ಪ್ರಧಾನ ಮಂತ್ರಿಯವರ ಕಛೇರಿ

ವರ್ಚುವಲ್ ಜಾಗತಿಕ ಲಸಿಕೆ ಶೃಂಗಸಭೆ 2020 ಉದ್ದೇಶಿಸಿ ಪ್ರಧಾನಿ ಭಾಷಣ

Posted On: 04 JUN 2020 7:30PM by PIB Bengaluru

ವರ್ಚುವಲ್ ಜಾಗತಿಕ ಲಸಿಕೆ ಶೃಂಗಸಭೆ 2020 ಉದ್ದೇಶಿಸಿ ಪ್ರಧಾನಿ ಭಾಷಣ

ಸವಾಲಿನ ಸಂದರ್ಭದಲ್ಲಿ ಭಾರತವು ಜಗತ್ತಿನೊಂದಿಗೆ ನಿಂತಿದೆ: ಪ್ರಧಾನಿ

ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟವಾದ GAVI ಗೆ ಭಾರತದಿಂದ 15 ಮಿಲಿಯನ್ ಅಮೆರಿಕನ್  ಡಾಲರ್ ವಾಗ್ದಾನ

 

ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ -  GAVI ಗೆ ಭಾರತ 15 ಮಿಲಿಯನ್ ಅಮೆರಿಕನ್  ಡಾಲರ್ ವಾಗ್ದಾನ ನೀಡಿದೆ.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆಯೋಜಿಸಿದ್ದ ವರ್ಚುವಲ್ ಗ್ಲೋಬಲ್ ಲಸಿಕೆ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದರು. ಶೃಂಗಸಭೆಯಲ್ಲಿ  50 ಕ್ಕೂ ಹೆಚ್ಚು ದೇಶಗಳು - ಉದ್ಯಮಿಗಳು, ವಿಶ್ವಸಂಸ್ಥೆ ಏಜೆನ್ಸಿಗಳು, ನಾಗರಿಕ ಸಮಾಜ, ಸರ್ಕಾರಗಳ ಸಚಿವರು, ರಾಜ್ಯಗಳ ಮುಖ್ಯಸ್ಥರು ಮತ್ತು ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು.

ಸವಾಲಿನ ಕಾಲದಲ್ಲಿ ಭಾರತವು ವಿಶ್ವದೊಂದಿಗೆ ಒಟ್ಟಾಗಿ ನಿಂತಿದೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಭಾರತದ ನಾಗರಿಕತೆಯು ಜಗತ್ತನ್ನು ಒಂದೇ ಕುಟುಂಬವಾಗಿ ನೋಡುವುದನ್ನು ಕಲಿಸುತ್ತದೆ ಮತ್ತು ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತವು ಬೋಧನೆಗೆ ತಕ್ಕಂತೆ ಇರಲು ಪ್ರಯತ್ನಿಸಿದೆ. 120 ಕ್ಕೂ ಹೆಚ್ಚು ದೇಶಗಳೊಂದಿಗೆ ದೇಶದಲ್ಲಿ ಲಭ್ಯವಿರುವ ಔಷಧಿಗಳನ್ನು ಹಂಚಿಕೊಳ್ಳುವ ಮೂಲಕ, ನೆರೆಹೊರೆಯಲ್ಲಿ ಸಾಮಾನ್ಯ ಪ್ರತಿಕ್ರಿಯೆ ತಂತ್ರವನ್ನು ರೂಪಿಸುವ ಮೂಲಕ ಮತ್ತು ಅದನ್ನು ಬಯಸುವ ದೇಶಗಳಿಗೆ ನಿರ್ದಿಷ್ಟ ಬೆಂಬಲವನ್ನು ನೀಡುವ ಮೂಲಕ ಹಾಗೂ ಭಾರತದ ಸ್ವಂತ ಜನರನ್ನು ರಕ್ಷಿಸುವ ಮೂಲಕ ಭಾರತ ಇದನ್ನು ಮಾಡಿದೆ ಎಂದು ಶ್ರೀ ಮೋದಿ ಹೇಳಿದರು.

ಕೋವಿಡ್-19 ಸಾಂಕ್ರಾಮಿಕ ರೋಗವು ಜಾಗತಿಕ ಸಹಕಾರದ ಮಿತಿಗಳನ್ನು ಬಹಿರಂಗಪಡಿಸಿದೆ ಮತ್ತು ಇತ್ತೀಚಿನ ಇತಿಹಾಸದಲ್ಲಿ ಮೊದಲ ಬಾರಿಗೆ ಮಾನವ ಸಂಕುಲವು ಸ್ಪಷ್ಟವಾದ ಸಾಮಾನ್ಯ ಶತ್ರುವನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.

ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟ - GAVI ಬಗ್ಗೆ ಉಲ್ಲೇಖಿಸಿದ ಅವರು, ಇದು ಕೇವಲ ಜಾಗತಿಕ ಮೈತ್ರಿ ಮಾತ್ರವಲ್ಲ, ಜಾಗತಿಕ ಒಗ್ಗಟ್ಟಿನ ಸಂಕೇತವಾಗಿದೆ ಮತ್ತು ಇತರರಿಗೆ ಸಹಾಯ ಮಾಡುವ ಮೂಲಕ ನಾವು ನಮಗೇ ಸಹಾಯ ಮಾಡಿಕೊಳ್ಳಬಹುದು ಎಂದು ಹೇಳಿದರು.

ಭಾರತವು ಅಪಾರ ಜನಸಂಖ್ಯೆ ಮತ್ತು ಸೀಮಿತ ಆರೋಗ್ಯ ಸೌಲಭ್ಯಗಳನ್ನು ಹೊಂದಿದೆ ಮತ್ತು ರೋಗ ನಿರೋಧಕತೆಯ ಮಹತ್ವವನ್ನು ಅದು ಅರ್ಥಮಾಡಿಕೊಂಡಿದೆ ಎಂದರು.

ತಮ್ಮ ಸರ್ಕಾರವು ಪ್ರಾರಂಭಿಸಿದ ಮೊದಲ ಕಾರ್ಯಕ್ರಮವೆಂದರೆ ಮಿಷನ್ ಇಂದ್ರಧನುಷ್, ಇದು ದೇಶದ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ಲಸಿಕೆ ಹಾಕುವ ಉದ್ದೇಶವನ್ನು ಹೊಂದಿದೆ, ನಮ್ಮ ವಿಶಾಲವಾದ ರಾಷ್ಟ್ರದ ಮೂಲೆಮೂಲೆಯ ಭಾಗಗಳು ಇದರಲ್ಲಿ ಸೇರಿವೆ ಎಂದರು.

ಆರೋಗ್ಯ ರಕ್ಷಣೆಯನ್ನು ವಿಸ್ತರಿಸುವ ಸಲುವಾಗಿ ಭಾರತವು ತನ್ನ ರಾಷ್ಟ್ರೀಯ ರೋಗನಿರೋಧಕ ಕಾರ್ಯಕ್ರಮಕ್ಕೆ ಆರು ಹೊಸ ಲಸಿಕೆಗಳನ್ನು ಸೇರಿಸಿದೆ ಎಂದು ಅವರು ಹೇಳಿದರು.

ಭಾರತವು ತನ್ನ ಸಂಪೂರ್ಣ ಲಸಿಕೆ ಪೂರೈಕೆಯನ್ನು ಡಿಜಿಟಲೀಕರಣಗೊಳಿಸಿದೆ ಮತ್ತು ಅದರ ಶೀತಲ ಸರಪಳಿಯ ಸಮಗ್ರತೆಯನ್ನು ಮೇಲ್ವಿಚಾರಣೆ ಮಾಡಲು ಎಲೆಕ್ಟ್ರಾನಿಕ್ ಲಸಿಕೆ ಜಾಲವನ್ನು ಅಭಿವೃದ್ಧಿಪಡಿಸಿದೆ ಎಂದು ಪ್ರಧಾನಿ ವಿವರಿಸಿದರು.

ಆವಿಷ್ಕಾರಗಳು ಕೊನೆಯ ಫಲಾನುಭವಿಯವರೆಗೂ ಸರಿಯಾದ ಸಮಯದಲ್ಲಿ ಸರಿಯಾದ ಪ್ರಮಾಣದಲ್ಲಿ ಸುರಕ್ಷಿತ ಮತ್ತು ತೀಕ್ಷ್ಣವಾದ ಲಸಿಕೆಗಳ ಲಭ್ಯತೆಯನ್ನು ಖಾತ್ರಿಪಡಿಸುತ್ತಿವೆ ಎಂದು ಅವರು ಹೇಳಿದರು

ಭಾರತವು ಲಸಿಕೆಗಳನ್ನು ಉತ್ಪಾದಿಸುವ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗಿದೆ ಮತ್ತು ವಿಶ್ವದ ಸುಮಾರು ಶೇ.60 ರಷ್ಟು ಮಕ್ಕಳ ರೋಗನಿರೋಧಕ ಶಕ್ತಿಗೆ ಕೊಡುಗೆ ನೀಡುತ್ತಿರುವುದು ನಮ್ಮ ಅದೃಷ್ಟವಾಗಿದೆ ಎಂದು ಪ್ರಧಾನಿ ಹೇಳಿದರು.

GAVI ಕಾರ್ಯವನ್ನು ಭಾರತವು ಗುರುತಿಸುತ್ತದೆ ಮತ್ತು ಗೌರವಿಸುತ್ತದೆ ಎಂದು ಶ್ರೀ ಮೋದಿ ಹೇಳಿದರು, ಅದಕ್ಕಾಗಿಯೇ ಅದು GAVI ಬೆಂಬಲವನ್ನು ಪಡೆಯಲು ಅರ್ಹವಾಗುವ ಮೊದಲೇ GAVI ಗೆ ದಾನಿಯಾಗಿದೆ ಎಂದರು.

GAVI ಗೆ ಭಾರತದ ಬೆಂಬಲವು ಕೇವಲ ಹಣಕಾಸಿನಲ್ಲಷ್ಟೇ ಇರುವುದಿಲ್ಲ, ಭಾರತದ ಭಾರಿ ಬೇಡಿಕೆಯಿಂದಾಗಿ ಲಸಿಕೆಗಳ ಜಾಗತಿಕ ಬೆಲೆಯು ಎಲ್ಲರಿಗೂ ಕಡಿಮೆಯಾಗಿದೆ ಮತ್ತು ಕಳೆದ ಐದು ವರ್ಷಗಳಲ್ಲಿ GAVI ಗೆ ಸುಮಾರು 400 ದಶಲಕ್ಷ ಡಾಲರ್ಗಳನ್ನು ಉಳಿತಾಯ ಮಾಡಿದೆ ಎಂದು ಪ್ರಧಾನಿ ಹೇಳಿದರು.

ಕಡಿಮೆ ವೆಚ್ಚದಲ್ಲಿ ಗುಣಮಟ್ಟದ  ಔಷಧಿಗಳು ಮತ್ತು ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ, ರೋಗನಿರೋಧಕತೆಯ ತ್ವರಿತ ವಿಸ್ತರಣೆಯಲ್ಲಿ ದೇಶೀಯ ಅನುಭವ ಮತ್ತು ಅದರ ಗಣನೀಯ ವೈಜ್ಞಾನಿಕ ಸಂಶೋಧನಾ ಪ್ರತಿಭೆಯೊಂದಿಗೆ ಭಾರತವು ವಿಶ್ವದೊಂದಿಗೆ ಒಟ್ಟಾಗಿ ನಿಂತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು.

ಭಾರತಕ್ಕೆ ಜಾಗತಿಕ ಆರೋಗ್ಯ ಪ್ರಯತ್ನಗಳಿಗೆ ಕೊಡುಗೆ ನೀಡುವ ಸಾಮರ್ಥ್ಯ ಮಾತ್ರವಲ್ಲ, ಹಂಚಿಕೆ ಮತ್ತು ಕಾಳಜಿಯ ಮನೋಭಾವದಿಂದ ಹಾಗೆ ಮಾಡುವ ಇಚ್ಛಾಶಕ್ತಿಯೂ ಇದೆ ಎಂದು ಅವರು ಹೇಳಿದರು.

***


(Release ID: 1629656) Visitor Counter : 263