮೂಲಕವೇ ಮಾಡಲು ನಿರ್ಧರಿಸಲಾಗಿದೆ.

ತೆರಿಗೆ ಮರುಪಾವತಿಗೆ ಅರ್ಜಿ ಸಲ್ಲಿಸುವ ತೆರಿಗೆದಾರರಿಗೆ ಐಟಿ ಇಲಾಖೆ -ಮೇಲ್ ಮೂಲಕ ತಕ್ಷಣ ಪ್ರತಿಕ್ರಿಯೆ ಒದಗಿಸಲು ಕ್ರಮ ಕೈಗೊಂಡಿರುವುದನ್ನು ಪುನರುಚ್ಚರಿಸಲಾಗಿದೆ. ತೆರಿಗೆ ಪಾವತಿಯ ಕುರಿತಂತೆ ನೋಡಿಕೊಳ್ಳಲು ಕ್ಷಿಪ್ರ ಪ್ರತಿಸ್ಪಂದನಾ ತಂಡವನ್ನು ರಚಿಸಲಾಗಿದ್ದು, ಅದು ಐಟಿ ಇಲಾಖೆಯೊಂದಿಗೆ ತ್ವರಿತವಾಗಿ ಮರುಪಾವತಿ ಪ್ರಕ್ರಿಯೆ ಕೈಗೊಳ್ಳಲು ನೆರವಾಗುತ್ತಿದೆ. ಹಲವು ತೆರಿಗೆ ಪಾವತಿದಾರರು ರೆಕ್ಟಿಫಿಕೇಷನ್, ಮೇಲ್ಮನವಿ ಜಾರಿ ಅಥವಾ ತೆರಿಗೆ ಸಾಲಗಳ ಕುರಿತು ವಿದ್ಯುನ್ಮಾನ ರೀತಿಯಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುತ್ತಿದ್ದಾರೆ. ಇವುಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸಲಾಗುತ್ತಿದೆ. ಎಲ್ಲಾ ಮರುಪಾವತಿಗಳನ್ನು ಆನ್ ಲೈನ್ ಮೂಲಕವೇ ಮಾಡಲಾಗುತ್ತಿದೆ ಮತ್ತು ನೇರವಾಗಿ ತೆರಿಗೆ ಪಾವತಿದಾರರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ.

***


(Release ID: 1639540)