ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ದೇಶಾದ್ಯಂತ ಶಿಕ್ಷಕರ ಜೊತೆ ವೆಬಿನಾರ್ ಮೂಲಕ ಕೇಂದ್ರ ಎಚ್.ಆರ್.ಡಿ. ಸಚಿವರ ಸಂವಾದ
Posted On:
14 MAY 2020 5:34PM by PIB Bengaluru
ದೇಶಾದ್ಯಂತ ಶಿಕ್ಷಕರ ಜೊತೆ ವೆಬಿನಾರ್ ಮೂಲಕ ಕೇಂದ್ರ ಎಚ್.ಆರ್.ಡಿ. ಸಚಿವರ ಸಂವಾದ
ನವೋದಯ ವಿದ್ಯಾಲಯ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ ಶಿಕ್ಷಕರಿಗೆ ಲಾಕ್ ಡೌನ್ ಬಳಿಕ ನೇಮಕಾತಿ ಪತ್ರ-ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್
ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್.ಇ.ಟಿ.) 2020 ದಿನಾಂಕ ಶೀಘ್ರವೇ ಘೋಷಣೆ-ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಇಂದು ಹೊಸದಿಲ್ಲಿಯಲ್ಲಿ ವೆಬಿನಾರ್ ಮೂಲಕ ದೇಶಾದ್ಯಂತ ಶಿಕ್ಷಕರ ಜೊತೆ ಸಂವಾದ ನಡೆಸುವಾಗ “ ಆಚಾರ್ಯ ದೇವೋ ಭವ” ಸಂದೇಶ ನೀಡಿದರು. ಕೋವಿಡ್ -19 ಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಲ್ಲಿ ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸಿರುವುದಕ್ಕೆ ಅವರು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಬೃಹತ್ ಸಂಖ್ಯೆಯಲ್ಲಿ ಶಿಕ್ಷಕರು ವೆಬಿನಾರಿನಲ್ಲಿ ಭಾಗವಹಿಸಿ ಕೇಂದ್ರ ಸಚಿವರಿಗೆ ಪ್ರಶ್ನೆಗಳನ್ನು ಕೇಳಿದರು.
ಕೇಂದ್ರ ಸಚಿವರು ಈ ವೆಬಿನಾರಿನಲ್ಲಿ ಎರಡು ದೊಡ್ದ ಘೋಷಣೆಗಳನ್ನು ಮಾಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಎನ್.ಇ.ಟಿ. ಪರೀಕ್ಷೆಯ ದಿನಾಂಕವನ್ನು ಶೀಘ್ರವೇ ಘೋಷಿಸಲಾಗುವುದು ಎಂದರು. ನವೋದಯ ವಿದ್ಯಾಲಯ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಶಿಕ್ಷಕರಿಗೆ ಲಾಕ್ ಡೌನ್ ಬಳಿಕ ನೇಮಕಾತಿ ದೊರೆಯಲಿದೆ ಎಂದರು.
ತಮ್ಮ ವೆಬಿನಾರಿನ ಮೂಲಕ ಎಲ್ಲಾ ಶಿಕ್ಷಕರಿಗೂ ತಮ್ಮ ಕರ್ತವ್ಯಗಳನ್ನು ನಿಭಾಯಿಸುವಂತೆ ಮತ್ತು ಲಾಕ್ ಡೌನ್ ಅವಧಿಯಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವಂತೆ ಮನವಿ ಮಾಡಿದ ಕೇಂದ್ರ ಸಚಿವರು, ಭಾರತದಲ್ಲಿ ಗುರುವಿನ ಮಹತ್ವ ದೇವರಿಗಿಂತಲೂ ಹೆಚ್ಚಿನದು, ಮತ್ತು ಅದರಿಂದಾಗಿಯೇ ನಾವೆಲ್ಲರೂ ಆಚಾರ್ಯ ದೇವೋ ಭವ ಸ್ಪೂರ್ತಿಯಲ್ಲಿ ಶಿಕ್ಷಕರ ಬಗ್ಗೆ ಗೌರವ ಭಾವನೆ ಹೊಂದಿರಬೇಕು ಎಂದರು. ಈ ಬಿಕ್ಕಟ್ಟಿನಲ್ಲಿ ಶಿಕ್ಷಕರು ಕೂಡಾ ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ, ಮತ್ತು ಅವರ ಕೆಲಸ ಅತ್ಯಂತ ಶ್ಲಾಘನಾರ್ಹವಾದುದು ಎಂದೂ ಅವರು ಹೇಳಿದರು.
ಈ ಬಾರಿ ದೇಶವು ಅಭೂತಪೂರ್ವ ಆರೋಗ್ಯ ತುರ್ತುಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳಿದ ಪೋಖ್ರಿಯಾಲ್, ಇದು ಎಲ್ಲರಿಗೂ ಕಷ್ಟದ ಸಮಯ, ಪೋಷಕರಿಗೆ ಅವರದೇ ಆದ ಕಳವಳಗಳಿವೆ ಮತ್ತು ವಿದ್ಯಾರ್ಥಿಗಳಿಗೂ ಅವರದೇ ಆದ ಚಿಂತೆಗಳಿವೆ . ಶಿಕ್ಷಕರ ಜವಾಬ್ದಾರಿ ಈಗ ಹೆಚ್ಚಾಗಿದೆ, ಯಾಕೆಂದರೆ ಅವರು ಏಕಕಾಲಕ್ಕೆ ಹಲವು ಮಕ್ಕಳ ರಕ್ಷಕರೂ ಆಗಿರುತ್ತಾರೆ, ಮತ್ತು ಅವರು ಯಾವುದೇ ಪಕ್ಷಪಾತವಿಲ್ಲದೆ ಎಲ್ಲರ ಯೋಗಕ್ಷೇಮವನ್ನೂ ನೊಡಿಕೊಳ್ಳಬೇಕಾಗುತ್ತದೆ ಎಂದರು. ದೇಶಾದ್ಯಂತ ಶಿಕ್ಷಕರು ಅವರ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ, ಇದು ಶ್ಲಾಘನೀಯ ಎಂದೂ ಸಚಿವರು ಹೇಳಿದರು.
ಸಂವಾದದಲ್ಲಿ ಶ್ರೀ ಪೋಖ್ರಿಯಾಲ್ ಅವರು ಶಿಕ್ಷಕರು ಮಾಡಿದ ಪ್ರಯತ್ನಗಳಿಂದಾಗಿ ದೇಶದಲ್ಲಿ ಆನ್ ಲೈನ್ ಶಿಕ್ಷಣ ಯಶಸ್ವಿಯಾಗುತ್ತಿದೆ. ಹಲವು ಶಿಕ್ಷಕರು ತಂತ್ರಜ್ಞಾನದಲ್ಲ್ಲಿ ತಜ್ಞರಲ್ಲದಿದ್ದರೂ , ಅವರು ತಮ್ಮನ್ನು ತಾವೇ ತರಬೇತು ಮಾಡಿಕೊಂಡು ವಿದ್ಯಾರ್ಥಿಗಳ ಉಪಯೋಗಕ್ಕಾಗಿ ಆನ್ ಲೈನ್ ಶಿಕ್ಷಣಕ್ಕೆ ಕೊಡುಗೆ ನೀಡಿದ್ದಾರೆ. ಈ ಬಿಕ್ಕಟ್ಟಿನ ಸಮಯವು ದೇಶದ ಶಿಕ್ಷಕರು ಬಲಿಷ್ಟರಾಗಿದ್ದರೆ ಮತ್ತು ಜವಾಬ್ದಾರಿವಂತರಾಗಿದ್ದರೆ ಆಗ ದೇಶವು ಸದಾ ಅಭಿವೃದ್ದಿಯ ಪಥದಲ್ಲಿ ಸಾಗುತ್ತಿರುತ್ತದೆ ಎಂಬುದನ್ನು ದೃಢಪಡಿಸಿದೆ ಎಂದರು. ಕೊರೊನಾವೈರಸ್ ನಿಂದಾಗಿ ದಿಲ್ಲಿಯ ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು ಮೃತಪಟ್ಟಿರುವುದಕ್ಕೆ ಕೇಂದ್ರ ಸಚಿವರು ಸಂತಾಪ ವ್ಯಕ್ತಪಡಿಸಿದರು.
ಲಾಕ್ ಡೌನೋತ್ತರ ಕಾಲದಲ್ಲಿ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು ಶಾಲಾ ಆಡಳಿತ ಮತ್ತು ಶಿಕ್ಷಕರು ಶಾಲಾ ಮಟ್ಟದಲ್ಲಿ ನಿರ್ದಿಷ್ಟಪಡಿಸಿದ ವಿವಿಧ ಕೆಲಸಗಳನ್ನು ನಿಭಾಯಿಸುವರು ಹಾಗು ಎಲ್ಲಾ ಭಾಗೀದಾರರಿಗೂ ಜವಾಬ್ದಾರಿಗಳನ್ನು ನಿಗದಿ ಮಾಡುವರು. ಆರೋಗ್ಯ ಮತ್ತು ನೈರ್ಮಲ್ಯದ ವ್ಯಾಖ್ಯೆ, ಶಾಲೆಗಳ ಆರಂಭಕ್ಕೆ ಮೊದಲು ಮತ್ತು ನಂತರ ಅನುಸರಿಸಬೇಕಾದ ಆರೋಗ್ಯ ಶಿಷ್ಟಾಚಾರಗಳು ಅಥವಾ ಸಾಮಾನ್ಯ ಕಾರ್ಯಾಚರಣಾ ಪ್ರಕ್ರಿಯೆಗಳು (ಎಸ್.ಒ.ಪಿ.ಗಳು ) , ಶಾಲಾ ಕ್ಯಾಲೆಂಡರ್ ಮತ್ತು ವಾರ್ಷಿಕ ಪಠ್ಯಕ್ರಮ ಯೋಜನೆಗಳ ಮರುವ್ಯಾಖ್ಯಾನೀಕರಣ ಮತ್ತು ಮರುಹೊಂದಾಣಿಕೆ, ಲಾಕ್ ಡೌನ್ ಅವಧಿಯ ಮನೆ ಆಧಾರಿತ ಶಾಲೆಯಿಂದ ಔಪಚಾರಿಕೆ ಶಾಲೆಗೆ ಸುಸೂತ್ರವಾಗಿ ಪರಿವರ್ತನೆಯನ್ನು ಖಾತ್ರಿಪಡಿಸುವುದು , ವಿದ್ಯಾರ್ಥಿಗಳ ಭಾವನಾತ್ಮಕ ಕ್ಷೇಮಗಳನ್ನು ಖಾತ್ರಿಪಡಿಸುವುದು ಇತ್ಯಾದಿಗಳನ್ನು ನಿಭಾಯಿಸಬೇಕಾಗಿದೆ ಎಂದರು.
ಶಾಲೆಗಳು ಯಾವುದೇ ವಿಷಯಗಳು ತಪ್ಪಿಹೋಗದಂತೆ ಖಾತ್ರಿಪಡಿಸುವುದಕ್ಕಾಗಿ ತಪಾಸಣಾ ಪಟ್ಟಿಯನ್ನು ತಯಾರಿಸುತ್ತವೆ. ಸಿ.ಬಿ.ಎಸ್.ಇ.ಯು ಶೀಘ್ರವೇ ತಪಾಸಣಾ ಪಟ್ಟಿಯನ್ನು ಹಂಚಿಕೊಳ್ಳುತ್ತದೆ ಎಂದವರು ತಿಳಿಸಿದರು.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೇಂದ್ರೀಯ ವಿದ್ಯಾಲಯಗಳಲ್ಲಿ 8000 ಕ್ಕೂ ಅಧಿಕ ನೇಮಕಾತಿಗಳನ್ನು ಮಾಡಲಾಗಿದೆ ಮತ್ತು ನವೋದಯ ವಿದ್ಯಾಲಯಗಳಲ್ಲಿ 2500 ರಷ್ಟು ನೇಮಕಾತಿಗಳನ್ನು ಮಾಡಲಾಗಿದೆ. ವಿಶ್ವವಿದ್ಯಾಲಯಗಳಲ್ಲಿ 12,000 ಕ್ಕೂ ಅಧಿಕ ಅಧ್ಯಾಪಕರನ್ನು ನೇಮಿಸಲಾಗಿದೆ ಎಂದರು. ನವೋದಯ ವಿದ್ಯಾಲಯಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಶಿಕ್ಷಕರಿಗೆ ಲಾಕ್ ಡೌನ್ ಮುಗಿದ ಕೂಡಲೇ ನೇಮಕಾತಿ ಪತ್ರಗಳನ್ನು ನೀಡಲಾಗುವುದು ಎಂದೂ ಅವರು ತಿಳಿಸಿದರು. ಶಿಕ್ಷಕರ ಹುದ್ದೆಗಳನ್ನು ಖಾಲಿ ಇಡಬಾರದು ಎಂಬುದರಲ್ಲಿ ನಮ್ಮ ಸರಕಾರ ನಂಬಿಕೆ ಇಟ್ಟಿದೆ ಮತ್ತು ಸಚಿವಾಲಯವು ಖಾಲಿ ಹುದ್ದೆಗಳನ್ನು ತುಂಬಲು ಸಾಧ್ಯ ಇರುವ ಎಲ್ಲಾ ಕ್ರಮಗಳನ್ನೂ ಕೈಗೊಳ್ಳಲಿದೆ ಎಂದರು.
ಶಿಕ್ಷಕರ ತರಬೇತಿ ಕುರಿತ ಪ್ರಶ್ನೆಗೆ ಉತ್ತರಿಸಿದ ಶ್ರೀ ಪೋಖ್ರಿಯಾಲ್ ಆನ್ ಲೈನಿನಲ್ಲಿ ಶಿಕ್ಷಕರ ತರಬೇತಿ ವ್ಯವಸ್ಥೆ ನಡೆಯುತ್ತಿದೆ ಮತ್ತು ಲಕ್ಷಾಂತರ ಶಿಕ್ಷಕರು ತರಬೇತಿ ನಿರತರಾಗಿದ್ದಾರೆ. ಶಿಕ್ಷಕರ ತರಬೇತಿಗಾಗಿರುವ ಮದನ ಮೋಹನ್ ಮಾಳವೀಯ ರಾಷ್ಟ್ರೀಯ ಮಿಶನ್ (ಪಿ.ಎಂ.ಎಂ.ಎಂ.ಎನ್.ಎಂ.ಟಿ.ಟಿ.) ಯು ಶಿಕ್ಷಕರ ತರಬೇತಿಗಾಗಿ ಇ-ಕಲಿಕಾ ಸಂಪನ್ಮೂಲಗಳನ್ನು ಸಂಘಟಿಸುತ್ತಿದೆ. ಈ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರ ಪಾಲ್ಗೊಳ್ಳುವಿಕೆ ಹೆಚ್ಚಿದೆ ಎಂದರು. ಶಿಕ್ಷಕರು ಇಂತಹ ಹೊಸ ತಂತ್ರಜ್ಞಾನಗಳ ಮೂಲಕ ವಿದ್ಯಾರ್ಥಿಗಳಿಗೆ ಕಲಿಸುವ ತರಬೇತಿಗಳಲ್ಲಿ ಪಾಲ್ಗೊಳ್ಳಲು ತಮ್ಮ ಸಮ್ಮತಿ ವ್ಯಕ್ತಪಡಿಸಿದ್ದಾರೆ .
ಅಧಿವೇಶನ ಮುಕ್ತಾಯಗೊಳಿಸುತ್ತಾ ಸಚಿವರು ಸಾಮಾಜಿಕ ಅಂತರ ಪಾಲನೆ ಇತ್ಯಾದಿಗಳಿಗೆ ಆರೋಗ್ಯ ಇಲಾಖೆಯ ಮಾರ್ಗದರ್ಶಿಗಳನ್ನು ತಾಳ್ಮೆಯಿಂದ ಅನುಸರಿಸುತ್ತಿರುವುದಕ್ಕೆ ಹಾಗು ಈ ಮಾರ್ಗದರ್ಶಿಗಳನ್ನು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಪ್ರೇರಣೆ ನೀಡುತ್ತಿರುವುದಕ್ಕೆ ಶಿಕ್ಷಕರಿಗೆ ಧನ್ಯವಾದ ಹೇಳಿದರು. ಕೋವಿಡ್ -19 ರ ವಿರುದ್ದದ ಯುದ್ದದಲ್ಲಿ ಪೂರ್ಣ ನಿಷ್ಟೆಯಿಂದ ಭಾಗವಹಿಸಿದುದಕ್ಕಾಗಿ ಸಚಿವರು ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಣಕ್ಕೆ ಸಂಬಂಧಿಸಿ ಪ್ರಮುಖ ವಿಷಯಗಳ ಬಗ್ಗೆ ತಮ್ಮ ಸಲಹೆಗಳನ್ನು ಟ್ವಿಟರ್ ಮತ್ತು ಫೇಸ್ ಬುಕ್ ಮೂಲಕ ಕಳುಹಿಸುವಂತೆ ಅವರು ಎಲ್ಲಾ ಶಿಕ್ಷಕರಲ್ಲೂ ಮನವಿ ಮಾಡಿದರು.
***
(Release ID: 1624630)
Visitor Counter : 353
Read this release in:
English
,
Urdu
,
Hindi
,
Marathi
,
Bengali
,
Assamese
,
Punjabi
,
Odia
,
Tamil
,
Telugu
,
Malayalam