ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಹೊಸ ಮಾಹಿತಿ
Posted On:
21 MAY 2020 5:46PM by PIB Bengaluru
ಕೋವಿಡ್-19 ಹೊಸ ಮಾಹಿತಿ
ಲಾಕ್ಡೌನ್ ಅನುಷ್ಠಾನ ಮತ್ತು ಕೋವಿಡ್-19 ನಿರ್ವಹಣೆಯ ವಿಚಾರದಲ್ಲಿ ಸರ್ಕಾರದ ಕೆಲವು ನಿರ್ಧಾರಗಳ ಬಗ್ಗೆ ಮಾಧ್ಯಮಗಳ ಒಂದು ವರ್ಗದಲ್ಲಿ ವರದಿಗಳಿವೆ.
ಲಾಕ್ಡೌನ್ ಅವಧಿಯನ್ನು ದೇಶದ ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಬಳಸಿಕೊಳ್ಳಲಾಗಿದೆ. ಪ್ರಸ್ತುತ, 45299 ಜನರನ್ನು ಗುಣಪಡಿಸಲಾಗಿದೆ ಇದರಿಂದಾಗಿ ನಮ್ಮ ಚೇತರಿಕೆಯ ಪ್ರಮಾಣವು 40.32% ಆಗಿದೆ. 21.05.2020 ರಂದು, 26,15920 ಮಾದರಿಗಳನ್ನು ಪರೀಕ್ಷಿಸಲಾಗಿದೆ ಮತ್ತು ಕಳೆದ 24 ಗಂಟೆಗಳಲ್ಲಿ 103532 ಮಾದರಿಗಳನ್ನು 555 ಪರೀಕ್ಷಾ ಪ್ರಯೋಗಾಲಯಗಳ ಮೂಲಕ ಪರೀಕ್ಷಿಸಲಾಗಿದೆ (ಸರ್ಕಾರದ ವಲಯದ 391 ಮತ್ತು 164 ಖಾಸಗಿ ಪ್ರಯೋಗಾಲಯಗಳು). ನವದೆಹಲಿಯ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತ ಸರ್ಕಾರ ಮತ್ತು ರಾಷ್ಟ್ರೀಯ ಆರೋಗ್ಯ ನಿಯಂತ್ರಣ ಕೇಂದ್ರದ ಸಹಯೋಗದೊಂದಿಗೆ ರಾಜ್ಯ ಆರೋಗ್ಯ ಇಲಾಖೆಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಪ್ರಮುಖ ಪಾಲುದಾರರ ಬೆಂಬಲದೊಂದಿಗೆ ದೇಶದ ಜನರಲ್ಲಿ ಎಸ್ಎಆರ್ ಎಸ್-ಕೋವ್-2 ಸೋಂಕಿನ ಹರಡುವಿಕೆಯನ್ನು ಅಂದಾಜು ಮಾಡಲು.ಭಾರತವು ಸಮುದಾಯ ಆಧಾರಿತ ಸಿರೊ-ಸಮೀಕ್ಷೆಯನ್ನು ನಡೆಸುತ್ತಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮೂಹಿಕ ಪ್ರಯತ್ನದಲ್ಲಿ, 3027 ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 650930 ಕೋವಿಡ್ ಆರೈಕೆ ಕೇಂದ್ರಗಳನ್ನು ಗುರುತಿಸಲಾಗಿದೆ. ಹೆಚ್ಚುವರಿಯಾಗಿ, ಮೀಸಲಾದ ಕೋವಿಡ್ ಆಸ್ಪತ್ರೆಗಳು ಮತ್ತು ಕೋವಿಡ್ ಆರೋಗ್ಯ ಕೇಂದ್ರಗಳಲ್ಲಿ 2.81 ಲಕ್ಷಕ್ಕೂ ಹೆಚ್ಚು ಪ್ರತ್ಯೇಕ ಹಾಸಿಗೆಗಳು, 31,250 ಲಕ್ಷಕ್ಕೂ ಹೆಚ್ಚು ಐಸಿಯು ಹಾಸಿಗೆಗಳು ಮತ್ತು 11387 ಆಮ್ಲಜನಕದ ಸೌಲಭ್ಯವಿರುವ ಹಾಸಿಗೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಲ್ಲದೆ, ಭಾರತ ಸರ್ಕಾರವು 65.0 ಲಕ್ಷ ಪಿಪಿಇ ಕವರಾಲ್ಗಳನ್ನು ಮತ್ತು 101.07 ಲಕ್ಷ ಎನ್ 95 ಮುಖಗವಸುಗಳನ್ನು ರಾಜ್ಯಗಳಿಗೆ ಪೂರೈಸಿದೆ. ದೇಶದಲ್ಲಿ ಮೊದಲಿನಿಂದಲೂ ಉತ್ಪಾದಿಸಲಾಗದಿದ್ದರೂ, ದಿನಕ್ಕೆ ಸುಮಾರು 3 ಲಕ್ಷ ಪಿಪಿಇ ಕವರಾಲ್ಗಳು ಮತ್ತು 3 ಲಕ್ಷ ಎನ್ 95 ಮುಖಗವಸುಗಳನ್ನು ದೇಶೀಯ ಉತ್ಪಾದಕರು ತಯಾರಿಸುತ್ತಿದ್ದಾರೆ.
ಇದಲ್ಲದೆ, ಕೋವಿಡ್-19 ಅನ್ನು ಎದುರಿಸಲು ಸರ್ಕಾರವು ಎಲ್ಲಾ ಹಂತಗಳಲ್ಲಿ ಸಾಂಕ್ರಾಮಿಕ ರೋಗಶಾಸ್ತ್ರಜ್ಞರೊಡನೆ ಸಮಾಲೋಚಿಸುತ್ತಿದೆ ಮತ್ತು ಅವರನ್ನು ಸಕ್ರಿಯವಾಗಿ ತೊಡಗಿಸಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ರಚಿಸಿದ ಕೋವಿಡ್-19ಕ್ಕಾಗಿ ರಾಷ್ಟ್ರೀಯ ಕಾರ್ಯಪಡೆ (ಎನ್ಟಿಎಫ್) ಮಾರ್ಚ್ 2020 ರ ಮಧ್ಯದಿಂದ 20 ಸಭೆಗಳನ್ನು ನಡೆಸಿದೆ ಮತ್ತು ಸಾಂಕ್ರಾಮಿಕ ರೋಗಕ್ಕೆ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರತಸ್ಪಂದನೆಗೆ ವ್ಯವಸ್ಥಿತವಾಗಿ ಮತ್ತು ಪರಿಣಾಮಕಾರಿಯಾಗಿ ಕೊಡುಗೆ ನೀಡಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (ಡಿಎಸ್ಟಿ) ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ (ಜೆಎನ್ಸಿಎಎಸ್ಆರ್) ನ ಸಂಶೋಧಕರ ತಂಡವು ಐಐಎಸ್ಸಿ ಬೆಂಗಳೂರಿನ ಸಹಯೋಗಿಯೊಂದಿಗೆ ಕೋವಿಡ್-19ಕ್ಕಾಗಿ ಹ್ಯೂರಿಸ್ಟಿಕ್ ಅಂದರೆ ತಾವೇ ಅರಿತಿಕೊಳ್ಳುವ ಮುನ್ಸೂಚಕ ಮಾದರಿಯನ್ನು ಅಭಿವೃದ್ಧಿಪಡಿಸಿದೆ, ಇವುಗಳು ರೋಗದ ಹರಡುವಿಕೆ ಬಗ್ಗೆ ಮತ್ತು ಅದರ ಪರಿಣಾಮವಾಗಿ ಬೇಕಾಗುವ ವೈದ್ಯಕೀಯ ಅಗತ್ಯಗಳ ಬಗ್ಗೆ ಕಡಿಮೆ ಅವಧಿಯ ಮುನ್ಸೂಚನೆಗಳನ್ನು ನೀಡುತ್ತವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಭೂ ವಿಜ್ಞಾನ ಸಚಿವರಾದ ಡಾ.ಹರ್ಷವರ್ಧನ್ ಅವರ ನೇತೃತ್ವದಲ್ಲಿ, ದೇಶದ ವೈಜ್ಞಾನಿಕ ಸಮುದಾಯವನ್ನು ಸಕ್ರಿಯಗೊಳಿಸಲು ಉತ್ತಮ ಸಂಘಟಿತ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ ಮತ್ತು ಹೊಸ ಪರೀಕ್ಷಾ ಕಿಟ್ಗಳು, ರಕ್ಷಣಾತ್ಮಕ ಸಾಧನಗಳು, ಉಸಿರಾಟದ ಸಾಧನಗಳು, ಇತ್ಯಾದಿ ಅಭಿವೃದ್ಧಿಪಡಿಸಲು ಹಗಲು ರಾತ್ರಿ ಲೆಕ್ಕಿಸದೆ ಕೆಲಸ ಮಾಡುವ ಮೂಲಕ ಕೊಡುಗೆ ನೀಡುತ್ತಿದ್ದಾರೆ . ಈ ವಿಧಾನವು ಉತ್ತಮ ಕಾರ್ಯಶೈಲಿಗಳನ್ನು ಹಂಚಿಕೊಳ್ಳಲು, ಕೆಲಸದ ಸಹಯೋಗ, ಅಗತ್ಯಕ್ಕೆ ಆಧಾರಿತ ಆವಿಷ್ಕಾರಗಳ ಅಭಿವೃದ್ಧಿ ಮತ್ತು ಸಂಶೋಧನಾ ಕಾರ್ಯಗಳ ನಕಲು ಮಾಡುವುದನ್ನು ತಪ್ಪಿಸಲು ಸಾಮಾನ್ಯ ವೇದಿಕೆಯನ್ನು ಒದಗಿಸಲು ಸಹಾಯ ಮಾಡಿದೆ. ಡಿಎಸ್ ಟಿ ಮತ್ತು ಇತರ ಸಚಿವಾಲಯಗಳ ಅಡಿಯಲ್ಲಿರುವ ಸಂಸ್ಥೆಗಳ ಸಹಾಯದಿಂದ, ಕೋವಿಡ್-19ಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸಲು ಭಾರತದಲ್ಲಿ ಸೂಕ್ತ ತಂತ್ರಜ್ಞಾನಗಳನ್ನು ಗುರುತಿಸಲು ಮತ್ತು ಉನ್ನತ ಮಟ್ಟಕ್ಕೆ ತರುವ ಪ್ರಯತ್ನವನ್ನು ಸಂಘಟಿಸುವಲ್ಲಿ ಡಿಎಸ್ ಟಿ ಮುಂದಾಗಿದೆ. ಡಿಬಿಟಿ ಮತ್ತು ಅದರ ಸಾರ್ವಜನಿಕ ವಲಯದ ಉದ್ದಿಮೆಯಾದ, ಬಯೋಟೆಕ್ನಾಲಜಿ ಇಂಡಸ್ಟ್ರಿ ರಿಸರ್ಚ್ ಅಸಿಸ್ಟೆನ್ಸ್ ಕೌನ್ಸಿಲ್ (ಬಿಐಆರ್ ಎಸಿ) ಡಯಾಗ್ನೋಸ್ಟಿಕ್ಸ್, ಲಸಿಕೆಗಳು, ನೂತನ ಚಿಕಿತ್ಸಕ, ಔಷಧಗಳ ಮರುಹಂಚಿಕೆ ಅಥವಾ ಕೋವಿಡ್-19 ನಿಯಂತ್ರಣಕ್ಕಾಗಿ ಯಾವುದೇ ಮಧ್ಯಸ್ಥಿಕೆಯನ್ನು ಬೆಂಬಲಿಸಲು ಕೋವಿಡ್-19 ಸಂಶೋಧನಾ ಒಕ್ಕೂಟದ ಕರೆಯನ್ನು ಘೋಷಿಸಿದೆ.
ವಿವಿಧ ನೀತಿ ಪ್ರಕಟಣೆಗಳು, ವಿಶೇಷವಾಗಿ “ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ” ಮತ್ತು “ಆತ್ಮನಿರ್ಭರ ಭಾರತ್” ಅಭಿಯಾನ, ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ವಲಸೆ ನಗರ ಬಡವರು, ಸಣ್ಣ ವ್ಯಾಪಾರಿಗಳು ಸ್ವಯಂ ಉದ್ಯೋಗಿಗಳು, ಸಣ್ಣ ರೈತರು ಎದುರಿಸುತ್ತಿರುವ ಕಷ್ಟಗಳನ್ನು ನಿವಾರಿಸಲು ಮಾಡಲಾಗಿದೆ. ಕೇಂದ್ರ ಸರ್ಕಾರವು ವಲಸೆ ಕಾರ್ಮಿಕರು ಮತ್ತು ನಗರ ಬಡವರಿಗೆ ಕೈಗೆಟುಕುವ ಬಾಡಿಗೆಗೆ ಸುಲಭವಾದ ವಸತಿಯನ್ನು ಒದಗಿಸುವ ಯೋಜನೆಯನ್ನು ಘೋಷಿಸಿದೆ. ಕೈಗೆಟುಕುವ ಬಾಡಿಗೆಯ ವಸತಿ ಸಂಕೀರ್ಣಗಳು ವಲಸೆ ಕಾರ್ಮಿಕರು, ನಗರ ಬಡವರು ಮತ್ತು ವಿದ್ಯಾರ್ಥಿಗಳಿಗೆ ಸಾಮಾಜಿಕ ಭದ್ರತೆ ಮತ್ತು ಗುಣಮಟ್ಟದ ಜೀವನವನ್ನು ಒದಗಿಸುತ್ತದೆ. ನಗರಗಳಲ್ಲಿನ ಸರ್ಕಾರಿ ಅನುದಾನಿತ ಮನೆಗಳನ್ನು ಪಿಪಿಪಿ ವಿಧಾನದ ಅಡಿಯಲ್ಲಿ ರಿಯಾಯಿತಿಯ ಮೂಲಕ ಕೈಗೆಟುಕುವ ಬಾಡಿಗೆಯ ವಸತಿ ಸಂಕೀರ್ಣಗಳನ್ನಾಗಿ (ಎಆರ್ಎಚ್ಸಿ) ಪರಿವರ್ತಿಸುವ ಮೂಲಕ ಇದನ್ನು ಮಾಡಲಾಗುತ್ತದೆ; ಉತ್ಪಾದನಾ ಘಟಕಗಳು, ಕೈಗಾರಿಕೆಗಳು, ಸಂಸ್ಥೆಗಳು, ಸಂಘಗಳು ತಮ್ಮ ಖಾಸಗಿ ಭೂಮಿಯಲ್ಲಿ ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಆರ್ಎಚ್ಸಿ) ಅಭಿವೃದ್ಧಿಪಡಿಸಲು ಮತ್ತು ಕಾರ್ಯನಿರ್ವಹಿಸಲು; ಮತ್ತು ಕೈಗೆಟುಕುವ ಬಾಡಿಗೆ ವಸತಿ ಸಂಕೀರ್ಣಗಳನ್ನು (ಎಆರ್ಎಚ್ಸಿ) ಅಭಿವೃದ್ಧಿಪಡಿಸಲು ಮತ್ತು ಕಾರ್ಯನಿರ್ವಹಿಸಲು ರಾಜ್ಯ ಸರ್ಕಾರಿ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರಿ ಸಂಸ್ಥೆಗಳನ್ನು ಇದೇ ಮಾದರಿಯಲ್ಲಿ ಪ್ರೋತ್ಸಾಹಿಸಲಾಗುವುದು.
***
(Release ID: 1625998)
Visitor Counter : 238