ಸಂಪುಟ

ಭಾರತ ಮತ್ತು ಭೂತಾನ್ ನಡುವೆ ಪರಿಸರ ವಲಯಗಳಲ್ಲಿ ಸಹಕಾರ ಕುರಿತ ಒಪ್ಪಂದಕ್ಕೆ ಕೇಂದ್ರ ಸಂಪುಟದ ಅನುಮೋದನೆ

Posted On: 03 JUN 2020 5:07PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಪರಿಸರ ವಲಯದಲ್ಲಿ ಭೂತಾನ್ ನ ಘನ ಸರ್ಕಾರ ಮತ್ತು ಭಾರತದ ಗಣರಾಜ್ಯದ ನಡುವೆ ಒಡಂಬಡಿಕೆಗೆ ಸಹಿ ಹಾಕಲು ಅನುಮೋದನೆ ನೀಡಿತು. ವಿವರಗಳು: ಈ ಒಪ್ಪಂದ ಪರಿಸರ ಸಂರಕ್ಷಣೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ವಲಯದಲ್ಲಿ ಎರಡೂ ದೇಶಗಳ ನಡುವೆ ಸುದೀರ್ಘ ಮತ್ತು ನಿಕಟ ಸಹಕಾರ ಸಂಬಂಧ ಸ್ಥಾಪನೆಗೆ ಸಹಕಾರಿಯಾಗಲಿದೆ. ಪರಸ್ಪರ ಅನುಕೂಲದ ಆಧಾರದಲ್ಲಿ ಎರಡು ದೇಶಗಳಲ್ಲಿ ಅನ್ವಯಿಸುವ ಕಾನೂನುಗಳು ಮತ್ತು ಕಾನೂನು ಪರಿಧಿಯನ್ನು ಪರಿಗಣಿಸಿ ನಿರ್ಧರಿಸಲಾಗುವುದು. ಎರಡೂ ದೇಶಗಳ ದ್ವಿಪಕ್ಷೀಯ ಹಿತಾಸಕ್ತಿಗಳು ಮತ್ತು ಪರಸ್ಪರ ಒಪ್ಪಿತ ಆದ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಪರಿಸರಕ್ಕೆ ಸಂಬಂಧಿಸಿದ ಈ ಕೆಳಗಿನ ವಲಯಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ಪರಿಗಣಿಸಲಾಗಿದೆ. · ವಾಯು; · ತ್ಯಾಜ್ಯ; · ರಾಸಾಯನಿಕ ನಿರ್ವಹಣೆ; · ಹವಾಮಾನ ವೈಪರೀತ್ಯ; · ಜಂಟಿಯಾಗಿ ನಿರ್ಧರಿಸಿದ ಇತರೆ ಯಾವುದೇ ವಲಯಗಳು; ಈ ಒಪ್ಪಂದ ಎರಡೂ ದೇಶಗಳು ಸಹಿ ಹಾಕಿದ ನಂತರ ಜಾರಿಗೆ ಬರುತ್ತದೆ ಮತ್ತು ಅದು ಹತ್ತು ವರ್ಷಗಳ ಅವಧಿಗೆ ಅದು ಮುಂದುವರಿಯುತ್ತದೆ. ಒಪ್ಪಂದದ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಎರಡು ದೇಶಗಳು ಸಹಕಾರ ಸಂಬಂಧ ಚಟುವಟಿಕೆಗಳನ್ನು ಗುರಿಯಾಗಿಟ್ಟುಕೊಂಡು ಹಲವು ಸಂಸ್ಥೆಗಳನ್ನು, ಖಾಸಗಿ ಕಂಪನಿಗಳನ್ನು, ಸರ್ಕಾರಿ ಸಂಸ್ಥೆಗಳನ್ನು ಮತ್ತು ಸಂಶೋಧನಾ ಕೇಂದ್ರಗಳನ್ನು ಉತ್ತೇಜಿಸಲಿವೆ. ಭಾಗೀದಾರರು ಜಂಟಿ ಕಾರ್ಯಕಾರಿ ಗುಂಪು/ದ್ವಿಪಕ್ಷೀಯ ಪರಿಶೀಲನಾ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದು, ಆ ಬಗ್ಗೆ ಮುಂಚಿತವಾಗಿಯೇ ಸಂಬಂಧಿಸಿದ ಸಚಿವಾಲಯಗಳು/ಏಜೆನ್ಸಿಗಳ ಕಾರ್ಯಚಟುವಟಿಕೆಗಳನ್ನು ಮತ್ತು ಪ್ರಗತಿ ಹಾಗೂ ಸಾಧನೆಗಳನ್ನು ತಿಳಿಯಪಡಿಸಬೇಕು. ಉದ್ಯೋಗ ಸೃಷ್ಟಿ ಸಂಭವನೀಯತೆ ಸೇರಿ ಪ್ರಮುಖ ಪರಿಣಾಮಗಳು: ಈ ಒಪ್ಪಂದದಿಂದಾಗಿ ಸುಸ್ಥಿರ ಅಭಿವೃದ್ಧಿಗೆ ನೆರವಾಗಲು ಸಾರ್ವಜನಿಕ ಮತ್ತು ಖಾಸಗಿ ವಲಯದ ನಡುವೆ ಅನುಭವಗಳು, ಉತ್ತಮ ಪದ್ಧತಿಗಳ ವಿನಿಮಯ ಮತ್ತು ತಾಂತ್ರಿಕ ಪರಿಣಿತಿಯನ್ನು ಹಂಚಿಕೊಳ್ಳಲು ನೆರವಾಗಲಿದೆ. ಈ ಒಪ್ಪಂದದಿಂದಾಗಿ ಪರಸ್ಪರ ಹಿತಾಸಕ್ತಿಯ ಜಂಟಿ ಯೋಜನೆಗಳನ್ನು ಕೈಗೊಳ್ಳುವ ಸಂಭವನೀಯತೆ ಹೆಚ್ಚಲಿದೆ. ಆದರೆ ಹೆಚ್ಚಿನ ಉದ್ಯೋಗಾವಕಾಶಗಳು ಸೃಷ್ಟಿಯಾಗುವುದನ್ನು ಊಹಿಸುವಂತಿಲ್ಲ. ವೆಚ್ಚ: ಈ ಒಡಂಬಡಿಕೆಯಿಂದಾಗಿ ಆರ್ಥಿಕ ಪರಿಣಾಮಗಳು ಸೀಮಿತವಾಗಿರುತ್ತವೆ. ದ್ವಿಪಕ್ಷೀಯ ಸಭೆಗಳು/ಜಂಟಿ ಕಾರ್ಯಕಾರಿ ಸಮಿತಿಯ ಸಭೆಗಳು ಪರ್ಯಾಯವಾಗಿ ಭಾರತ ಮತ್ತು ಭೂತಾನ್ ನಲ್ಲಿ ನಡೆಯಲಿವೆ. ಪ್ರತಿನಿಧಿಗಳನ್ನು ಕಳುಹಿಸುವ ರಾಷ್ಟ್ರ ನಿಯೋಗದ ಪ್ರಯಾಣದ ವೆಚ್ಚವನ್ನು ಭರಿಸಬೇಕು ಮತ್ತು ನಿಯೋಗವನ್ನು ಸ್ವೀಕರಿಸುವ ರಾಷ್ಟ್ರ ಸಭೆಯ ಆಯೋಜನೆಯ ವೆಚ್ಚ ಮತ್ತು ಇತರೆ ಸಾರಿಗೆ ವ್ಯವಸ್ಥೆಗಳನ್ನು ಕಲ್ಪಿಸಬೇಕು. ಉದ್ದೇಶಿತ ಒಡಂಬಡಿಕೆಯಿಂದಾಗಿ ಈ ರೀತಿಯ ಸೀಮಿತ ಹಣಕಾಸು ಪರಿಣಾಮಗಳು ಉಂಟಾಗುತ್ತವೆ. ಹಿನ್ನೆಲೆ: ಭಾರತ ಗಣರಾಜ್ಯ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯ (ಎಂಒಇಎಫ್ ಸಿಸಿ), ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ನಡುವೆ ಮತ್ತು ಭೂತಾನ್ ಘನ ಸರ್ಕಾರದ ರಾಷ್ಟ್ರೀಯ ಪರಿಸರ ಆಯೋಗ (ಎನ್ಇಸಿ) ನಡುವೆ ಈ ಒಪ್ಪಂದ (ಎಂಒಯು)ಅನ್ನು 2013ರ ಮಾರ್ಚ್ 11ರಂದು ಸಹಿ ಹಾಕಲಾಗಿತ್ತು. ಈ ಒಡಂಬಡಿಕೆ ಅವಧಿ 2016ರ ಮಾರ್ಚ್ 10ಕ್ಕೆ ಮುಕ್ತಾಯವಾಗಿತ್ತು. ಹಿಂದಿನ ಒಡಂಬಡಿಕೆಯಿಂದ ಆಗಿರುವ ಲಾಭಗಳನ್ನು ಪರಿಗಣಿಸಿ, ಎರಡೂ ದೇಶಗಳು ಪರಿಸರ ವಲಯದಲ್ಲಿ ಪರಸ್ಪರ ಸಹಕಾರ ಮತ್ತು ಸಹಭಾಗಿತ್ವವನ್ನು ಮುಂದುವರಿಸಲು ನಿರ್ಧರಿಸಿವೆ. ***(Release ID: 1629331) Visitor Counter : 248