ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಸಚಿವರಿಂದ ಆರ್ಥಿಕತೆಯ ವೆಚ್ಚದ ಉತ್ತೇಜನಕ್ಕೆ 23 ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಬಂಡವಾಳ ವೆಚ್ಚ ಕುರಿತ ಪರಿಶೀಲನಾ ಸಭೆ
Posted On:
07 JUL 2020 7:12PM by PIB Bengaluru
ಕೇಂದ್ರ ಹಣಕಾಸು ಸಚಿವರಿಂದ ಆರ್ಥಿಕತೆಯ ವೆಚ್ಚದ ಉತ್ತೇಜನಕ್ಕೆ
23 ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳ ಬಂಡವಾಳ ವೆಚ್ಚ ಕುರಿತ ಪರಿಶೀಲನಾ ಸಭೆ
ಕೇಂದ್ರ ಹಣಕಾಸು ಮತ್ತು ಸಾಂಸ್ಥಿಕ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಂದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಇಂಧನ, ಕಲ್ಲಿದ್ದಲು, ಗಣಿ ಮತ್ತು ಅಣು ಇಂಧನ ಇಲಾಖೆ ಕಾರ್ಯದರ್ಶಿಗಳು ಮತ್ತು ಈ ಸಚಿವಾಲಯಗಳಿಗೆ ಸಂಬಂಧಿಸಿದ 23 ಕೇಂದ್ರ ಸಾರ್ವಜನಿಕ ವಲಯದ ಉದ್ಯಮ (ಸಿಪಿಎಸ್.ಇ.)ಗಳ ಸಿಎಂಡಿಗಳೊಂದಿಗೆ ಸಭೆ ನಡೆಸಿದರು. ಈ ಸಭೆ, ಆರ್ಥಿಕ ಪ್ರಗತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಬಾಧ್ಯಸ್ಥರೊಂದಿಗೆ ಹಣಕಾಸು ಸಚಿವರು ನಡೆಸುತ್ತಿರುವ ಸರಣಿ ಸಭೆಗಳ ಭಾಗವಾಗಿದೆ.
2019-20ನೇ ಹಣಕಾಸು ವರ್ಷದಲ್ಲಿ 23 ಸಿಪಿಎಸ್.ಇ.ಗಳಿಗಾಗಿ 1,64,822 ಕೋಟಿ ರೂ.ಗಳ ಸಿಎಪಿಇಎಕ್ಸ್ ಗುರಿಗೆ ಪ್ರತಿಯಾಗಿ, 1,66,029 ಕೋಟಿ ರೂ.ಗಳ ಅಂದರೆ ಶೇ.101 ಸಾಧನೆ ಮಾಡಲಾಗಿದೆ. ಪ್ರಥಮ ತ್ರೈಮಾಸಿಕ (2019-20 ಹಣಕಾಸು ವರ್ಷ)ದ ಸಾಧನೆ 26,320 ಕೋಟಿ ರೂ.ಗಳಾಗಿತ್ತು (ಶೇ.16) ಮತ್ತು ಪ್ರಥಮ ತ್ರೈಮಾಸಿಕದ (2020—21 ಹಣಕಾಸು ವರ್ಷ) ಸಾಧನೆ 20,202 ಕೋಟಿ ರೂ.ಗಳಾಗಿದೆ (ಶೇ.12). 2020-21 ಕ್ಕೆ ಸಿಎಪಿಇಎಕ್ಸ್ ಗುರಿ 1,65,510 ಕೋಟಿ ರೂ.ಗಳು.
ಭಾರತೀಯ ಆರ್ಥಿಕತೆಯ ವೃದ್ಧಿಗೆ ಉತ್ತೇಜನ ನೀಡುವಲ್ಲಿ ಸಿಪಿಎಸ್.ಇ.ಗಳ ಪಾತ್ರ ಮಹತ್ವವಾದದ್ದು ಎಂದು ಸಿಪಿಎಸ್.ಇ.ಗಳ ಪ್ರದರ್ಶನದ ಪರಾಮರ್ಶೆ ನಡೆಸುವ ವೇಳೆ, ಹಣಕಾಸು ಸಚಿವರು ತಿಳಿಸಿದರು. ಗುರಿಯನ್ನು ಸಾಧಿಸಲು ಮತ್ತು 2020-21ರ ಸಾಲಿನಲ್ಲಿ ಹಂಚಿಕೆ ಮಾಡಲಾಗಿರುವ ಹಣಕಾಸನ್ನು ನಿಗದಿತ ಕಾಲಮಿತಿಯೊಳಗೆ ಸೂಕ್ತವಾಗಿ ವಿನಿಯೋಗಿಸಲು ಇನ್ನೂ ಉತ್ತಮ ಪ್ರದರ್ಶನ ನೀಡುವಂತೆ ಸಿಪಿಎಸ್.ಇ.ಗಳನ್ನು ಉತ್ತೇಜಿಸಿದರು. ಸಿಪಿಎಸ್.ಇ.ಗಳ ಉತ್ತಮ ಪ್ರದರ್ಶನವು ಕೋವಿಡ್ -19ರ ಪರಿಣಾಮಗಳಿಂದ ಚೇತರಿಸಿಕೊಳ್ಳಲು ಆರ್ಥಿಕತೆಗೆ ದೊಡ್ಡ ರೀತಿಯಲ್ಲಿ ನೆರವಾಗುತ್ತದೆ ಎಂದು ತಿಳಿಸಿದರು.
2020-21ರ 2ನೇ ತ್ರೈಮಾಸಿಕದೊಳಗೆ ಹಂಚಿಕೆಯಾದ ಹಣದ ಶೇ.50ರಷ್ಟು ಬಂಡವಾಳ ವೆಚ್ಚವನ್ನು ಖಾತ್ರಿಪಡಿಸುವ ಸಲುವಾಗಿ ಸಿಪಿಎಸ್.ಇ.ಗಳ ಪ್ರದರ್ಶನದ ಮೇಲೆ ಆಪ್ತವಾಗಿ ನಿಗಾ ಇಡುವಂತೆ ಮತ್ತು ಯೋಜನೆ ರೂಪಿಸುವಂತೆ ಹಣಕಾಸು ಸಚಿವರು ಕಾರ್ಯದರ್ಶಿಗಳಿಗೆ ಸೂಚಿಸಿದರು. ಬಗೆಹರಿಯದ ಸಮಸ್ಯೆಗಳ ತಕ್ಷಣದ ಪರಿಹಾರಕ್ಕಾಗಿ ಡಿಇಎ / ಡಿಪಿಇಗೆ ತತ್ ಕ್ಷಣವೇ ಫ್ಲ್ಯಾಗ್ ಮಾಡಬೇಕು ಎಂದು ಅವರು ಹೇಳಿದರು.
ಸಚಿವಾಲಯಗಳು/ ಸಿಪಿಎಸ್.ಇ.ಗಳು ಕೋವಿಡ್-19 ನಿಂದಾಗಿ ಎದುರಿಸಿದ ಸಮಸ್ಯೆಗಳಾದ ಮಾನವ ಶಕ್ತಿಯ ಅಲಭ್ಯತೆ, ಆಮದಿನಲ್ಲಿನ ವಿಳಂಬ, ಸಿಪಿಎಸ್.ಇ.ಗಳು ಅಂದರೆ ಎನ್.ಪಿ.ಸಿಐ.ಎಲ್ ಮತ್ತು ಎನ್.ಎಲ್.ಸಿ.ಗಳ ಬಾಕಿಯ ಪಾವತಿಯಲ್ಲಿ ಡಿಸ್ಕಾಂಗಳಿಂದ ವಿಳಂಬ ಇತ್ಯಾದಿಯ ಬಗ್ಗೆ ಚರ್ಚಿಸಲಾಯಿತು.
ಕೇಂದ್ರ ಸಚಿವೆ ಶ್ರೀಮತಿ ನಿರ್ಮಲ ಸೀತಾರಾಮನ್ ಅವರು, ಅಸಾಧಾರಣ ಸನ್ನಿವೇಶದಲ್ಲಿ ಅಸಾಧಾರಣ ಪ್ರಯತ್ನಗಳ ಅಗತ್ಯವಿದ್ದು, ಸಂಘಟಿತ ಪ್ರಯತ್ನಗಳಿಂದ, ನಾವು ಉತ್ತಮ ಪ್ರದರ್ಶನ ನೀಡುವುದಷ್ಟೇ ಅಲ್ಲದೆ, ಭಾರತೀಯ ಆರ್ಥಿಕತೆಯು ಉತ್ತಮ ಫಲಿತಾಂಶದ ಸಾಧನೆ ಮಾಡಲು ನೆರವಾಗುತ್ತದೆ ಎಂದು ಪ್ರತಿಪಾದಿಸಿದರು.
***
(Release ID: 1637095)
Visitor Counter : 272