ರಕ್ಷಣಾ ಸಚಿವಾಲಯ
ಮುಂಪಡೆಯ ಯೋಧರಿಂದ ಕೊರೊನಾ ಯೋಧರಿಗೆ ನಮನ ಮತ್ತು ಹೋರಾಟಕ್ಕೆ ಬೆಂಬಲ ಮುಂದುವರಿಸುವ ಸಂಕಲ್ಪ
Posted On:
01 MAY 2020 9:52PM by PIB Bengaluru
ಮುಂಪಡೆಯ ಯೋಧರಿಂದ ಕೊರೊನಾ ಯೋಧರಿಗೆ ನಮನ ಮತ್ತು ಹೋರಾಟಕ್ಕೆ ಬೆಂಬಲ ಮುಂದುವರಿಸುವ ಸಂಕಲ್ಪ
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರೊಂದಿಗೆ ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವಾನೆ, ನೌಕಾ ಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್, ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಬದೌರಿಯಾ ದೆಹಲಿಯಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿ, ಕರೊನಾ ಯೋಧರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಮುಂಬರುವ ದಿನಗಳಲ್ಲೂ ಅವರಿಗೆ ಮುಂಪಡೆಯ ಯೋಧರ ಬೆಂಬಲ ಮುಂದುವರಿಸುವ ಸಂಕಲ್ಪ ಮಾಡಿದರು. ಪತ್ರಿಕಾಗೋಷ್ಠಿಯ ಸಾರಾಂಶವನ್ನು ಈ ಕೆಳಗಿನ ಪ್ಯಾರಾಗಳಲ್ಲಿ ನೀಡಲಾಗಿದೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರು 2020ರ ಮಾರ್ಚ್ 24ರಿಂದ 2020ರ ಮೇ 3ರವರೆಗಿನ ಅವಧಿ ಪ್ರತಿಯೊಬ್ಬ ಭಾರತೀಯರಿಂದ ಗಣನೀಯವಾದ ತ್ಯಾಗವನ್ನು ಕೋರಿದ ಸಮಯವಾಗಿದೆ ಎಂದರು. ಬಹುತೇಕ ಭಾರತೀಯರು ಲಾಕ್ ಡೌನ್ ಕರೆಗೆ ಓಗೊಟ್ಟು ಮನೆಯಿಂದಲೇ ಕರ್ತವ್ಯ ನಿರ್ವಹಿಸಿದರು. ಆದಾಗ್ಯೂ, ಬೆರಳೆಣಿಕೆಯಷ್ಟು ಭಾರತೀಯರು, 'ಕರೋನಾ ಯೋಧರಾಗಿ', ಪ್ರತಿದಿನ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟುಕೊಂಡು ವಿದ್ಯುತ್ ಮತ್ತು ನೀರಿನಂತಹ ಮೂಲಭೂತ ಸೌಕರ್ಯಗಳು ಎಲ್ಲರಿಗೂ ತಲುಪುತ್ತಿದೆ, ಬೀದಿಗಳು ಸ್ವಚ್ಛವಾಗಿದೆ, ಅಗತ್ಯ ಆಹಾರ ಪದಾರ್ಥಗಳು ದೊರಕುತ್ತಿದೆ, ಯಾವುದೇ ರೋಗಿ ಚಿಕಿತ್ಸೆ ದೊರಕದೆ ಹಿಂತಿರುಗಿಲ್ಲ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿದರು ಮತ್ತು ವಿದೇಶದಲ್ಲಿ ಸಿಲುಕಿದ್ದ ಭಾರತೀಯ ನಾಗರಿಕರನ್ನು ಮರಳಿ ಕರೆತಂದರು ಮತ್ತು ನೋಡಿಕೊಂಡರು. ಈ ಕೊರೊನಾ ಯೋಧರು ವೈದ್ಯರಿರಲಿ, ದಾದಿಯರಿರಲಿ, ನೈರ್ಮಲ್ಯ ಮತ್ತು ಸ್ವಚ್ಛತೆ ಕಾರ್ಯಕರ್ತರಿರಲಿ, ಪೊಲೀಸ್ ಸಿಬ್ಬಂದಿ ಅಥವಾ ಮಾಧ್ಯಮದವರೇ ಆಗಿರಲಿ, ಅವರೆಲ್ಲರೂ ಭಾರತ ಈ ಸಾಂಕ್ರಾಮಿಕದ ವಿರುದ್ಧ ಹೋರಾಟ ನಡೆಸಲು ಜೊತೆಯಾದರು. ನಾವು ಈ ಯೋಧರಿಗೆ ಮತ್ತು ಅವರ ಪ್ರಯತ್ನಕ್ಕೆ ನಮನ ಸಲ್ಲಿಸುತ್ತೇವೆ ಮತ್ತು ಅವರೆಲ್ಲರ ಉತ್ತಮ ಆರೋಗ್ಯಕ್ಕೆ ಶುಭ ಕೋರುತ್ತೇವೆ. ಅವರು ಎದುರಿಸಿದ ಅಪಾಯಗಳ ಅರಿವಿರುವ ನಾವು ಅವರ ತ್ಯಾಗ ಮತ್ತು ಕೋವಿಡ್ -19 ವಿರುದ್ಧದ ಹೋರಾಟದ ಪ್ರಯತ್ನಕ್ಕೆ ಋಣಿಯಾಗಿದ್ದೇವೆ ಎಂದರು.
ಸಾಂಕ್ರಾಮಿಕವನ್ನು ಎದುರಿಸಲು ಮತ್ತು ಮಣಿಸಲು ಭಾರತ ಸರ್ಕಾರದ ಬೃಹತ್ ಪ್ರಯತ್ನಕ್ಕೆ ಪೂರಕವಾಗಿ ನಮ್ಮ ನಾಗರಿಕರು ಲಾಕ್ ಡೌನ್ ನಿರ್ದೇಶನಗಳನ್ನು ಕಠಿಣವಾಗಿ ಪಾಲಿಸುವ ಮೂಲಕ ದೇಶದಲ್ಲಿ ರೋಗ ಪ್ರಸರಣದ ರೇಖೆ ಏರದಂತೆ ತಡೆಯುವಲ್ಲಿ ಮತ್ತು ಜಗತ್ತಿನ ಇತರ ದೇಶಗಳಿಗಿಂತಲೂ ಉತ್ತಮವಾಗಿರಲು ಶ್ರಮಿಸಿದ್ದ ಶ್ಲಾಘನಾರ್ಹ ಎಂದೂ ಸಿಡಿಎಸ್ ತಿಳಿಸಿದರು.
ಸಶಸ್ತ್ರ ಪಡೆಗಳು, ಪಡೆಗಳ ಸಂರಕ್ಷಣೆ ಮತ್ತು ನಾಗರಿಕ ಪ್ರಾಧಿಕಾರಗಳಿಗೆ ನೆರವು ಎಂಬ ಎರಡು ನೀತಿಗಳೊಂದಿಗೆ ಕೋವಿಡ್ -19 ವಿರುದ್ಧ ಸೆಣಸುತ್ತಿವೆ ಎಂದೂ ಸಿಡಿಎಸ್ ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರ ನೀಡಿದ ಅವರು, ಮುಂಪಡೆಯ ಒಬ್ಬ ಯೋಧ, ನೌಕಾ ಸಿಬ್ಬಂದಿ ಅಥವಾ ವಾಯು ಪಡೆ ಸಿಬ್ಬಂದಿ ಬಾಧಿತರಾಗಿಲ್ಲ ಮತ್ತು ಸಶಸ್ತ್ರ ಪಡೆಗಳು ಎಲ್ಲ ಸವಾಲು ಎದುರಿಸಲು ಸಜ್ಜಾಗಿವೆ ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಾಯು ಪಡೆ ಮುಖ್ಯಸ್ಥರು, ತಮ್ಮ ಪಡೆಯಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ವರದಿಯಾಗಿಲ್ಲ ಮತ್ತು ಅದನ್ನೇ ಕಾಯ್ದುಕೊಳ್ಳಲಾಗುವುದು ಎಂದರು.
ಕೊರೊನಾ ಯೋಧರೊಂದಿಗೆ ಮುಂಪಡೆಯ ಯೋಧರ ಏಕಮತ್ಯ ಪ್ರದರ್ಶನಕ್ಕಾಗಿ 2020ರ ಮೇ 03ರಂದು ಸಶಸ್ತ್ರ ಪಡೆಗಳು ಕೆಲವೊಂದು ಚಟುವಟಿಕೆಗಳನ್ನು ಕೈಗೊಳ್ಳಲಿವೆ ಎಂದು ಸಿಡಿಎಸ್ ತಿಳಿಸಿದರು. ಭಾನುವಾರ, ಸಶಸ್ತ್ರ ಪಡೆಗಳು ಬಹು ಕಾರ್ಯಕ್ರಮಗಳು ಅಂದರೆ, ಶ್ರೀನಗರದಿಂದ ತಿರುವಂತಪುರಂಗೆ ಮತ್ತು ದಿಬ್ರುಗಢದಿಂದ ಕಚ್ ಗೆ ಐಎಎಫ್.ನ ಯುದ್ಧ ಮತ್ತು ಸಾರಿಗೆ ವಿಮಾನಗಳ ಮೂಲಕ ಹಾರಾಟ ನಡೆಸಲಿವೆ. ಐಎಎಫ್ ಮತ್ತು ಐಎನ್.ನ ಹೆಲಿಕಾಪ್ಟರ್‌ಗಳು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಗಳ ಮೇಲೆ ಹೂವಿನ ದಳಗಳನ್ನು ಸುರಿಸಲಿವೆ ಎಂದರು. ನೌಕಾಪಡೆ ಮತ್ತು ಐಸಿಜಿ ತಮ್ಮ ಹಡಗುಗಳನ್ನು ಚಲಿಸಿ, ಸಾಗರದಲ್ಲಿ ಆಯ್ದ ತಾಣಗಳಲ್ಲಿ ಆಕರ್ಷಕ ರಚನೆ ಮಾಡಲಿದ್ದರೆ, ಸೇನಾಪಡೆ ಬ್ಯಾಂಡ್ ಕೋವಿಡ್ ಆಸ್ಪತ್ರೆಗಳಿಗೆ ಭೇಟಿ ನೀಡಿ ಆಸ್ಪತ್ರೆಗಳ ಹೊರಗೆ ಸಂಗೀತ ನುಡಿಸಲಿವೆ, ಈ ಮೂಲಕ ಕೊರೊನಾ ಯೋಧರಿಗೆ ಕೃತಜ್ಞತೆ ಸಲ್ಲಿಸಲಿವೆ ಎಂದರು.
ಪೊಲೀಸ್ ಸಿಬ್ಬಂದಿಯ ಕೊಡುಗೆಯ ಬಗ್ಗೆ ಮಾತನಾಡಿದ ಸಿಡಿಎಸ್ ಎಲ್ಲರಿಗೂ ಧನ್ಯವಾದ ಅರ್ಪಿಸಿ, ಅವರೂ ಸಹ ಐತಿಹಾಸಿಕ ಮತ್ತು ಗಣನೀಯ ಸೇವೆ ಮಾಡಿದ್ದಾರೆ ಎಂದರು. ಅವರ ಪ್ರಯತ್ನಗಳನ್ನು ಗೌರವಿಸಲು ಎಲ್ಲ ಮೂರು ಪಡೆಗಳ ಮುಖ್ಯಸ್ಥರು ಪೊಲೀಸ್ ಹುತಾತ್ಮ ಸ್ಮಾರಕಕ್ಕೆ 2020ರ ಮೇ 3ರಂದು ಪುಷ್ಪಗುಚ್ಛ ಸಮರ್ಪಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿ ಮುಗಿಸುವ ಮುನ್ನ ಸಿಡಿಎಸ್ ಮತ್ತೊಮ್ಮೆ ಕೊರೊನಾ ಯೋಧರಿಗೆ ಅಂದರೆ ವೈದ್ಯರು, ದಾದಿಯರು, ಇತರ ಆರೋಗ್ಯ ಕಾರ್ಯಕರ್ತರು, ಸ್ವಚ್ಛತೆ ಮತ್ತು ನೈರ್ಮಲ್ಯ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿ, ಮಾಧ್ಯಮ ಸಿಬ್ಬಂದಿ ಮತ್ತು ಹಿಂದೆಂದೂ ಕಂಡು ಕೇಳರಿಯದಂಥ ಹೋರಾಟದಲ್ಲಿ ಅದ್ವಿತೀಯ ನೆರವು ನೀಡಿದ ಭಾರತೀಯರೆಲ್ಲರಿಗೂ ಧನ್ಯವಾದ ಅರ್ಪಿಸಿದರು.
***
(Release ID: 1620395)
Visitor Counter : 297