ನಾಗರೀಕ ವಿಮಾನಯಾನ ಸಚಿವಾಲಯ

ದೇಶಾದ್ಯಂತ ಅತ್ಯಾವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಸಕಾಲಿಕವಾಗಿ ತಲುಪಿಸಲು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 465 ವಿಮಾನಗಳ ಕಾರ್ಯನಿರ್ವಹಣೆ

Posted On: 06 MAY 2020 4:32PM by PIB Bengaluru

ದೇಶಾದ್ಯಂತ ಅತ್ಯಾವಶ್ಯಕ ವೈದ್ಯಕೀಯ ಸಾಮಗ್ರಿಗಳನ್ನು ಸಕಾಲಿಕವಾಗಿ ತಲುಪಿಸಲು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ 465 ವಿಮಾನಗಳ ಕಾರ್ಯನಿರ್ವಹಣೆ

 

465 ವಿಮಾನಗಳನ್ನು ಲೈಫ್‌ಲೈನ್ ಉಡಾನ್ ಯೋಜನೆಯಡಿಯಲ್ಲಿ ಏರ್ ಇಂಡಿಯಾ, ಅಲೈಯನ್ಸ್ ಏರ್, ಐಎಎಫ್ ಮತ್ತು ಖಾಸಗಿ ವಿಮಾನ ಸರಕು ವಾಹಕಗಳು ನಿರ್ವಹಿಸುತ್ತಿವೆ. ಈ ಪೈಕಿ 278 ವಿಮಾನಗಳನ್ನು ಏರ್ ಇಂಡಿಯಾ ಮತ್ತು ಅಲೈಯನ್ಸ್ ಏರ್ ನಿರ್ವಹಿಸಿವೆ. ಇಲ್ಲಿಯವರೆಗೆ ಸಾಗಿಸುವ ಸರಕು ಸುಮಾರು 835.94 ಟನ್ ಆಗಿದೆ. ಇಲ್ಲಿಯವರೆಗೆ ಲೈಫ್‌ಲೈನ್ ಉಡಾನ್ ವಿಮಾನಗಳು ಆವರಿಸಿರುವ ವೈಮಾನಿಕ ದೂರ 4,51,038 ಕಿ.ಮೀ. ಕೊವಿಡ್-19 ವಿರುದ್ಧದ ಭಾರತದ ಹೋರಾಟವನ್ನು ಬೆಂಬಲಿಸಲು ಅಗತ್ಯ ವೈದ್ಯಕೀಯ ಸರಕುಗಳನ್ನು ದೇಶದ ದೂರದ ಭಾಗಗಳಿಗೆ ಸಾಗಿಸಲು ‘ಲೈಫ್‌ಲೈನ್ ಉಡಾನ್’ ವಿಮಾನಗಳನ್ನು ಕೇಂದ್ರ ನಾಗರಿಕ ವಾಯುಯಾನ ಸಚಿವಾಲಯ ನಿರ್ವಹಿಸುತ್ತಿದೆ.
ಪವನ್ ಹ್ಯಾನ್ಸ್ ಲಿಮಿಟೆಡ್ ಸೇರಿದಂತೆ ಹೆಲಿಕಾಪ್ಟರ್ ಸೇವೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ದ್ವೀಪಗಳು ಮತ್ತು ಈಶಾನ್ಯ ರಾಜ್ಯಗಳ ಪ್ರದೇಶದಲ್ಲಿ ನಿರ್ಣಾಯಕ ವೈದ್ಯಕೀಯ ಸರಕು ಮತ್ತು ರೋಗಿಗಳನ್ನು ಸಾಗಿಸುತ್ತಿವೆ. ಪವನ್ ಹ್ಯಾನ್ಸ್ 5 ಮೇ 2020 ರವರೆಗೆ 7,729 ಕಿ.ಮೀ ದೂರವನ್ನು ಕ್ರಮಿಸಿ 2.27 ಟನ್ ಸರಕುಗಳನ್ನು ಸಾಗಿಸಿದೆ. ಈಶಾನ್ಯ ರಾಜ್ಯಗಳ ಪ್ರದೇಶ, ದ್ವೀಪ ಪ್ರದೇಶಗಳು ಮತ್ತು ಬೆಟ್ಟ ರಾಜ್ಯಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ. ಏರ್ ಇಂಡಿಯಾ ಮತ್ತು ಐ.ಎ.ಎಫ್ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಕ್, ಈಶಾನ್ಯ ಮತ್ತು ಇತರ ದ್ವೀಪ ಪ್ರದೇಶಗಳಿಗೆ ಸಹಕರಿಸಿದವು.

  • ಕಾರ್ಗೋ ಆಪರೇಟರ್‌ಗಳಾದ ಸ್ಪೈಸ್‌ಜೆಟ್, ಬ್ಲೂ ಡಾರ್ಟ್, ಇಂಡಿಗೊ ಮತ್ತು ವಿಸ್ಟಾರ ವಾಣಿಜ್ಯ ವಿಮಾನಯಾನದಲ್ಲಿ ಸರಕು ಹಾರಾಟ ನಡೆಸುತ್ತಿವೆ. ಸ್ಪೈಸ್ ಜೆಟ್ 13,83,854 ಕಿ.ಮೀ ದೂರವನ್ನು ಒಳಗೊಂಡಂತೆ 819 ಸರಕು ಹಾರಾಟಗಳನ್ನು ನಡೆಸಿತು ಮತ್ತು 5,946 ಟನ್ ಸರಕುಗಳನ್ನು ಸಾಗಿಸಿತು. ಈ ಪೈಕಿ 294 ಅಂತಾರಾಷ್ಟ್ರೀಯ ಸರಕು ವಿಮಾನಗಳು. ಬ್ಲೂ ಡಾರ್ಟ್ 278 ಸರಕು ವಿಮಾನಗಳ ಮೂಲಕ 3,09,272 ಕಿ.ಮೀ ದೂರ ಕ್ರಮಿಸಿ 4,683 ಟನ್ ಸರಕುಗಳನ್ನು ಸಾಗಿಸಿತು. ಹಾಗೂ ಈ ಪೈಕಿ 14 ಅಂತರರಾಷ್ಟ್ರೀಯ ಸರಕು ವಿಮಾನಗಳು. ಇಂಡಿಗೊ 95 ಸರಕು ವಿಮಾನಗಳನ್ನು ನಿರ್ವಹಿಸಿದೆ, 1,59,158 ಕಿ.ಮೀ ದೂರ ಕ್ರಮಿಸಿದೆ ಮತ್ತು ಸುಮಾರು 470 ಟನ್ ಸರಕುಗಳನ್ನು ಸಾಗಿಸಿದೆ. ಇದರಲ್ಲಿ 38 ಅಂತರರಾಷ್ಟ್ರೀಯ ವಿಮಾನಗಳ ಸೇವೆಗಳೂ ಒಳಗೊಂಡಿದೆ. ಸರ್ಕಾರಕ್ಕೆ ಉಚಿತವಾಗಿ ಸಾಗಿಸುವ ವೈದ್ಯಕೀಯ ಸರಬರಾಜುಗಳೂ ಇದರಲ್ಲಿ ಸೇರಿವೆ. ವಿಸ್ಟಾರ 23 ಸರಕು ವಿಮಾನಗಳ ಮೂಲಕ 32,321 ಕಿ.ಮೀ ದೂರ ಕ್ರಮಿಸಿ ಮತ್ತು ಸುಮಾರು 150 ಟನ್ ಸರಕುಗಳನ್ನು ಸಾಗಿಸಿದೆ.

ಔಷಧಗಳು, ವೈದ್ಯಕೀಯ ಉಪಕರಣಗಳು ಮತ್ತು ಕೋವಿಡ್ -19 ಪರಿಹಾರ ಸಾಮಗ್ರಿಗಳ ಸಾಗಣೆಗೆ ಪೂರ್ವ ಏಷ್ಯಾದೊಂದಿಗೆ ಸರಕು ವಾಯು ಸಂಪರ್ಕವನ್ನು ಸ್ಥಾಪಿಸಲಾಯಿತು. ಏರ್ ಇಂಡಿಯಾ ಸಾಗಿಸಿ ತಂದ ವೈದ್ಯಕೀಯ ಸರಕುಗಳ ಪ್ರಮಾಣ 972 ಟನ್ ಆಗಿದೆ. ಮೇಲಿನವುಗಳ ಜೊತೆಗೆ, ಏಪ್ರಿಲ್ 14 ರಿಂದ ಮೇ 5, 2020 ರ ವರೆಗೆ ಬ್ಲೂ ಡಾರ್ಟ್ ಗುವಾಂಗ್‌ವು ಮತ್ತು ಶಾಂಘೈನಿಂದ ಸುಮಾರು 114 ಟನ್ ಮತ್ತು ಹಾಂಗ್ ಕಾಂಗ್‌ನಿಂದ 24 ಟನ್ ಗಳಷ್ಟು ವೈದ್ಯಕೀಯ ಸರಬರಾಜನ್ನು ಸಾಗಾಟ ಮಾಡಿವೆ. 4 ಮೇ 2020 ರವರೆಗೆ ಸ್ಪೈಸ್‌ಜೆಟ್ ಸರಕು ವಿಮಾಗಳು ಶಾಂಘೈ ಮತ್ತು ಗುವಾಂಗ್‌ವುದಿಂದ 204 ಟನ್ ವೈದ್ಯಕೀಯ ಸರಬರಾಜುಗಳನ್ನು ಮತ್ತು ಹಾಂಗ್ ಕಾಂಗ್ ಮತ್ತು ಸಿಂಗಾಪುರದಿಂದ 16 ಟನ್ ವೈದ್ಯಕೀಯ ಸರಬರಾಜುಗಳನ್ನು ಸಾಗಾಟ ಮಾಡಿದೆ.

***



(Release ID: 1621640) Visitor Counter : 176