ಬುಡಕಟ್ಟು ವ್ಯವಹಾರಗಳ ಸಚಿವಾಲಯ
ಉಪ ಅರಣ್ಯ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ
Posted On:
18 JUN 2020 7:42PM by PIB Bengaluru
ಉಪ ಅರಣ್ಯ ಉತ್ಪನ್ನಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ
ಆದಿವಾಸಿ ಆರ್ಥಿಕತೆಗೆ 2000 ಕೋಟಿ ರೂ.ಗೂ ಅಧಿಕ ಹಣ ಸೇರ್ಪಡೆ
ಉಪ ಅರಣ್ಯ ಉತ್ಪನ್ನಗಳ ಖರೀದಿ ಪ್ರಕ್ರಿಯೆ ಕಳೆದ ಏಪ್ರಿಲ್ ನಿಂದೀಚೆಗೆ 17 ರಾಜ್ಯಗಳಲ್ಲಿ ಆರಂಭವಾಗಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯಗಳಿಂದ 835 ಕೋಟಿ ರೂ. ಮತ್ತು ಖಾಸಗಿ ವ್ಯಾಪಾರಿಗಳಿಂದ (ಮಂಡಿಗಳು ಮತ್ತು ಹಾಟ್ ಬಜಾರ್ ಗಳ ಮೂಲಕ ಮಾರಾಟ) ಬಹುತೇಕ 1200 ಕೋಟಿ ರೂ.ಗಳಷ್ಟು ಮೌಲ್ಯದ ಉತ್ಪನ್ನಗಳು ಖರೀದಿಯಾಗಿವೆ. ಇದರಿಂದಾಗಿ ಒಟ್ಟಾರೆ ಖರೀದಿ ಈ ವರ್ಷ ಸುಮಾರು 2000 ಕೋಟಿ ರೂ.ಗಳಾಗಿದ್ದು, ಉಪ ಅರಣ್ಯ ಉತ್ಪನ್ನಕ್ಕೆ ಅನುಗುಣವಾಗಿ ಬುಡಕಟ್ಟು ಜನರಿಗೆ ನೇರ ನಗದು ವರ್ಗಾವಣೆಯಾದಂತಾಗಿದೆ.
ನವದೆಹಲಿಯಲ್ಲಿ ಇಂದು ಟ್ರೈಫೆಡ್ ಆಯೋಜಿಸಿದ್ದ ವೆಬಿನಾರ್ ವೇಳೆ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಲಾಯಿತು. “ಎಂ ಎಫ್ ಪಿಗಾಗಿ ಎಂ ಎಸ್ ಪಿ; ಭಾರತದ ಆದಿವಾಸಿಗಳ ಮೂಲ.” ಎಂಬ ಶೀರ್ಷಿಕೆಯ ವೆಬಿನಾರ್ ನ ಅಧ್ಯಕ್ಷತೆಯನ್ನು ಟ್ರೈಫೆಡ್ ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಪ್ರವೀರ್ ಕೃಷ್ಣ ವಹಿಸಿದ್ದರು.
ಬುಡಕಟ್ಟು ವ್ಯವಹಾರಗಳ ಸಚಿವಾಲಯ ಉಪಕ್ರಮ ವನ ಧನ ಯೋಜನೆ (ನವೋದ್ಯಮ ಯೋಜನೆ) ಆರಂಭಿಸಿದ ಒಂದು ವರ್ಷದಲ್ಲೇ ಅತ್ಯಂತ ಯಶಸ್ವಿಯಾಗಿದೆ. ಇದರಡಿ 1205 ಬುಡಕಟ್ಟು ಉದ್ಯಮಗಳು ಸ್ಥಾಪನೆಯಾಗಿವೆ ಮತ್ತು ಒಟ್ಟು 3.6 ಲಕ್ಷ ಆದಿವಾಸಿಗಳಿಗೆ ಉದ್ಯೋಗಾವಕಾಶಗಳು ದೊರೆತಿವೆ ಮತ್ತು 22 ರಾಜ್ಯಗಳಲ್ಲಿ 18 ಸಾವಿರ ಸ್ವಸಹಾಯ ಗುಂಪುಗಳು ರಚನೆಯಾಗಿವೆ. ಈ ಯಶಸ್ವಿ ಅನುಷ್ಠಾನದಿಂದಾಗಿ ಅರಣ್ಯ ಉಪ ಉತ್ಪನ್ನ ಯೋಜನೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲು ಮತ್ತು ದೇಶದ ಮೂಲೆ ಮೂಲೆಗೂ ಆ ಪದಾರ್ಥಗಳನ್ನು ಕೊಂಡೊಯ್ಯಲು ನೆರವಾಗಿದೆ.
ಪ್ರವೀರ್ ಕೃಷ್ಣ ಅವರು ಪ್ರಾತ್ಯಕ್ಷಿಕೆ ಮೂಲಕ ಯೋಜನೆಯ ಕುರಿತು ವಿವರಿಸಿದರು. ಆರಂಭಿಕವಾಗಿ ಎರಡು ರಾಜ್ಯಗಳಲ್ಲಿ ಯೋಜನೆ ಆರಂಭವಾಯಿತು. ನಂತರ ಅದು 17 ರಾಜ್ಯಗಳಿಗೆ ವಿಸ್ತರಣೆಗೊಂಡಿದೆ ಎಂದರು. ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ಗುಜರಾತ್, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ್, ತಮಿಳುನಾಡು, ತ್ರಿಪುರಾ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಯೋಜನೆ ಆರಂಭವಾಗಿ, ಉಪ ಅರಣ್ಯ ಉತ್ಪನ್ನ (ಎಂ ಎಫ್ ಪಿ) ವ್ಯಾಪಾರದಲ್ಲಿ ಆದಿವಾಸಿಗಳಿಗೆ ನ್ಯಾಯಯುತ ಬೆಲೆ ದೊರಕುತ್ತಿದೆ.
ಕೋವಿಡ್-19 ಸಾಂಕ್ರಾಮಿಕದಿಂದ ಅನಿರೀಕ್ಷಿತವಾಗಿ ಎದುರಾಗಿರುವ ಸವಾಲುಗಳಿಂದಾಗಿ ಬುಡಕಟ್ಟು ಜನಸಂಖ್ಯೆಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ. ಯುವಜನರಲ್ಲಿ ನಿರುದ್ಯೋಗ ಸೃಷ್ಟಿಯಾಗಿದೆ. ಆದಿವಾಸಿಗಳ ಮರುವಲಸೆ ಅಪಾಯದಿಂದಾಗಿ ಇಡೀ ಆದಿವಾಸಿ ಆರ್ಥಿಕತೆ ಮೇಲೆ ಗಂಭೀರ ಪರಿಣಾಮಗಳಾಗಿವೆ. ಇಂತಹ ಸನ್ನಿವೇಶದಲ್ಲಿ ಎಂ ಎಫ್ ಪಿಗಾಗಿ ಎಂ ಎಸ್ ಪಿ ಎಲ್ಲಾ ರಾಜ್ಯಗಳಿಗೂ ಒಂದು ಅವಕಾಶವನ್ನು ಒದಗಿಸಿದೆ.
ಏಪ್ರಿಲ್ ಮತ್ತು ಜೂನ್ ನಡುವಿನ ತಿಂಗಳುಗಳು ಉಪ ಖನಿಜ ಉತ್ಪನ್ನಗಳ ಸಂಗ್ರಹದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದ್ದು, ಸರ್ಕಾರದ ಹಸ್ತಕ್ಷೇಪವಿಲ್ಲದೆ ಮತ್ತು ಖರೀದಿ ಇಲ್ಲದಿದ್ದರೆ ಕೋವಿಡ್-19ನಿಂದಾಗಿ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ವಿಶೇಷವಾಗಿ ಆದಿವಾಸಿಗಳು ಭಾರೀ ಅನಾಹುತಗಳನ್ನು ಎದುರಿಸಬೇಕಾಗಿತ್ತು. ಈ ನಿಟ್ಟಿನಲ್ಲಿ ಆದಿವಾಸಿಗಳ ಜೀವನೋಪಾಯ ಮತ್ತು ಭದ್ರತೆಯನ್ನು ರಕ್ಷಿಸಲು ಹಾಗೂ ಉತ್ತೇಜಿಸಲು ಈ ಸಂಕಷ್ಟದ ಸಮಯದಲ್ಲಿ ರಾಜ್ಯಗಳು ಮತ್ತು ಬುಡಕಟ್ಟು ವ್ಯವಹಾರಗಳ ಸಚಿವಾಲಯದ ನಡುವೆ ಜಂಟಿ ಕಾರ್ಯತಂತ್ರ ಕರಡನ್ನು ಸಿದ್ಧಪಡಿಸಲು ಹಲವು ಸಭೆಗಳನ್ನು(ವಿಡಿಯೋ ಕಾನ್ಫರೆನ್ಸ್ ಮೂಲಕ) ನಡೆಸಲಾಗಿದೆ. ಸಂಕಷ್ಟದಲ್ಲಿರುವ ಆದಿವಾಸಿ ಆರ್ಥಿಕತೆಗೆ ಉತ್ತೇಜನ ನೀಡಲು 2020ರ ಮೇ 1 ರಂದು ಎಂ ಎಫ್ ಪಿಗಾಗಿ ಎಂ ಎಸ್ ಪಿ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸಲಾಯಿತು. ಅದರಲ್ಲಿ ಎಂ ಎಫ್ ಪಿಗಳಿಗೆ ಶೇ.90ರ ವರೆಗೆ ಎಂ ಎಸ್ ಪಿ ದರಗಳನ್ನು ಹೆಚ್ಚಳ ಮಾಡಲಾಗಿತ್ತು ಮತ್ತು ಇದರಿಂದ ಆದಿವಾಸಿಗಳಿಗೆ ಹೆಚ್ಚಿನ ಆದಾಯ ದೊರಕುವಂತೆ ಸಹಾಯ ಮಾಡಲಾಯಿತು.
ಎಂ ಎಫ್ ಪಿಗಾಗಿ ಎಂ ಎಸ್ ಪಿ ಪಟ್ಟಿಯಲ್ಲಿ 23 ಹೊಸ ಉತ್ಪನ್ನಗಳನ್ನು ಸೇರ್ಪಡೆ ಮಾಡಲು ಸಚಿವಾಲಯ ಶಿಫಾರಸ್ಸು ಮಾಡಿತ್ತು. ಅದರಲ್ಲಿ ಬುಡಕಟ್ಟು ಜನರು ಸಂಗ್ರಹಿಸುವ ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳೂ ಸಹ ಸೇರಿವೆ.
ಆದಿವಾಸಿ ಜನರಲ್ಲಿ ಸಾಮಾಜಿಕ ಅಂತರ ಪಾಲನೆ ಕ್ರಮಗಳು ಮತ್ತು ತಮ್ಮ ಕೆಲಸ ಕಾರ್ಯದ ವೇಳೆ ಅಗತ್ಯ ಶುಚಿತ್ವ ಕಾಯ್ದುಕೊಳ್ಳುವ ಕ್ರಮಗಳ ಕುರಿತಂತೆ ಜಾಗೃತಿ ಮೂಡಿಸಲು ಕಳೆದ ಏಪ್ರಿಲ್ ನಿಂದೀಚೆಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಯುನಿಸೆಫ್, ಡಬ್ಲ್ಯೂಎಚ್ಒ ಮತ್ತಿತರ ಸಂಸ್ಥೆಗಳ ಜೊತೆಗೂಡಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವೆಬಿನಾರ್ ಗಳನ್ನು ನಡೆಸಿದ ಬಗೆಯನ್ನು ಶ್ರೀ ಕೃಷ್ಣ ವಿವರಿಸಿದರು. ಇದರ ಉದ್ದೇಶ “ಕೋವಿಡ್ ನಿಯಂತ್ರಿಸಿ ಮತ್ತು ಕೆಲಸವನ್ನಲ್ಲ” ಎಂಬುದು ಈ ಸಂದೇಶವನ್ನು ರಾಜ್ಯಗಳಲ್ಲಿ ಜಾಹಿರಾತು, ಅಭಿಯಾನಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವ್ಯಾಪಕವಾಗಿ ಪ್ರಚುರ ಪಡಿಸಲಾಯಿತು.
ಬಿಕ್ಕಟ್ಟಿನ ಸಮಯದಲ್ಲಿ ಕೈಗೊಂಡ ಈ ಅದ್ಭುತ ಪ್ರಯತ್ನಗಳ ಕುರಿತಂತೆ ಸವಿವರವಾಗಿ ತಿಳಿಸಿದ ಶ್ರೀ ಪ್ರವೀರ್ ಕೃಷ್ಣ, ಈ ಯೋಜನೆ ಏಕಾಏಕಿ ಉದ್ಭವಿಸಿದ್ದಲ್ಲ ಮತ್ತು ಒಮ್ಮೆಲೇ ನಡೆಸಿದ ಪ್ರಯತ್ನವಲ್ಲ ಎಂದು ಹೇಳಿದರು. ಸಂವಿಧಾನದ ಕಲಂ 275 (1)ರಡಿ ಕೋವಿಡ್-19 ಪರಿಹಾರ ಯೋಜನೆಯಲ್ಲಿ ಎಂ ಎಫ್ ಪಿ ಸಂಸ್ಕರಣೆ, ಕಟಾವು, ಖರೀದಿ ಮತ್ತು ಸಂಗ್ರಹ ಕಾರ್ಯಗಳನ್ನು ವಿಸ್ತರಿಸಲು ರಾಜ್ಯಗಳಿಗೆ ನೆರವು ನೀಡುವುದು; ವನ ಧನ ಕೇಂದ್ರಗಳ ಸ್ಥಾಪನೆ; ಬುಡಕಟ್ಟು ಉದ್ಯಮಶೀಲತೆ ಉತ್ತೇಜನ; ಬುಡಕಟ್ಟು ಉತ್ಪಾದನಾ ಕಂಪನಿಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ (ಸಿಎಫ್ ಸಿಎಸ್) ಸ್ಥಾಪನೆ. ಆದಿವಾಸಿ ಆಹಾರ ಮತ್ತು ಪೌಷ್ಠಿಕಾಂಶ ಭದ್ರತೆ ಹಾಗೂ ಆದಿವಾಸಿ ಜನರಿಗೆ ಆಹಾರ ಮತ್ತು ಆಹಾರೇತರ ನೆರವು ಹಾಗೂ ಬುಡಕಟ್ಟು ಜನರ ಆರೋಗ್ಯ ರಕ್ಷಣಾ ವ್ಯವಸ್ಥೆ ಬಲವರ್ಧನೆ ಹಾಗೂ ಆರೋಗ್ಯ ರಕ್ಷಣಾ ಮುನ್ನೆಚ್ಚರಿಕೆ ಕ್ರಮಗಳು; ಎಂ ಎಫ್ ಪಿಗಾಗಿ ಎಂ ಎಸ್ ಪಿ ಯೋಜನೆಯಿಂದ ಸುಮಾರು 1300 ಕೋಟಿ ರೂ.ಗೂ ಅಧಿಕ ಉತ್ತೇಜನ ದೊರಕಿದೆ.
ಈ ಸಂಕ್ಷಿಪ್ತವಾದ ವಿವರಣೆಯನ್ನು ಒದಗಿಸಿದ ಶ್ರೀ ಪ್ರವೀರ್ ಕೃಷ್ಣ, ಮಹಾರಾಷ್ಟ್ರ, ಒಡಿಶಾ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳ ಕೆಲವು ನೈಜ ಯಶಸ್ವಿ ಉದಾಹರಣೆಗಳನ್ನು ನೀಡಿದರು. ಹೇಗೆ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಅದಕ್ಕೆ ಎಂತಹ ವ್ಯವಸ್ಥೆ ಇದೆ, ಸಾಂಸ್ಥಿಕ ವಿಧಾನದ ಕುರಿತು ವಿವರಿಸಿದರು. ಖರೀದಿ ಪ್ರಕ್ರಿಯೆ ತಾತ್ಕಾಲಿಕವಲ್ಲ, ಅದಕ್ಕೆ ತನ್ನದೇ ಆದ ವ್ಯವಸ್ಥೆಯನ್ನು ಹೊಂದಿದೆ. ಪ್ರತಿಯೊಂದು ಕೇಂದ್ರದಲ್ಲೂ ನಾಮಫಲಕ ಮತ್ತು ವಿದ್ಯುನ್ಮಾನ ತೂಕದ ಯಂತ್ರವಿದೆ. ಪರಿಷ್ಕೃತ ದರಗಳ ಕುರಿತು ಸಂದೇಶ ಮತ್ತು ಸಂವಹನ ಪದ್ಧತಿಗಳ ಮೂಲಕ ಪ್ರಚಾರ ನೀಡಲಾಗುತ್ತಿದೆ. ಅಲ್ಲದೆ ಖರೀದಿ ಗಾತ್ರ, ಖರೀದಿಸಲಾಗುತ್ತಿರುವ ವಸ್ತುಗಳು ಮತ್ತು ಈ ಎಲ್ಲ ಪ್ರಕರಣಗಳಲ್ಲಿ ಖರೀದಿ ಕೇಂದ್ರಗಳ ವಿಚಾರಗಳನ್ನು ಪ್ರಮುಖವಾಗಿ ತಿಳಿಸಿ ಕೊಡಲಾಗುತ್ತಿದೆ.
ಈ ವಿಷಯದಲ್ಲಿ ಛತ್ತೀಸ್ ಗಢ, ಚಾಂಪಿಯನ್ ಆಗಿ ಹೊರಹೊಮ್ಮಿದೆ ಎಂದು ಬಹಿರಂಗಪಡಿಸಿದ ಶ್ರೀ ಪ್ರವೀರ್ ಕೃಷ್ಣ ಅದಕ್ಕಾಗಿ ಆ ರಾಜ್ಯದ ಶ್ಲಾಘನೀಯ ಪ್ರಯತ್ನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಆ ರಾಜ್ಯದಲ್ಲಿ 866 ಖರೀದಿ ಕೇಂದ್ರಗಳಿವೆ ಮತ್ತು ರಾಜ್ಯ ಸ್ವಸಹಾಯ ಗುಂಪುಗಳ ಅತಿದೊಡ್ಡ ಜಾಲವನ್ನು ಹೊಂದಿದ್ದು, 139 ವನ ಧನ ಕೇಂದ್ರಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು.
ಆ ರಾಜ್ಯ ಅಳವಡಿಸಿಕೊಂಡ ವಿನೂತನ ಕ್ರಮಗಳಿಂದಾಗಿ ಯಶಸ್ಸು ಗಳಿಸಲು ಸಾಧ್ಯವಾಗಿದೆ. ರಾಜ್ಯದ ರಾಮಾನುಜ್ ಗಂಜ್ ಜಿಲ್ಲೆಯಲ್ಲಿ ಮನೆ ಮನೆ ಸಂಗ್ರಹ ಆರಂಭಿಸಲಾಗಿದೆ. ಅರಣ್ಯ, ಕಂದಾಯ ಹಾಗೂ ವನ ಧನ ವಿಕಾಸ ಕೇಂದ್ರ ಅಧಿಕಾರಿಗಳ ಸಂಚಾರಿ ಘಟಕಗಳನ್ನು ನಿಯೋಜಿಸಲಾಗಿದ್ದು, ಅವು ಪ್ರತಿಯೊಂದು ಮನೆಗೂ ತೆರಳಿ, ಅರಣ್ಯ ಉತ್ಪನ್ನವನ್ನು ಖರೀದಿಸುತ್ತಿವೆ. ಛತ್ತೀಸ್ ಗಢದ ಈ ಯಶಸ್ವಿ ಪ್ರಯತ್ನ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಮತ್ತು ಎಲ್ಲ ರಾಜ್ಯಗಳು ಈ ವ್ಯವಸ್ಥೆಯ ವೀಕ್ಷಣೆಗೆ ತಂಡಗಳನ್ನು ಕಳುಹಿಸುತ್ತಿದ್ದು, ನಂತರ ಅವು ಈ ಉತ್ತಮ ಪದ್ಧತಿಯನ್ನು ತಮ್ಮ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಲು ಮುಂದಾಗಿವೆ.
ಶ್ರೀ ಪ್ರವೀರ್ ಕೃಷ್ಣ ಅವರು, ಭವಿಷ್ಯದ ಮಹತ್ವಾಕಾಂಕ್ಷೆಯ ಯೋಜನೆಗಳ ಬಗ್ಗೆ ಮಾತನಾಡುತ್ತ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಅವರು ಸೂಕ್ತ ಸಮನ್ವಯ ಮತ್ತು ಉತ್ತೇಜನದಿಂದಾಗಿ ಎಂ ಎಫ್ ಪಿಗಾಗಿ ಎಂ ಎಸ್ ಪಿ, ಆದಿವಾಸಿ ಅರ್ಥ ವ್ಯವಸ್ಥೆಯನ್ನು ಪರಿವರ್ತಿಸಲಿದೆ ಮತ್ತು ಆದಿವಾಸಿ ಜನರನ್ನು ಸಬಲೀಕರಣಗೊಳಿಸಲಿದೆ ಎಂದರು. “ಮೇರಾ ವನ್, ಮೇರಾ ಧನ್, ಮೇರಾ ಉದ್ಯಮ್” ಇದು ಪ್ರಸ್ತುತ ಹಾಗೂ ಭವಿಷ್ಯದ ಧ್ಯೇಯವಾಗಿದೆ.
***
(Release ID: 1632550)
Visitor Counter : 719