ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾ ಅಧ್ಯಕ್ಷ ಗೌರವಾನ್ವಿತ (ಡಾ.) ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ನಡುವೆ ದೂರವಾಣಿ ಮಾತುಕತೆ

Posted On: 26 MAY 2020 7:25PM by PIB Bengaluru

ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಆಸ್ಟ್ರಿಯಾ ಅಧ್ಯಕ್ಷ ಗೌರವಾನ್ವಿತ (ಡಾ.) ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ನಡುವೆ ದೂರವಾಣಿ ಮಾತುಕತೆ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಸ್ಟ್ರಿಯಾ ಅಧ್ಯಕ್ಷ ಗೌರವಾನ್ವಿತ (ಡಾ.) ಅಲೆಕ್ಸಾಂಡರ್ ವ್ಯಾನ್ ಡೆರ್ ಬೆಲ್ಲೆನ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.

ಆಂಫಾನ್ ಚಂಡಮಾರುತದಿಂದ ಭಾರತದಲ್ಲಿ ಉಂಟಾದ ಹಾನಿಯ ಬಗ್ಗೆ ಆಸ್ಟ್ರಿಯನ್ ಅಧ್ಯಕ್ಷರು ಸಂತಾಪ ಸೂಚಿಸಿದರು. ಕೋವಿಡ್-19 ಸಾಂಕ್ರಾಮಿಕ ರೋಗದ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳನ್ನು ನಿರ್ವಹಿಸಲು ಉಭಯ ನಾಯಕರು ತಮ್ಮ ದೇಶಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪ್ರಸ್ತುತ ಸವಾಲುಗಳನ್ನು ಎದುರಿಸಲು ಅಂತರರಾಷ್ಟ್ರೀಯ ಸಹಯೋಗದ ಮಹತ್ವವನ್ನು ಅವರು ಒಪ್ಪಿಕೊಂಡರು.

ಕೋವಿಡ್ ನಂತರದ ಜಗತ್ತಿನಲ್ಲಿ ಭಾರತ-ಆಸ್ಟ್ರಿಯಾ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ವೈವಿಧ್ಯಗೊಳಿಸಲು ತಮ್ಮ ಬಯಕೆಯನ್ನು ಉಭಯ ನಾಯಕರು ಪುನರುಚ್ಚರಿಸಿದರು. ಮೂಲಸೌಕರ್ಯ, ತಂತ್ರಜ್ಞಾನ, ಸಂಶೋಧನೆ ಮತ್ತು ನಾವೀನ್ಯತೆ, ಎಸ್ಎಂಇಗಳು ಮುಂತಾದ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಅವಕಾಶಗಳನ್ನು ಪ್ರಧಾನಿ ಎತ್ತಿ ತಿಳಿಸಿದರು.

ಪರಿಸರ ಸಂರಕ್ಷಣೆಯಂತಹ ದೀರ್ಘಕಾಲೀನ ಕಾಳಜಿಗಳತ್ತ ಗಮನಹರಿಸಲು ಸಾಧ್ಯವಾಗುವಂತೆ, ಪ್ರಸ್ತುತ ಆರೋಗ್ಯ ಬಿಕ್ಕಟ್ಟನ್ನು ಜಗತ್ತು ಶೀಘ್ರದಲ್ಲೇ ಬಗೆಹರಿಸುತ್ತದೆ ಎಂಬ ಭರವಸೆಯನ್ನು ಇಬ್ಬರೂ ನಾಯಕರು ಹಂಚಿಕೊಂಡರು.

***



(Release ID: 1627045) Visitor Counter : 242