ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ
ಕೋವಿಡ್ -19 ಸಾಂಕ್ರಾಮಿಕವನ್ನು ನಿಗ್ರಹಿಸಲು ಘೋಷಿಸಲಾದ ಲಾಕ್‌ಡೌನ್ ಕಾರಣದಿಂದಾಗಿ ಕೈಗಾರಿಕೆ ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಎಲ್ಲಾ ಸಾಧ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
Posted On:
08 MAY 2020 8:08PM by PIB Bengaluru
ಕೋವಿಡ್ -19 ಸಾಂಕ್ರಾಮಿಕವನ್ನು ನಿಗ್ರಹಿಸಲು ಘೋಷಿಸಲಾದ ಲಾಕ್‌ಡೌನ್ ಕಾರಣದಿಂದಾಗಿ ಕೈಗಾರಿಕೆ ಮತ್ತು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಎಲ್ಲಾ ಸಾಧ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ
ವಿವಿಧ ಕಾರ್ಮಿಕ ಸಂಘಗಳೊಂದಿಗಿನ ಸಭೆಯ ನಂತರ ಕೇಂದ್ರ ಸಚಿವ ಶ್ರೀ ಗಂಗವಾರ್ ಅವರು ಉದ್ಯೋಗದಾತರ ಸಂಘಟನೆ/ ಸಂಸ್ಥೆಗಳೊಂದಿಗೆ ವೆಬ್ನಾರ್ ಸಭೆ ನಡೆಸಿದರು
ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾಗುವ ಸಮಕಾಲೀನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಮತ್ತು ಕಾರ್ಮಿಕರ ಮೇಲೆ ಹಾಗೂ ದೇಶದ ಆರ್ಥಿಕತೆಯ ಮೇಲೆ ಆಗುವ ಪರಿಣಾಮವನ್ನು ಕಡಿಮೆ ಮಾಡಲು ಕಾರ್ಯತಂತ್ರಗಳು ಮತ್ತು ನೀತಿ ಉಪಕ್ರಮಗಳನ್ನು ರೂಪಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕ್ಷೇತ್ರದ ಎಲ್ಲಾ ಪಾಲುದಾರರೊಂದಿಗೆ ಮಾತುಕತೆ ನಡೆಸಿದೆ. ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಸಂದರ್ಭದಲ್ಲಿ (ಮೇ 1, 2020 ರಂದು), ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಉದ್ಯೋಗದಾತರ ಸಂಘಗಳ ಪ್ರತಿನಿಧಿಗಳೊಂದಿಗೆ ಸಚಿವಾಲಯವು ವೆಬ್‌ನಾರ್‌ಗಳನ್ನು ನಡೆಸಿದೆ. ಮತ್ತೊಂದು ಪ್ರತ್ಯೇಕವಾದ ವೆಬ್ನಾರ್ ಅನ್ನು (ಮೇ 6, 2020 ರಂದು) ಸಿ.ಟಿ.ಯು.ಗಳ ಪ್ರತಿನಿಧಿಗಳೊಂದಿಗೆ ನಡೆಸಲಾಯಿತು. ಈ ಸಭೆಗಳ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ (ಸ್ವ/ನಿ) ಸಚಿವ ಶ್ರೀ ಸಂತೋಷ್ ಕುಮಾರ್ ಗಂಗ್ವಾರ್ ಅವರು ನವದೆಹಲಿಯ ಅವರ ಕಚೇರಿಯಲ್ಲಿ ಉದ್ಯೋಗದಾತರ ಸಂಘಟನೆ/ ಸಂಸ್ಥೆಗಳೊಂದಿಗೆ ವೆಬ್‌ನಾರ್ ಅನ್ನು ನಡೆಸಿದರು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಹಿರಿಯ ಅಧಿಕಾರಿಗಳು, ಉದ್ಯೋಗದಾತ ಸಂಘಟನೆ/ಸಂಸ್ಥೆಗಳ ಪ್ರತಿನಿಧಿಗಳು ವೆಬ್‌ನಾರ್‌ನಲ್ಲಿ ಭಾಗವಹಿಸಿದರು.
ವೆಬ್ನಾರ್ ನಲ್ಲಿ ಚರ್ಚಿಸಲಾದ ಪ್ರಮುಖ ವಿಷಯಗಳೆಂದರೆ - (i) ಕೋವಿಡ್-19 ರ ದೃಷ್ಟಿಯಿಂದ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ಹಿತಾಸಕ್ತಿ ಸಂರಕ್ಷಣೆ, (ii) ಉದ್ಯೋಗವನ್ನು ಸೃಷ್ಠಿಸುವ ಕ್ರಮಗಳು, (iii) ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ತೆಗೆದುಕೊಳ್ಳಬೇಕಾದ ಸೂಕ್ತ ಕ್ರಮಗಳು ಮತ್ತು (iv) ಕಾರ್ಮಿಕ ಕಾನೂನುಗಳ ಅಡಿಯಲ್ಲಿ ತಮ್ಮ ಹೊಣೆಗಾರಿಕೆಗಳನ್ನು ಪೂರೈಸಲು ಎಮ್.ಎಸ್.ಎಮ್.ಇ.ಗಳ ಪರಿಸ್ಥಿತಿಯನ್ನು ಸುಧಾರಿಸಲು ಬೇಕಾದ ಅಗತ್ಯ ಕ್ರಮಗಳು .
ಇ.ಎಸ್.ಐ.ಸಿ ಮತ್ತು ಇ.ಪಿ.ಎಫ್ ನಿಬಂಧನೆಗಳಲ್ಲಿ ರಿಯಾಯಿತಿ, ದೇಶಾದ್ಯಂತ ನಿಯಂತ್ರಣ ಕೇಂದ್ರಗಳು / ಸಹಾಯವಾಣಿಗಳನ್ನು ಸ್ಥಾಪನೆ ಇತ್ಯಾದಿ - ಕೋವಿಡ್ -19 ರ ಅವಧಿಯಲ್ಲಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಕೈಗೊಂಡ ವಿವಿಧ ಕ್ರಮಗಳ ಬಗ್ಗೆ ಸಚಿವರು ಸಭೆಯಲ್ಲಿ ಮಾಹಿತಿ ನೀಡಿದರು. ತಮ್ಮ ಸಚಿವಾಲಯವು ಉದ್ಯಮದ ಅವಶ್ಯಕತೆಗಳ ಬಗ್ಗೆ ಕಾಳಜಿ ಹೊಂದಿದೆ ಮತ್ತು ಉದ್ಯಮದ ಪುನರುಜ್ಜೀವನ ಮತ್ತು ಆರ್ಥಿಕತೆಯನ್ನು ಪುನಃ ತೆರೆಯಲು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಪ್ರಯತ್ನಿಸುತ್ತದೆ. ಕೈಗಾರಿಕೆ, ವಿಶೇಷವಾಗಿ ಎಮ್.ಎಸ್.ಎಮ್.ಇ. ವಲಯವು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಇತರ ಸಂಬಂಧಿತ ಸಚಿವಾಲಯಗಳನ್ನು ಸಂಪರ್ಕಿಸುತ್ತಿದೆ ಎಂದು ಸಚಿವರು ತಿಳಿಸಿದರು. ಕ್ಷೇತ್ರದ ಸಂಬಂಧಪಟ್ಟ ಎಲ್ಲಾ ಮಧ್ಯಸ್ಥಗಾರರ ಹಿತಾಸಕ್ತಿಗಳನ್ನು ಕಾಪಾಡಲು ಹಾಗೂ ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸಲು ತೆಗೆದುಕೊಳ್ಳಬಹುದಾದ ಪರಿಣಾಮಕಾರಿ ಕ್ರಮಗಳನ್ನು ಸೂಚಿಸುವಂತೆ ಸಚಿವರು ಉದ್ಯೋಗದಾತ ಸಂಘಟನೆಗಳ/ಸಂಸ್ಥೆಗಳ ಪ್ರತಿನಿಧಿಗಳಿಗೆ ವಿನಂತಿಸಿದರು.
ಉದ್ಯೋಗದಾತ ಸಂಘಟನೆ/ಸಂಸ್ಥೆಗಳ ಪ್ರತಿನಿಧಿಗಳು ಈ ಕೆಳಗಿನ ಸಲಹೆಗಳನ್ನು ನೀಡಿದ್ದಾರೆ:
(i) ಲಾಕ್‌ಡೌನ್ ಅವಧಿಯನ್ನು “ಲೇ-ಆಫ್” ಎಂದು ಪರಿಗಣಿಸಲು ಕೈಗಾರಿಕಾ ವಿವಾದ ಕಾಯ್ದೆಯ ನಿಬಂಧನೆಗಳ ರಿಯಾಯಿತಿ;
(ii) ಉದ್ಯಮ ಮತ್ತು ದ್ರವ್ಯತೆ ಬಿಕ್ಕಟ್ಟು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ಕಾರ್ಮಿಕರಿಗೆ ಪಾವತಿಸುವ ವೇತನವನ್ನು ಸಿಎಸ್ಆರ್ ನಿಧಿಯ ಅಡಿಯಲ್ಲಿ ಖರ್ಚಿನ ವ್ಯಾಪ್ತಿಗೆ ಒಳಪಡಿಸಬಹುದು;
(iii) ಸರಕು ಮತ್ತು ಸೇವೆಗಳನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲು ಉದ್ಯಮವನ್ನು ಪುನರಾರಂಭಿಸಿದ ನಂತರ ಈಗಿನ ಕನಿಷ್ಠ 33% ಉದ್ಯೋಗಿಗಳ ಗರಿಷ್ಠ ಮಿತಿಯನ್ನು 50% ರಷ್ಟಕ್ಕೆ ಹೆಚ್ಚಿಸುವುದು;
(iv) ಸಂಸ್ಥೆಯ 90% ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು ಮಾಸಿಕ ವೇತನವನ್ನು ರೂ. 15,000.ಗಿಂತಲೂ ಕಡಿಮೆ ಸಂಬಳವನ್ನು ಪಡೆಯುತ್ತಿರುವ ಉದ್ಯಮಗಳನ್ನು ಮಾತ್ರ ಪಿಎಂಜಿಕೆವೈ ಯೋಜನೆಯಡಿ ಒಳಗೊಳ್ಳುತ್ತದೆ ಎಂಬ ಷರತ್ತು ಮನ್ನಾ ಮಾಡಬೇಕು, ಆ ಮೂಲಕ ಹೆಚ್ಚಿನ ಕಾರ್ಮಿಕರನ್ನು ಯೋಜನೆಯಡಿ ಸೇರಿಸಬೇಕು
(v) ಪ್ರಸ್ತುತ ಬಿಕ್ಕಟ್ಟಿನಿಂದ ಹೊರಬರಲು ಉದ್ಯಮಕ್ಕೆ ಸಹಾಯ ಮಾಡಲು ಕನಿಷ್ಠ ವೇತನ, ಬೋನಸ್ ಮತ್ತು ಶಾಸನಬದ್ಧ ಪಾವತಿಗಳ ಬಾಕಿ ಮುಂತಾದ ನಿಬಂಧನೆಗಳನ್ನು ಹೊರತುಪಡಿಸಿ ಮುಂದಿನ 2-3 ವರ್ಷಗಳವರೆಗೆ ಕಾರ್ಮಿಕ ಕಾನೂನುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದು;
(vi) ಕಾರ್ಮಿಕರ ಕೆಲಸದ ಸಮಯವನ್ನು ದಿನಕ್ಕೆ 12 ಗಂಟೆಗಳವರೆಗೆ ಹೆಚ್ಚಿಸುವುದು.
(vii) ಉದ್ಯಮಗಳಿಗೆ ಸೂಕ್ತವಾದ ಪ್ಯಾಕೇಜ್ ಒದಗಿಸುವುದರಿಂದ ವ್ಯಾಪಾರವು ಸುಸ್ಥಿರವಾಗಿರುತ್ತದೆ ಮತ್ತು ಉದ್ಯೋಗಾವಕಾಶಗಳ ನಷ್ಟವಾಗುವುದಿಲ್ಲ.
(viii) ಉದ್ಯಮಕ್ಕೆ ವಿದ್ಯುತ್ ಸರಬರಾಜನ್ನು ಸಬ್ಸಿಡಿ ದರದಲ್ಲಿ ಒದಗಿಸಬಹುದು.
(ix) ವಲಸೆ ಕಾರ್ಮಿಕರ ಸ್ಥಿತಿ ಗಂಭೀರ ಕಾಳಜಿಯ ವಿಷಯವಾಗಿದೆ. ಕೋವಿಡ್ -19 ನಿಂದ ಮೂಡಿದ ಅತಂತ್ರತೆ ಮತ್ತು ಭಯವನ್ನು ನಿವಾರಿಸಲು ಸಮಾಲೋಚನೆ ನೀಡುವುದು, ಹಾಗೂ ಅವರ ಸಾರಿಗೆ ವ್ಯವಸ್ಥೆಗೆ ಹಣಕಾಸಿನ ನೆರವು ನೀಡುವುದು, ಮತ್ತು ಸುಮಾರು ಆರು ತಿಂಗಳವರೆಗೆ ಉಚಿತ ದಿನಸಿ ಸಾಮಗ್ರಿಗಳನ್ನು ಅವರಿಗೆ ಒದಗಿಸುವುದು, ವಲಸೆ ಕಾರ್ಮಿಕರನ್ನು ಕೆಲಸಕ್ಕೆ ಮರಳಿ ಬರುವಂತೆ ಮಾಡಲು ಇಂತಹ ವಿವಿಧ ಕಾರ್ಯಕ್ರಮವನ್ನು ರೂಪಿಸಬೇಕು.
(x) ವಲಸೆ ಕಾರ್ಮಿಕರ ರಾಷ್ಟ್ರೀಯ ಮಾಹಿತಿಕೋಶ ( ಡೇಟಾಬೇಸ್ ) ರಚಿಸಬೇಕು ಮತ್ತು, ಅಸಂಘಟಿತ ವಲಯದ ಕಾರ್ಮಿಕರಿಗೆ ಮತ್ತು ದೈನಂದಿನ ಕೂಲಿ ಮಾಡುವವರಿಗೆ ಅಗತ್ಯ ಸಹಾಯ ಮಾಡಲು ರಾಷ್ಟ್ರೀಯ ಸಾಂಕ್ರಾಮಿಕ ನಿಧಿಯನ್ನು ಕೂಡಾ ರಚಿಸಬೇಕು
(xi) ನೌಕರರು ಮತ್ತು ಉದ್ಯೋಗದಾತ ಇಬ್ಬರಿಗೂ ಸಾಮಾಜಿಕ ಭದ್ರತೆ ವೆಚ್ಚವನ್ನು ಕಡಿಮೆ ಮಾಡಬೇಕು
(xii) ಕಾರ್ಮಿಕರು ಮತ್ತು ಸರಕುಗಳ ಸುಲಭ ಚಲನೆ ಹಾಗೂ ಸಾಗಾಟಕ್ಕೆ ಅನುಕೂಲವಾಗುವಂತೆ ಕೆಂಪು, ಕಿತ್ತಳೆ ಮತ್ತು ಹಸಿರು ಮುಂತಾದ ವಿಭಿನ್ನ ವಲಯಗಳಿಗೆ ಬದಲಾಗಿ, ರೋಗ ಧಾರಕ ವಲಯ ಮತ್ತು ರೋಗ ಧಾರಕವಲ್ಲದ ವಲಯಗಳು ಎಂಬ ರೀತಿಯಲ್ಲಿ - ಕೇವಲ ಎರಡು ವಲಯಗಳು ಮಾತ್ರ ಇರಬೇಕು, ಹಾಗೂ ತಡೆರಹಿತ ವಲಯಗಳಲ್ಲಿ ಎಲ್ಲಾ ಚಟುವಟಿಕೆಗಳನ್ನು ಮಾಡಲು ಕೂಡಲೇ ಅನುಮತಿ ನೀಡಬೇಕು
ಉದ್ಯೋಗದಾತ ಸಂಘಟನೆ/ ಸಂಸ್ಥೆಗಳ ಪ್ರತಿನಿಧಿಗಳು ನೀಡಿದ ಸಲಹೆಗಳನ್ನು ಸ್ವಾಗತಿಸಿದ ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಅವರು ಚರ್ಚೆಯನ್ನು ಮುಕ್ತಾಯಗೊಳಿಸುತ್ತಾ ಚರ್ಚೆಯನ್ನು ಮುಕ್ತಾಯಗೊಳಿಸುತ್ತಾ "ಆರ್ಥಿಕ ಚಟುವಟಿಕೆಗಳು ಮತ್ತು ಉದ್ಯೋಗಾವಕಾಶಗಳನ್ನು ಸಂಪೂರ್ಣವಾಗಿ ಪುನರುಜ್ಜೀವನಗೊಳಿಸಲು, ನಾವು ಮೊದಲನೆಯದಾಗಿ ಉದ್ಯಮವನ್ನು ಪುನರುಜ್ಜೀವನಗೊಳಿಸುವ ಮತ್ತು ಆರ್ಥಿಕತೆಯ ತೆರೆಯುವಿಕೆಯತ್ತ ಕೂಡಲೇ ಗಮನ ಹರಿಸಬೇಕು. ಉದ್ಯಮವು ಎದುರಿಸುತ್ತಿರುವ ಯಾವುದೇ ಸಮಸ್ಯೆಗಳ ಸಂದರ್ಭದಲ್ಲಿ ಎಲ್ಲಾ ಸಹಾಯವನ್ನು ನೀಡಲು ಮತ್ತು ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಕೇಂದ್ರ ಉದ್ಯಮ ಮತ್ತು ಉದ್ಯೋಗ ಸಚಿವಾಲಯವು ಸದಾ ಬದ್ಧವಾಗಿದೆ” ಎಂದು ಎಲ್ಲರಿಗೂ ಭರವಸೆ ನೀಡಿದರು.
***
(Release ID: 1622329)
Visitor Counter : 538