ಸಂಪುಟ

ಸಂವಿಧಾನದ ವಿಧಿ 340ರ ಅನ್ವಯ ಇತರ ಹಿಂದುಳಿದ ವರ್ಗಗಳ ಕೇಂದ್ರೀಯ ಪಟ್ಟಿಯಲ್ಲಿ ಉಪ - ವಿಭಾಗೀಕರಣದ ಕುರಿತಂತೆ ಪರಿಶೀಲಿಸಲು ನೇಮಿಸಲಾದ ಆಯೋಗದ ಅವಧಿ ವಿಸ್ತರಣೆಗೆ ಸಂಪುಟದ ಅನುಮೋದನೆ

Posted On: 24 JUN 2020 4:34PM by PIB Bengaluru

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಇತರ ಹಿಂದುಳಿದ ವರ್ಗಗಳ ಉಪ –ವಿಭಾಗೀಕರಣದ ಪರಿಶೀಲನೆಗಾಗಿ ನೇಮಿಸಲಾದ ಆಯೋಗದ ಅವಧಿಯನ್ನು ಆರು ತಿಂಗಳ ಕಾಲ ಅಂದರೆ, 31.1.2021 ರವರೆಗೆ ವಿಸ್ತರಿಸುವುದಕ್ಕೆ ಅನುಮೋದನೆ ನೀಡಿದೆ.

ಉದ್ಯೋಗ ಸೃಷ್ಟಿ ಸಾಮರ್ಥ್ಯ ಸಹಿತ ಪರಿಣಾಮ:

ಈಗ ಹಾಲಿ ಒ.ಬಿ.ಸಿ. ಪಟ್ಟಿಯಲ್ಲಿರುವ ಸಮುದಾಯಗಳಿಗೆ , ಕೇಂದ್ರ ಸರಕಾರದ ಹುದ್ದೆಗಳಿಗೆ ನೇಮಕಾತಿಯಲ್ಲಿ ಹೆಚ್ಚಿನ ಪ್ರಯೋಜನಗಳು ಲಭ್ಯವಾಗಿಲ್ಲದಿದ್ದರೆ ಮತ್ತು ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶಗಳು ದೊರೆಯದಿದ್ದರೆ ಅವರಿಗೆ ಈ ಆಯೋಗದ ಶಿಫಾರಸುಗಳ ಅನುಷ್ಟಾನದಿಂದ ಪ್ರಯೋಜನವಾಗುವ ನಿರೀಕ್ಷೆ ಇದೆ. ಆಯೋಗವು ಒ.ಬಿ.ಸಿ.ಗಳ ಕೇಂದ್ರೀಯ ಪಟ್ಟಿಯಲ್ಲಿ ಅಂಚಿಗೆ ಸರಿಸಲ್ಪಟ್ಟಿರುವ ಸಮುದಾಯಗಳಿಗೆ ಪ್ರಯೋಜನವಾಗುವ ರೀತಿಯಲ್ಲಿ ಶಿಫಾರಸುಗಳನ್ನು ಮಾಡುವ ಸಾಧ್ಯತೆಗಳಿವೆ.

ಖರ್ಚು ವೆಚ್ಚ:

ಆಯೋಗದ ಆಡಳಿತಾತ್ಮಕ ಮತ್ತು ಇತರ ಖರ್ಚು ವೆಚ್ಚಗಳನ್ನು ಸಾಮಾಜಿಕ ನ್ಯಾಯ ಮತ್ತು ಸಶಕ್ತೀಕರಣ ಸಚಿವಾಲಯ ಭರಿಸಲಿದೆ.

ಲಾಭಗಳು:

ಕೇಂದ್ರೀಯ ಎಸ್.ಇ.ಬಿ.ಸಿ.ಗಳ ಪಟ್ಟಿಯಲ್ಲಿ ಸೇರಿರುವ ಜಾತಿಗಳಿಗೆ/ ಸಮುದಾಯಗಳಿಗೆ ಒಳಪಟ್ಟಿರುವ ಎಲ್ಲಾ ವ್ಯಕ್ತಿಗಳಲ್ಲಿ, ಈಗಿರುವ ಒ.ಬಿ.ಸಿ. ಗಳಿಗಾಗಿರುವ ಮೀಸಲಾತಿಯ ಯೋಜನೆಯಲ್ಲಿ ಕೇಂದ್ರ ಸರಕಾರದ ಹುದ್ದೆಗಳಲ್ಲಿ ಮತ್ತು ಕೇಂದ್ರ ಸರಕಾರದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾವಕಾಶದಂತಹ ಪ್ರಮುಖ ಪ್ರಯೋಜನಗಳನ್ನು ಪಡೆಯಲಾಗದವರಿಗೆ ಪ್ರಯೋಜನಗಳು ಲಭ್ಯವಾಗುವಂತೆ ಮಾಡಲು ಈ ಆಯೋಗವನ್ನು ರಚಿಸಲಾಗಿದೆ.

ಅನುಷ್ಟಾನ ವೇಳಾಪಟ್ಟಿ:

ಆಯೋಗದ ಅವಧಿ ಹೆಚ್ಚಳ ಆದೇಶ ಮತ್ತು ಅದರ ವಿಷಯ ವ್ಯಾಪ್ತಿಯನ್ನು ಹೆಚ್ಚಿಸುವ ಆದೇಶಗಳನ್ನು ರಾಜ್ಯಪತ್ರದಲ್ಲಿ ರಾಷ್ಟ್ರಪತಿಗಳ ಆದೇಶದ ರೂಪದಲ್ಲಿ, ಅದಕ್ಕೆ ಗೌರವಾನ್ವಿತ ರಾಷ್ಟ್ರಪತಿಗಳ ಅನುಮೋದನೆ ದೊರಕಿದ ಬಳಿಕ ಪ್ರಕಟಿಸಲಾಗುವುದು.

ಹಿನ್ನೆಲೆ:

2017ರ ಅಕ್ಟೋಬರ್ 2 ರಂದು ಸಂವಿಧಾನದ ವಿಧಿ 340ರ ಅಡಿಯಲ್ಲಿ ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ ಆಯೋಗವನ್ನು ರಚಿಸಲಾಗಿತ್ತು. ನ್ಯಾಯಮೂರ್ತಿ (ನಿವೃತ್ತ ) ಶ್ರೀಮತಿ ಜಿ. ರೋಹಿಣಿ ನೇತೃತ್ವದ ಈ ಆಯೋಗ 2017ರ ಅಕ್ಟೋಬರ್ 11 ರಂದು ಕಾರ್ಯಾರಂಭ ಮಾಡಿತ್ತು. ಮತ್ತು ಅಂದಿನಿಂದ ಎಲ್ಲಾ ಒ.ಬಿ.ಸಿ.ಗಳನ್ನು ಉಪವಿಭಜನೆ ಮಾಡಿರುವ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಹಿಂದುಳಿದ ವರ್ಗಗಳ ಆಯೋಗಗಳ ಜೊತೆ ಸಂವಾದ ನಡೆಸಿತ್ತು. ಪುನರಾವರ್ತನೆ, ಅಸ್ಪಷ್ಟತೆ, ಅಸಂಗತತೆಗಳ ಕಾರಣಕ್ಕಾಗಿ ಮತ್ತು ಭಾಷಾಂತರದಲ್ಲಿಯ ದೋಷಗಳ ಕಾರಣದಿಂದ ಆಯೋಗವು ಇನ್ನಷ್ಟು ಕಾಲಾವಧಿ ಬೇಕೆಂಬ ನಿಲುವಿಗೆ ಬಂದಿತ್ತು. ಈಗಿರುವ ಒ.ಬಿ.ಸಿ.ಗಳ ಕೇಂದ್ರೀಯ ಪಟ್ಟಿಯಲ್ಲಿರುವ ದೋಷಗಳನ್ನು ನಿವಾರಿಸುವುದಕ್ಕೂ ಈ ಕಾಲಾವಕಾಶ ಬೇಕೆಂಬ ಅಭಿಪ್ರಾಯಕ್ಕೆ ಆಯೋಗವು ಬಂದಿತ್ತು. ಇದರಿಂದಾಗಿ ಆಯೋಗವು ತನ್ನ ಅವಧಿಯನ್ನು 2020 ರ ಜುಲೈ 31 ರವರೆಗೆ ವಿಸ್ತರಿಸಲು ಕೋರಿತ್ತು. ಆದರೆ ರಾಷ್ಟ್ರವ್ಯಾಪೀ ಲಾಕ್ಡೌನ್ ಕಾರಣದಿಂದಾಗಿ ಮತ್ತು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದಿಂದಾಗಿ ಸಂಚಾರದ ಮೇಲೆ ಜಾರಿ ಮಾಡಲಾದ ನಿರ್ಬಂಧಗಳಿಂದಾಗಿ ಆಯೋಗಕ್ಕೆ ತನಗೆ ವಹಿಸಿರುವ ಕಾರ್ಯದಲ್ಲಿ ತೊಡಗಿಕೊಳ್ಳುವುದು ಸಾಧ್ಯವಾಗಲಿಲ್ಲ. ಆದುದರಿಂದ ಆಯೋಗದ ಅವಧಿಯನ್ನು ಇನ್ನೂ ಆರು ತಿಂಗಳು ಅಂದರೆ 2021 ರ ಜನವರಿ 31 ರವರೆಗೆ ವಿಸ್ತರಿಸಲಾಗುತ್ತಿದೆ.
 

***



(Release ID: 1634239) Visitor Counter : 292