ಹಣಕಾಸು ಸಚಿವಾಲಯ
ಕೊವಿಡ್ -19 ವಿರುದ್ದ ಹೋರಾಟದ ಬೆಂಬಲಕ್ಕಾಗಿ ಭಾರತಕ್ಕೆ 500 ದಶಲಕ್ಷ ಡಾಲರ್: ಎ.ಐ.ಐ.ಬಿ ಮತ್ತು ಭಾರತ ಸರ್ಕಾರ ಒಪ್ಪಂದ
Posted On:
08 MAY 2020 5:22PM by PIB Bengaluru
ಕೊವಿಡ್ -19 ವಿರುದ್ದ ಹೋರಾಟದ ಬೆಂಬಲಕ್ಕಾಗಿ ಭಾರತಕ್ಕೆ 500 ದಶಲಕ್ಷ ಡಾಲರ್: ಎ.ಐ.ಐ.ಬಿ ಮತ್ತು ಭಾರತ ಸರ್ಕಾರ ಒಪ್ಪಂದ
ಕೊವಿಡ್-19 ಸಾಂಕ್ರಾಮಿಕ ರೋಗಕ್ಕೆ ಶಕ್ತಿಯುತವಾಗಿ ಸ್ಪಂದಿಸಲು ಮತ್ತು ಸಾರ್ವಜನಿಕ ಆರೋಗ್ಯ ಸನ್ನದ್ಧತೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತಕ್ಕೆ ಸಹಾಯ ಮಾಡಲು ಭಾರತ ಸರ್ಕಾರ ಮತ್ತು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (ಎ.ಐ.ಐ.ಬಿ.) 500 ದಶಲಕ್ಷ ಯುಎಸ್ ಡಾಲರ್ ಮೊತ್ತದ “ಕೊವಿಡ್-19 ತುರ್ತು ಸ್ಪಂದನೆ ಮತ್ತು ಆರೋಗ್ಯ ವ್ಯವಸ್ಥೆಗಳ ಸಿದ್ಧತೆ ಯೋಜನೆ”ಗೆ ಸಹಿ ಹಾಕಿವೆ. ಬ್ಯಾಂಕಿನಿಂದ ಭಾರತದ ಆರೋಗ್ಯ ಕ್ಷೇತ್ರಕ್ಕೆ ಲಭಿಸಿದ ಮೊದಲ ಬೆಂಬಲವಿದು.
ಈ ಹೊಸ ಬೆಂಬಲದ ವ್ಯಾಪ್ತಿಯು ಭಾರತದಾದ್ಯಂತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಳ್ಳುತ್ತದೆ. ದೇಶದಾದ್ಯಂತ ಸೋಂಕಿತ ಜನರು, ಅಪಾಯದಲ್ಲಿರುವ ಜನಸಂಖ್ಯೆ, ವೈದ್ಯಕೀಯ ಮತ್ತು ತುರ್ತು ಸಿಬ್ಬಂದಿಗಳು, ಸೇವಾ ಪೂರೈಕೆದಾರರು, ವೈದ್ಯಕೀಯ ಮತ್ತು ಪರೀಕ್ಷಾ ಸೌಲಭ್ಯಗಳು, ರಾಷ್ಟ್ರೀಯ ಮತ್ತು ಪ್ರಾಣಿ ಆರೋಗ್ಯ ಸಂಸ್ಥೆಗಳ ಆರ್ಥಿಕ ಅಗತ್ಯತೆಗಳನ್ನು ಕೂಡಾ ಒಳಗೊಳ್ಳುತ್ತದೆ.
ಈ ಒಪ್ಪಂದಕ್ಕೆ ಭಾರತ ಸರ್ಕಾರದ ಪರವಾಗಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ಸಮೀರ್ ಕುಮಾರ್ ಖರೆ ಮತ್ತು ಎ.ಐ.ಐ.ಬಿ ಪರವಾಗಿ ಮಹಾನಿರ್ದೇಶಕರು (ಪ್ರಭಾರ) ಶ್ರೀ ರಜತ್ ಮಿಶ್ರಾ ಅವರು ಸಹಿ ಹಾಕಿದರು.
“ಕೊವಿಡ್-19 ನಿಂದ ಉಂಟಾಗುವ ಭೀತಿಗೆ ಸ್ಪಂದಿಸುವ ಮತ್ತು ಭಾರತದಲ್ಲಿ ಸನ್ನದ್ಧತೆಗಾಗಿ ರಾಷ್ಟ್ರೀಯ ಆರೋಗ್ಯ ವ್ಯವಸ್ಥೆಗಳನ್ನು ಬಲಪಡಿಸುವ ಪ್ರಯತ್ನದಲ್ಲಿ ಎ.ಐ.ಐ.ಬಿಯ ಸಮಯೋಚಿತ ನೆರವು ಸರ್ಕಾರಕ್ಕೆ ಉತ್ತಮ ಸಹಾಯ ಮಾಡುತ್ತದೆ” ಎಂದು ಎ.ಐ.ಐ.ಬಿ (ಭಾರತ) ಮುಖ್ಯಸ್ಥ ಶ್ರೀ ಖರೆ ಹೇಳಿದರು. ದೇಶದ ಸಾಂಕ್ರಾಮಿಕ ರೋಗದ ತುರ್ತುಸ್ಥಿತಿಗೆ ಸ್ಪಂದಿಸಿ, ಕೇಂದ್ರ ಹಣಕಾಸು ಮತ್ತು ಕೇಂದ್ರ ಆರೋಗ್ಯ ಸಚಿವಾಲಯಗಳು ಮತ್ತು ಎ.ಐ.ಐ.ಬಿಯ ಅಧಿಕಾರಿಗಳ ಶ್ರಮಪಟ್ಟು ಈ ಯೋಜನೆಯನ್ನು ಅತಿ ಕಡಿಮೆ ಸಮಯದಲ್ಲಿ ಸಿದ್ಧಪಡಿಸಿ, ಕಾರ್ಯರೂಪಕ್ಕೆ ತಂದರು
ಪಿಪಿಇ, ಆಮ್ಲಜನಕ ವಿತರಣಾ ವ್ಯವಸ್ಥೆಗಳು ಮತ್ತು ಔಷಧಿಗಳ ಸಂಗ್ರಹಣೆಯನ್ನು ಹೆಚ್ಚಿಸುವ ಮೂಲಕ, ಸ್ಥಿತಿಸ್ಥಾಪಕ ಆರೋಗ್ಯವನ್ನು ನಿರ್ಮಿಸುವ ಹಾಗೂ ಆ ಮೂಲಕ ಕೊವಿಡ್ ರೋಗ ಪತ್ತೆ ಸಾಮರ್ಥ್ಯವನ್ನು ಹೆಚ್ಚಿಸಲು ತ್ವರಿತ ಬೆಂಬಲವನ್ನು ನೀಡುವ ನಿಟ್ಟಿನಲ್ಲಿ ಸಹಾಯವಾಗಲಿದೆ. ಭಾರತದಲ್ಲಿ ಕೊವಿಡ್-19 ಹರಡುವಿಕೆಯನ್ನು ತಡೆಯಲು ಮತ್ತು ಸಾಧ್ಯವಾದಷ್ಟು ನಿಧಾನಗೊಳಿಸಲು ಹಾಗೂ ಮಿತಿಗೊಳಿಸಿ ಸಂಪೂರ್ಣವಾಗಿ ತಡೆಯಲು ಭಾರತ ಸರ್ಕಾರಕ್ಕೆಈ ಯೋಜನೆಯು ಆರ್ಥಿಕ ಸಹಾಯ ಮಾಡುತ್ತದೆ. ಭವಿಷ್ಯದಲ್ಲಿ ಕೊವಿಡ್-19 ರೋಗ ಏಕಾಏಕಿ ಪಸರಿಸುವಿಕೆಗೆ ತಡೆಕಾರ್ಯ, ಪ್ರಮುಖ ಸಾರ್ವಜನಿಕ ಆರೋಗ್ಯ, ತಡೆಗಟ್ಟುವಿಕೆ, ರೋಗಿಗಳ ನಿರ್ವಹಣಾ ಕಾರ್ಯಗಳನ್ನು ಒದಗಿಸುವ ವ್ಯವಸ್ಥೆಗಳು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಕೆಲಸ ಮಾಡುವ ಭಾರತೀಯ ಮತ್ತು ಇತರ ಜಾಗತಿಕ ಸಂಸ್ಥೆಗಳಿಂದ ಕೊವಿಡ್-19 ಕುರಿತ ಸಂಶೋಧನೆಗೆ ಬೆಂಬಲ ಮುಂತಾದ ಪ್ರಕಾರದ ಕಾರ್ಯಯೋಜನೆಗಳಿಗೆ ಹಣಕಾಸು ಸಹಾಯ ಮಾಡಲಿದೆ. ಇದರಿಂದಾಗಿ, ಕೊವಿಡ್-19 ಏಕಾಏಕಿ ಪಸರಿಸುವಿಕೆ ಮುಂದಿನ ದಿನಗಳಲ್ಲಿ ಸಂಭವಿಸಿದಾಗ ಗಮನಾರ್ಹ ಋಣಾತ್ಮಕ ವ್ಯಾಪಕತೆ ನಿರೀಕ್ಷಿಸಲಾಗಿದೆ, ಮತ್ತು ಯೋಜನೆಯ ಸಮನ್ವಯ ಮತ್ತು ನಿರ್ವಹಣೆಗಾಗಿ ಸಾರ್ವಜನಿಕ ಚೌಕಟ್ಟುಗಳ ವ್ಯವಸ್ಥೆಗಳನ್ನು ಬಲಪಡಿಸಲಾಗುತ್ತದೆ.
ಸೋಂಕಿತ ಜನರು, ಅಪಾಯದಲ್ಲಿರುವ ಜನಸಂಖ್ಯೆ, ವೈದ್ಯಕೀಯ ಮತ್ತು ತುರ್ತು ಸಿಬ್ಬಂದಿ, ವೈದ್ಯಕೀಯ ಮತ್ತು ಪರೀಕ್ಷಾ ಸೌಲಭ್ಯಗಳಲ್ಲಿ (ಸಾರ್ವಜನಿಕ ಮತ್ತು ಖಾಸಗಿ) ಸೇವಾ ಪೂರೈಕೆದಾರರು ಮತ್ತು ಭಾರತದ ಕೊವಿಡ್-19 ತಡೆ ಚಟುವಟಿಕೆಗಳಲ್ಲಿ ತೊಡಗಿರುವ ಸಾರ್ವಜನಿಕರು ಮತ್ತು ಪ್ರಾಣಿ ಆರೋಗ್ಯ ಸಂಸ್ಥೆಗಳು ಈ ಯೋಜನೆಯ ಪ್ರಾಥಮಿಕ ಫಲಾನುಭವಿಗಳಾಗಿದ್ದಾರೆ.
“ಕೊವಿಡ್ -19 ರೋಗಿಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುವ ಮತ್ತು ಅದರ ಹರಡುವಿಕೆಯನ್ನು ತಡೆಯುವಂತಹ ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಯನ್ನು ನಿರ್ಮಿಸುವುದು ತಕ್ಷಣದ ಆದ್ಯತೆಯಾಗಿದೆ, ಈ ಧನಸಹಾಯವು ಮೇಲಿನ ಅಗತ್ಯವನ್ನು ಹಾಗೂ ಇತರೆ ಆರ್ಥಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ, ಮತ್ತು ಭವಿಷ್ಯದಲ್ಲಿ ರೋಗ ಏಕಾಏಕಿ ಉಲ್ಬಣಿಸುವಿಕೆಗಳ ತಡೆಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಭಾರತದ ಸಾಮರ್ಥ್ಯವನ್ನು ಬಲಪಡಿಸುತ್ತದೆ” ಎಂದು ಎ.ಐ.ಐ.ಬಿ ಉಪಾಧ್ಯಕ್ಷ (ಹೂಡಿಕೆ ಕಾರ್ಯಾಚರಣೆ) ಶ್ರೀ ಡಿ.ಜೆ. ಪಾಂಡಿಯನ್ ಅವರು ಹೇಳಿದರು.
ಈ ಅಭೂತಪೂರ್ವ ಜಾಗತಿಕ ಭೀತಿ ಮತ್ತು ಸವಾಲನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಎ.ಐ.ಐ.ಬಿ ತನ್ನ ಹಣಕಾಸು ಪೂರೈಕೆ ಪಾತ್ರವನ್ನು ನಿರ್ವಹಿಸುತ್ತದೆ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತದೆ ಮತ್ತು ಭಾರತ ಸರ್ಕಾರಕ್ಕೆ ತಮ್ಮ ಆರೋಗ್ಯ ವ್ಯವಸ್ಥೆಗಳನ್ನು ವೃದ್ಧಿಸಲು, ಸೌಕರ್ಯಗಳನ್ನು ಹೆಚ್ಚಿಸಲು ಮತ್ತು ಅವರ ಆರ್ಥಿಕತೆಗಳು ಸಾಧ್ಯವಾದಷ್ಟು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುವ ತುರ್ತು ಹಣಕಾಸು ಸಹಾಯ ಮಾಡುತ್ತದೆ.
ಕೊವಿಡ್-19 ಮತ್ತು ಭವಿಷ್ಯದ ರೋಗ ಏಕಾಏಕಿ ಪಸರಿಸದಂತೆ ಉತ್ತಮವಾಗಿ ನಿರ್ವಹಿಸಲು ಸಾರ್ವಜನಿಕ ಆರೋಗ್ಯ ತಡೆಗಟ್ಟುವಿಕೆ ಮತ್ತು ರೋಗಿಗಳ ಆರೈಕೆಯನ್ನು ಒದಗಿಸಲು ಈ ಯೋಜನೆಯು ಭಾರತದ ಆರೋಗ್ಯ ವ್ಯವಸ್ಥೆಯ ಸ್ಥಿತಿಸ್ಥಾಪಕತ್ವವನ್ನು ಹಣಕಾಸು ಸಹಾಯವು ಹೆಚ್ಚಿಸುತ್ತದೆ. ಇದು ಭಾರತದ ಸಮಗ್ರ ರೋಗ ಕಣ್ಗಾವಲು ಕಾರ್ಯಕ್ರಮವನ್ನು ಬಲಪಡಿಸಲು, ಸಾಂಕ್ರಾಮಿಕ ರೋಗ ಆಸ್ಪತ್ರೆಗಳು, ಜಿಲ್ಲೆ, ನಾಗರಿಕ, ಸಾಮಾನ್ಯ ಮತ್ತು ವೈದ್ಯಕೀಯ ಕಾಲೇಜು ಆಸ್ಪತ್ರೆಗಳನ್ನು ಪುನರುಜ್ಜೀವನಗೊಳಿಸಲು, ಮತ್ತು 3 ಹಂತದ ಜೈವಿಕ ಸುರಕ್ಷತೆಯ ಧಾರಕ ಮಟ್ಟದ ಪ್ರಯೋಗಾಲಯಗಳ ಜಾಲವನ್ನು ನಿರ್ಮಿಸಲು ಈ ಹಣಕಾಸು ಬೆಂಬಲ ಸಹಾಯ ಮಾಡುತ್ತದೆ.
ಇಂದು, ಎಚ್.ಐ.ವಿ/ ಏಡ್ಸ್, ಎಬೋಲಾ ಮತ್ತು ಸಾರ್ಸ್ ಸೇರಿದಂತೆ ಶೇಕಡಾ 75 ರಷ್ಟು ಹೊಸ ಸಾಂಕ್ರಾಮಿಕ ರೋಗಗಳು ಮಾನವನಿಂದ ಪ್ರಾಣಿಗಳ ಸಂಪರ್ಕದಿಂದ ಪ್ರಾರಂಭವಾಗುತ್ತವೆ. ಈ ಯೋಜನೆಯು ಅಸ್ತಿತ್ವದಲ್ಲಿರುವ, ಮತ್ತು ಉದಯೋನ್ಮುಖ ಜೋನೋಸ್ ಗಳನ್ನು ಪತ್ತೆಹಚ್ಚಲು ಸಾಮರ್ಥ್ಯ ಮತ್ತು ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತದೆ, ಭಾರತೀಯ ಸಂಸ್ಥೆಗಳಿಂದ ಕೊವಿಡ್-19 ಕುರಿತು ಬಯೋಮೆಡಿಕಲ್ ಸಂಶೋಧನೆಗೆ ಬೆಂಬಲ ನೀಡುತ್ತದೆ, ಮತ್ತು ಪರೀಕ್ಷೆ & ಸಂಶೋಧನೆಗಾಗಿ ವೈರಲ್ ಸಂಶೋಧನೆ, ಮತ್ತು ರೋಗನಿರ್ಣಯ ಪ್ರಯೋಗಾಲಯಗಳನ್ನು ನವೀಕರಿಸಲು ಈ ಹಣಕಾಸು ವ್ಯವಸ್ಥೆ ಸಹಾಯ ಮಾಡುತ್ತದೆ.
ವ್ಯಾಪಕವಾದ ಕೊವಿಡ್-19 ಏಕಾಏಕಿ ಪಸರಿಸುವಿಕೆ ಸಂಭವಿಸಿದಾಗ ಸಂಭವನೀಯ ತಡೆ ಹಾಗೂ ಆರೋಗ್ಯಕರ ಋಣಾತ್ಮಕ ಬಾಹ್ಯತೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ, ಇದರಲ್ಲಿ ನೈರ್ಮಲ್ಯ ಅಭ್ಯಾಸಗಳ ಬಗ್ಗೆ ಸಮಗ್ರ ಆರೋಗ್ಯ ಜಾಗೃತಿ ಮತ್ತು ನಡವಳಿಕೆಯ ಬದಲಾವಣೆಯ ಅಭಿಯಾನಗಳು, ಮುಖಕವಚಗಳನ್ನು ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ದುರ್ಬಲ ಸಮುದಾಯಗಳಿಗೆ ಮಾನಸಿಕ ಆರೋಗ್ಯ ಮತ್ತು ಮಾನಸಿಕ ಸೇವೆಗಳು ಈ ಹಣಕಾಸು ಯೋಜನೆಯ .ಅಂಶಗಳಲ್ಲಿ ಸೇರಿವೆ.
ಈ ಯೋಜನೆಗೆ ವಿಶ್ವ ಬ್ಯಾಂಕ್ ಮತ್ತು ಎ.ಐ.ಐ.ಬಿ ಸಂಯುಕ್ತವಾಗಿ ಒಟ್ಟು 1.5 ಶತಲಕ್ಷ ಕೋಟಿ ಡಾಲರ್ ಮೊತ್ತದ ಹಣಕಾಸು ಒದಗಿಸುತ್ತಿದ್ದು, ಅದರಲ್ಲಿ 1.0 ಶತಲಕ್ಷ ಕೋಟಿ ಡಾಲರ್ ಅನ್ನು ವಿಶ್ವ ಬ್ಯಾಂಕ್ ಮತ್ತು 500 ದಶಲಕ್ಷ ಡಾಲರ್ ಅನ್ನು ಎಐಐಬಿ ಒದಗಿಸುತ್ತದೆ.
ಈ ಯೋಜನೆಯನ್ನು ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್.ಎಚ್.ಎಂ), ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್.ಸಿ.ಡಿ.ಸಿ) ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್) ಜಾರಿಗೆ ತರಲಿದೆ.
***
(Release ID: 1622334)
Visitor Counter : 239