ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ

1 ಏಪ್ರಿಲ್ 2020 ರಿಂದ 52.62 ಲಕ್ಷ ಇಪಿಎಫ್‌ಒ ಚಂದಾದಾರರ ಕೆವೈಸಿ ನವೀಕರಣ

Posted On: 03 JUN 2020 12:36PM by PIB Bengaluru

1 ಏಪ್ರಿಲ್ 2020 ರಿಂದ 52.62 ಲಕ್ಷ ಇಪಿಎಫ್ ಚಂದಾದಾರರ ಕೆವೈಸಿ ನವೀಕರ

 

ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ನಿರ್ಣಾಯಕವಾಗಿರುವ ಆನ್ಲೈನ್ ಸೇವೆಗಳ ಲಭ್ಯತೆ ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು, 2020 ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ತನ್ನ 52.62 ಲಕ್ಷ ಚಂದಾದಾರರಿಗಾಗಿ ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆ ವೈ ಸಿ) ದತ್ತಾಂಶವನ್ನು ಕಾರ್ಮಿಕ ಭವಿಷ್ಯನಿಧಿ ಸಂಸ್ಥೆ (ಇಪಿಎಫ್) ನವೀಕರಿಸಿದೆ. ಇದರಲ್ಲಿ 39.97 ಲಕ್ಷ ಚಂದಾದಾರರಿಗೆ ಆಧಾರ್ ಮಾಹಿತಿ, 9.87 ಲಕ್ಷ ಚಂದಾದಾರರಿಗೆ ಮೊಬೈಲ್ ಮಾಹಿತಿ (ಯುಎಎನ್ ಸಕ್ರಿಯಗೊಳಿಸುವಿಕೆ) ಮತ್ತು 11.11 ಲಕ್ಷ ಚಂದಾದಾರರಿಗೆ ಬ್ಯಾಂಕ್ ಖಾತೆ ಮಾಹಿತಿಯನ್ನು ನವೀಕರಿಸಲಾಗಿದೆ. ಕೆವೈಸಿ ಒಂದು ಬಾರಿಯ ಪ್ರಕ್ರಿಯೆಯಾಗಿದ್ದು, ಯುನಿವರ್ಸಲ್ ಅಕೌಂಟ್ ಸಂಖ್ಯೆ (ಯುಎಎನ್) ಅನ್ನು ಕೆವೈಸಿ ವಿವರಗಳೊಂದಿಗೆ ಜೋಡಿಸುವ ಮೂಲಕ ಚಂದಾದಾರರ ಗುರುತಿನ ಪರಿಶೀಲನೆಗೆ ಸಹಾಯ ಮಾಡುತ್ತದೆ.

ಇದಲ್ಲದೆ, ಕೆವೈಸಿ ಮಾಹಿತಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಸಕ್ರಿಯಗೊಳಿಸಲು, ಲಾಕ್ಡೌನ್ ಸಮಯದಲ್ಲಿಯೂ ಸಹ ಚಂದಾದಾರರ ವಿವರಗಳನ್ನು ಸರಿಪಡಿಸುವ ಬೃಹತ್ ಪ್ರಕ್ರಿಯೆಯನ್ನು ಇಪಿಎಫ್ ಕೈಗೊಂಡಿದೆ. ಇದು ಕಳೆದ ಎರಡು ತಿಂಗಳಲ್ಲಿ 4.81 ಲಕ್ಷ ಹೆಸರು ತಿದ್ದುಪಡಿಗಳು, 2.01 ಲಕ್ಷ ಜನನ ತಿದ್ದುಪಡಿಗಳು ಮತ್ತು 3.70 ಲಕ್ಷ ಆಧಾರ್ ಸಂಖ್ಯೆ ತಿದ್ದುಪಡಿಗಳಿಗೆ ಕಾರಣವಾಯಿತು.

ಒಂದು ಕಡೆ ಲಾಕ್ಡೌನ್ ಸಮಯದಲ್ಲಿ ಕಚೇರಿಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಮತ್ತು ಮತ್ತೊಂದೆಡೆ ಚಂದಾದಾರರಿಗೆ ಕೆವೈಸಿ ನವೀಕರಣಕ್ಕೆ ಅನುಕೂಲವಾಗುವಂತೆ ತನ್ನ ಸಿಬ್ಬಂದಿಯ ಸುರಕ್ಷತೆಯನ್ನು ಖಾತರಿಪಡಿಸುವ ಅಗತ್ಯವನ್ನು ಸಮತೋಲನಗೊಳಿಸುವ ಸಲುವಾಗಿ, ಇಪಿಎಫ್ ವರ್ಕ್ ಫ್ರಮ್ ಹೋಮ್ ಮತ್ತು ಕೆವೈಸಿ ನವೀಕರಣದ ಸರಳೀಕರಣದ ಅವಳಿ ತಂತ್ರವನ್ನು ಅಳವಡಿಸಿಕೊಂಡಿದೆ. ಮನೆಯಿಂದ ಕೆಲಸ ಮಾಡುವ ಸಿಬ್ಬಂದಿಗೆ ಕೆವೈಸಿಯನ್ನು ನವೀಕರಿಸುವ ಮತ್ತು ವಿವರಗಳನ್ನು ಸರಿಪಡಿಸುವ ಕಾರ್ಯವನ್ನು ನಿಯೋಜಿಸಲಾಗಿದೆ, ಉಳಿದುಕೊಂಡಿರುವ ಪ್ರಕರಣಗಳ (ಪೆಂಡೆನ್ಸಿ) ನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡಲಾಗುತ್ತಿದೆ. ಪ್ರಕ್ರಿಯೆಗಳಲ್ಲಿ ಪ್ರಮುಖ ಸರಳೀಕರಣಗಳು, ಉದಾಹರಣೆಗೆ ಆಧಾರ್ ಜೋಡಣೆಗಾಗಿ ಉದ್ಯೋಗದಾತರ ಮೇಲಿನ ಅವಲಂಬನೆಯನ್ನು ತೆಗೆದುಹಾಕುವುದು ಮತ್ತು ಮೂರು ವರ್ಷಗಳವರೆಗಿನ ವ್ಯತ್ಯಾಸಗಳಿಗೆ ಆಧಾರ್ ಅನ್ನು ಹುಟ್ಟಿದ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದು, ಇದು ಇಡೀ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ.

ಕೆವೈಸಿ ನವೀಕರಣವು ಸದಸ್ಯರ ಪೋರ್ಟಲ್ ಮೂಲಕ ಆನ್ಲೈನ್ ಸೇವೆಗಳನ್ನು ಪಡೆಯಲು ಶಕ್ತಗೊಳಿಸುತ್ತದೆ. ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (ಪಿಎಂಜಿಕೆವೈ) ಅಡಿಯಲ್ಲಿ ಇತ್ತೀಚೆಗೆ ಪರಿಚಯಿಸಲಾದ ಕೋವಿಡ್-19 ಮುಂಗಡಗಳು ಸೇರಿದಂತೆ ಅಂತಿಮ ವಾಪಸಾತಿ ಮತ್ತು ಮುಂಗಡಗಳಿಗಾಗಿ ಅವರು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಉದ್ಯೋಗಗಳನ್ನು ಬದಲಾಯಿಸುವಾಗ ಪಿಎಫ್ ಖಾತೆಯ ತೊಂದರೆಯಿಲ್ಲದ ಆನ್ಲೈನ್ ವರ್ಗಾವಣೆಯನ್ನು ಇದು ಸುಗಮಗೊಳಿಸುತ್ತದೆ. ಯಾವುದೇ ಕೆವೈಸಿ ವಿವರಗಳು ಸಂಪೂರ್ಣಗೊಂಡ ಸದಸ್ಯರು ಡೆಸ್ಕ್ಟಾಪ್ ಮೂಲಕ ಅಥವಾ ಉಮಂಗ್ ಆ್ಯಪ್ ಮೂಲಕ ಎಲ್ಲಾ ಆನ್ಲೈನ್ ಸೇವೆಗಳನ್ನು ಪಡೆಯಬಹುದು.

ಕೋವಿಡ್ ನಿರ್ಬಂಧಗಳಿಂದಾಗಿ ಉಂಟಾದ ಅಡೆತಡೆಗಳ ಹೊರತಾಗಿಯೂ, ಆನ್ಲೈನ್ ಮೋಡ್ ಅನ್ನು ಅಳವಡಿಸಿಕೊಳ್ಳುವ ಮೂಲಕ ಇಪಿಎಫ್ ತನ್ನ ಸೇವೆಗಳನ್ನು ತನ್ನ ಸದಸ್ಯರ ಮನೆ ಬಾಗಿಲಿಗೆ ತರಲು ಬದ್ಧವಾಗಿದೆ. ಹಕ್ಕು ಇತ್ಯರ್ಥ, ಇಪಿಎಫ್ ಮುಂಗಡಗಳು, ಪಿಎಫ್ ವರ್ಗಾವಣೆ ಮತ್ತು ಪಿಂಚಣಿ ಪ್ರಕ್ರಿಯೆಗೆ ಸಮಯವನ್ನು ಕಡಿತಗೊಳಿಸುವ ಮೂಲಕ ಪರಿಮಾಣಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಇಪಿಎಫ್ ತನ್ನ ಸೇವಾ ವಿತರಣೆಯನ್ನು ಸುಧಾರಿಸುವಲ್ಲಿ ಇದು ಸಹಾಯ ಮಾಡಿದೆ.

***



(Release ID: 1628971) Visitor Counter : 205