ನೌಕಾ ಸಚಿವಾಲಯ

ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ ಘೋಷಿಸಲಾದ ಸರಣಿ ಕ್ರಮಗಳಿಗೆ ಶ್ರೀ ಮನ್ಸುಖ್ ಮಾಂಡವೀಯ ಸ್ವಾಗತ

Posted On: 15 MAY 2020 7:14PM by PIB Bengaluru

ಕೋವಿಡ್ -19 ವಿರುದ್ದ ಹೋರಾಡುತ್ತಿರುವ ಭಾರತೀಯ ಆರ್ಥಿಕತೆಯನ್ನು ಬೆಂಬಲಿಸಲು
ಆತ್ಮನಿರ್ಭರ ಭಾರತ್ ಅಭಿಯಾನದ ಅಡಿಯಲ್ಲಿ ಘೋಷಿಸಲಾದ ಸರಣಿ ಕ್ರಮಗಳಿಗೆ ಶ್ರೀ ಮನ್ಸುಖ್ ಮಾಂಡವೀಯ ಸ್ವಾಗತ

 

ಶಿಪ್ಪಿಂಗ್ ಖಾತೆಯ ಸಹಾಯಕ (ಪ್ರಭಾರ) ಸಚಿವರೂ ಮತ್ತು ರಾಸಾಯನಿಕಗಳು ಹಾಗು ರಸಗೊಬ್ಬರಗಳ ಖಾತೆಯನ್ನೂ ಹೊಂದಿರುವ ಶ್ರೀ ಮನ್ಸುಖ್ ಮಾಂಡವೀಯ ಅವರು ಹಣಕಾಸು ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಗೌರವಾನ್ವಿತ ಪ್ರಧಾನ ಮಂತ್ರಿ ಅವರು ಮಾಡಿದ ಘೋಷಣೆಯ ಅನುಸಾರ ಪ್ರಕಟಿಸಿದ ಹಲವಾರು ಸರಣಿ ಕ್ರಮಗಳನ್ನು ಸ್ವಾಗತಿಸಿದ್ದಾರೆ. ಶ್ರೀ ನರೇಂದ್ರ ಮೋದಿ ಅವರು ಭಾನುವಾರದಂದು 20 ಲಕ್ಷ ಕೋ.ರೂ.ಗಳ ವಿಶೇಷ ಆರ್ಥಿಕ ಮತ್ತು ಸಮಗ್ರ ಪ್ಯಾಕೇಜನ್ನು ಘೋಷಿಸಿದ್ದರು. ಅವರು ಆತ್ಮ ನಿರ್ಭರ ಭಾರತ್ ಅಭಿಯಾನ ಅಥವಾ ಸ್ವಾವಲಂಬಿ ಭಾರತ ಆಂದೋಲನಕ್ಕೆ ಸ್ಪಷ್ಟ ಕರೆಯನ್ನು ನೀಡಿದ್ದರು. ಅವರು ಆತ್ಮ ನಿರ್ಭರ ಭಾರತಕ್ಕೆ ಐದು ಸ್ತಂಭಗಳನ್ನಾಗಿ - ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ರೋಮಾಂಚಕ ಜನಾಂಗೀಯ ಸಂಪನ್ಮೂಲ ಮತ್ತು ಬೇಡಿಕೆಗಳನ್ನು ಉಲ್ಲೇಖಿಸಿದ್ದರು.

ಇದುವರೆಗೆ ಮೂರು ಕಂತುಗಳಲ್ಲಿ ಹಣಕಾಸು ಸಚಿವರು ಘೋಷಿಸಿದ ವಿವರಗಳು ಕೋವಿಡ್ -19 ಜಾಗತಿಕ ಸಾಂಕ್ರಾಮಿಕದ ವಿರುದ್ದ ಧೈರ್ಯದಿಂದ ಹೋರಾಟ ನಿರತವಾಗಿರುವ ಭಾರತೀಯ ಆರ್ಥಿಕತೆಯನ್ನು ಮತ್ತು ಅದರ ನಾಗರಿಕರನ್ನು ಉತ್ತಮಗೊಳಿಸುವಲ್ಲಿ ಬಹಳ ಪ್ರಯೋಜನಕಾರಿಯಾಗಲಿವೆ ಎಂದೂ ಶ್ರೀ ಮಾಂಡವೀಯ ಅಭಿಪ್ರಾಯಪಟ್ಟರು. ಹಣಕಾಸು ಸಚಿವರು ತಮ್ಮ ಮೊದಲ ಕಂತಿನಲ್ಲಿ ಕೆಲಸಕ್ಕೆ ಮರಳುವ ನಿಟ್ಟಿನಲ್ಲಿ ಕ್ರಮಗಳನ್ನು ಪ್ರಕಟಿಸಿದರು. ಉದ್ಯೋಗಿಗಳನ್ನು, ಉದ್ಯೋಗದಾತರನ್ನು , ವ್ಯಾಪಾರೋದ್ಯಮಗಳನ್ನು ಅದರಲ್ಲೂ ವಿಶೇಷವಾಗಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ಉತ್ಪಾದನೆ ಪುನರಾರಂಭಿಸುವ ನಿಟ್ಟಿನಲ್ಲಿ ಮತ್ತು ಕೆಲಸಗಾರರಿಗೆ ಪ್ರಯೋಜನಕಾರಿ ಉದ್ಯೋಗಕ್ಕೆ ಮರಳಲು ಸಮರ್ಥವಾಗುವಂತಹ ಕ್ರಮಗಳನ್ನು ಘೋಷಿಸಿದರು. ಬ್ಯಾಂಕಿಂಗೇತರ ಸಂಸ್ಥೆಗಳನ್ನು (ಎನ್.ಬಿ.ಎಫ್.ಸಿ.ಗಳು) ಹೌಸಿಂಗ್ ಫೈನಾನ್ಸ್ ಕಂಪೆನಿಗಳು (ಎಚ್.ಎಫ್.ಸಿ.ಗಳು ) ಕಿರು ಹಣಕಾಸು ವಲಯ ಮತ್ತು ವ್ಯಾಪಾರೋದ್ಯಮಗಳಿಗೆ ತೆರಿಗೆ ಪರಿಹಾರ,ಸಾರ್ವಜನಿಕ ಖರೀದಿಯಲ್ಲಿ ಗುತ್ತಿಗೆದಾರರಿಗೆ ಗುತ್ತಿಗೆ ಬದ್ದತೆಗಳಿಗೆ ಪರಿಹಾರ ಮತ್ತು ರಿಯಲ್ ಎಸ್ಟೇಟ್ ವಲಯಕ್ಕೆ ಅನುಸರಣಾ ಪರಿಹಾರಗಳು ವ್ಯಾಪಾರೋದ್ಯಮಕ್ಕೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ ಬೆಂಬಲ ಮತ್ತು ಉತ್ತೇಜನ ನೀಡುತ್ತವೆ ಎಂದೂ ಶ್ರೀ ಮಾಂಡವೀಯ ಹೇಳಿದರು.

ಎರಡನೆ ಕಂತಿನಲ್ಲಿ ಪ್ರಕಟಿಸಿದ ಕ್ರಮಗಳು ನಿರ್ದಿಷ್ಟವಾಗಿ ವಲಸೆ ಕಾರ್ಮಿಕರು , ಬೀದಿ ಬದಿ ವ್ಯಾಪಾರಿಗಳು , ವಲಸೆ ಬಂದ ನಗರಗಳ ಬಡವರು, ಸಣ್ಣ ವ್ಯಾಪಾರಿಗಳು , ಸ್ವ ಉದ್ಯೋಗಿಗಳು , ಸಣ್ಣ ರೈತರು ಎದುರಿಸಿದ ಕಷ್ಟ ಪರಿಸ್ಥಿತಿಯ ಬಗ್ಗೆ ಮತ್ತು ವಸತಿ ಸಮಸ್ಯೆಯ ಬಗ್ಗೆ ಗಮನ ಹರಿಸಿದ್ದು, ಅದನ್ನು ಉತ್ತಮಪಡಿಸುವ ಇರಾದೆಯನ್ನು ಹೊಂದಿವೆ. ಮೋದಿ ಸರಕಾರ ಬಡವರ ಪರ ನೀತಿಗಳಲ್ಲಿ ನಂಬಿಕೆ ಇಟ್ಟಿದೆ ಮತ್ತು ಅವರಿಗೆ ಸಹಾಯ ಮಾಡಲು ಹಾಗು ಬಡವರನ್ನು ಬೆಂಬಲಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎಂದವರು ಹೇಳಿದರು.

ಮೂರನೇ ಕಂತಿನಲ್ಲಿ ದೇಶದ ಅನ್ನ ದಾತನ ಆಸಕ್ತಿಗಳ ಬಗ್ಗೆ ಕಾಳಜಿ ವಹಿಸಲಾಗಿದೆ ಎಂದು ಹೇಳಿರುವ ಶ್ರೀ ಮಾಂಡವೀಯ ರೈತರು ಮತ್ತು ಗದ್ದೆಗಳಲ್ಲಿ ಕೆಲಸ ಮಾಡುತ್ತಿರುವವರು ಇದರಲ್ಲಿ ಪರಿಗಣಿಸಲ್ಪಟ್ಟಿದ್ದಾರೆ ಎಂದರು. ಕೃಷಿ, ಮೀನುಗಾರಿಕೆ, ಪಶುಸಂಗೋಪನೆ, ಜೇನು ಕೃಷಿ, ವೈದ್ಯಕೀಯ ಮಹತ್ವದ ಔಷಧೀಯ ಗಿಡಗಳು, ಪೂರೈಕೆ ಸರಪಳಿ ಇತ್ಯಾದಿಗಳಿಗೆ ಇದರಲ್ಲಿ ಆದ್ಯತೆ ನೀಡಲಾಗಿದೆ. ಅಭೂತಪೂರ್ವ ಬಿಕ್ಕಟ್ಟಿನ ಸಂದರ್ಭದಲ್ಲಿ ಅದಕ್ಕೆ ಸಕಾಲದಲ್ಲಿ, ಆದ್ಯತೆಯಾಧಾರದಲ್ಲಿ ಮತ್ತು ಸೂಕ್ತ ರೀತಿಯ ಪ್ರತಿಕ್ರಿಯೆಗಾಗಿ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆ ಸಲ್ಲಿಸಿರುವ ಶ್ರೀ ಮಾಂಡವೀಯ ಅವರು ಪ್ರಧಾನ ಮಂತ್ರಿ ಶ್ರೀ ಮೋದಿ ಅವರು ಘೋಷಿಸಿದ ನಮ್ಮ ಜಿ.ಡಿ.ಪಿ. 10 % ನಷ್ಟಿರುವ ಮೊತ್ತದ ವಿಶೇಷ ಆರ್ಥಿಕ ಪ್ಯಾಕೇಜ್ ಅನುಷ್ಟಾನದಿಂದಾಗಿ ನಾವು ಇನ್ನಷ್ಟು ಬಲಿಷ್ಟರಾಗಿ ಮೂಡಿಬರಲಿದ್ದೇವೆ ಎಂಬ ಆಶಯವನ್ನು ವ್ಯಕ್ತಪಡಿಸಿದರು.

***



(Release ID: 1624245) Visitor Counter : 182