ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

Posted On: 05 MAY 2020 4:08PM by PIB Bengaluru

ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ವೆಬಿನಾರ್ ಮೂಲಕ ಸಂವಾದ ನಡೆಸಿದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು

2020-21ನೇ ಶೈಕ್ಷಣಿಕ ವರ್ಷಕ್ಕೆ ಐಐಟಿ, ಐಐಐಟಿ ಮತ್ತು ಎನ್ಐಟಿಗಳಿಗೆ ಯಾವುದೇ ಶುಲ್ಕ ಹೆಚ್ಚಳವಿಲ್ಲ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

2020ರ ಜುಲೈ 26ರಂದು ನೀಟ್ ಪರೀಕ್ಷೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

2020ರ ಜುಲೈ 18, 20, 21, 22 ಮತ್ತು 23ರಂದು ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ಯುಜಿಸಿ ನೆಟ್ – 2020 ಮತ್ತು ಜೆಇಇ(ಅಡ್ವಾನ್ಸ್ಡ್) ಪರೀಕ್ಷೆಗಳ ದಿನಾಂಕ ಸದ್ಯದಲ್ಲೇ ಘೋಷಣೆ - ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್

ಎರಡು ದಿನಗಳಲ್ಲಿ ಸಿಬಿಎಸ್ಇ 12ನೇ ತರಗತಿಯ ಪರೀಕ್ಷಾ ದಿನಾಂಕ ಪ್ರಕಟ: ಎಚ್ಆರ್ ಡಿ ಸಚಿವರು

 

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ಇಂದು ವೆಬಿನಾರ್ ಮೂಲಕ ದೇಶಾದ್ಯಂತ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಸುಮಾರು ಒಂದು ಗಂಟೆ ಕಾಲ ಸಂವಾದ ನಡೆಸಿದ ಸಚಿವರು, ಶಾಲಾ ಪ್ರವೇಶ, ಪ್ರವೇಶ ಪರೀಕ್ಷೆಗಳು, ಶೈಕ್ಷಣಿಕ ವೇಳಾಪಟ್ಟಿ, ಆನ್ ಲೈನ್ ಶಿಕ್ಷಣ, ಶುಲ್ಕ, ವಿದ್ಯಾರ್ಥಿಗಳ, ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ಹಾಗೂ ಸಹಪಾಠಿಗಳ ಮಾನಸಿಕ ಆರೋಗ್ಯ ಸೇರಿದಂತೆ ಹಲವು ವಿಷಯಗಳ ಕುರಿತು ವಿದ್ಯಾರ್ಥಿಗಳು ಎತ್ತಿದ ಪ್ರಶ್ನೆಗಳು ಮತ್ತು ಆತಂಕಗಳಿಗೆ ಸ್ಪಂದಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳು ಮತ್ತು ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ತೀವ್ರ ಕಾಳಜಿ ಹೊಂದಿದ್ದಾರೆ ಎಂದರು. ಆ ಹಿನ್ನೆಲೆಯಲ್ಲಿ ಸಚಿವಾಲಯ ವಿದ್ಯಾರ್ಥಿಗಳ ಆತಂಕಗಳನ್ನು ದೂರ ಮಾಡಲು ತಕ್ಷಣ ಮತ್ತು ತ್ವರಿತ ಕ್ರಮಗಳನ್ನು ಸಚಿವಾಲಯ ಕೈಗೊಳ್ಳುತ್ತಿದೆ ಎಂದರು. ಎಚ್ಆರ್ ಡಿ ಸಚಿವಾಲಯದ ಸಹಾಯಕ ಸಚಿವ ಶ್ರೀ ಸಂಜಯ್ ಧೋತ್ರೆ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮತ್ತು ಅವರ ಸುರಕ್ಷತೆ ಖಾತ್ರಿಗೆ ಕಾರ್ಯೋನ್ಮುಖವಾಗಿರುವುದಕ್ಕೆ ಶ್ರೀ ಪೋಖ್ರಿಯಾಲ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂವಾದದ ವೇಳೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು, ಬಾಕಿ ಇರುವ ಪ್ರವೇಶ ಪರೀಕ್ಷೆಗಳ ದಿನಾಂಕಗಳನ್ನು ಪ್ರಕಟಿಸಿದರು. ಅವರು 2020ರ ಜುಲೈ 26ರಂದು ನೀಟ್ ಪರೀಕ್ಷೆ ನಡೆಯಲಿದೆ ಎಂದರು. ಅಲ್ಲದೆ 2020ರ ಜುಲೈ 18, 20, 21, 22 ಮತ್ತು 23ರಂದು ಜೆಇಇ ಮುಖ್ಯ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು. ಜೆಇಇ(ಅಡ್ವಾನ್ಸ್ಡ್) ಪರೀಕ್ಷೆ ಆಗಸ್ಟ್ ತಿಂಗಳಲ್ಲಿ ನಡೆಯಲಿದೆ ಎಂದರು. 2020ರ ಯುಜಿಸಿ ನೆಟ್ ಮತ್ತು 12ನೇ ತರಗತಿ ಸಿಬಿಎಸ್ಇ ಪರೀಕ್ಷೆಗಳ ವೇಳಾಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಮಾನಸಿಕ ಆರೋಗ್ಯ ವಿಷಯ ಕುರಿತಂತೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಶ್ರೀ ರಮೇಶ್ ಪೋಖ್ರಿಯಾಲ್ ಅವರು, ವಿದ್ಯಾರ್ಥಿಗಳು ಶಾಂತ ರೀತಿಯಲ್ಲಿ ಇದ್ದುಕೊಂಡು ತಮ್ಮ ಅಧ್ಯಯನದ ಬಗ್ಗೆ ಗಮನವನ್ನುಕೇಂದ್ರೀಕರಿಸಬೇಕು ಎಂದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಳ್ಳಬೇಕು ಮತ್ತು ಅಧ್ಯಯನದ ನಡುವೆ ಸಣ್ಣ ಪ್ರಮಾಣದ ವಿರಾಮವನ್ನು ಪಡೆದುಕೊಳ್ಳಬೇಕು. ಪ್ರವೇಶ ಪರೀಕ್ಷೆಗಳಲ್ಲಿ ಜೇಷ್ಠತೆಯನ್ನು ಕಾಯ್ದುಕೊಳ್ಳಬೇಕು. ಅದಕ್ಕಾಗಿ ಪಠ್ಯಕ್ರಮ ಮತ್ತು ಪರೀಕ್ಷಾ ವಿಧಾನದ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾದುದು ಎಂದು ಸಚಿವರು ಹೇಳಿದರು. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಬಾರದು ಮತ್ತು ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಮತ್ತು ಸುರಕ್ಷಿತವಾಗಿರಬೇಕು ಎಂದು ಮನವಿ ಮಾಡಿದರು.

ಶ್ರೀ ಪೋಖ್ರಿಯಾಲ್ ಅವರು, ಪ್ರವೇಶ ಪರೀಕ್ಷೆಗಳಿಗೆ ಸಿದ್ಧವಾಗುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ವೆಬ್ ಸೈಟ್ https://nta.ac.in/LecturesContent. ಲಿಂಕ್ ಮೂಲಕ ಭೌತಶಾಸ್ತ್ರ, ರಾಸಾಯನಶಾಸ್ತ್ರ, ಗಣಿತಶಾಸ್ತ್ರ ಮತ್ತು ಜೀವಶಾಸ್ತ್ರಗಳ ಕುರಿತ ಉಪನ್ಯಾಸಗಳನ್ನು ಪಡೆಯಬಹುದಾಗಿದೆ ಎಂದು ಹೇಳಿದರು. ಅವರು ಪ್ರವೇಶ ಪರೀಕ್ಷೆಗಳಿಗೆ ಸಿದ್ಧವಾಗಲು ಎಂಎಚ್ಆರ್ ಡಿಯ ನಾನಾ ವೇದಿಕೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು. ಅವುಗಳಲ್ಲಿ ಸ್ವಯಂಪ್ರಭಾ ಡಿಟಿಎಚ್ ಚಾನಲ್, ಐಐಟಿ ಪಾಲ್ ಆಫ್ ಸ್ವಂಪ್ರಭಾ, ದೀಕ್ಷಾ, ಇ-ಪಾಠಶಾಲಾ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯ, ಸ್ವಯಂ, ಇ-ಪಿಜಿ ಪಾಠಶಾಲಾ, ಶೋಧಗಂಗಾ, ಇ-ಶೋಧಸಿಂಧು, ಇ-ಯಂತ್ರ, ಸ್ಪೋಕನ್ ಟುಟೋರಿಯಲ್ ಮತ್ತು ವರ್ಚ್ಯುಯಲ್ ಲ್ಯಾಬ್ ಗಳು ಸೇರಿವೆ. ಸಚಿವರು ಲಾಕ್ ಡೌನ್ ನಂತರ ಉನ್ನತ ಶಿಕ್ಷಣದ ಆನ್ ಲೈನ್ ಪೋರ್ಟಲ್ ಗಳಾದ ಸ್ವಯಂ, ಸ್ವಯಂಪ್ರಭಾ, ವರ್ಚ್ಯುಯಲ್ ಲ್ಯಾಬ್ಸ್, ಎಫ್ಒಎಸ್ಎಸ್ಇಇ, ಇ-ಯಂತ್ರ ಮತ್ತು ಸ್ಪೋಕನ್ ಟ್ಯುಟೋರಿಯಲ್ ಗಳಿಗೆ ಲಾಗ್ ಇನ್ ಆಗುತ್ತಿರುವವರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನೆಟ್ ವರ್ಕ್ ಸಮಸ್ಯೆ ಎದುರಿಸುತ್ತಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸಚಿವರು ಎಂಎಚ್ಆರ್ ಡಿ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಡಿಟಿಎಚ್ ವೇದಿಕೆ ಮೂಲಕ ಸ್ವಯಂಪ್ರಭಾ ಚಾನಲ್ ಗಳನ್ನು ಟಾಟಾ ಸ್ಕೈ, ಏರ್ ಟೆಲ್, ಡಿಟಿಎಚ್ ಆಪರೇಟರ್, ಡಿಡಿ-ಡಿಟಿಎಚ್, ಡಿಶ್ ಟಿವಿ ಮತ್ತು ಜಿಯೋ ಟಿಟಿ ಆಪ್ ಮೂಲಕ ಪ್ರಸಾರ ಮಾಡಲಾಗುತ್ತಿದೆ ಎಂದರು. ಸ್ವಯಂಪ್ರಭಾ ಗುಂಪಿನಲ್ಲಿ 32 ಡಿಟಿಎಚ್ ವಾಹಿನಿಗಳು ಲಭ್ಯವಿದ್ದು, ಅವುಗಳ ಮೂಲಕ ಉತ್ತಮ ಗುಣಮಟ್ಟದ ಶೈಕ್ಷಣಿಕ ಪಠ್ಯಕ್ರಮವನ್ನು ಒದಗಿಸಲಾಗುತ್ತಿದ್ದು, ಅವುಗಳಲ್ಲಿ ಕಲೆ, ವಿಜ್ಞಾನ, ವಾಣಿಜ್ಯ, ಸಾಮಾಜ ವಿಜ್ಞಾನ ಮತ್ತು ಮಾನವಶಾಸ್ತ್ರ, ಇಂಜಿನಿಯರಿಂಗ್, ತಂತ್ರಜ್ಞಾನ, ಕಾನೂನು, ವೈದ್ಯಕೀಯ, ಕೃಷಿ ಮತ್ತಿತರ ವಿಷಯಗಳಲ್ಲಿ ಪಠ್ಯವನ್ನು ಒದಗಿಸಲಾಗುತ್ತಿದ್ದು, ಅವನ್ನು ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ನಾಗರಿಕರು ಸೇರಿದಂತೆ ಪ್ರತಿಯೊಬ್ಬ ಆಸಕ್ತರು ಜೀವನವಿಡೀ ಕಲಿಯಬಹುದಾಗಿದೆ. ಡಿಟಿಎಚ್ ಸೇವಾ ಪೂರೈಕೆದಾರರಲ್ಲಿ ಚಾನಲ್ ಸಂಖ್ಯೆ ಈ ಕೆಳಗಿನನಂತಿರುತ್ತದೆ. ಏರ್ ಟೆಲ್ ಟಿವಿ ಚಾನಲ್ # 437, ಚಾನಲ್ # 438 ಮತ್ತು ಚಾನಲ್ #439, ವಿಎಂ ವಿಡಿಯೋಕಾನ್: ಚಾನಲ್ # 475, ಚಾನಲ್ # 476, ಚಾನಲ್ # 477, ಟಾಟಾ ಸ್ಕೈನಲ್ಲಿ: ಚಾನಲ್ # 756 ಇದರ ವಿಂಡೊ ಸ್ವಯಂಪ್ರಭಾ ಡಿಟಿಎಚ್ ಚಾನಲ್ ನಲ್ಲಿ ಪಾಪ್ ಅಪ್ ಆಗುತ್ತದೆ ಮತ್ತು ಡಿಶ್ ಟಿವಿ: ಚಾನಲ್ # 946, ಚಾನಲ್ # 947, ಚಾನಲ್ #949, ಚಾನಲ್ # 950. ಆಕಾಶವಾಣಿ, ದೂರದರ್ಶನದ ಆಯ್ಕೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಮತ್ತು ವಿದ್ಯಾರ್ಥಿಗಳಿಗೆ 2ಜಿ ಸಂಪರ್ಕದಲ್ಲಿ ಪಠ್ಯಕ್ರಮ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

2020-21ನೇ ಶೈಕ್ಷಣಿಕ ವರ್ಷದಲ್ಲಿ ಎನ್ಐಟಿ, ಐಐಟಿ ಮತ್ತು ಐಐಐಟಿಗಳ ಶುಲ್ಕ ಹೆಚ್ಚಳ ಕುರಿತ ಪ್ರಶ್ನೆಗೆ ಉತ್ತರಿಸಿದ ಸಚಿವರು, 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಐಐಟಿ, ಐಐಐಟಿ ಮತ್ತು ಎನ್ಐಟಿಗಳ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿದರು.

ನವೋದಯ ವಿದ್ಯಾಲಯಗಳ ವಿದ್ಯಾರ್ಥಿಗಳು ಅವರ ರಾಜ್ಯಗಳಿಗೆ ಮತ್ತು ಮನೆಗಳಿಗೆ ವಲಸೆ ಹೋಗುತ್ತಿರುವ ಕುರಿತಂತೆ ಸಚಿವರು, ಪ್ರತಿಯೊಂದು ಶಾಲೆಗಳ ವಲಸೆ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆಯಲಾಗಿದೆ ಮತ್ತು ಎಂಎಚ್ಆರ್ ಡಿಯಿಂದ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವುದರಿಂದ ಆ ಪ್ರಕ್ರಿಯೆ ಚುರುಕುಗೊಂಡಿದೆ ಎಂದರು. 173 ಶಾಲೆಗಳ ಪೈಕಿ 62ಕ್ಕೂ ಅಧಿಕ ಶಾಲೆಗಳಲ್ಲಿ ಪ್ರಕ್ರಿಯೆ ಆರಂಭವಾಗಿದೆ ಎಂದರು. ಯಾವ ಶಾಲೆಗಳಲ್ಲಿ ವಲಸೆ ವಿದ್ಯಾರ್ಥಿಗಳಿದ್ದಾರೋ ಅಂತಹ ಶಾಲೆಗಳ ಮೇಲೆ ನಿರಂತರ ನಿಗಾವಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್, ಮಾಸ್ಕ್, ಸಣ್ಣ ಸಾಬೂನು ಮತ್ತು ತಿಂಡಿ ತಿನಿಸುಗಳನ್ನು ಜೆಎನ್ ವಿ ಮೆಸ್ ಗಳ ಮೂಲಕ ನೀಡಲಾಗುತ್ತಿದೆ. ಎಲ್ಲ ಜೆಎನ್ ವಿಗಳಿಂದ ಪ್ರಯಾಣ ಬೆಳೆಸುತ್ತಿರುವ ವಿದ್ಯಾರ್ಥಿಗಳಿಗೆ ಆಹಾರ, ವಸತಿ, ತಿನಿಸು ಮತ್ತು ಆಹಾರ ರಕ್ಷಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಪ್ರಶ್ನೆಗಳಿಗೆ ಉತ್ತರಿಸಿದ ಶ್ರೀ ರಮೇಶ್ ಪೋಖ್ರಿಯಾಲ್ ಅವರು, ಕೋವಿಡ್-19ನಿಂದಾಗಿ ಶೈಕ್ಷಣಿಕ ವರ್ಷದಲ್ಲಿ ಸೃಷ್ಟಿಯಾಗಿರುವ ಅಂತರವನ್ನು ತಗ್ಗಿಸಲು ಎಂಎಚ್ಆರ್ ಡಿ ಯೋಜನೆ ರೂಪಿಸುತ್ತಿದೆ ಎಂದರು. ಎಂಎಚ್ಆರ್ ಡಿ, ವಿದ್ಯಾರ್ಥಿಗಳಲ್ಲಿ ಕಲಿಕೆಯನ್ನು ಮುಂದುವರಿಸುವುದನ್ನು ಉತ್ತೇಜಿಸಲು ಮತ್ತು ಅದಕ್ಕಾಗಿ ಶಾಲಾ ಮತ್ತು ಉನ್ನತ ಶಿಕ್ಷಣ ಎರಡೂ ವಿಭಾಗದಲ್ಲೂ ಡಿಜಿಟಲ್ ವೇದಿಕೆಗಳನ್ನು ಮತ್ತು ಇ-ಕಲಿಕಾ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. ಶ್ರೀ ಪೋಖ್ರಿಯಾಲ್ ಅವರು, ಪ್ರಾಥಮಿಕ, ಪ್ರೌಢ ಮತ್ತು ಸೆಕೆಂಡರಿ ವಿದ್ಯಾರ್ಥಿಗಳಿಗೆ ಪರ್ಯಾಯ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದರು. ಆ ಕ್ಯಾಲೆಂಡರ್ ನಲ್ಲಿ ಶಿಕ್ಷಣವನ್ನು ಆಸಕ್ತಿಕರ ರೀತಿಯಲ್ಲಿ ಮತ್ತು ನಗೆಯೊಂದಿಗೆ ಕಲಿಸಲು ಶಿಕ್ಷಕರಿಗೆ ಸಾಮಾಜಿಕ ಮಾಧ್ಯಮದ ಹಲವು ಉಪಕರಣಗಳನ್ನು ಮತ್ತು ನಾನಾ ತಂತ್ರಜ್ಞಾನಗಳನ್ನು ಬಳಕೆ ಮಾಡಿಕೊಳ್ಳುವ ಅಂಶಗಳು ಮಾರ್ಗಸೂಚಿಗಳಿವೆ. ಅವುಗಳನ್ನು ಕಲಿಕಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಮನೆಯಲ್ಲೇ ಬಳಸಬಹುದಾಗಿದೆ.

ಮಂಡಳಿ ಪರೀಕ್ಷೆಗಳ ಬಗ್ಗೆ ಹಲವು ವಿದ್ಯಾರ್ಥಿಗಳು ವ್ಯಕ್ತಪಡಿಸಿದ ಆತಂಕಗಳಿಗೆ ಸ್ಪಷ್ಟನೆ ನೀಡಿದ ಸಚಿವರು, ಮಂಡಳಿ ಪರೀಕ್ಷೆಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಕ್ಕೆ ಅಗತ್ಯವಿರುವ ಮಹತ್ವದ ಹಾಗೂ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲು ಮುಂದಿನ ಶಿಕ್ಷಣಕ್ಕೆ ಅಗತ್ಯವಿರುವ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದರು. ಸಿಬಿಎಸ್ಇ ಏಪ್ರಿಲ್ 1, 2020ರಂದು ಬಿಡುಗಡೆ ಮಾಡಲಾದ ಪತ್ರಿಕಾ ಹೇಳಿಕೆಯಲ್ಲಿ ಮಂಡಳಿಯ ವೆಬ್ ಸೈಟ್ ನಲ್ಲಿ http://cbse.nic.in/. ಲಭ್ಯವಿರುವ 29 ವಿಷಯಗಳು ಹಾಗೂ ಇನ್ನಿತರ ವಿವರಗಳನ್ನು ನೀಡಲಾಗಿದೆ ಎಂದರು. ಈಶಾನ್ಯ ದೆಹಲಿ ಹೊರತುಪಡಿಸಿದರೆ, ದೇಶಾದ್ಯಂತ ಎಲ್ಲೆಡೆ 10ನೇ ತರಗತಿಯ ಪರೀಕ್ಷೆಗಳು ಪೂರ್ಣಗೊಂಡಿವೆ ಮತ್ತು ಉಳಿದ ಪರೀಕ್ಷೆಗಳನ್ನು ನಡೆಸಲು ಸಂಬಂಧಿಸಿದ ಎಲ್ಲರಿಗೂ 10 ದಿನಗಳ ಕಾಲಾವಕಾಶ ನೀಡಲಾಗುವುದು ಎಂದರು. ಈಶಾನ್ಯ ದೆಹಲಿಯ ವಿದ್ಯಾರ್ಥಿಗಳು ಈಗಾಗಲೇ ಪರೀಕ್ಷೆಗೆ ಹಾಜರಾಗಿದ್ದರೆ ಅವರು ಮತ್ತೆ ಪರೀಕ್ಷೆಗೆ ಹಾಜರಾಗಬೇಕಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದಾಗಿ ಯಾರು ನಿಗದಿತ ಪರೀಕ್ಷೆಗಳಿಗೆ ಹಾಜರಾಗಿಲ್ಲವೋ ಅಂತಹವರಿಗಾಗಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದರು. ವಿದ್ಯಾರ್ಥಿಗಳು ಸಿಬಿಎಸ್ಇ ತನ್ನ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಲಾಗಿರುವ ಪದೇ ಪದೇ ಕೇಳುವ ಪ್ರಶ್ನೆಗಳನ್ನು ನೋಡಿ ತಿಳಿದುಕೊಳ್ಳಬಹುದು.

ಲಾಕ್ ಡೌನ್ ಅವಧಿಯಲ್ಲಿ ಆಗಿರುವ ವಿದ್ಯಾರ್ಥಿಗಳಿಗೆ ಆಗಿರುವ ಶೈಕ್ಷಣಿಕ ನಷ್ಟವನ್ನು ಭರ್ತಿಮಾಡಲು ಸರ್ಕಾರ ಯೋಜನೆಯನ್ನು ರೂಪಿಸುತ್ತಿದೆ ಎಂದು ಶ್ರೀ ಪೋಖ್ರಿಯಾಲ್ ಒತ್ತಿ ಹೇಳಿದರು. ಸಿಬಿಎಸ್ಇ, ಆಗಿರುವ ನಷ್ಟದ ಸಮಯವನ್ನು ಮೌಲ್ಯಮಾಪನ ಮಾಡಲಿದೆ ಮತ್ತು 2021ನೇ ಸಾಲಿನ ಮಂಡಳಿ ಪರೀಕ್ಷೆಗಳಲ್ಲಿ ಪಠ್ಯಕ್ರಮದ ಹೊರೆಯನ್ನು ಸೂಕ್ತ ರೀತಿಯಲ್ಲಿ ಇಳಿಕೆ ಮಾಡಲಿದೆ. ನಾನಾ ಸಂದರ್ಭಗಳಲ್ಲಿ ಪಠ್ಯದ ಹೊರೆಯನ್ನು ಇಳಿಕೆ ಮಾಡಲು ಮಂಡಳಿಯ ಪಠ್ಯಕ್ರಮ ಸಮಿತಿಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಆ ಬಗ್ಗೆ ಸದ್ಯದಲ್ಲೇ ವಿದ್ಯಾರ್ಥಿಗಳಿಗೆ ಅಧಿಸೂಚನೆ ಮೂಲಕ ತಿಳಿಸಲಾಗುವುದು.

ವಿಶ್ವ ವಿದ್ಯಾಲಯಗಳಲ್ಲಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಎಂಎಚ್ಆರ್ ಡಿ, ಯುಜಿಸಿಯ ಜೊತೆ ಸಮಾಲೋಚನೆಗಳನ್ನು ನಡೆಸಿ, ಮಾರ್ಗಸೂಚಿಗಳನ್ನು ಹೊರಡಿಸಿದೆ. ಆ ಮಾರ್ಗಸೂಚಿಗಳು ಯುಜಿಸಿಯ ವೆಬ್ ಸೈಟ್ ನಲ್ಲಿ ಲಭ್ಯ. ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಾಡಲಾಗಿರುವ ಪ್ರಮುಖ ಶಿಫಾರಸ್ಸುಗಳು ಈ ಕೆಳಗಿನಂತಿವೆ:

· ಶೈಕ್ಷಣಿಕ ನಿರೀಕ್ಷೆಗಳ ಪಾವಿತ್ರ್ಯತೆ ಮತ್ತು ಪರೀಕ್ಷಾ ಪ್ರಕ್ರಿಯೆಯ ದಕ್ಷತೆಯನ್ನು ಕಾಯ್ದುಕೊಳ್ಳಲು ವಿಶ್ವವಿದ್ಯಾಲಯಗಳು ಪರ್ಯಾಯ ಮತ್ತು ಸರಳೀಕೃತ ವಿಧಾನ ಮತ್ತು ಪರೀಕ್ಷಾ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಯುಜಿಸಿ ಕಾಲಕಾಲಕ್ಕೆ ಸೂಚಿಸಿರುವಂತೆ ಸಿಬಿಸಿಎಸ್ ಅಗತ್ಯತೆಗಳಿಗೆ ಅನುಗುಣವಾಗಿ ಅಲ್ಪಾವಧಿಯಲ್ಲಿಯೇ ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

· ಇಂಟರ್ ಮೀಡಿಯೇಟ್ ಸೆಮಿಸ್ಟರ್/ವರ್ಷದ ವಿದ್ಯಾರ್ಥಿಗಳಿಗೆ ವಿಶ್ವ ವಿದ್ಯಾಲಯಗಳು ವಿದ್ಯಾರ್ಥಿಗಳ ತಯಾರಿ ಮಟ್ಟದ ಬಗ್ಗೆ ಸಮಗ್ರ ಮೌಲ್ಯಮಾಪನ ನಡೆಸಿ, ವಿದ್ಯಾರ್ಥಿಗಳ ವಸತಿ ಸ್ಥಿತಿಗತಿ ಮತ್ತು ರಾಜ್ಯಗಳು/ನಾನಾ ಭಾಗಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ಸ್ಥಿತಿಗತಿ ಹಾಗೂ ಇತರೆ ಅಂಶಗಳನ್ನು ಆಧರಿಸಿ ಪರೀಕ್ಷೆಗಳನ್ನು ನಡೆಸಲು ಕ್ರಮ ಕೈಗೊಳ್ಳಬೇಕು.

· ಕೋವಿಡ್-19 ಹಿನ್ನೆಲೆಯಲ್ಲಿ ಒಂದು ವೇಳೆ ಪರಿಸ್ಥಿತಿ ಸಹಜಸ್ಥಿತಿಗೆ ಮರಳದಿದ್ದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯದ ದೃಷ್ಟಿಯಿಂದ ವಿದ್ಯಾರ್ಥಿಗಳ ಗ್ರೇಡಿಂಗ್ ಪದ್ಧತಿ ಅನುಸರಿಸಬಹುದು. ವಿಶ್ವವಿದ್ಯಾಲಯಗಳು ತಾವು ಅಳವಡಿಸಿಕೊಂಡಿರುವ ಆಂತರಿಕ ಮೌಲ್ಯಮಾಪನ ಆಧಾರದ ಮೇಲೆ ಶೇ.50ರಷ್ಟು ಅಂಕಗಳನ್ನು ಮತ್ತು ಇನ್ನುಳಿದ ಶೇ.50ರಷ್ಟು ಹಿಂದಿನ ಸೆಮಿಸ್ಟರ್ ಗಳ(ಲಭ್ಯವಿದ್ದರೆ) ಫಲಿತಾಂಶ ಆಧರಿಸಿ ಅಂಕಗಳನ್ನು ನೀಡಬಹುದು. ಆಂತರಿಕ ಮೌಲ್ಯಮಾಪನ ನಿರಂತರವಾಗಿ ನಡೆಯಬೇಕು. ಪ್ರಿಲಿಮಿನರಿ, ಸೆಮಿಸ್ಟರ್ ಮಧ್ಯ ಭಾಗದಲ್ಲಿ, ಆಂತರಿಕ ಮೌಲ್ಯಮಾಪನ ಅಥವಾ ಇತರೆ ಯಾವುದೇ ಹೆಸರಿನಲ್ಲಿ ವಿದ್ಯಾರ್ಥಿಗಳ ಪ್ರಗತಿಯನ್ನು ಅಳೆಯಬಹುದು.

· ವಿದ್ಯಾರ್ಥಿ ಒಂದು ವೇಳೆ ತನ್ನ ಗ್ರೇಡ್ ಸುಧಾರಿಸಿಕೊಳ್ಳಲು ಬಯಸಿದರೆ ಆತ/ಆಕೆ ಮುಂದಿನ ಸೆಮಿಸ್ಟರ್ ನಲ್ಲಿ ಅಂತಹ ವಿಷಯಗಳಿಗೆ ವಿಶೇಷ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು.

· ಪರೀಕ್ಷಾ ವೇಳಾಪಟ್ಟಿ – ಪರೀಕ್ಷೆಗಳನ್ನು ನಡೆಸುವುದು:

(i) ಟರ್ಮಿನಲ್ ಸೆಮಿಸ್ಟರ್/ವರ್ಷ - 01.07.2020 ರಿಂದ 15.07.2020

(ii) ಇಂಟರ್ ಮೀಡಿಯೇಟ್ ಸೆಮಿಸ್ಟರ್/ವರ್ಷ - 16.07.2020 ರಿಂದ 31.07.2020

ಸಚಿವರು, 2020-21ನೇ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರವೇಶ ಪ್ರಕ್ರಿಯೆಯನ್ನು 2020ರ ಆಗಸ್ಟ್ 31ರೊಳಗೆ ಪೂರ್ಣಗೊಳಿಸಬೇಕು ಎಂದರು. ಅಗತ್ಯಬಿದ್ದರೆ ತಾತ್ಕಾಲಿಕ ಪ್ರವೇಶಗಳನ್ನು ಮಾಡಿಕೊಂಡು, 30.09.2020ರ ವೇಳೆಗೆ ಅರ್ಹತಾ ಪರೀಕ್ಷೆಗಳಿಗಾಗಿ ಅಗತ್ಯ ದಾಖಲಾತಿಗಳನ್ನು ಪಡೆದುಕೊಳ್ಳಬಹುದು. 2020-21ನೇ ಸಾಲಿನ ಶೈಕ್ಷಣಿಕ ವರ್ಷ, ಹಳೆಯ ವಿದ್ಯಾರ್ಥಿಗಳಿಗಾದರೆ 2020ರ ಆಗಸ್ಟ್ 01 ರಿಂದ ಆರಂಭವಾಗಬೇಕು. ಹೊಸ ವಿದ್ಯಾರ್ಥಿಗಳಿಗಾದರೆ 2020ರ ಸೆಪ್ಟೆಂಬರ್ 01 ರಿಂದ ಆರಂಭವಾಗಬೇಕು. ಯುಜಿಸಿ ವೆಬ್ ಸೈಟ್ ನಿಂದ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಬಹುದಾಗಿದೆ.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದಕ್ಕೆ ಸಚಿವರು ಸಂತಸ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳಿಗೆ ಆತಂಕಕ್ಕೊಳಗಾಗಬಾರದು ಎಂದು ಅವರು ಮನವಿ ಮಾಡಿದರು. ವಿದ್ಯಾರ್ಥಿಗಳ ಶೈಕ್ಷಣಿಕ ಕಲ್ಯಾಣ ಮತ್ತು ಸುರಕ್ಷತೆ ಖಾತ್ರಿಪಡಿಸಲು ಸಚಿವಾಲಯ ಬದ್ಧವಾಗಿದೆ ಎಂದರು. ಪರೀಕ್ಷೆಗಳು, ಶೈಕ್ಷಣಿಕ ವೇಳಾಪಟ್ಟಿ ಇತ್ಯಾದಿಗಳ ಬಗ್ಗೆ ತಾಜಾ ಮಾಹಿತಿ, ಸಚಿವಾಲಯದ ವೆಬ್ ಸೈಟ್ ನಲ್ಲಿ ಮತ್ತು ಇತರ ಸ್ವಾಯತ್ತ ಸಂಸ್ಥೆಗಳ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

***



(Release ID: 1621528) Visitor Counter : 256