ರೈಲ್ವೇ ಸಚಿವಾಲಯ
ಭಾರತೀಯ ರೈಲ್ವೆಯಲ್ಲಿ ಬೋಗಿ ನಿರ್ಮಾಣ ಪುನರಾರಂಭ
Posted On:
25 APR 2020 4:23PM by PIB Bengaluru
ಭಾರತೀಯ ರೈಲ್ವೆಯಲ್ಲಿ ಬೋಗಿ ನಿರ್ಮಾಣ ಪುನರಾರಂಭ
ಆರ್.ಸಿ.ಎಫ್. ಕಪುರ್ಥಲಾ 23.04.2020ರಿಂದ ಉತ್ಪಾದನೆ ಪುನಾರಂಭಿಸಿದೆ
ರಾಜ್ಯಗಳಲ್ಲಿನ ಲಾಕ್ ಡೌನ್ ಆದೇಶಗಳನ್ನು ಅವಲಂಬಿಸಿ, ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆದ ತಕ್ಷಣ ಇತರ ಘಟಕಗಳಲ್ಲೂ ಉತ್ಪಾದನೆ ಪ್ರಾರಂಭ
ಸರಕು ಸಾಗಣೆಯನ್ನು ಹೆಚ್ಚಿಸಲು ಆರ್.ಸಿ.ಎಫ್. ಕಳೆದೆರಡು ದಿನಗಳಲ್ಲಿ 2 ಸರಕು ಬೋಗಿಗಳನ್ನು ಉತ್ಪಾದಿಸಿದೆ
ರಾಷ್ಟ್ರವ್ಯಾಪಿ 28 ದಿನಗಳ ಲಾಕ್ ಡೌನ್ ನಂತರ ಭಾರತೀಯ ರೈಲ್ವೆಯ ಉತ್ಪಾದನಾ ಘಟಕ ರೈಲ್ ಕೋಚ್ ಫ್ಯಾಕ್ಟರಿ (ಆರ್.ಸಿ.ಎಫ್.) ಕಪುರ್ಥಲಾ ತನ್ನ ಉತ್ಪಾದನಾ ಪ್ರಕ್ರಿಯೆಯನ್ನು 23.04.2020 ರಂದು ಪುನರಾರಂಭಿಸಿದೆ. ಕೋವಿಡ್ -19 ವಿರುದ್ಧ ಹೋರಾಟದಲ್ಲಿ, ಎಲ್ಲಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು, ಕೇಂದ್ರ ಗೃಹ ಸಚಿವಾಲಯದ ಆದೇಶಗಳು ಮತ್ತು ಸ್ಥಳೀಯ ಆಡಳಿತಗಳ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಿ ಕಾರ್ಖಾನೆಯನ್ನು ತೆರೆಯಲಾಗಿದೆ. ಆರ್.ಸಿ.ಎಫ್. ಆವರಣದ ವಸಾಹತು ಒಳಗೆ ವಾಸವಾಗಿರುವ ಒಟ್ಟು 3744 ಉದ್ಯೋಗಿಗಳಿಗೆ ಕೆಲಸಕ್ಕೆ ಸೇರಲು ಅನುಮತಿ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯ ಸಲಹೆಯಂತೆ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳ ಪ್ರಕಾರ, ಭಾರತೀಯ ರೈಲ್ವೆಯ ಇತರ ಉತ್ಪಾದನಾ ಘಟಕಗಳು ಕೂಡಾ ಉತ್ಪಾದನೆಯನ್ನು ಪುನರಾರಂಭಿಸಲಿವೆ.
ಉತ್ಪಾದನೆಗಾಗಿ ಸಂಪನ್ಮೂಲಗಳ ಸೀಮಿತ ಲಭ್ಯತೆಯ ಹೊರತಾಗಿಯೂ, ಆರ್.ಸಿ.ಎಫ್. ಕಪುರ್ಥಲಾ ಘಟಕವು ಎರಡು ಕೆಲಸದ ದಿನಗಳಲ್ಲಿ ಎರಡು ಬೋಗಿಗಳನ್ನು ತಯಾರಿಸಿದೆ. ದಿನಾಂಕ 23.04.2020 ರಂದು ಒಂದು ಹೆಚ್ಚಿನ ಸಾಮರ್ಥ್ಯದ ಎಲ್.ಎಚ್.ಬಿ. ಪಾರ್ಸೆಲ್ ವ್ಯಾನ್ ಮತ್ತು 24.04.2020 ರಂದು ಒಂದು ಲಗೇಜ್ ಕಮ್ ಜನರೇಟರ್ ಬೋಗಿಗಳನ್ನು ನಿರ್ಮಾಣ ಮಾಡಿದೆ.
ಲಾಕ್ ಡೌನ್ ನಂತರ ಈಗ ಎಲ್ಲಾ ಉದ್ಯೋಗಿಗಳಿಗೆ ಮುಖಕವಚಗಳು, ಸ್ಯಾನಿಟೈಜರ್ ಬಾಟಲ್ ಮತ್ತು ಸಾಬೂನು ಹೊಂದಿರುವ ಸುರಕ್ಷತಾ ಕಿಟ್ ನೀಡಲಾಗಿದೆ. ಎಲ್ಲಾ ಅನುಮತಿ ಪಡೆದ ನೌಕರರನ್ನು ಕೋಚ್ ಉತ್ಪಾದನೆಗಾಗಿ ಕಾರ್ಖಾನೆಯ ಕರ್ತವ್ಯಕ್ಕೆ ಕರೆಸಿಕೊಳ್ಳಲಾಗಿದೆ. ಆಡಳಿತ ಕಚೇರಿಗಳಲ್ಲಿ, ಎಲ್ಲಾ ಅಧಿಕಾರಿಗಳು ಕಚೇರಿಗಳಿಗೆ ಬರುತ್ತಿದ್ದು, ಉಳಿದ 33% ಸಿಬ್ಬಂದಿಯನ್ನು ಪರ್ಯಾಯ (ರೋಸ್ಟರ್) ಆಧಾರದ ಮೇಲೆ ಪ್ರತಿದಿನವೂ ಕೆಲಸಕ್ಕೆ ಕರೆಯಲಾಗುತ್ತಿದೆ. ಕೊವಿಡ್ ಜಾಗೃತಿ ಪೋಸ್ಟರ್ಗಳು ಮತ್ತು ಅನುಸರಿಸಬೇಕಾದ ಸುರಕ್ಷತಾ ಸೂಚನೆಗಳನ್ನು ಕಾರ್ಯಾಗಾರ, ಕಚೇರಿಗಳು ಮತ್ತು ವಸತಿ ಆವರಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಕೆಲಸದ ಸ್ಥಳದಲ್ಲಿ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು, ಅವರ ಮೇಲ್ವಿಚಾರಕರು ಮತ್ತು ಅಧಿಕಾರಿಗಳು ಆಗಾಗ ಸಲಹೆ ನೀಡುತ್ತಿದ್ದಾರೆ. ನೌಕರರಿಗೆ ಹ್ಯಾಂಡ್ಸ್ ಫ್ರೀ ಲಿಕ್ವಿಡ್ ಸೋಪ್ ಉಪಕರಣಗಳು ಮತ್ತು ಶುದ್ಧ ನೀರಲ್ಲಿ ಕೈ-ಮುಖ ತೊಳೆಯುವ ವ್ಯವಸ್ಥೆ ಸಾಕಷ್ಟು ಪ್ರಮಾಣದಲ್ಲಿ ಒದಗಿಸಲಾಗಿದೆ.
ಮೂರು ಪಾಳಿಯಲ್ಲಿ ವಿಭಿನ್ನ ಸಮಯಗಳನ್ನು ನೀಡಿ ಕಾರ್ಮಿಕರನ್ನು ಕೆಲಸಕ್ಕೆ ಕರೆಯಲಾಗುತ್ತಿದೆ. ಎಲ್ಲಾ ಮೂರು ಪಾಳಿಗಳಿಗೆ ಬರುವ ಸಮಯಗಳ, ಊಟದ ಸಮಯಗಳ ಮತ್ತು ನಿರ್ಗಮನ ಸಮಯಗಳ ನಡುವೆ ಅಂತರವಿಡಲಾಗಿದೆ. ಪ್ರತಿಯೊಬ್ಬ ಉದ್ಯೋಗಿಯನ್ನು ತಮ್ಮ ದೇಹದ ಉಷ್ಣತೆ ಮಾಪನಕ್ಕಾಗಿ ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಕ್ಯಾನರ್ಗಳಿಂದ ಪರೀಕ್ಷಿಸಲಾಗುತ್ತಿದೆ. ಆರ್.ಸಿ.ಎಫ್. ಆವರಣದಲ್ಲಿ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಪ್ರವೇಶ ದ್ವಾರಗಳಲ್ಲಿ ಒದಗಿಸಲಾದ ಸ್ಯಾನಿಟೈಜರ್ ಸಿಂಪಣಿಕೆಯ ಸುರಂಗದಿಂದ ಸ್ವಚ್ಛಗೊಳಿಸಲಾಗುತ್ತಿದೆ. ಎಲ್ಲಾ ಕಾರ್ಮಿಕರು ಸಾಮಾಜಿಕ ಅಂತರದ ಶಿಷ್ಠಾಚಾರವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಕೆಲಸದ ಸ್ಥಳದಲ್ಲಿ ಕೆಲಸದ ಸುರಕ್ಷತೆ ಮತ್ತು ನೈರ್ಮಲ್ಯ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸುತ್ತಿದ್ದಾರೆ. ಕೊವಿಡ್ ಸೋಂಕಿನ ಯಾವುದೇ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗಾಗಿ ಆರ್.ಸಿ.ಎಫ್. ಕ್ಯಾಂಪಸ್ನಲ್ಲಿರುವ ಲಾಲಾ ಲಜಪತ್ ರೈಲು ಆಸ್ಪತ್ರೆಯ ಪ್ರತ್ಯೇಕ ಕೌಂಟರ್ಗಳು ಮತ್ತು ಒ.ಪಿ.ಡಿ ಕೇಂದ್ರಗಳು ಸದಾ ಲಭ್ಯವಿದೆ. ಆರ್.ಸಿ.ಎಫ್. ಕ್ಯಾಂಪಸ್ನಲ್ಲಿ 24 ಬೆಡ್ ಕ್ಯಾರೆಂಟೈನ್ ಸೌಲಭ್ಯ ಮತ್ತು ಎಲ್.ಎಲ್.ಆರ್ ಆಸ್ಪತ್ರೆಯಲ್ಲಿ 8 ಬೆಡ್ ಐಸೊಲೇಷನ್ ವಾರ್ಡ್ಗಳು ಕೊವಿಡ್ ಸೋಂಕಿಗೆ ಸಂಬಂಧಿಸಿದ ಯಾವುದೇ ಪ್ರಕರಣವನ್ನು ನಿರ್ವಹಿಸಲು ಸದಾ ಸಿದ್ಧವಾಗಿದೆ.
ರಾಜ್ಯಗಳಲ್ಲಿನ ಲಾಕ್ ಡೌನ್ ಆದೇಶಗಳನ್ನು ಅವಲಂಬಿಸಿ, ರಾಜ್ಯ ಸರ್ಕಾರಗಳಿಂದ ಅನುಮತಿ ಪಡೆದ ತಕ್ಷಣ ಇತರೆ ಘಟಕಗಳಲ್ಲೂ ಉತ್ಪಾದನೆಯನ್ನು ಪ್ರಾರಂಭಿಸಲಾಗುವುದು
***
(Release ID: 1618564)
Visitor Counter : 212