ರೈಲ್ವೇ ಸಚಿವಾಲಯ

ಸಹಾಯಕ ಲೊಕೊ ಪೈಲಟ್‌ ಗಳು (ಎ.ಎಲ್‌.ಪಿ.ಗಳು) ಮತ್ತು ತಂತ್ರಜ್ಞರ ನೇಮಕಾತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರೈಲ್ವೆ, ವಿಶ್ವದ ಅತಿದೊಡ್ಡ ಪ್ರಕ್ರಿಯೆಗಳಲ್ಲಿ ಒಂದಾಗಿದೆ 64 ಸಾವಿರ ಎಎಲ್.ಪಿ. ಮತ್ತು ತಂತ್ರಜ್ಞರ ಹುದ್ದೆಗಳಿಗೆ 47.45 ಲಕ್ಷ ಅಭ್ಯರ್ಥಿಗಳಿಂದ ಅಭೂತಪೂರ್ವ ನೋಂದಣಿ

Posted On: 18 JUN 2020 1:19PM by PIB Bengaluru

ಸಹಾಯಕ ಲೊಕೊ ಪೈಲಟ್‌ ಗಳು (ಎ.ಎಲ್‌.ಪಿ.ಗಳು) ಮತ್ತು ತಂತ್ರಜ್ಞರ ನೇಮಕಾತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಭಾರತೀಯ ರೈಲ್ವೆ, ವಿಶ್ವದ ಅತಿದೊಡ್ಡ ಪ್ರಕ್ರಿಯೆಗಳಲ್ಲಿ ಒಂದಾಗಿದೆ
64 ಸಾವಿರ ಎಎಲ್.ಪಿ. ಮತ್ತು ತಂತ್ರಜ್ಞರ ಹುದ್ದೆಗಳಿಗೆ 47.45 ಲಕ್ಷ ಅಭ್ಯರ್ಥಿಗಳಿಂದ ಅಭೂತಪೂರ್ವ ನೋಂದಣಿ

 

ಸಮಿತಿ 64,371 ಹುದ್ದೆಗಳ (27,795 ಎಎಲ್ಪಿಗಳು ಮತ್ತು 64,371 ತಂತ್ರಜ್ಞರು) ಪೈಕಿ 56,378 ಅಭ್ಯರ್ಥಿಗಳನ್ನು (26,968 ಎಎಲ್ಪಿಗಳು ಮತ್ತು 28,410 ತಂತ್ರಜ್ಞರು) ಅನುಮೋದಿಸಿದೆ.
 

40,420 ಅಭ್ಯರ್ಥಿಗಳಿಗೆ (22,223 ಎಎಲ್ಪಿಗಳು ಮತ್ತು 18,197 ತಂತ್ರಜ್ಞರು) ನೇಮಕಾತಿ ಪತ್ರ ನೀಡಲಾಗಿದೆ.
ಹೊಸದಾಗಿ ನೇಮಕಗೊಂಡ 19,120 ಅಭ್ಯರ್ಥಿಗಳಿಗೆ (10,123 ಸಹಾಯಕ ಲೋಕೋ ಪೈಲಟ್ ಗಳು (ಎಎಲ್ಪಿಗಳು) ಮತ್ತು 8,997 ತಂತ್ರಜ್ಞರು) ತರಬೇತಿ ಕೋವಿಡ್ ಲಾಕ್ ಡೌನ್ ಸಂಬಂಧಿತ ಕ್ರಮಗಳು ಸಡಿಲಗೊಂಡ ಬಳಿಕ ಆರಂಭವಾಗಲಿವೆ
ಉಳಿದ ಆಫರ್ ಲೆಟರ್ ಗಳನ್ನು ತಂಡದ ತರಬೇತಿ ಪೂರ್ಣಗೊಂಡ ಬಳಿಕ ಹಂತಹಂತವಾಗಿ ನೀಡಲಾಗುವುದು

ಭಾರತೀಯ ರೈಲ್ವೆ ತಾಂತ್ರಿಕೇತರ ಜನಪ್ರಿಯ ಪ್ರವರ್ಗಗಳ (ಎನ್.ಟಿ.ಪಿ.ಸಿ. – ಪದವಿಧರ ಮತ್ತು ಸ್ನಾತಕಪೂರ್ವ ಮಟ್ಟದ) ಹುದ್ದೆಗಳಿಗೆ ಪರೀಕ್ಷಾ ಪ್ರಕ್ರಿಯೆಯನ್ನು ತ್ವರಿತಗೊಳಿಸಲಿದೆ
ಒಟ್ಟು 1,26,30,885 (1.25 ಕೋಟಿಗೂ ಅಧಿಕ) ಆನ್ ಲೈನ್ ಅರ್ಜಿಗಳು ಎನ್.ಟಿ.ಪಿ.ಸಿ. ಹುದ್ದೆಗಳಿಗೆ ಸ್ವೀಕೃತವಾಗಿದೆ.
1.25 ಕೋಟಿ ಅರ್ಜಿದಾರರಿಗೆ ಬೃಹತ್ ಪರೀಕ್ಷೆ ನಡೆಸಲು ಕೋವಿಡ್ -19 ಸನ್ನಿವೇಶದಲ್ಲಿ ಎಲ್ಲ ನಿಯಮನಗಳೊಂದಿಗೆ ಸೂಕ್ತ ಕಾರ್ಯತಂತ್ರವನ್ನು ರೂಪಿಸಲಾಗುತ್ತಿದೆ
ಆರ್.ಆರ್.ಬಿ. ಗಳು ವೆಬ್ ಸೈಟ್‌ಗಳು ಮತ್ತು ವೈಯಕ್ತಿಕ ಎಸ್‌.ಎಂಎಸ್ ಮತ್ತು ಇ-ಮೇಲ್‌ಗಳಲ್ಲಿ ನಿಯಮಿತ ನವೀಕರಣಗಳ ಮೂಲಕ ಅಭ್ಯರ್ಥಿಗಳೊಂದಿಗೆ ನೇರ ಮತ್ತು ತ್ವರಿತ ಸಂವಹನದ ರೂಢಿಗಳನ್ನು ಅನುಸರಿಸುತ್ತಿವೆ.

 

ನವ ದೆಹಲಿ : ಜೂನ್ 18,2020

ವಿಶ್ವದ ಅತಿದೊಡ್ಡ ನೇಮಕಾತಿ ಪ್ರಕ್ರಿಯೆ ಎಂದು ಕರೆಯಬಹುದಾದ, ಮಹತ್ವದ ಸುರಕ್ಷತೆ ಮತ್ತು ಕಾರ್ಯಾಚರಣೆಯ ಹುದ್ದೆಗಳನ್ನು ಭರ್ತಿ ರೈಲ್ವೆ ಸಚಿವಾಲಯವು ಯಶಸ್ವಿಯಾಗಿ ಪೂರ್ಣಗೊಳಿಸಿದೆ ರೈಲ್ವೆ ನೇಮಕಾತಿ ಮಂಡಳಿ (ಆರ್.ಆರ್.ಬಿ.) ಕೇಂದ್ರೀಕೃತ ನೇಮಕಾತಿ ಅಧಿಸೂಚನೆ (ಸಿಇಎನ್)ನಂ. 01/2018ರ ರೀತ್ಯ 03.02.2018 ರಿಂದ 31.03.2018ರವರೆಗೆ ಒಟ್ಟು 64,371ಸಹಾಯಕ ಲೋಕೋ ಪೈಲಟ್ ಗಳು (ಎ.ಎಲ್.ಪಿ.ಗಳು) ಮತ್ತು ತಂತ್ರಜ್ಞರ ಜಂಟಿ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿಗಳನ್ನು ಕರೆದಿತ್ತು. ಒಟ್ಟು 47,45,176 ಆನ್ ಲೈನ್ ಅರ್ಜಿಗಳು ಸ್ವೀಕೃತಗೊಂಡಿದ್ದವು. ಆಯ್ಕೆ ಪ್ರಕ್ರಿಯೆ 3 ಹಂತಗಳನ್ನು ಒಳಗೊಂಡಿತ್ತು – ಕಂಪ್ಯೂಟರ್ ಆಧಾರಿತ ಪರೀಕ್ಷೆ, ಬಳಿಕ ವೈದ್ಯಕೀಯ ಪರೀಕ್ಷೆ (ಇದು ಲೊಕೊ ಪೈಲಟ್‌ ಗೆ ಅಗತ್ಯವಿರುವ ದೂರ ದೃಷ್ಟಿ / ವರ್ಣ ದೃಷ್ಟಿ ಮತ್ತು ಜಾಗರೂಕತೆಯ ಮಟ್ಟವನ್ನು ಪರಿಗಣಿಸುವ ಕಠಿಣ ವೈದ್ಯಕೀಯ ಪರೀಕ್ಷೆಗಳಲ್ಲಿ ಒಂದಾಗಿದೆ), ಮತ್ತು ಶಾರ್ಟ್ ಲಿಸ್ಟ್ (ಕಿರುಪಟ್ಟಿ) ಮಾಡಲಾದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ. ಸುಮಾರು 47.45 ಲಕ್ಷ ಅಭ್ಯರ್ಥಿಗಳು ಈ ಹುದ್ದೆಗಳಿಗೆ ನೋಂದಾಯಿಸಿಕೊಂಡಿದ್ದರು.

ಸಮಿತಿ 64,371 ಹುದ್ದೆಗಳ (27,795 ಎಎಲ್ಪಿಗಳು ಮತ್ತು 64,371 ತಂತ್ರಜ್ಞರು) ಪೈಕಿ 56,378 ಅಭ್ಯರ್ಥಿಗಳನ್ನು (26,968 ಎಎಲ್ಪಿಗಳು ಮತ್ತು 28,410 ತಂತ್ರಜ್ಞರು) ಅನುಮೋದಿಸಿದೆ. ನೇಮಕಾತಿ ಪತ್ರಗಳನ್ನು 40,420 ಅಭ್ಯರ್ಥಿಗಳಿಗೆ ನೀಡಲಾಗಿದೆ (22223 ಎಎಲ್ಪಿಗಳು, 18,197 ತಂತ್ರಜ್ಞರು). ಹೊಸದಾಗಿ ನೇಮಕಗೊಂಡ 19,120 ಅಭ್ಯರ್ಥಿಗಳಿಗೆ (10123 ಸಹಾಯಕ ಲೋಕೋ ಪೈಲಟ್ ಗಳು (ಎ.ಎನ್.ಪಿ.ಗಳು), 8997 ತಂತ್ರಜ್ಞರು) ತರಬೇತಿಯನ್ನು ಕೋವಿಡ್ ಲಾಕ್ ಡೌನ್ ಸಂಬಂಧಿತ ಕ್ರಮಗಳು ಸಡಿಲವಾದ ಬಳಿಕ ಆರಂಭಗೊಳ್ಳಲಿದೆ. ತರಬೇತಿ ಪ್ರಕ್ರಿಯೆ ಎಎಲ್ಪಿಗಳಿಗೆ 17 ವಾರಗಳ ಕಾಲ, ತಂತ್ರಜ್ಞರಿಗೆ 6 ತಿಂಗಳುಗಳ ಕಾಲ ನಡೆಯಲಿದೆ.

ಕೆಲಸಕ್ಕೆ ಸೇರ್ಪಡೆಯಾಗುವ ಪತ್ರಗಳನ್ನು ಅಭ್ಯರ್ಥಿಗಳಿಗೆ ಲಾಕ್ ಡೌನ್ ಗೆ ಮೊದಲೇ ನೀಡಲಾಗಿತ್ತಾದರೂ, ಕೆಲವು ಅಭ್ಯರ್ಥಿಗಳು ಕೊರೊನಾ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಕಾರಣದಿಂದ ಸೇರ್ಪಡೆಯಾಗಲು ಸಾಧ್ಯವಾಗಿಲ್ಲ. ಹೊಸದಾಗಿ ನೇಮಕಗೊಂಡ ಎಲ್ಲ ಸಿಬ್ಬಂದಿಗೂ ರೈಲ್ವೆಯಲ್ಲಿ ಸೂಕ್ತ ಪ್ರಕ್ರಿಯೆಯಂತೆ ಹಂತಹಂತವಾಗಿ ಉದ್ಯೋಗ ನೀಡಲಾಗುವುದು. ರೈಲ್ವೆ ಇಲಾಖೆ ಕಾರ್ಯಾಚರಣೆಯ ಇಲಾಖೆಯಾಗಿದ್ದು, ರೈಲ್ವೆ ಕಾರ್ಯಾಚರಣೆಯಲ್ಲಿ ಸುರಕ್ಷತೆ ಪರಮೋಚ್ಛವಾಗಿರುವುದರಿಂದ ಹೊಸದಾಗಿ ನೇಮಕಗೊಂಡವರಿಗೆ ತರಬೇತಿಯ ಅಗತ್ಯ ಇರುತ್ತದೆ. ಈ ತರಬೇತಿಯಲ್ಲಿ ತರಗತಿಗಳ ತರಬೇತಿ, ಕ್ಷೇತ್ರ ತರಬೇತಿ ಮತ್ತು ಕಾರ್ಯಹುದ್ದೆಯಲ್ಲಿ ನಿಯುಕ್ತಿಗೊಳಿಸುವ ಮುನ್ನ ಅವರ ದಕ್ಷತೆಯ ತರಬೇತಿ ಒಳಗೊಂಡಿರುತ್ತದೆ. ತರಗತಿಯ ಕೊಠಡಿಗಳು, ಹಾಸ್ಟೆಲ್, ಗ್ರಂಥಾಲಯ, ತರಬೇತುದಾರರು ಇತ್ಯಾದಿ ಸಾಮರ್ಥ್ಯದ ನಿರ್ಬಂಧಗಳನ್ನು ಪರಿಗಣಿಸಿ ತಂಡವಾರು ತರಬೇತಿಯನ್ನು ನೀಡಲಾಗುತ್ತಿದೆ. ತರಬೇತಿಯ ಸಂಪನ್ಮೂಲಗಳ ಗರಿಷ್ಠ ಬಳಕೆಯೊಂದಿಗೆ ಹಂತ ಹಂತವಾಗಿ ಇದನ್ನು ನೀಡಲಾಗುತ್ತಿದೆ.

ಕೊರೊನಾ ಸ್ಫೋಟದ ಹಿನ್ನೆಲೆಯಲ್ಲಿ, ವೈಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲು ಮತ್ತು ಸಾಂಕ್ರಾಮಿಕವನ್ನು ಸೀಮಿತಗೊಳಿಸುವ ನಿಟ್ಟಿನಲ್ಲಿ ಎಲ್ಲ ಸ್ವರೂಪದ ತರಬೇತಿಯನ್ನೂ ಸ್ಥಗಿತಗೊಳಿಸಲಾಗಿತ್ತು. ಪರಿಸ್ಥಿತಿ ಅನುಕೂಲಕರವಾದ ಬಳಿಕ ತರಬೇತಿ ಪುನಾರಂಭಗೊಳ್ಳಲಿದೆ.

ಈ ನೇಮಕಾತಿ ಪ್ರಕ್ರಿಯೆ 3 ಹಂತದ್ದಾಗಿದೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದ್ದು ಇದನ್ನು 11 ದಿನಗಳ ಕಾಲ 09.08.2018 ರಿಂದ 04.09.2018ರವರೆಗೆ 33 ಪಾಳಿ ಮತ್ತು 24 ಕೇಂದ್ರಗಳಲ್ಲಿ ದಾಖಲೆಯ ಶೇ.77ರಷ್ಟು ಹಾಜರಾತಿಯೊಂದಿಗೆ ಅಂದರೆ ಮೊದಲ ಹಂತದ ಪರೀಕ್ಷೆಯಲ್ಲಿ ಹಾಜರಾಗಿದ್ದ 36 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಯಶಸ್ವಿಯಾಗಿ ನಡೆಸಲಾಯಿತು. 2ನೇ ಹಂತದಲ್ಲಿ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು 13,00,869 (13 ಲಕ್ಷಕ್ಕೂ ಹೆಚ್ಚು) ಅಭ್ಯರ್ಥಿಗಳಿಗೆ 3 ದಿನಗಳ ಕಾಲ ಅಂದರೆ 21.01.2019 ರಿಂದ 23.01.2019ರವರೆಗೆ ಬಹು ಪಾಳಿಗಳಲ್ಲಿ ನಡೆಸಲಾಯಿತು. ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಪರೀಕ್ಷೆಯಲ್ಲಿ (ಸಿಬಿಎಟಿ) ಒಬ್ಬ ಲೋಕೋ ಪೈಲಟ್ ಗೆ ಜಾಗರೂಕತೆ ಅಗತ್ಯವಾಗಿದ್ದು, ಇದನ್ನು ನಿರ್ಣಯಿಸಲು 2,22,360 ಅಭ್ಯರ್ಥಿಗಳಿಗೆ ಯಶಸ್ವಿಯಾಗಿ 10.05.2019 ಮತ್ತು 21.05.2019ರಂದು ನಡೆಸಲಾಯಿತು.

ಈ ಹಿಂದೆ ವಲಯ ರೈಲ್ವೆಗಳು ಎಲ್ಲ ಹುದ್ದೆಗಳ ವೈದ್ಯಕೀಯ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು ಆರ್.ಆರ್.ಬಿಗಳಿಗೆ ವಹಿಸಿತ್ತು. ಆ ಪ್ರಕಾರವಾಗಿ, ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು 16.06.2019 ರಿಂದ ಆರಂಭಗೊಂಡು 20.08.2019ವರೆಗೆ 90 ಸಾವಿರ ಅಭ್ಯರ್ಥಿಗಳಿಗೆ (ಶೇ.50ರಷ್ಟು ಸ್ಟಾಂಡ್ ಬೈ ಅಭ್ಯರ್ಥಿಗಳು ಸೇರಿ) ನಡೆಸಲಾಯಿತು. ಈ ಹಿಂದೆ ಉಲ್ಲೇಖಿಸಿರುವಂತೆ ವೈದ್ಯಕೀಯ ಪರೀಕ್ಷೆ ಕೈಗಾರಿಕೆಯಲ್ಲಿ ಅತಿ ಕಠಿಣವಾಗಿದ್ದು, ರೈಲು ಓಡಿಸುವ ಲೋಕೋ ಪೈಲಟ್ ಗಳಿಗೆ ಯಾವುದೇ ಲೋಪಕ್ಕೆ ಆಸ್ಪದ ಇರಬಾರದು.

ಸೆಪ್ಟೆಂಬರ್ 2019 ರಿಂದ ಫೆಬ್ರವರಿ 2020 ರವರೆಗೆ ವಲಯ ರೈಲ್ವೆಗೆ ಪ್ಯಾನಲ್ ಸರಬರಾಜು ಮಾಡಲಾಗಿದೆ. ಎಎಲ್ಪಿ ಮತ್ತು ತಂತ್ರಜ್ಞ ಎರಡಕ್ಕೂ ಸಿಬಿಟಿ ಸಾಮಾನ್ಯವಾಗಿದ್ದರಿಂದ, ಕಂಪ್ಯೂಟರ್ ಆಧಾರಿತ ಆಪ್ಟಿಟ್ಯೂಡ್ ಟೆಸ್ಟ್ (ಸಿಬಿಎಟಿ) ಯಲ್ಲಿ ಎಎಲ್ಪಿ ಅರ್ಹತೆ ಪಡೆಯಲು ಸಾಧ್ಯವಾಗದವರಿಗೆ ತಂತ್ರಜ್ಞರ ಫಲಿತಾಂಶವನ್ನು ನಂತರ ಘೋಷಿಸಲಾಯಿತು.

ಎಎಲ್ಪಿಗಳು ಮತ್ತು ತಂತ್ರಜ್ಞರ ನೇಮಕಾತಿಯಲ್ಲದೆ, ರೈಲ್ವೆ ನೇಮಕಾತಿ ಮಂಡಳಿಗಳು (ಆರ್‌.ಆರ್‌.ಬಿ.ಗಳು) ತಾಂತ್ರಿಕೇತರ ಜನಪ್ರಿಯ ಪ್ರವರ್ಗದ (ಎನ್‌.ಟಿಪಿಸಿ - ಪದವೀಧರ ಮತ್ತು ಸ್ನಾತಕಪೂರ್ವ ಹಂತದ) ಒಟ್ಟು 35,208 ಖಾಲಿ ಹುದ್ದೆಗಳಿಗೆ ಆನ್‌ ಲೈನ್ ಅರ್ಜಿಗಳನ್ನು ಆಹ್ವಾನಿಸಿವೆ. ಒಟ್ಟು 1,26,30,885 (ಅಂದರೆ 1.25 ಕೋಟಿಗಿಂತ ಹೆಚ್ಚು) ಆನ್‌ ಲೈನ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ಕೋವಿಡ್ ಲಾಕ್ ಡೌನ್ ಗೆ ಮುನ್ನ ಪರೀಕ್ಷಾ ಪ್ರಕ್ರಿಯೆಯ ಸಿದ್ಧತೆಗಳು ಮುಂದುವರಿದ ಹಂತದಲ್ಲಿದ್ದವು. ಆದರೆ ಇದು ಕೋವಿಡ್ -19 ಸ್ಫೋಟದಿಂದಾಗಿ ಸ್ಥಗಿತಗೊಂಡಿತು. ಭಾರತೀಯ ರೈಲ್ವೆ ಪರಿಸ್ಥಿತಿ ತಿಳಿಯಾದ ಬಳಿಕ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ.

ಪ್ರಸಕ್ತ ಸಂದರ್ಭದಲ್ಲಿ, ಕೋವಿಡ್ -19 ಸಾಂಕ್ರಾಮಿಕದಿಂದಾಗಿ ಈ ಹಿಂದೆ ಊಹಿಸಲೂ ಆಗದಿದ್ದ ಹೊಸ ರೀತಿಯ ಸವಾಲುಗಳನ್ನು ಎದುರಿಸಬೇಕಾಗಿದೆ. ಈ ಸವಾಲುಗಳು ಅಭ್ಯರ್ಥಿಗಳು ಮುಖಗವಸುಗಳನ್ನು ಧರಿಸಬೇಕಾಗಿರುವುದು, ಅದು ಸೋಗಿನ ವ್ಯಕ್ತಿಗಳ ಸವಾಲುಗಳನ್ನು ಒಡ್ಡುತ್ತದೆ; ಪರೀಕ್ಷಾ ಕೇಂದ್ರಗಳಲ್ಲಿ ದೊಡ್ಡ ಸಂಖ್ಯೆಯ ಜನ ಸೇರುವಂತಾಗುತ್ತದೆ; ಪ್ರತಿ ಪಾಳಿ ನಂತರ ಪರೀಕ್ಷಾ ಕೇಂದ್ರಗಳ ನೈರ್ಮಲ್ಯ ಮಾಡಬೇಕಾಗುತ್ತದೆ; ಇಬ್ಬರು ಅಭ್ಯರ್ಥಿಗಳ ನಡುವೆ ಹೆಚ್ಚು ವ್ಯಕ್ತಿಗತ ಅಂತರವನ್ನು ಕಾಯ್ದುಕೊಳ್ಳಲು ಪರೀಕ್ಷಾ ಕೇಂದ್ರದಲ್ಲಿ ಕೂಡಿಸಬಹುದಾದ ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಬೇಕಾಗಬಹುದು ಮತ್ತು ಈ ಪರಿಪ್ರಮಾಣದಲ್ಲಿ ನ್ಯಾಯಸಮ್ಮತವಾಗಿ ಮತ್ತು ಸುಗಮವಾಗಿ ಪರೀಕ್ಷೆ ನಡೆಸಲು ಅಗತ್ಯವಾದ ಮಾನದಂಡಗಳನ್ನು ಜಾರಿಗೊಳಿಸಬೇಕಾಗಬಹುದು.

ಭಾರತೀಯ ರೈಲ್ವೆ 1.25 ಕೋಟಿ ಅಭ್ಯರ್ಥಿಗಳಿಗೆ ಬೃಹತ್ ಪರೀಕ್ಷೆ ನಡೆಸಲು ಕಾರ್ಯಸಾಧ್ಯವಾದ ಕಾರ್ಯತಂತ್ರವನ್ನು ರೂಪಿಸುತ್ತಿದ್ದು, ಕೋವಿಡ್ -19 ಸನ್ನಿವೇಶದಲ್ಲಿ ಎಲ್ಲ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪ್ರಕ್ರಿಯೆಗೆ ದಿನಾಂಕ ನಿಗದಿ ಮಾಡಲಿದೆ.

ಆರ್.ಆರ್.ಬಿಗಳು ಅಗತ್ಯ ಇರುವೆಡೆಯಲ್ಲೆಲ್ಲಾ ಅಭ್ಯರ್ಥಿಗಳೊಂದಿಗೆ ವೆಬ್ ಸೈಟ್ ನವೀಕರಣ, ವೈಯಕ್ತಿಕ ಎಸ್.ಎಂ.ಎಸ್. ಮತ್ತು ಇ-ಮೇಲ್ ಮೂಲಕ ನಿರಂತರವಾಗಿ ಸಂವಹನ ಇಟ್ಟುಕೊಳ್ಳುವುದನ್ನು ರೂಢಿಸಿಕೊಂಡಿದೆ. ಅಭ್ಯರ್ಥಿಗಳಿಗೆ ಈ ಅಧಿಕೃತ ಸಂವಹನಗಳನ್ನು ಮಾತ್ರವೇ ನೋಡುವಂತೆ, ಅವರ ಪರೀಕ್ಷಾ ತಯಾರಿಗೆ ಪ್ರತಿಕೂಲವಾಗುವಂಥ ಸುಳ್ಳು ಪ್ರಚಾರ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ವದಂತಿಗಳಿಂದ ದಾರಿತಪ್ಪದಂತೆ ಮನವಿ ಮಾಡಲಾಗಿದೆ.

*****

 


(Release ID: 1632336) Visitor Counter : 282